PRABHAVAA.COM

7ನೇ ಗ್ಯಾರಂಟಿ ಮೂಲಕ ಕೋಲಾರ, ಚಿಕ್ಕಬಳ್ಳಾಪುರಕ್ಕೆ ಎತ್ತಿನಹೊಳೆ ನೀರು: ಸಿಎಂ ಡಿ ಕೆ ಶಿವಕುಮಾರ್

Kolar:

Font size:

2027ರ ವೇಳೆಗೆ ನೀರು ಹರಿಸಲು ಸರ್ಕಾರದ ಸಂಕಲ್ಪ ಕೋಲಾರ ಭಾಗದ ರೈತರು, ರಾಜ್ಯಕ್ಕೆ ಮಾದರಿ

7ನೇ ಗ್ಯಾರಂಟಿ ಮೂಲಕ ಕೋಲಾರ, ಚಿಕ್ಕಬಳ್ಳಾಪುರಕ್ಕೆ ಎತ್ತಿನಹೊಳೆ ನೀರು: ಸಿಎಂ ಡಿ ಕೆ ಶಿವಕುಮಾರ್

2027ರ ವೇಳೆಗೆ ನೀರು ಹರಿಸಲು ಸರ್ಕಾರದ ಸಂಕಲ್ಪ
ಕೋಲಾರ ಭಾಗದ ರೈತರು, ರಾಜ್ಯಕ್ಕೆ ಮಾದರಿ

ಹುಂಡಿ ಕಳ್ಳರಿಗೆ ತಕ್ಕ ಶಿಕ್ಷೆ ನೀಡಿ

ಒಗ್ಗಟ್ಟಿನಲ್ಲಿ ಬಲವಿದೆ, ಜಿಲ್ಲೆಯ ಎಲ್ಲಾ ಶಾಸಕರೂ ಮುಖ್ಯಮಂತ್ರಿ, ಸಚಿವರೇ

ಮಾಲೂರು (ಕೋಲಾರ), ಆ.10:

“ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿ ಯೋಜನೆಗಳ ಜತೆಗೆ ಆರನೇ ಗ್ಯಾರಂಟಿಯಾಗಿ ಭೂಗ್ಯಾರಂಟಿ ಹಾಗೂ ಏಳನೇ ಗ್ಯಾರಂಟಿಯಾಗಿ ನೀರಿನ ಗ್ಯಾರಂಟಿ ನೀಡುತ್ತಿದೆ. ಇದರ ಮೂಲಕ 2027ರ ಅಂತ್ಯದ ವೇಳೆಗೆ ಕೋಲಾರ ಹಾಗೂ ಚಿಕ್ಕಬಳ್ಳಾಪುರಕ್ಕೆ ಎತ್ತಿನಹೊಳೆ ನೀರು ಹರಿಸಲು ಸರ್ಕಾರ ಸಂಕಲ್ಪ ಮಾಡಿದೆ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.

ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನಲ್ಲಿ ಸೋಮವಾರ ನಡೆದ ವಿವಿಧ ಇಲಾಖೆಗಳ ಅಭಿವೃದ್ಧಿಯ ಯೋಜನೆಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರು ಚಾಲನೆ ನೀಡಿ ಮಾತನಾಡಿದರು.

“ಎತ್ತಿನಹೊಳೆ ಯೋಜನೆ ಸಾಧ್ಯವಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷರು ಲೇವಡಿ ಮಾಡುತ್ತಿದ್ದಾರೆ. ಯಾವುದು ಸುಲಭವಾಗಿ ಸಿಗುವುದಿಲ್ಲ. ಈ ಯೋಜನೆ ಕಷ್ಟವಾಗಿದೆ. ಆದರೆ ಪ್ರಯತ್ನ ಮಾಡಬೇಕಲ್ಲವೇ? ಪಶ್ಚಿಮ ಘಟ್ಟದಿಂದ ಹಾಸನದ ಮೂಲಕ ಕೋಲಾರ, ಚಿಕ್ಕಬಳ್ಳಾಪುರ ಕೆರೆಗಳನ್ನು ತುಂಬಿಸಲಾಗುವುದು. ತುಮಕೂರುವರೆಗೂ ನೀರು ತರುವ ಪ್ರಯತ್ನ ಮಾಡಲಾಗಿದೆ. ಈಗಾಗಲೇ ನಾವು ಕೆಸಿ ವ್ಯಾಲಿ ಯೋಜನೆ ಮೂಲಕ 104 ಕೆರೆಗಳಿಗೆ ನೀರು ತುಂಬಿಸಲಾಗಿದೆ. ಹೆಚ್.ಎನ್ ವ್ಯಾಲಿ 65 ಕೆರೆ ತುಂಬಿಸುವ ಕೆಲಸ ನಡೆಯುತ್ತಿದೆ. 700ಕ್ಕೂ ಹೆಚ್ಚು ಕೆರೆಗಳಲ್ಲಿ ಸಂಸ್ಕರಿಸಿದ ನೀರನ್ನು ತುಂಬಿಸಲು ಮುಂದಾಗಿದ್ದೇವೆ. ಅಂತರ್ಜಲ ಹೆಚ್ಚಿಸಬೇಕು, ಕೆರೆಗಳಿಗೆ ಹಾಗೂ ರೈತರಿಗೆ ನೀರು ತಲುಪಬೇಕು. ಹೀಗಾಗಿ ಆಗಸ್ಟ್ 15ರಂದು ನಮ್ಮ ಸರ್ಕಾರ ಹಮ್ಮಿಕೊಂಡಿರುವ ಯೋಜನೆಗಳನ್ನು ಪ್ರಕಟಿಸಲಿದ್ದೇವೆ. ಜಲ ಜೀವಕ್ಕೆ ನೆಮ್ಮದಿ, ನೀರಿಲ್ಲದೆ ಬದುಕಿಲ್ಲ. ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜನರ ನೀರಿನ ಸಮಸ್ಯೆಗೆ ವಿವಿಧ ರೀತಿಯ ಕಾರ್ಯಕ್ರಮ ರೂಪಿಸಲಾಗಿದೆ” ಎಂದು ತಿಳಿಸಿದರು.

“ಅಧಿಕಾರ ಶಕ್ತಿ ಸಂಕೇತವಲ್ಲ, ಜವಾಬ್ದಾರಿಯ ಸಂಕೇತ. ನಾವು ಅಧಿಕಾರವನ್ನು ಸಿಂಹಾಸನವೆಂದು ತಿಳಿದಿಲ್ಲ, ಜನಸೇವೆಗೆ ಸಿಕ್ಕಿರುವ ಅವಕಾಶ ಎಂದು ಭಾವಿಸಿದ್ದೇವೆ. ಮೂರ್ತಿಗೆ ಬೆಲೆ ಕಟ್ಟಬಹುದು, ದೇವರಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರೇ ದೇವರು. ನಮಗೆ ಆಶೀರ್ವಾದ ಮಾಡಿ ನಿಮ್ಮ ಸೇವೆಗೆ ಅವಕಾಶ ಮಾಡಿಕೊಟ್ಟಿದ್ದೀರಿ, ನಿಮಗೆ ಧನ್ಯವಾದಗಳು” ಎಂದು ತಿಳಿಸಿದರು.

ಆದರ್ಶ ಶಾಸಕ ನಂಜೇಗೌಡರು

“ನಂಜೇಗೌಡರು ರಾಜ್ಯಕ್ಕೆ ಆದರ್ಶ ಶಾಸಕರು. ಕೋವಿಡ್ ಸಮಯದಲ್ಲಿ ರೈತರ ಬೆಳೆಗೆ ಮಾರುಕಟ್ಟೆ ಇಲ್ಲದೇ ಇರುವಾಗ ನಾವು ಇಲ್ಲಿ ತರಕಾರಿ ಖರೀದಿ ಮಾಡಿ ಬೆಂಗಳೂರಿನಲ್ಲಿ ಜನರಿಗೆ ಉಚಿತವಾಗಿ ಹಂಚಿದ್ದೇವೆ. ನಂಜೇಗೌಡರು ನಿಮಗೆ ಮಾತು ಕೊಟ್ಟಿದ್ದಾರೆ. ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು ಮುಖ್ಯ. ನಂಜೇಗೌಡರು ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ. ಅದಕ್ಕೆ ಈ ಕಾರ್ಯಕ್ರಮ ಉದಾಹರಣೆ. ಅವರು ತಮಗೆ ಸಿಕ್ಕ ಅವಕಾಶದಲ್ಲಿ ಇಂತಹ ಯೋಜನೆಗಳ ಮೂಲಕ ಸಾಕ್ಷಿಗುಡ್ಡಿ ಬಿಟ್ಟಿದ್ದಾರೆ. ವಿರೋಧ ಪಕ್ಷದವರು ಟೀಕೆ ಮಾಡಲಿ, ನಮ್ಮ ತಪ್ಪು ಕಂಡು ಹಿಡಿದರೆ ತಿದ್ದುಕೊಳ್ಳೋಣ. ಆದರೆ ಕಳೆದ ಮೂರು ವರ್ಷಗಳಲ್ಲಿ ವಿರೋಧ ಪಕ್ಷಗಳ ಟೀಕಗಳು ಸತ್ತಿವೆ, ನಮ್ಮ ಸಾಧನೆಗಳು ಶಾಶ್ವತವಾಗಿ ಉಳಿದಿವೆ” ಎಂದು ತಿಳಿಸಿದರು.

ಕೋಲಾರ ಭಾಗದ ರೈತರು, ರಾಜ್ಯಕ್ಕೆ ಮಾದರಿ

“ಈ ಜಿಲ್ಲೆಯ ರೈತರನ್ನು ರಾಜ್ಯದ ಜನತೆ ಸ್ಮರಿಸಬೇಕು. ಇಲ್ಲಿ ಅಂತರ್ಜಲ ನೀರಿನ ಮಟ್ಟ 2 ಸಾವಿರ ಅಡಿಗೆ ಕುಸಿದಾಗ ರೈತರು ಆತ್ಮಹತ್ಯೆ ಮಾಡಿಕೊಳ್ಳದೇ ಬೆಂಗಳೂರಿಗೆ ಹಾಲು, ತರಕಾರಿ, ರೇಷ್ಮೆ, ಹೂ ಬೆಳೆದು ತಮ್ಮ ಸ್ವಾಭಿಮಾನ ಮೆರೆದಿದ್ದಾರೆ. ಹೋರಾಟವಿಲ್ಲದೆ ಪ್ರಗತಿ ಸಾಧ್ಯವಿಲ್ಲ. ಬದಲಾವಣೆಗಳು ಅವಕಾಶ ಸೃಷ್ಟಿಸುತ್ತವೆ. ಒಳ್ಳೆಯದನ್ನು ಉಳಿಸಿಕೊಳ್ಳಲು ಕೆಟ್ಟವರ ಜೊತೆ ಹೋರಾಟ ಮಾಡಬೇಕು. ರೈತರ ಕಣ್ಣೀರು ಒರೆಸುವ ಸರ್ಕಾರ ನಿಮ್ಮ ಮುಂದೆ ನಿಂತಿದೆ. ಕೃಷಿ ನಿಮ್ಮೆಲ್ಲರ ಸಂಸ್ಕೃತಿ, ರೈತರು ನಮ್ಮೆಲ್ಲರ ಆಸ್ತಿ” ಎಂದು ಬಣ್ಣಿಸಿದರು.

ನಮ್ಮ ಗ್ಯಾರಂಟಿ ಜನರ ಬದುಕು ಬದಲಿಸಿವೆ

“ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಮಾತ್ರ ಚೆಂದ. ಈ ದಾನಧರ್ಮ ಮಾಡುವ ಕೈ ಅಧಿಕಾರಕ್ಕೆ ಬಂದ ಕಾರಣ 5 ಗ್ಯಾರಂಟಿ ನೀಡಿದೆವು. ಇವು ನಿಮ್ಮ ಬದುಕು ಬದಲಿಸಿದವು. 1.64 ಕೋಟಿ ಮನೆಗಳನ್ನು ಗೃಹಜ್ಯೋತಿ ಮೂಲಕ ಬೆಳಗಲಾಗಿದೆ. 1.20 ಬಡ ಕುಟುಂಬದ ಯಜಮಾನಿಯರಿಗೆ ಮಸಿಕ 2 ಸಾವಿರ ಹಣ ಹಾಕುತ್ತಿದ್ದೇವೆ. ಶಕ್ತಿ ಯೋಜನೆ ಮೂಲಕ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ವ್ಯವಸ್ಥೆ ಕಲ್ಪಿಸಿದ್ದೇವೆ. ಬಡವರಿಗೆ 10 ಕೆ ಜಿ ಅಕ್ಕಿ ನೀಡಿದ್ದೇವೆ. ನಿರುದ್ಯೋಗಿ ಯುವಕರಿಗೆ ನಿರುದ್ಯೋಗ ಭತ್ಯೆ ನೀಡಿದ್ದೇವೆ” ಎಂದು ವಿವರಿಸಿದರು.

“ನಮ್ಮ ಗ್ಯಾರಂಟಿ ಯೋಜನೆಗಳು ದೇಶಕ್ಕೆ ಮಾದರಿಯಾಗಿವೆ. ಈ ಯೋಜನೆಗಳನ್ನು ಪ್ರಧಾನಮಂತ್ರಿ ಮೋದಿ ಅವರಿಂದ ಬಿಜೆಪಿ ಸ್ನೇಹಿತರು ಟೀಕಿಸಿದರು. ನಾವು ಪ್ರತಿ ವರ್ಷ 52 ಸಾವಿರ ಕೋಟಿ ಹಣ ಮೀಸಲಿಟ್ಟಿದ್ದೇವೆ. ಗ್ಯಾರಂಟಿ ಯೋಜನೆಗಳ ಜತೆಗೆ ಆರನೇ ಗ್ಯಾರಂಟಿಯಾಗಿ ಭೂಮಿ ಹಕ್ಕು ನೀಡಿ ಎಲ್ಲರ ಆಸ್ತಿ ದಾಖಲೆ ಸರಿ ಮಾಡುವುದರ ಜತೆಗೆ ಪಟ್ಟಾ ದಾಖಲೆ, ಹಕ್ಕು ಪತ್ರ ನೀಡಲಾಗಿದೆ. ಕಾಯಕದಿಂದ ನಾಯಕತ್ವ ಸಿಗುತ್ತದೆ. ಜನಪರವಾಗಿದ್ದರೆ ಮಾತ್ರ ಅಧಿಕಾರ ಸಿಗುತ್ತದೆ. ಅಧಿಕಾರ ನಶ್ವರ, ಸಾಧನೆಗಳು ಅಜರಾಮರ, ಮತದಾರರೇ ಈಶ್ವರ ಎಂದು ನಿಮ್ಮನ್ನು ನಾವು ದೇವರಂತೆ ಕಾಣುತ್ತಿದ್ದೇವೆ. ಬೆಂಗಳೂರಿನಲ್ಲಿ 25 ಲಕ್ಷ ಆಸ್ತಿಗಳ ಖಾತೆಗಳನ್ನು ಮನೆ ಬಾಗಿಲಿಗೆ ನೀಡುತ್ತಿದ್ದೇವೆ. ಕೇಂದ್ರ ಬಿಜೆಪಿ ಸರ್ಕಾರ ನಮ್ಮ ಈ ಯೋಜನೆಗೆ ಪ್ರಶಸ್ತಿ ನೀಡಿದೆ” ಎಂದು ತಿಳಿಸಿದರು.

ಮತದಾನದ ಹಕ್ಕು ಉಳಿಸಿಕೊಳ್ಳಿ

“ನನ್ನದು ಹೊಸ ಸರ್ಕಾರ ಅಲ್ಲ. ಸಿದ್ದರಾಮಯ್ಯ ನೇತೃತ್ವದಲ್ಲಿ 3 ವರ್ಷ ನಡೆದ ಸರ್ಕಾರದ ಮುಂದುವರಿದ ಭಾಗ. ರಾಜ್ಯದಲ್ಲಿ ಎಸ್ಐಆರ್ ನಡೆಯುತ್ತಿದೆ. ನೀವು ನಿಮ್ಮ ಮತ ಉಳಿಸಿಕೊಳ್ಳದಿದ್ದರೆ, ನೀವು ಅನೇಕ ಯೋಜನೆಗಳಿಂದ ವಂಚಿತರಾಗುತ್ತೀರಿ. ನಿಮ್ಮ ಮತ ನಿಮ್ಮ ಹಕ್ಕು. ನಿಮ್ಮ ಹಕ್ಕನ್ನು ಉಳಿಸಿಕೊಳ್ಳಿ. ಕರಡುಪಟ್ಟಿಯಲ್ಲಿ 1 ಕೋಟಿಗೂ ಹೆಚ್ಚು ಹೆಸರು ತೆಗೆಯಲಾಗುತ್ತಿದೆ. ನಿಮ್ಮ ಜಾತಿ ಪ್ರಮಾಣಪತ್ರ, ವಾಸ ದೃಢೀಕರಣ ಪತ್ರ ನೀಡಲು ಸರ್ಕಾರ ಮುಂದಾಗಿದೆ. ಸರ್ಕಾರ ಚುನಾವಣಾ ಆಯೋಗದ ಜತೆ ಕೈಜೋಡಿಸಲಿದೆ” ಎಂದು ಹೇಳಿದರು.

ಹುಂಡಿ ಕಳ್ಳರಿಗೆ ತಕ್ಕ ಶಿಕ್ಷೆ ನೀಡಿ

“ಈ ದೇಶದಲ್ಲಿ ಮತ ಕಳ್ಳತನ ನಡೆಯಿತು, ಹುಂಡಿ ಕಳ್ಳತನವೂ ಆಗಿದೆ. ನಮ್ಮ ಜನ ರಾಮ, ರಾಮ ಎಂದು ದೇಣಿಗೆ ಕೊಟ್ಟರು. ಅದನ್ನು ಕಳ್ಳತನ ಮಾಡಿದ್ದಾರೆ. ಹೀಗಾಗಿ ನಮ್ಮ ಸರ್ಕಾರ ಹುಂಡಿ ಹಾಗೂ ನಿಮ್ಮ ಕಾಣಿಕೆ ಕಾಪಾಡಲು ದೊಡ್ಡ ದೇವಾಲಯಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿ ಅದನ್ನು ಪೊಲೀಸ್ ಠಾಣೆಗೆ ಸಂಪರ್ಕ ಕಲ್ಪಿಸಲಾಗಿದೆ. ಈ ವಿಚಾರದಲ್ಲಿ ನೀವು ಹೋರಾಟ ಮಾಡಿ ತೀರ್ಪು ನೀಡಬೇಕು. ದೇವರ ಹುಂಡಿಗೆ ಕೈಹಾಕಿದವರಿಗೆ ತಕ್ಕ ಶಿಕ್ಷೆ ನೀಡಬೇಕು” ಎಂದು ಕರೆಕೊಟ್ಟರು.

ಯುವಕರಿಗಾಗಿ ನಮ್ಮ ಸರ್ಕಾರದಿಂದ ಅನೇಕ ಕಾರ್ಯಕ್ರಮ

“ರಾಜ್ಯದಲ್ಲಿ ಯುವಕರಿಗೆ ಸಾಂಸ್ಕೃತಿಕ ಚಟುವಟಿಕೆ, ಕ್ರೀಡೆ, ಜಾತ್ಯಾತೀತ ಮನೋಭಾವ, ನಾಯಕತ್ವ ಗುಣ ಬೆಳೆಸಲು ಪಂಚಾಯ್ತಿ ಹಾಗೂ ವಾರ್ಡ್ ಮಟ್ಟದಲ್ಲಿ ಭಾರತ ಜೋಡೋ ಯುವ ಶಕ್ತಿ ಸಂಘ ರಚಿಸಲು ಮುಂದಾಗಿದ್ದೇವೆ. ಈ ಸಂಘದಲ್ಲಿ 16-40 ವರ್ಷದ ಯುವಕರು ಸದಸ್ಯರಾಗಬಹುದು. ಪ್ರತಿ ಸಂಘಕ್ಕೆ ವಾರ್ಷಿಕ 10 ಲಕ್ಷದಂತೆ ಒಟ್ಟು 1 ಸಾವಿರ ಕೋಟಿ ಅನುದಾನ ಮೀಸಲಿಡಲಾಗಿದೆ. ಪಂಚಾಯಿತಿ ಮಟ್ಟದಲ್ಲಿ ಗ್ಯಾರಂಟಿ ಸಮಿತಿ ರಚಿಸಲಾಗಿದೆ. ಮೂಲಕ ಫಲಾನುಭವಿಗಳ ಜತೆ ಸಂಪರ್ಕ ಸಾಧಿಸಲು ಅವಕಾಶ ಕಲ್ಪಿಸಲಾಗಿದೆ. ಆರು ಜನ ಸಮಿತಿಯಲ್ಲಿ ಹಿಂದುಳಿದವರು, ಅಲಪಸಂಖ್ಯಾತರು, ಪರಿಶಿಷ್ಟರು, ಮಹಿಳೆಯರಿಗೆ ಅವಕಾಶ ನೀಡಲಾಗುವುದು” ಎಂದರು.

“ಖಾಸಗಿ ಕಂಪನಿಗಳಲ್ಲಿ ಯುವಕರಿಗೆ ಉದ್ಯೋಗ ನೀಡಲು ಸರ್ಕಾರ ಉದ್ಯೋಗ ವಿನಿಮಯ ಕೇಂದ್ರ ಸ್ಥಾಪಿಸಲು ಮುಂದಾಗಿದೆ. ಖಾಸಗಿ ಕಂಪನಿಗಳಲ್ಲಿ ಉದ್ಯೋಗ ಪಡೆಯಲು ಯುವಕರಿಗೆ ಅಗತ್ಯ ತರಬೇತಿ ನೀಡಲಾಗುವುದು. 72 ಸಾವಿರ ಸರ್ಕಾರಿ ಹುದ್ದೆಗಳ ಭರ್ತಿಗೆ ಸರ್ಕಾರ ಮುಂದಾಗಿದೆ. ನಮ್ಮ ಸರ್ಕಾರದಲ್ಲಿ ಕೇವಲ ನಾನು ಹಾಗೂ ಸಿದ್ದರಾಮಯ್ಯ ಅವರು ಮಾತ್ರ ಸಾಧನೆ ಮಾಡಿಲ್ಲ. ನಮ್ಮ ಸರ್ಕಾರದಲ್ಲಿ ನಮ್ಮ ಸಚಿವರು ತಮ್ಮ ಇಲಾಖೆಗಳಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿದ್ದಾರೆ” ಎಂದರು.

ಒಗ್ಗಟ್ಟಿನಲ್ಲಿ ಬಲವಿದೆ, ಜಿಲ್ಲೆಯ ಎಲ್ಲಾ ಶಾಸಕರೂ ಮುಖ್ಯಮಂತ್ರಿ, ಸಚಿವರೇ

“ಜಿಲ್ಲೆಯ ಎಲ್ಲಾ ಶಾಸಕರು ಆಧಾರ ಸ್ತಂಭವಾಗಿದ್ದಾರೆ. ಒಗ್ಗಟ್ಟಿನಲ್ಲಿ ಬಲವಿದೆ. ಮಂತ್ರಿ ಮಂಡಲದಲ್ಲಿ ಜಿಲ್ಲೆಗೆ ಸಚಿವ ಸ್ಥಾನ ನೀಡಲು ಆಗಿಲ್ಲ. ಆದರೆ ಈ ಜಿಲ್ಲೆಯ ಪ್ರತಿ ಶಾಸಕರೂ ಮುಖ್ಯಮಂತ್ರಿಗಳು ಹಾಗೂ ಸಚಿವರುಗಳು. ಅವರಿಗೆ ಶಕ್ತಿ ತುಂಬುವ ಕೆಲಸ ನಾನು ಮಾಡುವೆ. ಅದು ನನ್ನ ಕರ್ತವ್ಯ. ಸರ್ಕಾರ ನಿಮ್ಮ ಮನೆ ಬಾಗಿಲಿಗೆ ಬರಲಿದೆ. ಜಿಲ್ಲಾ ಮಂತ್ರಿಗಳು ಪ್ರತಿ ತಾಲ್ಲೂಕಿನಲ್ಲಿ 15 ದಿನಕ್ಕೊಮ್ಮೆ ಜನರ ಅಹವಾಲು ಸ್ವೀಕರಿಸಲಿದ್ದಾರೆ. ಶಾಸಕರು ಪಂಚಾಯಿತಿಗಳಿಗೆ ಹೋಗಿ ಜನರ ಸಮಸ್ಯೆ ಆಲಿಸಬೇಕು. ಅದಕ್ಕಾಗಿ ಪ್ರಜಾಸೇವೆ ಇಲಾಖೆ ಪ್ರಾರಂಭಿಸುತ್ತಿದ್ದೇವೆ” ಎಂದರು.

“ಬಜೆಟ್ ನಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಘೋಷಣೆಯಾಗಿದೆ. ಕೋಲಾರ ಎಪಿಎಂಸಿಗೆ 60 ಎಕರೆ ಮಂಜೂರಿಗೆ ಸಿದ್ಧತೆಯಾಗುತ್ತಿದೆ. ಸಾಧನೆ ಇಲ್ಲದೆ ಸತ್ತರೆ ಸಾವಿಗೆ ಅಪಮಾನ, ಆದರ್ಶ ಇಲ್ಲದೆ ಬದುಕಿದರೆ ಬದುಕಿಗೆ ಅಪಮಾನ. ನಂಜೇಗೌಡರು, ಸಾಧನೆ, ಆಶೀರ್ವಾದ ಎರಡನ್ನು ತೋರಿಸಿದ್ದಾರೆ. ಇತಿಹಾಸ ಮರೆತವ ಇತಿಹಾಸ ಸೃಷ್ಟಿಸಲಾರ ಎಂದು ಅಂಬೇಡ್ಕರ್ ಹೇಳುತ್ತಾರೆ. ಈ ಕಾರ್ಯಕ್ರಮ ಇತಿಹಾಸ ಪುಟ ಸೇರುತ್ತದೆ. ನಿಮ್ಮ ನಿರೀಕ್ಷೆ ಹುಸಿ ಮಾಡುವುದಿಲ್ಲ. ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ” ಎಂದು ತಿಳಿಸಿದರು.

ಬಿಜೆಪಿ-ಜೆಡಿಎಸ್ ಪಾದಯಾತ್ರೆಯಲ್ಲಿ ಯಾವ ರೈತರೂ ಇಲ್ಲ, ತಮ್ಮ ಹುಡುಗನ (ನಿಖಿಲ್ ಕುಮಾರಸ್ವಾಮಿ) ರಾಜಕೀಯ ಭವಿಷ್ಯಕ್ಕೆ ಪಾದಯಾತ್ರೆ ಮಾಡುತ್ತಿದ್ದಾರೆ: ಸಿಎಂ ಡಿ ಕೆ ಶಿವಕುಮಾರ್

ಅವರ ಪ್ರತಿಭಟನೆ ಹಕ್ಕನ್ನು ನಾನು ಪ್ರಶ್ನಿಸುವುದಿಲ್ಲ

ನೈಸ್ ಹಾಗೂ ಬಿಡದಿ ಟೌನ್ ಶಿಪ್ ಯೋಜನೆಗೆ ಸಹಿ ಹಾಕಿದ್ದೇ ಅವರು

ಬೆಂಗಳೂರು, ಆಗಸ್ಟ್ 10:

“ಬಿಡದಿ ಟೌನ್ ಶಿಪ್ ವಿರೋಧಿಸಿ ಬಿಜೆಪಿ- ಜೆಡಿಎಸ್ ಮಾಡುತ್ತಿರುವ ಪಾದಯಾತ್ರೆಯಲ್ಲಿ ಯಾವ ರೈತರೂ ಇಲ್ಲ. ತಮ್ಮ ಮನೆಯ ಹುಡುಗನ (ನಿಖಿಲ್ ಕುಮಾರಸ್ವಾಮಿ) ರಾಜಕೀಯ ಭವಿಷ್ಯಕ್ಕಾಗಿ ಮಾಡುತ್ತಿರುವ ಹೋರಾಟ ಇದು” ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.

ಮಾಲೂರಿನಲ್ಲಿ ಸೋಮವಾರ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಪ್ರತಿಕ್ರಿಯಿಸಿದರು.

ಬಿಡದಿ ಟೌನ್ ಶಿಪ್ ಯೋಜನೆ ವಿರೋಧಿಸಿ ಮಾಡುತ್ತಿರುವ ಪಾದಯಾತ್ರೆಯಲ್ಲಿ ದೇವೇಗೌಡರು ಭಾಗಿಯಾಗಿದ್ದಾರೆ ಎಂದು ಹೇಳಿದಾಗ “ಬೇರೆ ಕ್ಷೇತ್ರದಲ್ಲಿರುವ ಪಕ್ಷದ ಕಾರ್ಯಕರ್ತರನ್ನು ಕರೆದುಕೊಂಡು ಬಂದು ಪಾದಯಾತ್ರೆ ಕೈಗೊಂಡಿದ್ದಾರೆ. ಹೋರಾಟ ಮತ್ತು ಪ್ರತಿಭಟನೆ ಪ್ರಜಾಪ್ರಭುತ್ವದಲ್ಲಿ ಅವರಿಗಿರುವ ಹಕ್ಕು.ಅದನ್ನು ನಾನು ಬೇಡ ಎನ್ನುವುದಿಲ್ಲ” ಎಂದರು.

“ಅವರು ಮಾಡಿದ ಯೋಜನೆ ನಾವು ಮುಂದುವರಿಸಿದ್ದೇವೆ. ಅವರು 25 ಲಕ್ಷ ಪರಿಹಾರ ನೀಡುತ್ತೇವೆ ಎಂದಿದ್ದರು. ನಾವು 2.50 ಕೋಟಿಯಿಂದ 3 ಕೋಟಿ ರೂ.ವರೆಗೂ ಪರಿಹಾರ ನೀಡುತ್ತಿದ್ದೇವೆ” ಎಂದು ವಿವರಿಸಿದರು.

ನೈಸ್ ಹಾಗೂ ಬಿಡದಿ ಟೌನ್ ಶಿಪ್ ಯೋಜನೆಗೆ ಸಹಿ ಹಾಕಿದ್ದೇ ಅವರು

ನೈಸ್ ಮತ್ತು ಬಿಡದಿ ಯೋಜನೆ ಒಂದೇ ರೀತಿಯ ಯೋಜನೆ ಎಂಬ ಕುಮಾರಸ್ವಾಮಿ ಅವರ ಆರೋಪದ ಬಗ್ಗೆ ಕೇಳಿದಾಗ, “ಅವರೆಡೂ ಯೋಜನೆಗಳಿಗೆ ಅವರೇ ಸಹಿ ಹಾಕಿದ್ದು ಅವರೇ. ನೈಸ್ ಯೋಜನೆ ಮಾಡಿದವರು ಯಾರು? ಅವರೇ ಮಾಡಿದ್ದು. ಆದರೆ ಅದರಿಂದ ಒಳ್ಳೇದಾಗಿದೆ. ರಸ್ತೆ ಆಗಿರುವುದರಿಂದ ಬೆಂಗಳೂರು ಇವತ್ತು ಉಳಿದುಕೊಂಡಿದೆ. ಅವರು ಮಾಡಿದ್ದು ತಪ್ಪು ಎಂದಲ್ಲ. ಆದರೆ ಅದರಲ್ಲಿ ಅವರ ಸ್ವಾರ್ಥವಿದೆ. ಅದನ್ನೆಲ್ಲಾ ಸಮಯ ಬಂದಾಗ ಮಾತನಾಡುವೆ" ಎಂದು ಪ್ರತಿಕ್ರಿಯಿಸಿದರು.

ಶೀಘ್ರದಲ್ಲೇ ಖಾತೆ ಹಂಚಿಕೆ

ಸಚಿವರಿಗೆ ಖಾತೆ ಹಂಚಿಕೆಬಗ್ಗೆ ಕೇಳಿದಾಗ, “ಸಚಿವರಿಗೆ ಖಾತೆ ಹಂಚಿಕೆ ಬಗ್ಗೆ ಶನಿವಾರ ಸಂಜೆ ದೆಹಲಿಯಲ್ಲಿ ವರಿಷ್ಠರೊಂದಿಗೆ ಚರ್ಚೆ ಮಾಡಿ ಬಂದಿದ್ದೇನೆ. ಬಹುಶಃ ಇಂದು ಸಂಜೆ ಬಗೆಹರಿಯಲಿದೆ” ಎಂದರು.

Comments

Leave a Comment

Prev Post ಬಬಲೇಶ್ವರ ಮತ ಕ್ಷೇತ್ರದ ಸಾರವಾಡ ಗ್ರಾಮದಲ್ಲಿ ಕೃಷಿ ಭೂಮಿಗಳಿಗೆ ಭೇಟಿ ನೀಡಿ ರೈತರ ಜತೆ ಸಂವಾದ ನಡೆಸಿದ ಸಚಿವ ಎಂ ಬಿ ಪಾಟೀಲ್
Next Post ರಾಜ್ಯದ ರೈತರಿಗೆ ಕೂಡಲೇ ಬರ ಪರಿಹಾರ ಘೋಷಿಸಿ- ಎನ್ .ರವಿಕುಮಾರ್

ಮಧುಗಿರಿಯ ಇತಿಹಾಸ ಪ್ರಸಿದ್ಧ ಶ್ರೀ ದಂಡಿನ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವ ಶಾಸಕ ಕೆ ಎನ್ ರಾಜಣ್ಣರವರಿಂದ ವಿಶೇಷ ಪೂಜೆ

ಮಧುಗಿರಿಯ ಇತಿಹಾಸ ಪ್ರಸಿದ್ಧ ಶ್ರೀ ದಂಡಿನ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವ ಶಾಸಕ ಕೆ ಎನ್ ರಾಜಣ್ಣರವರಿಂದ ವಿಶೇಷ ಪೂಜೆ

ಕರ್ನಾಟಕ ಎಂ.ಎಸ್.ಎಂ.ಇ. ನೀತಿ - ರಾಜ್ಯ ಮಟ್ಟದ ಪಾಲುದಾರರ ಪೂರ್ವಭಾವಿ ಸಮಾಲೋಚನಾ ಕಾರ್ಯಗಾರ-

ಕರ್ನಾಟಕ ಎಂ.ಎಸ್.ಎಂ.ಇ. ನೀತಿ - ರಾಜ್ಯ ಮಟ್ಟದ ಪಾಲುದಾರರ ಪೂರ್ವಭಾವಿ ಸಮಾಲೋಚನಾ ಕಾರ್ಯಗಾರ-

ನಮಗೆ ನಿಜವಾದ ಗುರು ನಾವೇ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ;ಇಲಾಖೆಯ ಸಿಬ್ಬಂದಿ ಕ್ರೀಡಾಕೂಟಕ್ಕೆ ಸಚಿವರಿಂದ ಚಾಲನೆ

ನಮಗೆ ನಿಜವಾದ ಗುರು ನಾವೇ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ;ಇಲಾಖೆಯ ಸಿಬ್ಬಂದಿ ಕ್ರೀಡಾಕೂಟಕ್ಕೆ ಸಚಿವರಿಂದ ಚಾಲನೆ

ಎಲ್ಲ ಧರ್ಮಗಳೂ ಪ್ರೀತಿಯನ್ನೇ ಬೋಧಿಸುತ್ತವೆ ರಾಜಕೀಯವಾಗಿ ಸೋಲುಗೆಲುವು ಕಂಡಿದ್ದರೂ, ಜನಸೇವೆಯನ್ನು ಮರೆಯಲಾರೆ- ಮುಖ್ಯಮಂತ್ರಿ ಸಿದ್ದರಾಮಯ್ಯ

ಎಲ್ಲ ಧರ್ಮಗಳೂ ಪ್ರೀತಿಯನ್ನೇ ಬೋಧಿಸುತ್ತವೆ ರಾಜಕೀಯವಾಗಿ ಸೋಲುಗೆಲುವು ಕಂಡಿದ್ದರೂ, ಜನಸೇವೆಯನ್ನು ಮರೆಯಲಾರೆ- ಮುಖ್ಯಮಂತ್ರಿ ಸಿದ್ದರಾಮಯ್ಯ

ವ್ಯಸನಮುಕ್ತ ಸಮಾಜಕ್ಕಾಗಿ ಸಹಾಯವಾಣಿ ಸ್ಥಾಪನೆ

ವ್ಯಸನಮುಕ್ತ ಸಮಾಜಕ್ಕಾಗಿ ಸಹಾಯವಾಣಿ ಸ್ಥಾಪನೆ

ಮುನ್ನೂರು ಕುಟುಂಬಗಳಿಗೆ ೫೦ ಲಕ್ಷ ಮೊತ್ತದ ಬೆಂಬಲ ವಿತರಣೆ.

ಮುನ್ನೂರು ಕುಟುಂಬಗಳಿಗೆ ೫೦ ಲಕ್ಷ ಮೊತ್ತದ ಬೆಂಬಲ ವಿತರಣೆ.

Read all News