2028ಕ್ಕೆ ರಾಜ್ಯದಲ್ಲಿ ಎನ್ ಡಿ ಎ ಸರ್ಕಾರ ಅಧಿಕಾರಕ್ಕೆ ಬರುವುದನ್ನು ತಪ್ಪಿಸಲು ಆಗುವುದಿಲ್ಲ
ರಾಜ್ಯದಲ್ಲಿ ಗೂಂಡಾ ಸರ್ಕಾರ, ಬಿಜೆಪಿ ಕಾರ್ಯಕರ್ತರ ವಿರುದ್ಧ ಪ್ರಕರಣ: ಪ್ರತಿಪಕ್ಷ ನಾಯಕ ಆರ್.ಅಶೋಕ
ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ ಗಮನಹರಿಸುತ್ತಿಲ್ಲ, ಮುಖ್ಯಮಂತ್ರಿ ದೆಹಲಿಯಲ್ಲಿ ಕಾಲ ಕಳೆಯುತ್ತಿದ್ದಾರೆ
2028ಕ್ಕೆ ರಾಜ್ಯದಲ್ಲಿ ಎನ್ ಡಿ ಎ ಸರ್ಕಾರ ಅಧಿಕಾರಕ್ಕೆ ಬರುವುದನ್ನು ತಪ್ಪಿಸಲು ಆಗುವುದಿಲ್ಲ
ಹೆಗ್ಗಡದೇವನಕೋಟೆ, ನವೆಂಬರ್ 17
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಗೂಂಡಾಗಿರಿ ಹೆಚ್ಚಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಕಾರ್ಯನಿರ್ವಹಿಸುವ ಬಿಜೆಪಿ ಕಾರ್ಯಕರ್ತರ ವಿರುದ್ಧ ಇಲ್ಲಸಲ್ಲದ ಪ್ರಕರಣಗಳನ್ನು ದಾಖಲಿಸಿ, 5 ಲಕ್ಷ ರೂ. ಬಾಂಡ್ ಪಡೆಯಲಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಕ್ರೋಶ ಹೊರಹಾಕಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಪ್ರಶ್ನೆ ಕೇಳುವ ಹಕ್ಕಿದೆ. ಕಾಂಗ್ರೆಸ್ ಕಾರ್ಯಕರ್ತರು ಕೂಡ ಟೀಕೆಗಳನ್ನು ಮಾಡುತ್ತಿದ್ದು, ಅವರ ವಿರುದ್ಧ ಯಾವುದೇ ಪ್ರಕರಣ ದಾಖಲಿಸುತ್ತಿಲ್ಲ. ಪೊಲೀಸರು ದೌರ್ಜನ್ಯ ಮಾಡಿದರೆ, ಮುಂದೆ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದರು.
ಬಿಸಿಯೂಟ ಕಾರ್ಯಕರ್ತರ, ಆಶಾ ಕಾರ್ಯಕರ್ತರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಪೌರಕಾರ್ಮಿಕರಿಗೆ ಸಂಬಳ ನೀಡದೆ ಎಲ್ಲೆಡೆ ಕಸದ ರಾಶಿ ಕಾಣುತ್ತಿದೆ. ನಮ್ಮ ಬಳಿ ಹಣ ಇಲ್ಲ ಎಂದು ಆರ್ಥಿಕ ಇಲಾಖೆ ಎಚ್ಚರಿಕೆ ನೀಡಿದೆ. ಆದರೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪುಸ್ತಕ ಬಿಡುಗಡೆಗೆ ದೆಹಲಿಗೆ ಹೋಗಿದ್ದಾರೆ. ಬರಗಾಲದಿಂದ ಸಂಕಷ್ಟಕ್ಕೊಳಗಾದ ರೈತರ ಬಗ್ಗೆ ಅವರಿಗೆ ಕಾಳಜಿ ಇಲ್ಲ. ಹೆಚ್ಚಿನ ಸಮಯವನ್ನು ದೆಹಲಿಯಲ್ಲೇ ಕಳೆಯುತ್ತಿದ್ದಾರೆ. ಜನರ ವಿಚಾರಕ್ಕಾಗಿ ಅವರೆಂದೂ ದೆಹಲಿಗೆ ಹೋಗಿಲ್ಲ ಎಂದರು.
ರೈತರ ಆತ್ಮಹತ್ಯೆ ಹೆಚ್ಚಿದ್ದು, ರಾಜ್ಯ ಇಡೀ ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ. ಚಾಮರಾಜನಗರದಲ್ಲಿ ಒಬ್ಬ ರೈತ ಕೆರೆ ನೀರು ತುಂಬಿಲ್ಲ ಎಂದು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ನಾನು ಅದರ ಬಗ್ಗೆ ಧ್ವನಿ ಎತ್ತಿದರೂ ಸರ್ಕಾರ ಕ್ರಮ ವಹಿಸಿಲ್ಲ. ಮುಖ್ಯಮಂತ್ರಿ ಎಲ್ಲೇ ಹೋದರೂ ಸಾವಿರಾರು ಕೋಟಿ ರೂ. ನೀಡುವ ಘೋಷಣೆ ಮಾಡುತ್ತಾರೆ. ಆದರೆ ಆರ್ಥಿಕ ಇಲಾಖೆ ಖಾಲಿ ಡಬ್ಬದಂತಾಗಿದೆ. ಬೆಳಗಾವಿಯಲ್ಲಿ ಅಧಿವೇಶನ ನಡೆಯಲಿದೆ. ಆದರೆ ಉತ್ತರ ಕರ್ನಾಟಕಕ್ಕೆ ಈವರೆಗೆ ಕೊಟ್ಟ ಭರವಸೆಗಳನ್ನು ಈಡೇರಿಸಿಲ್ಲ ಎಂದರು.
ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಗಳಲ್ಲಿ ಕಾಡಂಚಿನಲ್ಲಿ ವಾಸ ಮಾಡುವ ಜನರಿಗೆ ವನ್ಯ ಜೀವಿಗಳಿಂದ ತೊಂದರೆಯಾಗಿದೆ. ಹುಲಿಗಳ ದಾಳಿಯಿಂದ ಜನರು ಸತ್ತಿದ್ದಾರೆ. ಇದರ ಬಗ್ಗೆ ಸರ್ಕಾರ ಗಮನಹರಿಸಿಲ್ಲ. ಸ್ಟಿಂಗ್ ಆಪರೇಶನ್ ಪ್ರಕರಣ ಸುದ್ದಿಯಾದ ನಂತರ ಮಾಜಿ ಸಿಎಂ ಸಿದ್ದರಾಮಯ್ಯ ಸುಮ್ಮನಾಗಿದ್ದಾರೆ. ಅವರು ಸರ್ಕಾರಕ್ಕೆ ಮಾರ್ಗದರ್ಶನ ನೀಡುತ್ತಿಲ್ಲ. ಎರಡು ಬಣಗಳು ಇರುವುದರಿಂದ ಆಡಳಿತ ಸರಿಯಾಗಿ ನಡೆಯುತ್ತಿಲ್ಲ ಎಂದರು.
ಬೆಲೆ ಏರಿಕೆ ವಿರುದ್ಧ ಹೋರಾಟ
2,000 ರೂ. ನೀಡುತ್ತೇವೆಂದು ಹೇಳಿ ಒಂದು ಕುಟುಂಬಕ್ಕೆ 10,000 ರೂ. ಹೊರೆ ಹೇರಿದ್ದಾರೆ. ಬೆಲೆ ಏರಿಕೆ ವಿರುದ್ಧ ಬಿಜೆಪಿ ವತಿಯಿಂದ ಮಂಗಳೂರಿನಲ್ಲಿ ನವೆಂಬರ್ 19 ರಂದು ಬೃಹತ್ ಪ್ರತಿಭಟನೆ ನಡೆಯಲಿದೆ. ತಾಲೂಕು ಮಟ್ಟದಲ್ಲೂ ಈ ಬಗ್ಗೆ ಪ್ರತಿಭಟನೆ ನಡೆಯಲಿದೆ. ಮೈಸೂರು ಮೈಸೂರು ಮತ್ತು ಚಾಮರಾಜನಗರದಲ್ಲಿ ಎಲ್ಲ ಕಡೆ ರಸ್ತೆಗಳಲ್ಲಿ ಗುಂಡಿ ಇದೆ. ಡಾಂಬರೀಕರಣಕ್ಕೂ ಸರ್ಕಾರದ ಬಳಿ ಹಣವಿಲ್ಲ. ಇಡೀ ಮೈಸೂರು, ಚಾಮರಾಜನಗರ ಕಡೆಗಣನೆಯಾಗಿದೆ. ದಸರಾ ಸಮಯದಲ್ಲಿ ಶೋ ಮಾಡಿರುವುದನ್ನು ಬಿಟ್ಟರೆ ಅಭಿವೃದ್ಧಿಗಾಗಿ ಏನೂ ಮಾಡಿಲ್ಲ ಎಂದರು.
ಎನ್ಡಿಎ ಅಧಿಕಾರಕ್ಕೆ ಬರಲಿದೆ
2028 ರ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಒಂದಾಗಿ ಸ್ಪರ್ಧೆ ಮಾಡಲಿದೆ. ಸ್ಟಿಂಗ್ ಆಪರೇಶನ್ ಬಳಿಕ ಕಾಂಗ್ರೆಸ್ನಿಂದ ಅನೇಕರು ಬಿಜೆಪಿ ಬರುವ ಪ್ರಕ್ರಿಯೆ ಶುರುವಾಗಿದೆ. ಎನ್ಡಿಎ ಸರ್ಕಾರ ಬಹುಮತ ಪಡೆದು ಖಂಡಿತವಾಗಿ ಅಧಿಕಾರಕ್ಕೆ ಬರಲಿದೆ. ಇದು ಸೂರ್ಯ ಚಂದ್ರ ಇರುವಷ್ಟೇ ಖಚಿತ ಎಂದರು.
ಕೇಂದ್ರದ ಸಮನ್ವಯ ಸಮಿತಿ ಚುನಾವಣಾ ಅಭ್ಯರ್ಥಿಯನ್ನು ಆರಿಸಲಿದೆ. ಎಲ್ಲಿ ಹೆಚ್ಚು ಮತಗಳು ಬಂದಿವೆಯೋ ಆ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿಗೆ ಅವಕಾಶ ನೀಡುವಂತೆ ಕೇಳುತ್ತಿದ್ದೇವೆ. ಜೆಡಿಎಸ್ ಕೂಡ ಹಾಗೆಯೇ ಕೇಳುತ್ತಿದೆ. ಮುಂದಿನ ಚುನಾವಣೆಯಲ್ಲಿ ಕ್ಷೇತ್ರ ಹಂಚಿಕೆ ನಡೆಯಲಿದೆ. ಉಪಚುನಾವಣೆಗೆ ಸಂಬಂಧಿಸಿದಂತೆ ಅಭ್ಯರ್ಥಿ ಆಯ್ಕೆ ಅಂತಿಮ ಆಗಿಲ್ಲ. ಇಲ್ಲಿನ ನಾಯಕರು ಯಾರೂ ಆ ಬಗ್ಗೆ ತೀರ್ಮಾನ ಕೈಗೊಳ್ಳಲು ಆಗುವುದಿಲ್ಲ ಎಂದರು.
ಬದುಕಿರುವವರನ್ನು ಮೃತಪಟ್ಟಿದ್ದಾರೆ ಎಂದು ಗೃಹ ಲಕ್ಷ್ಮಿ ಹಣ ನಿಲ್ಲಿಸಿದ್ದಾರೆ. ಇಂತಹ ಸರ್ಕಾರ ಜೀವಂತವಾಗಿದೆ ಎಂದು ಹೇಳಲು ಸಾಧ್ಯವೆ? ಎಂದು ಪ್ರಶ್ನಿಸಿದರು.
ಭಗವಾನ್ ಬಿರ್ಸಾ ಮುಂಡಾ ಜಯಂತಿ
ಭಗವಾನ್ ಬಿರ್ಸಾ ಮುಂಡಾ ಅವರು ಆದಿವಾಸಿಗಳ ಪರ ಧ್ವನಿ ಎತ್ತಿ ಅವರ ಹಕ್ಕುಗಳಿಗಾಗಿ ಹೋರಾಟ ಮಾಡಿದ್ದರು. ಕಾಡಂಚಿನ ಜನರ ಕೊಡುಗೆಯನ್ನು ಇಡೀ ದೇಶ ಸ್ಮರಿಸಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದರು.
ಬಿಜೆಪಿಯ ಎಸ್.ಟಿ. ಮೋರ್ಚಾದಿಂದ ಆಯೋಜಿಸಲಾಗಿದ್ದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ, ಬುಡಕಟ್ಟು ಸಮುದಾಯದ ನಾಯಕ ಭಗವಾನ್ ಬಿರ್ಸಾ ಮುಂಡಾ ಅವರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಗವಾನ್ ಬಿರ್ಸಾ ಮುಂಡಾ ಅವರು 25 ನೇ ವಯಸ್ಸಿನಲ್ಲಿ ಆದಿವಾಸಿಗಳ ಪರವಾಗಿ ನಿರಂತರ ಹೋರಾಟ ಮಾಡಿದ್ದರು. ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ಅವರು, ದೇಶಭಕ್ತಿಯನ್ನು ತೋರಿದರು. ಭಾರತ ಸ್ವತಂತ್ರವಾಗಬೇಕು ಎಂದು ಹೋರಾಟ ಮಾಡಿದರು. ಆ ನೆನಪಿಗಾಗಿ ಅವರನ್ನು ಗೌರವಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಅವರ ಹೆಸರನ್ನು ಶಾಶ್ವತವಾಗಿಸಲು ಜಯಂತಿ ಆಚರಣೆಯನ್ನು ಘೋಷಣೆ ಮಾಡಿದರು ಎಂದರು.
ಆದಿವಾಸಿಗಳಿಗೆ ಕಾಡು ಬಿಟ್ಟರೆ ಏನೂ ಗೊತ್ತಿಲ್ಲ ಎಂಬ ಭಾವನೆ ಸಮಾಜದಲ್ಲಿದೆ. ಆದರೆ ಈ ಸಮುದಾಯದ ಜನರು ದೇಶಕ್ಕೆ ಅಪಾರ ಕೊಡುಗೆ ನೀಡುತ್ತಿದ್ದಾರೆ. ಆ ಜನರು ಕೂಡ ದೇಶದ ಸ್ವಾತಂತ್ರ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಎಲ್ಲರೂ ಅರಿಯಬೇಕು. ನಾನು ಕಂದಾಯ ಸಚಿವನಾಗಿದ್ದಾಗ ಈ ಭಾಗದ ಭೀಮನಕೊಲ್ಲಿಯಲ್ಲಿ ಎರಡು ದಿನ ಗ್ರಾಮ ವಾಸ್ತವ್ಯ ಮಾಡಿದ್ದೆ. ಬೇರೆ ಬೇರೆ ಕಾರಣಕ್ಕಾಗಿ ಈ ಭಾಗದ ಕಾಡಂಚಿನ ಜನರನ್ನು ಹೊರಕ್ಕೆ ಕಳಿಸಲಾಗಿತ್ತು. ಅವರಿಗೆ ಉಳುಮೆಗೆ ಭೂಮಿ ನೀಡಬೇಕು, ಆಶ್ರಯ ಕಲ್ಪಿಸಬೇಕೆಂಬ ಕಾರಣಕ್ಕೆ ನಾನು ಗ್ರಾಮ ವಾಸ್ತವ್ಯ ಮಾಡಿದ್ದೆ ಎಂದರು.
ಆದರೆ ಅರಣ್ಯಾಧಿಕಾರಿಗಳಿಗೆ ಏನೂ ಗೊತ್ತಾಗುವುದಿಲ್ಲ. ಹಾಡಿಗಳಲ್ಲಿರುವ ಜನರು ಸ್ವಾತಂತ್ರ್ಯಕ್ಕೆ ಮೊದಲು ಕೂಡ ಇಲ್ಲಿ ವಾಸ ಮಾಡುತ್ತಿದ್ದರು. ಹೊರಕ್ಕೆ ಕಳಿಸಿದ ಬಳಿಕ ಅವರಿಗೆ ಮೂಲಸೌಕರ್ಯ ಕಲ್ಪಿಸಬೇಕು. ಅದಕ್ಕಾಗಿ ಬಿರ್ಸಾ ಮುಂಡಾ ಹೋರಾಟ ಮಾಡಿದ್ದರು. ಪರಿಶಿಷ್ಟ ಪಂಗಡದ ಜನರ ಪ್ರಗತಿಗಾಗಿ ಒಂದೂವರೆ ಲಕ್ಷ ಕೋಟಿ ರೂ. ಅನುದಾನವನ್ನು ಕೇಂದ್ರ ಸರ್ಕಾರ ನೀಡಿದೆ. ರಾಷ್ಟ್ರಪತಿಯವರು ಕೂಡ ಇದೇ ಸಮುದಾಯದವರಾಗಿದ್ದಾರೆ. ವಿಧಾನಪರಿಷತ್ನಲ್ಲೂ ಈ ಸಮುದಾಯದ ನಾಯಕರಿಗೆ ಬಿಜೆಪಿಯಿಂದ ಅವಕಾಶ ನೀಡಲಾಗಿದೆ. ಪರಿಶಿಷ್ಟ ಪಂಗಡದ ಅನುದಾನ ಅವರಿಗೇ ಸಿಗಬೇಕು. ಹುಲಿ, ಚಿರತೆ, ಮೊದಲಾದ ಕಾಡುಪ್ರಾಣಿಗಳು ಜನರ ಮೇಲೆ ದಾಳಿ ಮಾಡುತ್ತಿದೆ. ಜನರು ಜಾನುವಾರುಗಳನ್ನು ಬೋನಿನಲ್ಲಿ ಇರಿಸುತ್ತಿದ್ದಾರೆ ಎಂದರು.
ನಾನು ಗ್ರಾಮ ವಾಸ್ತವ್ಯ ಮಾಡಿದ್ದಾಗ ಇಲ್ಲಿ ಜನರು ಬೇಯಿಸಿದ ಗೆಣಸು, ರೊಟ್ಟಿ, ಜೇನು ನೀಡಿದ್ದರು. ಆ ಪ್ರೀತಿ ವಿಶ್ವಾಸವನ್ನು ಎಂದೂ ಮರೆಯಲು ಆಗಲ್ಲ. ಇವರೆಲ್ಲರೂ ಕಪಟ ಇಲ್ಲದ ಜನರು. ಮುಂದೆ ನಮ್ಮ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ಹಾಡಿಗಳಲ್ಲಿ ವಾಸಿಸುವ ಜನರ ಜಮೀನುಗಳ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದರು.






Comments
Leave a Comment