PRABHAVAA.COM

ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ದಿಢೀರ್ ಭೇಟಿ ನೀಡಿದ ಶಿವಕುಮಾರ್

Bengaluru Urban:

Font size:

ರೈತರ ವಿಮೆ ಹಣ ಕಟ್ಟದ, ಸೊಸೈಟಿ ಕಾರ್ಯದರ್ಶಿ ವಜಾಕ್ಕೆ ಸಿಎಂ ಡಿ ಕೆ ಶಿವಕುಮಾರ್ ಸೂಚನೆ

ಬೆಂಗಳೂರು, ಸೆ.08:

ಬೆಳಗಾವಿಯ ಜೇವರ್ಗಿ ತಾಲ್ಲೂಕಿನ ಇಟ್ಟನಹಳ್ಳಿ ಗ್ರಾಮದ ರೈತರು ಬೆಳೆ ವಿಮೆಗೆ ಪಾವತಿಸಿದ್ದ ಹಣವನ್ನು ಡಿಸಿಸಿ ಬ್ಯಾಂಕಿಗೆ ಪಾವತಿ ಮಾಡದ ಕಾರಣ 93 ರೈತರ ವಿಮೆ ತಿರಸ್ಕಾರಗೊಂಡಿದ್ದು, ಈ ವಿಚಾರದಲ್ಲಿ ನಿರ್ಲಕ್ಷ ತೋರಿರುವ ಸ್ವಸಹಾಯ ಸೊಸೈಟಿ ಕಾರ್ಯದರ್ಶಿ ವಜಾಗೊಳಿಸಲು ಸಿಎಂ ಸೂಚನೆ ನೀಡಿದರು.

ಮಂಗಳವಾರ ಬೆಳ್ಳಂಬೆಳಗ್ಗೆ ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ದಿಢೀರ್ ಭೇಟಿ ನೀಡಿದ ಶಿವಕುಮಾರ್ ಅವರು ಅಲ್ಲಿ ಬಂದಿದ್ದ ಈರುಳ್ಳಿ, ಬೆಳ್ಳುಳ್ಳಿ, ಆಲೂಗಡ್ಡೆ, ತೆಂಗು ಬೆಳೆಗಾರರು, ವರ್ತಕರು ಹಾಗೂ ಮಂಡಿ ಮಾಲೀಕರ ಜೊತೆ ಮಾತುಕತೆ ನಡೆಸಿ, ಅವರ ಸಮಸ್ಯೆ ಆಲಿಸಿದರು.

ಬೆಳಗಾವಿ ಜಿಲ್ಲೆಯ ಜೇವರ್ಗಿ ತಾಲ್ಲೋಕಿನ ಇಟ್ಟನಹಳ್ಳಿ ಗ್ರಾಮದ ರೈತ ಸಿಎಂ ಅವರನ್ನು ಭೇಟಿ ಮಾಡಿ ನಾವು ಬೆಳೆ ವಿಮೆಗೆ ಸ್ವಸಹಾಯ ಸೊಸೈಟಿಗೆ ಹಣ ಕಟ್ಟಿದ್ದು, ಅವರು ಡಿಸಿಸಿ ಬ್ಯಾಂಕಿಗೆ ಹಣ ಪಾವತಿ ಮಾಡದ ಕಾರಣ ನಮ್ಮ ವಿಮೆ ತಿರಸ್ಕೃತಗೊಂಡಿದೆ ಎಂದು ನಮಗೆ ಮೆಸೇಜ್ ಬಂದಿದೆ ಎಂದು ತಮ್ಮ ಅಳಲು ತೋಡಿಕೊಂಡರು.

ರೈತರು ಹಣ ಪಾವತಿ ಮಾಡಿರುವ ಪಟ್ಟಿ ಪರಿಶೀಲಿಸಿದ ಸಿಎಂ, ಕೂಡಲೇ ನಿರ್ಲಕ್ಷ ತೋರಿರುವ ಅಧಿಕಾರಿಯನ್ನು ವಜಾಗೊಳಿಸುವಂತೆ ಸೂಚನೆ ನೀಡಿದರು.

ಖುದ್ದಾಗಿ ತೂಕ ಪರಿಶೀಲನೆ:

ನೀವು ಈರುಳ್ಳಿ ತರಬೇಕಾದರೆ ಪೊಲೀಸರು ತಡೆದು ಹಣ ಪಡೆಯುತ್ತಾರಾ? ರೈತರಿಗೆ ಸರಿಯಾದ ಸಮಯಕ್ಕೆ ಹಣ ನೀಡುತ್ತಾರೆಯೇ? ರೈತರಿಂದ ಮಾರುಕಟ್ಟೆಯವರು ಕಮಿಷನ್ ಏನಾದರೂ ಪಡೆಯುತ್ತಾರಾ? ಪ್ರತಿ ಎಕರೆಗೆ ಎಷ್ಟು ಖರ್ಚು ಆಗುತ್ತದೆ? ನಿಮ್ಮ ಬೆಳೆಯ ತೂಕ ಸರಿಯಾಗಿ ಮಾಡುತ್ತಿದ್ದಾರಾ? ಎಂದು ರೈತರನ್ನು ವಿಚಾರಿಸಿ, ಮಾಹಿತಿ ಪಡೆದರು. ತಾವೇ ಖುದ್ದಾಗಿ ಈರುಳ್ಳಿ ತೂಕವನ್ನು ಪರಿಶೀಲನೆ ನಡೆಸಿದರು.

ಕಲಬುರ್ಗಿ, ಬೀದರ್, ವಿಜಯಪುರ ಮಾರುಕಟ್ಟೆಯಲ್ಲಿ 8ರಿಂದ 10ರೂ. ಕಮಿಷನ್ ಪಡೆಯುತ್ತಾರೆ. ಯಶವಂತಪುರ ಮಾರುಕಟ್ಟೆಯಲ್ಲಿ ರೈತರಿಂದ ಕಮಿಷನ್ ಪಡೆಯುವುದಿಲ್ಲ. ಹೀಗಾಗಿ ನಾವು ಇಲ್ಲಿಗೆ ತಂದು ಹಾಕುತ್ತೇವೆ ಎಂದು ರೈತರು ಮಾಹಿತಿ ನೀಡಿದರು.

ಈ ಬಾರಿ ಮಳೆ ಕೊರತೆಯಿಂದಾಗಿ ಇಳುವರಿ ಕಡಿಮೆಯಾಗಿದೆ. ಎಕರೆಗೆ 150-200 ಪ್ಯಾಕೆಟ್ ಈರುಳ್ಳಿ ಬರುತ್ತದೆ. ಆದರೆ ಈ ಬಾರಿ ಕೇವಲ 50 ಪ್ಯಾಕೆಟ್ ಮಾತ್ರ ಸಿಕ್ಕಿದೆ ಎಂದು ವಿವರಿಸಿದರು. ಮಳೆ ಹೆಚ್ಚಾದರೆ ಈರುಳ್ಳಿ ಜಮೀನಿನಲ್ಲೇ ಕೊಳೆಯುತ್ತದೆ ಆಗ ಸರಿಯಾದ ಬೆಲೆ ಸಿಗುವುದಿಲ್ಲ. ಅದನ್ನು ಮಾರುಕಟ್ಟೆಗೆ ತಂದು ಹಾಕಲು ಆಗುವ ಖರ್ಚಿನಷ್ಟು ಹಣ ಸಿಗುವುದಿಲ್ಲ ಎಂದು ರೈತರು ವಿವರಿಸಿದರು.

ಬೆಳೆ ವಿಮೆ ಸಿಕ್ಕಿಲ್ಲ ಎಂದು ಅಳಲು

ಬೆಳೆಗೆ ವಿಮೆ ಮಾಡಿಸುವುದಿಲ್ಲವೇ ಎಂದು ಸಿಎಂ ಕೇಳಿದಾಗ, ನಾವು ಹೆಕ್ಟೆರ್ ಗೆ 6,500 ರೂ. ವಿಮೆ ಕಟ್ಟಿದ್ದರೂ ನಮಗೆ ಏನೂ ಸಿಕ್ಕಿಲ್ಲ ಎಂದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ರೈತ ತಮ್ಮ ನೋವು ತೋಡಿಕೊಂಡರು. ರೈತರ ಮಾಹಿತಿ ಪಡೆಯುವಂತೆ ಸಿಎಂ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಿಎಂ ಕಾರ್ಯವೈಖರಿ ಶ್ಲಾಘಿಸಿದ ರೈತರು

ಕಳೆದ 30 ವರ್ಷಗಳಲ್ಲಿ ಯಾವುದೇ ಸಚಿವರು ಮುಖ್ಯಮಂತ್ರಿಗಳು ಮಾರುಕಟ್ಟೆಗೆ ಬಂದು ರೈತರ ಸಮಸ್ಯೆಗಳನ್ನು ವಿಚಾರಿಸಿರಲಿಲ್ಲ. ನೀವು ಬಂದು ಪರಿಸ್ಥಿತಿ ಪರಿಶೀಲನೆ ಮಾಡುತ್ತಿರುವುದು ಬಹಳ ಸಂತೋಷ ತಂದಿದೆ ಎಂದು ರೈತರು ಸಿಎಂ ಕಾರ್ಯವೈಖರಿಯನ್ನು ಶ್ಲಾಘಿಸಿದರು.

ಹೆಚ್ಚು ಹಣ ಪಡೆದರೆ ಹೇಳಿ ಮಟ್ಟ ಹಾಕುವೆ:

ಮಾರುಕಟ್ಟೆಯಲ್ಲಿನ ಮಂಡಿ ವರ್ತಕರೊಂದಿಗೆ ಮಾತುಕತೆ ನಡೆಸಿದ ಸಿಎಂ, "ನೀವು ಎಪಿಎಂಸಿಗೆ ಎಷ್ಟು ಪಾವತಿ ಮಾಡುತ್ತೀರಿ ಎಂದು ಕೇಳಿದರು. ಅದಕ್ಕೆ ವರ್ತಕರು ನೂರು ರೂ.ಗೆ 60 ಪೈಸೆ ಪಾವತಿ ಮಾಡುತ್ತೇವೆ ಎಂದರು. ಬೇರೆ ವರ್ತಕ 1 ರೂ. ಪಾವತಿ ಮಾಡುತ್ತಿರುವುದಾಗಿ ತಿಳಿಸಿದರು. ಆ ರೀತಿ ಏನಾದರೂ ಹೆಚ್ಚು ಹಣ ಪಡೆದರೆ ನನಗೆ ಹೇಳಿ ಅವರನ್ನು ನಾನು ಮಟ್ಟ ಹಾಕುತ್ತೇನೆ" ಎಂದು ಹೇಳಿದರು.

ರೈತರಿಂದ ನೇರ ಖರೀದಿ ವೇಳೆ ತೂಕ ಮೋಸ ಆಗದಂತೆ ಕ್ರಮ:

ಕೆಲವರು ಎಪಿಎಂಸಿ ಮಾರುಕಟ್ಟೆಗೆ ಬರುವುದಿಲ್ಲ ನೇರವಾಗಿ ರೈತರಿಂದ ಖರೀದಿ ಮಾಡುತ್ತಾರೆ. ಅಲ್ಲಿ ಒಂದು ಬೆಲೆ ನಿಗದಿ ಮಾಡಿ ತೂಕ ಹೆಚ್ಚು ಕಮ್ಮಿ ಮಾಡಿ ತೆಗೆದುಕೊಂಡು ಹೋಗುತ್ತಾರೆ ಎಂದು ಹೇಳಿದರು. ಆಗ ಸಿಎಂ, ಈ ರೀತಿ ರೈತರಿಂದ ನೇರವಾಗಿ ಖರೀದಿ ಮಾಡುವವರು ತೂಕದಲ್ಲಿ ಹೆಚ್ಚು ಕಮ್ಮಿ ಮಾಡದಂತೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಕೂಡ್ಲಿಗಿಯ ರೈತನ ಮನೆಗೆ ವಿದ್ಯುತ್ ಸಂಪರ್ಕದ ಭರವಸೆ

ಕೂಡ್ಲಿಗಿಯ ಹೊಸಹಟ್ಟಿ ಗ್ರಾಮದ ಆಂಜನಪ್ಪ ಎಂಬ ಈರುಳ್ಳಿ ಬೆಳೆದ ರೈತನ ಜೊತೆ ಮಾತನಾಡುತ್ತಿರುವಾಗ, ಬೆಳೆಗೆ ನೀರಿನ ವ್ಯವಸ್ಥೆ ಹೇಗೆ ಎಂದು ಕೇಳಿದರು. ಅದಕ್ಕೆ ರೈತ, ನಾನು ತೋಟದಲ್ಲಿ ಮನೆ ಕಟ್ಟಿಕೊಂಡಿದ್ದು ಅದಕ್ಕೆ ವಿದ್ಯುತ್ ಸಂಪರ್ಕಕ್ಕಾಗಿ ಮೂರು ಬಾರಿ ಅರ್ಜಿ ಹಾಕಿದರೂ ಸಂಪರ್ಕ ಸಿಕ್ಕಿಲ್ಲ. ಕೇವಲ ನನಗೆ ಮಾತ್ರವಲ್ಲ ಇದೇ ರೀತಿ ಹತ್ತಾರು ಮನೆಗಳಿವೆ ಎಂದು ಸಮಸ್ಯೆ ಹೇಳಿಕೊಂಡರು. ರೈತನ ಮಾಹಿತಿ ಪಡೆಯುವಂತೆ ಅಧಿಕಾರಿಗಳಿಗೆ ಸೂಚಿಸಿದ ಸಿಎಂ, "ನಾನು ಪ್ರಜಾಸೇವೆ ಕಾರ್ಯಕ್ರಮ ಮಾಡಿದಾಗ, ಬಂದು ನನಗೆ ವಿದ್ಯುತ್ ಸಂಪರ್ಕ ಸಿಕ್ಕಿಲ್ಲ ಎಂದು ಅರ್ಜಿ ನೀಡಬಾರದೇ ಎಂದರು. ಯೋಚನೆ ಮಾಡುವುದು ಬೇಡ. ಎಲ್ಲರಿಗೂ ವಿದ್ಯುತ್ ಸಂಪರ್ಕ ಸಿಗುವಂತೆ ಮಾಡಲಾಗುವುದು" ಎಂದು ಭರವಸೆ ನೀಡಿದರು.

"ನಿಮ್ಮ ಮನೆ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ, 10 ಕೆಜಿ ಅಕ್ಕಿ ಸಿಗುತ್ತಿದೆಯೇ? ಎಂದು ವಿಚಾರಿಸಿದರು. ಆಗ ಗ್ಯಾರಂಟಿ ಯೋಜನೆಗಳು ನಮಗೆ ಸಿಗುತ್ತಿದ್ದು, ಅದರಿಂದ ಅನುಕೂಲವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

000

ಬೆಂಗಳೂರು, ಸೆ. 08:

"ಯಶವಂತಪುರ ಎಪಿಎಂಸಿಯಲ್ಲಿ ಬಾಲ ಕಾರ್ಮಿಕ ಪದ್ದತಿಯನ್ನು ತಕ್ಷಣದಿಂದಲೇ ನಿಲ್ಲಿಸುವಂತೆ ಸೂಚಿಸಲಾಗಿದೆ. ಬಾಲಕಾರ್ಮಿಕರಿಂದ ದುಡಿಸುತ್ತಿರುವವರನ್ನು ತಕ್ಷಣವೇ ಬಂಧಿಸಿ ಪ್ರಕರಣ ದಾಖಲಿಸಲು ಜಿಲ್ಲಾಧಿಕಾರಿ ಹಾಗೂ ಪೊಲೀಸರಿಗೆ ಸೂಚನೆ ನೀಡಿದ್ದೇನೆ" ಎಂದು ಸಿಎಂ ಡಿ. ಕೆ. ಶಿವಕುಮಾರ್ ತಿಳಿಸಿದರು.

ಯಶವಂತಪುರ ಎಪಿಎಂಸಿಗೆ ಮಂಗಳವಾರ ದಿಢೀರ್ ಭೇಟಿ ನೀಡಿ ರೈತರೊಂದಿಗೆ ಚರ್ಚಿಸಿದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

"ಸಣ್ಣ ಮಕ್ಕಳಿಂದ ಕೆಲಸ ಮಾಡಿಸುವುದನ್ನು ತಕ್ಷಣದಿಂದಲೇ ನಿಲ್ಲಿಸಬೇಕು.
ರಾಜ್ಯದ ಇತರೆ ಎಪಿಎಂಸಿಗಳಿಗೆ ಸಚಿವರುಗಳು ಭೇಟಿ ನೀಡಿ ಸಮಸ್ಯೆ ಹಾಗೂ ದೂರುಗಳನ್ನು ಸರಿಪಡಿಸಲು ಸೂಚಿಸಲಾಗುವುದು" ಎಂದು ಹೇಳಿದರು.

"ಎಪಿಎಂಸಿ ಮಾರುಕಟ್ಟೆ ರೈತರು ಹಾಗೂ ವ್ಯಾಪಾರಸ್ಥರ ನಡುವಿನ ಕೊಂಡಿ. ಬೇರೆ ಯಾವುದೇ ಮಾರುಕಟ್ಟೆಗಿಂತಲೂ ಬೆಂಗಳೂರಿನ ಮಾರುಕಟ್ಟೆಯ ಬಗ್ಗೆ ರೈತರು ಸಂತುಷ್ಟರಾಗಿದ್ದಾರೆ. ಮಧ್ಯಪ್ರದೇಶದ ಇಂದೋರ್ ಸೇರಿದಂತೆ ದೇಶದ ವಿವಿಧ ಮಾರುಕಟ್ಟೆಗಳಿಂದ ಈರುಳ್ಳಿ, ಆಲೂಗಡ್ಡೆ ಮುಂತಾದ ಕೃಷಿ ಉತ್ಪನ್ನಗಳು ಇಲ್ಲಿಗೆ ಬರುತ್ತಿದ್ದು ಇಲ್ಲಿನ ಉತ್ಪನ್ನಗಳಿಗೂ ಬೇರೆ ಉತ್ಪನ್ನಗಳಿಗೂ ಗುಣಮಟ್ಟದಲ್ಲಿ ಹಾಗೂ ರುಚಿಯಲ್ಲಿ ಸಾಕಷ್ಟು ವ್ಯತ್ಯಾಸವಿದೆ. ಹಲವು ಉತ್ಪನ್ನಗಳು ಮೂರು ತಿಂಗಳವರೆಗೆ ಹಾಳಾಗದೆ ಉಳಿದರೆ, ಇನ್ನು ಕೆಲವು ಒಂದು ತಿಂಗಳು ಉಳಿಯುವುದಿಲ್ಲ" ಎಂದರು.

"ಉತ್ತರ ಭಾರತದ ಕೆಲವು ಮಾದರಿಯ ಆಲೂಗಡ್ಡೆ ಸಿಹಿಯಾಗಿದ್ದರೆ ಕೆಲವು ಸಾಮಾನ್ಯವಾಗಿವೆ. ಇಲ್ಲಿಂದ ತಮಿಳುನಾಡು, ಕೇರಳ ಸೇರಿದಂತೆ ದೆಹಲಿಗೂ ಹೋಗುತ್ತದೆ" ಎಂದರು.

"ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದು, ದಲ್ಲಾಳಿ, ವರ್ತಕರು ಪಡೆಯುತ್ತಿರುವ ಕಮಿಷನ್ ಬಗ್ಗೆ ಪರಿಶೀಲನೆ ಮಾಡಲಾಗುವುದು" ಎಂದು ತಿಳಿಸಿದರು.

ರೈತರ ಕಷ್ಟಗಳನ್ನು ಅರಿಯುವುದು ನನ್ನ ಕರ್ತವ್ಯ

"ಎಪಿಎಂಸಿಯಲ್ಲಿ ಕೂಲಿ ಕಾರ್ಮಿಕರು, ರೈತರು, ವ್ಯಾಪಾರಿಗಳ ಜೊತೆ ನಡೆಸಿದ ಚರ್ಚೆ ವೇಳೆ ಹಲವು ಸಲಹೆಗಳನ್ನು ನೀಡಿದ್ದಾರೆ. ಜೊತೆಗೆ ದೂರುಗಳೂ ಇವೆ. ರಾಜ್ಯದ ಮುಖ್ಯಸ್ಥನಾಗಿ ಇಲ್ಲಿನ ಸಮಸ್ಯೆಗಳು ಹಾಗೂ ರೈತರ ಕಷ್ಟ ತಿಳಿದುಕೊಳ್ಳುವುದು ನನ್ನ ಕರ್ತವ್ಯವಾಗಿದೆ" ಎಂದರು.

ಎಪಿಎಂಸಿ ಮಾರುಕಟ್ಟೆಗಳು ಸಂಪೂರ್ಣ ನಂಬಿಕೆಯನ್ನು ಆಧರಿಸಿ ನಡೆಯುತ್ತಿವೆ

"ಇಲ್ಲಿನ ವ್ಯಾಪಾರವು ಸಂಪೂರ್ಣವಾಗಿ ನಂಬಿಕೆಯ ಮೇಲೆ ಆಧರಿಸಿದ್ದು. ಉತ್ತರ ಭಾರತದಿಂದಲೂ ಕೂಡ ಕೃಷಿ ಉತ್ಪನ್ನಗಳನ್ನು ನಂಬಿಕೆ ಆಧಾರದ ಮೇಲೆಯೇ ಕಳುಹಿಸಲಾಗುತ್ತಿದೆ‌. ಆರ್ ಟಿಜಿಎಸ್ ಮೂಲಕ ಹಣ ಪಾವತಿಯಾಗುತ್ತಿದೆ.
ಬೀದಿಬದಿ ವ್ಯಾಪಾರಿಗಳು ಇಲ್ಲಿಂದಲೇ ತರಕಾರಿ ಹಣ್ಣುಗಳನ್ನು ಕೊಂಡುಕೊಳ್ಳುತ್ತಿದ್ದು, 1-2 ರೂ. ಲಾಭ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾರೆ" ಎಂದರು.

ರೈತರು ಹಾಗೂ ವ್ಯಾಪಾರಿಗಳಿಗೆ ನ್ಯಾಯ ದೊರಕಿಸುವುದು ಸರ್ಕಾರದ ಆದ್ಯತೆ

ಮಾರುಕಟ್ಟೆ ಸ್ಥಳಾಂತರದ ಬಗ್ಗೆ ಪರಿಶೀಲಿಸಲಾಗುವುದು. ರೈತರು, ವ್ಯಾಪಾರಿಗಳಿಗೆ, ಕೆಲಸ ಮಾಡುವವರಿಗೆ ನ್ಯಾಯ ದೊರಕಿಸುವುದು ಸರ್ಕಾರದ ಆದ್ಯತೆ" ಎಂದರು.

ಎಪಿಎಂಸಿ ವ್ಯವಸ್ಥೆಗಳನ್ನು ಗಮನಿಸಿದ್ದೇನೆ

“ಯಶವಂತಪುರ ಎಪಿಎಂಸಿಗೆ ಬರುವ ರೈತರು , ಮಧ್ಯವರ್ತಿಗಳು, ವರ್ತಕರು ಹಾಗೂ ಇಲ್ಲಿ ಕೂಲಿಕಾರರಾಗಿ ಕೆಲಸ ಮಾಡುತ್ತಿರುವ ಮಹಿಳೆಯರೊಂದಿಗೂ ಮಾತನಾಡಿದ್ದೇನೆ. ಇಲ್ಲಿಯೇ ಉಪಹಾರ ಸೇವಿಸಿ, ಇಲ್ಲಿನ ಶೌಚಾಲಯ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಪರಿಶೀಲಿಸಿದ್ದೇನೆ. ಬಿಜಾಪುರ, ಗುಲ್ಬರ್ಗ ಸೇರಿದಂತೆ ಹಲವು ಎಪಿಎಂಸಿ ಮಾರುಕಟ್ಟೆ ಗಳಲ್ಲಿ ಆಗುತ್ತಿರುವ ಅನ್ಯಾಯಗಳನ್ನು ಆಲಿಸಿದ್ದೇನೆ. ರೈತರು ತಾವು ಬೆಳೆದ ಬೆಳೆಗಳನ್ನು ಯಾವ ಕಾರಣಕ್ಕಾಗಿ ಬೆಂಗಳೂರಿನ ಎಪಿಎಂಸಿ ಮಾರುಕಟ್ಟೆ ಗೆ ತಂದು ಮಾರುತ್ತಿದ್ದಾರೆ ಎಂದು ಅರಿತಿದ್ದೇನೆ. ರೈತರು ನೀಡುತ್ತಿರುವ ಕಮೀಷನ್ ಬಗ್ಗೆಯೂ ಮಾಹಿತಿ ಪಡೆದುಕೊಂಡಿದ್ದೇನೆ” ಎಂದರು.

ರಾಜ್ಯದ ಸಚಿವರು ಎಪಿಎಂಸಿಗಳಿಗೆ ಭೇಟಿ ನೀಡಿ ನ್ಯಾಯ ಒದಗಿಸಬೇಕು

ರಾಜ್ಯದ ಎಲ್ಲಾ ಎಪಿಎಂಸಿ ಮಾರುಕಟ್ಟೆಗಳಿಗೆ ಸಚಿವರು ಭೇಟಿ ನೀಡಿ ಪರಿಶೀಲಿಸಿ, ರೈತರಿಗೆ ಹಾಗೂ ವರ್ತಕರಿಗೆ ನ್ಯಾಯ ಒದಗಿಸಬೇಕು. ಎಪಿಎಂಸಿ ಯವರಿಗೆ ಈ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡಲಾಗುವುದು. ರೈತರಿಗೆ ಹಾಗೂ ವರ್ತಕರಿಗೆ ನ್ಯಾಯ ಒದಗಿಸಲು ನನ್ನದೇ ರೂಪುರೇಷೆಗಳಿವೆ" ಎಂದರು.

ಎಪಿಎಂಸಿ ಮಾರುಕಟ್ಟೆಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ

ಎಪಿಎಂಸಿ ಮಾರುಕಟ್ಟೆಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ಪಾರ್ಕಿಂಗ್ ವ್ಯವಸ್ಥೆಗೆ ಕರೆಯಲಾಗಿದ್ದ ಟೆಂಡರ್ ಗೆ ಯಾರೂ ಅರ್ಜಿ ಸಲ್ಲಿಸಿಲ್ಲವೆಂದು ತಿಳಿದುಬಂದಿದೆ. ಈ ಬಗ್ಗೆ ಕ್ರಮ ವಹಿಸಲಾಗುವುದು" ಎಂದರು.

Comments

Leave a Comment

Prev Post ಯುವಶಕ್ತಿಯೇ ಭಾರತದ ಭವಿಷ್ಯ; KPSCಗೆ ಕಾಯಕಲ್ಪ, ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಆದ್ಯತೆ: ಬಿ.ವೈ. ವಿಜಯೇಂದ್ರ
Next Post ಕ್ವಾಂಟಮ್ ಸಿಟಿ ನಿರ್ಮಾಣಕ್ಕೆ ತಂತ್ರಜ್ಞಾನ ಕ್ಷೇತ್ರದ ನಾಯಕರಿಗೆ ಸಚಿವ ಡಾ. ಅಜಯ್ ಧರ್ಮಸಿಂಗ್ ಆಹ್ವಾನ

ಮಧುಗಿರಿಯ ಇತಿಹಾಸ ಪ್ರಸಿದ್ಧ ಶ್ರೀ ದಂಡಿನ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವ ಶಾಸಕ ಕೆ ಎನ್ ರಾಜಣ್ಣರವರಿಂದ ವಿಶೇಷ ಪೂಜೆ

ಮಧುಗಿರಿಯ ಇತಿಹಾಸ ಪ್ರಸಿದ್ಧ ಶ್ರೀ ದಂಡಿನ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವ ಶಾಸಕ ಕೆ ಎನ್ ರಾಜಣ್ಣರವರಿಂದ ವಿಶೇಷ ಪೂಜೆ

ಕರ್ನಾಟಕ ಎಂ.ಎಸ್.ಎಂ.ಇ. ನೀತಿ - ರಾಜ್ಯ ಮಟ್ಟದ ಪಾಲುದಾರರ ಪೂರ್ವಭಾವಿ ಸಮಾಲೋಚನಾ ಕಾರ್ಯಗಾರ-

ಕರ್ನಾಟಕ ಎಂ.ಎಸ್.ಎಂ.ಇ. ನೀತಿ - ರಾಜ್ಯ ಮಟ್ಟದ ಪಾಲುದಾರರ ಪೂರ್ವಭಾವಿ ಸಮಾಲೋಚನಾ ಕಾರ್ಯಗಾರ-

ನಮಗೆ ನಿಜವಾದ ಗುರು ನಾವೇ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ;ಇಲಾಖೆಯ ಸಿಬ್ಬಂದಿ ಕ್ರೀಡಾಕೂಟಕ್ಕೆ ಸಚಿವರಿಂದ ಚಾಲನೆ

ನಮಗೆ ನಿಜವಾದ ಗುರು ನಾವೇ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ;ಇಲಾಖೆಯ ಸಿಬ್ಬಂದಿ ಕ್ರೀಡಾಕೂಟಕ್ಕೆ ಸಚಿವರಿಂದ ಚಾಲನೆ

ಎಲ್ಲ ಧರ್ಮಗಳೂ ಪ್ರೀತಿಯನ್ನೇ ಬೋಧಿಸುತ್ತವೆ ರಾಜಕೀಯವಾಗಿ ಸೋಲುಗೆಲುವು ಕಂಡಿದ್ದರೂ, ಜನಸೇವೆಯನ್ನು ಮರೆಯಲಾರೆ- ಮುಖ್ಯಮಂತ್ರಿ ಸಿದ್ದರಾಮಯ್ಯ

ಎಲ್ಲ ಧರ್ಮಗಳೂ ಪ್ರೀತಿಯನ್ನೇ ಬೋಧಿಸುತ್ತವೆ ರಾಜಕೀಯವಾಗಿ ಸೋಲುಗೆಲುವು ಕಂಡಿದ್ದರೂ, ಜನಸೇವೆಯನ್ನು ಮರೆಯಲಾರೆ- ಮುಖ್ಯಮಂತ್ರಿ ಸಿದ್ದರಾಮಯ್ಯ

ವ್ಯಸನಮುಕ್ತ ಸಮಾಜಕ್ಕಾಗಿ ಸಹಾಯವಾಣಿ ಸ್ಥಾಪನೆ

ವ್ಯಸನಮುಕ್ತ ಸಮಾಜಕ್ಕಾಗಿ ಸಹಾಯವಾಣಿ ಸ್ಥಾಪನೆ

ಮುನ್ನೂರು ಕುಟುಂಬಗಳಿಗೆ ೫೦ ಲಕ್ಷ ಮೊತ್ತದ ಬೆಂಬಲ ವಿತರಣೆ.

ಮುನ್ನೂರು ಕುಟುಂಬಗಳಿಗೆ ೫೦ ಲಕ್ಷ ಮೊತ್ತದ ಬೆಂಬಲ ವಿತರಣೆ.

Read all News