ಕೆಎಸ್ಸಿಎ ಅಧ್ಯಕ್ಷ ಆರ್. ಮಂಜುನಾಥ ವಿರುದ್ಧ ಗಂಭೀರ ಆರೋಪ: ದಾಖಲೆಗಳ ಸಮೇತ ಬಹಿರಂಗ ಚರ್ಚೆಗೆ ಆಹ್ವಾನ ನೀಡಿದ ಮಾಜಿ ಅಧ್ಯಕ್ಷ ಜಗನ್ನಾಥ ಬಿ.ಶೇಗಜಿ
ಕೆಎಸ್ಸಿಎ ಅಧ್ಯಕ್ಷ ಆರ್. ಮಂಜುನಾಥ ವಿರುದ್ಧ ಗಂಭೀರ ಆರೋಪ: ದಾಖಲೆಗಳ ಸಮೇತ ಬಹಿರಂಗ ಚರ್ಚೆಗೆ ಆಹ್ವಾನ ನೀಡಿದ ಮಾಜಿ ಅಧ್ಯಕ್ಷ ಜಗನ್ನಾಥ ಬಿ.ಶೇಗಜಿ
ಬೆಂಗಳೂರು, ನವೆಂಬರ್ 20: ಕರ್ನಾಟಕ ರಾಜ್ಯ ಕಾಂಟ್ರಾಕ್ಟರ್ಸ್ ಅಸೋಸಿಯೇಷನ್ (KSCA) ಮಾಜಿ ಅಧ್ಯಕ್ಷ ಜಗನ್ನಾಥ ಬಿ. ಶೇಗ್ಜಿ ಅವರು ಶುಕ್ರವಾರ ಸುದ್ದಿಗೋಷ್ಠಿ ನಡೆಸಿ, ಸಂಘದ ಹಾಲಿ ಅಧ್ಯಕ್ಷ ಆರ್. ಮಂಜುನಾಥ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಸಂಘದ ಆಡಳಿತ, ಟೆಂಡರ್ ಪ್ರಕ್ರಿಯೆಗಳು, ಆರ್ಥಿಕ ವ್ಯವಹಾರಗಳು ಹಾಗೂ ಗುತ್ತಿಗೆದಾರರ ಹಿತಾಸಕ್ತಿಗೆ ಸಂಬಂಧಿಸಿದ ವಿಷಯಗಳಲ್ಲಿ ಅಕ್ರಮಗಳು ನಡೆದಿವೆ ಎಂದು ಅವರು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಗನ್ನಾಥ ಶೇಗ್ಜಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸುಮಾರು 5 ಸಾವಿರ ಕೋಟಿ ರೂಪಾಯಿ ಮೌಲ್ಯದ ಟೆಂಡರ್ಗಳ ಪ್ರಕ್ರಿಯೆಯಲ್ಲಿ ಹಲವು ಅಕ್ರಮಗಳು ನಡೆದಿವೆ ಎಂದು ಆರೋಪಿಸಿದರು. ಪ್ರಗತಿ ಪಥ ಯೋಜನೆಯಡಿ ಟೆಂಡರ್ಗಳನ್ನು ಆಹ್ವಾನಿಸಿ ಎರಡು ತಿಂಗಳು ಕಳೆದರೂ ಕಾರ್ಯಾದೇಶ ನೀಡದೆ ವಿಳಂಬ ಮಾಡಲಾಗಿದ್ದು, ಟೆಂಡರ್ ಪಡೆದ ಗುತ್ತಿಗೆದಾರರಿಂದ ಶೇ.5ರಷ್ಟು ಹಣ ಕೇಳಲಾಗುತ್ತಿದೆ ಎಂದು ದೂರಿದರು. ಈ ಬೆಳವಣಿಗೆಗಳಿಗೆ ಸಂಘದ ಅಧ್ಯಕ್ಷ ಆರ್. ಮಂಜುನಾಥ ಬೆಂಬಲ ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಸಂಘದ ಸದಸ್ಯರ ಸಂಖ್ಯೆಯ ಕುರಿತು ಜನತೆ ಹಾಗೂ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಲಾಗುತ್ತಿದೆ ಎಂದು ಜಗನ್ನಾಥ ಶೇಗ್ಜಿ ಹೇಳಿದರು. ರಾಜ್ಯದಲ್ಲಿ 1.20 ಲಕ್ಷ ಗುತ್ತಿಗೆದಾರರು ಸಂಘದೊಂದಿಗೆ ಇದ್ದಾರೆ ಎಂದು ಹೇಳಲಾಗುತ್ತಿದೆಯಾದರೂ, ವಾಸ್ತವದಲ್ಲಿ ಕೇವಲ 1,200 ಸದಸ್ಯರು ಮಾತ್ರ ನೋಂದಾಯಿತರಿದ್ದಾರೆ. ಅವರಲ್ಲೂ ಸುಮಾರು 300 ಸದಸ್ಯರು ಸಕ್ರಿಯರಲ್ಲ ಎಂಬ ದಾಖಲೆಗಳು ತಮ್ಮ ಬಳಿ ಇವೆ ಎಂದು ತಿಳಿಸಿದರು.
ಕೆಎಸ್ಸಿಎ ಬೈಲಾ ನಿಯಮಗಳನ್ನು ಉಲ್ಲಂಘಿಸಿ ಸಂಘವನ್ನು ನಡೆಸಲಾಗುತ್ತಿದೆ ಎಂಬ ಆರೋಪವನ್ನೂ ಅವರು ಮಾಡಿದರು. ಬೈಲಾ ಪ್ರಕಾರ 66 ನಿರ್ದೇಶಕರು ಹಾಗೂ 22 ಸದಸ್ಯರ ವ್ಯವಸ್ಥಾಪನಾ ಸಮಿತಿ ಇರಬೇಕಾದ ಸಂದರ್ಭದಲ್ಲಿ ನಿಯಮಗಳನ್ನು ಕಡೆಗಣಿಸಿ ಸುಮಾರು 38 ಮಂದಿಯನ್ನು ಅನಧಿಕೃತವಾಗಿ ವ್ಯವಸ್ಥಾಪನಾ ಸಮಿತಿಗೆ ಸೇರಿಸಲಾಗಿದೆ ಎಂದು ದೂರಿದರು.
ಕೇಂದ್ರ ಸರ್ಕಾರ ಜನಕಲ್ಯಾಣಕ್ಕಾಗಿ ಕಾರ್ಮಿಕ ಮತ್ತು ಪೌರಾಡಳಿತ ಇಲಾಖೆಗೆ ತಲಾ 1,000 ಕೋಟಿ ರೂಪಾಯಿ ಅನುದಾನ ನೀಡಿದರೂ, ಪ್ಯಾಕೇಜ್ ಪದ್ಧತಿಯ ಮೂಲಕ ಕೆಲವು ದೊಡ್ಡ ಗುತ್ತಿಗೆದಾರರಿಗೆ ಅನುಕೂಲ ಕಲ್ಪಿಸಲಾಗಿದೆ ಎಂದು ಶೇಗ್ಜಿ ಆರೋಪಿಸಿದರು. ಇದರಿಂದ ಸಣ್ಣ ಗುತ್ತಿಗೆದಾರರು, ಎಸ್ಸಿ, ಎಸ್ಟಿ ಹಾಗೂ ಇತರೆ ಹಿಂದುಳಿದ ವರ್ಗಗಳ ಗುತ್ತಿಗೆದಾರರಿಗೆ ಅನ್ಯಾಯವಾಗಿದೆ ಎಂದು ಹೇಳಿದರು. ಈ ಕುರಿತು ತಮ್ಮ ಬಳಿ ಆಡಿಯೋ ದಾಖಲೆಗಳಿವೆ ಎಂದು ಅವರು ತಿಳಿಸಿದರು.
ಒಬ್ಬ ಗುತ್ತಿಗೆದಾರನ ಕೆಲಸ ಮಾಡಿಕೊಡುವುದಾಗಿ ಹೇಳಿ 5 ಲಕ್ಷ ರೂಪಾಯಿ ಲಂಚ ಪಡೆದಿರುವ ಕುರಿತು ತಮ್ಮ ಬಳಿ ಸಾಕ್ಷ್ಯ ಇದೆ ಎಂದು ಜಗನ್ನಾಥ ಶೇಗ್ಜಿ ಗಂಭೀರ ಆರೋಪ ಮಾಡಿದರು. ಅಲ್ಲದೆ, ಜಿಲ್ಲಾ ಅಧ್ಯಕ್ಷರನ್ನು ಕಡೆಗಣಿಸಿ ತಮ್ಮ ಆಪ್ತರನ್ನು ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ ಎಂದು ಹೇಳಿದರು.
ನವದೆಹಲಿಯಲ್ಲಿ ಕೇಂದ್ರ ಸಚಿವರನ್ನು ಭೇಟಿ ಮಾಡುವ ಹೆಸರಿನಲ್ಲಿ ಸಂಘದ ಹಣ ಖರ್ಚು ಮಾಡಿ ಪ್ರಯೋಜನವಿಲ್ಲದ ಪ್ರವಾಸಗಳನ್ನು ಆಯೋಜಿಸಲಾಗಿದೆ ಎಂದು ಜಗನ್ನಾಥ ಶೇಗ್ಜಿ ಟೀಕಿಸಿದರು. ಜಿಎಸ್ಟಿ ಹಾಗೂ ಎಂಡಿಪಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಸಂಘದ ನಾಯಕತ್ವ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.
ಇದೇ ವೇಳೆ, ಕೆಂಪಣ್ಣ ಅವರ ನೇತೃತ್ವದ ಅವಧಿಯಲ್ಲಿ ನಡೆದ ಗುತ್ತಿಗೆದಾರರ ಸಮಾವೇಶಕ್ಕೆ ಆರೋಗ್ಯ ಇಲಾಖೆಯಿಂದ ಬಂದಿದ್ದ ಸುಮಾರು 2.50 ಕೋಟಿ ರೂಪಾಯಿ ಹಣದ ಲೆಕ್ಕಪತ್ರ ಸ್ಪಷ್ಟವಾಗಿಲ್ಲ ಎಂದು ಪ್ರಶ್ನಿಸಿದರು. ಇದರ ಬಗ್ಗೆ ಪ್ರಶ್ನೆ ಮಾಡಿದ ನಿರ್ದೇಶಕರನ್ನೇ ಸಂಘದಿಂದ ಹೊರಹಾಕಲಾಗಿದೆ ಎಂದು ಆರೋಪಿಸಿದರು.
ಬೆಂಗಳೂರು ಕೇಂದ್ರ ಕಚೇರಿಯ ನವೀಕರಣ ಕಾಮಗಾರಿಯಲ್ಲಿ ಸುಮಾರು 2 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದ್ದು, ಯಾವುದೇ ಪಾರದರ್ಶಕ ಟೆಂಡರ್ ಪ್ರಕ್ರಿಯೆ ಅನುಸರಿಸಲಾಗಿಲ್ಲ ಎಂದು ಜಗನ್ನಾಥ ಶೇಗ್ಜಿ ಆರೋಪಿಸಿದರು. ಸರ್ಕಾರ ಗುತ್ತಿಗೆದಾರರಿಗೆ ಅನ್ವಯಿಸುವ ನಿಯಮಗಳನ್ನೇ ಸಂಘದ ನಾಯಕತ್ವ ಮೀರಿ ನಡೆಯುತ್ತಿದೆ ಎಂದು ಅವರು ಟೀಕಿಸಿದರು.
ರಾಜ್ಯ ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿ, 37 ಸಾವಿರ ಕೋಟಿ ರೂಪಾಯಿ ಬಾಕಿ ಬಿಲ್ ಬಿಡುಗಡೆ ಮಾಡಿಸುವುದಾಗಿ ಹೇಳಿದ್ದ ಆರ್. ಮಂಜುನಾಥ ಅವರು ನಂತರ ಆ ವಿಷಯದ ಕುರಿತು ಮೌನವಾಗಿರುವುದು ಏಕೆ ಎಂಬ ಪ್ರಶ್ನೆಯನ್ನೂ ಅವರು ಎತ್ತಿದರು. ಇದೇ ವೇಳೆ ಡಿಎಂಎ ಹಾಗೂ ಇತರೆ ಇಲಾಖೆಗಳಲ್ಲೂ ನೂರಾರು ಕೋಟಿ ರೂಪಾಯಿ ಮೌಲ್ಯದ ವ್ಯವಹಾರಗಳ ಬಗ್ಗೆ ನಿರ್ದೇಶಕರಿಗೆ ಮಾಹಿತಿ ನೀಡಲಾಗಿದೆ ಎಂದು ಹೇಳಿದರು.
ಪ್ರಿಯಾಂಕ್ ಖರ್ಗೆ ಅವರ ಸಹಕಾರದಿಂದ ರಾಜ್ಯಕ್ಕೆ ಸಾವಿರಾರು ಕೋಟಿ ರೂಪಾಯಿಗಳ ಅಭಿವೃದ್ಧಿ ಕಾಮಗಾರಿಗಳು ಬಂದಿದ್ದು, ಸುಮಾರು 350 ಟೆಂಡರ್ಗಳು ನಡೆಯುತ್ತಿವೆ. ಈ ಟೆಂಡರ್ಗಳನ್ನು ಯಾವುದೇ ಮಧ್ಯವರ್ತಿತ್ವ ಅಥವಾ ಕಮಿಷನ್ ಇಲ್ಲದೆ ಪಾರದರ್ಶಕವಾಗಿ ಗುತ್ತಿಗೆದಾರರಿಗೆ ದೊರಕುವಂತೆ ಹೋರಾಟ ಮಾಡಬೇಕಿದೆ ಎಂದು ಜಗನ್ನಾಥ ಶೇಗ್ಜಿ ಕರೆ ನೀಡಿದರು.
ಸುದ್ದಿಗೋಷ್ಠಿಯ ಅಂತ್ಯದಲ್ಲಿ, ನಾಳೆ ನಡೆಯಲಿರುವ ಕೆಎಸ್ಸಿಎ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ಆರ್. ಮಂಜುನಾಥ ಅವರ ಬಳಿ ರಾಜ್ಯದ ಗುತ್ತಿಗೆದಾರರು ಮೇಲ್ಕಂಡ ಎಲ್ಲ ಆರೋಪಗಳ ಕುರಿತು ಸ್ಪಷ್ಟನೆ ಕೇಳಬೇಕು ಎಂದು ಅವರು ಮನವಿ ಮಾಡಿದರು. ಒಂದು ವೇಳೆ ತಮ್ಮ ಆರೋಪಗಳು ಸುಳ್ಳು ಎಂದು ಹೇಳಿದರೆ, ಸಾರ್ವಜನಿಕ ವೇದಿಕೆಯಲ್ಲಿ ದಾಖಲೆ ಮತ್ತು ಸಾಕ್ಷ್ಯಗಳ ಸಮೇತ ಚರ್ಚೆಗೆ ಸಿದ್ಧನಿದ್ದೇನೆ ಎಂದು ಸವಾಲು ಹಾಕಿದರು.






Comments
Leave a Comment