PRABHAVAA.COM

ಹೂಡಿಕೆ ಆಕರ್ಷಣೆಗೆ ಮುಂಬೈನಲ್ಲಿ 2 ದಿನಗಳ ರೋಡ್ ಶೋ

Bengaluru Urban:

Font size:

ಜಿಂದಾಲ್ ನಿಂದ 5 ವರ್ಷದಲ್ಲಿ 1.20 ಲಕ್ಷ ಕೋಟಿ ರೂ. ಹೂಡಿಕೆ: ಎಂ ಬಿ ಪಾಟೀಲ ಮೊದಲ ದಿನ ರೇಮಂಡ್, ಬಿಸ್ಲೆರಿ, ಟಾರ್ಕ್ ಸಹಿತ 10 ಕಂಪನಿ ಜತೆ ಮಾತುಕತೆ ಚಾಮರಾಜನಗರ, ಬಳ್ಳಾರಿ, ವಿಜಯಪುರದಲ್ಲಿ ಹೂಡಿಕೆಗೆ ಪ್ರೋತ್ಸಾಹ

ಬೆಂಗಳೂರು: ಉಕ್ಕು ತಯಾರಿಕೆ ಮತ್ತು ಇತರ ವಲಯಗಳಲ್ಲಿ ಛಾಪು ಮೂಡಿಸಿರುವ ಜಿಂದಾಲ್ ಸಮೂಹವು ರಾಜ್ಯದಲ್ಲಿ ಮುಂದಿನ ಐದು ವರ್ಷಗಳಲ್ಲಿ 1.20 ಲಕ್ಷ ಕೋಟಿ ರೂಪಾಯಿ ಬಂಡವಾಳ ಹೂಡಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಮಂಗಳವಾರ ಹೇಳಿದ್ದಾರೆ.

ರಾಜ್ಯದ ಕೈಗಾರಿಕಾ ವಲಯಕ್ಕೆ ಹೆಚ್ಚಿನ ಬಂಡವಾಳ ಆಕರ್ಷಿಸಬೇಕೆಂಬ ಉದ್ದೇಶದಿಂದ ಅವರು ರಾಷ್ಟ್ರದ ವಾಣಿಜ್ಯ ಕೇಂದ್ರ ಮುಂಬೈನಲ್ಲಿ ಎರಡು ದಿನಗಳ ರೋಡ್ ಶೋ ಹಮ್ಮಿಕೊಂಡಿದ್ದಾರೆ. ಜಿಂದಾಲ್ ಅಧ್ಯಕ್ಷ ಸಜ್ಜನ್ ಜಿಂದಾಲ್ ಮತ್ತು ಜೆಎಂಡಿ ಜಯಂತ್ ಆಚಾರ್ಯ ಅವರ ಜತೆ ಸಚಿವರು ಸಭೆ ನಡೆಸಿದರು.

ರಾಜ್ಯ ಸಚಿವ ಸಂಪುಟ ವಿಸ್ತರಣೆ ಮುಗಿದ ಬೆನ್ನಲ್ಲೇ, ಸೋಮವಾರವೇ ಮುಂಬೈಗೆ ಅವರು ಪ್ರಯಾಣ ಬೆಳೆಸಿದ್ದಾರೆ.
ಎಲ್ ಅಂಡ್ ಟಿ, ಬಿಸ್ಲೆರಿ, ರೇಮಂಡ್ ಟಾರ್ಕ್-ಹೀರಾನಂದಾನಿ, ಸನೋಫಿ ಹೆಲ್ತ್, ಮ್ಯಾಗ್ನಂ, ಬಾಲು ಫೋರ್ಜ್ ಮತ್ತು ಮ್ಯಾಕ್ಸ್ ಏರೋಸ್ಪೇಸ್ ಸೇರಿದಂತೆ ಇತರ 10 ಪ್ರಮುಖ ಕಂಪನಿಗಳೊಂದಿಗೆ ಸಚಿವರು ಮಾತುಕತೆ ನಡೆಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಅವರು, ಉಕ್ಕು ಉತ್ಪಾದನೆಯಿಂದ ಹಿಡಿದು ಬಣ್ಣದ ತಯಾರಿಕೆವರೆಗೆ ನಾನಾ ವಲಯಗಳಲ್ಲಿ ಛಾಪು ಮೂಡಿಸಿರುವ ಜಿಂದಾಲ್ ಸ್ಟೀಲ್ ವರ್ಕ್ಸ್ ಕಂಪನಿಯು ಬಂಡವಾಳ ಹೂಡಿಕೆಗೆ ರಾಜ್ಯವನ್ನು ಅಚ್ಚುಮೆಚ್ಚಿನ ತಾಣವೆಂದು ನಂಬಿದೆ.

ಜಿಂದಾಲ್ ಸಮೂಹವು ಮೂರು ದಶಕಗಳಿಂದಲೂ ರಾಜ್ಯದ ಕೈಗಾರಿಕಾ ವಲಯದಲ್ಲಿ ಹೆಜ್ಜೆ ಗುರುತು ಮೂಡಿಸಿದ್ದು, ಬಳ್ಳಾರಿ ಮತ್ತು ವಿಜಯನಗರ ಪ್ರದೇಶದಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಕಾರಣವಾಗಿದೆ. ಅದರ ಮುಂದಿನ ಹಂತದ ಹೂಡಿಕೆ ಆಶಾದಾಯಕವಾಗಿದ್ದು, ಸರಕಾರವು ಕಂಪನಿಗೆ ಅಗತ್ಯವಿರುವ ನೆರವು ನೀಡಲಿದೆ. ಈ ಸಮೂಹವು ರಾಜ್ಯದಲ್ಲಿ ಈಗಾಗಲೇ 1.30 ಲಕ್ಷ ಕೋಟಿ ರೂಪಾಯಿ ಬಂಡವಾಳ ಹೂಡಿದೆ ಎಂದು ಅವರು ವಿವರಿಸಿದ್ದಾರೆ.

ಬಾಟಲಿ ನೀರಿನ ಉತ್ಪಾದನೆಗೆ ಹೆಸರಾಗಿರುವ ಬಿಸ್ಲೆರಿ ಕಂಪನಿಯು ರಾಜ್ಯದಲ್ಲಿ ಹೆಚ್ಚಿನ ಹೂಡಿಕೆ ಮತ್ತು ತನ್ನ ಸಾಮರ್ಥ್ಯ ಹೆಚ್ಚಳವನ್ನು ಪರಿಗಣಿಸುತ್ತಿದೆ. ಇದು ಸಾಧ್ಯವಾದರೆ 2 ಸಾವಿರ ಉದ್ಯೋಗಗಳು ಸೃಷ್ಟಿಯಾಗಲಿವೆ. ಇದನ್ನು ಗಮನದಲ್ಲಿ ಇಟ್ಟುಕೊಂಡು, ನೀರಿನ ಸಮೃದ್ಧಿ ಇರುವ ವಿಜಯಪುರ ಅಥವಾ ಚಾಮರಾಜನಗರ ಜಿಲ್ಲೆಯನ್ನು ಆಯ್ದುಕೊಳ್ಳಲು ಕೋರಲಾಗಿದೆ. ಇದೇ ರೀತಿಯಲ್ಲಿ ಜೀನ್ಸ್ ಬಟ್ಟೆ ಉತ್ಪಾದನೆಗೆ ಮನಸ್ಸು ಮಾಡಿರುವ ರೇಮಂಡ್ ಲೈಫ್ ಸ್ಟೈಲ್ ಲಿಮಿಟೆಡ್ ಕಂಪನಿಗೆ ಕಚ್ಚಾವಸ್ತು ಮತ್ತು ಮಾರುಕಟ್ಟೆ ಅನುಕೂಲಗಳ ಹಿನ್ನೆಲೆಯಲ್ಲಿ ಬಳ್ಳಾರಿ ಇಲ್ಲವೇ ವಿಜಯಪುರದಲ್ಲಿ ಹೂಡಿಕೆ ಮಾಡುವಂತೆ ಹೇಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಎಲ್ ಅಂಡ್ ಟಿ ಕಂಪನಿಯು ಔದ್ಯಮಿಕ ರೋಬೋಟಿಕ್ಸ್ ವಲಯಕ್ಕೆ ಪ್ರವೇಶಿಸುವ ಉತ್ಸಾಹದಲ್ಲಿದ್ದು, ಬೆಂಗಳೂರಿನಲ್ಲಿ ಜಾಗತಿಕ ಮಾರುಕಟ್ಟೆಗೆ ಬೇಕಾಗುವ ಚಿಪ್ ವಿನ್ಯಾಸ ಸ್ಥಾವರವನ್ನು ಸ್ಥಾಪಿಸುವ ಚಿಂತನೆಯಲ್ಲಿದೆ. ಜತೆಗೆ ಅದು ಎಲೆಕ್ಟ್ರಾನಿಕ್ಸ್ ವಲಯಕ್ಕೆಂದೇ ಪ್ರತ್ಯೇಕ ಸಂಶೋಧನಾ ಮತ್ತು ನಾವೀನ್ಯತಾ ಪಾರ್ಕ್ ಸ್ಥಾಪಿಸುವ ಆಲೋಚನೆಯನ್ನೂ ಕಂಪನಿಯ ಪ್ರತಿನಿಧಿಗಳು ಹಂಚಿಕೊಂಡಿದ್ದಾರೆ. ಕಂಪನಿಯು ಇದರ ಬಗ್ಗೆ ತೀರ್ಮಾನಿಸಿದರೆ ಅದಕ್ಕೆ ಪೂರಕವಾಗಿ ಹೈವೋಲ್ಟೇಜ್ ಪರೀಕ್ಷಾ ಮತ್ತು ಎಲೆಕ್ಟ್ರಾನಿಕ್ ಟೆಸ್ಟಿಂಗ್ ಸೌಲಭ್ಯಕ್ಕೂ ಸರಕಾರ ನೆರವು ನೀಡಲಿದೆ ಎಂದು ಅವರು ನುಡಿದಿದ್ದಾರೆ.

ಟಾರ್ಕ್ ಸೆಮಿಕಂಡಕ್ಟರ್ಸ್ ಸಂಸ್ಥೆಯು ರಾಜ್ಯದಲ್ಲಿ ಸೆಮಿಕಂಡಕ್ಟರ್, ಡೇಟಾ ಸೆಂಟರ್ ಮತ್ತು ಎಐ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವ ಆಸಕ್ತಿ ತೋರಿಸಿದೆ. ಜತೆಗೆ ನಮ್ಮಲ್ಲಿ ಕಾಂಪೌಂಡ್ ಸೆಮಿಕಂಡಕ್ಟರ್ ಫ್ಯಾಬ್ ಸ್ಥಾವರ ಸ್ಥಾಪಿಸಲು ಕಂಪನಿಗೆ ಮನಸ್ಸಿದೆ. ಎಫ್ಎಂಸಿಜಿ ವಲಯದಲ್ಲಿ ಹೆಸರು ಮಾಡಿರುವ ಟಿಸಿಪಿಎಲ್ ಪ್ಯಾಕೇಜಿಂಗ್ ಲಿಮಿಟೆಡ್ ರಾಜ್ಯದಲ್ಲಿ ಫಿಲ್ಮ್ಸ್ ಮತ್ತು ಲ್ಯಾಮಿನೇಟ್ಸ್ ವಲಯದಲ್ಲಿ ನೆಲೆಯೂರಲು ನೋಡುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಎಲ್ಲ ಹೂಡಿಕೆದಾರರ ಜತೆಗೂ ಹೆಚ್ಚಿನ ಹೂಡಿಕೆ, ಉತ್ಪಾದನೆ, ಉದ್ಯೋಗ ಸೃಷ್ಟಿ, ಸಂಶೋಧನೆ ಮತ್ತು ಅಭಿವೃದ್ಧಿ, ಡೇಟಾ ಸೆಂಟರುಗಳ ಸ್ಥಾಪನೆ, ನೀರು ಮತ್ತು ಭೂಮಿಯ ಲಭ್ಯತೆ ಇವುಗಳಿಗೆ ಒತ್ತು ಕೊಟ್ಟು ಮಾತುಕತೆ ನಡೆಸಲಾಯಿತು ಎಂದು ಅವರು ವಿವರಿಸಿದ್ದಾರೆ.

ಈ ಮಾತುಕತೆಗಳಲ್ಲಿ ಟಾರ್ಕ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಡಾ.ನಿರಂಜನ್ ಹೀರಾನಂದಾನಿ, ಟಿಸಿಪಿಎಲ್ ಅಧ್ಯಕ್ಷ ಸಾಕೇತ್ ಕನೋರಿಯಾ, ಬಿಸ್ಲೆರಿ ಸಿಇಒ ಆ್ಯಂಜೆಲೋ ಜಾರ್ಜ್, ರೇಮಂಡ್ ಪರವಾಗಿ ಸಮೂಹದ ನೂತನ ಉಪಕ್ರಮಗಳ ಮುಖ್ಯಸ್ಥ ಗಿರೀಶ್ ಅಡ್ವಾಣಿ, ಎಲ್ ಅಂಡ್ ಟಿ ಹಿರಿಯ ಉಪಾಧ್ಯಕ್ಷ ಅರುಣ್ ರಾಮಚಂದ್ರಾನಿ, ಸನೋಫಿ ಮುಖ್ಯಸ್ಥರಾದ ವಿರಳ್ ಷಾ ಮತ್ತು ರುಚಿರ್ ಷಾ ಭಾಗವಹಿಸಿದ್ದರು.

ಸರಕಾರದ ಪರವಾಗಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್ ಸೆಲ್ವಕುಮಾರ್ ಮತ್ತು ಕೈಗಾರಿಕಾ ಇಲಾಖೆ ಆಯುಕ್ತೆ ಖುಷ್ಬೂ ಗೋಯೆಲ್ ಉಪಸ್ಥಿತರಿದ್ದರು.

Comments

Leave a Comment

Prev Post ಸಂಪುಟದಲ್ಲಿ ಭ್ರಷ್ಟಾಚಾರಿಗಳು, ಪೇಮೆಂಟ್‌ ಕೋಟಾ ಮೂಲಕ ಅವಕಾಶ ಗಿಟ್ಟಿಸಿಕೊಂಡವರು ಇದ್ದಾರೆ : ಪ್ರತಿಪಕ್ಷ ನಾಯಕ ಆರ್‌.ಅಶೋಕ ಟೀಕೆ

ಸವಾಲು ಎದುರಿಸಲು ಆಧುನಿಕ ಜ್ಞಾನಸೃಷ್ಟಿ ಅಗತ್ಯ: ಎಂ ಬಿ ಪಾಟೀಲ

ಅಗಸ್ತ್ಯ ಇಂಟರ್ನ್ಯಾಷನಲ್ ಫೌಂಡೇಶನ್ ಕಾರ್ಯಕ್ರಮದಲ್ಲಿ ಭಾಗಿ

ಮೇ ತಿಂಗಳಲ್ಲಿ ಪ್ಯಾನ್-ಐಐಟಿ ಬೆಂಗಳೂರು ಸಮಿಟ್ 2026 ಆಯೋಜನೆ

ಮೇ ತಿಂಗಳಲ್ಲಿ ಪ್ಯಾನ್-ಐಐಟಿ ಬೆಂಗಳೂರು ಸಮಿಟ್ 2026 ಆಯೋಜನೆ

ಕಲಬುರಗಿಯಲ್ಲಿ ಪಿಎಂ ಮಿತ್ರ ಜವಳಿ ಪಾರ್ಕ್ ಯೋಜನೆ

ಕೆಐಎಡಿಬಿ ಮೂಲಕ ಮೊದಲ ಹಂತ ಅಭಿವೃದ್ಧಿಗೆ ತೀರ್ಮಾನ: ಎಂ ಬಿ ಪಾಟೀಲ

ಪ್ರಧಾನಿ ನರೇಂದ್ರ ಮೋದಿ ಅವರ ದೃಷ್ಟಿಕೋನಕ್ಕೆ ಅನುಗುಣವಾಗಿ ಹೆಚ್‌ಎಂಟಿ ಉನ್ನತಿಗೆ ಕ್ರಮ ಎಂದ ಹೆಚ್‌ʼಡಿಕೆ

ಇಡೀ ದಿನ ಕಾರ್ಖಾನೆಯಲ್ಲೇ ಸಂಚರಿಸಿದ ಸಚಿವರು; ಆಡಳಿತ ವರ್ಗ, ಕಾರ್ಮಿಕರು, ಇನ್ನಿತರ ಪ್ರಮುಖರೊಂದಿಗೆ ವಿಸ್ತೃತ ಸಮಾಲೋಚನೆ

7,506 ಕೋಟಿ ರೂ. ಹೂಡಿಕೆಯ 55 ಯೋಜನೆಗಳಿಗೆ ಅಸ್ತು: ಎಂ ಬಿ ಪಾಟೀಲ

7,506 ಕೋಟಿ ರೂ. ಹೂಡಿಕೆಯ 55 ಯೋಜನೆಗಳಿಗೆ ಅಸ್ತು: ಎಂ ಬಿ ಪಾಟೀಲ

ರಕ್ಷಣಾ ವಲಯದಲ್ಲಿ ಆತ್ಮನಿರ್ಭರತೆ: ರಾಜ್ಯದ ನೇತೃತ್ವದಲ್ಲಿ ಪಾಲುದಾರರ ಕಾರ್ಯಾಗಾರ

50ಕ್ಕೂ ಹೆಚ್ಚು ಉನ್ನತ ಪ್ರತಿನಿಧಿಗಳು ಭಾಗಿ, ಕರ್ನಾಟಕಕ್ಕೆ ನೀತಿ ನಿರೂಪಣೆಯ ಅವಕಾಶ

Read all News