ಗೌರಿ-ಗಣೇಶ ಹಬ್ಬಕ್ಕೆ ರಾಜ್ಯದಾದ್ಯಂತ ಪೊಲೀಸ್ ಇಲಾಖೆಯ ಬೃಹತ್ ಬಂದೋಬಸ್ತ್
ಗೌರಿ-ಗಣೇಶ ಹಬ್ಬಕ್ಕೆ ರಾಜ್ಯದಾದ್ಯಂತ ಪೊಲೀಸ್ ಇಲಾಖೆಯ ಬೃಹತ್ ಬಂದೋಬಸ್ತ್
ಬೆಂಗಳೂರು, ಸೆ. ೧೦ – ಗೌರಿ-ಗಣೇಶ ಹಬ್ಬದ ಸಂಭ್ರಮಕ್ಕೆ ರಾಜ್ಯವೇ ಸಜ್ಜಾಗಿದೆ. ಆದರೆ ಹಬ್ಬದ ಉತ್ಸಾಹದ ನಡುವೆ ಶಾಂತಿ, ಸುವ್ಯವಸ್ಥೆ ಹಾಗೂ ಸಾರ್ವಜನಿಕರ ಸುರಕ್ಷತೆ ಕಾಪಾಡುವುದು ಪೊಲೀಸ್ ಇಲಾಖೆಯ ದೊಡ್ಡ ಸವಾಲು. ಈ ಹಿನ್ನೆಲೆಯಲ್ಲಿ, ಕರ್ನಾಟಕ ಪೊಲೀಸ್ ಇಲಾಖೆ ಬೃಹತ್ ಬಂದೋಬಸ್ತ್ ಯೋಜನೆ ರೂಪಿಸಿ, ಹಿರಿಯ ಅಧಿಕಾರಿಗಳನ್ನೇ ವಿವಿಧ ವಲಯಗಳು ಮತ್ತು ಜಿಲ್ಲೆಗಳ ಉಸ್ತುವಾರಿಗೆ ನಿಯೋಜಿಸಿದೆ. ಹಬ್ಬದ ಸಂಭ್ರಮದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಶಾಂತಿ, ಸುವ್ಯವಸ್ಥೆ ಹಾಗೂ ಭದ್ರತೆ ಕಾಪಾಡಲು ಪೊಲೀಸ್ ಇಲಾಖೆಯು ಬೃಹತ್ ಬಂದೋಬಸ್ತ್ ವ್ಯವಸ್ಥೆ ಕೈಗೊಂಡಿದೆ. ಡೈರೆಕ್ಟರ್ ಜನರಲ್ ಮತ್ತು ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ ಡಾ. ಎಂ.ಎ. ಸಲೀಂ ಅವರ ಆದೇಶದಂತೆ, ರಾಜ್ಯದ ವಿವಿಧ ವಲಯಗಳು, ನಗರಗಳು ಹಾಗೂ ಜಿಲ್ಲೆಗಳ ಬಂದೋಬಸ್ತ್ ಉಸ್ತುವಾರಿ ನೋಡಿಕೊಳ್ಳಲು ಹಿರಿಯ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.
ಈ ಆದೇಶದಂತೆ, ಎಡಿಜಿಪಿ ಆರ್. ಹಿತೇಂದ್ರ ಅವರನ್ನು ಬೆಳಗಾವಿ ನಗರ ಮತ್ತು ಉತ್ತರ ವಲಯಕ್ಕೆ, ಎಡಿಜಿಪಿ ಬಿ.ಕೆ. ಸಿಂಗ್ ಅವರನ್ನು ಮೈಸೂರು ನಗರ ಮತ್ತು ದಕ್ಷಿಣ ವಲಯಕ್ಕೆ, ಎಡಿಜಿಪಿ ಮುರುಗನ್ ಅವರನ್ನು ಶಿವಮೊಗ್ಗ ಹಾಗೂ ದಾವಣಗೆರೆ ವಲಯಕ್ಕೆ, ಎಡಿಜಿಪಿ ಹೇಮಂತ್ ಎಂ. ನಿಂಬಾಳ್ಳರ್ ಅವರನ್ನು ಬೆಂಗಳೂರು ಕೇಂದ್ರ ವಲಯಕ್ಕೆ, ಎಡಿಜಿಪಿ ಎಂ. ಚಂದ್ರಶೇಖರ್ ಅವರನ್ನು ಮಂಗಳೂರು ಪಶ್ಚಿಮ ವಲಯಕ್ಕೆ ಹಾಗೂ ಎಡಿಜಿಪಿ ದೇವಜ್ಯೋತಿ ರೇ ಅವರನ್ನು ಕಲಬುರಗಿ ನಗರ ಮತ್ತು ಈಶಾನ್ಯ ವಲಯಕ್ಕೆ ನಿಯೋಜಿಸಲಾಗಿದೆ.
ಇದೇ ರೀತಿ, ಐಜಿಪಿ ಲಾಬೂರಾಮ್ ಅವರನ್ನು ಹುಬ್ಬಳ್ಳಿ-ಧಾರವಾಡ ನಗರಕ್ಕೆ, ಐಜಿಪಿ ಚೇತನ್ ಸಿಂಗ್ ರಾಥೋಡ್ ಅವರನ್ನು ಬಾಗಲಕೋಟೆ ಜಿಲ್ಲೆಗೆ, ಐಜಿಪಿ ಅಮಿತ್ ಸಿಂಗೋ ಅವರನ್ನು ಚಿಕ್ಕಮಗಳೂರು ಜಿಲ್ಲೆಗೆ, ಡಾ. ತ್ಯಾಗರಾಜನ್ ಕೆ ಅವರನ್ನು ರಾಯಚೂರು ಜಿಲ್ಲೆಗೆ, ಡಿಐಜಿಪಿ ಟಿ. ಶ್ರೀಧರರನ್ನು ಕೊಪ್ಪಳ ಜಿಲ್ಲೆಗೆ, ಡಿಐಜಿಪಿ ವಿಷ್ಣುವರ್ಧನ ಎನ್ ಅವರನ್ನು ಹಾವೇರಿ ಜಿಲ್ಲೆಗೆ ಹಾಗೂ ನಿರ್ದೇಶಕರು, ಕೆಪಿಎ ಮೈಸೂರು ಅವರನ್ನು ಮಂಡ್ಯ ಜಿಲ್ಲೆಗೆ ಬಂದೋಬಸ್ತ್ ಉಸ್ತುವಾರಿ ವಹಿಸಲಾಗಿದೆ.
ಅದೇ ಸಮಯದಲ್ಲಿ, ಎಸ್‌ಪಿ ರಿಷ್ಯಂತ್ ಅವರನ್ನು ಬೆಳಗಾವಿ ನಗರಕ್ಕೆ, ಎಸ್‌ಪಿ ಲೋಕೇಶ್ ಭರಮಪ್ಪ ಜಗಲಾಸರ್ ಅವರನ್ನು ಹುಬ್ಬಳ್ಳಿ-ಧಾರವಾಡ ನಗರಕ್ಕೆ, ಕಮಾಂಡೆಂಟ್ ಅಮರನಾಥ ರೆಡ್ಡಿ ಅವರನ್ನು ಬಾಗಲಕೋಟೆ ಜಿಲ್ಲೆಗೆ, ಎಸ್‌ಪಿ ಎಂ. ರಾಜೀವ್ ಅವರನ್ನು ಶಿವಮೊಗ್ಗ ಜಿಲ್ಲೆಗೆ, ಎಸ್‌ಪಿ ಎಂ.ಎನ್. ಕರಿಬಸವನಗೌಡ ಹಾಗೂ ಎಸ್‌ಪಿ ನಂಜುಂಡೇಗೌಡ ಕೆ. ಅವರನ್ನು ಮಂಡ್ಯ ಜಿಲ್ಲೆಗೆ, ಎಸ್‌ಪಿ ನಾಗರಾಜ್ ಕೆ.ಎಸ್. ಅವರನ್ನು ಚಿಕ್ಕಮಗಳೂರು ಜಿಲ್ಲೆಗೆ, ಹಾಗೂ ಎಸ್‌ಪಿ ಬಿ.ಎಸ್. ಶ್ರೀನಿವಾಸ್ ಅವರನ್ನು ಉತ್ತರ ಕನ್ನಡ ಜಿಲ್ಲೆಗೆ ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.
ಅಧಿಕಾರಿಗಳು ತಮ್ಮ ತಮ್ಮ ವಲಯಗಳಲ್ಲಿ ಖುದ್ದಾಗಿ ಹಾಜರಿದ್ದು, ಪ್ರಮುಖ ಗಣೇಶ ವಿಸರ್ಜನೆ ಸಂದರ್ಭಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಂದೋಬಸ್ತ್ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಲಾಗಿದೆ. ರಾಜ್ಯದಾದ್ಯಂತ ಪೊಲೀಸ್ ಇಲಾಖೆಯು ಸಮಗ್ರ ಸಿದ್ಧತೆ ಕೈಗೊಂಡಿದ್ದು, ಹಬ್ಬದ ಸಂದರ್ಭದಲ್ಲಿ ಶಾಂತಿ, ಸುವ್ಯವಸ್ಥೆ ಹಾಗೂ ಸಾರ್ವಜನಿಕರ ಸುರಕ್ಷತೆ ಕಾಪಾಡಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ.







Comments
Leave a Comment