ಪಾರದರ್ಶಕವಾಗಿ, ಅಕ್ರಮ ರಹಿತ ಪರೀಕ್ಷೆ ನಡೆಸಲು ಸಿದ್ಧತೆ; ಪರೀಕ್ಷಾ ಸಿಬ್ಬಂದಿಗೆ ತರಬೇತಿ
ಸುಳ್ಳು ವದಂತಿಗಳಿಗೆ ಕಿವಿಗೊಡಬೇಡಿ: ಅಭ್ಯರ್ಥಿಗಳಿಗೆ ಸಿಎಂ ಮನವಿ
ಅಕ್ರಮ ಆಸ್ಪದ ನೀಡುವ ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳಿಗೆ ಎಚ್ಚರಿಕೆ
ಇದೇ ಮೊದಲ ಬಾರಿಗೆ ಪರೀಕ್ಷಾ ಕೊಠಡಿಯಲ್ಲಿ ಇಬ್ಬರು ಮೇಲ್ವಿಚಾರಕರ ನೇಮಕ
ಪರೀಕ್ಷೆ ಸುಧಾರಣಾ ಕ್ರಮಗಳಿಗೆ ಸಿಎಂ ಮೆಚ್ಚುಗೆ
ಬೆಂಗಳೂರು, ನ. 12-
ರಾಜ್ಯದಲ್ಲಿ 319 ಗಜೆಟೆಡ್ ಪ್ರೊಬೇಷನರ್ ಹುದ್ದೆಗಳಿಗೆ ಭಾನುವಾರ (ನವೆಂಬರ್ 15) ನಡೆಯಲಿರುವ ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದಂತೆ ಎಲ್ಲ ಪರೀಕ್ಷಾ ಸಿಬ್ಬಂದಿಗೆ ಜಿಲ್ಲಾಧಿಕಾರಿಗಳು ಚುನಾವಣೆ ಮಾದರಿಯಲ್ಲಿ ತರಬೇತಿ ನಡೆಸಿ, ವರದಿ ಕೊಡುವಂತೆ ಸಿಎಂ ಡಿ ಕೆ ಶಿವಕುಮಾರ್ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಅವರು ಗಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳ ಭರ್ತಿಗೆ ಕೆ ಪಿ ಎಸ್ ಸಿ ನಡೆಸುತ್ತಿರುವ ಪೂರ್ವಭಾವಿ ಪರೀಕ್ಷೆಗಳ ಸಿದ್ಧತೆಯ ಕುರಿತು ಗೃಹಕಚೇರಿ ಕೃಷ್ಣಾದಲಿ ಗುರುವಾರ ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಪರಿಶೀಲನೆ ನಡೆಸಿದರು.
ಪಾರದರ್ಶಕವಾಗಿ, ಅಕ್ರಮ ರಹಿತ ಪರೀಕ್ಷೆ ನಡೆಸಲು ಸಿದ್ಧತೆ; ಪರೀಕ್ಷಾ ಸಿಬ್ಬಂದಿಗೆ ತರಬೇತಿ
ಈ ಸಂದರ್ಭದಲ್ಲಿ ಪರೀಕ್ಷಾ ಸಿದ್ಧತೆಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದ ಸಿಎಂ, ಪರೀಕ್ಷೆಯನ್ನು ಅತ್ಯಂತ ಪಾರದರ್ಶಕವಾಗಿ, ಯಾವುದೇ ಅಕ್ರಮಗಳಿಗೆ ಅವಕಾಶವಾಗದಂತೆ ನಡೆಸಲು ನಿರ್ದೇಶನ ನೀಡಿದರು.
ಪರೀಕ್ಷಾ ಪ್ರಕ್ರಿಯೆಯಲ್ಲಿ ಹಲವಾರು ಸುಧಾರಣೆಗಳನ್ನು ಕೈಗೊಂಡಿದ್ದೇವೆ. ಈ ಬಗ್ಗೆ ಕೆಪಿಎಸ್ಸಿ ಹೊರಡಿಸಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.
ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮರಾ ಮೂಲಕ ನಿರಂತರ ನಿಗಾ ವಹಿಸಬೇಕು. ಪೊಲೀಸ್ ನೇಮಕಾತಿ ಪರೀಕ್ಷೆಯ ಮಾದರಿಯಲ್ಲಿಯೇ ಸೂಕ್ತ ಭದ್ರತೆ ವ್ಯವಸ್ಥೆ ಕೈಗೊಳ್ಳುವಂತೆ ಇಲಾಖೆಗೆ ಸೂಚಿಸಿದರು.
ಪರೀಕ್ಷಾ ಕೇಂದ್ರದ ಆವರಣದಲ್ಲಿ ಯಾವುದೇ ಅನಧಿಕೃತ ವ್ಯಕ್ತಿಯ ಪ್ರವೇಶಕ್ಕೆ ಅವಕಾಶ ಇಲ್ಲ. ಪ್ರವೇಶಕ್ಕೆ ಅನುಮತಿ ಇರುವ ವ್ಯಕ್ತಿಯೂ ಭದ್ರತಾ ತಪಾಸಣೆಗೆ ಒಳಪಡಬೇಕು. ಮಾರ್ಗಸೂಚಿಯನ್ವಯ ಅನುಮತಿಸಿದ ವಸ್ತುಗಳನ್ನು ಮಾತ್ರ ಅವರು ತರಬಹುದು.
ಪರೀಕ್ಷಾ ಕೇಂದ್ರದ ಸೂಕ್ಷ್ಮತೆಯನ್ನು ಗುರುತಿಸಿ, ಅದಕ್ಕೆ ತಕ್ಕಂತೆ ಸಿಬ್ಬಂದಿ ನಿಯೋಜನೆ ಮಾಡುವಂತೆ ಸೂಚನೆ ನೀಡಿದರು.
ಹೆಚ್ಚುವರಿ ಭದ್ರತಾ ಉಪಕರಣಗಳನ್ನು ಬಾಡಿಗೆ ಆಧಾರದಲ್ಲಿ ಪಡೆಯಬಹುದು. ಭದ್ರತೆಗೆ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ಅಗತ್ಯವಿದ್ದಲ್ಲಿ ಇತರ ಕಡೆಗಳಿಂದ ನಿಯೋಜಿಸಲು ಸೂಚನೆ ನೀಡಿದರು. ಯಾವುದೇ ಕಾರಣಕ್ಕೂ ಅಭ್ಯರ್ಥಿಗಳು ಮೊಬೈಲ್ನೊಂದಿಗೆ ಪರೀಕ್ಷಾ ಕೇಂದ್ರ ಪ್ರವೇಶಿಸುವಂತಿಲ್ಲ. ಅಂತಹ ಸಂದರ್ಭದಲ್ಲಿ ಹಿರಿಯ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಸಿದರು.
ಇದೇ ಮೊದಲ ಬಾರಿಗೆ ಪರೀಕ್ಷಾ ಕೊಠಡಿಯಲ್ಲಿ ಇಬ್ಬರು ಮೇಲ್ವಿಚಾರಕರ ನೇಮಕ
ಇದೇ ಮೊದಲ ಬಾರಿಗೆ ಪ್ರತಿ ಪರೀಕ್ಷಾ ಕೊಠಡಿಯಲ್ಲಿ ಇಬ್ಬರು ಮೇಲ್ವಿಚಾರಕರ ನಿಯೋಜನೆ ಮಾಡಲಾಗುತ್ತಿದೆ. ಅವರಲ್ಲಿ ಒಬ್ಬರು ಕಡ್ಡಾಯವಾಗಿ ಸರ್ಕಾರಿ ಕಾಲೇಜು ಸಿಬ್ಬಂದಿಯಾಗಿರಬೇಕು ಎಂದು ಸೂಚಿಸಿದರು..
ಅಭ್ಯರ್ಥಿಗಳು ಪರೀಕ್ಷಾ ಕೊಠಡಿ ಪರೀಕ್ಷಿಸಿದ ನಂತರ ಮತ್ತೊಮ್ಮೆ ತಪಾಸಣೆ ನಡೆಸುವುದು ಹಾಗೂ ಪರೀಕ್ಷಾ ಕೊಠಡಿಯಲ್ಲಿ ಕಟ್ಟೆಚ್ಚರಿಕೆ ವಹಿಸಲು ಇಬ್ಬರು ಮೇಲ್ವಿಚಾರಕರ ನಿಯೋಜನೆ ಮಾಡಲಾಗುತ್ತಿದೆ.
ಪರೀಕ್ಷೆಯಲ್ಲಿ ನಕಲಿ ಅಭ್ಯರ್ಥಿಗಳ ಭಾಗವಹಿಸುವಿಕೆ ತಡೆಯಲು ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಅಕ್ರಮಕ್ಕೆ ಆಸ್ಪದ ನೀಡುವ ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳಿಗೆ ಎಚ್ಚರಿಕೆ
ಖಾಸಗಿ ಅನುದಾನಿತ ಕಾಲೇಜುಗಳಲ್ಲಿರುವ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷಾ ಅವ್ಯವಹಾರಕ್ಕೆ ಅವಕಾಶ ನೀಡಿರುವುದು ಕಂಡು ಬಂದರೆ ಅಂತಹ ಖಾಸಗಿ ಕಾಲೇಜುಗಳ ಪರವಾನಗಿಯನ್ನು ರದ್ದುಪಡಿಸಲಾಗುವುದು ಎಂದು ಸಿಎಂ ಎಚ್ಚರಿಕೆ ನೀಡಿದರು.
ಪರೀಕ್ಷಾ ಅಕ್ರಮಗಳಲ್ಲಿ ತೊಡಗುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ಸುಳ್ಳು ವದಂತಿಗಳಿಗೆ ಕಿವಿಗೊಡಬೇಡಿ: ಅಭ್ಯರ್ಥಿಗಳಿಗೆ ಸಿಎಂ ಮನವಿ
ಈ ಪರೀಕ್ಷೆ ಕುರಿತು ಸುಳ್ಳು ಸುದ್ದಿ ಹರಡುವುದಕ್ಕೆ ಅವಕಾಶ ನೀಡಬಾರದು. ಸಾಮಾಜಿಕ ಜಾಲತಾಣಗಳ ಮೇಲೆ ಪೊಲೀಸ್ ಇಲಾಖೆ ನಿಗಾ ವಹಿಸಬೇಕು ಎಂದು ಸಿಎಂ ಅಧಿಕಾರಿಗಳಿಗೆ ತಿಳಿಸಿದರು. ಪರೀಕ್ಷೆ ಕುರಿತು ಯಾವುದೇ ವದಂತಿ ಹಬ್ಬಿದರೆ ಕೂಡಲೇ ಅಧಿಕಾರಿಗಳ ಗಮನಕ್ಕೆ ತರಬೇಕು. ಅವರು ಈ ಕುರಿತು ಸ್ಪಷ್ಟೀಕರಣ ನೀಡುವರು. ಅಭ್ಯರ್ಥಿಗಳು ಹಾಗೂ ಮಾಧ್ಯಮದವರು ತಮಗೆ ಬಂದ ಮಾಹಿತಿಯನ್ನು ಅಧಿಕೃತ ಮೂಲಗಳಿಂದ ಖಾತರಿಪಡಿಸಿಕೊಳ್ಳುವುದು ಅತಿ ಅಗತ್ಯ ಎಂದು ತಿಳಿಸಿದರು.
ಅಭ್ಯರ್ಥಿಗಳು ಯಾವುದೇ ವದಂತಿಗಳಿಗೆ ಕಿವಿಗೊಡದೆ ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯುವಂತೆ ಮುಖ್ಯಮಂತ್ರಿ ಅವರು ಅಭ್ಯರ್ಥಿಗಳಿಗೆ ತಿಳಿಸಿದರು.
ಅಕ್ರಮ ತಡೆಗೆ ಸುಧಾರಣಾ ಕ್ರಮಗಳು
ಸಭೆಯಲ್ಲಿ ಪರೀಕ್ಷೆಯ ಪೂರ್ವಸಿದ್ಧತೆ ಕುರಿತು ಮಾಹಿತಿ ನೀಡಿದ ಕೆಪಿಎಸ್ಸಿ ಪರೀಕ್ಷಾ ನಿಯಂತ್ರಕ ಹೆಚ್. ಪ್ರಸನ್ನ ಅವರು ಪರೀಕ್ಷಾ ಅಕ್ರಮ ತಡೆಗೆ ಮೊದಲ ಬಾರಿಗೆ ಜಾರಿಗೆ ತರುತ್ತಿರುವ ಸುಧಾರಣಾ ಕ್ರಮಗಳನ್ನು ವಿವರಿಸಿದರು:
• 5 ಆಯ್ಕೆಗಳ OMR ಪದ್ಧತಿ: ಉತ್ತರ ಗೊತ್ತಿಲ್ಲದಿದ್ದರೆ 5ನೇ ಆಯ್ಕೆಯನ್ನು (Option 5) ಕಡ್ಡಾಯವಾಗಿ ಗುರುತು ಮಾಡಬೇಕು. ಯಾವುದೇ ಪ್ರಶ್ನೆಗೆ ಉತ್ತರ ಖಾಲಿ ಬಿಡುವಂತಿಲ್ಲ.
• ತ್ರಿಪ್ರತಿ (Triple-Copy) OMR ಹಾಳೆ: ಒಂದು ಪ್ರತಿ ಅಭ್ಯರ್ಥಿಗೆ, ಒಂದು KPSC ಮೌಲ್ಯಮಾಪನಕ್ಕೆ ಮತ್ತು ಮೂರನೆಯದು ಜಿಲ್ಲಾಧಿಕಾರಿ/KPSC ಸ್ಟ್ರಾಂಗ್ ರೂಮ್ನಲ್ಲಿ ಸುರಕ್ಷಿತವಾಗಿಡಲಾಗುವುದು. ಆ ಮೂಲಕ ಪಾರದರ್ಶಕತೆ ಕಾಯ್ದುಕೊಳ್ಳಲಾಗುವುದು.
• ಸಿಸಿಟಿವಿ ಮತ್ತು ಜಾಮರ್ ಅಳವಡಿಕೆ: ಎಲ್ಲಾ ಪರೀಕ್ಷಾ ಕೊಠಡಿಗಳಲ್ಲಿ ಸಿಸಿಟಿವಿ ಕ್ಯಾಮೆರಾ ಮತ್ತು ಮೊಬೈಲ್ ಜಾಮರ್ಗಳ ಅಳವಡಿಸಲಾಗುತ್ತಿದ್ದು, ಪೊಲೀಸ್ ವರಿಷ್ಠಾಧಿಕಾರಿಗಳೇ ಜಾಮರ್ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ದೃಢೀಕರಿಸಬೇಕೆಂದು ಸೂಚಿಸಲಾಯಿತು.
• ಪ್ರತಿ ಪರೀಕ್ಷಾ ಕೊಠಡಿಗೆ ಇಬ್ಬರು ಮೇಲ್ವಿಚಾರಕರನ್ನು ನಿಯೋಜನೆ ಮಾಡಲಾಗುತ್ತಿದೆ. ಗುರುತಿನ ಚೀಟಿ ಪರಿಶೀಲನೆ, ತಪಾಸಣೆ ಮತ್ತು ಕೊಠಡಿಯ ಹಿಂಭಾಗದಿಂದ ನಿಗಾ ವಹಿಸಲು ಇಬ್ಬರು ಮೇಲ್ವಿಚಾರಕರ ನೇಮಕ.
• ಪರೀಕ್ಷಾ ದಿನದಂದೇ OMR ಅಪ್ಲೋಡ್: ಪಾರದರ್ಶಕತೆಗಾಗಿ ಪರೀಕ್ಷೆ ನಡೆದ ದಿನದಂದೇ ಎಲ್ಲಾ ಸ್ಕ್ಯಾನ್ ಮಾಡಿದ OMR ಪ್ರತಿಗಳನ್ನು KPSC ವೆಬ್ಸೈಟ್ನಲ್ಲಿ ಸಾರ್ವಜನಿಕರ ವೀಕ್ಷಣೆಗೆ ಅಪ್ಲೋಡ್ ಮಾಡಲಾಗುವುದು. 12 ಜಿಲ್ಲೆಗಳಲ್ಲಿ OMR ಹಾಳೆ ಸ್ಕ್ಯಾನ್ ಮಾಡಲು ವ್ಯವಸ್ಥೆ ಮಾಡಲಾಗಿದೆ.
ಮುಂದಿನ ಪರೀಕ್ಷೆಗಳಿಗೆ ನಕಲಿ ಅಭ್ಯರ್ಥಿಗಳ ತಡೆಗೆ ಇ-ಆಡಳಿತ ಇಲಾಖೆಯ ಮೂಲಕ ಪರೀಕ್ಷಾ ಕೇಂದ್ರಗಳಲ್ಲಿ ಆಧಾರ್ ಆಧಾರಿತ ಗುರುತು ಪರಿಶೀಲನೆ ವ್ಯವಸ್ಥೆ ಜಾರಿಗೊಳಿಸಲು ಸಿಎಂ ಸೂಚನೆ ನೀಡಿದರು.
ಮುಂದಿನ ಪರೀಕ್ಷೆಗಳಿಗೆ ತಾಂತ್ರಿಕ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ OMR ಸ್ಕ್ಯಾನಿಂಗ್ ಕೇಂದ್ರಗಳನ್ನು ಸ್ಥಾಪಿಸಿ ತ್ವರಿತವಾಗಿ ಫಲಿತಾಂಶ ಪ್ರಕಟಿಸುವಂತೆ ತಿಳಿಸಿದರು.
ಆದ್ಯತೆಯ ಮೇರೆಗೆ ಸಿಂಧುತ್ವ ಪ್ರಮಾಣ ಪತ್ರ ನೀಡಲು ಸೂಚನೆ
ಸಿಂಧುತ್ವ ಪ್ರಮಾಣ ಪತ್ರವನ್ನು ಆದ್ಯತೆ ಮೇರೆಗೆ ನೀಡಲು ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಹಲವು ಹುದ್ದೆಗಳ ನೇಮಕಾತಿ ಫಲಿತಾಂಶ ಘೋಷಿಸಲಾಗಿದ್ದರೂ, ಸಿಂಧುತ್ವ ಪ್ರಮಾಣ ಪತ್ರ ನೀಡುವಲ್ಲಿನ ವಿಳಂಬದಿಂದಾಗಿ ನೇಮಕಾತಿ ಪ್ರಕ್ರಿಯೆ ವಿಳಂಬವಾಗುತ್ತಿರುವುದು ಗಮನಕ್ಕೆ ಬಂದಿದೆ. ಇದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ಮಾಡಬಾರದು ಎಂದು ಸಿಎಂ ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.
ಬಾಕ್ಸ್ ಐಟಂ
319 ಹುದ್ದೆ; 1.47 ಲಕ್ಷ ಆಕಾಂಕ್ಷಿಗಳು
• ಕೆಪಿಎಸ್ಸಿ ಗಜೆಟೆಡ್ ಪ್ರೊಬೇಷನರ್ಸ್ 319 ಹುದ್ದೆಗಳಿಗೆ ಪೂರ್ವಭಾವಿ ಪರೀಕ್ಷೆ ನಡೆಸಲಾಗುತ್ತಿದೆ.
• ಇದರಲ್ಲಿ 202 ಗ್ರೂಪ್ ಬಿ ಹಾಗೂ 117 ಗ್ರೂಪ್ ಎ ಹುದ್ದೆಗಳಾಗಿವೆ.
• ಕಲಬುರಗಿ, ರಾಯಚೂರು, ಬಳ್ಳಾರಿ, ಬಾಗಲಕೋಟೆ, ವಿಜಯಪುರ, ಧಾರವಾಡ, ಬೆಳಗಾವಿ, ಉತ್ತರಕನ್ನಡ, ಶಿವಮೊಗ್ಗ, ದಕ್ಷಿಣ ಕನ್ನಡ, ಹಾಸನ, ದಾವಣಗೆರೆ, ತುಮಕೂರು, ಮೈಸೂರು, ಬೆಂಗಳೂರು ನಗರ ಜಿಲ್ಲೆಗಳಲ್ಲಿ ಒಟ್ಟು 345 ಪರೀಕ್ಷಾ ಉಪ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
• ಪರೀಕ್ಷಾ ದಿನಾಂಕ: 15-11-2026 (ಭಾನುವಾರ).
• ಬೆಳಿಗ್ಗೆ 10:00 ರಿಂದ 12:00 ರವರೆಗೆ ಪತ್ರಿಕೆ-1 (ಸಾಮಾನ್ಯ ಅಧ್ಯಯನ ಮತ್ತು ಮಾನವಿಕ ವಿಷಯಗಳು)
• ಮಧ್ಯಾಹ್ನ 02:00 ರಿಂದ 04:00 ರವರೆಗೆ ಪತ್ರಿಕೆ-2 (ರಾಜ್ಯಕ್ಕೆ ಸಂಬಂಧಿಸಿದ ಸಾಮಾನ್ಯ ಅಧ್ಯಯನ, ವಿಜ್ಞಾನ ಮತ್ತು ತಂತ್ರಜ್ಞಾನ, ಮಾನಸಿಕ ಸಾಮರ್ಥ್ಯ)
• ಪ್ರತಿ ಪತ್ರಿಕೆಗೆ 100 ಪ್ರಶ್ನೆಗಳು, 200 ಅಂಕಗಳು.
• ರಾಜ್ಯದಾದ್ಯಂತ ಒಟ್ಟು 1,47,067 ಅಭ್ಯರ್ಥಿಗಳು (91,238 ಪುರುಷರು ಮತ್ತು 53,074 ಮಹಿಳೆಯರು) ಅರ್ಜಿ ಸಲ್ಲಿಸಿದ್ದಾರೆ.
• ಎರಡೂ ಪತ್ರಿಕೆಗಳು ಸೇರಿ ಒಟ್ಟು 2,94,134 OMR ಹಾಳೆಗಳನ್ನು ಸ್ಕ್ಯಾನ್ ಮಾಡಲಾಗುವುದು.







Comments
Leave a Comment