PRABHAVAA.COM

ಸಿದ್ದರಾಮಯ್ಯ ಸೇರಿದಂತೆ ಯಾರಿಗೂ ಕೆಟ್ಟದ್ದನ್ನು ಬಯಸುವುದಿಲ್ಲ: ಸಿಎಂ ಡಿ ಕೆ ಶಿವಕುಮಾರ್

Mysuru:

Font size:

ಪದವಿ ಪಡೆದಿದ್ದು ನನ್ನ ಬದುಕಿನ ಅತ್ಯಂತ ಸಂತೋಷದ ಕ್ಷಣ

ನನ್ನ ಬದುಕು ತೆರೆದ ಪುಸ್ತಕ

ಜೈಲಿಗೆ ಹೋದಾಗಲೂ ಆತ್ಮವಿಶ್ವಾಸ ಕಳೆದುಕೊಳ್ಳಲಿಲ್ಲ

ಆಯುಧಗಳಿಂದ ಗೆಲ್ಲಲು ಸಾಧ್ಯವಿಲ್ಲ; ಅಕ್ಷರಗಳಿಂದ ಗೆಲ್ಲಬಹುದು

ಮೈಸೂರು, ನ.11:

“ನನ್ನ ಅಧಿಕಾರದ ಅವಧಿಯಲ್ಲಿ ಜನರ ಹೃದಯದಲ್ಲಿ ಉಳಿಯುವಂತಹ ಕೆಲಸ ಮಾಡುತ್ತೇನೆ. ನನ್ನ ಅವಧಿಯಲ್ಲಿ ಯಾರಿಗೂ ಕೆಟ್ಟದ್ದನ್ನು ಬಯಸುವುದಿಲ್ಲ. ಸಿದ್ದರಾಮಯ್ಯ ಅವರೊಂದಿಗೆ ಕೆಲಸ ಮಾಡಿದ್ದೇನೆ. ಅವರಿಗೆ ಮಾತ್ರವಲ್ಲ, ಯಾರಿಗೂ ಕೆಟ್ಟದ್ದನ್ನು ಬಯಸುವ ವ್ಯಕ್ತಿ ನಾನಲ್ಲ. ಮುಂದೆಯೂ ಯಾರಿಗೂ ಕೆಟ್ಟದ್ದನ್ನು ಬಯಸುವುದಿಲ್ಲ. ಇದು ನನ್ನ ಬದ್ಧತೆ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.

ಮೈಸೂರಿನ ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ಬುಧವಾರ ನಡೆದ ಸಂಶೋಧಕಿ ರಮ್ಯಾ ವಿರಚಿತ ‘ಚಲಿಸುವ ಬಂಡೆ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.

“ನನ್ನ ಮೇಲೆ ಅನೇಕ ಶ್ರೀಗಳು, ಜನರು ಹಾಗೂ ನಮ್ಮ ಪಕ್ಷದ ನಾಯಕರು ವಿಶ್ವಾಸವಿಟ್ಟಿದ್ದಾರೆ. ಆ ವಿಶ್ವಾಸಕ್ಕೆ ತಕ್ಕಂತೆ ನನ್ನ ಬದುಕನ್ನು ಕಟ್ಟಿಕೊಂಡು ಹೋಗುತ್ತೇನೆ. ನನ್ನ ಜೀವನದಲ್ಲಿ ಸಾಕ್ಷಿಗುಡ್ಡೆಗಳನ್ನು ಸೃಷ್ಟಿಸುವ ಪ್ರಯತ್ನ ಮಾಡುತ್ತೇನೆ. ಈ ರಾಜ್ಯದ ರಾಜಕಾರಣದ ಬದಲಾವಣೆಗಳನ್ನು ನಾನು ಕಣ್ಣಾರೆ ನೋಡಿದ್ದೇನೆ. ಅದರ ಭಾಗವಾಗಿಯೂ ಇದ್ದೇನೆ. ಬಂಗಾರಪ್ಪನವರು, ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾದ ಸಂದರ್ಭಗಳು, ನಾನು ಪಕ್ಷದ ಅಧ್ಯಕ್ಷನಾದ ನಂತರ ನಡೆದ ಬೆಳವಣಿಗೆಗಳು, ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದ ರಾಜಕೀಯ ಸನ್ನಿವೇಶಗಳು ಸೇರಿದಂತೆ ಅನೇಕ ಘಟನೆಗಳು ನನ್ನೊಳಗಿವೆ” ಎಂದರು.

ರಾಜಕೀಯದಲ್ಲಿ ಈಜುವುದು ಸುಲಭವಲ್ಲ

ರಾಜಕಾರಣದಲ್ಲಿ ಈಜುವುದು ಸುಲಭವಲ್ಲ. ಈಜಿ ದಡ ಸೇರುವುದು ಬಹಳ ಕಷ್ಟ. ಆದರೂ ದೊಡ್ಡ ಸಾಧನೆಗಳನ್ನು ಮಾಡಲು ಪ್ರಯತ್ನಿಸಿದ್ದೇವೆ.‌ ಕೆಲವರು ಎಲ್ಲದರಲ್ಲೂ ನಕಾರಾತ್ಮಕ ಅಂಶಗಳನ್ನೇ ಹುಡುಕುತ್ತಾರೆ. ನನಗೆ ಒಂದು ತಿಂಗಳು, ಎರಡು ತಿಂಗಳು, ಮೂರು ತಿಂಗಳು ಅಥವಾ ಆರು ತಿಂಗಳು ಆಡಳಿತ ಮಾಡಲು ಅವಕಾಶ ನೀಡಿ, ಇವರು ಏನು ಮಾಡುತ್ತಾರೆ ಎಂದು ನೋಡೋಣ ಎಂದು ಕೆಲವರು ಕಾಯುತ್ತಿದ್ದಾರೆ. ವಿರೋಧ ಪಕ್ಷದವರಿಗೆ ನನ್ನ ಬೆಳವಣಿಗೆಯನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕೆಲವರಿಗೆ ನನ್ನ ಹೆಸರು ಹೇಳಲೂ ಆಗುತ್ತಿಲ್ಲ. ಆದರೆ ನಾನು ಇಂತಹ ಟೀಕೆಗಳಿಗೆ ಬಗ್ಗುವ ವ್ಯಕ್ತಿಯಲ್ಲ. ತಾಳ್ಮೆಯಿಂದ ಇದ್ದೇನೆ ಅಷ್ಟೇ. ನನಗೆ ನನ್ನ ಮೇಲೆ ಮಾತ್ರವಲ್ಲ, ಈ ರಾಜ್ಯದ ಜನರ ಮೇಲೂ ನಂಬಿಕೆ ಇದೆ. ಯಾರಿಗೂ ಮೋಸ ಮಾಡಬೇಕು, ತೊಂದರೆ ಕೊಡಬೇಕು ಅಥವಾ ಕೆಡುಕು ಬಯಸಬೇಕು ಎಂಬ ಉದ್ದೇಶ ನನಗಿಲ್ಲ. ಹಿಂದಿನ ಕಾಲದಲ್ಲಿ ನಾವು ಮಾಡಿದ ಕೆಲಸವನ್ನು ನಮ್ಮ ಮಕ್ಕಳು, ಮೊಮ್ಮಕ್ಕಳು ನೋಡಬೇಕಾಗಿತ್ತು. ಈಗ ನಾವು ಮಾಡಿದ ಕೆಲಸವನ್ನು ನಾವೇ ಕೆಲವೇ ತಿಂಗಳುಗಳಲ್ಲಿ ನೋಡಬೇಕಾದ ಪರಿಸ್ಥಿತಿ ಇದೆ” ಎಂದು ಹೇಳಿದರು.

ಕುಮಾರಸ್ವಾಮಿ ಅವರೊಂದಿಗೆ ನಮಗೆ ಸಾಕಷ್ಟು ರಾಜಕೀಯ ಭಿನ್ನಾಭಿಪ್ರಾಯಗಳಿದ್ದವು. ಆದರೂ ನಮ್ಮ ಪಕ್ಷದವರು ಅವರೊಂದಿಗೆ ಕೈಜೋಡಿಸಬೇಕು ಎಂದಾಗ, ಸರ್ಕಾರದಲ್ಲಿ ಇದ್ದಷ್ಟು ದಿನವೂ ಅವರಿಗೆ ತೊಂದರೆ ಆಗಬೇಕು ಅಥವಾ ಮೋಸ ಮಾಡಬೇಕು ಎಂದು ನಾನು ಬಯಸಲಿಲ್ಲ. ಅವರ ಕೈ ಬಲಪಡಿಸಲು ಪ್ರಯತ್ನಿಸಿದೆ. ಅವರು ನಮ್ಮನ್ನು ಒಪ್ಪಿಕೊಳ್ಳುತ್ತಾರೆಯೇ ಇಲ್ಲವೇ ಎಂಬುದು ಮುಖ್ಯವಲ್ಲ. ನಮ್ಮ ಆತ್ಮಸಾಕ್ಷಿ ಒಪ್ಪಿದರೆ ಸಾಕು. ಆತ್ಮಸಾಕ್ಷಿಗಿಂತ ದೊಡ್ಡದು ಯಾವುದೂ ಇಲ್ಲ” ಎಂದರು.

“ನನಗೆ ಸಿಕ್ಕಿರುವ ಅಧಿಕಾರದ ಅವಧಿಯಲ್ಲಿ ಯಾರೊಬ್ಬರಿಗೂ ಅನಗತ್ಯ ತೊಂದರೆಯಾಗಬಾರದು ಎಂಬುದು ನನ್ನ ಆಶಯ. ಜನರಿಗೆ ಏನಾದರೂ ಸಹಾಯ ಬೇಕಿದ್ದರೆ ಅದನ್ನು ಮಾಡಿಕೊಡಲು ಸಿದ್ಧನಿದ್ದೇನೆ. ನನ್ನಿಂದ ಯಾರಿಗೂ ಕೆಡುಕಾಗಬಾರದು. ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ಕೆಲಸ ಮಾಡುತ್ತೇನೆ” ಎಂದು ಭರವಸೆ ನೀಡಿದರು.

ಪದವಿ ಪಡೆದಿದ್ದು ನನ್ನ ಬದುಕಿನ ಅತ್ಯಂತ ಸಂತೋಷದ ಕ್ಷಣ

“ನಾನು ಎಸ್.ಎಂ. ಕೃಷ್ಣ ಅವರ ಸಂಪುಟದಲ್ಲಿ ಕ್ಯಾಬಿನೆಟ್ ಸಚಿವನಾದಾಗಲೂ, ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಎರಡು ಬಾರಿ ಸಚಿವನಾದಾಗಲೂ, ಈಗ ಮುಖ್ಯಮಂತ್ರಿಯಾದಾಗಲೂ ಸಿಗದಷ್ಟು ಸಂತೋಷ ನನಗೆ ಸುಮಾರು 48ನೇ ವಯಸ್ಸಿನಲ್ಲಿ ಮೈಸೂರು ವಿಶ್ವವಿದ್ಯಾಲಯದ ಮುಕ್ತ ವಿಶ್ವವಿದ್ಯಾಲಯದ ಮೂಲಕ ಪದವಿ ಪಡೆದಾಗ ಸಿಕ್ಕಿತ್ತು. ಅದು ನನ್ನ ಬದುಕಿನ ಐತಿಹಾಸಿಕ ದಿನ” ಎಂದು ಹೇಳಿದರು.

“ನಾನು ಪದವಿ ಅಂತಿಮ ವರ್ಷದಲ್ಲಿ ಓದುತ್ತಿದ್ದಾಗಲೇ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಸಿಕ್ಕಿತ್ತು. ರಾಜೀವ್ ಗಾಂಧಿ ಅವರು ವೀರಪ್ಪ ಮೊಯಿಲಿ, ಕೆ.‌ಎಚ್. ಪಾಟೀಲ್, ಕೆ ಎಚ್ ರಂಗನಾಥ್ ಸೇರಿದಂತೆ ಹಿರಿಯರು ಅನೇಕ ಯುವಕರನ್ನು ಗುರುತಿಸಿ ಟಿಕೆಟ್ ನೀಡಿದ್ದರು. ಶ್ರೀನಿವಾಸ್ ಪ್ರಸಾದ್, ರೇವಣ್ಣ, ವಿಶ್ವನಾಥ್ ಸೇರಿದಂತೆ ಅನೇಕರು ಆಗ ರಾಜಕೀಯದಲ್ಲಿ ಸಕ್ರಿಯರಾಗಿದ್ದರು. ನಾವೆಲ್ಲರೂ ಒಟ್ಟಿಗೆ ಕೆಲಸ ಮಾಡಿದ್ದೆವು. ಆಗ ಚುನಾವಣೆಯಲ್ಲಿ ಸೋತಿದ್ದರೂ ರಾಜಕೀಯ ಪಯಣ ಮುಂದುವರಿಸಿದೆ” ಎಂದು ಸ್ಮರಿಸಿದರು.

"ಸಂಶೋಧಕಿ ರಮ್ಯಾ ಅವರು ತಮ್ಮ ಜೀವನದ ಹಲವು ಘಟನೆಗಳು, ಇತಿಹಾಸ ಮತ್ತು ಅಪರೂಪದ ಛಾಯಾಚಿತ್ರಗಳನ್ನು ಸಂಗ್ರಹಿಸಿ ಪುಸ್ತಕ ರೂಪದಲ್ಲಿ ತಂದಿರದ್ದಾರೆ. ನನ್ನ ಊರಿನ ಹಳೆಯ ಮನೆಯ ಚಿತ್ರವನ್ನೂ ಹುಡುಕಿ ಪುಸ್ತಕದಲ್ಲಿ ಸೇರಿಸಿದ್ದಾರೆ. ನನ್ನ ಹೆಸರಿನ ಫಲಕವಿರುವ ಮನೆಯ ಚಿತ್ರವನ್ನೂ ಗುರುತಿಸಿದ್ದಾರೆ. ಇದು ನಿಜಕ್ಕೂ ಸಾಹಸದ ಕೆಲಸ. ಅವರೊಂದಿಗೆ ಹತ್ತು ನಿಮಿಷವೂ ಕುಳಿತು ಮಾತನಾಡಲು ನನಗೆ ಸಾಧ್ಯವಾಗಲಿಲ್ಲ. ಒಬ್ಬ ಮುಖ್ಯಮಂತ್ರಿಯಾಗಿ ಅಲ್ಲ, ಒಬ್ಬ ಅಣ್ಣನಾಗಿ ಅವರಿಗೆ ಸಂಪೂರ್ಣ ಆಶೀರ್ವಾದ ನೀಡಲು ಬಯಸುತ್ತೇನೆ. ನನ್ನ ಬದುಕಿನ ಇತಿಹಾಸವನ್ನು ದಾಖಲಿಸುವ ಕೆಲಸ ಮಾಡಿದ್ದಾರೆ” ಎಂದರು.

“ಪದವಿಯ ಕೊನೆಯ ಹಂತದಲ್ಲಿ ಒಂದು ವಿಷಯ ಬಾಕಿ ಉಳಿದಿತ್ತು. ಪರೀಕ್ಷೆಗೆ ಸಿದ್ಧತೆ ನಡೆಸಲು ನನ್ನ ಅಜ್ಜನ ಬಳಿ ಹೋಗಿ ಸಲಹೆ ಕೇಳಿದ್ದೆ. ಮಹೇಶ್ ಅಣ್ಣನವರೊಂದಿಗೆ ಸೇರಿ ಅವರು ನನಗೆ ಪರೀಕ್ಷೆಯ ಪ್ರಶ್ನೆಗಳ ಬಗ್ಗೆ ಮಾರ್ಗದರ್ಶನ ನೀಡಿದ್ದರು. ಪರೀಕ್ಷೆಗೆ ತಡವಾಗಿ ಬಂದಿದ್ದಕ್ಕೆ ಬೈಗುಳವನ್ನೂ ತಿಂದಿದ್ದೆ. ನಂತರ ಪರೀಕ್ಷೆ ಬರೆದಾಗ ಚರ್ಚಿಸಿದ್ದ ಪ್ರಶ್ನೆಗಳೇ ಪ್ರಶ್ನೆಪತ್ರಿಕೆಯಲ್ಲಿ ಬಂದಿದ್ದವು. ಹೀಗೆ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ಪದವಿ ಪಡೆದೆ" ಎಂದರು.

"ನಾನು ಮಾಜಿ ಸಚಿವನಾಗಿದ್ದೆ, ಹಾಲಿ ಶಾಸಕನಾಗಿದ್ದೆ. ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ನನಗೆ ವೇದಿಕೆಯ ಮೇಲೆ ಪದವಿ ಪ್ರಮಾಣಪತ್ರ ನೀಡಲು ವಿಶ್ವವಿದ್ಯಾಲಯದವರು ಬಯಸಿದ್ದರು. ಆದರೆ ಆಗಿನ ರಾಜಕೀಯ ಕಾರಣಗಳಿಂದ ವೇದಿಕೆಗೆ ಕರೆಯಲಿಲ್ಲ. ವೇದಿಕೆಯ ಕೆಳಗೇ ನಿಂತು ಪದವಿ ಪ್ರಮಾಣಪತ್ರ ಪಡೆದುಕೊಂಡೆ. ಮಾರನೇ ದಿನ ಪತ್ರಿಕೆಯಲ್ಲಿ ವೇದಿಕೆಯ ಮೇಲಿದ್ದವರ ಚಿತ್ರಗಳ ಬದಲಿಗೆ ನನ್ನ ಚಿತ್ರವನ್ನೇ ಪ್ರಕಟಿಸಿದ್ದರು” ಎಂದು ಹೇಳಿದರು.

"ಅಲ್ಲಿಂದ ಬೆಳೆದು ಇಂದು ಈ ರಾಜ್ಯದ ಪ್ರಜಾಸೇವಕನಾಗಿದ್ದೇನೆ. ಜನರ ಸೇವಕನಾಗಿ ಕೆಲಸ ಮಾಡುತ್ತಿದ್ದೇನೆ. ಇಂದು ಎಷ್ಟು ಜನರನ್ನು ಬೇಕಾದರೂ ವೇದಿಕೆಗೆ ಕರೆಯಬಹುದು. ಎಲ್ಲಿ ಬೇಕಾದರೂ ಕುಳಿತುಕೊಳ್ಳಬಹುದು. ಆದರೆ ಹಿಂದೆ ಕೆಲವರು ನಮ್ಮನ್ನು ಕಡೆಗಣಿಸಿದ ಸಂದರ್ಭಗಳೂ ಇವೆ. ಅಂತಹ ಅನುಭವಗಳೇ ಬದುಕಿನಲ್ಲಿ ಮುಂದೆ ಸಾಗಲು ಶಕ್ತಿಯಾಗಿವೆ” ಎಂದರು.

“ನನ್ನನ್ನು ಕೆಲವರು ಏನೇನೋ ಹೆಸರುಗಳಿಂದ ಕರೆಯುತ್ತಾರೆ. ಆದರೆ ಕೊನೆಗೆ ನಾನು ಡಿ.ಕೆ. ಶಿವಕುಮಾರ್, ಒಬ್ಬ ಪ್ರಜಾಸೇವಕ. ನನ್ನ ಬಗ್ಗೆ ಮಾತನಾಡಲು ಈ ಕಾರ್ಯಕ್ರಮಕ್ಕೆ ಬಂದಿಲ್ಲ. ಆದರೆ ಪುಸ್ತಕದ ಮೂಲಕ ನನ್ನ ಬದುಕಿನ ಕೆಲವು ವಿಚಾರಗಳನ್ನು ನಿಮ್ಮ ಮುಂದೆ ಇಡಲು ಬಯಸುತ್ತೇನೆ. ಕನ್ನಡಿಯಲ್ಲಿ ನೋಡಿದಾಗ ನಮ್ಮ ಪ್ರತಿಬಿಂಬ ಕಾಣುವಂತೆ, ಇಂತಹ ಪುಸ್ತಕಗಳು ನಮ್ಮ ಬದುಕಿನ ಪ್ರತಿಬಿಂಬವನ್ನು ಸಮಾಜದ ಮುಂದೆ ಇಡುತ್ತವೆ” ಎಂದರು.

"ಕತ್ತಲೆಯನ್ನು ಓಡಿಸಿ ಬೆಳಕನ್ನು ನೀಡುವ ಹಬ್ಬ ದೀಪಾವಳಿ. ಅದೇ ರೀತಿ ಈ ಪುಸ್ತಕವನ್ನು ಓದುವ ಮೂಲಕ ನಾಲ್ಕೈದು ಜನರ ಬದುಕಿಗೆ ಬೆಳಕು ಸಿಗಬಹುದು. ನನ್ನ ಬಗ್ಗೆ ನನಗೆ ತಿಳಿದಿದೆ. ಕೆಲಸ ಮಾಡಿದಾಗ ತಪ್ಪುಗಳೂ ಆಗಬಹುದು. ಆದರೆ ಕೆಲಸ ಮಾಡದೆ ಇದ್ದರೆ ಸಾಧನೆಯೂ ಸಾಧ್ಯವಿಲ್ಲ” ಎಂದು ಅಭಿಪ್ರಾಯಪಟ್ಟರು.

ಆಯುಧಗಳಿಂದ ಗೆಲ್ಲಲು ಸಾಧ್ಯವಿಲ್ಲ; ಅಕ್ಷರಗಳಿಂದ ಗೆಲ್ಲಬಹುದು

“ಪುಸ್ತಕಗಳು ಮನುಷ್ಯನಿಗೆ ಕೇವಲ ಜ್ಞಾನವನ್ನಷ್ಟೇ ನೀಡುವುದಿಲ್ಲ. ಬದುಕನ್ನು ನೋಡುವ ದೃಷ್ಟಿಕೋನವನ್ನೂ ನೀಡುತ್ತವೆ. ಆಯುಧಗಳಿಂದ ಗೆಲ್ಲಬಹುದು ಎಂದು ಕೆಲವರು ಭಾವಿಸುತ್ತಾರೆ. ಆದರೆ ಆಯುಧಗಳಿಂದಲ್ಲ, ಮನಸ್ಸುಗಳು ಮತ್ತು ಅಕ್ಷರಗಳಿಂದ ಗೆಲ್ಲಲು ಸಾಧ್ಯ ಎಂದು ಮಹಾತ್ಮ ಗಾಂಧೀಜಿ ಹೇಳಿದ್ದಾರೆ. ನಾವು ಕಟ್ಟುವ ಕಟ್ಟಡಗಳು ಒಂದು ದಿನ ಹಳೆಯದಾಗಬಹುದು. ಸಂಪತ್ತು ಬೇರೆಯವರ ಪಾಲಾಗಬಹುದು. ಆದರೆ ನಾವು ಓದುವ ಪುಸ್ತಕಗಳು ಮತ್ತು ಹಂಚುವ ಜ್ಞಾನವನ್ನು ಇಡೀ ಜಗತ್ತಿಗೆ ಹಂಚಬಹುದು” ಎಂದರು.

“ಬಾಬಾಸಾಹೇಬ್ ಅಂಬೇಡ್ಕರ್ ಅವರು ಇತಿಹಾಸ ಮರೆತವರು ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ ಎಂಬ ಸಂದೇಶ ನೀಡಿದ್ದಾರೆ. ನಾವು ಉಳಿಸಿಕೊಂಡಿರುವ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ತಿಳಿಸಲು ಇಂತಹ ಪುಸ್ತಕಗಳು ಅತ್ಯಗತ್ಯ. ಸಿದ್ದೇಶ್ವರ ಶ್ರೀಗಳು ಉತ್ತಮ ಪುಸ್ತಕಗಳು ನೂರಾರು ಗೆಳೆಯರಿಗೆ ಸಮಾನ ಎಂದು ಹೇಳಿದ್ದಾರೆ. ಗಾಂಧೀಜಿಯವರು ಪುಸ್ತಕ ಓದುವುದು ಸಂತೋಷ ನೀಡುವ ಹವ್ಯಾಸ ಎಂದು ಹೇಳಿದ್ದಾರೆ. ನನಗೆ ಪುಸ್ತಕಗಳನ್ನು ಸುದೀರ್ಘವಾಗಿ ಓದುವ ತಾಳ್ಮೆ ಕಡಿಮೆ. ಒಂದೊಂದು ಸಾಲು ಓದಿ ಪುಟ ತಿರುಗಿಸುವ ಅಭ್ಯಾಸವಿದೆ. ಆದರೂ ಪುಸ್ತಕಗಳು ಮಾನವ ಬದುಕಿನ ಬದಲಾವಣೆಗೆ ದೊಡ್ಡ ಕೊಡುಗೆ ನೀಡುತ್ತವೆ” ಎಂದು ಹೇಳಿದರು.

“ಇಂದು ಸೋನಿಯಾ ಗಾಂಧಿ ಅವರ ಪುಸ್ತಕವೂ ಬಂದಿದೆ. ಲಕ್ಷಾಂತರ ಪುಸ್ತಕಗಳು ಪ್ರಕಟವಾಗುತ್ತಿವೆ. ಒಬ್ಬೊಬ್ಬರ ಬದುಕಿನ ಅಂತರಂಗ, ಇತಿಹಾಸ, ಕಷ್ಟಗಳು ಮತ್ತು ಸಮಸ್ಯೆಗಳನ್ನು ತಿಳಿದುಕೊಳ್ಳಲು ಪುಸ್ತಕಗಳು ನೆರವಾಗುತ್ತವೆ. ಪುಸ್ತಕ ಬರೆಯುವುದು ಸುಲಭದ ಕೆಲಸವಲ್ಲ. ಅದಕ್ಕೆ ಸಂಶೋಧನೆ, ಆಸಕ್ತಿ, ತಾಳ್ಮೆ ಮತ್ತು ಪರಿಶ್ರಮ ಅಗತ್ಯ. ಎಲ್ಲರಿಗೂ ಈ ಕೆಲಸ ಮಾಡಲು ಸಾಧ್ಯವಿಲ್ಲ” ಎಂದರು.

ತಾವು ಮೊದಲ ಬಾರಿಗೆ ಶಾಸಕರಾದಾಗ ವಿಧಾನಸಭೆಯಲ್ಲಿ ಹಿರಿಯ ನಾಯಕರನ್ನು ಕಂಡು ನೆನಪಿಸಿಕೊಂಡ ಅವರು, “ಕಾಗೋಡು ತಿಮ್ಮಪ್ಪ, ಬಂಗಾರಪ್ಪ, ಕೆ.ಎಚ್. ರಂಗನಾಥ್, ರಾಮಕೃಷ್ಣ ಹೆಗಡೆ, ವೀರೇಂದ್ರ ಪಾಟೀಲ್, ವೀರಪ್ಪ ಮೊಯಿಲಿ, ನಾಣಯ್ಯ, ಎ.ಕೆ. ಸುಬ್ಬಯ್ಯ ಸೇರಿದಂತೆ ಅನೇಕ ದಿಗ್ಗಜ ನಾಯಕರು ಆಗ ವಿಧಾನಸಭೆಯಲ್ಲಿದ್ದರು. ಅವರ ಕಾರ್ಯವೈಖರಿ, ಜ್ಞಾನ ಮತ್ತು ಅನುಭವಗಳನ್ನು ಕಂಡಾಗ ರಾಜಕಾರಣದಲ್ಲಿ ಬೆಳೆಯಲು ಎಷ್ಟು ಶ್ರಮ ಬೇಕು ಎಂಬುದು ಅರಿವಾಯಿತು. ನಾನು ಪದವೀಧರನಲ್ಲ ಎಂಬ ಕೊರತೆಯೂ ಕಾಡಿತು. ಅದಕ್ಕಾಗಿಯೇ ಮತ್ತೆ ಓದಲು ಪ್ರಯತ್ನಿಸಿ ಈ ಹಂತಕ್ಕೆ ಬಂದಿದ್ದೇನೆ” ಎಂದರು.

“ನಾನು ಇತಿಹಾಸವನ್ನು ಓದುವುದಕ್ಕಿಂತ ಇತಿಹಾಸವನ್ನು ಸೃಷ್ಟಿಸುವುದರಲ್ಲಿ ನಂಬಿಕೆ ಇಟ್ಟಿದ್ದೇನೆ. ನನಗೆ ಜನರು ಅಧಿಕಾರ ನೀಡಿದ್ದಾರೆ. ನನ್ನ ನಾಯಕತ್ವದಲ್ಲಿ ಪಕ್ಷ ಅಧಿಕಾರಕ್ಕೆ ಬರಲು ನಮ್ಮ ನಾಯಕರು ಮತ್ತು ಕಾರ್ಯಕರ್ತರು ಎಷ್ಟು ಶ್ರಮಪಟ್ಟಿದ್ದಾರೆ ಎಂಬುದು ನನಗೆ ಗೊತ್ತಿದೆ. ನಮ್ಮ 136 ಶಾಸಕರನ್ನು ನಾನು ಎಂದಿಗೂ ಬೇರೆ ಬೇರೆ ಎಂದು ನೋಡಿಲ್ಲ. ವಿರೋಧ ಪಕ್ಷದ ನಾಯಕ ಅಶೋಕ್ ಅವರಿಗೆ ಒಮ್ಮೆ ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಅವರ ಪಕ್ಕದಲ್ಲಿ ಕುಳಿತುಕೊಂಡೇ, ‘ಸಿದ್ದರಾಮಯ್ಯ ಸೇರಿದಂತೆ 136 ಶಾಸಕರೂ ನನ್ನ ಸಂಖ್ಯಾಬಲ’ ಎಂದು ಹೇಳಿದ್ದೆ. ಪಕ್ಷದ ಅಧ್ಯಕ್ಷನಾಗಿದ್ದಾಗಲೂ ಎಲ್ಲರನ್ನೂ ಸಮಾನವಾಗಿ ಕಂಡಿದ್ದೇನೆ. ಅಧಿಕಾರಕ್ಕಾಗಿ ಓಡಾಡುವುದು, ಗುಂಪು ಕಟ್ಟುವುದು ಅಥವಾ ಜಾತಿ ಆಧಾರದಲ್ಲಿ ರಾಜಕಾರಣ ಮಾಡುವುದನ್ನು ನಾನು ಮಾಡಿಲ್ಲ. ನನ್ನ ಸಂಘಟನೆ ಮತ್ತು ಪಕ್ಷದ ಮೇಲಿನ ಪ್ರೀತಿಯೇ ಅದಕ್ಕೆ ಕಾರಣ” ಎಂದು ತಿಳಿಸಿದರು.

ತಮ್ಮ ರಾಜಕೀಯ ಭವಿಷ್ಯದ ಬಗ್ಗೆ 35 ವರ್ಷಗಳ ಹಿಂದೆಯೇ ವಿಶ್ವಾಸವಿತ್ತು ಎಂದು ಹೇಳಿದ ಅವರು, “ನಾನು ಒಂದು ದಿನ ಮುಖ್ಯಮಂತ್ರಿ ಆಗುತ್ತೇನೆ ಎಂಬ ಭಾವನೆ 35 ವರ್ಷಗಳ ಹಿಂದೆಯೇ ನನ್ನ ಮನಸ್ಸಿನಲ್ಲಿ ಇತ್ತು. ಜ್ಯೋತಿಷಿ ದ್ವಾರಕನಾಥ್ ಅವರು ನನ್ನ ರಾಜಕೀಯ ಭವಿಷ್ಯದ ಬಗ್ಗೆ ಕೆಲವು ವಿಚಾರಗಳನ್ನು ಹೇಳಿದ್ದರು. ಟಿಕೆಟ್ ಸಿಗುತ್ತದೆ, ಸಚಿವನಾಗುತ್ತೀಯ, ಟಿಕೆಟ್ ಸಿಗದಿದ್ದರೂ ಗೆಲ್ಲುತ್ತೀಯ ಎಂದು ಹೇಳಿದ್ದರು. ನಮ್ಮ ಬದುಕಿನಲ್ಲಿ ಅನೇಕ ಗುಪ್ತ ಸಂಪತ್ತುಗಳಿವೆ. ನಮ್ಮ ರೇವಣ್ಣ ಸೇರಿದಂತೆ ಅನೇಕ ನಾಯಕರಿಗೆ ನಾವು ಇಲ್ಲಿ ಬರಲು ಪಟ್ಟ ಶ್ರಮ ಗೊತ್ತಿದೆ. ನಾನು ಸುಮ್ಮನೆ ಈ ಸ್ಥಾನಕ್ಕೆ ಬಂದಿಲ್ಲ. ನನ್ನ 40 ವರ್ಷಗಳ ಪರಿಶ್ರಮ, ಅನೇಕ ನಾಯಕರನ್ನು ಬೆಳೆಸಿದ ಅನುಭವ ಇದರ ಹಿಂದೆ ಇದೆ. 136 ಸ್ಥಾನಗಳನ್ನು ಗೆಲ್ಲಲು ಜನರು ನಮ್ಮ ಮೇಲೆ ಇಟ್ಟ ವಿಶ್ವಾಸವೂ ಕಾರಣ” ಎಂದರು.

“ಒಂದು ಮರದಿಂದ ಲಕ್ಷಾಂತರ ಬೆಂಕಿಕಡ್ಡಿಗಳನ್ನು ತಯಾರಿಸಬಹುದು. ಆದರೆ ಒಂದೇ ಒಂದು ಬೆಂಕಿಕಡ್ಡಿ ಇಡೀ ಕಾಡನ್ನೇ ಸುಟ್ಟುಹಾಕಬಹುದು. ಅದೇ ರೀತಿ ಸಣ್ಣ ಮನಸ್ಸುಗಳಲ್ಲಿ ದ್ವೇಷದ ಬೀಜ ಬಿತ್ತಿದರೆ ಇಡೀ ಸಮಾಜದಲ್ಲಿ ಅಶಾಂತಿ ಉಂಟಾಗುತ್ತದೆ. ಕೆಲವರಿಗೆ ಸುಳ್ಳೇ ಮನೆದೇವರಾಗಿದೆ. ಇಂತಹ ರಾಜಕೀಯ ಬೆಳವಣಿಗೆಗಳನ್ನು ನಮ್ಮ ಅನುಭವದ ಪ್ರಯಾಣದಲ್ಲಿ ನೋಡಿದ್ದೇವೆ” ಎಂದರು.

“ಯಶಸ್ಸು ಸಾಧಿಸಲು ಶಿಸ್ತು, ಕಠಿಣ ನಿರ್ಧಾರಗಳು, ಏಕಾಗ್ರತೆ ಮತ್ತು ರಾಜಕೀಯ ಕೌಶಲ್ಯ ಅಗತ್ಯ. ಜನರ ವಿಶ್ವಾಸ ಗಳಿಸುವುದು ಸುಲಭವಲ್ಲ. ಎಲ್ಲರಿಗೂ ಎಲ್ಲ ಸಂದರ್ಭಗಳಲ್ಲೂ ಯಶಸ್ಸು ಸಿಗುವುದಿಲ್ಲ. ನಮ್ಮ ತನ್ವೀರ್ ಸೇಠ್ ಅವರು ಆರನೇ ಬಾರಿ ಶಾಸಕರಾಗಿದ್ದಾರೆ. ಅವರಿಗೆ ಸಚಿವ ಸ್ಥಾನ ನೀಡಲು ಸಾಧ್ಯವಾಗದಿರುವುದು ನನಗೆ ಬೇಸರ ತಂದಿದೆ. ಅವರಲ್ಲಿ ಅಪಾರ ಅನುಭವ ಮತ್ತು ಹಿರಿಯತನವಿದೆ. ಅವರ ತಂದೆಯೂ ಅಲ್ಪಸಂಖ್ಯಾತ ಸಮುದಾಯದ ದೊಡ್ಡ ನಾಯಕರಾಗಿದ್ದರು. ಕೆಲವೊಮ್ಮೆ ರಾಜಕೀಯದಲ್ಲಿ ಅನಿವಾರ್ಯ ಸಂದರ್ಭಗಳು ಎದುರಾಗುತ್ತವೆ” ಎಂದರು.

ಬಂಗಾರಪ್ಪ, ಎಸ್.ಎಂ. ಕೃಷ್ಣ, ರಾಜೀವ್ ಗಾಂಧಿ, ವೀರಪ್ಪ ಮೊಯಿಲಿ, ಚಂದ್ರಶೇಖರಮೂರ್ತಿ ಸೇರಿದಂತೆ ಅನೇಕರು ನಮ್ಮನ್ನು ಗುರುತಿಸಿ ಬೆಳೆಸಿದ್ದಾರೆ. ಅವರಿಂದಲೇ ನಮಗೆ ಅವಕಾಶಗಳು ದೊರೆತವು. ನಾವು ಯಾರೊಂದಿಗೇ ಕೆಲಸ ಮಾಡಿದರೂ ಅವರ ಒಳಿತನ್ನೇ ಬಯಸುತ್ತೇವೆ. ಯಾರಿಗೂ ಕೆಡುಕು ಬಯಸುವುದಿಲ್ಲ” ಎಂದು ಹೇಳಿದರು.

ಜೈಲಿಗೆ ಹೋದಾಗಲೂ ಆತ್ಮವಿಶ್ವಾಸ ಕಳೆದುಕೊಳ್ಳಲಿಲ್ಲ

“ನಾನು ಜೈಲಿಗೆ ಹೋದಾಗಲೂ ನನ್ನ ಆತ್ಮವಿಶ್ವಾಸ ಕಳೆದುಕೊಳ್ಳಲಿಲ್ಲ. ಜೈಲಿನಿಂದ ಹೊರಬಂದು ಮತ್ತೆ ಪಕ್ಷ ಸಂಘಟಿಸುತ್ತೇನೆ, ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುತ್ತೇನೆ, ಈ ಸ್ಥಾನದಲ್ಲಿ ಕುಳಿತುಕೊಳ್ಳುತ್ತೇನೆ ಎಂಬ ವಿಶ್ವಾಸ ನನಗಿತ್ತು. ಜೈಲಿನಲ್ಲಿದ್ದಾಗಲೂ ಅದನ್ನೇ ಯೋಚಿಸುತ್ತಿದ್ದೆ. ಆ ಸಂದರ್ಭದಲ್ಲಿ ಜನರು ಬಂದು ನನಗೆ ಧೈರ್ಯ ತುಂಬಿದರು. ನನ್ನ ಕ್ಷೇತ್ರದ ಜನರ ಬೆಂಬಲ ಮರೆಯಲು ಸಾಧ್ಯವಿಲ್ಲ. ಇಂದು ಅವರಿಗೆ ಸಮಯ ಕೊಡಲು ಸಾಧ್ಯವಾಗದಿರುವುದು ಬೇಸರದ ಸಂಗತಿ” ಎಂದರು.

“ನಾನು ಚುನಾವಣೆಗೆ ಹೋಗದಿದ್ದರೂ ಕನಕಪುರ ಕ್ಷೇತ್ರದ ಜನರು 1.23 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ ರಾಜ್ಯಕ್ಕೆ ದೊಡ್ಡ ಸಂದೇಶ ನೀಡಿದರು. ನಾನು ಇಂದು ಈ ಹಂತಕ್ಕೆ ಬರಲು ಕನಕಪುರದ ಜನರ ಪ್ರೀತಿ, ಆಶೀರ್ವಾದ ಮತ್ತು ಬೆಂಬಲವೇ ಕಾರಣ” ಎಂದು ಹೇಳಿದರು.

ನನ್ನ ಬದುಕು ತೆರೆದ ಪುಸ್ತಕ

"ನನ್ನ ಬದುಕು ತೆರೆದ ಪುಸ್ತಕ. ನನ್ನ ಜೀವನದಲ್ಲಿ ಯಾವುದೇ ರಹಸ್ಯಗಳಿಲ್ಲ. ಯಾರು ಬೇಕಾದರೂ ನನ್ನ ಬಗ್ಗೆ ತಿಳಿದುಕೊಳ್ಳಬಹುದು. ಎಲ್ಲ ಜಾತಿ, ಧರ್ಮಗಳ ಜನರನ್ನು ನಾವು ಪ್ರೀತಿಸುತ್ತೇವೆ ಮತ್ತು ಗೌರವಿಸುತ್ತೇವೆ. ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ತತ್ವದಲ್ಲಿ ನಂಬಿಕೆ ಇಟ್ಟಿದ್ದೇನೆ. ನಾನು ರೇಣುಕಾಚಾರ್ಯ ಕಾಲೇಜಿನಲ್ಲಿ ಓದಿದವನು. ನಮ್ಮ ಹಿರಿಯರು ಎಲ್ಲ ಧರ್ಮಗಳಿಗೂ ಗೌರವ ನೀಡುವುದನ್ನು ಕಲಿಸಿದ್ದಾರೆ. ನಾವು ಯಾವ ಜಾತಿಯಲ್ಲಿ ಹುಟ್ಟಿದ್ದೇವೆಯೋ ಆ ಜಾತಿಗೆ ಗೌರವ ನೀಡಬೇಕು. ಆದರೆ ಬೇರೆ ಜಾತಿಯವರನ್ನು ಕೀಳಾಗಿ ಕಾಣಬಾರದು. ಎಲ್ಲಕ್ಕಿಂತ ಮುಖ್ಯವಾದದ್ದು ಮನುಷ್ಯತ್ವ” ಎಂದರು.

"ಯಾರೂ ಶಾಶ್ವತವಲ್ಲ. ಪ್ರತಿಯೊಬ್ಬರಿಗೂ ಒಂದೊಂದು ಕಾಲ, ಒಂದೊಂದು ಅವಕಾಶ ಬರುತ್ತದೆ. ಆ ಅವಕಾಶದಲ್ಲಿ ಸಮಾಜಕ್ಕೆ ಉಪಯೋಗವಾಗುವ ಸಾಕ್ಷಿಗುಡ್ಡೆಗಳನ್ನು ಬಿಟ್ಟುಹೋಗಬೇಕು” ಎಂದರು.

"ಎಸ್.ಎಂ. ಕೃಷ್ಣ ಅವರನ್ನು ಇಂದು ಎಲ್ಲರೂ ನೆನಪಿಸಿಕೊಳ್ಳುತ್ತಾರೆ. ಅವರು ಬೆಂಗಳೂರನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಬೆಳೆಸಿದರು. ಕೆಂಗಲ್ ಹನುಮಂತಯ್ಯ ಅವರನ್ನು ವಿಧಾನಸೌಧ ನಿರ್ಮಾಣಕ್ಕಾಗಿ ನೆನಪಿಸಿಕೊಳ್ಳುತ್ತೇವೆ. ದೇವರಾಜ ಅರಸು ಅವರನ್ನು ಹಿಂದುಳಿದ ಸಮಾಜಗಳ ಅಭಿವೃದ್ಧಿಗೆ ನೀಡಿದ ಕೊಡುಗೆಗಳಿಗಾಗಿ ಸ್ಮರಿಸುತ್ತೇವೆ. ಪ್ರತಿಯೊಬ್ಬ ನಾಯಕನೂ ತನ್ನ ಕಾಲದಲ್ಲಿ ಮಾಡಿದ ಕೆಲಸದಿಂದ ಇತಿಹಾಸದಲ್ಲಿ ಉಳಿಯುತ್ತಾನೆ. ನಾವೂ ಕೂಡ ಸಮಾಜಕ್ಕೆ ಸಾಕ್ಷಿಗುಡ್ಡೆಗಳನ್ನು ಬಿಟ್ಟುಹೋಗಬೇಕು” ಎಂದರು.

“ನಾನು ಮಧ್ಯಮ ವರ್ಗದ ಕುಟುಂಬದಿಂದ ಬಂದವನು. ಹಳ್ಳಿಯಲ್ಲಿ ಬೆಳೆದಿದ್ದೇನೆ. ರಾಜಕೀಯಕ್ಕೆ ಬರುವ ಮೊದಲು ಕೋಳಿ ಫಾರಂ ನಡೆಸಿದ್ದೇನೆ, ಕೃಷಿ ಮಾಡಿದ್ದೇನೆ, ವಿವಿಧ ಉದ್ಯಮಗಳನ್ನು ನಡೆಸಿದ್ದೇನೆ. ಕಾರ್ಖಾನೆಗಳು, ಚಿತ್ರಮಂದಿರಗಳನ್ನೂ ನಡೆಸಿದ್ದೇನೆ. ಇಂದಿರಾ ಗಾಂಧಿಯವರು ನಿಧನರಾದ ದಿನವೇ ನನ್ನ ಚಿತ್ರಮಂದಿರಕ್ಕೆ ಅವರ ಹೆಸರಿಟ್ಟಿದ್ದೆ. ನನ್ನ ವಿರೋಧಿಗಳು ಅನೇಕ ಟೀಕೆಗಳನ್ನು ಮಾಡಿದ್ದಾರೆ. ಆದರೆ ಅವುಗಳ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಕಾಲೇಜು ದಿನಗಳಲ್ಲೇ ದೇವೇಗೌಡರ ವಿರುದ್ಧ ಸ್ಪರ್ಧಿಸಲು ಟಿಕೆಟ್ ನೀಡಲಾಗಿತ್ತು. ಜಿಲ್ಲಾ ಪಂಚಾಯಿತಿ ಸದಸ್ಯನಾಗಿ, ವಿದ್ಯಾರ್ಥಿ ನಾಯಕನಾಗಿ, ಕ್ಷೇತ್ರದ ವಿವಿಧ ಚುನಾವಣೆಗಳಲ್ಲಿ ಕೆಲಸ ಮಾಡಿ ಹಂತ ಹಂತವಾಗಿ ಬೆಳೆದಿದ್ದೇನೆ. ದೇವೇಗೌಡರ ವಿರುದ್ಧ ಸೋತಾಗಲೂ ಮನೆಯಲ್ಲಿ ಕುಳಿತುಕೊಳ್ಳಲಿಲ್ಲ. ಜನಾರ್ದನ ಪೂಜಾರಿ ಅವರು ಹಣಕಾಸು ಸಚಿವರಾಗಿದ್ದಾಗ ತಂದ ಸಾಲ ಮೇಳ ಯೋಜನೆಯಿಂದ ಜನರ ನಡುವೆ ಕೆಲಸ ಮಾಡಿದೆ. ಹೀಗೆ ಬಹಳ ಚಿಕ್ಕ ವಯಸ್ಸಿನಲ್ಲೇ ವಿಧಾನಸೌಧದ ಮೆಟ್ಟಿಲೇರಿದೆ” ಎಂದು ತಮ್ಮ ರಾಜಕೀಯ ಪಯಣವನ್ನು ವಿವರಿಸಿದರು.

"ರಮ್ಯ ಅವರು ನನ್ನ ಜೀವನದ ಇತಿಹಾಸವನ್ನು ಅಧ್ಯಯನ ಮಾಡಿ ಈ ಪುಸ್ತಕ ಬರೆದಿದ್ದಾರೆ. ಅದಕ್ಕಾಗಿ ಡಾಕ್ಟರೇಟ್ ಪದವಿಯನ್ನೂ ಪಡೆದಿದ್ದಾರೆ. ಅವರ ಈ ಪ್ರಯತ್ನ ನನಗೆ ಸಂತೋಷ ತಂದಿದೆ. ಹಿಂದೆ ಕೆಲವರು ನನ್ನನ್ನು ಚಾಕುಚೂರಿ, ರೌಡಿ ಎಂದೆಲ್ಲ ಕರೆದಿದ್ದಾರೆ. ಈಗಲೂ ಟೀಕೆಗಳು ಬರುತ್ತವೆ. ಆದರೆ ಟೀಕೆಗಳು ಸಾಯುತ್ತವೆ, ನಾವು ಮಾಡುವ ಕೆಲಸಗಳು ಮಾತ್ರ ಉಳಿಯುತ್ತವೆ. ಎಂಜಿನಿಯರ್‌ಗಳಿಗೆ, ಶಿಕ್ಷಕರಿಗೆ ಗೌರವ ಸೂಚಿಸುವ ರೀತಿಯಲ್ಲಿ ಅವರ ಹೆಸರಿನೊಂದಿಗೆ ವಿಶೇಷ ಗೌರವಪದಗಳನ್ನು ಸೇರಿಸುವ ಕೆಲಸವನ್ನೂ ಮಾಡಿದ್ದೇನೆ. ಎಲ್ಲರಿಗೂ ಗೌರವ ಸಿಗಬೇಕು ಎಂಬುದು ನನ್ನ ಆಶಯ. ರಮ್ಯಾ ಅವರಿಗೂ ನಾನು ಹೇಳಿದ್ದೇನೆ, ನಿಮ್ಮ ಕೆಲಸವನ್ನು ನೀವು ಮಾಡುತ್ತಿರಿ, ಟೀಕೆಗಳಿಗೆ ತಲೆಕೆಡಿಸಿಕೊಳ್ಳಬೇಡಿ” ಎಂದರು.

“ನಮ್ಮ ಕಣ್ಣಲ್ಲಿ ಸಂತೋಷವಾದಾಗಲೂ ನೀರು ಬರುತ್ತದೆ, ದುಃಖವಾದಾಗಲೂ ನೀರು ಬರುತ್ತದೆ. ನಮ್ಮ ಬೆವರು ಉಪ್ಪು, ಅವರ ಬೆವರೂ ಉಪ್ಪು. ನಮ್ಮ ರಕ್ತ ಕೆಂಪು, ನಿಮ್ಮ ರಕ್ತವೂ ಕೆಂಪು. ಜಾತಿ ಅಥವಾ ಬಣ್ಣದ ಆಧಾರದಲ್ಲಿ ಮನುಷ್ಯರನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಮನುಷ್ಯತ್ವವೇ ಮುಖ್ಯ. ನಾವು ನಮ್ಮ ಕೆಲಸವನ್ನು ಶ್ರೇಷ್ಠವಾಗಿ ಮಾಡಿಕೊಂಡು ಹೋಗಬೇಕು” ಎಂದು ಹೇಳಿದರು.

ಹಿರಿಯರ ಭಾಷಣಗಳು ಮತ್ತು ಅನುಭವಗಳು ಬದುಕಿಗೆ ಮಾರ್ಗದರ್ಶನ ನೀಡುತ್ತವೆ ಎಂದು ತಿಳಿಸಿದ ಅವರು, “ವಿಧಾನಸಭೆಯಲ್ಲಿ ಹಾಗೂ ಬೇರೆ ಬೇರೆ ವೇದಿಕೆಗಳಲ್ಲಿ ಅನೇಕ ಹಿರಿಯರ ಭಾಷಣಗಳನ್ನು ಕೇಳಿದ್ದೇನೆ. ಪ್ರತಿಯೊಂದು ಭಾಷಣದಲ್ಲೂ ಒಂದೊಂದು ಅನುಭವ, ಒಂದೊಂದು ಪಾಠ ಇರುತ್ತದೆ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಪುಸ್ತಕಗಳು, ಗಾಂಧೀಜಿ ಮತ್ತು ನೆಹರು ಅವರ ಆದರ್ಶಗಳು, ಬಸವಣ್ಣನವರ ವಚನಗಳು ನಮ್ಮ ಬದುಕಿಗೆ ದಾರಿ ತೋರಿಸುತ್ತವೆ. ಇಂತಹ ಸಾಹಿತ್ಯ ಮತ್ತು ಚಿಂತನೆಗಳು ಪ್ರತಿಯೊಬ್ಬರ ಬದುಕಿನಲ್ಲೂ ಬದಲಾವಣೆ ತರಬಲ್ಲವು” ಎಂದರು.

“ರಾಜಕಾರಣಿಗಳು, ಸಾಹಿತಿಗಳು, ಪೂಜ್ಯ ಶ್ರೀಗಳು ಸೇರಿದಂತೆ ಅನೇಕ ಜ್ಞಾನಿಗಳ ಅನುಭವಗಳು ಒಂದೊಂದು ಸಂದರ್ಭದಲ್ಲಿ ಮನುಷ್ಯರ ಜೀವನವನ್ನೇ ಬದಲಾಯಿಸುತ್ತವೆ. ಸಣ್ಣ ಘಟನೆಯೂ ದೊಡ್ಡ ಬದಲಾವಣೆಗೆ ಕಾರಣವಾಗಬಹುದು. ಇಂತಹ ಅನುಭವಗಳು ದಾಖಲಾಗಬೇಕು. ಪ್ರತಿಯೊಬ್ಬರ ಜೀವನದ ಅನುಭವಗಳು ಸಾಹಿತ್ಯದ ರೂಪದಲ್ಲಿ ಉಳಿಯಬೇಕು. ಪುಸ್ತಕಗಳನ್ನು ಬರೆಯುವವರನ್ನು ನಾವು ಪ್ರೋತ್ಸಾಹಿಸಬೇಕು” ಎಂದು ಹೇಳಿದರು.

"ನಮ್ಮ ಕಾಲ ಬೇರೆ, ಇಂದಿನ ಮಕ್ಕಳ ಕಾಲ ಬೇರೆ. ಈಗ ಮೊಬೈಲ್, ಕಂಪ್ಯೂಟರ್, ಐಫೋನ್, ಕೃತಕ ಬುದ್ಧಿಮತ್ತೆ ಸೇರಿದಂತೆ ಹೊಸ ತಂತ್ರಜ್ಞಾನಗಳು ಬಂದಿವೆ. ಮಕ್ಕಳಿಗೆ ಈಗ ಗೂಗಲ್, ಚಾಟ್‌ ಜಿಪಿಟಿ ಸೇರಿದಂತೆ ಅನೇಕ ತಂತ್ರಜ್ಞಾನಗಳ ಪರಿಚಯವಿದೆ. ಹೊಸ ಪೀಳಿಗೆಯೊಂದಿಗೆ ನಾವು ಕೂಡ ಹೊಸ ತಂತ್ರಜ್ಞಾನಕ್ಕೆ ಹೊಂದಿಕೊಳ್ಳಬೇಕು. ದೊಡ್ಡ ಪುಸ್ತಕಗಳನ್ನು ಓದಲು ಎಲ್ಲರಿಗೂ ಸಮಯ ಅಥವಾ ತಾಳ್ಮೆ ಇರದಿರಬಹುದು. ಈಗ ದೂರದರ್ಶನ ಮಾಧ್ಯಮಗಳೂ ಪುಸ್ತಕಗಳ ವಿಚಾರಗಳನ್ನು ಒಂದು ಅಥವಾ ಎರಡು ನಿಮಿಷಗಳ ರೀಲ್‌ಗಳ ರೂಪದಲ್ಲಿ ಜನರಿಗೆ ತಲುಪಿಸುತ್ತಿವೆ. ಯಾವ ರೂಪದಲ್ಲಾದರೂ ಜ್ಞಾನ ಮತ್ತು ಅನುಭವಗಳು ಜನರಿಗೆ ತಲುಪಬೇಕು” ಎಂದರು.

"ಅದೃಷ್ಟದ ಮೇಲೆ ನಂಬಿಕೆ ಇಟ್ಟುಕೊಳ್ಳಬೇಡಿ. ನಿಮ್ಮ ಶ್ರಮದ ಮೇಲೆ ನಂಬಿಕೆ ಇಡಿ. ಕೇವಲ ಅದೃಷ್ಟದಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಯಶಸ್ಸಿನ ಹಿಂದೆ ಕಠಿಣ ಪರಿಶ್ರಮವಿರುತ್ತದೆ. ಆ ಪರಿಶ್ರಮಕ್ಕಾಗಿ ನಮ್ಮ ನಿದ್ರೆ, ಆರೋಗ್ಯ, ಬದುಕು, ಕುಟುಂಬದ ಸಮಯವನ್ನು ತ್ಯಾಗ ಮಾಡಬೇಕಾಗುತ್ತದೆ. ಕುಟುಂಬದಿಂದ ದೂರವಿದ್ದು, ಸ್ನೇಹಿತರು ಮತ್ತು ಸಹೋದ್ಯೋಗಿಗಳ ಸಹಕಾರದಿಂದಲೇ ನಾವು ಈ ಹಂತಕ್ಕೆ ಬಂದಿದ್ದೇವೆ. ಅನೇಕರು ಒಟ್ಟಾಗಿ ಕೆಲಸ ಮಾಡಿದಾಗ ಮಾತ್ರ ಒಂದು ದೊಡ್ಡ ಸಾಧನೆಯ ರೂಪ ಸಿಗುತ್ತದೆ” ಎಂದರು.

"ಮೈಸೂರು ಬಹಳ ಮುಖ್ಯವಾದ ಇತಿಹಾಸ ಹೊಂದಿರುವ ನಗರ. ಬೆಂಗಳೂರನ್ನು ಬೆಳೆಸುವ ಜತೆಗೆ ಮೈಸೂರನ್ನೂ ಬೆಳೆಸಬೇಕು. ನಗರಗಳಲ್ಲಿ ಹಣಕಾಸಿನ ಚಟುವಟಿಕೆಗಳು ಹೆಚ್ಚಾದರೆ ಅಲ್ಲಿಂದ ಹಳ್ಳಿಗಳ ಅಭಿವೃದ್ಧಿಗೂ ಹಣ ನೀಡಲು ಸಾಧ್ಯವಾಗುತ್ತದೆ. ಜನರು ನಗರಗಳಿಗೆ ಬಂದು ವ್ಯಾಪಾರ, ಉದ್ಯಮ ಮಾಡಿದರೆ ತೆರಿಗೆ ಪಾವತಿಸುತ್ತಾರೆ. ಹಳ್ಳಿಗಳಲ್ಲಿರುವ ರೈತರು ನೇರವಾಗಿ ಹೆಚ್ಚಿನ ತೆರಿಗೆ ಪಾವತಿಸುವುದಿಲ್ಲ. ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಗ್ರಾಮೀಣ ಪ್ರದೇಶಗಳಿಂದ ಜನರು ನಗರಗಳಿಗೆ ಬರುತ್ತಿದ್ದಾರೆ. ಬೆಂಗಳೂರಿನ ಜನಸಂಖ್ಯೆಯೂ ಗಣನೀಯವಾಗಿ ಹೆಚ್ಚಾಗಿದೆ. ಹೊರಗಿನಿಂದ ಬಂದು ಇಲ್ಲಿ ಕೆಲಸ ಮಾಡುವವರೂ ತೆರಿಗೆ ಪಾವತಿಸುತ್ತಿದ್ದಾರೆ. ಉದ್ಯೋಗ ಮತ್ತು ಆರ್ಥಿಕ ಚಟುವಟಿಕೆಗಳನ್ನು ಒಂದೇ ಕಡೆ ಸೀಮಿತಗೊಳಿಸದೆ ಎಲ್ಲ ನಗರಗಳಿಗೂ ವಿಸ್ತರಿಸಬೇಕು. ಮೈಸೂರು ಕೂಡ ಬೆಳೆಯುತ್ತಿರುವುದನ್ನು ಗಮನಿಸಬೇಕು” ಎಂದರು.

Comments

Leave a Comment

Prev Post ಬೆಂಗಳೂರು: 80 ಕ್ಕೂ ಹೆಚ್ಚು ನಿಗಮ-ಮಂಡಳಿಗಳಿಗೆ 428 ನೇಮಕಾತಿ; ಸರ್ಕಾರದಿಂದ ಬೃಹತ್ ಆದೇಶ
Next Post ಪಶ್ಚಿಮ ಘಟ್ಟದ ಹೊಸ ವಿದ್ಯುದ್ದೀಕೃತ ರೈಲು ಮಾರ್ಗಕ್ಕೆ ಶಕ್ತಿ ತುಂಬಿದ KPTCL

ಮಧುಗಿರಿಯ ಇತಿಹಾಸ ಪ್ರಸಿದ್ಧ ಶ್ರೀ ದಂಡಿನ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವ ಶಾಸಕ ಕೆ ಎನ್ ರಾಜಣ್ಣರವರಿಂದ ವಿಶೇಷ ಪೂಜೆ

ಮಧುಗಿರಿಯ ಇತಿಹಾಸ ಪ್ರಸಿದ್ಧ ಶ್ರೀ ದಂಡಿನ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವ ಶಾಸಕ ಕೆ ಎನ್ ರಾಜಣ್ಣರವರಿಂದ ವಿಶೇಷ ಪೂಜೆ

ಕರ್ನಾಟಕ ಎಂ.ಎಸ್.ಎಂ.ಇ. ನೀತಿ - ರಾಜ್ಯ ಮಟ್ಟದ ಪಾಲುದಾರರ ಪೂರ್ವಭಾವಿ ಸಮಾಲೋಚನಾ ಕಾರ್ಯಗಾರ-

ಕರ್ನಾಟಕ ಎಂ.ಎಸ್.ಎಂ.ಇ. ನೀತಿ - ರಾಜ್ಯ ಮಟ್ಟದ ಪಾಲುದಾರರ ಪೂರ್ವಭಾವಿ ಸಮಾಲೋಚನಾ ಕಾರ್ಯಗಾರ-

ನಮಗೆ ನಿಜವಾದ ಗುರು ನಾವೇ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ;ಇಲಾಖೆಯ ಸಿಬ್ಬಂದಿ ಕ್ರೀಡಾಕೂಟಕ್ಕೆ ಸಚಿವರಿಂದ ಚಾಲನೆ

ನಮಗೆ ನಿಜವಾದ ಗುರು ನಾವೇ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ;ಇಲಾಖೆಯ ಸಿಬ್ಬಂದಿ ಕ್ರೀಡಾಕೂಟಕ್ಕೆ ಸಚಿವರಿಂದ ಚಾಲನೆ

ಎಲ್ಲ ಧರ್ಮಗಳೂ ಪ್ರೀತಿಯನ್ನೇ ಬೋಧಿಸುತ್ತವೆ ರಾಜಕೀಯವಾಗಿ ಸೋಲುಗೆಲುವು ಕಂಡಿದ್ದರೂ, ಜನಸೇವೆಯನ್ನು ಮರೆಯಲಾರೆ- ಮುಖ್ಯಮಂತ್ರಿ ಸಿದ್ದರಾಮಯ್ಯ

ಎಲ್ಲ ಧರ್ಮಗಳೂ ಪ್ರೀತಿಯನ್ನೇ ಬೋಧಿಸುತ್ತವೆ ರಾಜಕೀಯವಾಗಿ ಸೋಲುಗೆಲುವು ಕಂಡಿದ್ದರೂ, ಜನಸೇವೆಯನ್ನು ಮರೆಯಲಾರೆ- ಮುಖ್ಯಮಂತ್ರಿ ಸಿದ್ದರಾಮಯ್ಯ

ವ್ಯಸನಮುಕ್ತ ಸಮಾಜಕ್ಕಾಗಿ ಸಹಾಯವಾಣಿ ಸ್ಥಾಪನೆ

ವ್ಯಸನಮುಕ್ತ ಸಮಾಜಕ್ಕಾಗಿ ಸಹಾಯವಾಣಿ ಸ್ಥಾಪನೆ

ಮುನ್ನೂರು ಕುಟುಂಬಗಳಿಗೆ ೫೦ ಲಕ್ಷ ಮೊತ್ತದ ಬೆಂಬಲ ವಿತರಣೆ.

ಮುನ್ನೂರು ಕುಟುಂಬಗಳಿಗೆ ೫೦ ಲಕ್ಷ ಮೊತ್ತದ ಬೆಂಬಲ ವಿತರಣೆ.

Read all News