“ಗೌಪ್ಯತೆಯ ಹಕ್ಕು ಕೇವಲ ಕಾನೂನು ನಿಯಮವಲ್ಲ — ಮಾನವೀಯ ಗೌರವದ ಮೂಲಸ್ತಂಭ: ಕರ್ನಾಟಕ ಪೊಲೀಸ್ ಮಹಾನಿರ್ದೇಶಕರ ಆದೇಶ
ಡಿಜಿಟಲ್ ಯುಗದಲ್ಲಿ ಗೌಪ್ಯತೆಯ ಹಕ್ಕುಗಳನ್ನು ಕಾಪಾಡುವುದು ಅತ್ಯಂತ ಸವಾಲಿನ ಕೆಲಸವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ, ಮೆಸೇಜಿಂಗ್ ಆ್ಯಪ್‌ಗಳಲ್ಲಿ, ಮತ್ತು ತಂತ್ರಜ್ಞಾನ ವೇದಿಕೆಗಳಲ್ಲಿ ಪ್ರತಿದಿನ ಹರಿದುಬರುತ್ತಿರುವ ಖಾಸಗಿ ಚಿತ್ರಗಳು ಮತ್ತು ವೀಡಿಯೊಗಳು, ಒಪ್ಪಿಗೆಯಿಲ್ಲದೆ ಪ್ರಸಾರವಾದಾಗ ಅದು ಕೇವಲ ವೈಯಕ್ತಿಕ ಅವಮಾನವಲ್ಲ — ಕಾನೂನುಬದ್ಧ ಅಪರಾಧ. ಈ ಹಿನ್ನೆಲೆಯಲ್ಲಿ, ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಯಿಂದ ಹೊರಬಂದಿರುವ ಹೊಸ ಸ್ಥಾಯಿ ಆದೇಶವು, “ಒಪ್ಪಿಗೆ ಚಿತ್ರೀಕರಣಕ್ಕೆ ಇದ್ದರೂ ಪ್ರಸಾರಕ್ಕೆ ಇಲ್ಲದಿದ್ದರೆ ಅದು ಅಪರಾಧ” ಎಂಬ ಸ್ಪಷ್ಟ ಸಂದೇಶವನ್ನು ನೀಡಿದೆ.
ಬೆಂಗಳೂರು, ಜೂ. 16 -
ಒಬ್ಬ ವ್ಯಕ್ತಿಯ ಅನುಮತಿಯಿಲ್ಲದೆ ಅವರ ಖಾಸಗಿ ಅಥವಾ ಆಪ್ತ ಚಿತ್ರಗಳು ಮತ್ತು ವೀಡಿಯೊಗಳನ್ನು ಪ್ರಕಟಿಸುವುದು ಅಥವಾ ಪ್ರಸಾರ ಮಾಡುವ ಪ್ರಕರಣಗಳಲ್ಲಿ ಪೊಲೀಸರು ಅನುಸರಿಸಬೇಕಾದ ಕ್ರಮಗಳ ಕುರಿತು ಸ್ಪಷ್ಟ ಮಾರ್ಗಸೂಚಿಗಳನ್ನು ನೀಡಲಾಗಿದೆ.
ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಯಿಂದ ಹೊಸ ಸ್ಥಾಯಿ(standing Order) ಆದೇಶ ಹೊರಡಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ದೂರುಗಳನ್ನು ದಾಖಲಿಸುವಲ್ಲಿ ವಿಳಂಬ ಅಥವಾ ನಿರಾಕರಣೆ ನಡೆದಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ, ಈ ಆದೇಶದಲ್ಲಿ “ಚಿತ್ರೀಕರಣಕ್ಕೆ ಒಪ್ಪಿಗೆ ನೀಡಿದರೆ ಪ್ರಸಾರಕ್ಕೂ ಒಪ್ಪಿಗೆ ನೀಡಿದಂತೆ ಅಲ್ಲ” ಎಂಬ ಕಾನೂನುಸ್ಥಿತಿಯನ್ನು ಸ್ಪಷ್ಟಪಡಿಸಲಾಗಿದೆ. ಅಂದರೆ, ಒಬ್ಬ ವ್ಯಕ್ತಿ ಚಿತ್ರ ಸೆರೆಹಿಡಿಯಲು ಒಪ್ಪಿಗೆ ನೀಡಿದ್ದರೂ, ಅದನ್ನು ಹಂಚಲು ಅಥವಾ ಪ್ರಸಾರ ಮಾಡಲು ಒಪ್ಪಿಗೆ ನೀಡದಿದ್ದರೆ, ಅದು ಸಂಜ್ಞೆಯ ಅಪರಾಧವಾಗುತ್ತದೆ.
ಆದೇಶದಲ್ಲಿ ಭಾರತೀಯ ನ್ಯಾಯ ಸಂಹಿತೆ 2023ರ ಸೆಕ್ಷನ್ 77 (Voyeurism), ಗೌಪ್ಯತೆ ಉಲ್ಲಂಘನೆಗೆ ಸಂಬಂಧಿಸಿದ ವಿಧಿಗಳು, ಮಾಹಿತಿ ತಂತ್ರಜ್ಞಾನ ಕಾಯ್ದೆ 2000ರ ಸೆಕ್ಷನ್ 66(ಇ), 67 ಮತ್ತು 67(ಎ)ಗಳನ್ನು ಅಳವಡಿಸಬೇಕೆಂದು ಸೂಚಿಸಲಾಗಿದೆ. ಮಹಿಳಾ ಸಂತ್ರಸ್ತರಿದ್ದಲ್ಲಿ Voyeurism ವಿಧಿಯ ಜೊತೆಗೆ ಐಟಿ ಕಾಯ್ದೆಯ ವಿಧಿಗಳನ್ನು ಸೇರಿಸಿ ಎಫ್‌ಐಆರ್ ಕಡ್ಡಾಯವಾಗಿ ನೋಂದಣಿ ಮಾಡಬೇಕೆಂದು ನಿರ್ದೇಶಿಸಲಾಗಿದೆ.
“ಬ್ಲಾಕ್‌ಮೇಲ್ ವೀಡಿಯೊಗಳು”, “ಸೆಕ್ಸ್ಟೋರ್ಷನ್”, “ರಿವೆಂಜ್ ಪೋರ್ನೋಗ್ರಫಿ” ಮುಂತಾದ ಪ್ರಕರಣಗಳಲ್ಲಿ ಕೂಡ ತಕ್ಷಣ ಎಫ್‌ಐಆರ್ ದಾಖಲಿಸಬೇಕು. ಪೀಡಿತರು ಮೊದಲು ಚಿತ್ರೀಕರಣಕ್ಕೆ ಒಪ್ಪಿಗೆ ನೀಡಿದ್ದರು ಎಂಬ ಕಾರಣಕ್ಕೆ ದೂರು ನಿರಾಕರಿಸಬಾರದು. ಅಪರಾಧ ಸ್ಥಳೀಯ ವ್ಯಾಪ್ತಿಯ ಹೊರಗೆ ನಡೆದಿದ್ದರೆ ಜೀರೋ ಎಫ್‌ಐಆರ್ ದಾಖಲಿಸಿ ಸಂಬಂಧಿತ ಠಾಣೆಗೆ ವರ್ಗಾಯಿಸಬೇಕು.
ಅಪರಾಧಕರ ವಿಷಯವನ್ನು ತಕ್ಷಣ ತೆಗೆದುಹಾಕಲು ಐಟಿ ನಿಯಮಗಳ ಪ್ರಕಾರ ಸಂಬಂಧಿತ ಸಂಸ್ಥೆಗಳಿಗೆ ನೋಟಿಸ್ ನೀಡಬೇಕು ಮತ್ತು ಎಲ್ಲಾ ಡಿಜಿಟಲ್ ಸಾಕ್ಷ್ಯಗಳನ್ನು ಕಾನೂನುಬದ್ಧವಾಗಿ ಸಂರಕ್ಷಿಸಬೇಕು. ಪೀಡಿತರ ಗುರುತು ಗೌಪ್ಯವಾಗಿರಬೇಕು, ಮಹಿಳಾ ಸಂತ್ರಸ್ತೆಯ ದೂರುಗಳನ್ನು ಮಹಿಳಾ ಅಧಿಕಾರಿಗಳು ದಾಖಲಿಸುವಂತೆ ಸೂಚಿಸಲಾಗಿದೆ.
ತನಿಖಾಧಿಕಾರಿಗಳು ಸೈಬರ್ ಕ್ರೈಂ ಘಟಕಗಳೊಂದಿಗೆ ಸಮನ್ವಯತೆ ಸಾಧಿಸಿ ತಾಂತ್ರಿಕ ತನಿಖೆ ಹಾಗೂ ಫೋರೆನ್ಸಿಕ್ ವಿಶ್ಲೇಷಣೆ ನಡೆಸಬೇಕು. ಎಫ್‌ಐಆರ್ ನೋಂದಣಿ ಮಾಡದಿರುವುದು ಅಥವಾ “ಪೂರ್ವಾನುಮತಿ” ಎಂಬ ತಪ್ಪು ಕಾರಣದಿಂದ ವಿಳಂಬ ಮಾಡಿದರೆ ಸಂಬಂಧಿತ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ.
ಈ ಆದೇಶವು ರಾಜ್ಯದಾದ್ಯಂತ ಏಕರೂಪವಾಗಿ ಅನುಷ್ಠಾನಗೊಳ್ಳಬೇಕೆಂದು ಸೂಚಿಸಲಾಗಿದ್ದು, ಪ್ರತಿಯೊಂದು ಪೊಲೀಸ್ ಠಾಣೆಗೆ ತಲುಪುವಂತೆ ನಿರ್ದೇಶಿಸಲಾಗಿದೆ.


Comments
Leave a Comment