ನೂರು ದಿನಗಳ ಆಡಳಿತ: ಘೋಷಣೆಗಳಿಂದ ಅನುಷ್ಠಾನದತ್ತ — ಡಿ.ಕೆ. ಶಿವಕುಮಾರ್ ಸರ್ಕಾರದ ಮೊದಲ ಮೈಲಿಗಲ್ಲು"
ನೂರು ದಿನಗಳ ಆಡಳಿತ: ಘೋಷಣೆಗಳಿಂದ ಅನುಷ್ಠಾನದತ್ತ — ಡಿ.ಕೆ. ಶಿವಕುಮಾರ್ ಸರ್ಕಾರದ ಮೊದಲ ಮೈಲಿಗಲ್ಲು"
ನೂರು ದಿನ... ಒಂದು ಸರ್ಕಾರದ ಪಾಲಿಗೆ ಇದು ದೊಡ್ಡ ಅವಧಿಯೂ ಅಲ್ಲ, ಸಣ್ಣ ಅವಧಿಯೂ ಅಲ್ಲ. ಆದರೆ ಈ ನೂರು ದಿನಗಳಲ್ಲಿ ತೆಗೆದುಕೊಂಡ ನಿರ್ಧಾರಗಳು ಮುಂದಿನ ಐದು ವರ್ಷಗಳ ಆಡಳಿತದ ದಿಕ್ಕನ್ನು ನಿರ್ಧರಿಸುವಷ್ಟು ಮಹತ್ವದ್ದಾಗಿರುತ್ತವೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೂ ಈಗ ಅಂತಹದ್ದೇ ಒಂದು ಮಹತ್ವದ ಮೈಲಿಗಲ್ಲು. ಅಧಿಕಾರದ ಚುಕ್ಕಾಣಿ ಹಿಡಿದು ನೂರು ದಿನ ಪೂರೈಸುತ್ತಿರುವ ಹೊತ್ತಿನಲ್ಲಿ, ಉಚಿತ ಬಸ್‌ಪಾಸ್‌ನಿಂದ 72 ಸಾವಿರ ಸರ್ಕಾರಿ ಹುದ್ದೆಗಳ ನೇಮಕಾತಿವರೆಗೆ, ಬೆಂಗಳೂರು ರಸ್ತೆಗಳಿಂದ ಮೇಕೆದಾಟು-ಕಾವೇರಿ ವಿಚಾರದವರೆಗೆ, ರೈತರಿಂದ ವಿದ್ಯಾರ್ಥಿಗಳವರೆಗೆ... ನೂರು ದಿನಗಳಲ್ಲಿ ಸರ್ಕಾರದ ಪ್ರಮುಖ ನಿರ್ಧಾರಗಳೇನು? ಘೋಷಣೆಗಳು ಎಷ್ಟು? ಅನುಷ್ಠಾನ ಎಷ್ಟು? ಜನರ ನಿರೀಕ್ಷೆಗಳಿಗೆ ಸರ್ಕಾರ ನೀಡಿದ ಉತ್ತರವೇನು? ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ 100 ದಿನಗಳ ಆಡಳಿತದ ಪ್ರಮುಖ ನಿರ್ಧಾರಗಳ ಸಂಪೂರ್ಣ ಚಿತ್ರಣ ಇಲ್ಲಿದೆ.
ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರ ವಹಿಸಿಕೊಂಡು ನ 100 ದಿನಗಳು ಪೂರ್ಣಗೊಳ್ಳುತ್ತಿವೆ , ಈ ನೂರು ದಿನಗಳ ಅವಧಿಯಲ್ಲಿ ಆಡಳಿತ, ಶಿಕ್ಷಣ, ಉದ್ಯೋಗ, ರೈತರು, ಬೆಂಗಳೂರು ಅಭಿವೃದ್ಧಿ, ನೀರಾವರಿ, ಕಾನೂನು ಸುವ್ಯವಸ್ಥೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.
ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವ ನಿರ್ಧಾರ, 72 ಸಾವಿರ ಸರ್ಕಾರಿ ಹುದ್ದೆಗಳ ನೇಮಕಾತಿಗೆ ಆರು ತಿಂಗಳ ಗಡುವು ನಿಗದಿ ಹಾಗೂ 15 ಸಾವಿರ ಶಾಲಾ ಶಿಕ್ಷಕರ ನೇಮಕಾತಿಗೆ ಅನುಮೋದನೆ ನೀಡಿರುವುದು ಪ್ರಮುಖ ನಿರ್ಧಾರಗಳಾಗಿವೆ. ಕೆಪಿಎಸ್‌ಸಿ ಮತ್ತು ಕೆಇಎ ನೇಮಕಾತಿ ಪ್ರಕ್ರಿಯೆಗಳನ್ನು ಪರಿಶೀಲಿಸಲು ತಜ್ಞರ ಸಮಿತಿ ರಚನೆಗೂ ಸೂಚಿಸಲಾಗಿದೆ.
ಸಾರ್ವಜನಿಕರ ಕುಂದುಕೊರತೆ ಮತ್ತು ಅಹವಾಲುಗಳನ್ನು ಆಲಿಸಲು ಪ್ರತ್ಯೇಕ ‘ಪ್ರಜಾಸೇವೆ’ ಸಚಿವಾಲಯ ರಚಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಅಧಿಕಾರಿಗಳು ಶಾಸಕರು ಮತ್ತು ಸಚಿವರ ಒತ್ತಡಕ್ಕೆ ಮಣಿಯದೆ ಕಾನೂನು ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿರುವುದರ ಜೊತೆಗೆ, ಭ್ರಷ್ಟಾಚಾರದ ವಿರುದ್ಧ ದೂರು ನೀಡಲು ದೂರವಾಣಿ ವ್ಯವಸ್ಥೆ ಮತ್ತು ಸರ್ಕಾರಿ ಕಚೇರಿಗಳಲ್ಲಿ ಜಿಪಿಎಸ್ ಆಧಾರಿತ ಸಿಬ್ಬಂದಿ ಹಾಜರಾತಿಗೂ ಕ್ರಮ ಕೈಗೊಳ್ಳಲಾಗಿದೆ.
ಬೆಂಗಳೂರು ನಗರದ ರಸ್ತೆಗಳನ್ನು ಗುಂಡಿಮುಕ್ತಗೊಳಿಸಲು 2 ಸಾವಿರ ಕೋಟಿ ರೂಪಾಯಿ ಯೋಜನೆ, ಹೆಬ್ಬಾಳ ಬಳಿ ಸಣ್ಣ ಸುರಂಗ ರಸ್ತೆ ನಿರ್ಮಾಣಕ್ಕೆ ಶಂಕುಸ್ಥಾಪನೆ ಹಾಗೂ ಕೆಂಪೇಗೌಡ ಬಡಾವಣೆಯಲ್ಲಿ 10 ಪಥಗಳ ಎಸ್.ಎಂ. ಕೃಷ್ಣ ರಸ್ತೆ ಉದ್ಘಾಟನೆ ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿಗೂ ಒತ್ತು ನೀಡಲಾಗಿದೆ. ಬೆಂಗಳೂರಿನಾಚೆ ಹೊಸ ಬೆಂಗಳೂರು ನಿರ್ಮಾಣ ಹಾಗೂ ‘ಬಿಯಾಂಡ್ ಬೆಂಗಳೂರು’ ಪರಿಕಲ್ಪನೆಯಡಿ ಎರಡನೇ ಮತ್ತು ಮೂರನೇ ಹಂತದ ನಗರಗಳಲ್ಲಿ ಕೈಗಾರಿಕೆಗಳನ್ನು ಆಕರ್ಷಿಸುವ ಯೋಜನೆಗಳಿಗೂ ಆದ್ಯತೆ ನೀಡಲಾಗಿದೆ.
ನೂರು ದಿನಗಳ ಆಡಳಿತದ ಈ ಪಯಣವು ಕೇವಲ ಆರಂಭ ಮಾತ್ರ,ಅನುಷ್ಠಾನದ ಹೆಜ್ಜೆಗಳು ಆ ನಿರೀಕ್ಷೆಯನ್ನು ನಿಜವಾಗಿಸುವತ್ತ ಸಾಗಿವೆ. ಡಿ.ಕೆ. ಶಿವಕುಮಾರ್ ಅವರ ನಾಯಕತ್ವದಲ್ಲಿ ಸರ್ಕಾರವು ಜನಜೀವನದ ಪ್ರತಿಯೊಂದು ಅಂಗಳಕ್ಕೆ ಸ್ಪರ್ಶಿಸಲು ಪ್ರಯತ್ನಿಸುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿವೆ,ಆದರೆ, ಈ ನೂರು ದಿನಗಳ ನಿರ್ಧಾರಗಳು ಮುಂದಿನ ವರ್ಷಗಳ ದಿಕ್ಕನ್ನು ತೋರಿಸುವ ದೀಪಸ್ತಂಭವಾಗಲಿವೆಯೇ? ಜನರ ವಿಶ್ವಾಸವನ್ನು ಗೆಲ್ಲುವ ನಿಜವಾದ ಪರೀಕ್ಷೆ ಈಗ ಆರಂಭವಾಗುತ್ತಿದೆ...
ರೈತರ ವಿಚಾರದಲ್ಲೂ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ರೈತರಿಗೆ ಸಕಾಲದಲ್ಲಿ ಬಿತ್ತನೆ ಬೀಜ ಮತ್ತು ಗೊಬ್ಬರ ಪೂರೈಕೆಗೆ ಸೂಚನೆ ನೀಡಲಾಗಿದ್ದು, ಬೆಳೆ ವಿಮೆ ಬಾಕಿ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗಿದೆ. ಮಾವು ಬೆಳೆಗಾರರಿಗೆ ಪ್ರೋತ್ಸಾಹಧನ ಮುಂದುವರಿಸುವ ನಿರ್ಧಾರ ಹಾಗೂ ರೈತರ ಅಹವಾಲು ಮತ್ತು ಅಭಿಪ್ರಾಯಗಳನ್ನು ಆಲಿಸಲು ಸಮಿತಿ ರಚಿಸಲಾಗಿದೆ. ಅತಿವೃಷ್ಟಿ ಮತ್ತು ಅನಾವೃಷ್ಟಿ ಪರಿಸ್ಥಿತಿಯನ್ನು ಎದುರಿಸಲು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆ ನಡೆಸಿ ಅಗತ್ಯ ಸಿದ್ಧತೆ ಕೈಗೊಳ್ಳಲು ಸೂಚಿಸಲಾಗಿದೆ.
ನೀರಾವರಿ ವಿಚಾರದಲ್ಲೂ ರಾಜ್ಯದ ಪ್ರಮುಖ ಯೋಜನೆಗಳ ಬಗ್ಗೆ ಕೇಂದ್ರದೊಂದಿಗೆ ಸಮನ್ವಯಕ್ಕೆ ಒತ್ತು ನೀಡಲಾಗಿದೆ. ತುಂಗಭದ್ರಾ ಅಣೆಕಟ್ಟಿನ ಹೊಸ ಸ್ಪಿಲ್‌ಗೇಟ್‌ಗಳ ಉದ್ಘಾಟನೆ, ಅಣೆಕಟ್ಟಿನಲ್ಲಿ ಹೂಳು ತೆಗೆಯಲು ಕೇಂದ್ರದ ಯೋಜನೆ ಹಾಗೂ ತುಂಗಭದ್ರಾ ನದಿ ಪಾತ್ರದ ರೈತರ ರಕ್ಷಣೆಗೆ ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶದ ಮುಖ್ಯಮಂತ್ರಿಗಳು ಒಗ್ಗೂಡಿ ನಿರ್ಧಾರ ಕೈಗೊಂಡಿರುವುದು ಪ್ರಮುಖ ಬೆಳವಣಿಗೆಗಳಾಗಿವೆ.
ಮೇಕೆದಾಟು ಯೋಜನೆಗೆ ಸಂಬಂಧಿಸಿದ ಭೂಕಂಪನ ಅಧ್ಯಯನ, ಮಣ್ಣು ಪರೀಕ್ಷೆ ಮತ್ತು ಸಮೀಕ್ಷೆಗೆ ರಾಜ್ಯ ವನ್ಯಜೀವಿ ಮಂಡಳಿಯಿಂದ ಅನುಮತಿ ನೀಡಲಾಗಿದ್ದು, ಮುಂದಿನ ಹಂತದ ಅನುಮತಿಗಾಗಿ ಕೇಂದ್ರ ವನ್ಯಜೀವಿ ಮಂಡಳಿಗೆ ಶಿಫಾರಸು ಮಾಡಲಾಗಿದೆ. ಕಾವೇರಿ ನೀರಿನ ವಿಚಾರದಲ್ಲೂ ಸರ್ವಪಕ್ಷ ಸಭೆ ನಡೆಸಿ ಎಲ್ಲರ ಅಭಿಪ್ರಾಯ ಪಡೆಯುವ ಪ್ರಯತ್ನ ಮಾಡಲಾಗಿದೆ.
ರಾಜ್ಯದ ಯೋಜನೆಗಳಿಗೆ ಕೇಂದ್ರದ ಸಹಕಾರ ಮತ್ತು ವಿಶೇಷ ಅನುದಾನ ಪಡೆಯಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಕೇಂದ್ರ ಸಚಿವರನ್ನು ಭೇಟಿ ಮಾಡಿದ್ದಾರೆ. ನೀರಾವರಿ ಯೋಜನೆಗಳು, ಬೆಂಗಳೂರು ಮೆಟ್ರೋ, ಆರ್‌ಆರ್‌ಟಿಎಸ್, ಪೊಲೀಸ್ ಇಲಾಖೆಯ ಯೋಜನೆಗಳು ಸೇರಿದಂತೆ ರಾಜ್ಯದ ವಿವಿಧ ಬೇಡಿಕೆಗಳ ಕುರಿತು ಚರ್ಚೆ ನಡೆಸಲಾಗಿದೆ. ದೆಹಲಿಯಲ್ಲಿರುವ ಕರ್ನಾಟಕದ ಐಎಎಸ್, ಐಪಿಎಸ್ ಮತ್ತು ಐಎಫ್‌ಎಸ್ ಅಧಿಕಾರಿಗಳ ಸಭೆ ನಡೆಸಿ ರಾಜ್ಯದ ಅಭಿವೃದ್ಧಿಗೆ ಒಗ್ಗಟ್ಟಾಗಿ ಕೆಲಸ ಮಾಡುವಂತೆ ಕರೆ ನೀಡಲಾಗಿದೆ.
ಕಾನೂನು ಸುವ್ಯವಸ್ಥೆಯ ವಿಚಾರದಲ್ಲಿ ಜಿಲ್ಲೆಗೊಂದು ರೌಡಿ ನಿಗ್ರಹ ಪಡೆ ರಚನೆಗೆ ಸೂಚನೆ ನೀಡಲಾಗಿದೆ. ಡ್ರಗ್ಸ್ ಜಾಲವನ್ನು ನಿಯಂತ್ರಿಸಲು ಕಠಿಣ ಕ್ರಮಕ್ಕೆ ಮುಂದಾಗಿರುವ ಸರ್ಕಾರ, 2028ರ ವೇಳೆಗೆ ನಶೆ ಮುಕ್ತ ಕರ್ನಾಟಕ ನಿರ್ಮಾಣದ ಗುರಿಯನ್ನು ಘೋಷಿಸಿದೆ. ಡ್ರಗ್ಸ್ ಜಾಲದ ಕುರಿತು ಮಾಹಿತಿ ನೀಡುವವರಿಗೆ ಬಹುಮಾನ ನೀಡುವ ನಿರ್ಧಾರವೂ ಕೈಗೊಳ್ಳಲಾಗಿದೆ.
ವಸತಿ ಕ್ಷೇತ್ರದಲ್ಲಿ ಬಡವರಿಗೆ ನಿವೇಶನ ನೀಡುವುದಕ್ಕಿಂತ ಮನೆ ನಿರ್ಮಿಸಿಕೊಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸರ್ಕಾರದ ಸೊಸೈಟಿಗಳಿಂದ ಪಡೆದ ನಿವೇಶನಗಳಲ್ಲಿ ಐದು ವರ್ಷಗಳೊಳಗೆ ಮನೆ ನಿರ್ಮಿಸದಿದ್ದರೆ ನಿವೇಶನವನ್ನು ವಾಪಸ್ ಪಡೆಯುವ ಘೋಷಣೆಯೂ ಮಾಡಲಾಗಿದೆ. ಬಿಡದಿ ಟೌನ್‌ಶಿಪ್ ಯೋಜನೆಯಲ್ಲಿ ಬಲವಂತದ ಭೂಸ್ವಾಧೀನ ಮಾಡುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಶಿಕ್ಷಣಕ್ಕೂ ಆದ್ಯತೆ ನೀಡಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಪೂರೈಕೆಗಾಗಿ ಕ್ಷೇತ್ರಗಳಿಗೆ ತಲಾ ಒಂದು ಕೋಟಿ ರೂಪಾಯಿ ಅನುದಾನ ನೀಡುವ ಕ್ರಮ ಕೈಗೊಳ್ಳಲಾಗಿದೆ. ಸಿಎಸ್‌ಆರ್ ನಿಧಿಯನ್ನು ಗ್ರಾಮೀಣ ಭಾಗದ ಪ್ರಾಥಮಿಕ ಶಿಕ್ಷಣಕ್ಕೆ ಬಳಸಲು ನಿರ್ಧರಿಸಲಾಗಿದ್ದು, ಗ್ರಾಮೀಣ ಸರ್ಕಾರಿ ಶಾಲೆಗಳನ್ನು ನಗರ ಪ್ರದೇಶದ ಖಾಸಗಿ ಶಾಲೆಗಳು ದತ್ತು ಪಡೆಯುವಂತೆ ಸೂಚಿಸಲಾಗಿದೆ.
ಕಲಬುರ್ಗಿಯಲ್ಲಿ 320 ಕೋಟಿ ರೂಪಾಯಿ ವೆಚ್ಚದ ಜವಳಿ ಪಾರ್ಕ್ ಯೋಜನೆ, ಹಿರಿಯೂರಿನ ಕೆರೆಗಳಿಗೆ ನೀರು ತುಂಬಿಸಲು 244 ಕೋಟಿ ರೂಪಾಯಿ ಮೊತ್ತದ ಯೋಜನೆಗಳಿಗೆ ಒಪ್ಪಿಗೆ ಹಾಗೂ ಎರಡನೇ ಮತ್ತು ಮೂರನೇ ಹಂತದ ನಗರಗಳಲ್ಲಿ ಡಬಲ್ ಎಫ್‌ಎಆರ್ ನೀಡುವ ನಿರ್ಧಾರಗಳು ಅಭಿವೃದ್ಧಿಯ ವಿಕೇಂದ್ರೀಕರಣದ ಭಾಗವಾಗಿ ಕಾಣಿಸಿಕೊಂಡಿವೆ.
ಪರಿಸರ ಮತ್ತು ಪ್ರವಾಸೋದ್ಯಮ ಕ್ಷೇತ್ರದಲ್ಲೂ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೆಂಪೇಗೌಡ ಜಯಂತಿ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ 15 ಲಕ್ಷ ಸಸಿ ನೆಡುವ ಕಾರ್ಯಕ್ರಮ ಕೈಗೊಳ್ಳಲಾಗಿದ್ದು, ಕರಾವಳಿ ಪ್ರವಾಸೋದ್ಯಮ ಉತ್ತೇಜನಕ್ಕೆ ವಿವಿಧ ಕ್ರಮಗಳನ್ನು ಕೈಗೊಳ್ಳಲಾಗಿದೆ. ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಫಾರಿ ಪುನರಾರಂಭಕ್ಕೆ ಕ್ರಮ ಕೈಗೊಳ್ಳಲಾಗಿದೆ. ಮೈಸೂರು ದಸರಾವನ್ನು ಅದ್ಧೂರಿಯಾಗಿ ಆಚರಿಸುವುದರ ಜೊತೆಗೆ ಏರ್ ಶೋ ನಡೆಸಲು ಕೇಂದ್ರಕ್ಕೆ ಮನವಿ ಮತ್ತು ಕಂಬಳ ಸೇರಿದಂತೆ ಕರ್ನಾಟಕದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ದಸರಾದಲ್ಲಿ ಸೇರಿಸುವ ಪ್ರಸ್ತಾವನೆ ಮುಂದಿಡಲಾಗಿದೆ.
ಇದೇ ವೇಳೆ ಬೆಂಗಳೂರಿನಲ್ಲಿ ದೇಶದ ಮೊದಲ ಸರ್ಕಾರಿ ಪ್ರಾಯೋಜಿತ ಕೃತಕ ಬುದ್ಧಿಮತ್ತೆ ವಿಶ್ವವಿದ್ಯಾಲಯ ಸ್ಥಾಪಿಸುವ ಘೋಷಣೆಯೂ ಮಾಡಲಾಗಿದೆ. ಖಾಸಗಿ ವಲಯದಲ್ಲಿ ಉದ್ಯೋಗ ವಿನಿಮಯ ಕೇಂದ್ರ ಸ್ಥಾಪಿಸುವ ನಿರ್ಧಾರ ಮತ್ತು ರಾಜ್ಯದ ವಿವಿಧ ನಗರಗಳಲ್ಲಿ ಕೈಗಾರಿಕೆಗಳನ್ನು ಆಕರ್ಷಿಸುವ ಪ್ರಯತ್ನಗಳು ಉದ್ಯೋಗ ಸೃಷ್ಟಿಗೆ ಒತ್ತು ನೀಡುವ ಸೂಚನೆಯಾಗಿದೆ.
ಒಟ್ಟಿನಲ್ಲಿ, ಡಿ.ಕೆ. ಶಿವಕುಮಾರ್ ಅವರ ಮೊದಲ ನೂರು ದಿನಗಳ ಆಡಳಿತದಲ್ಲಿ ಶಿಕ್ಷಣ, ಸರ್ಕಾರಿ ನೇಮಕಾತಿ, ರೈತರು, ಬೆಂಗಳೂರು ಮೂಲಸೌಕರ್ಯ, ನೀರಾವರಿ, ಗ್ರಾಮೀಣಾಭಿವೃದ್ಧಿ, ಕೈಗಾರಿಕೆ, ಕಾನೂನು ಸುವ್ಯವಸ್ಥೆ ಮತ್ತು ಕೇಂದ್ರದೊಂದಿಗೆ ರಾಜ್ಯದ ಹಿತಾಸಕ್ತಿಗಳ ಕುರಿತು ಹಲವು ನಿರ್ಧಾರಗಳು ಮತ್ತು ಘೋಷಣೆಗಳು ನಡೆದಿವೆ. ಈ ನಿರ್ಧಾರಗಳ ನಿಜವಾದ ಪರಿಣಾಮ ಜನರಿಗೆ ಎಷ್ಟರ ಮಟ್ಟಿಗೆ ತಲುಪಲಿದೆ ಮತ್ತು ಘೋಷಣೆಗಳು ಎಷ್ಟು ವೇಗವಾಗಿ ಅನುಷ್ಠಾನಗೊಳ್ಳಲಿವೆ ಎಂಬುದು ಮುಂದಿನ ದಿನಗಳಲ್ಲಿ ಪ್ರಮುಖವಾಗಲಿದೆ.






Comments
Leave a Comment