PRABHAVAA.COM

ಕನ್ನಡ ಪುಸ್ತಕ ಪ್ರಾಧಿಕಾರದಿಂದ ಮನೆಗೊಂದು ಗ್ರಂಥಾಲಯಕ್ಕಾಗಿ ನಾಲ್ಕು ಹೊಸ ಪ್ರಶಸ್ತಿಗಳ ಘೋಷಣೆ – ಡಾ. ಮಾನಸ

Bengaluru Urban:

Font size:

ಕನ್ನಡ ಪುಸ್ತಕ ಪ್ರಾಧಿಕಾರದಿಂದ ಮನೆಗೊಂದು ಗ್ರಂಥಾಲಯಕ್ಕಾಗಿ ನಾಲ್ಕು ಹೊಸ ಪ್ರಶಸ್ತಿಗಳ ಘೋಷಣೆ – ಡಾ. ಮಾನಸ

ಕನ್ನಡ ಪುಸ್ತಕ ಪ್ರಾಧಿಕಾರದಿಂದ ಮನೆಗೊಂದು ಗ್ರಂಥಾಲಯಕ್ಕಾಗಿ ನಾಲ್ಕು ಹೊಸ ಪ್ರಶಸ್ತಿಗಳ ಘೋಷಣೆ – ಡಾ. ಮಾನಸ

ಬೆಂಗಳೂರು – ಆಗಸ್ಟ್-04, ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಸಕ್ತ ವರ್ಷದಿಂದ ಜಾರಿಗೆ ಬರುವಂತೆ ನಾಲ್ಕು ಹೊಸ ಪ್ರಶಸ್ತಿಗಳನ್ನು ಸ್ಥಾಪಿಸಿ ಘೊಷಿಸಲಾಗಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಹೇಳಿದ್ದಾರೆ. ಪುಸ್ತಕ ಪ್ರಾಧಿಕಾರ ಅನುಷ್ಠಾನಗೊಳಿಸಿ ಜಾರಿಗೊಳಿಸುತ್ತಿರುವ ಮನೆಗೊಂದು ಗ್ರಂಥಾಲಯ ಕಾರ್ಯಕ್ರಮದಡಿಯಲ್ಲಿ ವಿಶಿಷ್ಟ ಹಾಗೂ ಉತ್ತಮ ಗ್ರಂಥಾಲಯಗಳನ್ನು ಅನುಷ್ಠಾನಗೊಳಿಸಿದವರಿಗೆ ಕನ್ನಡದ ಶ್ರೇಷ್ಠ ಬರಹಗಾರರ ಹೆಸರಿನಲ್ಲಿ ಸ್ಥಾಪಿಸಲಾದ ಈ ಪ್ರಶಸ್ತಿಗಳನ್ನು ನೀಡಲಾಗುವುದೆಂದು ಅವರು ತಿಳಿಸಿದರು. ಈ ನಾಲ್ಕು ಪ್ರಶಸ್ತಿಗಳನ್ನು ರಾಜ್ಯದ ನಾಲ್ಕು ಕಂದಾಯ ವಿಭಾಗಗಳಿಗೆ ಒಂದರಂತೆ ನೀಡಲಾಗುತ್ತದೆ. ಡಾ. ಪಿ.ಆರ್. ತಿಪ್ಪೇಸ್ವಾಮಿ, ಶ್ರೀಮತಿ ನಂಜನಗೂಡು ತಿರುಮಲಾಂಬ, ಗಳಗನಾಥ ಹಾಗೂ ಡಾ. ಹಾ.ಮಾ. ನಾಯಕ ಅವರ ಹೆಸರಿನಲ್ಲಿ ಈ ಪ್ರಶಸ್ತಿಗಳನ್ನು ನೀಡಲಾಗುವುದು ಎಂದು ಡಾ. ಮಾನಸ ಹೇಳಿದ್ದಾರೆ.
2025ನೇ ಸಾಲಿನಲ್ಲಿ ರಾಜ್ಯದ ನಾಲ್ಕು ಕಂದಾಯ ವಿಭಾಗಗಳಲ್ಲಿ ನಾಲ್ಕು ಮಂದಿ ಗಣ್ಯರನ್ನು ಈ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದ್ದು, ಪ್ರಶಸ್ತಿ ವಿವರ ಕೆಳಕಂಡಂತಿದೆ.

ಡಾ. ಪಿ.ಆರ್. ತಿಪ್ಪೇಸ್ವಾಮಿ ಪ್ರಶಸ್ತಿ
ಶ್ರೀ ಆಶಿಕ್, ಶಂಕರಘಟ್ಟ, ಶಿವಮೊಗ್ಗ
(ಬೆಂಗಳೂರು ವಿಭಾಗ) (ಪ್ರಶಸ್ತಿ ಮೊತ್ತ ರೂ.25,000-00)

ಶ್ರೀಮತಿ ನಂಜನಗೂಡು ತಿರುಮಲಾಂಬ ಪ್ರಶಸ್ತಿ
ಡಾ. ಬೆಟ್ಟಸ್ವಾಮಿ ಹೆಚ್.ಬಿ., ಮೈಸೂರು
(ಮೈಸೂರು ವಿಭಾಗ) (ಪ್ರಶಸ್ತಿ ಮೊತ್ತ ರೂ.25,000-00)

ಗಳಗನಾಥ ಪ್ರಶಸ್ತಿ
ಶ್ರೀ ಶೆಟ್ಟಿ ಚಿನ್ನದೊಡ್ಡಪ್ಪ ವಿಭೂತಿ, ಹಾವೇರಿ
(ಬೆಳಗಾವಿ ವಿಭಾಗ) (ಪ್ರಶಸ್ತಿ ಮೊತ್ತ ರೂ.25,000-00)

ಡಾ. ಹಾ.ಮಾ. ನಾಯಕ ಪ್ರಶಸ್ತಿ
ಡಾ. ಶೈಲಜಾ ಎನ್. ಬಾಗೇವಾಡಿ, ಕಲಬುರಗಿ
(ಕಲಬುರಗಿ ವಿಭಾಗ) (ಪ್ರಶಸ್ತಿ ಮೊತ್ತ ರೂ.25,000-00)

ಈ ಪ್ರಶಸ್ತಿಗಳನ್ನು ಪುಸ್ತಕ ಪ್ರಾಧಿಕಾರದ ವಾರ್ಷಿಕ ಪ್ರಶಸ್ತಿಗಳ ಜೊತೆಯಲ್ಲಿಯೇ ಪ್ರದಾನ ಮಾಡಲಾಗುವುದು ಪ್ರಸಸ್ತಿ ಪ್ರದಾನ ದಿನಾಂಕವನ್ನುb ಸಧ್ಯದಲ್ಲಿಯೇ ತಿಳಿಸಲಾಗುವುದು ಎಂದು ಡಾ. ಮಾನಸ ತಿಳಿಸಿದರು.

ಡಾ. ಪಿ.ಆರ್. ತಿಪ್ಪೇಸ್ವಾಮಿ ಪ್ರಶಸ್ತಿ

ಶ್ರೀ ಆಶಿಕ್, ಶಂಕರಘಟ್ಟ, ಶಿವಮೊಗ್ಗ
(ಬೆಂಗಳೂರು ವಿಭಾಗ) (ಪ್ರಶಸ್ತಿ ಮೊತ್ತ ರೂ.25,000-00)

ವ್ಯಕ್ತಿ ಪರಿಚಯ

ಮೋಚಿ ಸಮುದಾಯದ ಹಿನ್ನಲೆಯ ಆಶಿಕ್, ಬಾಲ್ಯದಲ್ಲಿ ತೀವ್ರ ಬಡತನ ಹಾಗೂ ಅವಮಾನ ಅನುಭವಿಸಿದವರು. ಶಾಲೆಗೆ ಹೋಗುವುದರ ಜೊತೆಗೆ ದಿನಸಿ ಅಂಗಡಿ, ಪಾತ್ರೆ ಅಂಗಡಿ, ಜವಳಿ ಅಂಗಡಿಗಳಲ್ಲಿ ಕೆಲಸ ಮಾಡಿ ಬದುಕಿನ ದಾರಿ ಕಂಡುಕೊಂಡವರು. ಶೈಕ್ಷಣಿಕವಾಗಿಯು ಒಳ್ಳೆಯ ಅಂಕಗಳನ್ನೇ ತೆಗೆದರೂ ಕನ್ನಡ ಸಾಹಿತ್ಯದ ಮೇಲಿನ ಪ್ರೀತಿಯಿಂದಾಗಿ ಕನ್ನಡ ಎಂ ಎ ಮಾಡಿ. ಈಗ ಕುವೆಂಪು ವಿಶ್ವವಿದ್ಯಾಲಯದಲ್ಲಿ ಸಂಶೋಧನಾರ್ಥಿಯಾಗಿದ್ದಾರೆ. ಅದ್ಭುತ ಪುಸ್ತಕ ಪ್ರೇಮಿಯಾಗಿರುವ ಆಶಿಕ್ ಉತ್ತಮವಾದ ಗ್ರಂಥಾಲಯವನ್ನು ತನ್ನ ಮನೆಯಲ್ಲಿ ಮಾಡಿಕೊಂಡಿದ್ದು, ಸಂಶೋಧನೆ, ವಿಮರ್ಶೆ, ವಾಜ್ಮಯ, ಜನಪದ ಸೇರಿದಂತೆ ಎಲ್ಲ ತರದ ಪುಸ್ತಕಗಳು ಇವರ ಗ್ರಂಥಾಲಯದಲ್ಲಿವೆ. ತನ್ನ ಫೆಲೋಶಿಪ್ನ ಬಹುತೇಕ ಹಣವನ್ನು ಪುಸ್ತಕಕ್ಕೆ ವಿನಿಯೋಗಿಸುವ ಆಶಿಕ್...ತನ್ನ ಪುಸ್ತಕ ಪ್ರೇಮವನ್ನು ತನ್ನ ಸುತ್ತಮುತ್ತಲ ದಿನಸಿ ಅಂಗಡಿ, ಐರನ್ ಶಾಪ್, ಕಾಫಿ ಶಾಪ್ ಹೀಗೆ ಎಲ್ಲ ಕಡೆ ಕೆಲಸ ಮಾಡುವ ಜನರಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ಹಂಚುತ್ತಿರುವುದು ಹಾಗೂ ಅವರುಗಳನ್ನು ಒಳ್ಳೊಳ್ಳೆಯ ಪುಸ್ತಕಗಳ ಓದಿಗೆ ಹಚ್ಚುತ್ತಿರುವುದು ಅಭಿಮಾನದ ಸಂಗತಿ. ಆಶಿಕ್ ಸಂಗ್ರಹದ ಕೆಲವು,ಮಹತ್ವದ ಕೃತಿಗಳು ಮಹಾಮಾರ್ಗ-ವೀರಶೈವ ಅಧ್ಯಯನ ಸಂಸ್ಥೆ-1998, ನೇಮಿ ಜೀನೇಶ ಸಂಗತಿ-ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ-1979, ಪೆರಿಯ ಪುರಾಣ-ಮದ್ರಾಸ್ ವಿಶ್ವವಿದ್ಯಾಲಯ-1980, ಟೀಕು ಸಹಿತ ಶಬ್ದಮಣಿದರ್ಪಣ-ಮದ್ರಾಸ್ ವಿಶ್ವವಿದ್ಯಾಲಯ-1973, ಗೌರವ-ಭೂಸನೂರ ಮಠ ಅಭಿನಂದನಾ ಗ್ರಂಥ-1986, ಅನುಭಾವ ಸಾಂಸ್ಕೃತಿಕ ಸಮಸ್ಯೆ ಮತ್ತು ಹುಡುಕಾಟ-ಬಸವರಾಜ ಕಲ್ಗುಡಿ-ಕನ್ನಡ ಪುಸ್ತಕ ಪ್ರಾಧಿಕಾರ-2001, ಶಂಭಾ ಜೋಶಿ ಸಂಶೋಧನಾ ಸಂಪುಟಗಳು-1999 ಈಗ ಇವರ ಪುಸ್ತಕ ಪ್ರೀತಿಯನ್ನು ಗುರುತಿಸಿ ಕನ್ನಡ ಪುಸ್ತಕ ಪ್ರಾಧಿಕಾರವು ಡಾ. ಪಿ.ಆರ್. ತಿಪ್ಪೇಸ್ವಾಮಿ ಪ್ರಶಸ್ತಿಯನ್ನು ನೀಡುತ್ತಿದೆ.

ಶ್ರೀಮತಿ ನಂಜನಗೂಡು ತಿರುಮಲಾಂಬ ಪ್ರಶಸ್ತಿ

ಡಾ. ಬೆಟ್ಟಸ್ವಾಮಿ ಹೆಚ್.ಬಿ., ಮೈಸೂರು
(ಮೈಸೂರು ವಿಭಾಗ) (ಪ್ರಶಸ್ತಿ ಮೊತ್ತ ರೂ.25,000-00)

ವ್ಯಕ್ತಿ ಪರಿಚಯ
ಮೈಸೂರಿನ ಬಿಇ ಡಿ ಕಾಲೇಜಿನಲ್ಲಿ ಜೀವ ವಿಜ್ಞಾನ ಭೋದಿಸುತ್ತಿರುವ ಸಹಾಯಕ ಪ್ರಾಧ್ಯಾಪಕ ಡಾ. ಬೆಟ್ಟಸ್ವಾಮಿ ಅದ್ಭುತವಾದ ಪುಸ್ತಕ ಪ್ರೇಮಿ. ಇವರ ಪುಸ್ತಕ ಪ್ರೀತಿ ಹೇಗಿದೆ ಎಂದು ತಿಳಿದುಕೊಳ್ಳಬೇಕಾದರೆ ಅವರು ತಮ್ಮದೇ ಮನೆಯಲ್ಲಿ ರೂಪಿಸಿರುವ “ವಿವಿಧ್ ವಾಚನಾಲಯ”ಕ್ಕೆ ನೀವು ಒಮ್ಮೆ ಭೇಟಿ ನೀಡಬೇಕು. ಸಾವಿರಾರು ಪುಸ್ತಕಗಳ ಸಂಗ್ರಹ ಇಲ್ಲಿದೆ. ಕನ್ನಡ ಸಾಹಿತ್ಯದ ಪುಸ್ತಕಗಳು ಮಾತ್ರವಲ್ಲದೆ ಹಿಂದಿ, ಇಂಗ್ಲೀಷ್ ಭಾಷೆಯ ಪುಸ್ತಕಗಳು ಸೇರಿದಂತೆ 5000ಕ್ಕೂ ಹೆಚ್ಚು ಪುಸ್ತಕಗಳು ಇವರ ಸಂಗ್ರಹದಲ್ಲಿದೆ. ತಾಯಿ ಮಡಿಲ ಸುಖ ಸಿಗುವುದು ಪುಸ್ತಕಗಳನ್ನು ಓದುವುದರಿಂದ ಮಾತ್ರ ಎಂದು ನಂಬಿರುವ ಬೆಟ್ಟಸ್ವಾಮಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗುವ ವಿದ್ಯಾರ್ಥಿಗಳಿಗೆ ತಮ್ಮ ಸಂಗ್ರಹದಲ್ಲಿರುವ ಪುಸ್ತಕಗಳನ್ನು ಬಳಸಿಕೊಳ್ಳಲು ಅವಕಾಶ ನೀಡಿದ್ದಾರೆ. ಸ್ವತಃ ಒಳ್ಳೆಯ ಬರಹಗಾರರಾದ ಡಾ. ಬೆಟ್ಟಸ್ವಾಮಿ ಕನ್ನಡ ಪುಸ್ತಕ ಲೋಕಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಇವರ ಪುಸ್ತಕ ಪ್ರೀತಿಯನ್ನು ಗುರುತಿಸಿ ಕನ್ನಡ ಪುಸ್ತಕ ಪ್ರಾಧಿಕಾರ ಇವರ ಮನೆಯಲ್ಲಿ ಮನೆಗೊಂದು ಗ್ರಂಥಾಲಯ ಕಾರ್ಯಕ್ರಮ ಅನುಷ್ಠಾನಗೊಳಿಸಿತ್ತು. ಈಗ ಇವರು ಕನ್ನಡ ಪುಸ್ತಕ ಪ್ರಾಧಿಕಾರದ ಶ್ರೀಮತಿ ನಂಜನಗೂಡು ತಿರುಮಲಾಂಬ ಪ್ರಶಸ್ತಿಗೆ ಭಾಜನಾರಾಗಿದ್ದಾರೆ.

ಗಳಗನಾಥ ಪ್ರಶಸ್ತಿ

ಶ್ರೀ ಶೆಟ್ಟಿ ಚಿನ್ನದೊಡ್ಡಪ್ಪ ವಿಭೂತಿ, ಹಾವೇರಿ
(ಬೆಳಗಾವಿ ವಿಭಾಗ) (ಪ್ರಶಸ್ತಿ ಮೊತ್ತ ರೂ.25,000-00)

ವ್ಯಕ್ತಿ ಪರಿಚಯ
ಅಕಾಡೆಮಿಕ್ ಪದವಿಗಳಿಗೂ, ಜ್ಞಾನಕ್ಕೂ ಸಂಬಂಧ ಇರುವುದಿಲ್ಲ ಎಂಬುದಕ್ಕೆ ಶಟ್ಟಿ ವಿಭೂತಿ ಅವರು ಅತ್ಯುತ್ತಮ ಉದಾಹರಣೆ. ಹಾವೇರಿಯ ನಾಗೇಂದ್ರನ ಮಟ್ಟಿಯಲ್ಲಿ ಸಣ್ಣದೊಂದು ಗುಡಿಸಿಲಿನಲ್ಲಿ ಪುಸ್ತಕಗಳ ದೊಡ್ಡ ಸಂಗ್ರಹವನ್ನೇ ಹೊಂದಿದ್ದ, ಶೆಟ್ಟಿ ವಿಭೂತಿ ಅವರ ಪುಸ್ತಕ ಪ್ರೀತಿಯನ್ನು ಗುರುತಿಸಿದ್ದು, ಮನೆಗೊಂದು ಗ್ರಂಥಾಲಯ ಯೋಜನೆಯ ಜಿಲ್ಲಾ ಜಾಗೃತಿ ಸಮಿತಿ. ಸುಡುಗಾಡು ಸಿದ್ಧರ ಕಾಲೋನಿಯಲ್ಲಿ ಸುಡುಗಾಡು ಸಿದ್ದರ ಜನಾಂಗಕ್ಕೆ ಸೇರಿದ ಈ ವ್ಯಕ್ತಿ ವಿದ್ಯಾಭ್ಯಾಸ ವಂಚಿತ, ಆದರೆ ಕನ್ನಡ, ಇಂಗ್ಲೀಷ್, ಹಿಂದಿ ಹಾಗೂ ತೆಲುಗು ಭಾಷೆಗಳಲ್ಲಿ ಅದ್ಭುತವಾದ ಭಾಷಣ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಸಾಮಾಜಿಕ ಜಾಗೃತಿ ಮತ್ತು ಸಮಕಾಲೀನ ಸಂದರ್ಭದ ಸಮಸ್ಯೆಗಳ ಬಗ್ಗೆ ತಮ್ಮದೇ ದೃಷಿಕೋನದಿಂದ ವಿಶ್ಲೇಷಣೆ ಮಾಡುವ ಶೆಟ್ಟಿ ವಿಭೂತಿ ತಮ್ಮ ಪುಟ್ಟ ಗುಡಿಸಿಲಿನಲ್ಲಿಯೇ ಸಾಕಷ್ಟು ಪುಸ್ತಕಗಳನ್ನು ಸಂಗ್ರಹ ಮಾಡಿ ಇಟ್ಟಿದ್ದಾರೆ. ಆ ಪುಸ್ತಕಗಳನ್ನು ಕಾಲೋನಿಯ ಮಕ್ಕಳಿಗೆ ಓದಲು ಕೊಟ್ಟು ಅಲೆಮಾರಿ ಜನಾಂಗದ ಪ್ರತೀ ಮಗುವಿಗೂ ಓದುವ ಹವ್ಯಾಸವನ್ನು ರೂಢಿಸುವಲ್ಲಿ ಪ್ರಯತ್ನ ಮಾಡುತಿದ್ದಾರೆ. ಶೆಟ್ಟಿ ವಿಭೂತಿಯವರ ಈ ಕೆಲಸವನ್ನು ಗುರುತಿಸಿ ಕನ್ನಡ ಪುಸ್ತಕ ಪ್ರಾಧಿಕಾರ ಅವರ ಮನೆಯಲ್ಲಿ ಗ್ರಂಥಾಲಯ ಅನುಷ್ಠಾನ ಕಾರ್ಯಕ್ರಮ ಆಯೋಜನೆ ಮಾಡಿತ್ತು. ಇದಕ್ಕೆ “ಗುಡಿಸಿಲಿಗೆ ಬಂತು ಗ್ರಂಥಾಲಯ” ಎಂಬ ಶೀರ್ಷಿಕೆಯಡಿ ವ್ಯಾಪಕವಾದ ಮಾಧ್ಯಮ ಪ್ರಚಾರವೂ ಸಿಕ್ಕಿತ್ತು. ಇವರ ಪುಸ್ತಕ ಪ್ರೀತಿಗಾಗಿ ಕನ್ನಡ ಪುಸ್ತಕ ಪ್ರಾಧಿಕಾರ 2025ನೇ ಸಾಲಿನ ಗಳಗನಾಥ ಪ್ರಶಸ್ತಿ ನೀಡಿ ಗೌರವಿಸುತ್ತಿದೆ.

ಡಾ. ಹಾ.ಮಾ. ನಾಯಕ ಪ್ರಶಸ್ತಿ
ಡಾ. ಶೈಲಜಾ ಎನ್. ಬಾಗೇವಾಡಿ, ಕಲಬುರಗಿ
(ಕಲಬುರಗಿ ವಿಭಾಗ) (ಪ್ರಶಸ್ತಿ ಮೊತ್ತ ರೂ.25,000-00)

ವ್ಯಕ್ತಿ ಪರಿಚಯ

ಡಾ. ಶೈಲಜಾ ಎನ್. ಬಾಗೇವಾಡಿ ಅವರು ಕಲಬುರಗಿಯ ಸರ್ಕಾರಿ ಮಹಾವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕಿಯಾಗಿದ್ದು, ಬರಹ, ಓದು ಹಾಗೂ ಉತ್ತಮ ಭಾಷಣಕಾರರಾಗಿದ್ದು, ತಮ್ಮ ಮನೆಯಲ್ಲಿ ಅತ್ಯುತ್ತಮವಾದ ಗ್ರಂಥ ಸಂಗ್ರಹಾಲಯ ಹೊಂದಿದ್ದಾರೆ. ಇವರ ಮನೆಯ ಗ್ರಂಥಾಲಯದಲ್ಲಿ ಸರಿಸುಮಾರು 3000ದ ವರೆಗೆ ಕನ್ನಡದ ಪುಸ್ತಕಗಳ ಸಂಗ್ರಹವಿದೆ. ಕಥೆ, ಕಾದಂಬರಿ, ಕಾವ್ಯ ನಾಟಕ, ಪ್ರವಾಸ ಕಥನ, ಮಹಿಳಾ ಸಾಹಿತ್ಯ, ವಚನ ಸಾಹಿತ್ಯ, ಸಂಶೋಧನೆ ಹೀಗೆ ಕನ್ನಡದ ಎಲ್ಲಾ ಪ್ರಕಾರದ ಕೃತಿಗಳ ಸಂಗ್ರಹವಿದೆ. ಅದರಲ್ಲೂ ಹೆಚ್ಚಾಗಿ ಕಾದಂಬರಿ ಮತ್ತು ಆತ್ಮ ಚರಿತ್ರೆಗಳ ಕೃತಿಗಳು ಹೆಚ್ಚಾಗಿವೆ. ಗಳಗನಾಥರ, ಶಿವರಾಂ ಕಾರಂತರ, ಎಸ್ ಎಲ್ ಭೈರಪ್ಪನವರ ಮತ್ತು ಇನ್ನೂ ಪ್ರಮುಖ ಕಾದಂಬರಿ ಕಾರರ ಸುಮಾರು 500 ಕಾದಂಬರಿಗಳು ಇವರ ಬಳಿ ಇವೆ. ಮಕ್ಕಳ ಸಾಹಿತ್ಯಕ್ಕೆ ಸಂಬಂಧಿಸಿದ ಕೃತಿಗಳು ಇವೆ. ಸುಮಾರು 30 ವರ್ಷಗಳಿಂದ ಪುಸ್ತಕ ಸಂಗ್ರಹಿಸುವ ಹವ್ಯಾಸವಿದೆ. ಅನೇಕ ವಿದ್ಯಾರ್ಥಿಗಳಿಗೆ ಮತ್ತು ಸಂಶೋಧಕರಿಗೆ ಇವರ ಗ್ರಂಥಾಲಯ ಉಪಯುಕ್ತವಾಗಿದೆ.

Comments

Leave a Comment

Prev Post ಪಿಕ್ಚರ್ ಆಗಸ್ಟ್ ೭ರಂದು ರಾಜ್ಯಾದ್ಯಂತ ಬಿಡುಗಡೆ.
Next Post ಸಂಪುಟದಲ್ಲಿ ಭ್ರಷ್ಟಾಚಾರಿಗಳು, ಪೇಮೆಂಟ್‌ ಕೋಟಾ ಮೂಲಕ ಅವಕಾಶ ಗಿಟ್ಟಿಸಿಕೊಂಡವರು ಇದ್ದಾರೆ : ಪ್ರತಿಪಕ್ಷ ನಾಯಕ ಆರ್‌.ಅಶೋಕ ಟೀಕೆ

ವಿಮಾನ ನಿಲ್ದಾಣ: ಬಳ್ಳಾರಿ, ವಿಜಯನಗರ, ಕೊಪ್ಪಳ ಜಿಲ್ಲೆಗಳ ಜನಪ್ರತಿನಿಧಿಗಳ ಜತೆ ಚರ್ಚಿಸಿ ತೀರ್ಮಾನ

ಸಿಎಂ ನೇತೃತ್ವದಲ್ಲಿ ಸಭೆ ಮಾಡಿ ಅಂತಿಮ ನಿರ್ಧಾರ: ಎಂ ಬಿ ಪಾಟೀಲ

ಇನ್ನೆರಡು ತಿಂಗಳಲ್ಲಿ ಕಳೆದೆರಡು ಸಾಲಿನ ಉದ್ಯೋಗಿನಿ‌ ಯೋಜನೆಯ ಸಹಾಯ ಧನ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ತೇರದಾಳ ಶಾಸಕ ಸಿದ್ದು ಸವದಿ ಕೇಳಿದ ಪ್ರಶ್ನೆಗೆ ಸಚಿವರ ಉತ್ತರ

ಎಲ್ಲರಿಗೂ ರೋಗ ನಿರೋಧಕ ಲಸಿಕೆ: ಮೊಟ್ಟ ಮೊದಲಿಗೆ ಸ್ಪರ್ಶ್‌ ಆಸ್ಪತ್ರೆಯಲ್ಲಿ ಆರಂಭ

ಎಲ್ಲರಿಗೂ ರೋಗ ನಿರೋಧಕ ಲಸಿಕೆ: ಮೊಟ್ಟ ಮೊದಲಿಗೆ ಸ್ಪರ್ಶ್‌ ಆಸ್ಪತ್ರೆಯಲ್ಲಿ ಆರಂಭ ಮಕ್ಕಳಿಂದ ವಯಸ್ಕರವರೆಗೆ ಎಲ್ಲರಿಗೂ ಲಸಿಕೆ!

ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಭೇಟಿಯಾದ ಆಸ್ಟ್ರೇಲಿಯಾ ನಿಯೋಗ

ಅಕ್ಕಪಡೆ, ಗೃಹಲಕ್ಷ್ಮಿ, ಶಕ್ತಿ ಯೋಜನೆಗಳ ಮಾಹಿತಿ ಹಂಚಿಕೊಂಡ ಸಚಿವರು

ಅತಿ ಹೆಚ್ಚು ಸಾಲ ಮಾಡಿ ಜನರನ್ನು ಸಾಲದ ಸುಳಿಗೆ ಸಿಲುಕಿ ಹಾಕಿಸಿರುವುದು ಸುಳ್ಳಲ್ಲ ಆರ್ಥಿಕ, ಬೌದ್ಧಿಕ ದಿವಾಳಿತನದ ಪ್ರದರ್ಶನ: ವಿಜಯೇಂದ್ರ

ಅತಿ ಹೆಚ್ಚು ಸಾಲ ಮಾಡಿ ಜನರನ್ನು ಸಾಲದ ಸುಳಿಗೆ ಸಿಲುಕಿ ಹಾಕಿಸಿರುವುದು ಸುಳ್ಳಲ್ಲ ಆರ್ಥಿಕ, ಬೌದ್ಧಿಕ ದಿವಾಳಿತನದ ಪ್ರದರ್ಶನ: ವಿಜಯೇಂದ್ರ

ಮೇ ವೇಳೆಗೆ ತುಂಗಭದ್ರಾ ಅಣೆಕಟ್ಟು ಎಲ್ಲಾ ಗೇಟ್ ಗಳ ಬದಲಾವಣೆ: ಡಿಸಿಎಂ ಡಿ.ಕೆ. ಶಿವಕುಮಾರ್

ಮೇ ವೇಳೆಗೆ ತುಂಗಭದ್ರಾ ಅಣೆಕಟ್ಟು ಎಲ್ಲಾ ಗೇಟ್ ಗಳ ಬದಲಾವಣೆ: ಡಿಸಿಎಂ ಡಿ.ಕೆ. ಶಿವಕುಮಾರ್

Read all News