ವಿಧಾನಸಭೆಯಲ್ಲಿ ಡಿ.ಕೆ. ಶಿವಕುಮಾರ್ ಏಕತೆಯ ಸಂದೇಶ; ಸಭಾಧ್ಯಕ್ಷರ ಆಯ್ಕೆಗೆ ವಿಜಯೇಂದ್ರ ಅಭಿನಂದನೆ
ಬೆಂಗಳೂರು, ಆಗಸ್ಟ್ 14 – “ಪ್ರತಿಯೊಬ್ಬ ವ್ಯಕ್ತಿಗೂ ಹೊಸ ಆಲೋಚನೆಗಳಿರುತ್ತವೆ. ಜನರ ವಿಶ್ವಾಸ ಗಳಿಸುವುದು ನಮ್ಮ ಕರ್ತವ್ಯ. ಎಲ್ಲ ಶಾಸಕರನ್ನು ವಿಶ್ವಾಸಕ್ಕೆ ಪಡೆದು ರಾಜ್ಯದ ಅಭಿವೃದ್ಧಿಗೆ ಟೀಮ್ ಕರ್ನಾಟಕವಾಗಿ ಕೆಲಸ ಮಾಡಬೇಕು” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿಧಾನಸಭೆಯಲ್ಲಿ ಸಚಿವ ಸಂಪುಟ ಸಹೋದ್ಯೋಗಿಗಳನ್ನು ಪರಿಚಯಿಸುವ ಸಂದರ್ಭದಲ್ಲಿ ಹೇಳಿದರು. ಅವರು ಜೂನ್ 3ರಂದು 139 ಶಾಸಕರ ಬೆಂಬಲದೊಂದಿಗೆ ಈ ಸ್ಥಾನಕ್ಕೆ ಬಂದಿರುವುದನ್ನು ನೆನೆದು, “224 ಶಾಸಕರೂ ನನಗೆ ಒಂದೇ. ಎಲ್ಲರನ್ನು ಒಟ್ಟಿಗೆ ಕರೆದೊಯ್ಯಬೇಕು ಎಂಬುದು ನನ್ನ ಆಸೆ” ಎಂದರು.
ರಾಜ್ಯದ ಹಿಂದಿನ ಮುಖ್ಯಮಂತ್ರಿಗಳನ್ನು ಸ್ಮರಿಸಿದ ಅವರು, “ಎಲ್ಲರೂ ತಮ್ಮದೇ ಆದ ರೀತಿಯಲ್ಲಿ ನಾಡಿಗೆ ಕೊಡುಗೆ ನೀಡಿದ್ದಾರೆ. ನಾನು ಯಾರನ್ನೂ ಟೀಕೆ ಮಾಡುವುದಿಲ್ಲ” ಎಂದು ಹೇಳಿದರು. ಜೆ.ಎಚ್. ಪಟೇಲರ ಹೃದಯ ಶ್ರೀಮಂತಿಕೆಯನ್ನು ನೆನೆದು, “ನನ್ನನ್ನು ಬಂಧಿಸುವ ಸಂದರ್ಭ ಬಂದಾಗ ಅವರು ರಾಜಕೀಯಕ್ಕೆ ಶಾಸಕನನ್ನು ಬಂಧಿಸುವುದಿಲ್ಲ ಎಂದಿದ್ದರು” ಎಂದು ಹೇಳಿದರು. ಹಳೆಯದನ್ನೆಲ್ಲಾ ಮರೆತು ಹೊಸ ಪಯಣದಲ್ಲಿ ಸಾಗೋಣ ಎಂದು ಕರೆ ನೀಡಿದ ಅವರು, “ಇಡಿ ಪ್ರಪಂಚ ಭಾರತವನ್ನು ಬೆಂಗಳೂರು ಮುಖೇನ ನೋಡುತ್ತಿದೆ” ಎಂದರು.
ರಾಜ್ಯದ ನೀರಾವರಿ ಯೋಜನೆಗಳು, ಉಪನಗರ ಅಭಿವೃದ್ಧಿ, ವೈದ್ಯರು ಮತ್ತು ಇಂಜಿನಿಯರ್‌ಗಳ ತಯಾರಿ, ರಿಂಗ್ ರಸ್ತೆ ಯೋಜನೆ, ರೈತರಿಗಾಗಿ ಪ್ರತ್ಯೇಕ ಬಜೆಟ್, ಅನ್ನಭಾಗ್ಯ ಯೋಜನೆ, ಐಟಿ-ಬಿಟಿ ಕ್ರಾಂತಿ ಮುಂತಾದವುಗಳನ್ನು ಸ್ಮರಿಸಿದ ಅವರು, “ವಿರೋಧ ಪಕ್ಷದವರು ಸಭಾಧ್ಯಕ್ಷರ ಆಯ್ಕೆಯಲ್ಲಿ ಭಾಗವಹಿಸಬೇಕಿತ್ತು. ವಿರೋಧ ಮಾಡುವುದು ಅವರ ಘನತೆಗೆ ತಕ್ಕದಲ್ಲ” ಎಂದು ಅಭಿಪ್ರಾಯಪಟ್ಟರು.
ಮುಂದಿನ 25 ವರ್ಷಗಳಲ್ಲಿ ರಾಜ್ಯವನ್ನು ಹಸಿರು ರಾಜ್ಯವನ್ನಾಗಿ ಮಾಡುವ ಗುರಿ, ಗ್ರಾಮೀಣ ಶಿಕ್ಷಣಕ್ಕೆ ಸಿಎಸ್ಆರ್ ನಿಧಿ ಮೀಸಲಿಡುವ ನಿರ್ಧಾರ, ಪೊಲೀಸ್ ಇಲಾಖೆಯ ದಕ್ಷತೆ, ಡ್ರಗ್ಸ್ ವಿರುದ್ಧ ಕ್ರಮ, ಕಂದಾಯ ಇಲಾಖೆಯ ಕ್ರಾಂತಿಕಾರಿ ತೀರ್ಮಾನಗಳನ್ನು ಉಲ್ಲೇಖಿಸಿದ ಅವರು, “ನಾನು ಯಾರ ಮೇಲೂ ದ್ವೇಷ ಮಾಡದೇ, ರಾಜ್ಯದ ಹಿತಕ್ಕಾಗಿ ಕೆಲಸ ಮಾಡುತ್ತೇನೆ. ಕೇಂದ್ರ ಸರ್ಕಾರದ ಸಹಕಾರವನ್ನು ಸ್ವೀಕರಿಸುತ್ತೇವೆ” ಎಂದರು.
ಅಧಿಕಾರದಲ್ಲಿ ಹೆಚ್ಚು ಸ್ನೇಹಿತರನ್ನು ಗಳಿಸಲು ಬಯಸುವೆ ಎಂದು ಹೇಳಿದ ಅವರು, “ಸಿದ್ದರಾಮಯ್ಯ ಕೊಟ್ಟ ಭಾಗ್ಯಗಳನ್ನು ಮುಂದುವರಿಸುತ್ತೇನೆ” ಎಂದರು. ಸಭಾಧ್ಯಕ್ಷರಾಗಿ ಆಯ್ಕೆಯಾದ ಜಿ.ಎಸ್. ಪಾಟೀಲ್ ಅವರಿಗೆ ಅಭಿನಂದನೆ ಸಲ್ಲಿಸಿದ ಅವರು, “ನಿಮ್ಮ ಕುಟುಂಬ ಸಮಾಜಕ್ಕೆ ಸೇವೆ ಸಲ್ಲಿಸಿದೆ. ನೀವು ವಿರೋಧ ಪಕ್ಷದವರ ಧ್ವನಿ ಆಲಿಸಿ ನ್ಯಾಯ ನೀಡಿ” ಎಂದು ಶುಭ ಹಾರೈಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಕೂಡಾ ಅಭಿನಂದನೆ ಸಲ್ಲಿಸಿ, “ಸಭಾಧ್ಯಕ್ಷರ ಪೀಠ ಯಾವುದೇ ಪಕ್ಷಕ್ಕೆ ಸೇರಿದಲ್ಲ. ಅದು ಜನರ ವಿಶ್ವಾಸದ ಪೀಠ” ಎಂದು ಹೇಳಿದರು.
ವಿಧಾನಸಭೆಯ ನೂತನ ಸಭಾಧ್ಯಕ್ಷರಾಗಿ ಆಯ್ಕೆಯಾದ ಮಾನ್ಯ ಅಧ್ಯಕ್ಷರಿಗೆ ಶಾಸಕರ ಪರವಾಗಿ ಹಾಗೂ ವೈಯಕ್ತಿಕವಾಗಿ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಬಿಜೆಪಿ ಶಾಸಕ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಹೇಳಿದರು.
ಮಾನ್ಯ ಅಧ್ಯಕ್ಷರು ಸುದೀರ್ಘ 45 ವರ್ಷಗಳ ರಾಜಕೀಯ ಅನುಭವ ಹೊಂದಿದ್ದು, ನಾಲ್ಕು ಬಾರಿ ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಶಿಕ್ಷಣ ಕ್ಷೇತ್ರದ ಜೊತೆಗೆ ಗ್ರಾಮೀಣ ಭಾಗದಲ್ಲಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳ ಅಭಿವೃದ್ಧಿಗೂ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪುಚುಕ್ಕೆ ಇಲ್ಲದೆ, ತಮ್ಮದೇ ಆದ ವ್ಯಕ್ತಿತ್ವ ಮತ್ತು ಶುದ್ಧ ರಾಜಕೀಯ ಹಿನ್ನೆಲೆಯನ್ನು ಹೊಂದಿರುವ ಹಿರಿಯರು ಈ ಗೌರವಾನ್ವಿತ ಸ್ಥಾನವನ್ನು ಅಲಂಕರಿಸಿರುವುದು ನಮ್ಮೆಲ್ಲರಿಗೂ ಸಂತೋಷದ ವಿಚಾರವಾಗಿದೆ ಎಂದು ಅವರು ಹೇಳಿದರು.
ಸಭಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಿಂದ ವಿರೋಧ ಪಕ್ಷಗಳು ದೂರ ಉಳಿದಿರುವುದಕ್ಕೆ ಅಧ್ಯಕ್ಷರ ಸ್ಥಾನಕ್ಕೆ ಯಾವುದೇ ಅಗೌರವ ತೋರಿಸುವ ಉದ್ದೇಶವಿಲ್ಲ. ಬದಲಾಗಿ, ಆ ಸ್ಥಾನಕ್ಕೆ ಹಿರಿಯರನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ನಡೆದ ಪ್ರಕ್ರಿಯೆಯನ್ನು ವಿರೋಧಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ವಿಚಾರವನ್ನು ಹಿರಿಯ ಸಚಿವರಾದ ಪರಮೇಶ್ವರ್ ಅವರೂ ಹಾಗೂ ಮಾನ್ಯ ಸುನಿಲ್ ಅವರೂ ಸದನದಲ್ಲಿ ಪ್ರಸ್ತಾಪಿಸಿದ್ದಾರೆ ಎಂದು ವಿಜಯೇಂದ್ರ ತಿಳಿಸಿದರು.
ಪ್ರಜಾಪ್ರಭುತ್ವದ ಅತ್ಯಂತ ಪ್ರಮುಖ ವೇದಿಕೆಯಾಗಿರುವ ವಿಧಾನಸಭೆಯ ಕಲಾಪಗಳನ್ನು ಮುನ್ನಡೆಸುವ ಮಹತ್ತರ ಜವಾಬ್ದಾರಿ ಇಂದು ಸಭಾಧ್ಯಕ್ಷರಿಗೆ ದೊರೆತಿದೆ. ರಾಜ್ಯದ ವಿವಿಧ ಕ್ಷೇತ್ರಗಳಿಂದ ಆಯ್ಕೆಯಾಗಿ ಬಂದಿರುವ ಶಾಸಕರು ತಮ್ಮ ಕ್ಷೇತ್ರದ ಜನರ ಆಶಯ, ನಿರೀಕ್ಷೆ ಹಾಗೂ ಸಮಸ್ಯೆಗಳನ್ನು ಸದನದ ಮೂಲಕ ವ್ಯಕ್ತಪಡಿಸುತ್ತಾರೆ.
ಆದ್ದರಿಂದ ಸದನದ ಘನತೆ, ಗೌರವ ಹಾಗೂ ಸಂಸದೀಯ ಪರಂಪರೆಯನ್ನು ಕಾಪಾಡುವುದು ಸಭಾಧ್ಯಕ್ಷರ ಪೀಠದ ಪವಿತ್ರ ಜವಾಬ್ದಾರಿಯಾಗಿದೆ. ಸಭಾಧ್ಯಕ್ಷರ ಪೀಠ ಯಾವುದೇ ಒಂದು ರಾಜಕೀಯ ಪಕ್ಷಕ್ಕೆ ಸೇರಿದ ಪೀಠವಲ್ಲ. ಅದು ಪ್ರಜಾಪ್ರಭುತ್ವದ ಹಾಗೂ ಜನರ ವಿಶ್ವಾಸದ ಪೀಠವಾಗಿದೆ ಎಂದು ಅವರು ಹೇಳಿದರು.
ಆಡಳಿತ ಪಕ್ಷವಾಗಲಿ, ವಿರೋಧ ಪಕ್ಷವಾಗಲಿ, ಪ್ರತಿಯೊಬ್ಬ ಸದಸ್ಯನಿಗೂ ತನ್ನ ಅಭಿಪ್ರಾಯವನ್ನು ಮುಕ್ತವಾಗಿ ವ್ಯಕ್ತಪಡಿಸಲು ಸಮಾನ ಅವಕಾಶ ದೊರೆಯಬೇಕು ಎಂಬುದು ನಮ್ಮೆಲ್ಲರ ಆಶಯವಾಗಿದೆ. ಅದೇ ಸಂದರ್ಭದಲ್ಲಿ ಸದನದ ನಿಯಮಗಳು, ಸಂಸದೀಯ ಸಂಪ್ರದಾಯಗಳು ಹಾಗೂ ಶಿಸ್ತನ್ನು ಕಾಪಾಡುವುದು ಕೂಡ ಅಷ್ಟೇ ಮುಖ್ಯ ಎಂದರು.






Comments
Leave a Comment