ಮುಂಬೈನಲ್ಲಿ ಬಸವ ಪುತ್ಥಳಿ ಸ್ಥಾಪಿಸಿ: ಈಶ್ವರ ಖಂಡ್ರೆ ಮನವಿ
ಮುಂಬೈನಲ್ಲಿ ಬಸವ ಪುತ್ಥಳಿ ಸ್ಥಾಪಿಸಿ: ಈಶ್ವರ ಖಂಡ್ರೆ ಮನವಿ
ಮುಂಬೈ, ಆ.16: ಜಗತ್ತಿಗೆ ಸಮ ಸಮಾಜದ ಕಲ್ಪನೆಯನ್ನು 12ನೇ ಶತಮಾನದಲ್ಲೇ ಕಟ್ಟಿಕೊಟ್ಟ ಸಮಾಜ ಸುಧಾರಕ ವಿಶ್ವಗುರು ಬಸವಣ್ಣನವರ ಪುತ್ಥಳಿಯನ್ನು ಮುಂಬೈನಲ್ಲಿ ಸ್ಥಾಪಿಸುವಂತೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಮನವಿ ಮಾಡಿದ್ದಾರೆ.
ಮುಂಬೈನಲ್ಲಿಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮಹಾರಾಷ್ಟ್ರ ಘಟಕದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕಾಯಕವೇ ಕೈಲಾಸ ಎಂದು ಸಾರಿದ ಮತ್ತು ಶ್ರೇಣಿರಹಿತ, ವರ್ಗರಹಿತ, ಜಾತಿ ರಹಿತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದ ಬಸವಣ್ಣನವರ ಪುತ್ಥಳಿಯನ್ನು ಮುಂಬೈನಲ್ಲಿ ಸ್ಥಾಪಿಸುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಮನವಿ ಮಾಡಿದರು.
ಬಸವಣ್ಣನವರು ದಯವೇ ಧರ್ಮದ ಮೂಲವಯ್ಯ ಎಂದು ಹೇಳಿದರೆ, ಮಾನವಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದು ರೇಣುಕಾದಿ ಆಚಾರ್ಯರು ಪ್ರತಿಪಾದಿಸಿದ್ದಾರೆ. ಇಂತಹ ಉದಾತ್ತ ಪರಂಪರೆ ನಮ್ಮದು ಎಂದು ಹೇಳಿದರು.
1904ರಲ್ಲಿ ಸ್ಥಾಪನೆಯಾದ ಮಹಾಸಭಾ ದೇಶದ ವಿವಿಧೆಡೆ ನೆಲೆಸಿರುವ ಎಲ್ಲ ಲಿಂಗಾಯತರು ಮತ್ತು ವೀರಶೈವರನ್ನು ಒಗ್ಗೂಡಿಸುವ ಕಾರ್ಯ ಮಾಡುತ್ತಿದೆ. ವೀರಶೈವ ಲಿಂಗಾಯತ ಬೇರೆ ಬೇರೆ ಅಲ್ಲ. ವೀರಶೈವ ಲಿಂಗಾಯತರು ಎಂದೆಂದೂ ಒಂದೇ ನಮಗೆಲ್ಲರಿಗೂ ಭಗವಂತ ಪರಶಿವ ತಂದೆ ಎಂದರು.
ಕೆಲವು ಶಕ್ತಿಗಳು ವೀರಶೈವ ಬೇರೆ, ಲಿಂಗಾಯತ ಬೇರೆ ಎಂದು ಹೇಳುತ್ತಿದ್ದಾರೆ. ಆದರೆ ಯಾವುದೇ ಶಕ್ತಿ, ವ್ಯಕ್ತಿಯಿಂದಲೂ ನಮ್ಮ ಸಮಾಜ ಒಡೆಯಲು ಸಾಧ್ಯವಿಲ್ಲ ಎಂದು ಈಶ್ವರ ಖಂಡ್ರೆ ಸ್ಪಷ್ಟಪಡಿಸಿದರು.
ತಮ್ಮ ತಂದೆ ಲಿಂಗೈಕ್ಯ ಲೋಕನಾಯಕ ಡಾ. ಭೀಮಣ್ಣ ಖಂಡ್ರೆ ಅವರು ಕೇರಳ, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಸಂಘಟನೆ ಮಾಡಿ, ಎಲ್ಲರನ್ನೂ ಒಗ್ಗೂಡಿಸಿದರು ಎಂದು ಸ್ಮರಿಸಿದರು.
ಬಸವ ಪುತ್ಥಳಿ- ಸ್ಪೀಕರ್ ಸಕಾರಾತ್ಮಕ ಸ್ಪಂದನೆ:
ಮಹಾರಾಷ್ಟ್ರ ವಿಧಾನಸಭಾಧ್ಯಕ್ಷ ರಾಹುಲ್ ನಾರ್ವೇಕರ್ ಮಾತನಾಡಿ, ಈಶ್ವರ ಖಂಡ್ರೆ ಅವರು ಬಸವ ಪುತ್ಥಳಿಯನ್ನು ಮುಂಬೈನಲ್ಲಿ ಸ್ಥಾಪಿಸುವಂತೆ ಮಾಡಿರುವ ಮನವಿಯ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕ್ರಮ ವಹಿಸುವ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂಧೆ, ಕರ್ನಾಟಕ ಮಾಜಿ ಮುಖ್ಯಮಂತ್ರಿಗಳು, ಮಹಾರಾಷ್ಟ್ರ ಸರ್ಕಾರ, ಸಂಸತ್ ಸದಸ್ಯ ಜಗದೀಶ ಶೆಟ್ಟರ್, ಮಾಜಿ ಶಾಸಕ ಅಶೋಕ್ ಖೇಣಿ, ಬಸವ ಸಮಿತಿಯ ಅರವಿಂದ ಜತ್ತಿ, ಸಭಾದ ರಾಜ್ಯಾಧ್ಯಕ್ಷ ಶಂಕರ ಬಿದರಿ, ಪದ್ಮ ಪ್ರಶಸ್ತಿ ಪುರಸ್ಕೃತ ಪ್ರಭಾಕರ ಕೋರೆ, ಶಾಸಕರುಗಳಾದ ಕಲ್ಬುರ್ಗಿ ಮಾಜಿ ಮೇಯರ್ ಶರಣು ಮೋದಿ, ಕಾಶಿ ಪೀಠದ ಜಗದ್ಗುರು ಡಾ. ಚಂದ್ರಶೇಖರ್ ಶಿವಾಚಾರ್ಯ ಮಹಾ ಸ್ವಾಮೀಜಿ ಮೊದಲಾದವರು ಪಾಲ್ಗೊಂಡಿದ್ದರು.






Comments
Leave a Comment