ಡಿಕೆ, ಬಿಕೆ, ಪಿಕೆಯವರ ಆಟ ಇನ್ನು ನಡೆಯುವುದಿಲ್ಲ.
ಬೆಂಗಳೂರು: ಕಾಂಗ್ರೆಸ್ ಸರಕಾರಕ್ಕೆ ಮಾನ ಮರ್ಯಾದೆ ಇದೆಯೇ ಎಂದು ರಾಜ್ಯದ ಬಡವರು, ರೈತರು ಕೇಳುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ. ಕೇವಲ ಬೆಲೆ ಎರಿಕೆಯೇ ಈ ಸರಕಾರದ ಮೂರೂವರೆ ವರ್ಷಗಳ ಸಾಧನೆ ಎಂದು ಟೀಕಿಸಿದರು.
ರಾಜ್ಯ ಸರಕಾರದ ಬೆಲೆ ಏರಿಕೆ ಖಂಡಿಸಿ ಬಿಜೆಪಿ ರಾಜ್ಯ ಘಟಕದ ವತಿಯಿಂದ ಇಂದು ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿರೋಧ ಪಕ್ಷದ ನಾಯಕರಾದ ಆರ್ ಅಶೋಕ್, ಛಲವಾದಿ ನಾರಾಯಣಸ್ವಾಮಿ ಅವರ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಯಿತು.
ಜನರಿಂದ ಸರಕಾರಕ್ಕೆ ಹಿಡಿಶಾಪ..
ಈ ಬೆಲೆ ಏರಿಕೆ ನೀತಿಯಿಂದ ಜನಸಾಮಾನ್ಯರು, ಬಡವರು ಜೀವನ ಸಾಗಿಸಲು ಕಷ್ಟವಾಗಿದೆ. ಬಡಜನರು ಮನುಷ್ಯತ್ವ ಇಲ್ಲದ ಕಾಂಗ್ರೆಸ್ ಸರಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ ಎಂದು ತಿಳಿಸಿದರು.
ಬಡವರ ಮೇಲೆ ಬರೆ ಎಳೆದ ಸರಕಾರ..
ಮೂರೂವರೆ ವರ್ಷಗಳಲ್ಲಿ ಪೆಟ್ರೋಲ್, ಡೀಸೆಲ್ ತೆರಿಗೆಯನ್ನು 4 ಬಾರಿ ಹೆಚ್ಚಿಸಿದ್ದಾರೆ. ಸ್ಟಾಂಪ್ ಡ್ಯೂಟಿ ಹೆಚ್ಚಿಸಿದರು. ಸರಕಾರಿ ಆಸ್ಪತ್ರೆಯಲ್ಲಿ ದರ ಏರಿಸಿ ಬಡವರಿಗೆ ಬರೆ ಎಳೆದರು ಎಂದು ಖಂಡಿಸಿದರು. ದೀಪಾವಳಿ ಸಂದರ್ಭದಲ್ಲಿ ಹಾಲಿನ ಮೇಲೆ 8 ರೂ. ದರ ಹೆಚ್ಚಿಸಿದರು. ಮೊಸರು, ತುಪ್ಪದ ದರವನ್ನು ತೀವ್ರವಾಗಿ ಹೆಚ್ಚಿಸಿದರು ಎಂದು ಟೀಕಿಸಿದರು. ರೈತರಿಗೆ ಅನುಕೂಲ ಮಾಡಿಕೊಡಲು ಆಗ್ರಹಿಸಿದೆವು. ಯಡಿಯೂರಪ್ಪ ಅವರಂತೆ ರಾಜ್ಯ ಸರಕಾರವು ಸಬ್ಸಿಡಿ ನೀಡಲಿಲ್ಲ ಎಂದು ದೂರಿದರು.
ಚಾಟಿ ಬೀಸಿದ ಹೈಕೋರ್ಟ್
ಬೆಲೆ ಏರಿಸುವ ಕೆಲಸ ಮಾಡುವ ಸರಕಾರದ ವಿರುದ್ಧ ಹೈಕೋರ್ಟ್ ಚಾಟಿ ಬೀಸಿದೆ ಎಂದು ಗಮನ ಸೆಳೆದರು. ಶಿವಕುಮಾರರ ಸರಕಾರದಲ್ಲಿ ರಾಜ್ಯದ ಬಡವರು ಕಣ್ಣೀರು ಸುರಿಸುವ ಪರಿಸ್ಥಿತಿ ಇದೆ ಎಂದು ವಿವರಿಸಿದರು.
ರೈತರನ್ನು ಭಿಕ್ಷುಕರೆಂದು ಪರಿಗಣಿಸಿದ ಸಿಎಂ..
ಭೀಕರ ಬರಗಾಲವಿದೆ. ರೈತರಿಗೆ ಪರಿಹಾರಕ್ಕೆ ಒತ್ತಾಯಿಸಿ ಬಳ್ಳಾರಿ ಚಲೋ ಪಾದಯಾತ್ರೆ ಮಾಡಿದೆವು. ಮುಖ್ಯಮಂತ್ರಿಗಳು ವಿಶೇಷ ಅಧಿವೇಶನದ ಕಪಟ ನಾಟಕ ಮಾಡಿ ಒಂದು ಕುಟುಂಬಕ್ಕೆ 2500 ರೂ. ಪರಿಹಾರ ಪ್ರಕಟಿಸಿದರು. ಮುಖ್ಯಮಂತ್ರಿಗಳು ತುತ್ತು ನೀಡುವ ರೈತರನ್ನು ಭಿಕ್ಷುಕರೆಂದು ಪರಿಗಣಿಸಿದ್ದಾರೆ ಎಂದು ಟೀಕಿಸಿದರು. ಕೆಲವರಿಗೆ 200, 300 ರೂ ಕೊಟ್ಟು ಕನ್ನ ಹಾಕುವ ಕೆಲಸ ನಡೆದಿದೆ ಎಂದರು.
ಮನೆಗೆ ಹೋಗುವ ದಿನ ಹತ್ತಿರವಿದೆ..
ವಿಧಾನಪರಿಷತ್ತಿನ 4 ಕ್ಷೇತ್ರಗಳ ಚುನಾವಣೆಯಲ್ಲಿ 4ಕ್ಕೆ 3 ಕ್ಷೇತ್ರಗಳನ್ನು ಬಿಜೆಪಿ- ಎನ್‍ಡಿಎಗೆ ಆಶೀರ್ವಾದ ಮಾಡಿದ್ದಾರೆ. ಡಿಕೆ, ಬಿಕೆ, ಪಿಕೆಯವರಿಗೆ ಒಂದು ಮಾತನ್ನು ಹೇಳಬಯಸುತ್ತೇನೆ. ನಿಮ್ಮ ಆಟ ಇನ್ನು ನಡೆಯುವುದಿಲ್ಲ. ನೀವು ಗಂಟು ಮೂಟೆ ಕಟ್ಟಿಕೊಂಡು ಮನೆಗೆ ಹೋಗುವ ದಿನಗಳು ಹತ್ತಿರ ಬಂದಿವೆ ಎಂದು ಎಚ್ಚರಿಸಿದರು.
ಎನ್‍ಡಿಎ ಗೆಲುವು ಖಚಿತ..
ರಾಜ್ಯದಲ್ಲಿ ಯಾವತ್ತೇ ಚುನಾವಣೆ ನಡೆದರೂ ಈ ಕಾಂಗ್ರೆಸ್ ಸರಕಾರವನ್ನು ಜನತೆ ಮನೆಗೆ ಕಳಿಸುತ್ತಾರೆ. ರಾಜ್ಯ ಸರಕಾರವು 6ನೇ ಗ್ಯಾರಂಟಿಯಾಗಿ ಬೆಲೆ ಏರಿಕೆಯನ್ನು ನೀಡಿದೆ. ಬಿಜೆಪಿ ನೇತೃತ್ವದ ಎನ್‍ಡಿಎ ಸರಕಾರವನ್ನು ಜನತೆ ಚುನಾವಣೆಯಲ್ಲಿ ಗೆಲ್ಲಿಸಿ, ನಿಮ್ಮನ್ನು ದಿಕ್ಕಾಪಾಲಾಗಿ ಮಾಡುವುದು ಶತಸ್ಸಿದ್ಧ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಎಲ್ಲಾ ಕೋರ್ ಕಮಿಟಿ ಸದಸ್ಯರು, ಸಂಸದರು, ಶಾಸಕರು, ವಿಧಾನ ಪರಿಷತ್ತಿನ ಸದಸ್ಯರು, ರಾಜ್ಯ ಪದಾಧಿಕಾರಿಗಳು, ಜಿಲ್ಲಾಧ್ಯಕ್ಷರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.






Comments
Leave a Comment