* 7ನೇ ಸಿಐಐ ಅಂತರಾಷ್ಟ್ರೀಯ ಇಂಧನ ಸಮ್ಮೇಳನದಲ್ಲಿ ಪ್ರಲ್ಹಾದ ಜೋಶಿ * ಮನೆ ಬಳಕೆ ಮಾತ್ರವಲ್ಲದೆ ಹೆಚ್ಚುವರಿ ವಿದ್ಯುತ್ ಉತ್ಪಾದಿಸಿ ಮಾರಾಟ * ಪ್ರತಿ ಮನೆಗೆ ವಾರ್ಷಿಕ ₹3500 ಹೆಚ್ಚುವರಿ ಆದಾಯ ಕಲ್ಪಿಸುತ್ತಿರುವ ಸೌರಶಕ್ತಿ * ದೇಶದ 12 ಲಕ್ಷ ಕುಟುಂಬಗಳು ಒಟ್ಟಾರೆ ₹421 ಕೋಟಿ ಆದಾಯ ಗಳಿಕೆ * 300 GW ಮೀರಿದೆ ದೇಶದ ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯ
ನವದೆಹಲಿ: ʼವಿಶ್ವದಲ್ಲೇ ಅತಿದೊಡ್ಡ ಸೌರ ಯೋಜನೆ ಹೆಗ್ಗಳಿಕೆಗೆ ಪಾತ್ರವಾಗಿರುವ ʼಪಿಎಂ ಸೂರ್ಯಘರ್ʼ ಮೂಲಕ ದೇಶದಲ್ಲಿ 12 ಲಕ್ಷಕ್ಕೂ ಅಧಿಕ ಕುಟುಂಬಗಳು ಇದೀಗ ಹೆಚ್ಚುವರಿ ವಿದ್ಯುತ್ ಉತ್ಪಾದನೆ ಮಾಡುತ್ತಿದ್ದು, ಮಾರಾಟ ಮಾಡುತ್ತ ₹421 ಕೋಟಿ ಆದಾಯ ಗಳಿಸಿವೆʼ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ದೆಹಲಿಯಲ್ಲಿ ಗುರುವಾರ ಆಯೋಜಿಸಿದ್ದ 7ನೇ ಸಿಐಐ ಅಂತರಾಷ್ಟ್ರೀಯ ಇಂಧನ ಸಮ್ಮೇಳನ ಮತ್ತು ಪ್ರದರ್ಶನ ಉದ್ದೇಶಿಸಿ ಮಾತನಾಡಿ, ಭಾರತದಲ್ಲಿ ʼಸೂರ್ಯಘರ್ʼ ಯೋಜನೆ ಅಳವಡಿಸಿಕೊಂಡ ಕುಟುಂಬಗಳು ಕೇವಲ ವಿದ್ಯುತ್ ಬಳಕೆದಾರರಾಗದೆ, ವಿದ್ಯುತ್ ಉತ್ಪಾದಕರು, ಮಾರಾಟಗಾರರೂ ಆಗಿದ್ದಾರೆ ಎಂದು ಪ್ರತಿಪಾದಿಸಿದರು.
ಸೂರ್ಯಘರ್ ಯೋಜನೆ ಆರಂಭವಾದ ಎರಡೇ ವರ್ಷದಲ್ಲಿ ಶೇ.50ರಷ್ಟು ಗುರಿ ಸಾಧಿಸಲಾಗಿದೆ. 1 ಕೋಟಿ ಮನೆಗಳಿಗೆ ಸೌರ ಬೆಳಕು ಪಸರಿಸುವ ಗುರಿ ಹೊಂದಿದ್ದರೆ, ಈಗಾಗಲೇ 50 ಲಕ್ಷಕ್ಕೂ ಹೆಚ್ಚು ಮನೆಗಳು ಸೌರ ಫಲಕ ಅಳವಡಿಸಿಕೊಂಡಿವೆ. 19 ಲಕ್ಷಕ್ಕೂ ಅಧಿಕ ಕುಟುಂಬಗಳು ಶೂನ್ಯ ವಿದ್ಯುತ್ ಬಿಲ್‌ಗೆ ಒಳಪಟ್ಟಿವೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಈ ಯೋಜನೆ ಅತ್ಯಂತ ವೇಗ ಪಡೆದುಕೊಂಡಿದೆ. ಪಿಎಂ ಸೂರ್ಯಘರ್ ಯೋಜನೆಯಡಿ ಸೌರ ಫಲಕ ಅಳವಡಿಸಿಕೊಂಡ 12 ಲಕ್ಷಕ್ಕೂ ಹೆಚ್ಚು ಕುಟುಂಬಗಳು ಹೆಚ್ಚುವರಿ ವಿದ್ಯುತ್ ಉತ್ಪಾದನೆಯಲ್ಲಿ ತೊಡಗಿದ್ದು, ಹತ್ತಿರದ ಗ್ರಿಡ್‌ಗಳ ಮೂಲಕ ಡಿಸ್ಕಾಂಗಳಿಗೆ ವಿದ್ಯುತ್ ಮಾರಾಟ ಮಾಡುತ್ತ ಆದಾಯ ಕಂಡುಕೊಂಡಿವೆ ಎಂದರು.
ಪ್ರತಿ ಮನೆಗೆ ₹3,500 ಆದಾಯ: ಸೂರ್ಯಘರ್ ಯೋಜನೆಯಡಿ ವಿದ್ಯುತ್ ಮಾರಾಟದಿಂದ ಪ್ರತಿ ಮನೆಗೆ ವರ್ಷಕ್ಕೆ ₹3,500 ಹೆಚ್ಚುವರಿ ಆದಾಯ ಬರುತ್ತಿದೆ. ಈಗಾಗಲೇ ಒಟ್ಟಾರೆ ₹421 ಕೋಟಿ ಆದಾಯ ಗಳಿಸಿವೆ. ಅಲ್ಲದೇ, ದೇಶಾದ್ಯಂತ ಸೌರ ಮೇಲ್ಛಾವಣಿ ಮೂಲಕ ಸೌರಶಕ್ತಿ ಉತ್ಪಾದನಾ ಸಾಮರ್ಥ್ಯ 14 GW ತಲುಪಿದೆ ಎಂದು ಪ್ರಲ್ಹಾದ ಜೋಶಿ ಹೇಳಿದರು.
300 GW ಮೀರಿದ ಪಳೆಯುಳಿಕೆಯೇತರ ಇಂಧನ: ಭಾರತದ ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯವೀಗ 300 GW ಮೀರಿದೆ. ವರ್ಷದ ಮೊದಲಾರ್ಧದಲ್ಲಿ 30 GWಗಿಂತ ಹೆಚ್ಚಿನ ಪಳೆಯುಳಿಕೆಯೇತರ ಸಾಮರ್ಥ್ಯ ಸೇರಿಸಿದ್ದು, 2030ರ ವೇಳೆಗೆ 500 GW ನವೀಕರಿಸಬಹುದಾದ ಇಂಧನ ಗುರಿ ಸಾಧಿಸುವ ಹಾದಿಯಲ್ಲಿ ಸಾಗಿದೆ ಎಂದು ಹೇಳಿದರು.
2026ರ ಜನವರಿಯಿಂದ ಜೂನ್ ವರೆಗೆ ಕೇವಲ 6 ತಿಂಗಳಲ್ಲಿ 30.58 GW ಪಳೆಯುಳಿಕೆಯೇತರ ಇಂಧನ ಆಧಾರಿತ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಸೇರಿಸಲಾಗಿದೆ. ಕಳೆದ ವರ್ಷದ ಈ ಅವಧಿಗೆ ಹೋಲಿಸಿದರೆ ಶೇ.25 ರಷ್ಟು ಹೆಚ್ಚಾಗಿದೆ. ಕಳೆದೆರೆಡು ವರ್ಷಗಳಲ್ಲಿ ಭಾರತ 90 GW ನವೀಕರಿಸಬಹುದಾದ, ಪಳೆಯುಳಿಕೆಯೇತರ ಇಂಧನ ಆಧಾರಿತ ಸಾಮರ್ಥ್ಯವನ್ನು ಸೇರಿಸಿದೆ ಎಂದರು.
ಹೆಚ್ಚಿನ ಹೂಡಿಕೆ ಅಗತ್ಯ: ಭಾರತದ ಶುದ್ಧ ಇಂಧನ ಪರಿವರ್ತನೆ ಮತ್ತು ನವೀಕರಿಸಬಹುದಾದ ಇಂಧನ ವಲಯದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಹೆಚ್ಚಿನ ಹೂಡಿಕೆ ಮಾಡುವ ಅಗತ್ಯವಿದೆ. ಅಂತರಾಷ್ಟ್ರೀಯ ಉದ್ಯಮದಾರರು ಈ ನಿಟ್ಟಿನಲ್ಲಿ ಮುಂದಾಗಬೇಕು ಎಂದು ಇದೇ ವೇಳೆ ಸಚಿವ ಪ್ರಲ್ಹಾದ ಜೋಶಿ ಕರೆ ನೀಡಿದರು.
ಭಾರತದ ಶುದ್ಧ ಇಂಧನ ಪರಿವರ್ತನೆಯನ್ನು ಮತ್ತಷ್ಟು ವೇಗಗೊಳಿಸಲು ಕೈಗಾರಿಕಾ ಸಹಭಾಗಿತ್ವವನ್ನು ಬಲಪಡಿಸುವ ನಿಟ್ಟಿನಲ್ಲಿ ಸರ್ಕಾರ ಬದ್ಧತೆ ತೋರಿದೆ ಎಂದ ಸಚಿವರು, ಭಾರತದ ಸುಸ್ಥಿರ ಇಂಧನ ಭವಿಷ್ಯಕ್ಕಾಗಿ ತಾಂತ್ರಿಕ ಮಾರ್ಗಸೂಚಿ ವಿವರಿಸುವ "2030-2047ರ ಅವಧಿಗೆ ಭಾರತದ ಇಂಧನ ತಂತ್ರಜ್ಞಾನ ಆಯ್ಕೆಗಳುʼ ಎಂಬ ವರದಿಯನ್ನು ಸಹ ಬಿಡುಗಡೆ ಮಾಡಿದರು.
ಈ ಏಳನೇ ಸಿಐಐ (CII) ಅಂತರಾಷ್ಟ್ರೀಯ ಇಂಧನ ಸಮ್ಮೇಳನದಲ್ಲಿ 20ಕ್ಕೂ ಹೆಚ್ಚು ದೇಶಗಳ ನೀತಿ ನಿರೂಪಕರು, ಉದ್ಯಮ ವಲಯದ ನಾಯಕರು, ಜಾಗತಿಕ ಪ್ರತಿನಿಧಿಗಳು ಮತ್ತು ಇಂಧನ ತಜ್ಞರು ನೆರೆದಿದ್ದರು. ಮಧ್ಯಪ್ರದೇಶ ಸಿಎಂ ಡಾ.ಮೋಹನ್ ಯಾದವ್, ಕೇಂದ್ರದ ಭಾರೀ ಕೈಗಾರಿಕೆ ಹಾಗೂ ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಮುಂತಾದ ಗಣ್ಯರು ಉಪಸ್ಥಿತರಿದ್ದರು.





Comments
Leave a Comment