ಯಡಿಯೂರು ಕೆರೆಯ ಎದುರು ‘ಅ.ನ.ಕೃ. ಕನ್ವೆನ್ಷನ್ ಸೆಂಟರ್’ ಹಾಗೂ ‘ಡಾ|| ಪುನೀತ್ ರಾಜ್ ಕುಮಾರ್ ಸಭಾಂಗಣ’ ಭವ್ಯ ಲೋಕಾರ್ಪಣೆ
**ಬೆಂಗಳೂರು, ಜೂನ್ 22:** ಯಡಿಯೂರು ವಾರ್ಡಿನ ಐತಿಹಾಸಿಕ ಕೆರೆಯ ಎದುರು ನಿರ್ಮಿಸಲಾದ “ಅ.ನ.ಕೃ. ಕನ್ವೆನ್ಷನ್ ಸೆಂಟರ್” ಮತ್ತು “ಡಾ|| ಪುನೀತ್ ರಾಜ್ ಕುಮಾರ್ ಸಭಾಂಗಣ”ವನ್ನು ಇಂದು ಭವ್ಯವಾಗಿ ಲೋಕಾರ್ಪಣೆ ಮಾಡಲಾಯಿತು. ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಅತೀ ಕಡಿಮೆ ಶುಲ್ಕದಲ್ಲಿ ವೈಭವೋಪೇತವಾದ ಸೌಲಭ್ಯ ಒದಗಿಸುವ ಉದ್ದೇಶದಿಂದ ಬಿಬಿಎಂಪಿ ಈ ಯೋಜನೆಯನ್ನು ಕೈಗೊಂಡಿದೆ.
ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ಎಲ್.ಎಸ್. ತೇಜಸ್ವಿ ಸೂರ್ಯ, ಖ್ಯಾತ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಹಾಗೂ ಅ.ನ.ಕೃ. ಅವರ ಪುತ್ರ ಗೌತಮ್ ಅವರು ಲೋಕಾರ್ಪಣೆ ನೆರವೇರಿಸಿದರು.
600–700 ಜನರಿಗೆ ಆಸನ ವ್ಯವಸ್ಥೆಯಿರುವ ರಿಸೆಪ್ಷನ್ ಹಾಲ್, 300 ಕ್ಕೂ ಹೆಚ್ಚು ಜನರಿಗೆ ಊಟದ ವ್ಯವಸ್ಥೆಯಿರುವ ಭೋಜನಾಲಯ ಹಾಗೂ 8 ಬೃಹತ್ ಕೊಠಡಿಗಳನ್ನು ಒಳಗೊಂಡಿರುವ ಸಂಪೂರ್ಣ ಹವಾನಿಯಂತ್ರಿತ ಕನ್ವೆನ್ಷನ್ ಸೆಂಟರ್‌ನ್ನು ಮದುವೆ ಕಾರ್ಯಕ್ರಮಗಳಿಗೆ ಕೇವಲ ₹70,000 ಬಾಡಿಗೆಯಲ್ಲಿ ನೀಡಲಾಗುತ್ತಿದೆ. ಅದೇ ರೀತಿ 322 ಐಷಾರಾಮಿ ಆಸನಗಳು ಮತ್ತು ಸರ್‌ರೌಂಡ್ ಸೌಂಡ್ ವ್ಯವಸ್ಥೆಯೊಂದಿಗೆ ನಿರ್ಮಿಸಲಾದ “ಡಾ|| ಪುನೀತ್ ರಾಜ್ ಕುಮಾರ್ ಆಡಿಟೋರಿಯಂ”ನ ಬಾಡಿಗೆ ಕೇವಲ ₹25,000 ಆಗಿದ್ದು, ಸಿನಿಮಾ ಬಿಡುಗಡೆ ಪೂರ್ವ ಕಾರ್ಯಕ್ರಮಗಳು, ಸಾಂಸ್ಕೃತಿಕ ಹಾಗೂ ರಂಗಭೂಮಿ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಲಾಗಿದೆ.
ಕಾರ್ಯಕ್ರಮದಲ್ಲಿ ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ರಮೇಶ್ ಎನ್.ಆರ್., ಮಾಜಿ ಸದಸ್ಯರು ಪೂರ್ಣಿಮಾ ರಮೇಶ್, ಎ.ಹೆಚ್. ಬಸವರಾಜ್, ಎಲ್. ಗೋವಿಂದರಾಜು, ಗೋವಿಂದ ನಾಯ್ಡು ಸೇರಿದಂತೆ ಅನೇಕ ಗಣ್ಯರು ಹಾಗೂ 500 ಕ್ಕೂ ಹೆಚ್ಚು ನಾಗರಿಕರು ಭಾಗವಹಿಸಿದರು.
ಈ ಹೊಸ ಸೌಲಭ್ಯಗಳು ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ದೊಡ್ಡ ನೆರವಾಗಲಿದ್ದು, ಕನ್ನಡ ಚಿತ್ರರಂಗ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಅಂತರರಾಷ್ಟ್ರೀಯ ಮಟ್ಟದ ವೇದಿಕೆಯನ್ನು ಒದಗಿಸಲಿವೆ.


Comments
Leave a Comment