ಎಂಆರ್‌ಜಿ ಸಮೂಹದ ಸಂಸ್ಥಾಪಕ ಹಾಗೂ ಅಧ್ಯಕ್ಷರಾದ ಡಾ. ಕೆ. ಪ್ರಕಾಶ್ ಶೆಟ್ಟಿ ಅವರು ತಮ್ಮ ಉದ್ಯಮ ಸಮೂಹಕ್ಕೆ ಖಾಸಗಿ ವಿಮಾನ
From Jayaram Udupi
ಮಂಗಳೂರು:
ಎಂಆರ್‌ಜಿ ಸಮೂಹದ ಸಂಸ್ಥಾಪಕ ಹಾಗೂ ಅಧ್ಯಕ್ಷರಾದ ಡಾ. ಕೆ. ಪ್ರಕಾಶ್ ಶೆಟ್ಟಿ ಅವರು ತಮ್ಮ ಉದ್ಯಮ ಸಮೂಹಕ್ಕೆ ಖಾಸಗಿ ವಿಮಾನವನ್ನು ಸೇರ್ಪಡೆಗೊಳಿಸಿದ್ದಾರೆ.
ಆತಿಥ್ಯೋದ್ಯಮ, ರಿಯಲ್ ಎಸ್ಟೇಟ್ , ಮಾಹಿತಿ ತಂತ್ರಜ್ಞಾನ ಮೂಲಸೌಕರ್ಯ ನಿರ್ಮಾಣ ಕ್ಷೇತ್ರ ಸಹಿತ ವೈವಿಧ್ಯಮಯ ಉದ್ಯಮಗಳಲ್ಲಿ ತೊಡಗಿಸಿಕೊಂಡಿರುವ ಡಾ.ಪ್ರಕಾಶ್ ಶೆಟ್ಟಿ ಅವರು ಖಾಸಗಿ ವಿಮಾನ ಹೊಂದಿರುವ ಕರ್ನಾಟಕ ಕರಾವಳಿಯ ಉದ್ಯಮಿಗಳಲ್ಲಿ ಮೊದಲಿಗರು.
ಅಮೆರಿಕದಿಂದ ತರಿಸಲಾದ 14 ಆಸನಗಳ ಎಂಬ್ರೇಯರ್ ಲೆಗಸಿ 650 (Embraer Legacy 650) ಖಾಸಗಿ ವಿಮಾನವನ್ನು ಎಂಆರ್‌ಜಿ ಕುಟುಂಬಕ್ಕೆ ವಿಧ್ಯುಕ್ತವಾಗಿ ಸೇರ್ಪಡೆಗೊಳಿಸುವ ಸಮಾರಂಭ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆಯಿತು.
ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಕುಟುಂಬ ಸದಸ್ಯರು, ಆಪ್ತರು ಹಾಗೂ ಹಿತೈಷಿಗಳು ಈ ಸಂಭ್ರಮದ ಕ್ಷಣಕ್ಕೆ ಸಾಕ್ಷಿಯಾದರು.
ವಿನಯ, ಪರಿಶ್ರಮ ಮತ್ತು ದೂರದೃಷ್ಟಿಯೊಂದಿಗೆ ಎಂ.ಆರ್.ಜಿ. ಉದ್ಯಮ ಸಮೂಹವನ್ನು ಕಟ್ಟಿ ಬೆಳೆಸಿದ ಡಾ. ಪ್ರಕಾಶ್ ಶೆಟ್ಟಿ ಅವರು ಯಶಸ್ವಿ ಉದ್ಯಮಿಯಾಗಿರುವುದರ ಜೊತೆಗೆ ಸಮಾಜಮುಖಿ ಚಟುವಟಿಕೆಗಳು ಮತ್ತು ದಾನಧರ್ಮಗಳ ಮೂಲಕವೂ ಹೆಸರುವಾಸಿಯಾಗಿದ್ದಾರೆ.ವರ್ಷಂಪ್ರತಿ ಮಂಗಳೂರಿನಲ್ಲಿ ಸಹಾಯ ಹಸ್ತ ನೆರವು ಕಾರ್ಯಕ್ರಮದ ಮೂಲಕ ಸಮಾಜದಲ್ಲಿರುವ ಸೌಲಭ್ಯವಂಚಿತರ ಮುಖದಲ್ಲಿ ಸಂತೋಷ ಮೂಡಿಸುವ ಯಶಸ್ವೀ ಪ್ರಯತ್ನವನ್ನು ಅವರು ನಡೆಸುತ್ತಿದ್ದಾರೆ. ಇದು ಸಾಮಜಿಕ ಪರಿವರ್ತನೆಗೂ ಕಾರಣವಾಗಿದೆ.
ಎಂ.ಆರ್.ಜಿ. ಗುಂಪು ದೇಶದ ವಿವಿಧ ಭಾಗಗಳಲ್ಲಿ ಹೋಟೆಲ್‌ಗಳು ಹಾಗೂ ವಿವಿಧ ಉದ್ಯಮಗಳ ಮೂಲಕ ವಿಸ್ತಾರಗೊಂಡಿದ್ದು, ಈ ಹೊಸ ಸೇರ್ಪಡೆ ಸಂಸ್ಥೆಯ ಬೆಳವಣಿಗೆ ಹಾಗೂ ಜಾಗತಿಕ ದೃಷ್ಟಿಕೋನದ ಪ್ರತೀಕವಾಗಿದೆ ಎಂದು ಸಂಸ್ಥೆಯ ಅಧಿಕೃತ ಹೇಳಿಕೆ ತಿಳಿಸಿದೆ.
ದೀರ್ಘ ದೂರದ ಪ್ರಯಾಣ ಸಾಮರ್ಥ್ಯ ಮತ್ತು ಅತ್ಯಾಧುನಿಕ ಸೌಲಭ್ಯಗಳಿಗೆ ಹೆಸರಾದ ಎಂಬ್ರೇಯರ್ ಲೆಗಸಿ 650 ವಿಮಾನವು ಎಂಆರ್‌ಜಿ ಸಮೂಹದ ವ್ಯಾಪಾರ ಚಟುವಟಿಕೆಗಳಿಗೆ ಮತ್ತಷ್ಟು ವೇಗ ಹಾಗೂ ಸಂಪರ್ಕ ಸಾಮರ್ಥ್ಯವನ್ನು ಒದಗಿಸಲಿದೆ. ಪರಂಪರೆ, ಮೌಲ್ಯಗಳು ಮತ್ತು ಆಧುನಿಕ ದೃಷ್ಟಿಕೋನದ ಸಮನ್ವಯದೊಂದಿಗೆ ಸಾಗುತ್ತಿರುವ ಡಾ. ಕೆ. ಪ್ರಕಾಶ್ ಶೆಟ್ಟಿ ಅವರ ಸಾಧನೆಯ ಪಯಣದಲ್ಲಿ ಇದು ಮತ್ತೊಂದು ಸ್ಮರಣೀಯ ಅಧ್ಯಾಯವಾಗಿದೆ.





Comments
Leave a Comment