ಸ್ಟಿಂಗ್ ಆಪರೇಷನ್ ಹೆಸರಿನಲ್ಲಿ ಬ್ಲ್ಯಾಕ್‌ಮೇಲ್ ಮಾಡುವ ಚರಿತ್ರೆ ಕಾಂಗ್ರೆಸ್‌ನದ್ದು: ಬಿ.ವೈ. ವಿಜಯೇಂದ್ರ
ಸ್ಟಿಂಗ್ ಆಪರೇಷನ್ ಹೆಸರಿನಲ್ಲಿ ಬ್ಲ್ಯಾಕ್‌ಮೇಲ್ ಮಾಡುವ ಚರಿತ್ರೆ ಕಾಂಗ್ರೆಸ್‌ನದ್ದು: ಬಿ.ವೈ. ವಿಜಯೇಂದ್ರ
ಗದಗ: ರಾಜ್ಯದಲ್ಲಿ ಸ್ಟಿಂಗ್ ಆಪರೇಷನ್ ನಡೆಸಿಸಿ ಬ್ಲ್ಯಾಕ್‌ಮೇಲ್ ಮಾಡುವ ಚರಿತ್ರೆ ಯಾರದ್ದು ಎಂಬುದು ಕಾಂಗ್ರೆಸ್ ಪಕ್ಷದ ಸಚಿವರು ಮತ್ತು ಶಾಸಕರನ್ನೇ ಕೇಳಿದರೆ ಗೊತ್ತಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಆರೋಪಿಸಿದರು.
ಗದಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಸ್ಟಿಂಗ್ ಮಾಡಿಸಿ ಬ್ಲ್ಯಾಕ್‌ಮೇಲ್ ಮಾಡುವ ಚರಿತ್ರೆಯ ಬಗ್ಗೆ ಸಚಿವ ಎಚ್.ಕೆ. ಪಾಟೀಲರನ್ನು ಕೇಳಿದರೆ ಸಾಕು. ಏನು, ಯಾರದು ಎಂಬುದನ್ನು ಹೇಳುವುದಕ್ಕೆ ನಾನು ಹೋಗುವುದಿಲ್ಲ” ಎಂದು ಹೇಳಿದರು.
ಸ್ಟಿಂಗ್ ಆಪರೇಷನ್ ಬಗ್ಗೆ ಸ್ವತಃ ಆಡಳಿತ ಪಕ್ಷದ ಶಾಸಕರು ಮಾತನಾಡುತ್ತಿದ್ದಾರೆ. ಸ್ಟಿಂಗ್ ಆಪರೇಷನ್ ನಡೆಸುತ್ತಿರುವ ಏಜೆನ್ಸಿಗಳು ಯಾವುವು ಎಂಬುದನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ಜನತೆಯ ಮುಂದೆ ಸ್ಪಷ್ಟಪಡಿಸಬೇಕು ಎಂದು ವಿಜಯೇಂದ್ರ ಆಗ್ರಹಿಸಿದರು.
“ಮೊಬೈಲ್ ಸ್ವಿಚ್ ಆಫ್ ಮಾಡಿಸಿ, ಬಾಗಿಲು ಹಾಕಿಕೊಂಡು ಲಂಚ ಹೊಡೆಯಿರಿ ಎಂದು ಸಚಿವರಿಗೆ ಕಿವಿಮಾತು ಹೇಳುವ ಪರಿಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿದೆ. ಇಂತಹ ವ್ಯವಸ್ಥೆಯನ್ನು ನಡೆಸುತ್ತಿರುವವರು ಯಾರು ಎಂಬುದನ್ನು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಬೇಕು” ಎಂದು ಅವರು ಟೀಕಿಸಿದರು.
ಇದೇ ವೇಳೆ, ಇತ್ತೀಚೆಗೆ ಅತ್ಯುನ್ನತ ಪ್ರಭಾವಿ ನಾಯಕರೊಬ್ಬರು ಕೆಲವು ರಿಯಲ್ ಎಸ್ಟೇಟ್ ಉದ್ಯಮಿಗಳನ್ನು ಕರೆಸಿಕೊಂಡು, ಮೊಬೈಲ್ ಫೋನ್‌ಗಳನ್ನು ಸ್ವಿಚ್ ಆಫ್ ಮಾಡಿಸಿ ಮಾತನಾಡಿದ್ದಾರೆ ಎಂಬ ಗಂಭೀರ ಆರೋಪವನ್ನು ವಿಜಯೇಂದ್ರ ಮಾಡಿದರು.
ಇಷ್ಟು ದಿನ 75 ರೂಪಾಯಿ ಕೊಡುತ್ತಿದ್ದೀರಿ, ಇನ್ನು ಮುಂದೆ 150 ರೂಪಾಯಿ ಕೊಡಬೇಕು ಎಂದು ಯಾಕೆ ಕೇಳಲಾಯಿತು? ಇಷ್ಟು ಕೊಡಲು ಸಾಧ್ಯವಿಲ್ಲ ಎಂದು ಉದ್ಯಮಿ ಹೇಳಿದಾಗ ರಾಜ್ಯ ಬಿಟ್ಟು ಹೋಗಿ ಎಂದು ಹೇಳಲಾಗಿದೆ. ಆ ಪ್ರಭಾವಿ ವ್ಯಕ್ತಿ ಯಾರು ಎಂಬುದನ್ನು ಮುಖ್ಯಮಂತ್ರಿಗಳು ತಿಳಿದುಕೊಂಡು ರಾಜ್ಯದ ಜನತೆಗೆ ಹೇಳಬೇಕು ಎಂದು ವಿಜಯೇಂದ್ರ ಒತ್ತಾಯಿಸಿದರು.
ಜಿಪಂ–ತಾಪಂ ಚುನಾವಣೆಯಲ್ಲಿ ಮೈತ್ರಿ ಅಂತಿಮವಾಗಿಲ್ಲ
ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಬಿಜೆಪಿ–ಜೆಡಿಎಸ್ ಮೈತ್ರಿ ಕುರಿತು ಇನ್ನೂ ಅಂತಿಮ ನಿರ್ಧಾರವಾಗಿಲ್ಲ ಎಂದು ವಿಜಯೇಂದ್ರ ಸ್ಪಷ್ಟಪಡಿಸಿದರು.
ಈ ಕುರಿತು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ತಾನು ಮಾತನಾಡಿದ್ದೇನೆ. ಮುಂದಿನ ವಿಧಾನಸಭಾ ಚುನಾವಣೆಯನ್ನು ಒಟ್ಟಾಗಿ ಎದುರಿಸಬೇಕೆಂಬ ಅಪೇಕ್ಷೆ ಇದ್ದರೆ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿಯೂ ಸ್ಪಷ್ಟತೆ ಇರಬೇಕು. ಈ ಕುರಿತು ಎರಡೂ ಪಕ್ಷಗಳು ಕುಳಿತು ಚರ್ಚೆ ನಡೆಸಬೇಕಿದೆ. ಚುನಾವಣೆಗೆ ಇನ್ನೂ ಸಮಯವಿರುವುದರಿಂದ ಮಾತುಕತೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಬಿಜೆಪಿ ಕಾರ್ಯಕರ್ತರು, ಹಿಂದೂ ಕಾರ್ಯಕರ್ತರು ಹಾಗೂ ಮಠಾಧೀಶರನ್ನು ಹೆದರಿಸುವ ಕೆಲಸ ನಡೆಯುತ್ತಿದೆ ಎಂದು ವಿಜಯೇಂದ್ರ ಆರೋಪಿಸಿದರು.
“2028ರ ನಂತರ ನಾನೇ ಮುಖ್ಯಮಂತ್ರಿ ಎಂಬ ಭ್ರಮೆಯಲ್ಲಿದ್ದ ಮುಖ್ಯಮಂತ್ರಿ ಅವರಿಗೆ ಈಗ ವಾಸ್ತವದ ಅರಿವಾಗಿದೆ. ಆ ಹತಾಶೆಯಿಂದಲೇ ಈ ರೀತಿಯ ನಡೆ ಅನುಸರಿಸುತ್ತಿದ್ದಾರೆ” ಎಂದು ಅವರು ಮುಖ್ಯಮಂತ್ರಿ ವಿರುದ್ಧ ವಾಗ್ದಾಳಿ ನಡೆಸಿದರು.
ಯತ್ನಾಳ್ ವಿಚಾರದಲ್ಲಿ ಸದ್ಯ ಯಾವುದೇ ಚರ್ಚೆ ಬೇಡ
ಬಸನಗೌಡ ಪಾಟೀಲ ಯತ್ನಾಳ್ ಅವರು ಪಕ್ಷ ಸೇರ್ಪಡೆಯಾಗುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ವಿಜಯೇಂದ್ರ, ಯತ್ನಾಳ್ ಅವರು ಕಳೆದ ಒಂದು ತಿಂಗಳಿಂದ ಮೌನವಾಗಿದ್ದಾರೆ ಎಂದು ಹೇಳಿದರು.
ಯತ್ನಾಳ್ ಅವರು ಒಂದು ತಿಂಗಳಿಂದ ಪಾಪ ಸುಮ್ಮನಿದ್ದಾರೆ. ಈಗ ಗಣೇಶ ಹಬ್ಬ ನಡೆಯುತ್ತಿದೆ. ಅವರಿಗೆ ಯಾವುದೇ ತೊಂದರೆ ಕೊಡಬೇಡಿ. ನಂತರ ಈ ವಿಚಾರದ ಬಗ್ಗೆ ಮಾತನಾಡುತ್ತೇನೆ” ಎಂದು ವಿಜಯೇಂದ್ರ ಹೇಳಿದರು







Comments
Leave a Comment