ಋತು ತಾರೆ: ಮಧ್ಯವಯಸ್ಸಿನ ಮಹಿಳೆಯರ ಆರೋಗ್ಯಕ್ಕೆ ಮಮತೆಯ ಬೆಳಕು
ಋತು ತಾರೆ: ಮಧ್ಯವಯಸ್ಸಿನ ಮಹಿಳೆಯರ ಆರೋಗ್ಯಕ್ಕೆ ಮಮತೆಯ ಬೆಳಕು
#RuthuTaare #MidLifeWomensHealth #MenopauseProgramme #KarnatakaHealth #DakshinaKannada #WomensHealth #HealthAndFamilyWelfare #Karnataka
ಬೆಂಗಳೂರು, ನ. 13- 35 ವರ್ಷ ಮೇಲ್ಪಟ್ಟ ಮಹಿಳೆಯರ ಆರೋಗ್ಯ ರಕ್ಷಣೆಗಾಗಿ ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತಾಲಯವು ಋತು ತಾರೆ - ಕರ್ನಾಟಕ ರಾಜ್ಯ ಮಧ್ಯವಯಸ್ಸಿನ ಮಹಿಳಾ ಆರೋಗ್ಯ ಮತ್ತು ಋತುಬಂಧ ಕಾರ್ಯಕ್ರಮದ ಅನುಷ್ಠಾನಕ್ಕೆ ಅಧಿಕೃತವಾಗಿ ಸೂಚನೆ ಹೊರಡಿಸಿದೆ. ನವೆಂಬರ್ 12ರಂದು ಹೊರಡಿಸಲಾದ ಕಚೇರಿ ಜ್ಞಾಪನದಲ್ಲಿ ರಾಜ್ಯ ತಾಂತ್ರಿಕ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಸಿದ್ಧಪಡಿಸಿ ಆಯುಕ್ತರು ಅನುಮೋದಿಸಿದ ರಾಜ್ಯ ಕ್ರಿಯಾ ಯೋಜನೆಯನ್ನು ಜಾರಿಗೊಳಿಸಲು ಎಲ್ಲಾ ಸಂಬಂಧಪಟ್ಟ ವಿಭಾಗಗಳಿಗೆ ನಿರ್ದೇಶನ ನೀಡಲಾಗಿದೆ.
ಈ ಕಾರ್ಯಕ್ರಮವು ಪೆರಿಮೆನೋಪಾಸ್, ಮೆನೋಪಾಸ್ ಮತ್ತು ಪೋಸ್ಟ್-ಮೆನೋಪಾಸ್ ಹಂತದಲ್ಲಿರುವ ಮಹಿಳೆಯರಿಗೆ ಸಮಗ್ರ ಆರೋಗ್ಯ ಸೇವೆ ಒದಗಿಸುವ ಗುರಿ ಹೊಂದಿದೆ. ಮೊದಲ ಹಂತದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂರು ತಿಂಗಳ ಪ್ರಾಯೋಗಿಕ ಕಾರ್ಯಕ್ರಮ ಆರಂಭವಾಗಲಿದ್ದು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಪಿಎಚ್‌ಸಿ, ಆಯುಷ್ಮಾನ್ ಆರೋಗ್ಯ ಮಂದಿರಗಳು, ತಾಲೂಕು ಆಸ್ಪತ್ರೆಗಳು, ಜಿಲ್ಲಾ ಆಸ್ಪತ್ರೆ ಮತ್ತು ನಿಗದಿತ ವೈದ್ಯಕೀಯ ಕಾಲೇಜುಗಳನ್ನು ಗುರುತಿಸಿ, ಅರ್ಹ ಮಹಿಳೆಯರ ಪಟ್ಟಿ ಸಹಿತ ಜಿಲ್ಲಾ ಮಟ್ಟದ ಅನುಷ್ಠಾನ ಯೋಜನೆ ಸಿದ್ಧಪಡಿಸಬೇಕಿದೆ. ಆಶಾ ಕಾರ್ಯಕರ್ತೆಯರು, ಆಶಾ ಮೆಂಟರ್‌ಗಳು, ಸಿಎಚ್‌ಒಗಳು, ವೈದ್ಯಾಧಿಕಾರಿಗಳು ಮತ್ತು ಇತರ ಮುಂಚೂಣಿ ಆರೋಗ್ಯ ಸಿಬ್ಬಂದಿಯನ್ನು ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳಲು ಸೂಚಿಸಲಾಗಿದೆ.
ಕಾರ್ಯಕ್ರಮದಡಿ ಪ್ರತಿ ಬುಧವಾರ ಪಿಎಚ್‌ಸಿ, ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಹಾಗೂ ಪ್ರತಿ ಶನಿವಾರ ವೈದ್ಯಕೀಯ ಕಾಲೇಜುಗಳಲ್ಲಿ ವಿಶೇಷ ಕ್ಲಿನಿಕ್ ಸೇವೆಗಳು ನಡೆಯಲಿವೆ. ರೆಫರಲ್, ಕೌಂಟರ್-ರೆಫರಲ್ ಮತ್ತು ಫಾಲೋ-ಅಪ್ ವ್ಯವಸ್ಥೆಯನ್ನು ಸಹ ಸ್ಥಾಪಿಸಲಾಗುವುದು. ತಾಯಿ ಆರೋಗ್ಯ ವಿಭಾಗವು ಒಟ್ಟಾರೆ ತಾಂತ್ರಿಕ ಅನುಷ್ಠಾನವನ್ನು ಸಂಯೋಜಿಸಿ ಸಮುದಾಯ ಮಟ್ಟದ ತಪಾಸಣಾ ಚೆಕ್‌ಲಿಸ್ಟ್ ಮತ್ತು ಮಿಡ್-ಲೈಫ್ ಹೆಲ್ತ್ ಕಾರ್ಡ್ ಅಂತಿಮಗೊಳಿಸಲಿದ್ದರೆ, ಎನ್‌ಸಿಡಿ ವಿಭಾಗವು ರಕ್ತದೊತ್ತಡ, ಮಧುಮೇಹ, ಸ್ಥೂಲಕಾಯ ಮತ್ತು ಇತರ ಹೃದಯ-ಚಯಾಪಚಯ ಅಪಾಯಗಳ ತಪಾಸಣೆ ಹಾಗೂ ಸ್ತನ ಮತ್ತು ಗರ್ಭಕಂಠದ ಕ್ಯಾನ್ಸರ್ ತಪಾಸಣೆಯನ್ನು ಸಂಯೋಜಿಸಲಿದೆ. ಮಾನಸಿಕ ಆರೋಗ್ಯ ವಿಭಾಗವು ಮಹಿಳೆಯರ ಮಾನಸಿಕ ಸಮಸ್ಯೆಗಳನ್ನು ಗುರುತಿಸಿ ಹಸಿರು-ಹಳದಿ-ಕೆಂಪು ಅಪಾಯ ವರ್ಗೀಕರಣದ ಮೂಲಕ ಗೃಹ ಆರೋಗ್ಯ ಸೇವೆಗಳೊಂದಿಗೆ ರೆಫರಲ್ ವ್ಯವಸ್ಥೆಯನ್ನು ಜಾರಿಗೊಳಿಸಲಿದೆ. ಪೌಷ್ಟಿಕಾಂಶ ವಿಭಾಗವು ಸಮತೋಲಿತ ಆಹಾರ, ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಸೇವನೆ, ಮೂಳೆ ಆರೋಗ್ಯ, ಆಸ್ಟಿಯೊಪೊರೋಸಿಸ್ ತಡೆ ಮತ್ತು ಆರೋಗ್ಯಕರ ತೂಕ ನಿರ್ವಹಣೆಗೆ ಕೌನ್ಸೆಲಿಂಗ್ ನೀಡಲಿದ್ದು, ಐಇಸಿ ವಿಭಾಗವು ಕನ್ನಡದಲ್ಲಿ ಜಾಗೃತಿ ಸಾಮಗ್ರಿಗಳನ್ನು ಸಿದ್ಧಪಡಿಸಲಿದೆ.
ಕಾರ್ಯಕ್ರಮದ ಕಾರ್ಯಾಚರಣಾ ಮಾರ್ಗಸೂಚಿಗಳು, ತಪಾಸಣಾ ಪ್ರಶ್ನಾವಳಿ, ಕ್ಲಿನಿಕಲ್ ಮೌಲ್ಯಮಾಪನ ನಮೂನೆಗಳು, ರೆಫರಲ್ ಪ್ರೋಟೋಕಾಲ್‌ಗಳು ಮತ್ತು ತರಬೇತಿ ಮಾಡ್ಯೂಲ್‌ಗಳನ್ನು ರಾಜ್ಯ ತಾಂತ್ರಿಕ ಸಮಿತಿಯೊಂದಿಗೆ ಸಮಾಲೋಚಿಸಿ ಅಂತಿಮಗೊಳಿಸಲಾಗುವುದು. ಆಶಾ, ಸಿಎಚ್‌ಒ, ವೈದ್ಯಾಧಿಕಾರಿಗಳು ಮತ್ತು ನರ್ಸಿಂಗ್ ಸಿಬ್ಬಂದಿಗೆ ವೈದ್ಯಕೀಯ ಕಾಲೇಜುಗಳ ಸಹಯೋಗದಲ್ಲಿ ತರಬೇತಿ ನೀಡಲಾಗುವುದು. ತಪಾಸಣಾ ವ್ಯಾಪ್ತಿ, ರೆಫರಲ್ ಪೂರ್ಣಗೊಳಿಸುವಿಕೆ, ಚಿಕಿತ್ಸೆ ಮತ್ತು ಫಾಲೋ-ಅಪ್‌ಗಾಗಿ ಪ್ರಮಾಣಿತ ವರದಿ ವ್ಯವಸ್ಥೆ ರೂಪಿಸಿ, ಹಂತ ಹಂತವಾಗಿ ಡಿಜಿಟಲ್ ಋತು ತಾರೆ ರಿಜಿಸ್ಟ್ರಿ ಮತ್ತು ರಾಜ್ಯ ಮಟ್ಟದ ಅನಾಮಧೇಯ ಡ್ಯಾಶ್‌ಬೋರ್ಡ್ ಅಭಿವೃದ್ಧಿಪಡಿಸುವ ಸಾಧ್ಯತೆಯನ್ನು ಪರಿಶೀಲಿಸಲಾಗುವುದು.
ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಅಧಿಕಾರಿಗಳು ಪ್ರತಿ ತಿಂಗಳು ಪ್ರಗತಿ ವರದಿಯನ್ನು ರಾಜ್ಯ ಕಾರ್ಯಕ್ರಮ ವಿಭಾಗದ ಮೂಲಕ ಆಯುಕ್ತಾಲಯಕ್ಕೆ ಸಲ್ಲಿಸಬೇಕಿದೆ. ಮೂರು ತಿಂಗಳ ನಂತರ ಪ್ರಾಯೋಗಿಕ ಕಾರ್ಯಕ್ರಮವನ್ನು ಮೌಲ್ಯಮಾಪನ ಮಾಡಿ, ರಾಜ್ಯಾದ್ಯಂತ ಹಂತ ಹಂತವಾಗಿ ವಿಸ್ತರಿಸುವ ಪ್ರಸ್ತಾವನೆಯನ್ನು ಸಲ್ಲಿಸಲು ಸೂಚಿಸಲಾಗಿದೆ. ಸದ್ಯಕ್ಕೆ ಅಸ್ತಿತ್ವದಲ್ಲಿರುವ ಸಾರ್ವಜನಿಕ ಆರೋಗ್ಯ ಮೂಲಸೌಕರ್ಯ ಮತ್ತು ಮಾನವ ಸಂಪನ್ಮೂಲದ ಮೂಲಕವೇ ಕಾರ್ಯಕ್ರಮ ಜಾರಿಯಾಗಲಿದ್ದು, ಹೆಚ್ಚುವರಿ ವೆಚ್ಚಕ್ಕೆ ಪ್ರತ್ಯೇಕ ಅನುಮತಿ ಪಡೆಯಬೇಕಾಗುತ್ತದೆ.
#RuthuTaare #MidLifeWomensHealth #MenopauseProgramme #KarnatakaHealth #DakshinaKannada #WomensHealth #HealthAndFamilyWelfare #Karnataka






Comments
Leave a Comment