PRABHAVAA.COM

ರಾಜ್ಯದ ಸಿಎಸ್ಆರ್ ನಿಧಿಯ ಪ್ರತಿ ಪೈಸೆಯೂ ಪ್ರಾಥಮಿಕ ಶಿಕ್ಷಣಕ್ಕೆ ವಿನಿಯೋಗ: ಸಿಎಂ ಡಿ ಕೆ ಶಿವಕುಮಾರ್

Bengaluru Urban:

Font size:

ಸರ್ಕಾರಿ ಶಾಲೆಗಳನ್ನು ನಗರದ ಖಾಸಗಿ ಶಾಲೆಗಳು ದತ್ತು ಪಡೆಬೇಕು, ಪಡೆಯದಿದ್ದರೆ ಆ ಶಾಲೆಗಳ ಶುಲ್ಕಕ್ಕೆ ಮಿತಿ

ರಾಜ್ಯದ ಸಿಎಸ್ಆರ್ ನಿಧಿಯ ಪ್ರತಿ ಪೈಸೆಯೂ ಪ್ರಾಥಮಿಕ ಶಿಕ್ಷಣಕ್ಕೆ ವಿನಿಯೋಗ: ಸಿಎಂ ಡಿ ಕೆ ಶಿವಕುಮಾರ್

ಸರ್ಕಾರಿ ಶಾಲೆಗಳನ್ನು ನಗರದ ಖಾಸಗಿ ಶಾಲೆಗಳು ದತ್ತು ಪಡೆಬೇಕು, ಪಡೆಯದಿದ್ದರೆ ಆ ಶಾಲೆಗಳ ಶುಲ್ಕಕ್ಕೆ ಮಿತಿ

ಶಿಕ್ಷಣಕ್ಕಾಗಿ ಹಳ್ಳಿಗಳಿಂದ ನಗರಕ್ಕೆ ವಲಸೆ

ರಾಜ್ಯದ ಪ್ರಗತಿಯಲ್ಲಿ ಎಫ್ ಕೆಸಿಸಿಐ ಕೊಡುಗೆ

ಉದ್ಯೋಗದಾತರ ಹಿತ ಕಾಯಲು ಬದ್ಧ

ಬೆಂಗಳೂರು, ಜು.23:

“ರಾಜ್ಯದಲ್ಲಿ ಸುಮಾರು 10 ಸಾವಿರ ಕೋಟಿಯಷ್ಟು ಸಿಎಸ್ಆರ್ ನಿಧಿ ಇದ್ದು, ಇದರ ಪ್ರತಿಯೊಂದು ಪೈಸೆ ಗ್ರಾಮೀಣ ಭಾಗದ ಪ್ರಾಥಮಿಕ ಶಿಕ್ಷಣಕ್ಕೆ ವಿನಿಯೋಗವಾಗಬೇಕು” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಕರೆ ನೀಡಿದರು.

ಕೆ.ಜಿ ರಸ್ತೆಯಲ್ಲಿರುವ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್ ಕೆಸಿಸಿಐ)ಯ ಎಂ.ವಿ ಸಭಾಂಗಣದಲ್ಲಿ ಎಫ್ ಕೆಸಿಸಿಐ ಜಾಗತಿಕ ಸಿಎಸ್ಆರ್ ಮತ್ತು ಸುಸ್ಥಿರ ಅಭಿವೃದ್ಧಿ ಶೃಂಗಸಭೆಯನ್ನು ಶಿವಕುಮಾರ್ ಅವರು ಗುರುವಾರ ಉದ್ಘಾಟಿಸಿ ಮಾತನಾಡಿದರು.

“ನಾವು ಅಧಿಕಾರಕ್ಕೆ ಬಂದ ಬಳಿಕ ನಮ್ಮ ಸಚಿವರ ಜೊತೆ ಚರ್ಚೆ ಮಾಡಿ, ಸಿಎಸ್ಆರ್ ನಿಧಿಯನ್ನು ಶಿಕ್ಷಣ ಕ್ಷೇತ್ರಕ್ಕೆ ಬಳಸಲು ತೀರ್ಮಾನಿಸಿದ್ದೇವೆ. ಕೆಲವರು ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಆದರೆ 50% ಉದ್ಯಮಿಗಳು ಈ ಸಿಎಸ್ಆರ್ ನಿಧಿ ದುರುಪಯೋಗ ಮಾಡುತ್ತಿದ್ದಾರೆ. ಹೀಗಾಗಿ ಪ್ರತ್ಯೇಕ ಅಧಿಕಾರಿಗಳ ತಂಡ ನೇಮಿಸಿ ನಿಧಿಯನ್ನು ಎಲ್ಲೆಲ್ಲಿ ಬಳಸಲಾಗುತ್ತಿದೆ ಎಂದು ಪರಿಶೀಲನೆ ಮಾಡಲಾಗುವುದು” ಎಂದು ತಿಳಿಸಿದರು.

“ಗ್ರಾಮೀಣ ಭಾಗದ ಮಕ್ಕಳಿಗೆ ನಗರ ಪ್ರದೇಶದಂತೆ ಗುಣಮಟ್ಟದ ಶಿಕ್ಷಣ ಸಿಗಬೇಕು. ಹೀಗಾಗಿ ನಾವು ನೀತಿ ರೂಪಿಸುತ್ತಿದ್ದು, ಎಲ್ಲರೂ ಸಿಎಸ್ಆರ್ ನಿಧಿಯನ್ನು ಪ್ರಾಥಮಿಕ ಶಿಕ್ಷಣಕ್ಕೆ ವಿನಿಯೋಗಿಸಬೇಕು. ಸಿಎಸ್ಆರ್ ನಿಧಿಯಲ್ಲಿ ಶಾಲೆಗಳನ್ನು ಗ್ರಾಮೀಣ ಭಾಗದಲ್ಲಿ ನಿರ್ಮಾಣ ಮಾಡಬೇಕು. ನಮ್ಮ ಸರ್ಕಾರ ರಾಜ್ಯದಲ್ಲಿ 2 ಸಾವಿರ ಜಾಗಗಳನ್ನು ಗುರುತಿಸಿದ್ದು, ಪ್ರತಿ ಕಾರ್ಪೊರೇಟ್ ಸಂಸ್ಥೆ ಈ ಜಾಗಗಳಲ್ಲಿ ಅತ್ಯುತ್ತಮ ಮೂಲಸೌಕರ್ಯವಿರುವ ಶಾಲೆಗಳನ್ನು ನಿರ್ಮಾಣ ಮಾಡಬೇಕು. ನೀವು ನಮಗೆ ಹಣ ನೀಡಬೇಡಿ, ನೀವೇ ಹಣ ಹಾಕಿ ಶಾಲೆ ನಿರ್ಮಿಸಿ. ಶಾಲೆಗೆ ನಿಮ್ಮ ಸಂಸ್ಥೆಯ ಹೆಸರನ್ನು ಸೇರಿಸಿ. ಟೊಯೋಟಾ ಬೆಂಗಳೂರಿನಲ್ಲಿ 7-8 ಶಾಲೆಗಳನ್ನು ನಿರ್ಮಿಸುತ್ತಿವೆ. ಟೋಯೋಟಾದವರು ಪ್ರತಿ ಶಾಲೆಗೆ 10-15 ಕೋಟಿ ಹಣ ವೆಚ್ಚ ಮಾಡಿ ನಿರ್ಮಿಸುತ್ತಿದ್ದಾರೆ ಉಪಆಯುಕ್ತರು ನಿಮಗೆ ಜಾಗ ನೀಡುತ್ತಾರೆ. ಆ ಜಾಗದಲ್ಲಿ ನೀವು ಶಾಲೆ ನಿರ್ಮಿಸಬಹುದು. ನಿಮಗೆ ಒಬ್ಬರಿಂದಲೇ ಸಂಪೂರ್ಣ ಶಾಲೆಗಳನ್ನು ನಿರ್ಮಾಣ ಮಾಡಲು ಸಾಧ್ಯವಾಗದಿದ್ದರೆ, ಶಾಲೆಯ ಕೆಲವೊಂದು ಭಾಗವನ್ನು ನಿರ್ಮಾಣ ಮಾಡಲು ಅವಕಾಶ ಮಾಡಿಕೊಡಲಾಗುವುದು. ಇದಕ್ಕಾಗಿಯೇ ಒಂದು ವೇದಿಕೆ ರೂಪಿಸಲಾಗುವುದು” ಎಂದರು.

ಸರ್ಕಾರಿ ಶಾಲೆಗಳನ್ನು ನಗರದ ಖಾಸಗಿ ಶಾಲೆಗಳು ದತ್ತು ಪಡೆಬೇಕು, ಪಡೆಯದಿದ್ದರೆ ಆ ಶಾಲೆಗಳಿಗ ಶುಲ್ಕಕ್ಕೆ ಮಿತಿ ಹಾಕಲಾಗುವುದು

“ನಗರ ಪ್ರದೇಶಗಳಲ್ಲಿ 50 ಸಾವಿರಕ್ಕಿಂತ ಹೆಚ್ಚು ಶುಲ್ಕ ಪಡೆಯುತ್ತಿರುವ ಶಾಲೆಗಳು ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳನ್ನು ಕಡ್ಡಾಯವಾಗಿ ದತ್ತು ಪಡೆಯಬೇಕು. ಒಂದು ವೇಳೆ ಈ ಶಾಲೆಗಳು ದತ್ತು ಪಡೆಯದೇ ಇದ್ದರೆ ಈ ಶಾಲೆಗಳ ಶುಲ್ಕಗಳಿಗೆ ಮಿತಿ ಹಾಕಲಾಗುವುದು. ಈ ಶಾಲೆಗಳು ಸರ್ಕಾರಿ ಶಾಲೆಗಳ ಕಟ್ಟಡ ನಿರ್ಮಾಣಕ್ಕೆ ಹಣ ಹಾಕುವುದು ಬೇಡ, ಅವರು ಕೇವಲ ಬೋಧಕರನ್ನು ನಿಯೋಜಿಸಿದರೆ ಸಾಕು. ನಮ್ಮ ರಾಜ್ಯದಲ್ಲಿ ಶಿಕ್ಷಕರ ಕೊರತೆ ಇದೆ. ಸರ್ಕಾರಿ ಶಾಲಾ ಶಿಕ್ಷಕರಿಗೆ ನಾವು ಖಾಸಗಿ ಶಾಲೆಗಳಿಗಿಂತ ಉತ್ತಮ ವೇತನ ನೀಡುತ್ತಿದ್ದೇವೆ. ನೀವೆಲ್ಲರೂ ಇದರ ಭಾಗವಾಗಬೇಕು. ನಾನು ಕೂಡ ಮೂರು ಶಾಲೆ ನಡೆಸುತ್ತಿದ್ದೇನೆ. ನಮ್ಮ ಶಾಲೆಗಳು ಕೂಡ ಗ್ರಾಮೀಣ ಭಾಗದ ಸರ್ಕಾರಿ ಶಾಲೆ ದತ್ತು ಪಡೆಯಬೇಕು ಎಂದು ನನ್ನ ಮಗಳಿಗೆ ತಿಳಿಸಿದ್ದೇನೆ. ಆಕೆ ಮೂರು ಶಾಲೆ ದತ್ತು ಪಡೆದಿದ್ದಾರೆ” ಎಂದು ತಿಳಿಸಿದರು.

“ಸಿಎಸ್ಆರ್ ನಿಧಿಯನ್ನು ಮೊದಲು ಪ್ರಾಥಮಿಕ ಶಿಕ್ಷಣಕ್ಕೆ ವಿನಿಯೋಗಿಸಿ, ನಂತರ ಆರೋಗ್ಯ ಕ್ಷೇತ್ರದತ್ತ ಗಮನಹರಿಸಬಹುದು. ನಾವು ಈ ವಿಚಾರವಾಗಿ ನೀತಿ ರೂಪಿಸಿ, ಎಲ್ಲಾ ಕೈಗಾರಿಕೋದ್ಯಮಿಗಳ ಜೊತೆ ಚರ್ಚೆ ಮಾಡಲಾಗುವುದು. ಸಧ್ಯದಲ್ಲೇ ನಾನು ವಿವಿಧ ಕ್ಷೇತ್ರಗಳ ಉದ್ಯಮಗಳ ಜೊತೆ ಸಭೆ ಮಾಡಲಿದ್ದೇನೆಇದರಿಂದ ಶಿಕ್ಷಣಕ್ಕೆ ನಗರಗಳತ್ತ ವಲಸೆ ಹೋಗುವುದನ್ನು ತಪ್ಪಿಸಬಹುದು. ನಮ್ಮ ಹಳ್ಳಿಯ ಮಕ್ಕಳು ಕೇವಲ ಬೆಂಗಳೂರು ಅಥವಾ ಇತರೆ ಭಾಗದ ಮಕ್ಕಳ ಜೊತೆ ಸ್ಪರ್ಧೆ ಮಾಡುತ್ತಿಲ್ಲ. ನಮ್ಮ ಮಕ್ಕಳು ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ” ಎಂದರು.

ರಾಜ್ಯದ ಪ್ರಗತಿಯಲ್ಲಿ ಎಫ್ ಕೆಸಿಸಿಐ ಕೊಡುಗೆ

“ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್ ಕೆಸಿಸಿಐ) ಮಹಾರಾಜರ ಕಾಲದಿಂದ ಇಂದಿನವರೆಗೂ ಎಲ್ಲರನ್ನು ಒಟ್ಟಾಗಿ ಮುನ್ನಡೆಸಿಕೊಂಡು ಬಂದು ಅತ್ಯುತ್ತಮ ಕೆಲಸ ಮಾಡುತ್ತಿದೆ. ಜತೆಗೂಡುವುದು ಆರಂಭ, ಜತೆಗೂಡಿ ಆಲೋಚಿಸುವುದು ಪ್ರಗತಿ, ಜತೆಗೂಡಿ ಕೆಲಸ ಮಾಡುವುದು ಯಶಸ್ಸು ಎಂದು ನಾನು ಹೇಳುತ್ತಿರುತ್ತೇನೆ. ಎಫ್ ಕೆಸಿಸಿಐ ಕರ್ನಾಟಕ ಹಾಗೂ ಭಾರತದ ಪ್ರಗತಿಗೆ ತನ್ನದೇ ಆದ ಕೊಡುಗೆ ನೀಡಿದೆ. ಪ್ರತಿ ಕ್ಷೇತ್ರದಲ್ಲೂ ತನ್ನ ಸೇವೆ ಸಲ್ಲಿಸಿದ್ದು, ಕರ್ನಾಟಕದ ಯಶಸ್ಸು ಈ ಸಂಸ್ಥೆಯ ಜೊತೆಯಲ್ಲಿದೆ. ಇಂದು ಐಟಿ ಬಿಟಿ, ಎಐ ಕ್ಷೇತ್ರಗಳು ಬಂದಿವೆ. ಆದರೆ ಇದ್ಯಾವುದೂ ಇಲ್ಲದಿರುವಾಗಲೂ ಎಫ್ ಕೆಸಿಸಿಐ ಕೆಲಸ ಮಾಡಿಕೊಂಡು ಬಂದಿದೆ. ರಾಜ್ಯವನ್ನು ಹೀಗೆ ಪ್ರಗತಿಯ ಹಾದಿಯಲ್ಲಿ ಮುನ್ನಡೆಸಿಕೊಂಡು ಹೋಗಬೇಕು” ಎಂದು ತಿಳಿಸಿದರು.

“ಇಂದು ನಾವು ಸಿಎಸ್ಆರ್ ವಿಚಾರವಾಗಿ ಚರ್ಚೆ ಮಾಡುತ್ತಿದ್ದೇವೆ. ಈ ಸಂಸ್ಥೆ ಗ್ಲೋಬಲ್ ಸಿಎಸ್ಆರ್ ವಿಚಾರ ಪ್ರಸ್ತಾಪಿಸಿದೆ. ಈ ಸಂದರ್ಭದಲ್ಲಿ ನಾನು ಪ್ರಣಬ್ ಮುಖರ್ಜಿ ಅವರನ್ನು ಸ್ಮರಿಸಲೇಬೇಕು. ಅವರು ಆರ್ಥಿಕ ಸಚಿವರಾಗಿದ್ದಾಗ ಈ ಸಿಎಸ್ಆರ್ ಅನ್ನು ಜಾರಿಗೆ ತಂದರು. ಪರಿಣಾಮ ಇಂದು ಸಿಎಸ್ಆರ್ ಸೇವೆಯಾಗಿ ಉಳಿದಿಲ್ಲ. ಇದು ಸುಸ್ಥಿರ ಅಭಿವೃದ್ಧಿಗೆ ತಂತ್ರಗಾರಿಕಾ ಹೂಡಿಕೆಯಾಗಿದೆ. ಲಾಭ ಮಾಡಿ ಬೆಳವಣಿಗೆ ಕಂಡಿದ್ದವರು ಸಮಾಜಕ್ಕಾಗಿ ತಮ್ಮ ಲಾಭಾಂಶವನ್ನು ಹಂಚಿಕೊಳ್ಳುವುದು ಸಿಎಸ್ಆರ್ ಉದ್ದೇಶವಾಗಿದೆ” ಎಂದರು.

ಶಿಕ್ಷಣಕ್ಕಾಗಿ ಹಳ್ಳಿಗಳಿಂದ ನಗರಕ್ಕೆ ವಲಸೆ

“ನಾನು ಹಳ್ಳಿಯಿಂದ ನಗರಕ್ಕೆ ವಿದ್ಯಾಭ್ಯಾಸಕ್ಕಾಗಿ ಬಂದವನು. ನನಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ನಮ್ಮ ಪೋಷಕರು ನನ್ನನ್ನು ಬೆಂಗಳೂರಿಗೆ ಕಳುಹಿಸಿದರು. ನಾನು ಇಲ್ಲೇ ವಿದ್ಯಾರ್ಥಿಯಾಗಿದ್ದಾಗಿನಿಂದ ರಾಜಕಾರಣದಲ್ಲಿ ತೊಡಗಿಕೊಂಡು ಮತ್ತೆ ಊರಿಗೆ ವಾಪಸ್ ಹೋಗಲೇ ಇಲ್ಲ. ಇದು ಕೇವಲ ನನ್ನ ಕಥೆ ಮಾತ್ರವಲ್ಲ. ನಗರ ಪ್ರದೇಶದ ಎಲ್ಲರ ಪರಿಸ್ಥಿತಿಯಾಗಿದೆ. ಇಂದು ನಗರಗಳ ಜನಸಂಖ್ಯೆ 43%ನಷ್ಟಿದೆ. ಈ ಹಿಂದೆ 31% ಇತ್ತು. ಕೃಷ್ಣ ಅವರ ಸರ್ಕಾರದಲ್ಲಿ ನಾನು ನಗರಾಭಿವೃದ್ಧಿ ಸಚಿವನಾಗಿದ್ದಾಗ ಬೆಂಗಳೂರಿನ ಜನಸಂಖ್ಯೆ 70 ಲಕ್ಷ ಇತ್ತು. ಇಂದು 1.40 ಕೋಟಿಯಷ್ಟಾಗಿದೆ. 1.35 ಕೋಟಿ ವಾಹನಗಳು ಬೆಂಗಳೂರು ರಸ್ತೆಗಳಲ್ಲಿವೆ. ಇಡೀ ವಿಶ್ವದಾದ್ಯಂತ ಜನ ಬೆಂಗಳೂರಿನತ್ತ ಮುಖ ಮಾಡಿದ್ದಾರೆ” ಎಂದು ತಿಳಿಸಿದರು.

ನಮ್ಮ ರಾಜ್ಯದ ಮಾನವ ಸಂಪನ್ಮೂಲ ಬೇರೆ ಎಲ್ಲೂ ಇಲ್ಲ:

“ಇಲ್ಲಿನ ಮಾನವ ಸಂಪನ್ಮೂಲ, ಇಲ್ಲಿನ ಶಿಕ್ಷಣದ ಗುಣಮಟ್ಟ ದೇಶದಲ್ಲಿ ಬೇರೆಲ್ಲೂ ಇಲ್ಲ. ನಮ್ಮ ದೇಶದಲ್ಲಿ 140 ಅಂತಾರಾಷ್ಟ್ರೀಯ ಶಾಲೆಗಳಿದ್ದು, ನಮ್ಮ ರಾಜ್ಯದಲ್ಲೇ 38 ಅಂತಾರಾಷ್ಟ್ರೀಯ ಶಾಲೆಗಳಿವೆ. ನಮ್ಮಲ್ಲಿರುವ ಪ್ರಾಥಮಿಕ ಶಿಕ್ಷಣ ಅತ್ಯುತ್ತಮವಾಗಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಶಂಕುಸ್ಥಾಪನೆ ಕಾರ್ಯಕ್ರಮದ ವೇಳೆ ಅಂದಿನ ಪ್ರಧಾನಮಂತ್ರಿಗಳಾದ ವಾಜಪೇಯಿ ಅವರು, ಇಷ್ಟು ದಿನ ವಿಶ್ವದ ನಾಯಕರುಗಳು ಮೊದಲು ದೆಹಲಿಗೆ ಬಂದು ನಂತರ ದೇಶದ ಇತರೆ ನಗರಗಳಿಗೆ ಭೇಟಿ ನೀಡುತ್ತಿದ್ದರು. ಈಗ ಕಾಲ ಬದಲಾಗಿದೆ. ವಿಶ್ವದ ನಾಯಕರು ಈಗ ಮೊದಲು ಬೆಂಗಳೂರಿಗೆ ಬಂದು ನಂತರ ದೇಶದ ಇತರ ನಗರಗಳಿಗೆ ಹೋಗುತ್ತಾರೆ ಎಂದು ಹೇಳಿದ್ದರು. ಬೆಂಗಳೂರಿನಲ್ಲಿರುವ ಪ್ರತಿಭೆಗಳು ಈ ನಗರವನ್ನು ಜಾಗತಿಕ ನಗರವನ್ನಾಗಿ ರೂಪಿಸಿದೆ. ನಾವು 70ರ ದಶಕದಲ್ಲಿ ಎಲೆಕ್ಟ್ರಾನಿಕ್ ಸಿಟಿ ಮಾಡಿದರೂ ಈಗ ಆ ಪ್ರದೇಶ ಹೇಗಾಗಿದೆ ನೋಡಿ. ಕೇವಲ ಐಟಿ ಮಾತ್ರವಲ್ಲ, ಉತ್ಪಾದನಾ ಕ್ಷೇತ್ರಗಳಲ್ಲಿ ಬೆಂಗಳೂರು ಪ್ರಗತಿ ಸಾಧಿಸಿದೆ. ಕ್ಯಾಲಿಫೋರ್ನಿಯಾದಲ್ಲಿ 13 ಲಕ್ಷ ಇಂಜಿನಿಯರ್ ಗಳಿದ್ದರೆ, ಬೆಂಗಳೂರಿನಲ್ಲಿ 26 ಲಕ್ಷ ಇಂಜಿನಿಯರ್ ಗಳು ಕೆಲಸ ಮಾಡುತ್ತಿದ್ದಾರೆ. ಕ್ಯಾಲಿಫೋರ್ನಿಯಾದಲ್ಲಿರುವ 13 ಲಕ್ಷ ಇಂಜಿನಿಯರ್ ಗಳ ಪೈಕಿ 8 ಲಕ್ಷ ಜನ ಭಾರತದವರಾಗಿದ್ದು, ಅದರಲ್ಲಿ 6 ಲಕ್ಷ ಜನ ಕರ್ನಾಟಕದವರಾಗಿದ್ದಾರೆ. ಇದು ನಮ್ಮಲ್ಲಿರುವ ಪ್ರತಿಭೆ ದೇಶದ ಹೊರಗೆ ಹೋಗುತ್ತಿರುವುದಕ್ಕೆ ಈ ಅಂಕಿಅಂಶಗಳು ಸಾಕ್ಷಿಯಾಗಿವೆ” ಎಂದರು.

“ಇನ್ನು ವೈದ್ಯಕೀಯ ಕ್ಷೇತ್ರವನ್ನು ನೋಡುವುದಾದರೆ, ಬೆಂಗಳೂರು ಹೆಲ್ತ್ ಟೂರಿಸಂ ನಲ್ಲಿ ಮುಂದೆ ಇದೆ. ನಮ್ಮ ರಾಜ್ಯದಲ್ಲಿ 71 ಮೆಡಿಕಲ್ ಕಾಲೇಜುಗಳಿದ್ದು, ಬೇರೆ ಯಾವುದೇ ರಾಜ್ಯಗಳಲ್ಲಿ ಇಷ್ಟು ಮೆಡಿಕಲ್ ಕಾಲೇಜುಗಳಿಲ್ಲ. ನಾವು ಪ್ರತಿ ವರ್ಷ ಸುಮಾರು 13 ಸಾವಿರ ವೈದ್ಯರು, ಸುಮಾರು 1 ಲಕ್ಷ ವೈದ್ಯಕೀಯ ಕ್ಷೇತ್ರದ ಸಿಬ್ಬಂದಿ ತಯಾರು ಮಾಡುತ್ತಿದ್ದೇವೆ. ನಮ್ಮಲ್ಲಿರುವ ಅತ್ಯಂತ ಪ್ರತಿಭಾನ್ವಿತರು ಹೊರ ದೇಶಗಳಿಗೆ ಹೋಗುತ್ತಿದ್ದಾರೆ” ಎಂದರು.

ಉದ್ಯೋಗದಾತರ ಹಿತ ಕಾಯಲು ಬದ್ಧ

“ಉದ್ಯೋಗಿಗಳ ಜೊತೆಗೆ ಉದ್ಯೋಗದಾತರ ಹಿತವನ್ನು ನಾವು ಕಾಪಾಡಬೇಕು. ಉದ್ಯೋಗದಾತರು ಶಕ್ತಿಶಾಲಿಯಾಗಿದ್ದರೆ ಉದ್ಯೋಗಿಗಳು ಶಕ್ತಿಶಾಲಿಯಾಗಿರುತ್ತಾರೆ. ಉದ್ಯೋಗಿಗಳಿಗೆ ನೀಡಬೇಕಾದ ಕನಿಷ್ಠ ವೇತನಗಳನ್ನು ನಾವು ನೀಡಲೇಬೇಕು. ಜೊತೆಗೆ ಉದ್ಯೋಗದಾತರ ಮೇಲೂ ಹೆಚ್ಚಿನ ಹೊರೆಯಾಗದಂತೆ ನೋಡಿಕೊಳ್ಳಬೇಕು. ನಿಮ್ಮ ಉದ್ಯಮ ವ್ಯಾಪಾರಕ್ಕೆ ನೆರವಾಗಿರುವುದಕ್ಕೆ ಅಗತ್ಯವಿರುವಂತೆ ಉದ್ಯಮಸ್ನೇಹಿ ವಾತಾವರಣ ಸೃಷ್ಟಿಸಲು ನಾವು ಮುಂದಾಗಿದ್ದೇವೆ. ನೀವು ಬಲಿಷ್ಠವಾಗಿದ್ದರೆ, ನಾವು ಬಲಿಷ್ಠವಾಗುತ್ತೇವೆ, ನೀವು ನಿಶಕ್ತರಾದರೆ, ನಾವು ದುರ್ಬಲರಾಗುತ್ತೇವೆ. ನೀವು ಬಲಿಷ್ಠರಾಗಿ ಎಲ್ಲರೂ ಒಟ್ಟಾಗಿ ರಾಜ್ಯವನ್ನು ನಿರ್ಮಾಣ ಮಾಡೋಣ” ಎಂದು ಕರೆ ನೀಡಿದರು.

“ನಾನು ರತನ್ ಟಾಟಾ ಅವರನ್ನು ಒಮ್ಮೆ ಭೇಟಿ ನೀಡಿದಾಗ ಅವರು ನನಗೆ ಒಂದು ಸಲಹೆ ನೀಡಿದ್ದರು. ನೀವು ವೇಗವಾಗಿ ಸಾಗಬೇಕಾದರೆ, ಒಬ್ಬರೇ ಹೋಗಿ. ನೀವು ಬಹುದೂರ ಸಾಗಬೇಕಾದರೆ ಬೇರೆಯವರ ಜತೆಗೂಡಿ ಹೋಗಿ. ನಮ್ಮ ಸರ್ಕಾರವಾಗಲಿ, ಎಫ್ ಕೆಸಿಸಿಐ ಎಲ್ಲರೂ ಒಟ್ಟಾಗಿ ಸಾಗೋಣ. ನಮ್ಮ ಸರ್ಕಾರ ಶಿಕ್ಷಣ, ಆರೋಗ್ಯ, ಹಸಿರು ಉಳಿಸುವತ್ತ ನಾವು ಗಮನಹರಿಸುತ್ತಿದ್ದೇವೆ. ಬೆಂಗಳೂರಿನಲ್ಲಿರುವ ಅರಣ್ಯ ಜಾಗಗಳಲ್ಲಿ ಜೈವಿಕ ಉದ್ಯಾನವನ ಸ್ಥಾಪಿಸಲು ಮುಂದಾಗಿದ್ದೇವೆ. ನಮ್ಮ ಸರ್ಕಾರ ಯುವ ಉದ್ಯೋಗ ಸೇತು ಎಂಬ ಖಾಸಗಿ ಉದ್ಯೋಗ ವಿನಿಮಯ ಕೇಂದ್ರ ಸ್ಥಾಪಿಸುತ್ತಿದ್ದು, ನಿಮಗೆ ಯಾವ ರೀತಿ ಕೌಶಲ್ಯ ಆಧಾರಿತ ಉದ್ಯೋಗಿಗಳು ಬೇಕು ಎಂದು ತಿಳಿಸಿದರೆ, ನಮ್ಮ ಸರ್ಕಾರ ಯುವಕರಿಗೆ ತರಬೇತಿ ನೀಡಿ ನಿಮಗೆ ನೀಡುತ್ತದೆ. ನೀವು ಅವರಿಗೆ ಉದ್ಯೋಗ ನೀಡಬಹುದು. ನೀವು ಇಂತಹವರಿಗೆ ಉದ್ಯೋಗ ನೀಡಬೇಕು, ನೀಡಬಾರದು ಎಂಬ ವಿಚಾರವಾಗಿ ನಾವು ನಿಮ್ಮ ಆಡಳಿತ ವ್ಯವಸ್ಥೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಈಗ ಸರ್ಕಾರಿ ಶಾಲೆಗಳಲ್ಲಿ ಓದಿದ ಮಕ್ಕಳಿಗೆ 15% ಮೀಸಲಾತಿ ನೀಡಲಾಗುತ್ತಿದ್ದು, ಸದ್ಯದಲ್ಲೇ ಈ 15% ನಲ್ಲಿ 7.5% ಅನ್ನು ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ಮಕ್ಕಳಿಗೆ ನೀಡಲಾಗುವುದು. ನಾನು ರಾಜ್ಯದ ಮುಖ್ಯಮಂತ್ರಿಯಾದರೂ ನಿಮ್ಮವನಾಗಿದ್ದೇನೆ. ನಿಮ್ಮ ಪರವಾಗಿ ನಿಲ್ಲುತ್ತೇನೆ” ಎಂದು ಭರವಸೆ ನೀಡಿದರು.

Comments

Leave a Comment

Prev Post ಆರ್ಟ್ ಆಫ್ ಲಿವಿಂಗ್ ಆಶ್ರಮದ ಜಮೀನು ತೆರವುಗೊಳಿಸದಿದ್ದರೆ ಧರಣಿ ಸತ್ಯಾಗ್ರಹ ಮುಂದುವರಿಯಲಿದೆ”-ಸಮತಾ ಸೈನಿಕ ದಳ ಎಚ್ಚರಿಕೆ
Next Post ಕೇಂದ್ರ ಅಗತ್ಯ ಕ್ರಮ ಕೈಗೊಂಡಿದೆ: ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಪರಿಹಾರವಲ್ಲ;ವಿಜಯೇಂದ್ರ ಆರೋಪ

ದೇಶ ಹಾಗೂ ರಾಜ್ಯದ ಬೆಳವಣಿಗೆಗೆ ಕ್ರಿಶ್ಚಿಯನ್ ಶಿಕ್ಷಣ ಸಂಸ್ಥೆಗಳ ಕೊಡುಗೆ ಅಪಾರ: ಡಿಸಿಎಂ ಡಿ.ಕೆ. ಶಿವಕುಮಾರ್

ಎಲ್ಲರೂ ಜ್ಞಾನ ಹಂಚಿಕೊಂಡು ಬಾಳಬೇಕು ಬೆಂಗಳೂರಿನ ಹೆಮ್ಮೆ ಜ್ಯೋತಿ ನಿವಾಸ್ ಕಾಲೇಜು

ಮಂಗಳೂರು ವಿಶ್ವವಿದ್ಯಾನಿಲಯ ಘಟಿಕೋತ್ಸವ ; ಗೌರವ ಡಾಕ್ಟರೇಟ್ ಪ್ರದಾನ.

ಮಂಗಳೂರು ವಿಶ್ವವಿದ್ಯಾನಿಲಯ ಘಟಿಕೋತ್ಸವ ; ಗೌರವ ಡಾಕ್ಟರೇಟ್ ಪ್ರದಾನ.

ಕರ್ನಾಟಕ ಸರ್ಕಾರದ ಮಹತ್ವದ ಆದೇಶ: ಹದಿಹರೆಯದವರ ಆರೋಗ್ಯಕ್ಕಾಗಿ ‘ಸ್ನೇಹ ಕೇಂದ್ರ’ಗಳ ವಿಸ್ತರಣೆ, ಸಮಗ್ರ ಸಮಾಲೋಚನಾ ಕೇಂದ್ರಗಳ ಸ್ಥಾಪನೆ

ಕರ್ನಾಟಕ ಸರ್ಕಾರದ ಮಹತ್ವದ ಆದೇಶ: ಹದಿಹರೆಯದವರ ಆರೋಗ್ಯಕ್ಕಾಗಿ ‘ಸ್ನೇಹ ಕೇಂದ್ರ’ಗಳ ವಿಸ್ತರಣೆ, ಸಮಗ್ರ ಸಮಾಲೋಚನಾ ಕೇಂದ್ರಗಳ ಸ್ಥಾಪನೆ

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ National Academic Depository (NAD) – DigiLocker ಮೂಲಕ ಫಲಿತಾಂಶದ ದಿನವೇ ಅಂಕಪಟ್ಟಿ

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ National Academic Depository (NAD) – DigiLocker ಮೂಲಕ ಫಲಿತಾಂಶದ ದಿನವೇ ಅಂಕಪಟ್ಟಿ

ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯಲ್ಲಿ ಅಮೂಲಾಗ್ರ ಬದಲಾವಣೆ ಗೆಜೆಟ್ ಪ್ರಕಟಣೆ

ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯಲ್ಲಿ ಅಮೂಲಾಗ್ರ ಬದಲಾವಣೆ ಗೆಜೆಟ್ ಪ್ರಕಟಣೆ

ಸಹಾಯಧನ ಪಡೆಯುವ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ

ಸಹಾಯಧನ ಪಡೆಯುವ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ

Read all News