ಯುಜಿಸಿ / ಐಸಿಎಆರ್ / ಎಐಸಿಟಿಇ ನೌಕರರ ತುಟ್ಟಿಭತ್ಯೆ ಶೇ.60ರಿಂದ ಶೇ.63ಕ್ಕೆ ಏರಿಕೆ, ಜುಲೈ 1ರಿಂದ ಜಾರಿ
ಬೆಂಗಳೂರು, ನವೆಂಬರ್ 12: ರಾಜ್ಯದ ವಿಶ್ವವಿದ್ಯಾಲಯಗಳು, ಸರ್ಕಾರಿ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳು ಹಾಗೂ ಸರ್ಕಾರಿ ಸ್ವಾಯತ್ತ ಸಂಸ್ಥೆಗಳಲ್ಲಿ 2016ರ ಪರಿಷ್ಕೃತ ಯುಜಿಸಿ, ಐಸಿಎಆರ್ ಮತ್ತು ಎಐಸಿಟಿಇ ವೇತನ ಶ್ರೇಣಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೂರ್ಣಕಾಲಿಕ ನೌಕರರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಇವರ ತುಟ್ಟಿಭತ್ಯೆಯನ್ನು ಶೇಕಡ 60 ರಿಂದ ಶೇಕಡ 63 ಕ್ಕೆ ಹೆಚ್ಚಿಸಿ ಆರ್ಥಿಕ ಇಲಾಖೆ ಆದೇಶ ಹೊರಡಿಸಿದೆ. ಈ ಹೆಚ್ಚಳವು 2026ರ ಜುಲೈ 1 ರಿಂದ ಜಾರಿಗೆ ಬರುವಂತೆ ಆದೇಶದಲ್ಲಿ ತಿಳಿಸಲಾಗಿದೆ.
ಈ ಆದೇಶದ ಪ್ರಕಾರ ಮೂಲ ವೇತನ ಎಂದರೆ ನೌಕರನು ಧಾರಣೆ ಮಾಡಿರುವ ಹುದ್ದೆಗೆ ಅನ್ವಯವಾಗುವ 2016ರ ಪರಿಷ್ಕೃತ ವೇತನ ಶ್ರೇಣಿಯಲ್ಲಿ ಪಡೆಯುತ್ತಿರುವ ಮೂಲ ವೇತನ ಮಾತ್ರವಾಗಿದ್ದು, ವೇತನ ಎಂದು ಪರಿಗಣಿಸಲ್ಪಡದ ಯಾವುದೇ ಉಪಲಬ್ಧಗಳನ್ನು ಮೂಲ ವೇತನಕ್ಕೆ ಸೇರಿಸುವಂತಿಲ್ಲ. ಮಂಜೂರಾಗಿರುವ ತುಟ್ಟಿಭತ್ಯೆಯನ್ನು ಮುಂದಿನ ಆದೇಶದವರೆಗೆ ನಗದಾಗಿ ಪಾವತಿ ಮಾಡಲಾಗುವುದು. ಈ ಆದೇಶವು ನಿವೃತ್ತ ನೌಕರರಿಗೆ ಅನ್ವಯಿಸುವುದಿಲ್ಲ.
ಈ ಆದೇಶದನ್ವಯ ಲಭ್ಯವಾಗುವ ತುಟ್ಟಿಭತ್ಯೆ ಬಾಕಿ ಮೊತ್ತವನ್ನು 2026ರ ನವೆಂಬರ್ ತಿಂಗಳ ವೇತನ ಬಟವಾಡೆಗೂ ಮೊದಲು ಪಾವತಿ ಮಾಡತಕ್ಕದ್ದಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ತುಟ್ಟಿಭತ್ಯೆಯ ಕಾರಣದಿಂದ ಸಂದಾಯ ಮಾಡಬೇಕಾಗಿರುವ ಐವತ್ತು ಪೈಸೆ ಹಾಗೂ ಅದಕ್ಕಿಂತ ಹೆಚ್ಚಿನ ಭಿನ್ನಾಂಕಗಳನ್ನು ಮುಂದಿನ ರೂಪಾಯಿಗೆ ಪೂರ್ಣಗೊಳಿಸಬೇಕು ಮತ್ತು ಐವತ್ತು ಪೈಸೆಗಿಂತ ಕಡಿಮೆ ಇರುವ ಭಿನ್ನಾಂಕಗಳನ್ನು ಕಡಗಣಿಸಬೇಕು. ತುಟ್ಟಿಭತ್ಯೆಯನ್ನು ಸಂಭಾವನೆಯ ವಿಶಿಷ್ಟ ಅಂಶವಾಗಿ ತೋರಿಸಬೇಕು ಮತ್ತು ಯಾವುದೇ ಉದ್ದೇಶಕ್ಕಾಗಿ ಇದನ್ನು ವೇತನ ಎಂದು ಪರಿಗಣಿಸಲಾಗುವುದಿಲ್ಲ ಎಂದು ಆದೇಶದಲ್ಲಿ ಹೇಳಲಾಗಿದೆ.






Comments
Leave a Comment