ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ರಜತ ಮಹೋತ್ಸವದಲ್ಲಿ ಸಿದ್ದರಾಮಯ್ಯ ಭಾವನಾತ್ಮಕ ಭಾಷಣ
ಬೆಂಗಳೂರು:
25 ವರ್ಷ ತುಂಬಿರುವ ಸಂದರ್ಭದಲ್ಲಿ ಇಂದು ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ರಜತ ಮಹೋತ್ಸವನ್ನು ಆಚರಣೆ ಮಾಡುತ್ತಿದ್ದೇವೆ. ಜೊತೆಗೆ ಹಿಂದುಳಿದ ಜಾತಿಗಳ ಜಾಗೃತಿ ಸಮಾವೇಶವನ್ನು ಹಮ್ಮಿಕೊಂಡಿದ್ದೇವೆ. ಒಕ್ಕೂಟದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ನನಗೆ ಆಹ್ವಾನವನ್ನು ನೀಡಿದ್ದರು. ನಾನು ಪ್ರೀತಿಯಿಂದ ಒಪ್ಪಿಕೊಂಡೆ. ಆದರೆ ನನಗೆ ಹಿಂದುಳಿದ ಜಾತಿಗಳ ಒಕ್ಕೂಟದಿಂದ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮವನ್ನು ಕೂಡ ಇಟ್ಟುಕೊಂಡಿದ್ದಾರೆ ಎಂದು ಆಹ್ವಾನ ಪತ್ರಿಕೆಯನ್ನು ನೋಡಿದ ಮೇಲೆ ತಿಳಿಯಿತು. ಇದರ ಅವಶ್ಯಕತೆ ಇರಲಿಲ್ಲ ಎಂಬುದು ನನ್ನ ಭಾವನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯತಿಳಿಸಿದರು.
ಅವರು ಇಂದು ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ರಜತ ಮಹೋತ್ಸವದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು
ನಾನು ಹಿಂದುಳಿದ ಜಾತಿಗೆ ಸೇರಿದವನು ಎಂದು ಹೇಳಲು ಯಾವುದೇ ಮುಜಗರವಿಲ್ಲ. ಯಾಕೆಂದರೆ ಈ ದೇಶದಲ್ಲಿ ಬಹಳ ವರ್ಷಗಳ ಕಾಲ ಜಾತಿ ವ್ಯವಸ್ಥೆಯಿತ್ತು. ಚತುರ್ವರ್ಣ ವ್ಯವಸ್ಥೆಯಿತ್ತು. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಶೂದ್ರ ಎಂಬ ವರ್ಣಗಳ ವ್ಯವಸ್ಥೆಯಿತ್ತು. ನಾನು ಶೂದ್ರಕ್ಕೆ ಸೇರಿದವನು. ಲಿಂಗಾಯತ, ಒಕ್ಕಲಿಗ ಆದಿಯಾಗಿ ನಾವೆಲ್ಲರೂ ಕೂಡ ಶೂದ್ರರೆ. ಚತುರ್ವರ್ಣ ವ್ಯವಸ್ಥೆಯಲ್ಲಿ ಮೇಲಿನ ಮೂರು ಜಾತಿಗಳಾದ ಬ್ರಾಹ್ಮಣ, ಕ್ಷತ್ರಿಯ, ವೈಶ್ಯರಿಗೆ ಅವಕಾಶಗಳಿದ್ದವು. ಆದರೆ ಶೂದ್ರರಿಗೆ ಅವಕಾಶಗಳು ಸಿಗಲಿಲ್ಲ. ಅವಕಾಶಗಳಿಂದ ವಂಚಿತರಾದರು. ಎಲ್ಲರಿಗೂ ಸಮಾನ ಅವಕಾಶವನ್ನು ಕಲ್ಪಿಸಿಕೊಟ್ಟಿದ್ದರೆ ಈ ಸಮಾಜದಲ್ಲಿ ಅಸಮಾನತೆ ನಿರ್ಮಾಣ ಆಗಲು ಸಾಧ್ಯವಾಗುತ್ತಿರಲಿಲ್ಲ. ಶೂದ್ರ ವರ್ಗದ ಜನರು ಅಕ್ಷರ ಸಂಸ್ಕೃತಿಯಿಂದ, ಅವಕಾಶಗಳಿಂದ ವಂಚಿತರಾಗುತ್ತಿರಲಿಲ್ಲ. ಆದರೆ ಸಮಾನತೆ, ಅವಕಾಶಗಳಿಂದ ವಂಚಿತರಾಗುವ ವ್ಯವಸ್ಥೆ ನಿರ್ಮಾಣವಾಯಿತು ಎಂದು ಗದ್ಗದಿತರಾದರು.
ನಾನು ವಿದ್ಯಾರ್ಥಿ ದೆಸೆಯಿಂದಲೂ ಈ ಅಸಮಾನತೆಯ ವಿರುದ್ಧ ಹೋರಾಡುತ್ತಾ ಬಂದಿದ್ದೇನೆ. ನಾನು ಬಹಳ ಕಷ್ಟಪಟ್ಟು ಓದಿ, ಕಾನೂನು ಪದವಿಯನ್ನು ಪಡೆದುಕೊಂಡು, ನಂತರ ರಾಜಕಾರಣಿಯಾಗಿ ಹಿಂದುಳಿದ ಜಾತಿಗಳು, ಶೋಷಿತ ವರ್ಗಗಳು ಹೀಗೆ ಯಾರ್ಯಾರು ಅವಕಾಶಗಳಿಂದ ವಂಚಿತರಾಗಿದ್ದಾರೆ ಅವರೆಲ್ಲರ ಪರವಾಗಿ ಸಾಮಾಜಿಕ ನ್ಯಾಯ ಎಲ್ಲರಿಗೂ ಸಿಗಬೇಕು, ಯಾರೊಬ್ಬರೂ ದೌರ್ಜನ್ಯಕ್ಕೆ ಒಳಗಾಗಬಾರದು ಎಂಬ ಉದ್ದೇಶದಿಂದ ಅಸಮಾನತೆಯ ವಿರುದ್ಧ ಧ್ವನಿ ಎತ್ತುತ್ತಾ ಬಂದಿದ್ದೇನೆ. ಈಗಲೂ ಕೂಡ ಧ್ವನಿ ಎತ್ತುತ್ತೇನೆ ಎಂದರು.
ನೀವೆಲ್ಲರೂ ಕೂಡ ಕಳೆದ 4 -5 ದಶಕಗಳಿಂದ ನನ್ನನ್ನು ಬೆಂಬಲಿಸುತ್ತಾ ಬಂದಿದ್ದೀರಿ. ಆಶೀರ್ವಾದ ಮಾಡುತ್ತಾ ಬಂದಿದ್ದೀರಿ. ಅದಕ್ಕಾಗಿ ನಿಮಗೆಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುವುದು ನನ್ನ ಮನದಾಳದ ಇಚ್ಛೆ. ನೀವು ಅಭಿನಂದನೆಗೆ ಅರ್ಹರು, ನಾನಲ್ಲ. ನಾನು ನಿಮ್ಮವನೇ, ನಿಮ್ಮಲ್ಲೇ ಒಬ್ಬನಾಗಿ ಈ ಹೋರಾಟವನ್ನು ಈಗಲೂ, ಮುಂದೆಯೂ ಮಾಡುವಂತಹ ಕೆಲಸವನ್ನು ನಾನು ಮಾಡುತ್ತೇನೆ ಎನ್ನುವ ಭರವಸೆಯ ಮಾತನ್ನು ಹೇಳಿದರು.
ಚುನಾವಣಾ ರಾಜಕೀಯದಿಂದ ಮಾತ್ರ ನಾನು ಹಿಂದೆ ಸರಿದಿದ್ದೇನೆ. ಯಾಕೆಂದರೆ ನಮ್ಮ ಚುನಾವಣಾ ವ್ಯವಸ್ಥೆಯು ಬಹಳ ದುಬಾರಿಯಾಗಿದೆ. ಚುನಾವಣಾ ವ್ಯವಸ್ಥೆ ಸುಧಾರಣೆಯಾಗಬೇಕು. ನನಗೆ ವಯಸ್ಸಾಗಿದೆ, ಆ ಕಾರಣದಿಂದ ನಾನು ಚುನಾವಣೆಯಲ್ಲಿ ನಿಲ್ಲುವುದಿಲ್ಲ ಜೊತೆಗೆ ಚುನಾವಣಾ ವ್ಯವಸ್ಥೆ ಬಹಳ ಹದಗೆಟ್ಟಿದೆ. ಚುನಾವಣೆಯಲ್ಲಿ ಹಣ ಹಾಕಿ ಗೆಲ್ಲಬೇಕಾದರೆ ಅದಕ್ಕಾಗಿ ಕೆಲವು ಹೊಂದಾಣಿಕೆ ಮಾಡಿಕೊಳ್ಳುವುದು ಅನಿವಾರ್ಯವಾಗುತ್ತದೆ. ಆ ಕಾರಣದಿಂದ ಹೊರತು ಬೇರೆ ಯಾವುದೇ ಕಾರಣದಿಂದ ಅಲ್ಲ ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.
ಮುಂದುವರಿದು ಮಾತನಾಡಿದ ಅವರು, ನಿಮಗೆ ನ್ಯಾಯ ಸಿಗುವವರೆಗೆ, ಸಮಾನ ಅವಕಾಶ ಸಿಗುವವರೆಗೆ, ಸಮಾಜದಲ್ಲಿ ಜಾತಿ ವ್ಯವಸ್ಥೆ ತೊಲಗುವವರೆಗೆ ನಿಮ್ಮೊಂದಿಗೆ ಇದ್ದು, ಹೋರಾಟ ಮಾಡುತ್ತೇನೆ. ಹೀಗಾಗಿ ನೀವ್ಯಾರು ಆತಂಕಕ್ಕೆ ಒಳಪಡುವ ಅವಶ್ಯಕತೆಯಿಲ್ಲ ಎಂದು ಜನರಿಗೆ ಭರವಸೆ ನೀಡಿದರು.
ಇದು ಒಕ್ಕೂಟದ ರಜತ ಮಹೋತ್ಸವ. 2001ರಲ್ಲಿ ಇದು ಪ್ರಾರಂಭಗೊಂಡಿರುವುದು. ಶ್ರೀನಿವಾಸ್ ಎಂಬ ಬೆಸ್ತ ಸಮುದಾಯಕ್ಕೆ ಸೇರಿದಂತಹ ವ್ಯಕ್ತಿ ಇದರ ಸಂಸ್ಥಾಪಕರಾಗಿದ್ದರು. ಈಗ ರಾಮಚಂದ್ರಪ್ಪನವರು ಅಧ್ಯಕ್ಷರಾಗಿದ್ದಾರೆ. ಇನ್ನೂ ಸಮಾಜದಲ್ಲಿ ಸಮಾನತೆ ಬಂದಿಲ್ಲ, ಅಸಮಾನತೆಯೂ ತೊಲಗಿಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನವನ್ನು ಈ ದೇಶಕ್ಕೆ ಕೊಟ್ಟರು. ಸ್ವಾತಂತ್ರ್ಯ ಬಂದು 79 ವರ್ಷಗಳಾಯಿತು. ಸಂವಿಧಾನ ಬಂದು 76 ವರ್ಷಗಳಾಯಿತು. ಆದರೆ ಇನ್ನೂ ಎಲ್ಲರಿಗೂ ಸಮಾನ ಅವಕಾಶ ದೊರಕಿಲ್ಲ, ಜೊತೆಗೆ ಸಮ ಸಮಾಜ ನಿರ್ಮಾಣ ಆಗಿಲ್ಲ. ಎಲ್ಲಿಯವರೆಗೆ ಜಾತಿ ವ್ಯವಸ್ಥೆ ಇರುತ್ತದೆ ಅಲ್ಲಿಯವರೆಗೆ ನಿಮ್ಮ ಹೋರಾಟ ಇರಲೇಬೇಕು ಎಂದು ಸಭೆಯಲ್ಲಿ ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದರು.
ಸಾವಿರಾರು ವರ್ಷಗಳಿಂದ ಮನುಸ್ಮೃತಿ ಜಾರಿಯಲ್ಲಿತ್ತು. ಅದು ಅಲಿಖಿತ ಸಂವಿಧಾನ. ಅದರ ಪ್ರಕಾರವೇ ಜಾತಿಗಳನ್ನು ಒಡೆದು, ಶ್ರೇಣೀಕೃತ ವ್ಯವಸ್ಥೆಯನ್ನು ನಿರ್ಮಾಣ ಮಾಡಿ ಪಟ್ಟಭದ್ರರು ತಮ್ಮ ಬೆಳೆಕಾಳು ಬೇಯಿಸುವಂತಹ ಕೆಲಸವನ್ನು ಮಾಡಿದ್ದಾರೆ. ಅದಕ್ಕೆ ಅನುಗುಣವಾಗಿ ಇಂದು ಅಸಮಾನತೆ ನಿರ್ಮಾಣವಾಗಿದೆ. ಇಷ್ಟು ವರ್ಷಗಳಾಗಿದ್ದರೂ ಇನ್ನೂ ಕೂಡ ಅಸಮಾನತೆ ಹೋಗಿಲ್ಲ. ಈ ದೇಶದಲ್ಲಿ ಒಂದು ದಿನ ಸಮ ಸಮಾಜ ನಿರ್ಮಾಣವಾಗುತ್ತದೆ ಎಂಬ ನಂಬಿಕೆ ನನಗಿದೆ ಎಂದರು.
ನಾನು 1996ರಲ್ಲಿ ಉಪಮುಖ್ಯಮಂತ್ರಿಯಾಗಿದ್ದಾಗ ಸಮ ಸಮಾಜ ಸಿಕ್ಕಿರಲಿಲ್ಲ. ಆದರೆ ಆಗಲೇ ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ಆಗಬೇಕು ಎಂಬ ಕನಸುಗಳನ್ನು ಕಂಡಿದ್ದೆ. ರಾಜ್ಯದ ಜನರ ಜಾತಿವಾರು ಸಮೀಕ್ಷೆಯಾಗಿಲ್ಲ. ಜನರ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸ್ಥಿತಿಗತಿಯ ನಿಜವಾದ ಅಂಕಿ ಅಂಶಗಳಿಲ್ಲ ಎನ್ನುವ ಕಾರಣಕ್ಕಾಗಿ ಅನೇಕ ಮೊಕದ್ದಮೆಗಳಲ್ಲಿ ನ್ಯಾಯಾಲಯದ ತೀರ್ಪು ನಮ್ಮ ಪರವಾಗಿ ಬಂದಿರಲಿಲ್ಲ. ಅದಕ್ಕಾಗಿ ನಾನು 2013 ಮುಖ್ಯಮಂತ್ರಿಯಾದಾಗ ಕಾಂತರಾಜು ಅವರ ಹಿಂದುಳಿದ ವರ್ಗಗಳ ಅಧ್ಯಕ್ಷತೆಯಲ್ಲಿ ಸಮೀಕ್ಷೆಯನ್ನು ನಡೆಸುವಂತೆ ಹೇಳಿದ್ದೆ. ಆದರೆ ನಂತರ ಚುನಾವಣೆಯನ್ನು ಸೋತೆವು. ಕುಮಾರಸ್ವಾಮಿಯವರು ಮುಖ್ಯಮಂತ್ರಿಗಳಾಗಿದ್ದಾಗ ವರದಿಯನ್ನು ಕೊಟ್ಟಿದ್ದರು. ಆದರೆ ಅವರು ವರದಿಯನ್ನು ಒಪ್ಪಿರಲಿಲ್ಲ ಎಂದು ತಿಳಿಸಿದರು.
ಆ ಬಳಿಕ ಕಾಂತರಾಜುರವರ ವರದಿ ತಿರಸ್ಕಾರವಾಯಿತು. 2023ರ ಮುಖ್ಯಮಂತ್ರಿಯಾದಾಗ ಹೊಸದಾಗಿ ಮಧುಸೂದನ್ ನಾಯಕ್ ಅವರು ಹಿಂದುಳಿದ ಶಾಸಕರ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದರು. ಅವರು ವರದಿಯನ್ನು ನೀಡುವುದಾಗಿ ತಿಳಿಸಿದರು. ನಾನು ಮುಖ್ಯಮಂತ್ರಿ ಸ್ಥಾನದಿಂದ ಇಳಿಯುವಂತ ಸಂದರ್ಭದಲ್ಲಿ ಅದನ್ನು ಸ್ವೀಕಾರ ಮಾಡಿದ್ದೇನೆ ಎಂದರು. ಆದರೆ ನ್ಯಾಯಾಲಯದ ಆದೇಶದಲ್ಲಿ ಅದನ್ನು ಬಹಿರಂಗಪಡಿಸಬಾರದು ಎಂದು ಆದೇಶವಿದೆ. ಈ ತಡೆಯನ್ನು ತೆರವು ಮಾಡಲು ಮನವಿ ಮಾಡುವಂತೆ ನಾನು ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷರಾದ ರಾಮಚಂದ್ರಪ್ಪ ಅವರಿಗೆ ಹೇಳಿರುವುದಾಗಿ ತಿಳಿಸಿದರು.
ನ್ಯಾಯಾಲಯದ ತಡೆಯಾಜ್ಞೆಯನ್ನು ಏನಾದರೂ ಮಾಡಿ ನೀವೆಲ್ಲ ಸೇರಿ ತೆರವು ಮಾಡಿಸಿ. ಮುಖ್ಯಮಂತ್ರಿಗಳು ಸೇರಿದಂತೆ ಇಲ್ಲಿರುವವರೆಲ್ಲರೂ ನನ್ನ ಮಾತನ್ನು ಕೇಳುತ್ತಾರೆ ಎಂಬ ನಂಬಿಕೆ ನನಗಿದೆ. ಅದು ಜಾರಿಯಾಗಲೇಬೇಕು. ನಿಮಗೆಲ್ಲ ಸಾಮಾಜಿಕ ನ್ಯಾಯ ಸಿಗಬೇಕು. ಮೀಸಲಾತಿಯಲ್ಲಿ ಕನಿಷ್ಠ 75% ಸಿಗಲೇಬೇಕು. ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಅವರೆಲ್ಲರಿಗೂ ಕೂಡ 75% ಮೀಸಲಾತಿ ಸಿಗಬೇಕು. ಎಲ್ಲರಿಗೂ ಅವರ ಜಾತಿಗೆ ಅನುಗುಣವಾಗಿ, ಜಾತಿ ಸಂಖ್ಯೆಗಳನುಗುಣವಾಗಿ ಮೀಸಲಾತಿ ಸಿಗಬೇಕು. ಮೀಸಲಾತಿ ಸಿಕ್ಕಾಗ ಮಾತ್ರ ಸಮ ಸಮಾಜ ನಿರ್ಮಾಣ ಸಾಧ್ಯ ಎಂದರು.
ಅಷ್ಟೇ ಅಲ್ಲದೇ ಲೋಕಸಭೆಯಲ್ಲಿ, ವಿಧಾನ ಸಭೆಯಲ್ಲಿ ಜಾತಿಗೆ ಅನುಗುಣವಾಗಿ, ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಸಿಕ್ಕಿದಾಗ ಮಾತ್ರ ನಾವು ರಾಜಕೀಯ ಸಮಾನತೆ ಪಡೆದುಕೊಳ್ಳಲು ಸಾಧ್ಯ ಎಂದರು. ಸರ್ವರಿಗೂ ಸಮಪಾಲು-ಸರ್ವರಿಗೂ ಸಮಬಾಳು ಸಿಗಬೇಕಾದರೆ ಸಮಾನತೆಯ ಸಮಾಜ ನಿರ್ಮಾಣ ಆಗಲೇಬೇಕು. ಬರೀ ಹಿಂದುಳಿದ ಜಾತಿಗಳಷ್ಟೆ ಅಲ್ಲದೆ ದಲಿತರು, ಅಲ್ಪಸಂಖ್ಯಾತರು ಅವರೆಲ್ಲರೂ ಹೋರಾಟ ಮಾಡಬೇಕು. ಹಿಂದುಳಿದ ಜಾತಿಗಳಲ್ಲಿ ಕೆಟಗರಿ 1, ಕೆಟಗರಿ 2 ಎ ಇವೆರಡರಲ್ಲಿ ಸುಮಾರು 752 ಜಾತಿಗಳಿದ್ದಾವೆ. ಒಟ್ಟು 806 ಹಿಂದುಳಿದ ಜಾತಿಗಳಿವೆ. ಕೆಟಗರಿ 1 ಮತ್ತು ಕೆಟಗರಿ 2ಎ ಅಷ್ಟು ಜನಸಂಖ್ಯೆಯವರು ಮಾತ್ರ ಈ ಒಕ್ಕೂಟದಲ್ಲಿ ಇರುವಂತವರು ಎಂದರು. ಮುಂದೆ ಕೆಟಗರಿ 3ಎ, 3ಬಿ ಕೂಡ ಸೇರಬೇಕು ಎಂದು ಒಗ್ಗಟ್ಟಿನ ಮಂತ್ರ ಬೋಧಿಸಿದರು.
ತಾವು ಮುಖ್ಯಮಂತ್ರಿಯಾದ ತಕ್ಷಣ ದೇವರಾಜ ಅರಸು ನಿಗಮದಲ್ಲಿ ಸಾಲ ತೆಗೆದುಕೊಂಡಿದ್ದ ಹಿಂದುಳಿದ ಜಾತಿಗಳ ಜನರ ಸಾಲವನ್ನು ಮನ್ನಾ ಮಾಡಿದ್ದನ್ನು ನೆನಪಿಸಿದರು. ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದು ಈ ಮೂಲಕ 7 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಿರುವುದಾಗಿ, ಜೊತೆಗೆ ಶಿಕ್ಷಣಕ್ಕೆ ಒತ್ತು ನೀಡುವ ಕೆಲಸವನ್ನು ಮಾಡಿರುವುದಾಗಿ ತಿಳಿಸಿದರು. ದೇವರಾಜು ಅರಸು ಮತ್ತು ಹಾವನೂರು ಆಯೋಗದ ಮೂಲಕ 1977ರಲ್ಲಿ ಮೀಸಲಾತಿ ಜಾರಿಗೆ ಬಂತು. ಆಗ ದೇವರಾಜ ಅರಸು ಅವರು ಹೊಸ ಹಿಂದುಳಿದ ಜಾತಿಗಳ ಹೊಸ ಇಲಾಖೆಯನ್ನು ಪ್ರಾರಂಭ ಮಾಡಿದರು. ಶಿಕ್ಷಣದಲ್ಲಿ ಒತ್ತು ನೀಡುವ ಜೊತೆಗೆ ಉದ್ಯೋಗದಲ್ಲಿ ಮೀಸಲಾತಿಯನ್ನು ಕೊಟ್ಟರು. ಅಲ್ಲಿಯವರೆಗೆ ಮೀಸಲಾತಿ ಇರಲಿಲ್ಲ. ನಾನು ಓದುವ ಸಂದರ್ಭದಲ್ಲಿ ಮೀಸಲಾತಿ ಇರಲಿಲ್ಲ. ಮೀಸಲಾತಿ ಇದ್ದಿದ್ದರೆ ಬಹುಶಃ ನಾನು ಎಂಎಸ್ಸಿ ಓದಿ ಎಲ್ಲೋ ಮೇಷ್ಟ್ರಾಗಿ ಇರುತ್ತಿದ್ದೆ. ಮೀಸಲಾತಿಯಿಲ್ಲದೆ ಇರುವುದರಿಂದ ನಾನು ರಾಜ್ಯದಲ್ಲಿ ಉಪಮುಖ್ಯಮಂತ್ರಿಯಾಗಲು, ಮುಖ್ಯಮಂತ್ರಿಯಾಗಲು ಸಾಧ್ಯವಾಯಿತು ಎಂದರು.
ಹಿಂದುಳಿದ ವರ್ಗಗಳ ಇಲಾಖೆ ಪ್ರಾರಂಭವಾದಾಗ ಅದರ ಬಜೆಟ್ ಕೇವಲ 5 ಕೋಟಿ ರೂ. ಆಗಿತ್ತು. ನಾನು ಮುಖ್ಯಮಂತ್ರಿಯಾದ ಮೇಲೆ 26-27ರಲ್ಲಿ ಬಜೆಟ್ ಮಂಡಿಸಿದಾಗ 4,460 ಕೋಟಿ ರೂ. ಇತ್ತು ಎಂದರು. ಇಂದು 2,712 ಹಾಸ್ಟೇಲ್‌ಗಳಿವೆ, ಅದರಲ್ಲಿ 2 ಲಕ್ಷದ 58 ಸಾವಿರದ ಹಿಂದುಳಿದ ಜಾತಿಗಳ ವಿದ್ಯಾರ್ಥಿಗಳಿದ್ದಾರೆ. ನಾನು ಉಪಮುಖ್ಯಮಂತ್ರಿಯಾಗಿರುವಾಗ ಮೋರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ಪ್ರಾರಂಭ ಮಾಡಿದೆ. ಪ್ರತಿ ಹೋಬಳಿಗೊಂದು ವಸತಿ ಶಾಲೆಗಳನ್ನು ಪ್ರಾರಂಭ ಮಾಡುತ್ತೇನೆ ಎಂದು ಅಂದು ಹೇಳಿದ್ದೆ. ಯಾಕೆಂದರೆ ದಲಿತ ಸಂಘಟನೆಗಳು ನಮಗೆ ಸಾರಾಯಿ ಬೇಡ ವಸತಿ ಶಾಲೆಗಳು ಬೇಕು ಎಂದು ಹೋರಾಟ ಮಾಡುತ್ತಿದ್ದರು. 19-20ವರೆಗೆ ಬಿಜೆಪಿಯವರ ಕಾಲದಲ್ಲಿ ಕೇವಲ 5-6 ಹಾಸ್ಟೆಲ್‌ಗಳು ಮಂಜೂರು ಆಗಿದ್ದವು. ನಾನು 2013ರಿಂದ 18ರವರೆಗೆ 542 ಹಾಸ್ಟೇಲ್‌ಗಳನ್ನು ಪ್ರಾರಂಭ ಮಾಡಿದೆ. ವಸತಿ ಶಾಲೆಗಳನ್ನು ಪ್ರಾರಂಭ ಮಾಡಿದೆ. ಇಂದು ದಲಿತರಿಗೆ ಸುಮಾರು 543 ವಸತಿ ಶಾಲೆಗಳಿವೆ. ಇವನೆಲ್ಲ ನಾನು ಮುಖ್ಯಮಂತ್ರಿಯಾಗಿರುವಾಗ ಮಾಡಿರುವುದು ಎಂದು ತಿಳಿಸಿದರು.
ಶಿಕ್ಷಣಕ್ಕಾಗಿ ವಿದ್ಯಾಸಿರಿ ಪ್ರಾರಂಭ ಮಾಡಿದೆ. ನನ್ನ ಸ್ವಂತ ಖರ್ಚಿನಲ್ಲಿ ನಾನು ರೂಮ್ ಮಾಡಿಕೊಂಡು, ಅಡುಗೆಮಾಡಿಕೊಂಡು ಓದುತ್ತಿದ್ದೆ. ಆ ಕಷ್ಟದ ಅರಿವು ನನಗಿತ್ತು. ಸಾವಿರಾರು ಮಕ್ಕಳು ಹಾಸ್ಟೆಲ್‌ಗಳಲ್ಲಿ ಸೀಟು ಸಿಗದೆ ಓದುತ್ತಿದ್ದರು. ಅವರು ವಿದ್ಯಾಭ್ಯಾಸವನ್ನು ಮೊಟಕುಗೊಳ್ಳಬಾರದು ಎಂಬ ಉದ್ದೇಶದಿಂದ ವಿದ್ಯಾಸಿರಿ ಯೋಜನೆಯನ್ನು ಜಾರಿಗೆ ತಂದೆ. ಪ್ರತಿ ವಿದ್ಯಾರ್ಥಿಗೆ 1500 ರೂ.ಗಳನ್ನು ತಿಂಗಳಿಗೆ ಕೊಡುತ್ತ , 1 ವರ್ಷಕ್ಕೆ 15 ಸಾವಿರ ರೀತಿಯಲ್ಲಿ ಹಣವನ್ನು ನೀಡಿದ್ದೆ ಎಂದು ವಿದ್ಯಾಸಿರಿ ಯೋಜನೆಯ ಹಿಂದಿನ ತಮ್ಮ ಅನುಭವವನ್ನು ಬಿಚ್ಚಿಟ್ಟರು.
ನಮ್ಮ ಹೋರಾಟ ಯಾವುದೇ ಕಾರಣಕ್ಕೂ ನಿಲ್ಲಬಾರದು. ಆರ್ಥಿಕ, ಸಾಮಾಜಿಕ, ರಾಜಕೀಯದಲ್ಲಿ ಸಮಾನತೆ ಸಿಗುವುದಿಲ್ಲವೊ ಅಲ್ಲಿಯವರೆಗೆ ನಮ್ಮ ಹೋರಾಟ ಮುಂದುವರಿಯಲೇಬೇಕು. ನಾನು ನಿಮ್ಮೊಂದಿಗೆ ಸದಾ ಇರುತ್ತೇನೆ. ಹಿಂದುಳಿದ ಜಾತಿಗಳಿಗೆ ಸರ್ಕಾರದ ಗುತ್ತಿಗೆ ಕಾಮಗಾರಿಯಲ್ಲಿ 1 ಕೋಟಿ ವರೆಗೆ ಮೀಸಲಾತಿಯನ್ನು ತಂದದ್ದು ನಮ್ಮ ಸರ್ಕಾರ. 2015ರಲ್ಲಿ ಬ್ಯಾಕ್‌ಲಾಗ್ ಹುದ್ದೆಯನ್ನು ಭರ್ತಿ ಮಾಡುವಂತಹ ಕೆಲಸವನ್ನು ಮಾಡಿದೆ. ಅಸಮಾನತೆಯನ್ನು ಹೋಗಲಾಡಿಸಬೇಕೆಂದೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಯಿತು. ಶ್ರೀಮಂತ ಬಡವನೆಂಬ ಬೇಧವಿಲ್ಲದೆ ಹೆಣ್ಣುಮಕ್ಕಳು ರಾಜ್ಯವಿಡಿ ಸಂಚರಿಸಲು ಶಕ್ತಿ ಯೋಜನೆಯನ್ನು ಜಾರಿಗೆ ತರಲಾಯಿತು. ಮನೆಯ ಯಜಮಾನಿಗೆ 2000 ನೀಡುವ ಮೂಲಕ ಗೃಹಲಕ್ಷ್ಮಿ ಯೋಜನೆಯ ಜೊತೆಗೆ ನಿರುದ್ಯೋಗಿಗಳಿಗೆ ಯುವನಿಧಿ ಯೋಜನೆಯನ್ನು ಜಾರಿಗೆ ತಂದಿರುವುದಾಗಿ ಹೇಳಿದರು. ಅನ್ನಭಾಗ್ಯ, ಕ್ಷೀರಭಾಗ್ಯ ಯೋಜನೆಯನ್ನು ಜಾರಿಗೆ ತಂದೆ ಎಂದು ತಮ್ಮ ಯೋಜನೆಗಳನ್ನು ನೆನೆದರು.
ಇದನ್ನೆಲ್ಲ ಜನರು ಕೊಟ್ಟ ಶಕ್ತಿ, ಆಶೀರ್ವಾದದಿಂದ ಮಾಡಲು ಸಾಧ್ಯವಾಯಿತು. ಈ ಹೋರಾಟ ನಿರಂತರವಾಗಿ ಮುಂದುವರಿಯುತ್ತದೆ. ಇದಕ್ಕೆ ನನ್ನ ಬೆಂಬಲ ಸದಾ ಇರಲಿದೆ ಎಂದರು.
ಕರ್ನಾಟಕ ಹಿಂದುಳಿದ ಜಾತಿಗಳ ಒಕ್ಕೂಟ ಆಯೋಜಿಸಿದ್ದ ಜನ ಜಾಗೃತಿ ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಇದೇ ವೇಳೆ "ಸಮಾನತೆಯ ಸಂಕಲ್ಪ" ಹೆಸರಿನ ಸ್ಮರಣ ಸಂಚಿಕೆಯನ್ನು ಸಿದ್ದರಾಮಯ್ಯ ಅವರು ಬಿಡುಗಡೆ ಮಾಡಿದರು.
ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ, ಸಚಿವರಾದ ಬೈರತಿ ಸುರೇಶ್, ಸಂತೋಷ್ ಲಾಡ್, ಡಾ.ಅಜಯಸಿಂಗ್, ಪುಟ್ಟರಂಗ ಶೆಟ್ಟಿ, ಮಧು ಬಂಗಾರಪ್ಪ, ಒಕ್ಕೂಟದ ಅಧ್ಯಕ್ಷ ರಾಮಚಂದ್ರಪ್ಪ ಮತ್ತಿತರ ಗಣ್ಯರು ವೇದಿಕೆಯಲ್ಲಿ ಹಾಜರಿದ್ದರು






Comments
Leave a Comment