ಗೋಣಿಕೊಪ್ಪಲಿನಲ್ಲಿ ಕೊಡಗು ಮಾನ್ಸೂನ್ ಹಾಫ್ ಮ್ಯಾರಥಾನ್‌ಗೆ ಚಾಲನೆ
ಮಡಿಕೇರಿ ಸೆ. 06 -
ಕೊಡಗು ಜಿಲ್ಲೆಯ ವಿಶಿಷ್ಟ ಕ್ರೀಡಾ ಪರಂಪರೆ, ಪ್ರಕೃತಿ ಸೌಂದರ್ಯ ಹಾಗೂ ಪ್ರವಾಸೋದ್ಯಮ ಸಾಮರ್ಥ್ಯವನ್ನು ಬಳಸಿಕೊಂಡು ಕ್ರೀಡಾ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಇಂಧನ ಹಾಗೂ ಪ್ರವಾಸೋದ್ಯಮ ಸಚಿವ ಶ್ರೀ ಕೆ.ಜೆ. ಜಾರ್ಜ್ ತಿಳಿಸಿದರು.
ಗೋಣಿಕೊಪ್ಪಲುವಿನ ಕಾಲ್ಸ್ ಶಾಲಾ ಆವರಣದಲ್ಲಿ ಭಾನುವಾರ ನಡೆದ ಕೊಡಗು ಮಾನ್ಸೂನ್ ಹಾಫ್ ಮ್ಯಾರಥಾನ್‌ಗೆ ಚಾಲನೆ ನೀಡಿ ಅವರು ಮಾತನಾಡಿದರು.
ಅಶ್ವಿನಿ ಸ್ಪೋರ್ಟ್ಸ್ ಫೌಂಡೇಶನ್ (ASF), ಕಾಲ್ಸ್, NEB Sports Entertainment ಹಾಗೂ ರಾಜ್ಯ ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ಈ ಮ್ಯಾರಥಾನ್‌ನಲ್ಲಿ ಒಟ್ಟು 5,902 ಮಂದಿ ಭಾಗವಹಿಸಿದ್ದರು. 21 ಕಿ.ಮೀ ಹಾಗೂ 10 ಕಿ.ಮೀ ವಿಭಾಗಗಳ ಜೊತೆಗೆ 5 ಕಿ.ಮೀ ‘ಮಜಾ ರನ್’ ಕೂಡ ಆಯೋಜಿಸಲಾಗಿತ್ತು.
ಕೊಡಗು ಜಿಲ್ಲೆ ಕ್ರೀಡಾ ಕ್ಷೇತ್ರದಲ್ಲಿ ದೇಶಕ್ಕೆ ಅನೇಕ ಸಾಧಕರನ್ನು ನೀಡಿರುವುದರ ಜೊತೆಗೆ, ಪ್ರಕೃತಿ ಮತ್ತು ಹವಾಮಾನದ ವೈಶಿಷ್ಟ್ಯದಿಂದ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಈ ಎರಡು ಸಾಮರ್ಥ್ಯಗಳನ್ನು ಜೋಡಿಸುವ ಮೂಲಕ ಮ್ಯಾರಥಾನ್, ಸೈಕ್ಲಿಂಗ್, ಟ್ರೆಕ್ಕಿಂಗ್ ಸೇರಿದಂತೆ ವಿವಿಧ ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚಿನ ಉತ್ತೇಜನ ನೀಡುವ ಸಾಧ್ಯತೆಗಳಿವೆ ಎಂದು ಸಚಿವರು ಹೇಳಿದರು.
“ಕೊಡಗು ಕ್ರೀಡಾ ಪರಂಪರೆ ಮತ್ತು ಪ್ರವಾಸೋದ್ಯಮದ ದೃಷ್ಟಿಯಿಂದ ವಿಶಿಷ್ಟ ಜಿಲ್ಲೆ. ಈ ಎರಡನ್ನೂ ಸಮರ್ಪಕವಾಗಿ ಜೋಡಿಸಿ ಕ್ರೀಡಾ ಪ್ರವಾಸೋದ್ಯಮವನ್ನು ಉತ್ತೇಜಿಸುವ ಮೂಲಕ ಪ್ರವಾಸಿಗರನ್ನು ಹೆಚ್ಚು ದಿನ ಉಳಿಸಿಕೊಳ್ಳಲು, ಸ್ಥಳೀಯ ಉದ್ಯೋಗ ಮತ್ತು ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡಲು ಅವಕಾಶವಿದೆ. ಈ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಲಿದೆ.”
- ಶ್ರೀ ಕೆ.ಜೆ. ಜಾರ್ಜ್
ಮಾನ್ಯ ಇಂಧನ ಹಾಗೂ ಪ್ರವಾಸೋದ್ಯಮ ಸಚಿವರು
ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಹಾಗೂ ಶಾಸಕ ಎ.ಎಸ್. ಪೊನ್ನಣ್ಣ ಮಾತನಾಡಿ, ಕೊಡಗು ದೇಶದಲ್ಲೇ ಪ್ರಮುಖ ಕ್ರೀಡಾ ಜಿಲ್ಲೆಗಳಲ್ಲಿ ಒಂದಾಗಿದ್ದು, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಅನೇಕ ಕ್ರೀಡಾಪಟುಗಳನ್ನು ನೀಡಿದ ನೆಲವಾಗಿದೆ. ಇಂತಹ ಕ್ರೀಡಾಕೂಟಗಳು ಜಿಲ್ಲೆಯ ಕ್ರೀಡಾ ಮನೋಭಾವವನ್ನು ಮತ್ತಷ್ಟು ಬಲಪಡಿಸುತ್ತವೆ ಎಂದರು.
ಕ್ರೀಡಾ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ ಅರುಣ್ ಮಾಚಯ್ಯ, ಅಶ್ವಿನಿ ಸ್ಪೋರ್ಟ್ಸ್ ಫೌಂಡೇಶನ್‌ನ ಮುಖ್ಯಸ್ಥೆ ಅಶ್ವಿನಿ ನಾಚಪ್ಪ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಕೋಟ್
“ಕೊಡಗಿನಲ್ಲಿ ಕ್ರೀಡಾ ಪ್ರವಾಸೋದ್ಯಮವನ್ನು ವರ್ಷಪೂರ್ತಿ ಪ್ರವಾಸಿಗರನ್ನು ಆಕರ್ಷಿಸುವ ವಿಶೇಷ ವಿಭಾಗವಾಗಿ ರೂಪಿಸುವ ಅವಕಾಶವಿದೆ. ಮ್ಯಾರಥಾನ್, ಸೈಕ್ಲಿಂಗ್, ಟ್ರೆಕ್ಕಿಂಗ್ ಮತ್ತು ಇತರೆ ಔಟ್‌ಡೋರ್ ಚಟುವಟಿಕೆಗಳನ್ನು ಪ್ರವಾಸೋದ್ಯಮ ಕ್ಯಾಲೆಂಡರ್‌ಗೆ ಜೋಡಿಸಿ, ಸ್ಥಳೀಯ ಸಮುದಾಯ, ಹೋಂಸ್ಟೇ, ಆತಿಥ್ಯ ವಲಯ ಮತ್ತು ಪ್ರವಾಸಿ ಸೇವೆಗಳಿಗೆ ನೇರ ಪ್ರಯೋಜನವಾಗುವ ರೀತಿಯಲ್ಲಿ ಕಾರ್ಯಕ್ರಮಗಳನ್ನು ಅಭಿವೃದ್ಧಿಪಡಿಸುವುದು ನಮ್ಮ ಉದ್ದೇಶ.”
- ಡಾ. ರಾಮ್ ಪ್ರಸಾತ್ ಮನೋಹರ್, ಐಎಎಸ್
ಕಾರ್ಯದರ್ಶಿಗಳು, ಪ್ರವಾಸೋದ್ಯಮ ಇಲಾಖೆ






Comments
Leave a Comment