ಪೊಲೀಸ್ ಇಲಾಖೆಯಲ್ಲಿ ಮದ್ಯಪಾನ ವ್ಯಸನ ತಡೆಗೆ ಸರ್ಕಾರದ ಮೊದಲ ಅಧಿಕೃತ ಕ್ರಮ — ಸಿಬ್ಬಂದಿ ಕಲ್ಯಾಣದತ್ತ ಮಾನವೀಯ ಹೆಜ್ಜೆ.
ಬೆಂಗಳೂರು, ಜೂ. 17 — ಕರ್ತವ್ಯದಲ್ಲಿ ನಿಷ್ಠೆಯಿಂದ ಸೇವೆ ಸಲ್ಲಿಸುವ ಪೊಲೀಸ್ ಸಿಬ್ಬಂದಿಯ ಜೀವನದಲ್ಲಿ ಮದ್ಯಪಾನ ವ್ಯಸನದ ಕತ್ತಲೆ ನೆರಳು ಬೀಳುತ್ತಿರುವುದು ಇಲಾಖೆಗೆ ಎಚ್ಚರಿಕೆಯ ಗಂಟೆಯಾಗಿದೆ, ಒಂದು ದುಃಖದ ಘಟನೆಯ ನಂತರ, ಕರ್ನಾಟಕ ಸರ್ಕಾರವು ಮೊದಲ ಬಾರಿಗೆ ಪೊಲೀಸ್ ಇಲಾಖೆಯ ಮಟ್ಟದಲ್ಲಿ ವ್ಯಸನಮುಕ್ತಿ ಚಿಕಿತ್ಸೆಗೆ ಅಧಿಕೃತ ಆದೇಶ ಹೊರಡಿಸುವ ಮೂಲಕ ಮಾನವೀಯ ಮತ್ತು ಪ್ರಗತಿಪರ ಹೆಜ್ಜೆ ಇಟ್ಟಿದೆ.
ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಇಲಾಖೆಯು ಮದ್ಯಪಾನ ವ್ಯಸನ ತಡೆ ಹಾಗೂ ವ್ಯಸನಮುಕ್ತಿ ಚಿಕಿತ್ಸೆಗೆ ಸಂಬಂಧಿಸಿದಂತೆ ಮಹತ್ವದ ಆದೇಶ ಹೊರಡಿಸಿರುವುದು ಗಮನಾರ್ಹ ಬೆಳವಣಿಗೆ. ಇತ್ತೀಚೆಗೆ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಯೊಬ್ಬರು ಮದ್ಯಪಾನದ ದುಷ್ಪರಿಣಾಮದಿಂದ ಮೃತಪಟ್ಟಿರುವುದು ಇಲಾಖೆಗೆ ಎಚ್ಚರಿಕೆಯ ಗಂಟೆ ಹೊಡೆದಂತಾಗಿದೆ. ಈ ಹಿನ್ನೆಲೆಯಲ್ಲಿ, ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರು ಎಲ್ಲಾ ಕಮಾಂಡೆಂಟ್‌ರಿಗೆ ಸ್ಪಷ್ಟ ಸೂಚನೆಗಳನ್ನು ನೀಡಿದ್ದಾರೆ.
ಈ ಆದೇಶದ ಪ್ರಕಾರ, ಪಡೆಗಳಲ್ಲಿ ಮದ್ಯಪಾನ ಅಥವಾ ಇತರೆ ವ್ಯಸನಗಳಿಗೆ ಒಳಗಾಗಿರುವ ಸಿಬ್ಬಂದಿಯನ್ನು ಗುರುತಿಸಿ, ಅವರಿಗೆ ಸಮಾಲೋಚನೆ, ವೈದ್ಯಕೀಯ ನೆರವು ಹಾಗೂ ವ್ಯಸನಮುಕ್ತಿ ಚಿಕಿತ್ಸೆಯನ್ನು ಒದಗಿಸಬೇಕು. ಜೊತೆಗೆ, ಸಿಬ್ಬಂದಿ ಮತ್ತು ಅವರ ಕುಟುಂಬ ಸದಸ್ಯರಿಗೆ ವ್ಯಸನದ ದುಷ್ಪರಿಣಾಮಗಳ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಚಿಕಿತ್ಸೆ ಪಡೆದ ಸಿಬ್ಬಂದಿಯ ನಿರಂತರ ಮೇಲ್ವಿಚಾರಣೆ ಕೂಡ ಕಡ್ಡಾಯವಾಗಿದೆ.
ಇದು ಕರ್ನಾಟಕದಲ್ಲಿ ಪೊಲೀಸ್ ಇಲಾಖೆಯ ಮಟ್ಟದಲ್ಲಿ ಮೊದಲ ಬಾರಿಗೆ ವ್ಯಸನಮುಕ್ತಿ ಚಿಕಿತ್ಸೆಗೆ ಸಂಬಂಧಿಸಿದಂತೆ ಅಧಿಕೃತ ಆದೇಶ ಹೊರಬಂದಿರುವುದು ಎಂದು ಹೇಳಬಹುದು. ಇದರಿಂದ ಪೊಲೀಸ್ ಸಿಬ್ಬಂದಿಯ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಬಗ್ಗೆ ಸರ್ಕಾರ ಗಂಭೀರವಾಗಿ ಗಮನ ಹರಿಸುತ್ತಿದೆ ಎಂಬುದು ಸ್ಪಷ್ಟವಾಗಿದೆ.
ಈ ಕ್ರಮವನ್ನು ಅಭಿನಂದಿಸಲೇಬೇಕು, ಏಕೆಂದರೆ ಪೊಲೀಸ್ ಸಿಬ್ಬಂದಿ ದಿನನಿತ್ಯ ಒತ್ತಡ, ಅಪಾಯ ಮತ್ತು ಮಾನಸಿಕ ಒತ್ತಡದ ನಡುವೆ ಕೆಲಸ ಮಾಡುತ್ತಾರೆ. ಇಂತಹ ಸಂದರ್ಭಗಳಲ್ಲಿ ವ್ಯಸನದ ಬಲೆಗೆ ಬೀಳುವ ಸಾಧ್ಯತೆ ಹೆಚ್ಚಾಗುತ್ತದೆ. ಇಲಾಖೆಯೇ ಮುಂಚೂಣಿಯಲ್ಲಿ ನಿಂತು ವ್ಯಸನಮುಕ್ತಿ ಚಿಕಿತ್ಸೆಗೆ ವ್ಯವಸ್ಥೆ ಮಾಡುವುದು, ಸಿಬ್ಬಂದಿಯ ಕಲ್ಯಾಣಕ್ಕೆ ಮಹತ್ವದ ಹೆಜ್ಜೆಯಾಗಿದೆ.
ಈ ಆದೇಶ ಜಾರಿಗೆ ಬಂದ ನಂತರ, ಕಮಾಂಡೆಂಟ್‌ರು ತಮ್ಮ ಪಡೆಗಳಲ್ಲಿ ತಕ್ಷಣ ಕ್ರಮ ಕೈಗೊಂಡು, ನೋಂದಣಿ ವರದಿ ಸಲ್ಲಿಸಬೇಕಾಗಿದೆ. ಕೇಂದ್ರ ಕಛೇರಿಯು ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದೆ.
ಈ ಕ್ರಮವು ಕೇವಲ ವ್ಯಸನ ತಡೆಗಟ್ಟುವ ಪ್ರಯತ್ನವಲ್ಲ, ಅದು ಪೊಲೀಸ್ ಇಲಾಖೆಯ ಒಳಗಿನ ಮಾನವೀಯತೆ ಮತ್ತು ಹೊಣೆಗಾರಿಕೆಯ ಪುನರುತ್ಥಾನವಾಗಿದೆ. ಕರ್ತವ್ಯಕ್ಕೆ ಜೀವವನ್ನೇ ಅರ್ಪಿಸುವ ಸಿಬ್ಬಂದಿಯ ಜೀವನದ ಗುಣಮಟ್ಟವನ್ನು ಸುಧಾರಿಸಲು ಸರ್ಕಾರ ಕೈಗೊಂಡಿರುವ ಈ ನಿರ್ಧಾರವು ಕರ್ನಾಟಕದ ಪೊಲೀಸ್ ವ್ಯವಸ್ಥೆಯ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ತೆರೆಯಲಿದೆ.




Comments
Leave a Comment