PRABHAVAA.COM

ಹಿರಿಯೂರು ಗೊಂದಲ ಇಲ್ಲ; ಒಮ್ಮತ ಅಭ್ಯರ್ಥಿಯನ್ನೇ ಕಣಕ್ಕಿಳಿಸುತ್ತೇವೆ ಎಂದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ

Udupi:

Font size:

ಶೀಘ್ರವೇ ಪರಸ್ಪರ ಚರ್ಚಿಸಿ ತೀರ್ಮಾನಿಸುತ್ತೇವೆ

ಗ್ಯಾರಂಟಿ ನೆಪದಲ್ಲಿ ಅನುದಾನಕ್ಕೆ ಕತ್ತರಿ; ಕಾಂಗ್ರೆಸ್ ಶಾಸಕರ ಅಸಮಾಧಾನ

ಕಾರ್ಮಿಕರ ₹40,000 ಕೋಟಿ ಅನ್ಯ ಉದ್ದೇಶಕ್ಕೆ ಬಳಕೆ; ಕೇಂದ್ರ ಸಚಿವರ ಗಂಭೀರ ಆರೋಪ

ದೇಗುಲಗಳ ಹುಂಡಿ ಹಣಕ್ಕೂ 'ಕೈ ಹಾಕುತ್ತಿದೆ' ಕಾಂಗ್ರೆಸ್ ಸರ್ಕಾರ

ಕೊಲ್ಲೂರು (ಉಡುಪಿ), 16 ನವೆಂಬರ್ 2026

ಹಿರಿಯೂರು ವಿಧಾನಸಭೆ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಮಾಡುವ ವಿಚಾರದಲ್ಲಿ ರಾಜ್ಯದ ಎನ್ಡಿಎ ಮೈತ್ರಿಕೂಟದಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಕೇಂದ್ರ ಸಚಿವ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಅವರು ಸ್ಪಷ್ಟಪಡಿಸಿದರು.

ಶ್ರೀ ಕ್ಷೇತ್ರ ಕೊಲ್ಲೂರಿನಲ್ಲಿ ತಾಯಿ ಮೂಕಾಂಬಿಕೆ ದರ್ಶನ ಪಡೆದ ನಂತರ ಕೇಂದ್ರ ಸಚಿವರು ಮಾಧ್ಯಮಗಳ ಜತೆ ಮಾತನಾಡಿದರು.

ರಾಜ್ಯ ಸರ್ಕಾರದ ಭ್ರಷ್ಟಾಚಾರ ಹಾಗೂ ಜನವಿರೋಧಿ ನೀತಿಗಳ ವಿರುದ್ಧ ಹೋರಾಡುವ ವಿಚಾರದಲ್ಲಿ ನಮ್ಮ ಮೈತ್ರಿಕೂಟದಲ್ಲಿ ಯಾವುದೇ ಬಗೆಯ ಭಿನ್ನ ನಿಲುವು ಇಲ್ಲ. ಅದೇ ರೀತಿ ಹಿರಿಯೂರು ಕ್ಷೇತ್ರದಲ್ಲಿಯೂ ಭ್ರಷ್ಟ ಕಾಂಗ್ರೆಸ ಪಕ್ಷವನ್ನು ನಾವು ಒಗ್ಗಟ್ಟಾಗಿಯೇ ಎದುರಿಸುತ್ತೇವೆ ಎಂದರು.

"ಜೆಡಿಎಸ್ ಹಾಗೂ ಬಿಜೆಪಿ ನಡುವೆ ಅತ್ಯುತ್ತಮ ಸಮನ್ವಯವಿದೆ. ಕಾಂಗ್ರೆಸ್ ನಾಯಕರು ನಮ್ಮ ಮೈತ್ರಿಯಲ್ಲಿ ಬಿರುಕು ಮೂಡಿಸುವ ಹಗಲುಗನಸು ಕಾಣುತ್ತಿದ್ದಾರೆ. ಆದರೆ, ರಾಜ್ಯದ ಹಿತದೃಷ್ಟಿಯಿಂದ ನಾವು ಒಟ್ಟಾಗಿ, ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುತ್ತಿದ್ದೇವೆ. ರಾಜ್ಯ ಸರ್ಕಾರದ ವೈಫಲ್ಯಗಳನ್ನು ಮತ್ತು ಹಗರಣಗಳನ್ನು ಜನರೆದುರು ಬಯಲು ಮಾಡಲು ಮುಂದಿನ ದಿನಗಳಲ್ಲಿ ಎರಡೂ ಪಕ್ಷಗಳ ನಾಯಕರು ಸೇರಿ ಜಂಟಿಯಾಗಿ ಇನ್ನಷ್ಟು ತೀವ್ರ ಸ್ವರೂಪದ ಹೋರಾಟಗಳನ್ನು ರೂಪಿಸುತ್ತೇವೆ" ಎಂದು ಅವರು ಅವರು ತಿಳಿಸಿದರು.

ಹಿರಿಯೂರು ಕ್ಷೇತ್ರಕ್ಕೆ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡುವ ವಿಚಾರದಲ್ಲಿ ಪರಸ್ಪರ ಚರ್ಚೆ ನಡೆಸಿ ತೀರ್ಮಾನಕ್ಕೆ ಬರುತ್ತೇವೆ. ಒಳ್ಳೆಯ ಅಭ್ಯರ್ಥಿಯನ್ನು ನಾವು ಕಣಕ್ಕೆ ಇಳಿಸುತ್ತೇವೆ ಎಂದು ಸಚಿವರು ಪ್ರಶ್ನೆ ಒಂದಕ್ಕೆ ಉತ್ತರ ನೀಡಿದರು.

ರಾಜ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಯನ್ನು ಬಿಟ್ಟು ವ್ಯಾಪಕ ಭ್ರಷ್ಟಾಚಾರದಲ್ಲಿ ನಿರತವಾಗಿದೆ. ಪ್ರತಿದಿನವೂ ಸರ್ಕಾರದ ಅಕ್ರಮಗಳ ಬಗ್ಗೆ ವರದಿಗಳು ಬರುತ್ತವೆ. ಜನರ ನಿರೀಕ್ಷೆಯನ್ನು ಸುಳ್ಳು ಮಾಡಿರುವುದರಿಂದ ಈ ಸರ್ಕಾರದ ವಿರುದ್ಧ ಈಗಾಗಲೇ ಜನ ವಿರೋಧಿ ಅಲೆ, ದೊಡ್ಡ ಮಟ್ಟದಲ್ಲಿ ಎದ್ದಿದೆ ಎಂದು ಅವರು ಹೇಳಿದರು.

ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯ, ಸ್ಟಿಂಗ್ ಆಪರೇಷನ್ ವಿಚಾರದಲ್ಲಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಸಚಿವ ಕುಮಾರಸ್ವಾಮಿ ಅವರು; ಬರೀ ಗ್ಯಾರಂಟಿಗಳನ್ನು ಕೊಟ್ಟು ಅಭಿವೃದ್ಧಿ ಮಾಡಿದ್ದೇವೆ ಎಂದು ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ರಾಜ್ಯದ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಹಾಗೂ ಕೇಂದ್ರದ ಸರ್ಕಾರದ ಮೇಲೆ ವಿನಾಕಾರಣ ಗೂಬೆ ಕೂರಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗ್ಯಾರಂಟಿಗಳಿಂದ ಆರ್ಥಿಕ ದಿವಾಳಿತನ:

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಕಳೆದ ಮೂರೂವರೆ ವರ್ಷಗಳಲ್ಲಿ ರಾಜ್ಯದ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ. 'ಐದು ಗ್ಯಾರಂಟಿ'ಗಳನ್ನು ನೀಡುತ್ತಿರುವುದಾಗಿ ಹೇಳಿಕೊಳ್ಳುವ ಸರ್ಕಾರಕ್ಕೆ ಹಣ ಎಲ್ಲಿಂದ ಬರುತ್ತಿದೆ? ಮುಖ್ಯಮಂತ್ರಿ ಅಥವಾ ಮಂತ್ರಿಗಳು ತಮ್ಮ ಜೇಬಿನಿಂದ ಕೊಡುತ್ತಿದ್ದಾರೆಯೇ? ಎಂದು ಕೇಂದ್ರ ಸಚಿವರು ಖಾರವಾಗಿ ಪ್ರಶ್ನಿಸಿದರು.

ಮುದ್ರಾಂಕ ಶುಲ್ಕ, ಮೋಟಾರು ವಾಹನ ತೆರಿಗೆ ಹಾಗೂ ಅಬಕಾರಿ ಸುಂಕವನ್ನು ಮನಬಂದಂತೆ ಹೆಚ್ಚಿಸಿ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಲಾಗುತ್ತಿದೆ. ಮಂಗಳೂರಿನಲ್ಲಿ ಸಂಪುಟ ಸಭೆ ನಡೆಸಿ ₹32,000 ಕೋಟಿ ಯೋಜನೆಗಳನ್ನು ಘೋಷಣೆ ಮಾಡಿದ್ದರೂ, ಬೊಕ್ಕಸದಲ್ಲಿ ಹಣವಿಲ್ಲದಿರುವಾಗ ಇದೆಲ್ಲ ಕೇವಲ ಕಣ್ಣೊರೆಸುವ ತಂತ್ರವಲ್ಲದೆ ಇನ್ನೇನು? ಅಷ್ಟು ಹಣವನ್ನು ಎಲ್ಲಿಂದ ತರುತ್ತಾರೆ? ಅವರು ಪ್ರಶ್ನಿಸಿದರು.

ಬರಗಾಲದ ನಿರ್ವಹಣೆ ಹಾಗೂ ರೈತರಿಗೆ ಪರಿಹಾರ ಒದಗಿಸುವ ವಿಚಾರದಲ್ಲಿ ಕೇಂದ್ರ ಸರ್ಕಾರದ ಬಗ್ಗೆ ರಾಜ್ಯ ಸರ್ಕಾರ ದ್ವಂದ್ವ ನಿಲುವು ಹೊಂದಿದೆ. ಕೇಂದ್ರದ ಮುಂದೆ ಎನ್ ಡಿ ಆರ್ ಎಫ್ (NDRF) ನಿಯಮಗಳ ಅಡಿಯಲ್ಲಿ ಪರಿಹಾರದ ಬೇಡಿಕೆಯನ್ನು ರಾಜ್ಯ ಸರ್ಕಾರ ಸರಿಯಾದ ರೀತಿಯಲ್ಲಿ ಕೇಳುತ್ತಿಲ್ಲ. ಪದೇಪದೇ ನನ್ನ ಅಭಿಪ್ರಾಯವನ್ನು ಬದಲಿಸುತ್ತಿದೆ. ಮೊದಲು ಕೇವಲ ₹3,000 ಕೋಟಿ ಕೇಳಿದ್ದ ಕಂದಾಯ ಸಚಿವರು, ನಂತರ ಅದನ್ನು ₹7,500 ಕೋಟಿಗೆ, ಬಳಿಕ ₹11,000 ಕೋಟಿಗೆ ಹಾಗೂ ಈಗ ಬರೋಬ್ಬರಿ ₹22,000 ಕೋಟಿಗೆ ಏರಿಸಿದ್ದಾರೆ. ಪ್ರಧಾನಮಂತ್ರಿಗಳ ಮುಂದೆಯೇ ₹62,000 ಕೋಟಿ ಕೃಷಿ ನಷ್ಟವಾಗಿದೆ ಎಂದು ಮುಖ್ಯಮಂತ್ರಿ ಹೇಳಿ, ಯಾವುದೇ ಸ್ಪಷ್ಟ ಲೆಕ್ಕಾಚಾರವಿಲ್ಲದೆ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಯತ್ನವನ್ನು ಮಾಡುತ್ತಿದ್ದಾರೆ ಎಂದು ಸಚಿವರು ತರಾಟೆಗೆ ತೆಗೆದುಕೊಂಡರು.

ರೈತರು ಎಕರೆಗೆ ₹15,000-20,000. ಖರ್ಚು ಮಾಡಿದ್ದರೆ, ರಾಜ್ಯ ಸರ್ಕಾರ ಕೇವಲ ₹2,000 ಅಲ್ಪ ಪರಿಹಾರ ನೀಡಿ ಕೇಂದ್ರದತ್ತ ಬೊಟ್ಟು ಮಾಡುತ್ತಿದೆ ಎಂದು ಅವರು ವಾಗ್ದಾಳಿ ನಡೆಸಿದರು.

ಕಾರ್ಮಿಕರ ಹಣ ಹಾಗೂ ದೇಗುಲಗಳ ಹುಂಡಿ ಹಣದ ಮೇಲೆ ಕಣ್ಣು:

ಕಾಂಗ್ರೆಸ್ ಸರ್ಕಾರ ಬಿದ್ದ ಮತ್ತೊಂದು ಗಂಭೀರ ಆರೋಪ ಮಾಡಿದೆ ಕೇಂದ್ರ ಸಚಿವ ಕುಮಾರಸ್ವಾಮಿ ಅವರು; ಕಾರ್ಮಿಕರ ಕಲ್ಯಾಣಕ್ಕಾಗಿ ಮೀಸಲಿಟ್ಟಿದ್ದ ₹40,000 ಕೋಟಿ ಸೆಸ್ ಹಣವನ್ನು ಬೇರೆ ಉದ್ದೇಶಗಳಿಗೆ ಬಳಸಲಾಗುತ್ತಿದೆ ಎಂದರು.

ಇಷ್ಟು ಬೃಹತ್ ಮೊತ್ತದ ಹಣವನ್ನು ರಾಜ್ಯ ಸರ್ಕಾರ ಅನ್ಯ ಉದ್ದೇಶಕ್ಕೆ ಬಳಕೆ ಮಾಡುತ್ತಿದೆಯಾ ಅಥವಾ ಲೂಟಿ ಮಾಡಲಾಗುತ್ತಿದೆಯಾ? ಎಂದು ಪ್ರಶ್ನಿಸಿದ ಸಚಿವರು; ಸರ್ಕಾರಿ ಶಾಲೆಗಳ ನಿರ್ವಹಣೆಗೂ ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ ಸಾಲ ಹಾಗೂ ಸಿಎಸ್ಆರ್ ನಿಧಿಯನ್ನು ನೆಚ್ಚಿಕೊಳ್ಳುವ ದುಸ್ಥಿತಿ ಬಂದಿದೆ ಎಂದರು.

ಇತ್ತೀಚೆಗೆ ಹಾಸನಾಂಬ ದೇವಸ್ಥಾನದಲ್ಲಿ ದಾಖಲೆಯ ₹29 ಕೋಟಿ ಆದಾಯ ಸಂಗ್ರಹವಾಗಿದ್ದು, ಸರ್ಕಾರದ ಕಣ್ಣು ಈಗ ಇಂತಹ ಧಾರ್ಮಿಕ ಕೇಂದ್ರಗಳ ಹುಂಡಿ ಹಣದ ಮೇಲೂ ಬಿದ್ದಿದೆ. ದೇವಸ್ಥಾನಗಳ ಅಭಿವೃದ್ಧಿಗೆ ಬಳಸಬೇಕಾದ ಹಣವನ್ನು ಬೇರೆಡೆಗೆ ತಿರುಗಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಕೇಂದ್ರ ಸಚಿವರು ತೀವ್ರ ಕಳವಳ ವ್ಯಕ್ತಪಡಿಸಿದರು.

ಸ್ಟಿಂಗ್ ಪ್ರಕರಣ, ಪೊಲೀಸ್ ಕಮಿಷನರ್ ವಿರುದ್ಧ ವಾಗ್ದಾಳಿ:

ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿರುವ ಸ್ಟಿಂಗ್ ಆಪರೇಷನ್ ಪ್ರಕರಣದ ಬಗ್ಗೆಯೂ ಸಚಿವ ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.

ತಮ್ಮ ದೆಹಲಿ ನಿವಾಸದಲ್ಲಿಯೇ ಪ್ರಕರಣದ ಆರೋಪಿಗೆ ಮೊಬೈಲ್ ಹಸ್ತಾಂತರವಾಗಿದೆ ಎಂಬ ಬೆಂಗಳೂರು ಪೊಲೀಸ್ ಕಮಿಷನರ್ ಹೇಳಿಕೆಯನ್ನು ಕಟುವಾಗಿ ಟೀಕಿಸಿದ ಅವರು, "ಕಮಿಷನರ್ ಒಬ್ಬ ಹೆಡ್ ಕ್ಲರ್ಕ್ ಗಿಂತ ಕಡೆಯಾಗಿ ಹೇಳಿಕೆ ನೀಡಿದ್ದಾರೆ, ತಮ್ಮ ಜಾಗ ಉಳಿಸಿಕೊಳ್ಳಲು ಅವರು ಯಾರ ಹಂಗಿನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ" ಎಂದು ಹರಿಹಾಯ್ದರು.

ಈ ಸರ್ಕಾರ ಮತ್ತು ಅಧಿಕಾರಿಗಳಿಂದ ಕುಮಾರಸ್ವಾಮಿಯನ್ನು ಅಷ್ಟು ಸುಲಭವಾಗಿ ಎದುರಿಸಲು ಅಥವಾ ಟಚ್ ಮಾಡಲು ಸಾಧ್ಯವಿಲ್ಲ ಎಂದ ಅವರು, ಸ್ಟಿಂಗ್ ಆಪರೇಷನ್ ಯಾರಿಗೆ ತಿರುಗುಬಾಣವಾಗಲಿದೆ ಎಂಬುದನ್ನು ಶೀಘ್ರದಲ್ಲೇ ಬಯಲು ಮಾಡುವುದಾಗಿ ಎಚ್ಚರಿಸಿದರು.

ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ 'ಇದು ಕೇವಲ ಟ್ರೇಲರ್' ಎಂಬ ಹೇಳಿಕೆಗೆ ತಿರುಗೇಟು ನೀಡಿದ ಅವರು; ನಾನು ಸಿನಿಮಾ ಮಾಡಿದವನು, ಇವರು ಈಗ ಸಿನಿಮಾ ಮಾಡಲು ಶುರು ಮಾಡಿದ್ದಾರೆ, ಇವರ ಸಿನಿಮಾದ ಬಗ್ಗೆಯೂ ಮುಂದಿನ ದಿನಗಳಲ್ಲಿ ವಿವರವಾಗಿ ಹೇಳುತ್ತೇನೆ ಎಂದು ಕಿಡಿಕಾರಿದರು.

ಕ್ಷೇತ್ರ ದರ್ಶನಗಳ ಬಗ್ಗೆ ಹೇಳಿದ ಸಚಿವರು:

ನಮ್ಮದು ದೈವದಲ್ಲಿ ನಂಬಿಕೆ ಇರಿಸಿರುವ ಕುಟುಂಬವಾಗಿದೆ. ಬಹಳ ದಿನಗಳಿಂದ ಈ ಕ್ಷೇತ್ರಗಳಿಗೆ ಬರಬೇಕು ಎಂದು ಅಂದುಕೊಂಡಿದ್ದೆ. ಕೊಲ್ಲೂರು ಶ್ರೀ ಮೂಕಾಂಬಿಕೆ ಹಾಗೂ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ನಾಡಿಗೆ ಎದುರಾಗಿರುವ ಪ್ರಕೃತಿ ವಿಕೋಪ ಹಾಗೂ ಆಡಳಿತ ವೈಫಲ್ಯದ ಸಂಕಷ್ಟಗಳು ದೂರವಾಗಲಿ ಎಂದು ಪ್ರಾರ್ಥಿಸಲು ಬಂದಿದ್ದೇನೆ. ಕೊಲ್ಲೂರು ತಾಯಿಯಲ್ಲೂ ಕೂಡ ಇದನ್ನೇ ಕೇಳಿಕೊಂಡಿದ್ದೇನೆ ಎಂದು ಸಚಿವರು ಹೇಳಿದರು.

ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ವಿಧಾನ ಪರಿಷತ್ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಸ್.ಎಲ್.ಭೋಜೇಗೌಡ ಸೇರಿದಂತೆ ಅನೇಕ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕುಟುಂಬ ಸಮೇತ ಮೂಕಾಂಬಿಕೆ ದರ್ಶನ ಪಡೆದ ಹೆಚ್ಡಿಕೆ:

ಇದಕ್ಕೂ ಮೊದಲು ಕೇಂದ್ರ ಸಚಿವ ಕುಮಾರಸ್ವಾಮಿ ಅವರು ತಮ್ಮ ಪತ್ನಿ ಶ್ರೀಮತಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್ ಕುಮಾರಸ್ವಾಮಿ, ಸೊಸೆ ಶ್ರೀಮತಿ ರೇವತಿ ನಿಖಿಲ್ ಹಾಗೂ ಮೊಮ್ಮಗ ಅವ್ಯಾನ್ ದೇವ್ ಅವರೊಂದಿಗೆ ತಾಯಿ ಮೂಕಾಂಬಿಕೆಯ ದರ್ಶನ ಪಡೆದುಕೊಂಡರು.

Comments

Leave a Comment

Prev Post 12 ದಿನ, 12 ಗಂಟೆ, 11 ನಿಮಿಷ..! ಸಮೂಹ ಸಂಗೀತ; ಗಿನ್ನೆಸ್ ದಾಖಲೆ ಬರೆದ ಮಾಂಡ್ ಸೊಭಾಣ್.
Next Post ಡಿಸೆಂಬರ್ 1ರಿಂದ ಸರ್ಕಾರಿ ಸಿಬ್ಬಂದಿಗೆ ಕಟ್ಟುನಿಟ್ಟಿನ ಡಿಜಿಟಲ್ ನಿಯಮ

ದಿಢೀರ್ ಯುದ್ಧದಿಂದ ಅಡುಗೆ ಅನಿಲ ಸಮಸ್ಯೆ: ಸಿಲಿಂಡರ್ ಪೂರೈಕೆಗೆ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ: ಬಿ.ವೈ. ವಿಜಯೇಂದ್ರ

ದಿಢೀರ್ ಯುದ್ಧದಿಂದ ಅಡುಗೆ ಅನಿಲ ಸಮಸ್ಯೆ: ಸಿಲಿಂಡರ್ ಪೂರೈಕೆಗೆ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ: ಬಿ.ವೈ. ವಿಜಯೇಂದ್ರ

ಬಿಜೆಪಿ ಕಾಲದ ನೇಮಕಾತಿಗಳನ್ನು ಕಾಂಗ್ರೆಸ್ ತನ್ನದು ಎಂದು ಹೇಳಿಕೊಂಡು ಜನರನ್ನು ವಂಚಿಸುತ್ತಿದೆ: ಛಲವಾದಿ ನಾರಾಯಣಸ್ವಾಮಿ ಆರೋಪ

ಬಿಜೆಪಿ ಕಾಲದ ನೇಮಕಾತಿಗಳನ್ನು ಕಾಂಗ್ರೆಸ್ ತನ್ನದು ಎಂದು ಹೇಳಿಕೊಂಡು ಜನರನ್ನು ವಂಚಿಸುತ್ತಿದೆ: ಛಲವಾದಿ ನಾರಾಯಣಸ್ವಾಮಿ ಆರೋಪ

ನ್ಯಾ.‌ನಾಗಮೋಹನ್ ದಾಸ್ ವರದಿಯಂತೆ ಒಳ ಮೀಸಲಾತಿ ಜಾರಿ ಮಾಡದಿದ್ದರೆ ರಾಜ್ಯಾದ್ಯಂತ ಹೋರಾಟ:ಬಸವರಾಜ ಬೊಮ್ಮಾಯಿ

ಸಿಎಂ ಒಳ ಮೀಸಲಾತಿ ವಿರೋಧಿಗಳ ಒತ್ತಡಕ್ಕೆ ಮಣಿದಿದ್ದಾರೆ: ಬಸವರಾಜ ಬೊಮ್ಮಾಯಿ

ಒಡಿಶಾ ಶಾಸಕರನ್ನು ನಾನು ಕರೆಸಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

ಪಕ್ಷ ಹೇಳಿದ್ದನ್ನು ಮಾಡುತ್ತೇನೆ ನನಗೆ ಇದು ಹೊಸತಲ್ಲ, ವಿಲಾಸ್ ರಾವ್ ದೇಶಮುಖ್ ಅವರ ಸರ್ಕಾರದಿಂದಲೂ ಇದನ್ನು ಮಾಡುತ್ತಿರುವೆ

ಪ್ರಧಾನಿ ಮೋದಿ ರಾಜತಾಂತ್ರಿಕ ನೈಪುಣ್ಯತೆಯಿಂದ ಜಾಗತಿಕ. ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ: ಬಸವರಾಜ ಬೊಮ್ಮಾಯಿ

ಪ್ರಧಾನಿ ಮೋದಿ ರಾಜತಾಂತ್ರಿಕ ನೈಪುಣ್ಯತೆಯಿಂದ ಜಾಗತಿಕ. ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ: ಬಸವರಾಜ ಬೊಮ್ಮಾಯಿ

ಯುಕೆಪಿ ಯೋಜನೆಗೆ ಆಂಧ್ರ ತಕರಾರು ಬಗ್ಗೆ ಕರ್ನಾಟಕದ ಸಂಸದರ ಜತೆ ದೆಹಲಿಯಲ್ಲಿ ಸಭೆ: ಡಿಸಿಎಂ ಡಿ.ಕೆ. ಶಿವಕುಮಾರ್

ಯುಕೆಪಿ ಯೋಜನೆಗೆ ಆಂಧ್ರ ತಕರಾರು ಬಗ್ಗೆ ಕರ್ನಾಟಕದ ಸಂಸದರ ಜತೆ ದೆಹಲಿಯಲ್ಲಿ ಸಭೆ: ಡಿಸಿಎಂ ಡಿ.ಕೆ. ಶಿವಕುಮಾರ್

Read all News