ಜಿಲ್ಲಾ, ತಾಲ್ಲೂಕು ಹಾಗೂ ಗ್ರಾಮ ಪಂಚಾಯತ್ ಮಟ್ಟದ ಸಮಿತಿಗಳ ರಚನೆ ಮತ್ತು ಜವಾಬ್ದಾರಿಗಳ ನಿಗದಿ
ಕರ್ನಾಟಕದಲ್ಲಿ "ತೇಗ ಸಿರಿ" ಯೋಜನೆ ಜಾರಿ: ಜಿಲ್ಲಾ, ತಾಲ್ಲೂಕು ಹಾಗೂ ಗ್ರಾಮ ಪಂಚಾಯತ್ ಮಟ್ಟದ ಸಮಿತಿಗಳ ರಚನೆ ಮತ್ತು ಜವಾಬ್ದಾರಿಗಳ ನಿಗದಿ
https://prabhavaa.com/media/documents/teack_trees_two.pdf
ರಾಜ್ಯದ ರೈತರ ಜಮೀನುಗಳಿಗೆ ಹೊಂದಿಕೊಂಡಿರುವ ರಸ್ತೆ ಬದಿಯ ಸೂಕ್ತ ಸರ್ಕಾರಿ ಜಮೀನುಗಳಲ್ಲಿ ತೇಗ ಹಾಗೂ ಇತರ ಆರ್ಥಿಕ ಮೌಲ್ಯದ ಮರಗಳನ್ನು ಬೆಳೆಸುವ ಮಹತ್ವಾಕಾಂಕ್ಷೆಯ "ತೇಗ ಸಿರಿ" ರಾಜ್ಯಮಟ್ಟದ ಸಮಗ್ರ ವೃಕ್ಷಾಭಿವೃದ್ಧಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರವು ಜಿಲ್ಲಾ, ತಾಲ್ಲೂಕು ಮತ್ತು ಗ್ರಾಮ ಪಂಚಾಯತ್ ಮಟ್ಟದಲ್ಲಿ ಹೊಸ ಸಮಿತಿಗಳನ್ನು ರಚಿಸಿ ಆದೇಶ ಹೊರಡಿಸಿದೆ. 2026-27ನೇ ಸಾಲಿನಿಂದ 2028-29ರವರೆಗೆ ಒಟ್ಟು 450 ಕೋಟಿ ರೂಪಾಯಿಗಳ ಅನುದಾನದೊಂದಿಗೆ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದ್ದು, ಕ್ಷೇತ್ರ ಮಟ್ಟದಲ್ಲಿ ಇದರ ಯಶಸ್ಸಿಗಾಗಿ ಈ ಸಮಿತಿಗಳಿಗೆ ನಿರ್ದಿಷ್ಟ ಜವಾಬ್ದಾರಿಗಳನ್ನು ಹಂಚಿಕೆ ಮಾಡಲಾಗಿದೆ.
ಜಿಲ್ಲಾ ಮಟ್ಟದ ಸಮಿತಿಗೆ ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿರಲಿದ್ದು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಪ್ರಾದೇಶಿಕ ಮತ್ತು ಸಾಮಾಜಿಕ ಅರಣ್ಯ ವಿಭಾಗಗಳ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಲೋಕೋಪಯೋಗಿ ಹಾಗೂ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಹಿರಿಯ ಅಭಿಯಂತರರು, ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳ ಉಪ ನಿರ್ದೇಶಕರು ಸದಸ್ಯರಾಗಿರಲಿದ್ದಾರೆ. ಕೇಂದ್ರದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಇದರ ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಈ ಸಮಿತಿಯು ರಸ್ತೆ ಬದಿಯ ಸೂಕ್ತ ಸರ್ಕಾರಿ ಜಮೀನುಗಳನ್ನು ಅಂತಿಮಗೊಳಿಸುವುದು, ವಾರ್ಷಿಕ ನೆಡುತೋಪು ಯೋಜನೆಗೆ ಅನುಮೋದನೆ ನೀಡುವುದು, ಗುಣಮಟ್ಟದ ಸಸಿಗಳ ಉತ್ಪಾದನೆಯನ್ನು ಖಚಿತಪಡಿಸುವುದು ಹಾಗೂ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆಗೆ ಅನುಕೂಲ ಕಲ್ಪಿಸುವ ಹೊಣೆಗಾರಿಕೆಯನ್ನು ಹೊಂದಿದೆ.
ತಾಲ್ಲೂಕು ಮಟ್ಟದ ಸಮಿತಿಗೆ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಅಧ್ಯಕ್ಷರಾಗಿದ್ದು, ತಹಶೀಲ್ದಾರ್ ಸಹ-ಅಧ್ಯಕ್ಷರಾಗಿರುತ್ತಾರೆ. ವಲಯ ಅರಣ್ಯಾಧಿಕಾರಿಗಳು, ಲೋಕೋಪಯೋಗಿ ಹಾಗೂ ಪಂಚಾಯತ್ ರಾಜ್ ಇಲಾಖೆಗಳ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಪ್ರತಿನಿಧಿಗಳು ಇದರ ಸದಸ್ಯರಾಗಲಿದ್ದಾರೆ. ಗ್ರಾಮ ಪಂಚಾಯತ್ ಮಟ್ಟದಿಂದ ಬರುವ ಪ್ರಸ್ತಾಪಗಳನ್ನು ಕ್ರೋಢೀಕರಿಸಿ ಜಿಲ್ಲಾ ಮಟ್ಟದ ಸಮಿತಿಗೆ ಸಲ್ಲಿಸುವುದು, ವಿಬಿ ಜಿ-ರಾಮ್-ಜಿ ಯೋಜನೆಯಡಿ ಕಾಮಗಾರಿಗಳನ್ನು ಮಂಜೂರು ಮಾಡಿಸುವುದು ಮತ್ತು ಸಸಿಗಳ ಸರಬರಾಜನ್ನು ಸಮನ್ವಯಗೊಳಿಸುವುದು ಈ ಸಮಿತಿಯ ಪ್ರಮುಖ ಕಾರ್ಯವಾಗಿದೆ.
ಗ್ರಾಮ ಪಂಚಾಯತ್ ಮಟ್ಟದ ಸಮಿತಿಯ ಅಧ್ಯಕ್ಷರಾಗಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ) ಕಾರ್ಯನಿರ್ವಹಿಸಲಿದ್ದು, ಸಂಬಂಧಿಸಿದ ಗ್ರಾಮ ಆಡಳಿತ ಅಧಿಕಾರಿಗಳು ಸಹ-ಅಧ್ಯಕ್ಷರಾಗಿರಲಿದ್ದಾರೆ. ಉಪ ವಲಯ ಅರಣ್ಯಾಧಿಕಾರಿಗಳು, ಇಂಜಿನಿಯರಿಂಗ್ ಸಿಬ್ಬಂದಿ ಹಾಗೂ ಕೃಷಿ-ತೋಟಗಾರಿಕೆ ಸಹಾಯಕರು ಸದಸ್ಯರಾಗಿರುವ ಈ ಸಮಿತಿಯು ರಸ್ತೆ ಭಾಗಗಳು, ಫಲಾನುಭವಿಗಳ ಹೆಸರು ಮತ್ತು ಸಸಿಗಳ ಸಂಖ್ಯೆಯನ್ನು ಗುರುತಿಸಿ ಪಟ್ಟಿ ತಯಾರಿಸುವ ಜವಾಬ್ದಾರಿಹೊಂದಿದೆ. ಪ್ರತಿಯೊಂದು ರಸ್ತೆ ಭಾಗವನ್ನು ಒಂದೊಂದು ಕಾಮಗಾರಿ ಎಂದು ಪರಿಗಣಿಸಲಾಗುತ್ತಿದ್ದು, ಆ ರಸ್ತೆ ಬದಿಯಲ್ಲಿ ಜಮೀನು ಹೊಂದಿರುವ ರೈತರೆಲ್ಲರೂ ಈ ಯೋಜನೆಯ ಅರ್ಹ ಫಲಾನುಭವಿಗಳಾಗಲಿದ್ದಾರೆ.
ಯೋಜನೆಯಡಿ ಗುಂಡಿ ತೋಡುವುದು, ನೆಡುವಿಕೆ, ಕಳೆ ತೆಗೆಯುವುದು ಹಾಗೂ ಗೊಬ್ಬರ ಹಾಕುವುದು ಮುಂತಾದ ಕೂಲಿ ಕೆಲಸಗಳನ್ನು ವಿಬಿ ಜಿ-ರಾಮ್-ಜಿ ಯೋಜನೆಯ ಮಾರ್ಗಸೂಚಿಗಳನ್ವಯ ಅರಣ್ಯ ಇಲಾಖೆಯ ತಾಂತ್ರಿಕ ಮೇಲ್ವಿಚಾರಣೆಯಲ್ಲಿ ಗ್ರಾಮ ಪಂಚಾಯತ್ ಅನುಷ್ಠಾನಗೊಳಿಸಲಿದೆ. ಅರಣ್ಯ ಇಲಾಖೆಯು ತೇಗ, ಮಹಾಗನಿ, ಹೆಬ್ಬೇವು, ಹಲಸು, ಮಾವು, ಬೇವು ಸೇರಿದಂತೆ ವಿವಿಧ ಆರ್ಥಿಕ ಮೌಲ್ಯದ ಸಸಿಗಳನ್ನು ಬೆಳೆಸಿ ಪಂಚಾಯತ್‌ಗಳಿಗೆ ಪೂರೈಸಲಿದೆ. ಆದರೆ ಹುಣಸೆ ಮತ್ತು ನೇರಳೆಯಂತಹ ನಿಧಾನವಾಗಿ ಬೆಳೆಯುವ ಹಾಗೂ ಹಣ್ಣು ಬಿಡುವ ಜಾತಿಯ ಸಸಿಗಳನ್ನು ನೆಡುವುದನ್ನು ನಿಷೇಧಿಸಲಾಗಿದೆ. ಯಶಸ್ವಿ ಅನುಷ್ಠಾನಕ್ಕಾಗಿ ಪ್ರತಿ ವಲಯಕ್ಕೆ ಸುಗಮಗಾರರನ್ನು ನಿಯೋಜಿಸಲಾಗುತ್ತಿದ್ದು, ಫಲಾನುಭವಿಗಳಿಗೆ ಭಾವಚಿತ್ರದೊಂದಿಗೆ ಉತ್ತಮ ಗುಣಮಟ್ಟದ ಮರಪಟ್ಟಾ (ಪಾಸ್‌ಬುಕ್) ವಿತರಿಸಲಾಗುತ್ತದೆ. ಜಿಲ್ಲಾ ಮಟ್ಟದ ಸಮಿತಿಯು ಪ್ರತಿ ತಿಂಗಳು, ತಾಲ್ಲೂಕು ಮಟ್ಟದ ಸಮಿತಿಯು ಹದಿನೈದು ದಿನಕ್ಕೊಮ್ಮೆ ಹಾಗೂ ಗ್ರಾಮ ಪಂಚಾಯತ್ ಸಮಿತಿಯು ನೆಡುವ ಋತುವಿನಲ್ಲಿ ವಾರಕ್ಕೊಮ್ಮೆ ಸಭೆ ನಡೆಸಿ ಪ್ರಗತಿ ವರದಿ ಸಲ್ಲಿಸಬೇಕು ಎಂದು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.







Comments
Leave a Comment