2030ರ ವೇಳೆಗೆ 7.5 ಲಕ್ಷ್ಮ ಕೋಟಿ ರೂ. ಹೂಡಿಕೆ, 20 ಲಕ್ಷ ಉದ್ಯೋಗ ಸೃಷ್ಟಿಯ ಗುರಿ
ಹೊಸ ಆಲೋಚನೆ, ಸೃಷ್ಟಿಯ ನೆಲೆ ಕರ್ನಾಟಕ
ಮೂಲ ಸೌಕರ್ಯಕ್ಕೆ 1.5 ಲಕ್ಷ ಕೋಟಿ ರೂ. ಹೂಡಿಕೆ
ಬಿಯಾಂಡ್ ಬೆಂಗಳೂರು ಮೂಲಕ ಇತರೆ ಜಿಲ್ಲೆಗಳಲ್ಲಿ ಹೂಡಿಕೆಗೆ ಅವಕಾಶ
ಕರ್ನಾಟಕ ಪ್ರತಿಭಾನ್ವಿತ ಮಾನವ ಸಂಪನ್ಮೂಲ ರಾಜ್ಯ
ಕಂಪನಿ ಬೆಳೆಯುವುದು ಪ್ರತಿಭೆ, ನಂಬಿಕೆ, ಅವಕಾಶಗಳಿಂದ
ಕಾರ್ಮಿಕರಿಗಾಗಿ ಶ್ರಮಿಕ ನಿವಾಸ ಯೋಜನೆ
ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕವನ್ನು ಹೂಡಿಕೆ ತಾಣವಾಗಿ ರೂಪಿಸಲು ಹೆಜ್ಜೆ
ಬೆಂಗಳೂರು, ನ.12:
"ವಿಶ್ವದ ಎಲ್ಲಾ ಹೂಡಿಕೆದಾರರಿಗೆ ಕರ್ನಾಟಕಕ್ಕೆ ಸ್ವಾಗತ. ಒಂದು ಇಲಾಖೆ ಅಲ್ಲ ಇಡೀ ಸರ್ಕಾರವೇ ನಿಮ್ಮ ಸ್ವಾಗತಿಸುತ್ತಿದೆ. ನಿಮಗೆ ನೆರವು ನೀಡಲು ನಿಂತಿದೆ. ಹೂಡಿಕೆಗಾಗಿಯೇ ನೂತನ ನೀತಿಗಳನ್ನು ರೂಪಿಸಿದೆ. ನೀವು ನಮ್ಮನ್ನು ನಂಬಿ ಧೈರ್ಯವಾಗಿ ಹೂಡಿಕೆ ಮಾಡಬಹುದು" ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಕರೆ ನೀಡಿದರು.
ನಗರದ ಖಾಸಗಿ ಹೋಟೆಲ್ ನಲ್ಲಿ ಗುರುವಾರ ನಡೆದ ಜಾಗತಿಕ ಬಂಡವಾಳ ಹೂಡಿಕೆದಾರರ ಸಭೆ 2027ರ ಪೂರ್ವಭಾವಿ ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರು ಮಾತನಾಡಿದರು.
"ನಿಮಗೆ ಏನು ಭಾಷೆ ನೀಡುತ್ತೇವೋ ಅದನ್ನು ಪೂರೈಸುತ್ತೇವೆ. ಮುಂದಿನ ಐದು ವರ್ಷಗಳಲ್ಲಿ ವಿದ್ಯುತ್ ಕ್ಷೇತ್ರದಲ್ಲಿ ನಾವು ಸುಮಾರು 24 ಗಿಗಾವ್ಯಾಟ್ ಉತ್ಪಾದನೆ ಗುರಿ ಹೊಂದಿದ್ದು,3 ಲಕ್ಷ ಕೋಟಿಗಿಂತ ಹೆಚ್ಚು ಹೂಡಿಕೆ ಅಗತ್ಯವಿದೆ. ಕರ್ನಾಟಕ ತನ್ನ ಕೈಗಾರಿಕಾ ನೀತಿ ಮೂಲಕ 2030ರ ವೇಳೆಗೆ 7.5 ಲಕ್ಷ್ಮ ಕೋಟಿ ರೂ. ಹೂಡಿಕೆ, 20 ಲಕ್ಷ ಉದ್ಯೋಗ ಸೃಷ್ಟಿಯ ಗುರಿ ಹೊಂದಿದೆ. 2026-2031ರ ಅವಧಿಯಲ್ಲಿ ಕರ್ನಾಟಕ ಏರೋಸ್ಪೇಸ್ ಹಾಗೂ ರಕ್ಷಣಾ ನೀತಿ ಮೂಲಕ 60,000 ಕೋಟಿ ಹೂಡಿಕೆ 60,000 ಉದ್ಯೋಗ, ಜವಳಿ ನೀತಿ ಮೂಲಕ 20,000 ಕೋಟಿ ಹೂಡಿಕೆ ಹಾಗೂ 5 ಲಕ್ಷ ಉದ್ಯೋಗ ಸೃಷ್ಟಿಯ ಗುರಿ ಹೊಂದಿದೆ." ಎಂದರು.
ಹೊಸ ಆಲೋಚನೆ ಹೊಸ ಸೃಷ್ಟಿಯ ನೆಲೆ ಕರ್ನಾಟಕ:
"ಕರ್ನಾಟಕ್ಕಕೆ ತನ್ನದೇ ಆದ ಹೂಡಿಕೆಯ ಇತಿಹಾಸವಿದೆ. ದೇಶದಲ್ಲೇ ಪ್ರಥಮ ಬಾರಿಗೆ ಕರ್ನಾಟಕದಲ್ಲಿ ವಿದ್ಯುತ್ ಬಳಕೆಗೆ ಬಂತು. ಸಣ್ಣ ಜಾಗದಲ್ಲಿ ಆರಂಭವಾದ ಎಚ್ ಎಎಲ್ ಸಂಸ್ಥೆ ಮೂಲಕ ದೊಡ್ಡ ವಿಮಾನ ತಯಾರಿಕೆ ಆರಂಭವಾಯಿತು. ಮೊದಲ ಜೈವಿಕ ತಂತ್ರಜ್ಞಾನ, ಜಾಗತಿಕ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳ ಇಲ್ಲೇ ಆರಂಭಗೊಂಡವು. ಕರ್ನಾಟಕ ಕೇವಲ ಹೊಸ ಆಲೋಚನೆಗಳನ್ನು ಅನುಸರಿಸುವುದು ಮಾತ್ರವಲ್ಲ. ಹೊಸತನ್ನು ಸೃಷ್ಟಿ ಮಾಡುತ್ತದೆ. ನಾವು ಬಸವಣ್ಣನವರ ಕಾಯಕವೇ ಕೈಲಾಸ ಎಂಬ ತತ್ವವನ್ನು ಅನುಸರಿಸುತ್ತಿದ್ದೇವೆ" ಎಂದು ವಿವರಿಸಿದರು.
ಮೂಲ ಸೌಕರ್ಯಕ್ಕೆ 1.5 ಲಕ್ಷ ಕೋಟಿ ರೂ. ಹೂಡಿಕೆ
"ಮೂಲ ಸೌಕರ್ಯಕ್ಕಾಗಿ ನಮ್ಮ ಸರ್ಕಾರ 1.5 ಲಕ್ಷ ಕೋಟಿಗಿಂತ ಹೆಚ್ಚು ಹೂಡಿಕೆ ಮಾಡುತ್ತಿದೆ. 2026-27ರ ಬಜೆಟ್‌ನಲ್ಲಿ 84,000 ಕೋಟಿ ರೂ. ಒದಗಿಸಿದ್ದೇವೆ. ಕರ್ನಾಟಕ ಕೇವಲ ಕೈಗಾರಿಕಾ ಪ್ರದೇಶವಾಗಿರಬಾರದು ಎಂದು ಪರಿಶುದ್ಧ ಕೈಗಾರಿಕಾ ಕೇಂದ್ರವಾಗಿರಬೇಕು. ನಮ್ಮ ಸರ್ಕಾರ ಪ್ರತಿ ಹಂತದಲ್ಲೂ ಹೂಡಿಕೆದಾರರ ಪರ ನಿಲ್ಲುತ್ತದೆ, ಮೊದಲ ಪ್ರಸ್ತಾವನೆಯಿಂದ ಕೊನೆಯ ಹಂತದವರೆಗೆ ಎಲ್ಲ ಇಲಾಖೆಗಳೂ ನಿಮ್ಮೊಂದಿಗೆ ಕೆಲಸ ಮಾಡುತ್ತವೆ. ಸಲಹೆ ಸೂಚನೆಗಳನ್ನು ಪಡೆಯುತ್ತವೆ" ಎಂದರು.
"ಬೆಂಗಳೂರಿನ ಬಗ್ಗೆ ಹೆಚ್ಚು ವಿವರಣೆ ನೀಡುವ ಅಗತ್ಯವಿಲ್ಲ. ಬೆಂಗಳೂರಿಗೆ ಬರುವವರು ಮತ್ತೆ ವಾಪಸ್ಸು ಹೋಗುವುದಿಲ್ಲ. ಯಾವುದೇ ನ್ಯಾಯಾಧೀಶರು, ಹೂಡಿಕೆದಾರರು, ಕೌನ್ಸಲ್ ಜನರಲ್ ಹೀಗೆ ಅಲ್ಲರೂ ಬೆಂಗಳೂರಲ್ಲಿ ನೆಲೆಸಿದ್ದಾರೆ. ಕರ್ನಾಟಕ ಐಟಿ ಕ್ಷೇತ್ರದಲ್ಲಿ ಮಾತ್ರವಲ್ಲ. ಜೈವಿಕ ತಂತ್ರಜ್ಞಾನ, ರಕ್ಷಣೆ, ಬಾಹ್ಯಾಕಾಶ, ಸೆಮಿ ಕಂಡಕ್ಟರ್, ಕೃತಕ ಬುದ್ಧಿಮತ್ತೆ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ನಮ್ಮವರು ಇದ್ದಾರೆ" ಎಂದರು.
"ಕಳೆದ ವರ್ಷ ನಾನು, ನಮ್ಮ ಸಚಿವರಾದ ಎಂ.ಬಿ. ಪಾಟೀಲ್ ದಾವೋಸ್‌ಗೆ ಹೋಗಿದ್ದೆವು. ಪ್ರತಿಯೊಬ್ಬ ವಿದೇಶದಿಂದ ಬಂದ ನಾಯಕರೂ ಗಮನಿಸುತ್ತಿದ್ದದ್ದು ಕೇವಲ ಕರ್ನಾಟಕ ಮತ್ತು ಬೆಂಗಳೂರನ್ನು. ಕಾರಣ ಇಷ್ಟೇ, ಇಲ್ಲಿ ಕೆಲಸ ಮಾಡಲು ಚ.ಅಡಿಗೆ 1 ಡಾಲರ್ ವೆಚ್ಚವಾದರೆ ಮುಂಬೈನಲ್ಲಿ 3.5 ಡಾಲರ್ ವೆಚ್ಚವಾಗುತ್ತದೆ. ಹೀಗಾಗಿ, ಎಲ್ಲರೂ ಬೆಂಗಳೂರಿನ ಬಗ್ಗೆ ಆಕರ್ಷಿತರಾಗಿದ್ದರು" ಎಂದು ಹೇಳಿದರು.
ಬಿಯಾಂಡ್ ಬೆಂಗಳೂರು ಮೂಲಕ ಇತರೆ ಜಿಲ್ಲೆಗಳಲ್ಲಿ ಹೂಡಿಕೆಗೆ ಅವಕಾಶ:
"ಬೆಂಗಳೂರಲ್ಲಿ ಈ ಹೂಡಿಕೆ ಸಾಧ್ಯವಾಗದೇ ಇದ್ದರೆ, ನಿಮಗಾಗಿ 'ಬಿಯಾಂಡ್ ಬೆಂಗಳೂರು' ಯೋಜನೆ ಸಿದ್ಧಪಡಿಸಿದ್ದೇವೆ. ಬೆಂಗಳೂರಿನ ಆಚೆಗೂ ಹೂಡಿಕೆ ಮಾಡಬಹುದು. ಹುಬ್ಬಳ್ಳಿ, ಧಾರವಾಡ ಬೆಳಗಾವಿ, ಶಿವಮೊಗ್ಗಗಳಲ್ಲಿ ಹೂಡಿಕೆ ಅವಕಾಶವಿದೆ. ಮಂಗಳೂರಿನ ಸಮುದ್ರ ತೀರ 320ಕಿಮೀ ಇದೆ. ಇಲ್ಲಿಗೆ ಪ್ರತ್ಯೇಕ ಪ್ರವಾಸೋದ್ಯಮ ನೀತಿಯನ್ನು ರೂಪಿಸಿದ್ದೇವೆ. ಮಲೆನಾಡಿಗೆ ಪ್ರತ್ಯೇಕ ನೀತಿ ಇದೆ. ಮಂಗಳೂರು, ಶಿವಮೊಗ್ಗದಲ್ಲಿ, ಹುಬ್ಬಳ್ಳಿಯಲ್ಲಿ ವಿಮಾನ ನಿಲ್ದಾಣವಿದೆ. ಗುಲಬರ್ಗದಲ್ಲಿ, ರಾಯಚೂರಲ್ಲಿ ನಿರ್ಮಾಣ ಹಂತದಲ್ಲಿದೆ. ಎಲ್ಲವೂ ಸಂಪರ್ಕ ಸೇತುವಾಗಲಿದೆ" ಎಂದು ವಿವರಿಸಿದರು.
"ಕರ್ನಾಕದ ಶಕ್ತಿ ಎಂಜಿನಿಯರ್ ಗಳು, ವಿಜ್ಞಾನಿಗಳು, ನೈಪುಣ್ಯವಿರುವ ಉದ್ಯೋಗಿಗಳು. ನಾವು ಹೆಚ್ಚು ಉದ್ಯೋಗಿಗಳ ಕಡೆ ಗಮನ ಕೊಡುವುದರ ಜೊತೆಗೆ ಉದ್ಯೋಗದಾತರನ್ನು ರೂಪಿಸುವ ಕಡೆ ಗಮನಕೊಡುತ್ತಿದ್ದೇವೆ. ನೀವು ಇಲ್ಲಿ ಬಂದು ಹೂಡಿಕೆ ಮಾಡಿ. ಹೂಡಿಕೆ ಮಾಡಿದಂತೆ ಉದ್ಯೋಗಗಳನ್ನು, ಉದ್ಯೋಗದಾತರನ್ನು ಸೃಷ್ಟಿ ಮಾಡಿ" ಎಂದರು.
ಕರ್ನಾಟಕ ಪ್ರತಿಭಾನ್ವಿತ ಮಾನವ ಸಂಪನ್ಮೂಲ ರಾಜ್ಯ
"ಕರ್ನಾಟಕದಲ್ಲಿ ಪ್ರತಿ ವರ್ಷ 13,940 ವೈದ್ಯರನ್ನು ಹೊರಬರುತ್ತಿದ್ದಾರೆ. ಪ್ರತಿ ವರ್ಷ 13,940 ವೈದ್ಯರಿಗೆ ಕರ್ನಾಟಕದ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ದೊರೆಯುತ್ತಿದೆ. ನರ್ಸ್‌ಗಳನ್ನು ಒಳಗೊಂಡಂತೆ 12.5 ಲಕ್ಷ ಪ್ಯಾರಾಮೆಡಿಕಲ್ ಸಿಬ್ಬಂದಿಗೆ ಇಲ್ಲಿ ತಯಾರಾಗುತ್ತಿದ್ದಾರೆ. 12ಲಕ್ಷಕ್ಕೂ ಹೆಚ್ಚು ಎಂಜಿನಿಯರ್‌ಗಳು ಇಲ್ಲಿ ತಯಾರಾಗುತ್ತಿದ್ದಾರೆ. ಕ್ಯಾಲಿಫೋರ್ನಿಯಾದಲ್ಲಿ 16 ಲಕ್ಷ ಎಂಜಿನಿಯರ್‌ಗಳಿದ್ದಾರೆ. ಬೆಂಗಳೂರಿನಲ್ಲಿ 26 ಲಕ್ಷ ಐಟಿ ವೃತ್ತಿಪರರಿದ್ದಾರೆ. ಇದೇ ಬೆಂಗಳೂರಿನ ಶಕ್ತಿ" ಎಂದರು.
ಕಂಪನಿ ಬೆಳೆಯುವುದು ಪ್ರತಿಭೆ, ನಂಬಿಕೆ, ಅವಕಾಶಗಳಿಂದ
"ಕಂಪನಿಗಳು ಕೇವಲ ಭೂಮಿಯಿಂದಲೇ ಬೆಳೆಯುವುದಿಲ್ಲ. ಅವು ಮೊದಲು ಪ್ರತಿಭೆಯಿಂದ ಬೆಳೆಯುತ್ತವೆ. ನಂಬಿಕೆ ಮತ್ತು ಅವಕಾಶದಿಂದಲೂ ಬೆಳೆಯುತ್ತವೆ. ಅದಕ್ಕಾಗಿಯೇ ನೀವು ಕರ್ನಾಟಕದಲ್ಲಿ ಈ ಎಲ್ಲವೂ ಇದೆ. ನಾನು, ನಾನು ನಿಮ್ಮೆಲ್ಲರನ್ನೂ ವಿನಂತಿಸುತ್ತೇನೆ, ನೀವು ನಮ್ಮ ಕೈಗಾರಿಕಾ ನೀತಿಯನ್ನು ನೋಡಿದ್ದೀರಿ. ಎಲ್ಲ ಉದ್ಯೋಗಿಗಳಿಗಾಗಿ ಎರಡು, ಮೂರು ನೀತಿಗಳನ್ನು ಹೊರತಂದಿದ್ದೇವೆ. ಹಿಂದುಳಿದ ಪ್ರದೇಶಗಳ ಹೂಡಿಕೆಗಾಗಿಯೂ ಪ್ರತ್ಯೇಕ ನೀತಿಯನ್ನು ರೂಪಿಸಿದ್ದೇವೆ" ಎಂದರು.
ಕಾರ್ಮಿಕರಿಗಾಗಿ ಶ್ರಮಿಕ ನಿವಾಸ ಯೋಜನೆ
"ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಉದ್ಯೋಗಕ್ಕಾಗಿ ನಗರ ಪ್ರದೇಶಗಳಿಗೆ ವಲಸೆ ಬರುವುದನ್ನು ತಪ್ಪಿಸಲು ‘ಶ್ರಮಿಕ ನಿವಾಸ’ ಯೋಜನೆ ರೂಪಿಸಲಾಗಿದೆ. ಕೈಗಾರಿಕೆಗಳ ಸಮೀಪದಲ್ಲೇ ಎರಡು ಅಥವಾ ಮೂರು ಎಕರೆ ಪ್ರದೇಶದಲ್ಲಿ ವಸತಿ ವ್ಯವಸ್ಥೆ ಕಲ್ಪಿಸುವ ಚಿಂತನೆ ಇದೆ. ಸುಮಾರು 200ರಿಂದ 300 ಕುಟುಂಬಗಳಿಗೆ ವಸತಿ ಕಲ್ಪಿಸುವುದರ ಜತೆಗೆ, ಕಾರ್ಮಿಕರಿಗಾಗಿ ಪ್ರತ್ಯೇಕ ಕೊಠಡಿಗಳಿರುವ ವಸತಿ ನಿಲಯಗಳನ್ನೂ ನಿರ್ಮಿಸಲಾಗುವುದು. ಇದರಿಂದ ಕಾರ್ಮಿಕರು ಕೆಲಸ ಮಾಡುವ ಸ್ಥಳದ ಸಮೀಪದಲ್ಲೇ ವಾಸಿಸಲು ಅನುಕೂಲವಾಗಲಿದೆ" ಎಂದರು.
"ಹೊಸ ಪ್ರವಾಸೋದ್ಯಮ ನೀತಿಯಲ್ಲಿ ಕೈಗಾರಿಕಾ ಮುಕ್ತ ಅವಕಾಶ ನೀಡಿದೆ. ಮೂಲ ಸೌಕರ್ಯಕ್ಕೆ ಹೆಚ್ಚಿನ ಒತ್ತನ್ನು ನೀಡಿದ್ದೇವೆ. ಪ್ರತಿ ಜಿಲ್ಲೆಯಲ್ಲಿ ತಲಾ ಎರಡು ತಾಲೂಕುಗಳನ್ನು ಆಯ್ಕೆ ಮಾಡಿಕೊಂಡು, ಅಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಿ ಸ್ಥಳೀಯರಿಗೆ ಉದ್ಯೋಗ ನೀಡುವಂತೆ ಉತ್ತೇಜಿಸಲಾಗುತ್ತಿದೆ. ಈ ಮೂಲಕ ಆಯಾ ಭಾಗದ ಜನರಿಗೆ ತಮ್ಮ ಊರಿನಲ್ಲೇ ಉದ್ಯೋಗ ದೊರೆಯುವಂತೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಆಯ್ದ ಜಿಲ್ಲೆಗಳ ತಾಲೂಕುಗಳಲ್ಲಿ ಕೈಗಾರಿಕೆ ಸ್ಥಾಪಿಸಿ ಸ್ಥಳೀಯರಿಗೆ ಉದ್ಯೋಗ ನೀಡುವ ಉದ್ಯಮಿಗಳಿಗೆ, ಪ್ರತಿ ಉದ್ಯೋಗಕ್ಕೆ ಸರಕಾರದಿಂದ 2,500 ರೂಪಾಯಿ ನೀಡುವ ಹೊಸ ಯೋಜನೆ ಜಾರಿಗೆ ತರಲಾಗುತ್ತಿದೆ" ಎಂದು ಹೇಳಿದರು.
ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕವನ್ನು ಹೂಡಿಕೆ ತಾಣವಾಗಿ ರೂಪಿಸಲು ಹೆಜ್ಜೆ
"ನಾನು ಮಖ್ಯಮಂತ್ರಿಯಾದ ನಂತರ ಈ ಐದಾರು ತಿಂಗಳುಗಳಲ್ಲಿ, 200ಕ್ಕೂ ಹೆಚ್ಚು ಹೂಡಿಕೆದಾರರನ್ನು ಭೇಟಿಯಾಗಿದ್ದೇನೆ. ಪ್ರಪಂಚದಾದ್ಯಂತ ಎಲ್ಲಾ ಕ್ಷೇತ್ರದ ವಿವಿಧ ಹೂಡಿಕೆದಾರರು, ವಿದೇಶಿ ಗಣ್ಯರು ನಿಮಗೆ ಬೆಂಬಲ ನೀಡಲು ನಾವು ಸಿದ್ಧರಿದ್ದೇವೆ ಎಂದು ಭರವಸೆ ನೀಡಿದ್ದಾರೆ. ನಾನು ಚೆನ್ನೈ, ಆಂಧ್ರಪ್ರದೇಶದಂಥ ರಾಜ್ಯಗೊಳಿಂದಿಗೆ ಸ್ಪರ್ಧೆ ಮಾಡುವುದಿಲ್ಲ. ಕರ್ನಾಟಕಕ್ಕೆ ತನ್ನದೇ ಆದ ನೀತಿ, ಗುರಿ ಇದೆ. ಇಲ್ಲಿನ ಮಾನವ, ಪ್ರತಿಭಾ ಸಂಪನ್ಮೂಲ, ಹೂಡಿಕೆ ಪೂರಕ ವಾತಾರವಣ ಈ ಜಗತ್ತಿನಲ್ಲಿ ಯಾರಿಗೂ ಸರಿಸಾಟಿಯಾಗುವುದಿಲ್ಲ. ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕವನ್ನು ಹೂಡಿಕೆ ತಾಣವಾಗಿ ರೂಪಿಸುವಲ್ಲಿ ಮುಂದಡಿ ಇಟ್ಟಿದ್ದೇವೆ" ಎಂದು ಹೇಳಿದರು.
"ಮತದಾರರ ಪಟ್ಟಿಯನ್ನು ಗಮನಿಸಿ. ಬೆಂಗಳೂರಲ್ಲಿ 1.5 ಕೋಟಿ ಜನಸಂಖ್ಯೆ ಇದೆ. ಇದರ ಜೊತೆಗೆ 45 ಲಕ್ಷ ಜನರು ಬೆಂಗಳೂರಿನ ಹೊರಗಿನಿಂದ ಬಂದವರಿದ್ದಾರೆ. 2 ಲಕ್ಷ ವಿದೇಶಿ ಪಾಸ್‌ಪೋರ್ಟ್‌ಗಳೊಂದಿಗೆ ಇಲ್ಲಿ ನೆಲೆಸಿದ್ದಾರೆ. ಆದರೆ ಸುಮಾರು 40 ಲಕ್ಷ ಜನರು ತಮ್ಮ ಮತದಾರರನ್ನು ನೋಂದಾಯಿಸಲಿಲ್ಲ, ಆದರೂ ಅವರು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಇದೇ ಬೆಂಗಳೂರಿನ ಬಲ. ಇತ್ತೀಚೆಗೆ ನಾನು ನೆದರ್‌ಲ್ಯಾಂಡ್ ಪ್ರಧಾನಮಂತ್ರಿ ಅವರನ್ನು ಭೇಟಿಯಾದೆ. ಅವರು ಸಿಲಿಕಾನ್ ವ್ಯಾಲಿಯಲ್ಲಿ ಮೂವರಲ್ಲಿ ಇಬ್ಬರು ಬೆಂಗಳೂರು ಮತ್ತು ಕರ್ನಾಟಕದಿಂದ ಬರುತ್ತಿದ್ದಾರೆ ಎಂದರು. ಕರ್ನಾಟಕ ಪ್ರತಿಭೆಯ ಕೇಂದ್ರ. ಅದಕ್ಕಾಗಿಯೇ ಇಡೀ ಪ್ರಪಂಚ ನಮ್ಮ ಕಡೆ ನೋಡುತ್ತಿರುವುದು. ಪ್ರಪಂಚದ ಯಾವ ಭಾಗದಲ್ಲಿ, ಯಾವ ಕ್ಷೇತ್ರದಲ್ಲಿ ನೋಡಿದರೂ, ಎಲ್ಲರೂ ಎರಡು, ಮೂರನೇ ಸ್ಥಾನದಲ್ಲಿ ನಮ್ಮ ಭಾರತೀಯರು, ಅದರಲ್ಲಿ ಬೆಂಗಳೂರಿನ ಮಂದಿ ಇರುತ್ತಾರೆ. ನೀವು ನಮ್ಮನ್ನು ನಂಬಿದರೆ, ನಾವು ನಿಮ್ಮನ್ನು ನಂಬುತ್ತೇವೆ. ನೀವು ಬೆಳೆದರೆ ನಾವು ಬೆಳೆಯುತ್ತೇವೆ. ನಂಬಿಕೆ ನಮ್ಮ ಬಲ" ಎಂದರು.







Comments
Leave a Comment