ಅಬಕಾರಿ ಇಲಾಖೆಯಿಂದ ಕಠಿಣ ಕ್ರಮ: ಹಣ ಪಾವತಿಸದ 40 ಮದ್ಯದಂಗಡಿ ಪರವಾನಗಿಗಳು ರದ್ದು, ಇಎಂಡಿ ಜಪ್ತಿ
ಅಬಕಾರಿ ಇಲಾಖೆಯಿಂದ ಕಠಿಣ ಕ್ರಮ: ಹಣ ಪಾವತಿಸದ 40 ಮದ್ಯದಂಗಡಿ ಪರವಾನಗಿಗಳು ರದ್ದು, ಇಎಂಡಿ ಜಪ್ತಿ
copy ; https://prabhavaa.com/media/documents/excise_dept.pdf
ಬೆಂಗಳೂರು,ಅ.26-ರಾಜ್ಯದಲ್ಲಿ ಮದ್ಯದಂಗಡಿಗಳ ಇ-ಹರಾಜು ಪ್ರಕ್ರಿಯೆಗೆ ಸಂಬಂಧಿಸಿದಂತೆ ಅಬಕಾರಿ ಇಲಾಖೆಯು ಬಹುದೊಡ್ಡ ಹಾಗೂ ಕಠಿಣ ಕ್ರಮ ಕೈಗೊಂಡಿದೆ. 2026-27ನೇ ಸಾಲಿನ ಸಿಎಲ್(2-ಎ) ಮತ್ತು ಸಿಎಲ್(9-ಎ) ಮದ್ಯ ಮಾರಾಟ ಪರವಾನಗಿ ಹರಾಜಿನಲ್ಲಿ ಗೆದ್ದು, ನಿಗದಿತ ಅವಧಿಯೊಳಗೆ ಹಣ ಪಾವತಿಸದ 40 ಯಶಸ್ವಿ ಬಿಡ್ಡರ್ಗಳ ಪರವಾನಗಿಗಳನ್ನು ರದ್ದುಪಡಿಸಿ ಅಬಕಾರಿ ಆಯುಕ್ತರ ಕಚೇರಿ ಆದೇಶ ಹೊರಡಿಸಿದೆ. ಜತೆಗೆ ಈ ಬಿಡ್ಡರ್ಗಳು ಪಾವತಿಸಿದ್ದ ಲಕ್ಷಾಂತರ ರೂಪಾಯಿ ಭದ್ರತಾ ಮುಂಗಡ ಹಣವನ್ನು (EMD) ಸರ್ಕಾರ ಜಪ್ತಿ ಮಾಡಿಕೊಂಡಿದೆ.
ಕರ್ನಾಟಕ ರಾಜ್ಯ ಅಬಕಾರಿ ಇಲಾಖೆಯು 2026ರ ಜುಲೈ 24 ರಿಂದ 31ರ ವರೆಗೆ ಎಂ.ಎಸ್.ಟಿ.ಸಿ ಪೋರ್ಟಲ್ ಮೂಲಕ ಸಿಎಲ್ 2-ಎ ಮತ್ತು ಸಿಎಲ್ 9-ಎ ಅಬಕಾರಿ ಪರವಾನಗಿಗಳಿಗಾಗಿ ಇ-ಹರಾಜು ನಡೆಸಿತ್ತು. ಒಟ್ಟು 579 ಪರವಾನಗಿಗಳ ಪೈಕಿ 125 ಪರವಾನಗಿಗಳಿಗೆ ಅತಿ ಹೆಚ್ಚು ಬಿಡ್ ಬಂದಿತ್ತಾದರೂ, ಬಿಡನಲ್ಲಿ ಭಾಹವಹಿಸಿದವರ ಪೈಕಿ 40 ಮಂದಿ ಬಿಡ್ಡರ್ಗಳು ನಿಯಮಾನುಸಾರ ಎಂ.ಎಸ್.ಟಿ.ಸಿ ವಹಿವಾಟು ಶುಲ್ಕ ಮತ್ತು ಒಟ್ಟು ಬಿಡ್ ಮೊತ್ತದ ಶೇಕಡಾ 50ಕ್ಕಿಂತ ಕಡಿಮೆ ಇಲ್ಲದ ಹಣವನ್ನು ನಿಗದಿತ ಅವಧಿಯೊಳಗೆ ಪಾವತಿಸುವಲ್ಲಿ ವಿಫಲರಾಗಿದ್ದಾರೆ.
ಹಣ ಪಾವತಿಸಲು ಆರಂಭದಲ್ಲಿ 2026ರ ಆಗಸ್ಟ್ 3ರಿಂದ 11ರ ವರೆಗೆ ಸಮಯ ನೀಡಲಾಗಿದ್ದು, ನಂತರ ಈ ಗಡುವನ್ನು ಮೊದಲು ಆಗಸ್ಟ್ 18ಕ್ಕೆ ಹಾಗೂ ಸರ್ಕಾರದ ಸೂಚನೆಯ ಮೇರೆಗೆ ಸೆಪ್ಟೆಂಬರ್ 5ರ ವರೆಗೆ ವಿಸ್ತರಿಸಲಾಗಿತ್ತು. ಜತೆಗೆ ಸಂಬಂಧಪಟ್ಟ ಎಲ್ಲ ಬಿಡ್ಡರ್ಗಳಿಗೆ ಅಂತಿಮ ನೋಟಿಸ್ಗಳನ್ನು ಸಹ ನೀಡಲಾಗಿದ್ದರೂ ಈ 40 ಬಿಡ್ಡರ್ಗಳು ಹಣ ಪಾವತಿಸಿರಲಿಲ್ಲ. ಇವರಲ್ಲಿ 19 ಮಂದಿ ತಾವು ಹಣ ಪಾವತಿಸುವುದಿಲ್ಲ ಎಂದು ತಿಳಿಸಿದ್ದರೆ, 17 ಮಂದಿ ವಹಿವಾಟು ಶುಲ್ಕ ಮಾತ್ರ ಪಾವತಿಸಿ ಮೊದಲ ಕಂತಿನ ಹಣ ನೀಡಿಲ್ಲ ಹಾಗೂ 4 ಮಂದಿ ಯಾವುದೇ ಶುಲ್ಕ ಅಥವಾ ಕಂತನ್ನು ಪಾವತಿಸಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ನಿಯಮಗಳ ಅನ್ವಯ ಅಬಕಾರಿ ಇಲಾಖೆಯು ಈ 40 ಪರವಾನಗಿಗಳಿಗೆ ಸಂಬಂಧಿಸಿದ ವಿಜೇತ ಬಿಡ್ಗಳನ್ನು ರದ್ದುಗೊಳಿಸಿದೆ ಮತ್ತು ಪ್ರಾಥಮಿಕ ಒಪ್ಪಿಗೆಯ ಸೂಚನೆಗಳನ್ನು ರದ್ದುಪಡಿಸಿದೆ. ಅಲ್ಲದೆ ಬಿಡ್ಡರ್ಗಳು ಪಾವತಿಸಿದ್ದ ಭದ್ರತಾ ಮುಂಗಡ ಹಣವನ್ನು ಸರ್ಕಾರದ ವಶಕ್ಕೆ ಜಪ್ತಿ ಮಾಡಿಕೊಳ್ಳಲಾಗಿದ್ದು, ಈ ಎಲ್ಲಾ 40 ಪರವಾನಗಿಗಳನ್ನು ಮರು-ಹರಾಜು ಪೂಲ್ಗೆ ಸೇರಿಸಿ ಉಳಿದ ಮಾರಾಟವಾಗದ ಪರವಾನಗಿಗಳೊಂದಿಗೆ ಇವುಗಳಿಗೂ ಮರು-ಇ-ಹರಾಜು ನಡೆಸಲಾಗುತ್ತದೆ. ಎಂ.ಎಸ್.ಟಿ.ಸಿ ಲಿಮಿಟೆಡ್ ಸಂಸ್ಥೆಗೆ ಇ-ಹರಾಜು ವೇದಿಕೆಯಲ್ಲಿ ಸಂಬಂಧಿಸಿದ ಲಾಟ್ಗಳನ್ನು ಮುಚ್ಚಲು ಹಾಗೂ ನಿಯಮಾನುಸಾರ ಹಣ ಮರುಹೊಂದಾಣಿಕೆ ಮಾಡುವಂತೆ ಸೂಚನೆ ನೀಡಲಾಗಿದ್ದು, ಕರ್ನಾಟಕ ಅಬಕಾರಿ ಕಾಯ್ದೆ 1965ರ ಅಡಿಯಲ್ಲಿ ಮುಂದಿನ ಕಾನೂನು ಕ್ರಮಗಳನ್ನು ಜರುಗಿಸಲಾಗುವುದು ಎಂದು ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತರು ತಿಳಿಸಿದ್ದಾರೆ.
ಅಬಕಾರಿ ಆಯುಕ್ತರ ಕಚೇರಿಯಿಂದ ಅಕ್ಟೋಬರ್ 22, 2026ರಂದು ಹೊರಡಿಸಿರುವ ಆದೇಶ ಪ್ರಕಾರ ಜುಲೈ 24ರಿಂದ 31ರವರೆಗೆ ಎಂಎಸ್ಟಿಸಿ ಪೋರ್ಟಲ್ ಮೂಲಕ ನಡೆಸಲಾದ ಇ-ಹರಾಜಿನಲ್ಲಿ ಒಟ್ಟು 579 ಪರವಾನಗಿಗಳನ್ನು ಹರಾಜಿಗೆ ಇಡಲಾಗಿತ್ತು. ಇದರಲ್ಲಿ 125 ಪರವಾನಗಿಗಳಿಗೆ ಯಶಸ್ವಿ ಎಚ್-1 ಬಿಡ್ಗಳು ಬಂದಿದ್ದವು. ಈ ಪೈಕಿ 85 ಬಿಡ್ಡರ್ಗಳು ಎಂಎಸ್ಟಿಸಿ ವಹಿವಾಟು ಶುಲ್ಕ ಹಾಗೂ ಗೆದ್ದ ಮೊತ್ತದ ಕನಿಷ್ಠ ಶೇ.50 ಹಣ ಪಾವತಿಸಿ ಪರವಾನಗಿ ಪಡೆಯುವ ಪ್ರಕ್ರಿಯೆ ಪೂರ್ಣಗೊಳಿಸಿದ್ದರು.
ಆದರೆ ಉಳಿದ 40 ಬಿಡ್ಡರ್ಗಳು ನಿಗದಿತ ಅವಧಿಯಲ್ಲೂ ಹಾಗೂ ಅವಧಿ ವಿಸ್ತರಣೆ ನೀಡಿದ ಬಳಿಕವೂ ಅಗತ್ಯ ಮೊತ್ತ ಪಾವತಿಸಲು ವಿಫಲರಾಗಿದ್ದಾರೆ. ಮೊದಲ ಕಂತು ಪಾವತಿಗೆ ಆಗಸ್ಟ್ 11ರವರೆಗೆ ಸಮಯ ನೀಡಲಾಗಿತ್ತು. ಬಳಿಕ ಸರ್ಕಾರದ ನಿರ್ದೇಶನದಂತೆ ಆಗಸ್ಟ್ 18ರವರೆಗೆ ಹಾಗೂ ನಂತರ ಸೆಪ್ಟೆಂಬರ್ 5ರವರೆಗೆ ಗಡುವು ವಿಸ್ತರಣೆ ಮಾಡಲಾಗಿತ್ತು. ಅಂತಿಮ ನೋಟಿಸ್ಗಳನ್ನೂ ಜಾರಿ ಮಾಡಲಾಗಿದ್ದರೂ ಸಂಬಂಧಿತ ಬಿಡ್ಡರ್ಗಳು ಹಣ ಪಾವತಿಸಿಲ್ಲ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಇವರಲ್ಲಿ 19 ಮಂದಿ ಬಿಡ್ ಮೊತ್ತ ಪಾವತಿಸುವ ಉದ್ದೇಶವಿಲ್ಲ ಎಂದು ಇಲಾಖೆಗೆ ತಿಳಿಸಿದ್ದರೆ, 17 ಮಂದಿ ಎಂಎಸ್ಟಿಸಿ ಶುಲ್ಕ ಪಾವತಿಸಿ ಮೊದಲ ಕಂತು ಜಮಾ ಮಾಡಿರಲಿಲ್ಲ. ಉಳಿದ ನಾಲ್ವರು ಯಾವುದೇ ಹಣ ಪಾವತಿಸಿರಲಿಲ್ಲ. ಹೀಗಾಗಿ ಅವರಿಗೆ ಸಮರ್ಪಕ ಅವಕಾಶ ನೀಡಿದ ಬಳಿಕ ಕ್ರಮ ಕೈಗೊಳ್ಳಲಾಗಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಸರ್ಕಾರದ ಅಧಿಸೂಚನೆಯ ನಿಯಮಾವಳಿಗಳ ಪ್ರಕಾರ, ನಿಗದಿತ ಅವಧಿಯಲ್ಲಿ ಹಣ ಪಾವತಿಸಲು ವಿಫಲರಾದರೆ ಬಿಡ್ ರದ್ದುಪಡಿಸುವ ಮತ್ತು ಭದ್ರತಾ ಠೇವಣಿ ಜಪ್ತಿ ಮಾಡುವ ಅಧಿಕಾರ ಹರಾಜು ಪ್ರಾಧಿಕಾರಕ್ಕೆ ಇದೆ. ಅದರಂತೆ 40 ಪರವಾನಗಿಗಳ ಗೆದ್ದ ಬಿಡ್ಗಳನ್ನು ರದ್ದುಪಡಿಸಿ, ಅವರಿಗೆ ನೀಡಿದ್ದ ತಾತ್ಕಾಲಿಕ ಒಪ್ಪಿಗೆ ಪತ್ರಗಳನ್ನು ಅಮಾನ್ಯಗೊಳಿಸಲಾಗಿದೆ. ಜತೆಗೆ ಅವರು ಪಾವತಿಸಿದ್ದ ಇಎಂಡಿ ಮೊತ್ತವನ್ನು ಸರ್ಕಾರದ ಪರವಾಗಿ ಜಪ್ತಿ ಮಾಡಲಾಗಿದೆ.
ಅಲ್ಲದೆ ರದ್ದಾದ ಈ 40 ಪರವಾನಗಿಗಳನ್ನು ಮತ್ತೆ ಹರಾಜು ಪ್ರಕ್ರಿಯೆಗೆ ಸೇರಿಸಿ ಮುಂದಿನ ಇ-ಹರಾಜಿನಲ್ಲಿ ಮರು ಅಧಿಸೂಚನೆ ಹೊರಡಿಸಲು ನಿರ್ಧರಿಸಲಾಗಿದೆ. ಎಂಎಸ್ಟಿಸಿ ಸಂಸ್ಥೆಗೆ ಸಂಬಂಧಿಸಿದ ಲಾಟ್ಗಳನ್ನು ಮುಚ್ಚುವಂತೆ ಹಾಗೂ ಉಳಿದಿರುವ ವಾಲೆಟ್ ಮೊತ್ತವನ್ನು ನಿಯಮಾನುಸಾರ ಹಿಂತಿರುಗಿಸುವಂತೆ ಸೂಚಿಸಲಾಗಿದೆ.
ರದ್ದುಗೊಂಡ ಪರವಾನಗಿಗಳ ಪೈಕಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಕ್ಷಿಣ ಕನ್ನಡ, ದಾವಣಗೆರೆ, ಗದಗ, ಹಾಸನ, ಹಾವೇರಿ, ಕಲಬುರಗಿ, ಕೊಪ್ಪಳ, ತುಮಕೂರು, ವಿಜಯಪುರ, ವಿಜಯನಗರ ಹಾಗೂ ಯಾದಗಿರಿ ಜಿಲ್ಲೆಗಳ ಪರವಾನಗಿಗಳೂ ಸೇರಿವೆ.
ಅಧಿಕೃತ ದಾಖಲೆಗಳ ಪ್ರಕಾರ, ಈ 40 ಪರವಾನಗಿಗಳ ಒಟ್ಟು ಮೂಲ ಬೆಲೆ 39.70 ಕೋಟಿ ರೂಪಾಯಿ ಆಗಿದ್ದು, ಸರ್ಕಾರ ಜಪ್ತಿ ಮಾಡಿಕೊಂಡಿರುವ ಇಎಂಡಿ ಮೊತ್ತ 79.40 ಲಕ್ಷ ರೂಪಾಯಿ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಈ ಆದೇಶವನ್ನು ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತ ಹಾಗೂ ಇ-ಹರಾಜು ಪ್ರಾಧಿಕಾರದ ಅಧಿಕಾರಿಗಳು ಹೊರಡಿಸಿದ್ದು, ಕರ್ನಾಟಕ ಅಬಕಾರಿ ಕಾಯ್ದೆ ಹಾಗೂ ಸಂಬಂಧಿತ ನಿಯಮಗಳ ಅಡಿಯಲ್ಲಿ ಮುಂದಿನ ಕ್ರಮಗಳಿಗೂ ಈ ಆದೇಶವು ಅಡ್ಡಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.ಕರ್ನಾಟಕ ಅಬಕಾರಿ ಕಾಯ್ದೆ 1965ರ ಅಡಿಯಲ್ಲಿ ಮುಂದಿನ ಕಾನೂನು ಕ್ರಮಗಳನ್ನು ಜರುಗಿಸಲಾಗುವುದು ಎಂದು ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತರು ತಿಳಿಸಿದ್ದಾರೆ.






Comments
Leave a Comment