PRABHAVAA.COM

ನಿಮ್ಮ ಮನೆ, ದೇವಾಲಯ ಕಾಪಾಡಿಕೊಂಡಂತೆ, ನುಡಿದಂತೆ ನಡೆಯುವ ನಿಮ್ಮ ಸರ್ಕಾರವನ್ನು ಕಾಪಾಡಿಕೊಳ್ಳಿ: ಅರ್ಚಕರಿಗೆ ಸಿಎಂ ಡಿ ಕೆ ಶಿವಕುಮಾರ್ ಕರೆ

Bengaluru Rural:

Font size:

ರಾಮಲಿಂಗಾ ರೆಡ್ಡಿ ಅವರಿಗೆ ಮುಜರಾಯಿ ಇಲಾಖೆ ನೀಡಲು ಸಿದ್ಧ,

ನಿಮ್ಮ ಮನೆ, ದೇವಾಲಯ ಕಾಪಾಡಿಕೊಂಡಂತೆ, ನುಡಿದಂತೆ ನಡೆಯುವ ನಿಮ್ಮ ಸರ್ಕಾರವನ್ನು ಕಾಪಾಡಿಕೊಳ್ಳಿ: ಅರ್ಚಕರಿಗೆ ಸಿಎಂ ಡಿ ಕೆ ಶಿವಕುಮಾರ್ ಕರೆ

ಧರ್ಮವನ್ನು ಗುತ್ತಿಗೆ ಪಡೆದಿರುವವರು, ನಿಮ್ಮ ಬದುಕಿನಲ್ಲಿ ಬದಲಾವಣೆ ತಂದಿದ್ದಾರಾ?

ಗ್ರಾಮೀಣ ದೇವಾಲಯಗಳ ಅರ್ಚಕರಿಗೆ ತರಬೇತಿಗೆ ಸರ್ಕಾರದ ಅಗತ್ಯ ಸಹಕಾರ

ನಿಮ್ಮ ಬೇಡಿಕೆಯಂತೆ ರಾಮಲಿಂಗಾ ರೆಡ್ಡಿ ಅವರಿಗೆ ಮುಜರಾಯಿ ಇಲಾಖೆ ನೀಡಲು ಸಿದ್ಧ, ನೀವು ಅವರೊಂದಿಗೆ ಮಾತನಾಡಿ

ಬೆಂಗಳೂರು, ಆ.05:

“ನಮ್ಮ ಸರ್ಕಾರ ನುಡಿದಂತೆ ನಡೆದಿದೆ. ಬೇರೆ ಯಾವ ಸರ್ಕಾರಗಳು ಮಾಡದ ಕೆಲಸ ಮಾಡಿ ನಿಮ್ಮ ಹೃದಯ ಗೆದ್ದಿದ್ದೇವೆ. ನೀವುಗಳು ನಿಮ್ಮ ಮನೆ, ದೇವಾಲಯಗಳನ್ನು ಕಾಪಾಡಿಕೊಳ್ಳುವಂತೆ ನಿಮ್ಮ ಸರ್ಕಾರವನ್ನು ಕಾಪಾಡಿಕೊಳ್ಳಿ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಅರ್ಚಕರಿಗೆ ಕರೆ ನೀಡಿದರು.

ಕರ್ನಾಟಕ ರಾಜ್ಯ ಮುಜರಾಯಿ ದೇವಾಲಯಗಳ ಆರ್ಚಕರ ಆಗಮಿಕರ ಮತ್ತು ನೌಕರರ ಸಂಘ ಬೆಂಗಳೂರಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಬೃಹತ್ ಸಮಾವೇಶ ಹಾಗೂ ಸಚಿವ ರಾಮಲಿಂಗಾರೆಡ್ಡಿ ಅವರ ಅಭಿನಂದನಾ ಸಮಾರಂಭವನ್ನು ಶಿವಕುಮಾರ್ ಅವರು ಉದ್ಘಾಟಿಸಿ ಮಾತನಾಡಿದರು.

“ನೀವೆಲ್ಲರೂ ನಮ್ಮ ಮೇಲೆ ಇಷ್ಟು ವಿಶ್ವಾಸ ಇಟ್ಟಿದ್ದೀರಿ. ಇತಿಹಾಸದಲ್ಲಿ ಯಾರೂ ಮಾಡದ ಕೆಲಸ ರಾಮಲಿಂಗಾ ರೆಡ್ಡಿ ಅವರು ಮಾಡಿದ್ದಾರೆ ಎಂದು ನೀವೆಲ್ಲರೂ ವಿಶ್ವಾಸ ವ್ಯಕ್ತಪಡಿಸಿದ್ದೀರಿ. ನಿಮ್ಮ ಈ ವಿಶ್ವಾಸ ನೋಡಿ ನನಗೆ ಸರ್ವಜ್ಞರ ಮಾತು ನೆನಪಾಗುತ್ತದೆ. ನಿಂಬೆ ಹುಳಿಗಿಂತ ಶ್ರೇಷ್ಠವಾದ ಮತ್ತೊಂದು ಹುಳಿ ಇಲ್ಲ. ದುಂಬಿಗಿಂತ ಶ್ರೇಷ್ಠವಾದ ಕಪ್ಪು ಬಣ್ಣ ಬೇರೆ ಇಲ್ಲ, ಶಂಭುವಿಗಿಂತ ದೊಡ್ಡ ದೇವರಿಲ್ಲ, ನಂಬಿಕೆಗಿಂತ ದೊಡ್ಡ ಗುಣವಿಲ್ಲ. ನೀವು ನಮ್ಮ ಸರ್ಕಾರ ಹಾಗೂ ರಾಮಲಿಂಗಾರೆಡ್ಡಿ ಅವರ ಮೇಲೆ ನಂಬಿಕೆ ಇಟ್ಟಿರುವುದಕ್ಕೆ ನಿಮ್ಮ ಪಾದಗಳಿಗೆ ನಮಿಸುತ್ತೇನೆ” ಎಂದರು.

“ನಿಮ್ಮ ನಮ್ಮ ಈ ಬಾಂಧವ್ಯ ನನ್ನನ್ನು ಹಾಗೂ ರಾಮಲಿಂಗಾ ರೆಡ್ಡಿ ಅವರನ್ನು ಮತ್ತೇ ವಿಧಾನಸೌಧದಲ್ಲಿ ಕೂರಿಸುವಂತೆ ಮಾಡಬೇಕು. ದಿನ ನಿತ್ಯ ನಿಮ್ಮ ಬಳಿಗೆ ನೂರಾರು ಜನ ಬರುತ್ತಾರೆ. ನಾನು ಏನಾದರೂ ಮಾತನಾಡಿದರೆ ನನ್ನ ಸ್ವಾರ್ಥ ಎಂದು ಹೇಳುತ್ತಾರೆ. ನೀವು ಮಾತನಾಡಿದರೆ ದೇವರ ಪರವಾಗಿ ಮಾತನಾಡಿದಂತೆ. ನೀವೆಲ್ಲರೂ ದೇವರ ಮಕ್ಕಳಂತೆ. ಮತ್ತೆ ಈ ಸರ್ಕಾರವನ್ನು ತರುವುದು ನಿಮ್ಮ ಜವಾಬ್ದಾರಿ ಅಲ್ಲವೇ?” ಎಂದರು.

“ನಮ್ಮ ಸರ್ಕಾರದಲ್ಲಿ ಧಾರ್ಮಿಕ ದತ್ತಿ ಇಲಾಖೆ ಇವೆ. ಧರ್ಮ ಯಾವುದಾದರೂ ತತ್ವವೊಂದೇ, ನಾಮ ನೂರಾದರೂ ದೈವವೊಂದೇ, ಪೂಜೆ ಯಾವುದಾದರೂ ಭಕ್ತಿಯೊಂದೇ, ಕರ್ಮ ಹಲವಾದರೂ ನಿಷ್ಠೆಯೊಂದೇ, ದೇವನೊಬ್ಬ ನಾಮ ಹಲವು. ನೀವು ಭಕ್ತರ ಪ್ರಾರ್ಥನೆಯನ್ನು ದೇವರಿಗೆ ತಲುಪಿಸುವ ಏಜೆಂಟರಿದ್ದಂತೆ. ಮುಂದೆ ನಿಮ್ಮ ಸರ್ಕಾರ ಅಧಿಕಾರಕ್ಕೆ ಬರಲು ನೀವು ಶ್ರಮಿಸಬೇಕು. ನಾವು ಮಾಡುತ್ತಿರುವ ಜನಸೇವೆ ಜನಾರ್ದನ ಸೇವೆ” ಎಂದು ತಿಳಿಸಿದರು.

ಧರ್ಮವನ್ನು ಗುತ್ತಿಗೆ ಪಡೆದಿರುವವರು, ನಿಮ್ಮ ಬದುಕಿನಲ್ಲಿ ಬದಲಾವಣೆ ತಂದಿದ್ದಾರಾ?

“ರಾಮಲಿಂಗಾ ರೆಡ್ಡಿ ಅವರನ್ನು ದೇವರ ಬಳಿ ಕರೆದೊಯ್ದು ಈ ಸರ್ಕಾರ ಇನ್ನು ಹತ್ತು ವರ್ಷ ಅಧಿಕಾರದಲ್ಲಿ ಇರಬೇಕು ಎಂದು ಪ್ರಾರ್ಥನೆ ಮಾಡಿ, ಸಂಕಲ್ಪ ಮಾಡಿದ್ದು ನನಗೆ ಬಹಳ ಸಂತೋಷ ತಂದಿದೆ. ಈ ಧರ್ಮವನ್ನು ಕೆಲವು ಪಕ್ಷದವರು ಗುತ್ತಿಗೆಗೆ ಪಡೆದಿದ್ದಾರೆ. ಆದರೆ ಅವರು ಮಾಡೋದು, ಖಾಲಿ ಬುಟ್ಟಿ, ಬೇವಿನ ಸೊಪ್ಪು ನಂದೆ ಬೆಳಗೋ ಪೂಜಾರಿ ಎಂಬಂತೆ ಖಾಲಿ ಟ್ರಂಕು. ಶಾಲು ಹಾಕಿಕೊಂಡು ದೇವರು, ಧರ್ಮ ಎಲ್ಲವೂ ನಮ್ಮದೇ ಎನ್ನುತ್ತಾರೆ. ನಾನು, ರಾಮಲಿಂಗಾ ರೆಡ್ಡಿ ಹಿಂದೂಗಳಲ್ಲವೇ? ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಅವರು ಹಿಂದೂ ಅಲ್ಲವೇ?” ಎಂದು ಪ್ರಶ್ನಿಸಿದರು.

"ಬೇರೆ ಸರ್ಕಾರಗಳ ಅವಧಿಯಲ್ಲಿ ನಿಮ್ಮ ಬದುಕಿನಲ್ಲಿ ಬದಲಾವಣೆ ತಂದಿದ್ದರೆ ನಾವು ಪ್ರಶ್ನೆ ಮಾಡುತ್ತಿರಲಿಲ್ಲ. ನಾವು ನಮ್ಮ ಕೆಲಸಕ್ಕೆ ಕೂಲಿ ಕೇಳುತ್ತೇವೆ. ಅವರು ಕೇವಲ ಶಾಲು ಹಾಕಿಕೊಂಡು ರಾಮ ರಾಮ ಎಂದಾಕ್ಷಣ ಅವರು ಧರ್ಮ ರಕ್ಷಕರೇ? ರಾಮ ಮಂದಿರಕ್ಕೆ ನಾವು ನೀವೆಲ್ಲರೂ ಇಟ್ಟಿಗೆ ಕಾಸು ದೇಣಿಗೆ ನೀಡಿದೆವು. ಅದೆಲ್ಲವೂ ಏನಾದವು? ಈಗ ಮರ್ಯಾದೆ ಹೋಗಿಲ್ಲವೇ? ನಿಮಗೆ ಯಾವುದೇ ಕಾರಣಕ್ಕೂ ಅವಮಾನವಾಗಬಾರದು ಎಂದು ನಾವು ತೀರ್ಮಾನಿಸಿ ದೊಡ್ಡ ದೇವಾಲಯಗಳ ಹುಂಡಿ ಬಳಿ ಹಾಗೂ ಅದರ ಹಣ ತೆಗೆಯುವಾಗ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಮುಂದಾಗಿದ್ದೇವೆ. ನಿಮಗೆ ದೇವರ ದುಡ್ಡು ತಿನ್ನುವ ಆಸೆ ಇಲ್ಲ ಎಂದು ನನಗೆ ಗೊತ್ತಿದೆ. ಬಡವರು ಯಾರೂ ಇಂತಹ ಕೆಲಸ ಮಾಡುವುದಿಲ್ಲ” ಎಂದು ತಿಳಿಸಿದರು.

ಗ್ರಾಮೀಣ ದೇವಾಲಯಗಳ ಅರ್ಚಕರಿಗೆ ತರಬೇತಿಗೆ ಸರ್ಕಾರದ ಅಗತ್ಯ ಸಹಕಾರ

“ಅರ್ಚಕರ ಸಂಘದವರು ಹಾಗೂ ಮಠಗಳು ಕೂತು ಚರ್ಚೆ ಮಾಡಿ ಹಳ್ಳಿಗಳಲ್ಲಿ ಇರುವ 34 ಸಾವಿರ ದೇವಾಲಯಗಳಲ್ಲಿ ಪೂಜೆ ಮಾಡುವವರಿಗೆ ಸಂಸ್ಕಾರ ಕಲಿಸಿ. ನೀವು ಅವರಿಗೆ 3 ತಿಂಗಳು ತರಬೇತಿ ನೀಡಿ, ಅದಕ್ಕೆ ಬೇಕಾದ ಸಹಕಾರ ಸರ್ಕಾರ ನೀಡಲಿದೆ. ವಿದ್ಯೆ ಯಾರೊಬ್ಬರ ಮನೆ ಆಸ್ತಿಯೇ? ನೀವು ನಿಮ್ಮ ವಿದ್ಯೆ ದಾನ ಮಾಡಬಹುದಲ್ಲವೇ? ನಾನು ನನ್ನ ಕ್ಷೇತ್ರದಲ್ಲಿ 300 ದೇವಾಲಯಗಳ ನಿರ್ಮಾಣ, ಜೀರ್ಣೋದ್ಧಾರ ಮಾಡಿದ್ದೇವೆ. ಯಾರು ಭಕ್ತಿಯಿಂದ ಪ್ರಾರ್ಥನೆ ಮಾಡುತ್ತಾರೋ ಅವರಿಗೆ ನೆಮ್ಮದಿ ಸಿಗುತ್ತದೆ. ಬಂಗಾರಪ್ಪ ಅವರ ಕಾಲದಲ್ಲಿ ಆರಾಧನ ಯೋಜನೆ ಮಾಡಿ ಸಣ್ಣ ದೇವಾಲಯಗಳ ಅಭಿವೃದ್ಧಿಗೆ ಮುಂದಾಗಿದ್ದರು” ಎಂದು ತಿಳಿಸಿದರು.

ನಿಮ್ಮ ಬೇಡಿಕೆಯಂತೆ ರಾಮಲಿಂಗಾ ರೆಡ್ಡಿ ಅವರಿಗೆ ಮುಜರಾಯಿ ಇಲಾಖೆ ನೀಡಲು ಸಿದ್ಧ, ನೀವು ಅವರೊಂದಿಗೆ ಮಾತನಾಡಿ

“ನೀವು ರಾಮಲಿಂಗಾ ರೆಡ್ಡಿ ಅವರಿಗೆ ಮುಜರಾಯಿ ಇಲಾಖೆ ಜವಾಬ್ದಾರಿ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದೀರಿ. ನನಗೆ ಅವರಿಗೆ ಬೆಂಗಳೂರು ಖಾತೆ ನೀಡುವ ಆಸೆ ಇತ್ತು. ಆದರೆ ಪಕ್ಷ ತೀರ್ಮಾನ ಮಾಡಿತ್ತು. ಬೇರೆ ಯಾವುದಾದರೂ ಖಾತೆ ಕೇಳಿ, ಇದನ್ನು ಕೇಳಿದರೂ ನಾನು ಕೊಡುತ್ತೇನೆ. ನೀವು ಹಾಗೂ ಅವರು ಕೂತು ಚರ್ಚೆ ಮಾಡಿ. ನೀರಾವರಿ ಇಲಾಖೆಯಲ್ಲಿ ಮಾತ್ರ ಸವಾಲುಗಳು ಹೆಚ್ಚಾಗಿರುತ್ತವೆ. ಅಲ್ಲಿ ತುಂಗಭದ್ರಾ, ಕೃಷ್ಣಾ, ಇತ್ತ ಕಾವೇರಿ ಸಮಸ್ಯೆ ಇದೆ. ಯಡಿಯೂರಪ್ಪ ಅವರ ಸರ್ಕಾರದಲ್ಲಿ 1.25 ಲಕ್ಷ ಕೋಟಿ ಕೆಲಸ ನೀಡಿದ್ದಾರೆ. ಈಗ ಇಲಾಖೆಯಲ್ಲಿ 16 ಸಾವಿರ ಕೋಟಿ ಹಣವಿದೆ. ಕೃಷ್ಣಾ ಮೇಲ್ದಂಡೆ ಯೋಜನೆಗೆ ಭೂಸ್ವಾಧೀನಕ್ಕೆ ಪರಿಹಾರ ಮೊತ್ತ ನೀಡಬೇಕು. ಹೀಗೆ ಅನೇಕ ಸಮಸ್ಯೆಗಳಿವೆ. ನಿಮ್ಮ ಬೇಡಿಕೆ ವಿಚಾರ, ಅವರೊಂದಿಗೆ ಚರ್ಚೆ ಮಾಡುವೆ” ಎಂದು ತಿಳಿಸಿದರು.

ನಾವು ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ

“ನಾವು ಪಂಚ ಗ್ಯಾರಂಟಿ ಯೋಜನೆ ಘೋಷಣೆ ಮಾಡಿ ಈ ಯೋಜನೆ ಜಾರಿ ಮಾಡುವ ಶಕ್ತಿ ನೀಡು ತಾಯಿ ಎಂದು ಚಾಮುಂಡೇಶ್ವರಿ ಬಳಿ ಪ್ರಾರ್ಥನೆ ಮಾಡಿದೆ. ಆ ತಾಯಿ ಆಶೀರ್ವಾದ, ನಿಮ್ಮ ಸಹಕಾರದಿಂದ ನಾವು ರಾಜ್ಯದಲ್ಲಿ 135 ಸೀಟು ಗೆದ್ದು ಅಧಿಕಾರಕ್ಕೆ ಬಂದೆವು. ನಾವು ಅಧಿಕಾರಕ್ಕೆ ಬಂದ ಬಳಿಕ ಕೊಟ್ಟ ಮಾತು ಉಳಿಸಿಕೊಂಡಿದ್ದೇವೊ ಇಲ್ಲವೋ ನೀವೆ ಹೇಳಿ. ಬಿಜೆಪಿಯವರು ನಿಮ್ಮ ಖಾತೆಗೆ 15 ಲಕ್ಷ ಹಾಕುತ್ತೇವೆ ಎಂದು ಹೇಳಿ ಹಾಕಿದ್ದಾರಾ? ನಿಮ್ಮ ಆದಾಯ ಡಬಲ್ ಮಾಡಿದ್ದಾರಾ? ನಾವು ಕೊಟ್ಟ ಮಾತು ಉಳಿಸಿಕೊಳ್ಳುವ ಕೆಲಸ ಮಾಡುತ್ತಿದ್ದೇವೆ. ಬೆಲೆ ಏರಿಕೆ ಮಧ್ಯೆ ಈ ಯೋಜನೆಗಳು ನಿಮಗೆ ಆಸರೆಯಾಗಿವೆ” ಎಂದು ತಿಳಿಸಿದರು.

“ನಾವು ಈಗ ಮಕ್ಕಳಿಗೆ ಉದ್ಯೋಗ ಕಲ್ಪಿಸಬೇಕು ಎಂದು ಖಾಸಗಿ ಉದ್ಯೋಗ ವಿನಿಮಯ ವ್ಯವಸ್ಥೆ ಜಾರಿಗೆ ತರಲು ಮುಂದಾಗಿದ್ದೇವೆ. ಬೆಂಗಳೂರು ನಗರದಲ್ಲಿ 1.40 ಕೋಟಿ ಜನಸಂಖ್ಯೆ ಇದ್ದು, ಇದರಲ್ಲಿ 50 ಲಕ್ಷ ಜನ ಹೊರಗಿನಿಂದ ಬಂದವರಾಗಿದ್ದಾರೆ. ನಮ್ಮ ಸರ್ಕಾರ 200 ಯೂನಿಟ್ ವರೆಗೂ ಉಚಿತ ವಿದ್ಯುತ್ ನೀಡುತ್ತಿದೆ. ನಾವು ಇದಕ್ಕಾಗಿ 10 ಸಾವಿರ ಕೋಟಿ ವೆಚ್ಚ ಮಾಡುತ್ತಿದ್ದೇವೆ. ರೈತರ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ನೀಡಲು ವಾರ್ಷಿಕ 20 ಸಾವಿರ ಕೋಟಿ ವೆಚ್ಚ ಮಾಡಲಾಗುತ್ತಿದೆ. ಗೃಹಲಕ್ಷ್ಮಿ ಯೋಜನೆ ಮೂಲಕ 1.21 ಕೋಟಿ ಮಹಿಳೆಯರಿಗೆ ಮಾಸಿಕ 2000 ಹಣ ನೀಡಲಾಗುತ್ತಿದೆ. ಶಕ್ತಿ ಯೋಜನೆ ಮೂಲಕ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಅನ್ನಭಾಗ್ಯ ಯೋಜನೆ ಮೂಲಕ 10 ಕೆ.ಜಿ ಅಕ್ಕಿ ನೀಡುತ್ತಿದ್ದೇವೆ. ಬಿಜೆಪಿ ಹಾಗೂ ಜೆಡಿಎಸ್ ನವರಿಗೆ ಇಂತಹ ಒಂದು ಸಾಕ್ಷಿಗುಡ್ಡೆ ಉದಾಹರಣೆ ನೀಡುವ ಶಕ್ತಿ ಇದೆಯೇ? ದೇವರು ವರ, ಶಾಪ ನೀಡುವುದಿಲ್ಲ. ಕೇವಲ ಅವಕಾಶ ನೀಡುತ್ತಾನೆ. ಕೊಟ್ಟ ಅವಕಾಶದಲ್ಲಿ ನಾವು ಏನು ಮಾಡುತ್ತೇವೆ ಎಂಬುದು ಮುಖ್ಯ. ರಾಮಲಿಂಗಾ ರೆಡ್ಡಿ ಅವರಿಗೆ ಮುಜರಾಯಿ ಇಲಾಖೆ ಅವಕಾಶ ಸಿಕ್ಕಿತು. ಅವರು ನಿಮ್ಮ ಹೃದಯ ಗೆದ್ದಿದ್ದು ಹೇಗೆ?” ಎಂದರು.

“ನೀವು ನಿಮ್ಮನ್ನು ನಿಯಂತ್ರಿಸಬೇಕಾದರೆ, ನಿಮ್ಮ ಮಿದುಳನ್ನು ಉಪಯೋಗಿಸು, ನೀವು ಬೇರೆಯವರನ್ನು ನಿಯಂತ್ರಿಸಬೇಕಾದರೆ, ಹೃದಯವನ್ನು ಉಪಯೋಗಿಸು ಎಂದು ಮಹಾತ್ಮಾ ಗಾಂಧಿ ಅವರು ಹೇಳಿದ್ದಾರೆ. ಅದೇ ರೀತಿ ರಾಮಲಿಂಗಾ ರೆಡ್ಡಿ ಅವರು ನಿಮ್ಮ ಹೃದಯನ್ನು ಗೆದ್ದಿದ್ದಾರೆ. ನೀವು ಸುಮ್ಮನೆ ಅವರ ಪರವಾಗಿ ಇದ್ದೀರಾ? ಅವರು ನಿಮಗೆ ಸಹಾಯ ಮಾಡಿರುವುದಕ್ಕೆ ಅಲ್ಲವೇ ನೀವು ಅವರ ಪರವಾಗಿ ನಿಂತಿರುವುದು” ಎಂದರು.

“ಧರ್ಮಗಳು ಪ್ರತಿಯೊಬ್ಬರ ವೈಯಕ್ತಿಕ ವಿಚಾರ. ನೀವು ನಾವು ಜನಿಸುವಾಗ ಇಂತಹುದೇ ಜಾತಿ ಧರ್ಮದಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕುವುದಿಲ್ಲ. ಅನೇಕರು ಧರ್ಮ ಬೇಡ ಎನ್ನುತ್ತಾರೆ. ಮಗು ಹುಟ್ಟಿದಾಗಿನಿಂತ ನಡೆಯುವ ಪದ್ಧತಿ, ಸತ್ತ ಮೇಲೆ ನಡೆಯುವ ಪದ್ಧತಿಯನ್ನು ನಿರ್ಧಾರ ಮಾಡುವುದು ಇದೇ ಧರ್ಮ. ಧರ್ಮವನ್ನು ಬಿಟ್ಟು ನಾವು ಬದುಕಲು ಸಾಧ್ಯವಿಲ್ಲ. ಅರ್ಚಕರಿಗೆ ಜಾತಿ ಇಲ್ಲ, ಧರ್ಮಕ್ಕೆ ಭೇದವಿಲ್ಲ. ಬಡವ ಶ್ರೀಮಂತನೆಂಬ ವ್ಯತ್ಯಾಸವಿಲ್ಲ. ಈ ಸಂದೇಶ ಸಾರುವವರು ಪುರೋಹಿತರು. ನಿಮ್ಮಲ್ಲಿರುವ ತಾಳ್ಮೆ, ಪೂಜೆ, ಸಂಸ್ಕಾರ ನೋಡಿ ನಾನು ಧನ್ಯನಾಗಿದ್ದೇನೆ. ನಿಮ್ಮ ಮಂತ್ರ, ಆರತಿ, ಗಂಟೆ ನಾದ, ತೀರ್ಥ ಪ್ರಸಾದ ಎಲ್ಲವೂ ಒಂದೇ. ನಾನು ಮಠವೊಂದಕ್ಕೆ ಹೋಗಿದ್ದಾಗ ಅಲ್ಲಿ ಬಿದಿರಿತ್ತು, ಆ ಬಿದಿರಿಗೆ ತನ್ನಿಂದ ನಾದ ಹೊರಹೊಮ್ಮುತ್ತದೆ ಎಂದು ತಿಳಿದಿಲ್ಲ. ಆ ಬಿದಿರು ಕೃಷ್ಣನ ಕೊಳಲಾಗುತ್ತದೆ. ಕೃಷ್ಣ ಆ ಕೊಳಲಿನಿಂದ ಗೋವುಗಳು, ಆತ್ಮೀಯರನ್ನು ಸೆಳೆಯುತ್ತಿದ್ದ. ಅಂತಹ ಶಕ್ತಿ ಕೊಳಲಲ್ಲಿ ಇತ್ತು. ತಮಟೆ, ತಬಲದ ನಾದ ಬಂದಿದ್ದು ಚರ್ಮದಿಂದ” ಎಂದು ತಿಳಿಸಿದರು.

“ದ್ವಾರಕನಾಥ್ ಅವರು ನನ್ನ ರಾಜಕೀಯ ಆರಂಭಿಕ ದಿನಗಳಲ್ಲೇ ನೀನು ಅಲ್ಪಾವಧಿಗೆ ಮಂತ್ರಿಯಾಗುತ್ತೀಯಾ ನಂತರ ಪಕ್ಷದ ಟಿಕೆಟ್ ಸಿಗುವುದಿಲ್ಲ ಎಂದು ನನಗೆ ಮುಂಚೆಯೇ ಹೇಳಿದ್ದರು. ಅವರು ಹೇಳಿದಂತೆ ನಾನು ಮಂತ್ರಿಯಾದ ಬಳಿಕ ನನಗೆ ಪಕ್ಷದ ಟಿಕೆಟ್ ಸಿಗಲಿಲ್ಲ. ನಿಮ್ಮ ಅಧ್ಯಕ್ಷರು ನಿಮ್ಮ ಪರವಾಗಿ ಸನ್ಮಾನ ಮಾಡಿದ್ದಾರೆ. ಈ ವೇಳೆ ನೀವು ಹಾಕಿದ ಹಾರ ಬಲು ಭಾರ. ಹೆಚ್ಚಿನ ಜವಾಬ್ದಾರಿ ತಂದಿದೆ. ಅವರಿಗೆ ಮುಜರಾಯಿ ಇಲಾಖೆ ನೀಡಿದ್ದೇ ನಾನು. ಸುಧಾಕರ್ ಅವರಿಗೆ ಈ ಖಾತೆ ಸಿಕ್ಕಿತ್ತು. ನಾನು ಅವರೊಂದಿಗೆ ಮಾತನಾಡಿ ರಾಮಲಿಂಗಾ ರೆಡ್ಡಿ ಅವರಿಗೆ ಈ ಖಾತೆಯನ್ನು ಕೊಡಿಸಿದೆ. ಅವರು ಈ ಖಾತೆಯನ್ನು ಅವರು ಸಮರ್ಥವಾಗಿ ನಿಭಾಯಿಸಿದ್ದಾರೆ. ಕೇವಲ ನಿಮ್ಮ ಮಾತು ಮಾತ್ರವಲ್ಲ, ದೇಶದ ಯಾವುದೇ ದೇವಾಲಯಕ್ಕೆ ಹೋದರೂ ಮುಜರಾಯಿ ಇಲಾಖೆಯಲ್ಲಿ ಮಾಡಲಾಗಿರುವ ಕೆಲಸಗಳು ಬೇರೆ ಯಾವ ಸಂದರ್ಭದಲ್ಲಿ ಮಾಡಿಲ್ಲ ಎಂದು ಅವರೇ ತಿಳಿಸುತ್ತಾರೆ. ಅವರು ಈ ರೀತಿ ಕೆಲಸ ಮಾಡಿ ನಿಮ್ಮ ಹೃದಯ ಗೆದ್ದಿದಾರೆ” ಎಂದು ತಿಳಿಸಿದರು.

“ದೇವರಲ್ಲಿ ತಾರತಮ್ಯವಿದೆ. ದೇವರು ಬಲಿ ಪಡೆಯುವಾಗ ಆನೆ, ಸಿಂಹ, ಹುಲಿಯನ್ನು ಬಲಿ ಪಡೆಯದೇ, ಕುರಿ, ಕೋಳಿ ಹೆಚ್ಚೆಂದರೆ ಕೋಣವನ್ನು ಮಾತ್ರ ಬಲಿ ಪಡೆಯುತ್ತದೆ. ಅದೇ ರೀತಿ ನೀವು ಬಡ ದೇವಾಲಯಗಳ ಅರ್ಚಕರು ಇದ್ದೀರಿ. ದೊಡ್ಡವರೆಲ್ಲರೂ ಮೇಲೆ ಕೂತಿದ್ದಾರೆ. ನೋವು ಇರುವುದು ನಿಮಗೆ ಮಾತ್ರ. ಯಾವ ಧರ್ಮವೂ ಬೇರೆಯವರನ್ನು ದ್ವೇಷ ಮಾಡಿ ಎಂದು ಹೇಳುವುದಿಲ್ಲ. ನಾವು ಎಲ್ಲರನ್ನೂ ಪೂಜಿಸುತ್ತೇವೆ. ಇದು ಡಿ ಕೆ ಶಿವಕುಮಾರ್ ಸರ್ಕಾರ ಅಲ್ಲ. ಇದು ನಿಮ್ಮ ಸರ್ಕಾರ. ನೀವು ನಿಮ್ಮ ಮನೆ ಕುಟುಂಬಗಳನ್ನು ಕಾಪಾಡಿಕೊಂಡಂತೆ ಕಾಪಾಡಿಕೊಳ್ಳಿ. ನಾವು ನೀವೆಲ್ಲರೂ ಒಂದು ಕುಟುಂಬವಾಗಿ ಕೆಲಸ ಮಾಡೋಣ, ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ, ನಾವು ನಿಮ್ಮ ಸೇವೆ ಮಾಡಲು ಬದ್ಧರಾಗಿದ್ದೇವೆ” ಎಂದು ಭರವಸೆ ನೀಡಿದರು.

Comments

Leave a Comment

Prev Post ಕರ್ನಾಟಕ ಸರ್ಕಾರದ ಹೊಸ ಆದೇಶ: e-PAR Application ಮೂಲಕ ಆಸ್ತಿ ಮತ್ತು ಹೊಣೆಗಾರಿಕೆ ವಿವರ ಕಡ್ಡಾಯ

ವಿಮಾನ ನಿಲ್ದಾಣ: ಬಳ್ಳಾರಿ, ವಿಜಯನಗರ, ಕೊಪ್ಪಳ ಜಿಲ್ಲೆಗಳ ಜನಪ್ರತಿನಿಧಿಗಳ ಜತೆ ಚರ್ಚಿಸಿ ತೀರ್ಮಾನ

ಸಿಎಂ ನೇತೃತ್ವದಲ್ಲಿ ಸಭೆ ಮಾಡಿ ಅಂತಿಮ ನಿರ್ಧಾರ: ಎಂ ಬಿ ಪಾಟೀಲ

ಇನ್ನೆರಡು ತಿಂಗಳಲ್ಲಿ ಕಳೆದೆರಡು ಸಾಲಿನ ಉದ್ಯೋಗಿನಿ‌ ಯೋಜನೆಯ ಸಹಾಯ ಧನ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ತೇರದಾಳ ಶಾಸಕ ಸಿದ್ದು ಸವದಿ ಕೇಳಿದ ಪ್ರಶ್ನೆಗೆ ಸಚಿವರ ಉತ್ತರ

ಎಲ್ಲರಿಗೂ ರೋಗ ನಿರೋಧಕ ಲಸಿಕೆ: ಮೊಟ್ಟ ಮೊದಲಿಗೆ ಸ್ಪರ್ಶ್‌ ಆಸ್ಪತ್ರೆಯಲ್ಲಿ ಆರಂಭ

ಎಲ್ಲರಿಗೂ ರೋಗ ನಿರೋಧಕ ಲಸಿಕೆ: ಮೊಟ್ಟ ಮೊದಲಿಗೆ ಸ್ಪರ್ಶ್‌ ಆಸ್ಪತ್ರೆಯಲ್ಲಿ ಆರಂಭ ಮಕ್ಕಳಿಂದ ವಯಸ್ಕರವರೆಗೆ ಎಲ್ಲರಿಗೂ ಲಸಿಕೆ!

ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಭೇಟಿಯಾದ ಆಸ್ಟ್ರೇಲಿಯಾ ನಿಯೋಗ

ಅಕ್ಕಪಡೆ, ಗೃಹಲಕ್ಷ್ಮಿ, ಶಕ್ತಿ ಯೋಜನೆಗಳ ಮಾಹಿತಿ ಹಂಚಿಕೊಂಡ ಸಚಿವರು

ಅತಿ ಹೆಚ್ಚು ಸಾಲ ಮಾಡಿ ಜನರನ್ನು ಸಾಲದ ಸುಳಿಗೆ ಸಿಲುಕಿ ಹಾಕಿಸಿರುವುದು ಸುಳ್ಳಲ್ಲ ಆರ್ಥಿಕ, ಬೌದ್ಧಿಕ ದಿವಾಳಿತನದ ಪ್ರದರ್ಶನ: ವಿಜಯೇಂದ್ರ

ಅತಿ ಹೆಚ್ಚು ಸಾಲ ಮಾಡಿ ಜನರನ್ನು ಸಾಲದ ಸುಳಿಗೆ ಸಿಲುಕಿ ಹಾಕಿಸಿರುವುದು ಸುಳ್ಳಲ್ಲ ಆರ್ಥಿಕ, ಬೌದ್ಧಿಕ ದಿವಾಳಿತನದ ಪ್ರದರ್ಶನ: ವಿಜಯೇಂದ್ರ

ಮೇ ವೇಳೆಗೆ ತುಂಗಭದ್ರಾ ಅಣೆಕಟ್ಟು ಎಲ್ಲಾ ಗೇಟ್ ಗಳ ಬದಲಾವಣೆ: ಡಿಸಿಎಂ ಡಿ.ಕೆ. ಶಿವಕುಮಾರ್

ಮೇ ವೇಳೆಗೆ ತುಂಗಭದ್ರಾ ಅಣೆಕಟ್ಟು ಎಲ್ಲಾ ಗೇಟ್ ಗಳ ಬದಲಾವಣೆ: ಡಿಸಿಎಂ ಡಿ.ಕೆ. ಶಿವಕುಮಾರ್

Read all News