PRABHAVAA.COM

ಕನ್ನಡದಲ್ಲಿ ಉನ್ನತ ಶಿಕ್ಷಣ: ಚಿಂತನೆ ಅಗತ್ಯ- ಸಾಹಿತಿ ಬರಗೂರು ರಾಮಚಂದ್ರಪ್ಪ

Bengaluru Urban:

Font size:

ಕನ್ನಡದಲ್ಲಿ ಉನ್ನತ ಶಿಕ್ಷಣ: ಚಿಂತನೆ ಅಗತ್ಯ- ಸಾಹಿತಿ ಬರಗೂರು ರಾಮಚಂದ್ರಪ್ಪ

ಕನ್ನಡದಲ್ಲಿ ಉನ್ನತ ಶಿಕ್ಷಣ: ಚಿಂತನೆ ಅಗತ್ಯ- ಸಾಹಿತಿ ಬರಗೂರು ರಾಮಚಂದ್ರಪ್ಪ

ಪ್ರಥಮ ಕನ್ನಡ ಸಮಗ್ರ ವೈದ್ಯಕೀಯ ಸಾಹಿತ್ಯ ಸಮ್ಮೇಳನ- 2026
ಸ್ಥಳ: ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ, ಬೆಂಗಳೂರು.
ದಿನಾಂಕ: ನವೆಂಬರ್ 20, 2026, ಮಧ್ಯಾಹ್ನ 12.೦೦

ಬೆಂಗಳೂರು, ನವೆಂಬರ್ 20, 2026: ಎಂಜಿನಿಯರಿಂಗ್, ವೈದ್ಯಕೀಯ ಸೇರಿದಂತೆ ಎಲ್ಲ ಕ್ಷೇತ್ರಗಳ ಉನ್ನತ ಶಿಕ್ಷಣ ಕನ್ನಡದಲ್ಲಿ ಲಭ್ಯವಾಗುವ ಬಗ್ಗೆ ಮತ್ತು ಅದರ ಉಪಯುಕ್ತತೆ ಬಗ್ಗೆ ಸಕಾರಾತ್ಮಕ ಚಿಂತನೆ ನಡೆಯಬೇಕು ಎಂದು ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದರು.

ಶುಕ್ರವಾರ ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯದ ಸಭಾಂಗಣದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಹಮ್ಮಿಕೊಳ್ಳಲಾಗಿದ್ದ ಪ್ರಥಮ ಕನ್ನಡ ಸಮಗ್ರ ವೈದ್ಯಕೀಯ ಸಾಹಿತ್ಯ ಸಮ್ಮೇಳನ – 2026 ಉದ್ಘಾಟಿಸಿ ಮಾತನಾಡಿದ ಅವರು ಕನ್ನಡ ಮಾಧ್ಯಮದಲ್ಲಿ ತಾಂತ್ರಿಕ ಹಾಗೂ ವೈಜ್ಞಾನಿಕ ಶಿಕ್ಷಣ ಪಡೆದ ಮಕ್ಕಳ ಬದುಕಿಗೆ ಅನ್ನದ ಕೊರತೆಯಾಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿಯೂ ಇದೆ ಎಂದರು.

ಕರ್ನಾಟಕದ ಇತಿಹಾಸದಲ್ಲಿಯೇ ಮೊಟ್ಟಮೊದಲ ಬಾರಿಗೆ ವೈದ್ಯಕೀಯ ವಿಜ್ಞಾನ ಮತ್ತು ಕನ್ನಡ ಸಾಹಿತ್ಯವನ್ನು ಸಮನ್ವಯಗೊಳಿಸಿ, ವ್ಯವಸ್ಥಿತವಾಗಿ, ಶಿಸ್ತುಬದ್ಧವಾಗಿ ಹಾಗೂ ವಿಶಾಲವಾದ ಬಹುತ್ವದ ನೆಲೆಯಲ್ಲಿ ವೈದ್ಯಕೀಯ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಿರುವ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರಯತ್ನ ಅಭಿನಂದನಾರ್ಹ ಎಂದರು.

ಯಾವುದೇ ಭಿನ್ನ ನೆಲೆಗಳಿಗೆ ಅವಕಾಶವಾಗದಂತೆ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಎಲ್ಲರ ಸಹಭಾಗಿತ್ವ ಮತ್ತು ಸಹಕಾರದೊಂದಿಗೆ ಇಂತಹ ಅಪರೂಪದ ಹಾಗೂ ಅರ್ಥಪೂರ್ಣ ವೈದ್ಯಕೀಯ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಿರುವುದು ಸ್ವಾಗತಾರ್ಹ. ಎಲ್ಲರನ್ನು ಒಳಗೊಳ್ಳುವ ಈ ಸೌಹಾರ್ದಯುತ ಮತ್ತು ಪ್ರಜಾಸತ್ತಾತ್ಮಕ ನಡೆ ಸಮ್ಮೇಳನದ ಮಹತ್ವವನ್ನು ಹೆಚ್ಚಿಸಿದೆ ಎಂದರು.

ವೈದ್ಯಕೀಯ ಸಾಹಿತ್ಯವೆಂಬುದು ಕೇವಲ ವೈದ್ಯಕೀಯ ವಿಷಯಗಳ ಚರ್ಚೆಗೆ ಸೀಮಿತವಾಗದೆ, ಭಾಷೆ, ವಿಜ್ಞಾನ, ಸಂಸ್ಕೃತಿ, ಸಾಮಾಜಿಕ ಜವಾಬ್ದಾರಿ ಮತ್ತು ಮಾನವೀಯ ಮೌಲ್ಯಗಳನ್ನು ಒಳಗೊಳ್ಳಬೇಕು. ವಿವಿಧ ಜ್ಞಾನಶಿಸ್ತುಗಳು, ವಿಚಾರಧಾರೆಗಳು ಮತ್ತು ಅಭಿವ್ಯಕ್ತಿಗಳಿಗೆ ಮುಕ್ತ ವೇದಿಕೆ ಕಲ್ಪಿಸುವ ಮೂಲಕ ಈ ಸಮ್ಮೇಳನವು ಬಹುತ್ವ, ವೈಚಾರಿಕ ಸ್ವಾತಂತ್ರ್ಯ ಹಾಗೂ ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಮಹತ್ವ ನೀಡಿದೆ ಎಂದು ಅವರು ಅಭಿಪ್ರಾಯಪಟ್ಟರು.

ವೈದ್ಯಕೀಯ ಜ್ಞಾನವು ಜನಸಾಮಾನ್ಯರ ಭಾಷೆಯಲ್ಲಿ ತಲುಪಬೇಕು. ವಿಜ್ಞಾನ ಮತ್ತು ವೈದ್ಯಕೀಯ ಕ್ಷೇತ್ರದ ಜ್ಞಾನ ಕನ್ನಡದಲ್ಲಿ ಸಮೃದ್ಧವಾಗಿ ಬೆಳೆಯಬೇಕು. ಈ ನಿಟ್ಟಿನಲ್ಲಿ ವೈದ್ಯಕೀಯ ಸಾಹಿತ್ಯದ ಬೆಳವಣಿಗೆಗೆ ಹೊಸ ದಿಕ್ಕು ಮತ್ತು ಹೊಸ ಆಯಾಮವನ್ನು ನೀಡುವ ಮಹತ್ವದ ಹೆಜ್ಜೆಯಾಗಿ ಈ ಸಮ್ಮೇಳನ ರೂಪುಗೊಂಡಿದೆ ಎಂದರು.

ವಿವಿಯಲ್ಲಿ ಕನ್ನಡದ ಘಮ: ಡಾ. ಭಗವಾನ್ ಬಿ.ಸಿ.

ಕನ್ನಡ ಸಮಗ್ರ ವೈದ್ಯಕೀಯ ಸಾಹಿತ್ಯ ಸಮ್ಮೇಳನ ಕೇವಲ ಎರಡು ದಿನಗಳ ಕಾರ್ಯಕ್ರಮವಾಗಿ ಮುಕ್ತಾಯವಾಗಬಾರದು. ಇಲ್ಲಿ ನಡೆಯುವ ಚರ್ಚೆಗಳು, ಸಂವಾದಗಳು ಮತ್ತು ವಿಚಾರ ವಿನಿಮಯಗಳು ಕೇವಲ ವೇದಿಕೆಯ ಘೋಷಣೆಗಳಾಗಬಾರದು. ಸಮ್ಮೇಳನದಲ್ಲಿ ವ್ಯಕ್ತವಾಗುವ ಮಹತ್ವದ ಅಭಿಪ್ರಾಯಗಳು, ಸಲಹೆಗಳು ಹಾಗೂ ನಿರ್ಣಯಗಳನ್ನು ಕ್ರೋಢೀಕರಿಸಿ, ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ತಂದು, ಅವುಗಳ ಅನುಷ್ಠಾನಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಕುಲಪತಿ ಡಾ. ಭಗವಾನ್ ಬಿ.ಸಿ. ತಿಳಿಸಿದರು.

ವೈದ್ಯಕೀಯ ಮತ್ತು ಆರೋಗ್ಯ ವಿಜ್ಞಾನಗಳ ಶಿಕ್ಷಣ ಕನ್ನಡದಲ್ಲಿಯೂ ಲಭ್ಯವಾಗಬೇಕು ಎಂಬುದು ನಮ್ಮ ಆಶಯ ಮಾತ್ರವಲ್ಲ, ಅದನ್ನು ಸಾಕಾರಗೊಳಿಸುವ ಬದ್ಧತೆಯೂ ಹೌದು. ಈ ನಿಟ್ಟಿನಲ್ಲಿ ಕನ್ನಡದಲ್ಲಿ ವೈದ್ಯಕೀಯ ಪಠ್ಯಪುಸ್ತಕಗಳ ರಚನೆ, ಸೂಕ್ತ ತಾಂತ್ರಿಕ ಪದಗಳ ಬಳಕೆ, ಬೋಧನಾ ಸಾಮಗ್ರಿಗಳ ಅಭಿವೃದ್ಧಿ ಹಾಗೂ ಕನ್ನಡ ಮಾಧ್ಯಮದಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಪೂರಕವಾದ ವ್ಯವಸ್ಥೆ ರೂಪಿಸಲು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ಎಲ್ಲ ರೀತಿಯ ಪ್ರಯತ್ನಗಳನ್ನು ಮುಂದುವರಿಸಲಿದೆ ಎಂದರು.

ಈ ಸಮ್ಮೇಳನವು ಕನ್ನಡದಲ್ಲಿ ವೈದ್ಯಕೀಯ ಶಿಕ್ಷಣದ ಹೊಸ ಅಧ್ಯಾಯಕ್ಕೆ ನಾಂದಿಯಾಗಬೇಕು. ಇಲ್ಲಿ ಮೂಡುವ ಚಿಂತನೆಗಳು ಕಾರ್ಯರೂಪಕ್ಕೆ ಬಂದು, ಮುಂದಿನ ಪೀಳಿಗೆಯ ವಿದ್ಯಾರ್ಥಿಗಳಿಗೆ ಕನ್ನಡದಲ್ಲಿಯೇ ವೈದ್ಯಕೀಯ ಜ್ಞಾನ ಪಡೆಯುವ ಅವಕಾಶ ಕಲ್ಪಿಸುವಂತಾಗಬೇಕು ಎಂಬುದು ನಮ್ಮ ಸಂಕಲ್ಪ. ಇದನ್ನು ಸಾಕಾರಗೊಳಿಸಲು ಮಾನ್ಯ ಮುಖ್ಯಮಂತ್ರಿಗಳು, ವೈದ್ಯಕೀಯ ಶಿಕ್ಷಣ ಸಚಿವರು ಹಾಗೂ ಆರೋಗ್ಯ ಸಚಿವರ ಸಹಕಾರ ಕೋರುತ್ತೇವೆ ಎಂದು ಡಾ. ಭಗವಾನ್ ಬಿ.ಸಿ. ಹೇಳಿದರು.

ಕನ್ನಡದಲ್ಲಿ ವೈದ್ಯಕೀಯ ಶಿಕ್ಷಣ ಎಂಬುದು ಕೇವಲ ಭಾಷೆಯ ವಿಚಾರವಲ್ಲ; ಅದು ಶಿಕ್ಷಣದಲ್ಲಿ ಸಮಾನ ಅವಕಾಶ, ಗ್ರಾಮೀಣ ವಿದ್ಯಾರ್ಥಿಗಳ ಆತ್ಮವಿಶ್ವಾಸ ಮತ್ತು ಜನಸಾಮಾನ್ಯರಿಗೆ ಗುಣಮಟ್ಟದ ಆರೋಗ್ಯ ಸೇವೆ ತಲುಪಿಸುವ ಮಹತ್ವದ ಆಶಯವಾಗಿದೆ. ಈ ನಿಟ್ಟಿನಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ತನ್ನ ಸಂಪೂರ್ಣ ಶೈಕ್ಷಣಿಕ ಮತ್ತು ತಾಂತ್ರಿಕ ಸಾಮರ್ಥ್ಯವನ್ನು ಬಳಸಿಕೊಳ್ಳಲು ಸಿದ್ಧವಿದೆ. ಸರ್ಕಾರದ ಸಹಕಾರ ದೊರೆತರೆ, ಹಂತ ಹಂತವಾಗಿ ಅನುಷ್ಠಾನಗೊಳಿಸಬಹುದಾದ ಸಮಗ್ರ ಕಾರ್ಯಯೋಜನೆಯನ್ನು ರೂಪಿಸಿ ಸಲ್ಲಿಸಲು ನಾವು ಸಿದ್ಧರಿದ್ದೇವೆ ಎಂದರು.

ವೈದ್ಯಕೀಯ ಕ್ಷೇತ್ರದಲ್ಲಿ ಕನ್ನಡದ ಬೆಳವಣಿಗೆಗೆ ಸರ್ಕಾರದ ಪ್ರೋತ್ಸಾಹ ಅಗತ್ಯ: ಡಾ. ಎಸ್.ಪಿ. ಯೋಗಣ್ಣ
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಆರಂಭಿಸಿರುವ ಪ್ರಥಮ ಕನ್ನಡ ಸಮಗ್ರ ವೈದ್ಯಕೀಯ ಸಾಹಿತ್ಯ ಸಮ್ಮೇಳನ ಐತಿಹಾಸಿಕ ಹೆಜ್ಜೆಯಾಗಿದೆ. ವಿವಿಧ ವೈದ್ಯಕೀಯ ಪದ್ಧತಿಗಳ ತಜ್ಞರನ್ನು ಒಂದೇ ವೇದಿಕೆಗೆ ತಂದು ಜ್ಞಾನ ವಿನಿಮಯಕ್ಕೆ ಅವಕಾಶ ಕಲ್ಪಿಸಿರುವುದು ವಿಶೇಷ. ಕನ್ನಡದಲ್ಲಿ ವೈದ್ಯಕೀಯ ಶಿಕ್ಷಣ ಮತ್ತು ಸಾಹಿತ್ಯದ ಬೆಳವಣಿಗೆಗೆ ಈಗ ಸರ್ಕಾರದ ಸಕ್ರಿಯ ಪ್ರೋತ್ಸಾಹ ಹಾಗೂ ನೀತಿಪೂರ್ವಕ ಕ್ರಮಗಳು ಅಗತ್ಯ. ಈ ನಿಟ್ಟಿನಲ್ಲಿ ವೈದ್ಯಕೀಯ ಸಾಹಿತ್ಯ ಅಕಾಡೆಮಿ ಸ್ಥಾಪನೆ, ಕನ್ನಡ ಪಠ್ಯಪುಸ್ತಕಗಳ ರಚನೆ ಸೇರಿದಂತೆ ಹಲವು ಮಹತ್ವದ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು ಎಂದು ಸಮ್ಮೇಳನದ ಸರ್ವಾಧ್ಯಕ್ಷ್ಯ ಡಾ. ಎಸ್.ಪಿ. ಯೋಗಣ್ಣ ಹೇಳಿದರು.

ಇಡೀ ದೇಶದಲ್ಲಿಯೇ ಇದೊಂದು ಐತಿಹಾಸಿಕ ಸಮ್ಮೇಳನ. ದೇಶದಲ್ಲಿ ಸುಮಾರು 30 ಆರೋಗ್ಯ ವಿಶ್ವವಿದ್ಯಾನಿಲಯಗಳಿದ್ದು, ಯಾವುದೇ ವಿಶ್ವವಿದ್ಯಾನಿಲಯವು ಇದುವರೆಗೆ ತನ್ನ ಪ್ರಾದೇಶಿಕ ಭಾಷೆಯಲ್ಲಿ ಇಂತಹ ಸಮಗ್ರ ವೈದ್ಯಕೀಯ ಸಾಹಿತ್ಯ ಸಮ್ಮೇಳನವನ್ನು ನಡೆಸಿಲ್ಲ ಎಂದರು.

ಸಮ್ಮೇಳನಕ್ಕೆ ನಡೆಸುವುದಕ್ಕಿಂತ ಮುಂದಿನ ದಿನಗಳಲ್ಲಿ ನಡೆಯುವ ಕ್ರಮಗಳು ಬಹಳ ಮುಖ್ಯವಾಗುತ್ತವೆ. ರಾಜೀವ್ ಗಾಂಧಿ ಆರೋಗ್ಯ ವಿವಿ ಹಾಗೂ ಸರ್ಕಾರ ಈ ನಿಟ್ಟಿನಲ್ಲಿ ಗಟ್ಟಿ ನಿರ್ಧಾರ ತಾಳಬೇಕಾದ ಅಗತ್ಯವಿದೆ ಎಂದರು.

ಈ ಹಿಂದೆ ಸಮ್ಮೇಳನದ ಲಾಂಛನ ಮತ್ತು ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡುವ ಸಂದರ್ಭದಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರು ವೈದ್ಯಕೀಯ ಕ್ಷೇತ್ರದಲ್ಲಿ ಕನ್ನಡದ ಬೆಳವಣಿಗೆಗೆ ಸರ್ಕಾರ ಕಟಿಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಇದು ಸರ್ಕಾರದ ಕನ್ನಡಪರ ಬದ್ಧತೆಯನ್ನು ಎತ್ತಿ ತೋರಿಸಿದೆ.

ಮುಂದೆ ಈ ನಿಟ್ಟಿನಲ್ಲಿ ಸರ್ಕಾರದ ಪ್ರೋತ್ಸಾಹ ಅತ್ಯಗತ್ಯ
ಕನ್ನಡ ಸಮಗ್ರ ವೈದ್ಯಕೀಯ ಸಾಹಿತ್ಯ ಸಮ್ಮೇಳನನವನ್ನು ಪ್ರತಿವರ್ಷ ನವೆಂಬರ್ ತಿಂಗಳಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಮೂಲಕ ನಡೆಸಲು ಸರ್ಕಾರ ಅಧಿಸೂಚನೆ ಹೊರಡಿಸಬೇಕು.

ಕನ್ನಡ ವೈದ್ಯವಿಜ್ಞಾನ ಸಾಹಿತ್ಯವನ್ನು ಅಭಿವೃದ್ಧಿಪಡಿಸಿ, ಪ್ರಚಾರ ಮಾಡುವ ದೃಷ್ಟಿಯಿಂದ ಕನ್ನಡ ವೈದ್ಯಕೀಯ ಸಾಹಿತ್ಯ ಅಕಾಡೆಮಿಯನ್ನು ಸ್ಥಾಪಿಸಬೇಕು.

ವೈದ್ಯವಿಜ್ಞಾನ, ದಂತವಿಜ್ಞಾನ, ಶುಶ್ರೂಷಕ ವಿಜ್ಞಾನ, ಸಹಾಯಕ ವಿಜ್ಞಾನಗಳು ಹಾಗೂ ಆಯುಷ್ ವಿಜ್ಞಾನಗಳ ಆಂಗ್ಲ ಪಠ್ಯಪುಸ್ತಕಗಳನ್ನು ಆಧಾರವಾಗಿಟ್ಟುಕೊಂಡು ಕನ್ನಡದಲ್ಲಿ ವೈದ್ಯಕೀಯ ಪಠ್ಯಪುಸ್ತಕಗಳನ್ನು ರಚಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ ಕನ್ನಡವನ್ನು ಅನುಷ್ಠಾನಗೊಳಿಸುವ ಕಾರ್ಯವನ್ನು ನಿಯಂತ್ರಿಸಲು ಸಮಿತಿಯನ್ನು ರಚಿಸಬೇಕು. ವೈದ್ಯಕೀಯ ಸಾಹಿತ್ಯವನ್ನು ಪ್ರತ್ಯೇಕ ಕ್ಷೇತ್ರವೆಂದು ಪರಿಗಣಿಸಿ, ಪ್ರತಿವರ್ಷ ವೈದ್ಯಕೀಯ ಸಾಹಿತ್ಯ ಕ್ಷೇತ್ರದ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕು ಎಂದು ಮನವಿ ಮಾಡಿದರು.

ಡಾ. ಎಸ್.ಪಿ. ಯೋಗಣ್ಣ ರಚಿಸಿರುವ ಮೂರು ಸಂಪುಟಗಳ ಬೃಹತ್ ಆರೋಗ್ಯ ವಿಶ್ವಕೋಶ ಮತ್ತು ಕನ್ನಡ ವೈದ್ಯಕೀಯ ಪದಕೋಶವನ್ನು ಬಿಡುಗಡೆ ಮಾಡಲಾಯಿತು. ವಿವಿಧ ವೈದ್ಯ ಸಾಹಿತಿಗಳು ರಚಿಸಿದ ವೈದ್ಯಕೀಯ ಸಾಹಿತ್ಯ ಕೃತಿಗಳ ಪುಸ್ತಕ ಪ್ರದರ್ಶನವನ್ನು ಇದೇ ವೇಳೆ ಆಯೋಜಿಸಲಾಯಿತು.

ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಮೊಹಮ್ಮದ್ ಮುಹಸಿನ್, ವಿಶ್ರಾಂತ ಕುಲಪತಿಗಳಾದ ಡಾ. ಚಂದ್ರಶೇಖರ ಶೆಟ್ಟಿ, ಡಾ. ಜಿ. ಕೆ. ವೆಂಕಟೇಶ್ ಹಾಗೂ ಸಚ್ಚಿದಾನಂದ, ವಿಶ್ವವಿದ್ಯಾಲಯದ ಕುಲಸಚಿವರಾದ ಅರ್ಜುನ್ ಒಡೆಯರ್, ಮೌಲ್ಯಮಾಪನ ಕುಲಸಚಿವರಾದ ಡಾ. ಸಂದೀಪ್ ವಿ.ಎಚ್., ಹಣಕಾಸು ಅಧಿಕಾರಿ ಗಂಗಾಧರ ಬಿ.ಕೆ., ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಡಾ . ಆರ್. ಕೆ. ಸರೋಜ, ಬೆಂಗಳೂರು ಮಹಾವಿದ್ಯಾಲಯದ ನಿರ್ದೇಶಕರು ಹಾಗೂ ಡೀನ್ ಡಾ. ಸಿ. ಸವಿತಾ ಉಪಸ್ಥಿತರಿದ್ದರು.

ಕನ್ನಡಿಗರಿಗೆ ಆದ್ಯತೆ ಮತ್ತು ಪ್ರಾತಿನಿಧ್ಯ
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸೆನೆಟ್ ಮತ್ತು ಸಿಂಡಿಕೇಟ್‌ಗಳಲ್ಲಿ ಕನ್ನಡಿಗರಿಗೆ ಸೂಕ್ತ ಪ್ರಾತಿನಿಧ್ಯ ದೊರೆಯುವಂತಾಗಬೇಕು. ವಿಶ್ವವಿದ್ಯಾಲಯದ ಆಡಳಿತಾತ್ಮಕ ಮತ್ತು ಶೈಕ್ಷಣಿಕ ನಿರ್ಧಾರಗಳಲ್ಲಿ ಸ್ಥಳೀಯ ಕನ್ನಡಿಗರ ಪಾಲ್ಗೊಳ್ಳುವಿಕೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಅಗತ್ಯ ಕಾನೂನು ಮತ್ತು ನಿಯಮಾವಳಿಗಳನ್ನು ರೂಪಿಸಬೇಕು. ಇದರಿಂದ ಕನ್ನಡ ಭಾಷೆ, ನಾಡಿನ ಶೈಕ್ಷಣಿಕ ಹಿತಾಸಕ್ತಿ ಮತ್ತು ಸ್ಥಳೀಯ ಆಶಯಗಳಿಗೆ ವಿಶ್ವವಿದ್ಯಾಲಯದ ಆಡಳಿತದಲ್ಲಿ ಸೂಕ್ತ ಸ್ಥಾನ ದೊರೆಯಲಿದೆ.
ಡಾ. ಎಸ್.ಪಿ. ಯೋಗಣ್ಣ

Comments

Leave a Comment

Prev Post ತಯಾರಿಕಾ ಘಟಕ ನಿರ್ಮಾಣಕ್ಕೆ ಲಿಂಡ್ ಕಂಪನಿ ಅಸಕ್ತಿ: ಎಂ ಬಿ ಪಾಟೀಲ

ಮಧುಗಿರಿಯ ಇತಿಹಾಸ ಪ್ರಸಿದ್ಧ ಶ್ರೀ ದಂಡಿನ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವ ಶಾಸಕ ಕೆ ಎನ್ ರಾಜಣ್ಣರವರಿಂದ ವಿಶೇಷ ಪೂಜೆ

ಮಧುಗಿರಿಯ ಇತಿಹಾಸ ಪ್ರಸಿದ್ಧ ಶ್ರೀ ದಂಡಿನ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವ ಶಾಸಕ ಕೆ ಎನ್ ರಾಜಣ್ಣರವರಿಂದ ವಿಶೇಷ ಪೂಜೆ

ಕರ್ನಾಟಕ ಎಂ.ಎಸ್.ಎಂ.ಇ. ನೀತಿ - ರಾಜ್ಯ ಮಟ್ಟದ ಪಾಲುದಾರರ ಪೂರ್ವಭಾವಿ ಸಮಾಲೋಚನಾ ಕಾರ್ಯಗಾರ-

ಕರ್ನಾಟಕ ಎಂ.ಎಸ್.ಎಂ.ಇ. ನೀತಿ - ರಾಜ್ಯ ಮಟ್ಟದ ಪಾಲುದಾರರ ಪೂರ್ವಭಾವಿ ಸಮಾಲೋಚನಾ ಕಾರ್ಯಗಾರ-

ನಮಗೆ ನಿಜವಾದ ಗುರು ನಾವೇ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ;ಇಲಾಖೆಯ ಸಿಬ್ಬಂದಿ ಕ್ರೀಡಾಕೂಟಕ್ಕೆ ಸಚಿವರಿಂದ ಚಾಲನೆ

ನಮಗೆ ನಿಜವಾದ ಗುರು ನಾವೇ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ;ಇಲಾಖೆಯ ಸಿಬ್ಬಂದಿ ಕ್ರೀಡಾಕೂಟಕ್ಕೆ ಸಚಿವರಿಂದ ಚಾಲನೆ

ಎಲ್ಲ ಧರ್ಮಗಳೂ ಪ್ರೀತಿಯನ್ನೇ ಬೋಧಿಸುತ್ತವೆ ರಾಜಕೀಯವಾಗಿ ಸೋಲುಗೆಲುವು ಕಂಡಿದ್ದರೂ, ಜನಸೇವೆಯನ್ನು ಮರೆಯಲಾರೆ- ಮುಖ್ಯಮಂತ್ರಿ ಸಿದ್ದರಾಮಯ್ಯ

ಎಲ್ಲ ಧರ್ಮಗಳೂ ಪ್ರೀತಿಯನ್ನೇ ಬೋಧಿಸುತ್ತವೆ ರಾಜಕೀಯವಾಗಿ ಸೋಲುಗೆಲುವು ಕಂಡಿದ್ದರೂ, ಜನಸೇವೆಯನ್ನು ಮರೆಯಲಾರೆ- ಮುಖ್ಯಮಂತ್ರಿ ಸಿದ್ದರಾಮಯ್ಯ

ವ್ಯಸನಮುಕ್ತ ಸಮಾಜಕ್ಕಾಗಿ ಸಹಾಯವಾಣಿ ಸ್ಥಾಪನೆ

ವ್ಯಸನಮುಕ್ತ ಸಮಾಜಕ್ಕಾಗಿ ಸಹಾಯವಾಣಿ ಸ್ಥಾಪನೆ

ಮುನ್ನೂರು ಕುಟುಂಬಗಳಿಗೆ ೫೦ ಲಕ್ಷ ಮೊತ್ತದ ಬೆಂಬಲ ವಿತರಣೆ.

ಮುನ್ನೂರು ಕುಟುಂಬಗಳಿಗೆ ೫೦ ಲಕ್ಷ ಮೊತ್ತದ ಬೆಂಬಲ ವಿತರಣೆ.

Read all News