ಪೌತಿ ಖಾತೆ ತಿದ್ದುಪಡಿ: ಹೊರ ರಾಜ್ಯ–ವಿದೇಶಿ ವಾರಸುದಾರರ ಅರ್ಜಿಗೆ ಸ್ಪಷ್ಟ ಮಾರ್ಗಸೂಚಿ
ಪೌತಿ ಖಾತೆ ತಿದ್ದುಪಡಿ: ಹೊರ ರಾಜ್ಯ–ವಿದೇಶಿ ವಾರಸುದಾರರ ಅರ್ಜಿಗೆ ಸ್ಪಷ್ಟ ಮಾರ್ಗಸೂಚಿ
ಬೆಂಗಳೂರು, ಆ. 12-ಕರ್ನಾಟಕದ ಕೃಷಿ ಜಮೀನಿನ ಪೌತಿ ಖಾತೆ ಪ್ರಕ್ರಿಯೆ ಇತ್ತೀಚೆಗೆ ಮಹತ್ವದ ಬದಲಾವಣೆಯಾಗಿದ್ದುಇದುವರೆಗೆ ವಾರಸುದಾರರು ಕರ್ನಾಟಕದಲ್ಲೇ ವಾಸಿಸುವವರಾಗಿದ್ದರೆ ಮಾತ್ರ ಸ್ಪಷ್ಟ ಮಾರ್ಗಸೂಚಿ ಇತ್ತು. ಆದರೆ, ಜಮೀನು ಹೊಂದಿರುವ ಖಾತೆದಾರರು ಮೃತರಾದ ನಂತರ ಅವರ ವಾರಸುದಾರರು ಹೊರ ರಾಜ್ಯಗಳಲ್ಲಿ ಅಥವಾ ವಿದೇಶದಲ್ಲಿ ನೆಲೆಸಿರುವ ಸಂದರ್ಭಗಳಲ್ಲಿ ಅನೇಕ ಗೊಂದಲಗಳು ಎದುರಾಗುತ್ತಿದ್ದು, ದಾಖಲೆ ಸಲ್ಲಿಕೆ ಹಾಗೂ ಖಾತೆ ಬದಲಾವಣೆ ಪ್ರಕ್ರಿಯೆ ಕಷ್ಟಕರವಾಗಿತ್ತು. ಈ ಹಿನ್ನೆಲೆಯಲ್ಲಿ, ಸರ್ಕಾರವು ಹೊಸ ತಿದ್ದುಪಡಿ ಆದೇಶವನ್ನು ಹೊರಡಿಸಿ, ಹೊರ ರಾಜ್ಯ ಹಾಗೂ ವಿದೇಶಿ ಪೌರತ್ವ ಹೊಂದಿರುವ ವಾರಸುದಾರರಿಗೂ ಪೌತಿ ಖಾತೆ ಪ್ರಕ್ರಿಯೆ ಸುಗಮವಾಗುವಂತೆ ಸ್ಪಷ್ಟ ನಿಯಮಗಳನ್ನು ರೂಪಿಸಿದೆ.
ಕರ್ನಾಟಕ ಸರ್ಕಾರ ಭೂಮಿ‑ಕಂದಾಯ ಇಲಾಖೆಯು ಪೌತಿ/ವಾರಸುದಾರರ ಖಾತೆ ಮಾಡುವ ಸಂಬಂಧ ಹೊರಡಿಸಿದ್ದ ಮಾರ್ಗಸೂಚಿಗಳಿಗೆ ತಿದ್ದುಪಡಿ ಮಾಡಿ ಹೊಸ ನಿಯಮಾವಳಿಗಳನ್ನುರೂಪಿಸಲಾಗಿದೆ, ಈ ಆದೇಶವು, ವಿಶೇಷವಾಗಿ ಹೊರ ರಾಜ್ಯ ಹಾಗೂ ವಿದೇಶದಲ್ಲಿ ಖಾಯಂ ನಿವಾಸಿಗಳಾಗಿರುವ ವಾರಸುದಾರರ ಪ್ರಕರಣಗಳಿಗೆ ಅನ್ವಯಿಸುತ್ತದೆ.
ಹೊರ ರಾಜ್ಯದಲ್ಲಿ ವಾಸಿಸುವ ವಾರಸುದಾರರು ಪೌತಿ ಖಾತೆಗೆ ಅರ್ಜಿ ಸಲ್ಲಿಸುವಾಗ ತಮ್ಮ ರಾಜ್ಯದ ಸಕ್ಷಮ ಪ್ರಾಧಿಕಾರದಿಂದ ಪಡೆದ ವಂಶವೃಕ್ಷ ಪ್ರಮಾಣಪತ್ರ, ಕಾನೂನುಬದ್ಧ ವಾರಸುದಾರರ ಪ್ರಮಾಣಪತ್ರ ಅಥವಾ ಸಿವಿಲ್ ನ್ಯಾಯಾಲಯದ Succession Certificate ಸಲ್ಲಿಸಬೇಕಾಗಿದೆ. ಈ ದಾಖಲೆಗಳನ್ನು ಇಂಗ್ಲೀಷ್ ಭಾಷೆಗೆ ಅನುವಾದಿಸಿದ ಪ್ರತಿಯೊಂದಿಗೆ, ನೋಟರಿಯವರಿಂದ ಪ್ರಮಾಣೀಕರಿಸಿದ ಅಫಿಡವಿಟ್ (₹100/- ಛಾಪಾ ಕಾಗದ) ಕಡ್ಡಾಯವಾಗಿ ಸೇರಿಸಬೇಕು. ಕುಟುಂಬದ ಎಲ್ಲಾ ವಾರಸುದಾರರು ಆಧಾರ್ ಕಾರ್ಡ್ ಸಲ್ಲಿಸಬೇಕು; ವಿದೇಶಿ ಪೌರತ್ವ ಹೊಂದಿದ್ದರೆ ಪಾಸ್‌ಪೋರ್ಟ್ ದಾಖಲೆ ಸಲ್ಲಿಸಬೇಕು. ಜೊತೆಗೆ, ಎಲ್ಲಾ ವಾರಸುದಾರರ ಆಧಾರ್ e-KYC (OTP/ಬಯೋಮೆಟ್ರಿಕ್) ಕಡ್ಡಾಯವಾಗಿದೆ.
ವಿದೇಶಿ ಪೌರತ್ವ ಹೊಂದಿರುವ ವಾರಸುದಾರರು ಪೌತಿ ಖಾತೆಗೆ ಅರ್ಜಿ ಸಲ್ಲಿಸುವಾಗ, ಸಿವಿಲ್ ನ್ಯಾಯಾಲಯದಿಂದ Succession Certificate ಪಡೆದು ನಾಡಕಛೇರಿಗೆ ಖುದ್ದಾಗಿ ಅರ್ಜಿ ಸಲ್ಲಿಸಬೇಕು. ಅರ್ಜಿಯೊಂದಿಗೆ ಪಾಸ್‌ಪೋರ್ಟ್ ಪ್ರತಿಗಳು, ಮರಣ ಪ್ರಮಾಣಪತ್ರ ಹಾಗೂ ನೋಟರಿಯವರಿಂದ ಪ್ರಮಾಣೀಕರಿಸಿದ ಅಫಿಡವಿಟ್ ಸಲ್ಲಿಸಬೇಕಾಗಿದೆ. ಕೆಲವು ವಾರಸುದಾರರು ಮಾತ್ರ ವಿದೇಶಿ ಪೌರತ್ವ ಪಡೆದಿದ್ದರೆ, ಭಾರತೀಯ ಪೌರತ್ವ ಹೊಂದಿರುವವರು ವಂಶವೃಕ್ಷ ಪಡೆದು ಅರ್ಜಿ ಸಲ್ಲಿಸಬಹುದು. ವಿದೇಶಿ ಪೌರತ್ವ ಹೊಂದಿರುವವರಿಗೆ ಆಧಾರ್ e-KYC ಅವಶ್ಯವಿಲ್ಲ.
ಅರ್ಜಿದಾರರು ಸಂಬಂಧಿಸಿದ ಹೋಬಳಿಯ ನಾಡಕಛೇರಿಯಲ್ಲಿ ಅರ್ಜಿ ಸಲ್ಲಿಸಬೇಕು ಹಾಗೂ ಅಗತ್ಯ ಮಾಹಿತಿಗಾಗಿ ಗ್ರಾಮ ಆಡಳಿತಾಧಿಕಾರಿ ಅಥವಾ ರಾಜಸ್ವ ನಿರೀಕ್ಷಕರನ್ನು ಸಂಪರ್ಕಿಸಬೇಕು. ಅರ್ಜಿಯನ್ನು ಇ-ಪೌತಿ ತಂತ್ರಾಂಶದಲ್ಲಿ ನಮೂದಿಸಿ, ನಿಯಮಾನುಸಾರ ಪೌತಿ ಖಾತೆ ಮಾಡಲಾಗುತ್ತದೆ. ಹೊರ ರಾಜ್ಯ ಮತ್ತು ವಿದೇಶಿ ವಾರಸುದಾರರ ಅರ್ಜಿಗಳನ್ನು ಸ್ವೀಕರಿಸಲು ಕಂದಾಯ ಆಯುಕ್ತಾಲಯದ ಭೂಮಿ ಉಸ್ತುವಾರಿ ಕೋಶದಿಂದ ತಂತ್ರಾಂಶದಲ್ಲಿ ಸೂಕ್ತ ಮಾರ್ಪಾಡು ಮಾಡಲಾಗುತ್ತದೆ.
ಈ ಆದೇಶಕ್ಕೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಅವರು ಡಿಜಿಟಲ್ ಸಹಿ ಮಾಡಿದ್ದಾರೆ. ಈ ತಿದ್ದುಪಡಿ ಮೂಲಕ, ಕರ್ನಾಟಕದಲ್ಲಿ ಕೃಷಿ ಜಮೀನಿನ ಪೌತಿ ಖಾತೆ ಪ್ರಕ್ರಿಯೆ ಹೊರ ರಾಜ್ಯ ಮತ್ತು ವಿದೇಶಿ ವಾರಸುದಾರರಿಗೆ ಸುಗಮವಾಗುವಂತೆ ಸರ್ಕಾರ ಕ್ರಮ ಕೈಗೊಂಡಿದೆ.
ಮಾರ್ಚ್ 7, 2026ರಂದು ಕರ್ನಾಟಕ ಸರ್ಕಾರ ಭೂಮಿ‑ಕಂದಾಯ ಇಲಾಖೆಯು ಹೊರಡಿಸಿದ್ದ ಮೂಲ ಆದೇಶದಲ್ಲಿ, ಪೌತಿ/ವಾರಸುದಾರರ ಖಾತೆ ಮಾಡುವ ಸಂಬಂಧ ಸಾಮಾನ್ಯ ಮಾರ್ಗಸೂಚಿಗಳನ್ನು ನೀಡಲಾಗಿತ್ತು. ಆ ಆದೇಶದ ಪ್ರಕಾರ, ಕೃಷಿ ಜಮೀನಿನ ಖಾತೆದಾರರು ಮೃತರಾದ ನಂತರ ಅವರ ಕಾನೂನುಬದ್ಧ ವಾರಸುದಾರರು ಪೌತಿ ಖಾತೆಗೆ ಅರ್ಜಿ ಸಲ್ಲಿಸುವಾಗ, ವಂಶವೃಕ್ಷ ಪ್ರಮಾಣಪತ್ರ ಅಥವಾ ಕಾನೂನುಬದ್ಧ ವಾರಸುದಾರರ ಪ್ರಮಾಣಪತ್ರ ಸಲ್ಲಿಸುವುದು ಕಡ್ಡಾಯವಾಗಿತ್ತು.
ಅರ್ಜಿಯನ್ನು ಸಂಬಂಧಿಸಿದ ಹೋಬಳಿಯ ನಾಡಕಛೇರಿಯಲ್ಲಿ ಸಲ್ಲಿಸಬೇಕಾಗಿದ್ದು, ಗ್ರಾಮ ಆಡಳಿತಾಧಿಕಾರಿ ಅಥವಾ ರಾಜಸ್ವ ನಿರೀಕ್ಷಕರಿಂದ ಪರಿಶೀಲನೆ ನಡೆಸಿ, ನಂತರ ಪೌತಿ ಖಾತೆ ಬದಲಾವಣೆ ಮಾಡಲಾಗುತ್ತಿತ್ತು. ಆ ಸಮಯದಲ್ಲಿ ಹೊರ ರಾಜ್ಯ ಅಥವಾ ವಿದೇಶದಲ್ಲಿ ವಾಸಿಸುವ ವಾರಸುದಾರರ ಕುರಿತು ಯಾವುದೇ ವಿಶೇಷ ನಿಯಮಗಳನ್ನು ನೀಡಲಾಗಿರಲಿಲ್ಲ. ಆದ್ದರಿಂದ, ಮೂಲ ಆದೇಶವು ಕರ್ನಾಟಕದಲ್ಲೇ ವಾಸಿಸುವ ವಾರಸುದಾರರ ಅರ್ಜಿ ಪ್ರಕ್ರಿಯೆಗೆ ಮಾತ್ರ ಸ್ಪಷ್ಟ ಮಾರ್ಗಸೂಚಿ ನೀಡಿತ್ತು.
ಈಗ ಆಗಸ್ಟ್ 12, 2026ರಂದು ಹೊರಬಂದ ತಿದ್ದುಪಡಿ ಆದೇಶವು, ಆ ಮೂಲ ಆದೇಶಕ್ಕೆ ಪೂರಕವಾಗಿ, ಹೊರ ರಾಜ್ಯ ನಿವಾಸಿಗಳು ಹಾಗೂ ವಿದೇಶಿ ಪೌರತ್ವ ಹೊಂದಿರುವವರು ಪೌತಿ ಖಾತೆಗೆ ಅರ್ಜಿ ಸಲ್ಲಿಸುವಾಗ ಅನುಸರಿಸಬೇಕಾದ ವಿಶೇಷ ನಿಯಮಗಳನ್ನು ಸೇರಿಸಿದೆ.







Comments
Leave a Comment