ಸಾವಿರಕ್ಕೂ ಹೆಚ್ಚು ಜಿಸಿಸಿ(ಜಾಗತಿಕ ಸಾಮರ್ಥ್ಯ ಕೇಂದ್ರ)ಗಳಿಗೆ ಬೆಂಗಳೂರು ನೆಲೆ
ಕರ್ನಾಟಕದಲ್ಲಿ 24,000 ನವೋದ್ಯಮಗಳು
ಎಲಿವೇಟ್ ಮೂಲಕ 1500 ನವೋದ್ಯಮಗಳಿಗೆ ಬೆಂಬಲ
ಜತೆಗೂಡಿ ಕೆಲಸ ಮಾಡೋಣ ಯಶಸ್ಸು ಸಾಧಿಸೋಣ
ಬೆಂಗಳೂರು, ನ.17
“ಉದ್ಯಮಗಳ ಬೆಳವಣಿಗೆಗೆ ಪೂರಕವಾದ ನೀತಿಗಳು, ಬಲಿಷ್ಠ ಸಂಶೋಧನಾ ಕೇಂದ್ರಗಳು, ಸಮೃದ್ಧವಾಗ ನವೋದ್ಯಮ ಪರಿಸರ ವ್ಯವಸ್ಥೆ, ಕೌಶಲ್ಯಯುತ ಮಾನವ ಸಂಪನ್ಮೂಲದೊಂದಿಗೆ ಕರ್ನಾಟಕ ರಾಜ್ಯವು ಎಐ, ಡೀಪ್ ಟೆಕ್ ಮತ್ತು ಸೆಮಿಕಂಡಕ್ಟರ್ ಉತ್ಪಾದನೆಯಲ್ಲಿ ಜಾಗತಿಕ ಕೇಂದ್ರವಾಗುವ ಗುರಿ ಹೊಂದಿದೆ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.
ಬೆಂಗಳೂರಿನ ಬಿಐಇಸಿಯಲ್ಲಿ ಮಂಗಳವಾರ ಆಯೋಜಿಸಲಾಗಿದ್ದ "ಬೆಂಗಳೂರು ಟೆಕ್ ಸಮ್ಮಿಟ್" ಅನ್ನು ಶಿವಕುಮಾರ್ ಅವರು ಉದ್ಘಾಟಿಸಿ ಮಾತನಾಡಿದರು.
“ಇಂದು ನಾವೆಲ್ಲರೂ ಜಗತ್ತಿನ ಬದಲಾವಣೆಗೆ ಪೂರಕವಾಗಿರುವ ಜ್ಞಾನದ ಶಕ್ತಿ, ಆಲೋಚನೆ, ಅನ್ವೇಷಣೆಗಳಿಗೆ ಸಾಕ್ಷಿಯಾಗುತ್ತಿದ್ದೇವೆ. ಬೆಂಗಳೂರು ವಿಶ್ವದ ಅತಿ ದೊಡ್ಡ ತಂತ್ರಜ್ಞಾನದ ಕ್ಲಸ್ಟರ್ ಗಳಲ್ಲಿ ಒಂದಾಗಿದೆ. ಮೈಕ್ರೋಸಾಫ್ಟ್ ಸಂಸ್ಥೆಯ ಪುನೀತ್ ಅವರು ನಮ್ಮ ದೇಶದಲ್ಲಿ ರಾಕೆಟ್ ಗಳನ್ನು ಎತ್ತಿನಗಾಡಿಯಲ್ಲಿ ಸಾಗಿಸುತ್ತಿದ್ದನ್ನು ಸ್ಮರಿಸಿದರು. ಅವರಿಗೆ ಒಂದು ವಿಚಾರ ಸ್ಮರಿಸಲು ಬಯಸುತ್ತೇನೆ. 1902ರಲ್ಲಿ ಏಷ್ಯಾದಲ್ಲಿ ಮೊದಲ ಬಾರಿಗೆ ವಿದ್ಯುತ್ ಉತ್ಪಾದನೆ ಮಾಡಿದ್ದು ನಮ್ಮ ರಾಜ್ಯದಲ್ಲಿ, ವಿದ್ಯುತ್ ಸಂಪರ್ಕ ಪಡೆದ ನಗರ ಎಂದರೆ ಬೆಂಗಳೂರು ಹಾಗೂ ಮೈಸೂರು. ಇದು ನಮ್ಮ ರಾಜ್ಯದ ಇತಿಹಾಸ” ಎಂದರು.
“ಅತ್ಯುತ್ತಮ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಆಧುನಿಕ ಕೈಗಾರಿಕೆ ಹಾಗೂ ತಂತ್ರಜ್ಞಾನಕ್ಕೆ ಕರ್ನಾಟಕ ಬುನಾದಿ ಹಾಕಿದೆ. ಜಾಗತಿಕ ಸಂಸ್ಥೆಗಳು ನಮ್ಮ ಮೇಲೆ ಅಪಾರ ವಿಶ್ವಾಸವನ್ನು ಸಾಫ್ಟ್ವೇರ್ ಮತ್ತು ಸೇವೆಗಳ ರಫ್ತಿನ ಮೂಲಕ ಭಾರತ ಗಳಿಸುವ ಪ್ರತಿ ಐದು ಡಾಲರ್ಗಳಲ್ಲಿ ಎರಡು ಡಾಲರ್ ಕರ್ನಾಟಕದಿಂದಲೇ ಬರುತ್ತಿದ್ದು, ಕಳೆದ ವರ್ಷ ಇದು ಅಂದಾಜು 173 ಬಿಲಿಯನ್ ಅಮೆರಿಕನ್ ಡಾಲರ್ಗಳಷ್ಟಿತ್ತು. ಇದು ಅನೇಕ ರಾಷ್ಟ್ರಗಳ ಆರ್ಥಿಕತೆಗಿಂತ ಹೆಚ್ಚಾಗಿದೆ. ಕರ್ನಾಟಕ ಇತ್ತೀಚಿನ ದಿನಗಳಲ್ಲಿ ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಮುಂಚೂಣಿಯಲ್ಲಿದೆ” ಎಂದು ವಿವರಿಸಿದರು.
ಸಾವಿರಕ್ಕೂ ಹೆಚ್ಚು ಜಿಸಿಸಿಗಳಿಗೆ ಬೆಂಗಳೂರು ನೆಲೆ
“ಇದೇ ವಿಚಾರವನ್ನು ನಾನು ಪ್ರಧಾನಮಂತ್ರಿಗಳ ಜತೆಗೂ ಚರ್ಚೆ ಮಾಡಿದ್ದೆ. 2025-26ನೇ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಕರ್ನಾಟಕವು 9.4 ಬಿಲಿಯನ್ ಡಾಲರ್ ವಿದೇಶಿ ನೇರ ಹೂಡಿಕೆಯನ್ನು (FDI) ಪಡೆದಿದ್ದು, ಇದು ಆ ಅವಧಿಯಲ್ಲಿ ಭಾರತದ ಒಟ್ಟು ಒಳಹರಿವಿನ ಶೇ. 26.7 ರಷ್ಟಿದೆ. 1,000ಕ್ಕೂ ಹೆಚ್ಚು ಜಾಗತಿಕ ಸಾಮರ್ಥ್ಯ ಕೇಂದ್ರಗಳು (GCC) ಬೆಂಗಳೂರನ್ನು ತಮ್ಮ ನೆಲೆಯನ್ನಾಗಿ ಆಯ್ಕೆ ಮಾಡಿಕೊಂಡಿದ್ದು, 2025ರ ಒಂದೇ ವರ್ಷದಲ್ಲಿ 30ಕ್ಕೂ ಹೆಚ್ಚು ಹೊಸ ಜಿಸಿಸಿಗಳು ರಾಜ್ಯಕ್ಕೆ 1 ಬಿಲಿಯನ್ ಡಾಲರ್ಗೂ ಅಧಿಕ ಹೂಡಿಕೆಯನ್ನು ತಂದಿವೆ” ಎಂದು ಮಾಹಿತಿ ನೀಡಿದರು.
“ಭಾರತದ ಅತ್ಯಂತ ಹೆಗ್ಗಳಿಕೆಯ ಸಾಧನೆಗಳನ್ನು ನಮ್ಮ ನೆಲದಲ್ಲಿ ಮಾಡಲಾಗಿದೆ. ಚಂದ್ರಯಾನ-3, ಐಐಐಟಿ-ಬೆಂಗಳೂರಿನಲ್ಲಿ ಅಭಿವೃದ್ಧಿಪಡಿಸಲಾದ ಡಿಜಿಟಲ್ ಗುರುತಿನ ವೇದಿಕೆ, ಬಯೋಕಾನ್ನ ಜಾಗತಿಕ ಔಷಧೀಯ ವ್ಯಾಪ್ತಿ ಮತ್ತು ಭಾರತದ ಸ್ವಂತ ಎಐ ಮಾದರಿಯನ್ನು ಅಭಿವೃದ್ಧಿಪಡಿಸುವಲ್ಲಿ ಬೆಂಗಳೂರು ಮೂಲದ 'ಸರ್ವಂ' (Sarvam) ಪಾತ್ರ ಮಹತ್ವಾದ್ದಾಗಿದೆ. ನಮ್ಮಲ್ಲಿ ತಂತ್ರಜ್ಞಾನವನ್ನು ಕೇವಲ ನಮ್ಮ ದೇಶಕ್ಕೆ ಮಾತ್ರವಲ್ಲ ಇಡೀ ವಿಶ್ವಕ್ಕೆ ಬಳಕೆಯಾಗುವಂತೆ ರೂಪಿಸಲಾಗುತ್ತಿದೆ” ಎಂದರು.
ಕರ್ನಾಟಕದಲ್ಲಿ 24,000 ನವೋದ್ಯಮಗಳು:
“ತಂತ್ರಜ್ಞಾನದಲ್ಲಿ ಯಾರು ಮೊದಲು ಹೆಜ್ಜೆ ಇಡುತ್ತಾರೋ ಅವರು ಮುನ್ನಡೆ ಸಾಧಿಸುತ್ತಾರೆ. ಕರ್ನಾಟಕ ಸದಾ ಈ ವಿಚಾರದಲ್ಲಿ ಮುನ್ನಡೆ ಸಾಧಿಸಿದೆ. ನಮ್ಮ ರಾಜ್ಯ ದೇಶದಲ್ಲೇ ಮೊದಲ ಐಟಿ ನೀತಿಯನ್ನು 1997ರಲ್ಲೇ ರಚಿಸಿತು. 2001ರಲ್ಲಿ ಎಸ್ ಎಂ ಕೃಷ್ಣ ಅವರ ಕಾಲದಲ್ಲಿ ಜೈವಿಕ ತಂತ್ರಜ್ಞಾನ ನೀತಿ ರಚಿಸಲಾಯಿತು. 2024ರಲ್ಲಿ ಜಾಗತಿಕ ಕೇಂದ್ರವನ್ನು ಸ್ಥಾಪಿಸಲಾಯಿತು. ಇದರೊಂದಿಗೆ ಕರ್ನಾಟಕ ಜಾಗತಿಕ ನಾಯಕತ್ವ ವಹಿಸಿದೆ” ಎಂದು ಹೇಳಿದರು.
“ಕರ್ನಾಟಕವು 24,000 ಅಧಿಕೃತ ನವೋದ್ಯಮಗಳ ನೆಲೆಯಾಗಿದೆ. ಪ್ರತಿ 5 ಭಾರತೀಯ ಪ್ರಮುಖ ಕಂಪನಿಗಳಲ್ಲಿ 2 ಕಂಪನಿಗಳು ಬೆಂಗಳೂರಿನಲ್ಲಿ ಆರಂಭವಾಗಿವೆ. ಜಾಗತಿಕ ನವೋದ್ಯಮ ವ್ಯವಸ್ಥೆಯಲ್ಲಿ ಕರ್ನಾಟಕ 8ನೇ ಸ್ಥಾನ ಹಾಗೂ ಏಷ್ಯಾದಲ್ಲಿ 2ನೇ ಸ್ಥಾನ ಪಡೆದಿದೆ. ಬೆಂಗಳೂರು 4.4 ಬಿಲಿಯನ್ ಡಾಲರ್ ತಂತ್ರಜ್ಞಾನ ಹೂಡಿಕೆಯನ್ನು ಆಕರ್ಷಿಸಿದ್ದು, ಇದು ದೇಶದ ನಂತರದ ಐದು ಪ್ರಮುಖ ನಗರಗಳು ಒಟ್ಟಾಗಿ ಸಂಗ್ರಹಿಸಿದ 4.8 ಬಿಲಿಯನ್ ಡಾಲರ್ಗೆ ಬಹುತೇಕ ಸಮನಾಗಿದೆ. ಕರ್ನಾಟಕದ ಸ್ಟಾರ್ಟ್ಅಪ್ಗಳು ಒಟ್ಟಾರೆಯಾಗಿ ಸುಮಾರು 79 ಬಿಲಿಯನ್ ಡಾಲರ್ ಬಂಡವಾಳವನ್ನು ಸಂಗ್ರಹಿಸಿದ್ದು, ಬೆಂಗಳೂರಿನ ಮಹಿಳಾ ಸಂಸ್ಥಾಪಕರು 13.4 ಬಿಲಿಯನ್ ಡಾಲರ್ ಹೂಡಿಕೆಯನ್ನು ಪಡೆದುಕೊಂಡಿದ್ದಾರೆ” ಎಂದರು.
ಎಲಿವೇಟ್ ಮೂಲಕ 1500 ನವೋದ್ಯಮಗಳಿಗೆ ಬೆಂಬಲ
“ನಮ್ಮ ಸರ್ಕಾರ ಎಲಿವೇಟ್ ಕಾರ್ಯಕ್ರಮದ ಮೂಲಕ 1500 ನವೋದ್ಯಮಗಳಿಗೆ ಅನುದಾನದ ಪ್ರೋತ್ಸಾಹ ನೀಡಿದ್ದು, 41 ಮಿಲಿಯನ್ ಡಾಲರ್ ನಷ್ಟು ಅನುದಾನ ನೀಡಲಾಗಿದೆ. ಸುಧಾರಿತ ವೈಜ್ಞಾನಿಕ ಮತ್ತು ಕೈಗಾರಿಕಾ ಪರಿಹಾರಗಳ ಮೇಲೆ ಕೆಲಸ ಮಾಡುವ ಸ್ಟಾರ್ಟ್ಅಪ್ಗಳಿಗೆ ಸರ್ಕಾರವು ವಿಶೇಷ ಬೆಂಬಲ ನೀಡುತ್ತಿದೆ. 2026ರಲ್ಲಿ 33 ಡೀಪ್ ಟೆಕ್ ನವೋದ್ಯಮಗಳಿಗೆ 30 ಕೋಟಿಯಷ್ಟು ಅನುದಾನದ ಪ್ರೋತ್ಸಾಹ ನೀಡಿದೆ. ಅನುದಾನಗಳು ನವೋದ್ಯಮಗಳ ಆರಂಭಕ್ಕೆ ನೆರವಾಗುತ್ತದೆ. ಆದರೆ ಅದರ ಬೆಳವಣಿಗೆ ಅನುದಾನಕ್ಕಿಂತ ಮೂಲಸೌಕರ್ಯ, ಪ್ರಯೋಗಾಲಯಗಳ ಅಗತ್ಯವಿದೆ. ಇದು ಒಬ್ಬರಿಂದಲೇ ನಿರ್ಮಾಣ ಅಸಾಧ್ಯ. ಪೇಟೆಂಟ್ ಬಂಡವಾಳ, ನೀತಿಗಳು ಇದಕ್ಕೆ ಉತ್ತೇಜನ ನೀಡಲಿದೆ” ಎಂದು ಹೇಳಿದರು.
ಸರ್ಕಾರದ ಡೀಪ್-ಟೆಕ್ ಆಕ್ಸಿಲರೇಟರ್ ಆದ 'ಇನ್ನೋವರ್ಸ್' (Innoverse), ಮುಂದಿನ ಐದು ವರ್ಷಗಳಲ್ಲಿ ಬೆಳವಣಿಗೆಯ ಹಂತದಲ್ಲಿರುವ 35 ಉದ್ಯಮಗಳನ್ನು ಬೆಂಬಲಿಸಲಿದ್ದು, ಉತ್ಪನ್ನ ಅಭಿವೃದ್ಧಿಯಿಂದ ಕೈಗಾರಿಕಾ ಮಟ್ಟದ ಕಾರ್ಯಾಚರಣೆಗಳಿಗೆ ಬದಲಾಗಲು ಅವುಗಳಿಗೆ ಸಹಾಯ ಮಾಡಲಿದೆ. 'ಗವರ್ನಮೆಂಟ್ ಫಸ್ಟ್' (Government First) ಉಪಕ್ರಮದ ಅಡಿಯಲ್ಲಿ, ಸ್ಟಾರ್ಟ್ಅಪ್ಗಳು ಅಭಿವೃದ್ಧಿಪಡಿಸಿದ ನವೀನ ಪರಿಹಾರಗಳನ್ನು ಖರೀದಿಸಲು 25 ಕೋಟಿ ರೂ.ಗಳ ಮೀಸಲು ನಿಧಿಯೊಂದಿಗೆ ಸರ್ಕಾರವೇ ಸ್ಟಾರ್ಟ್ಅಪ್ಗಳ ಮೊದಲ ಗ್ರಾಹಕನಾಗಲಿದೆ. ಈ ವರ್ಷ ಎಐ ಅಂಡ್ ಬಿಯಾಂಡ್ ಎಂಬ ಪರಿಕಲ್ಪನೆ ಹೊಂದಿದೆ. ಎಐ ಹಾಗೂ ಮಷಿನ್ ಲರ್ನಿಂಗ್ ವಿಭಾಗದಲ್ಲಿ ಭಾರತದ ಶೇ.50ರಷ್ಟು ಪ್ರತಿಭೆಯನ್ನು ಬೆಂಗಳೂರು ಹೊಂದಿದೆ. ನಮ್ಮಲ್ಲಿ ಮೊದಲ ಎಐ ವಿವಿ ಸ್ಥಾಪಿಸಲು ತೀರ್ಮಾನಿಸಲಾಗಿದೆ. ಆಮೂಲಕ ಎಐ ಸಂಶೋಧಕರು, ಉದ್ಯಮಗಳು ಒಟ್ಟಾಗಿ ಪ್ರಗತಿ ಸಾಧಿಸಬಹುದು. ಇದು ಬೆಂಗಳೂರಿಗೆ ಮಾತ್ರ ಸೀಮಿತವಾಗದೇ ವಿಶ್ವದ ಇತರೆ ಭಾಗಗಳಿಗೂ ವಿಸ್ತರಣೆಯಾಗಲಿದೆ” ಎಂದು ವಿವರಿಸಿದರು.
ನಿಪುಣ ಕರ್ನಾಟಕ ಮೂಲಕ 33,000ಕ್ಕೂ ಹೆಚ್ಚು ಜನರಿಗೆ ಕೌಶಲ್ಯ ಮರುತರಬೇತಿ
“ಐಐಐಟಿ ರಾಯಚೂರಿನಲ್ಲಿ ಸ್ಥಾಪಿಸಲಾಗುವ ಹೆಚ್ಚುವರಿ ಉತ್ಕೃಷ್ಟತಾ ಕೇಂದ್ರವು (Centre of Excellence) ಕೃಷಿ, ಆರೋಗ್ಯ, ಶಿಕ್ಷಣ ಮತ್ತು ಸಣ್ಣ ಉದ್ಯಮಗಳಿಗೆ ಪೂರಕವಾದ ಎಐ ಅನ್ವಯಿಕೆಗಳನ್ನು ಉತ್ತರ ಕರ್ನಾಟಕದ 13 ಜಿಲ್ಲೆಗಳಿಗೆ ವಿಸ್ತರಿಸಲಿದೆ. 300 ಕೋಟಿ ರೂ. ವೆಚ್ಚದ 'ನಿಪುಣ ಕರ್ನಾಟಕ' ಕೌಶಲ್ಯ ಮರುತರಬೇತಿ ಅಭಿಯಾನದ ಅಡಿಯಲ್ಲಿ, ಸರ್ಕಾರವು ರಾಜ್ಯದ ಉದ್ಯೋಗಿಗಳನ್ನು ಉದಯೋನ್ಮುಖ ತಂತ್ರಜ್ಞಾನದ ಅಗತ್ಯಗಳಿಗೆ ಸಜ್ಜುಗೊಳಿಸುತ್ತಿದೆ. ಪ್ರಮುಖ ಜಾಗತಿಕ ತಂತ್ರಜ್ಞಾನ ಕಂಪನಿಗಳ ಸಹಭಾಗಿತ್ವದ ಮೂಲಕ, ವೃತ್ತಿಜೀವನದ ವಿರಾಮದ ನಂತರ ಮತ್ತೆ ಕೆಲಸಕ್ಕೆ ಮರಳುತ್ತಿರುವ ಮಹಿಳೆಯರು ಸೇರಿದಂತೆ 33,000ಕ್ಕೂ ಹೆಚ್ಚು ಜನರು ಈಗಾಗಲೇ ಉದ್ಯಮಕ್ಕೆ ಸಿದ್ಧರಾಗಿದ್ದಾರೆ” ಎಂದು ಮಾಹಿತಿ ನೀಡಿದರು.
“ಕರ್ನಾಟಕವು 100ಕ್ಕೂ ಹೆಚ್ಚು ಫ್ಯಾಬ್ಲೆಸ್ ಚಿಪ್ ಕಂಪನಿಗಳಿಗೆ ನೆಲೆಯಾಗಿದ್ದು, ಭಾರತದ ಸೆಮಿಕಂಡಕ್ಟರ್ ಸಾಮರ್ಥ್ಯ ಕೇಂದ್ರಗಳಲ್ಲಿ ಕೆಲಸ ಮಾಡುವ ಪ್ರತಿ ಐದು ಎಂಜಿನಿಯರ್ಗಳಲ್ಲಿ ಮೂವರು ಬೆಂಗಳೂರಿನಲ್ಲಿದ್ದಾರೆ. ಭಾರತದ ಎಲೆಕ್ಟ್ರಾನಿಕ್ಸ್ ರಫ್ತಿನಲ್ಲಿ ರಾಜ್ಯವು ಐದನೇ ಒಂದು ಭಾಗದಷ್ಟು ಪಾಲನ್ನು ಹೊಂದಿದ್ದು, ಈಗ ಸೆಮಿಕಂಡಕ್ಟರ್ ವಿನ್ಯಾಸದಿಂದ ಉತ್ಪಾದನೆಯತ್ತ ಸಾಗುತ್ತಿದೆ. ಬೆಂಗಳೂರು ಮತ್ತು ಮೈಸೂರಿನಲ್ಲಿರುವ ಸೆಮಿಕಂಡಕ್ಟರ್ ಸಂಶೋಧನೆ ಮತ್ತು ಉತ್ಪಾದನಾ ಘಟಕಗಳಲ್ಲಿ ಜಾಗತಿಕ ಕಂಪನಿಗಳು 23,000 ಕೋಟಿ ರೂ.ಗೂ ಅಧಿಕ ಹೂಡಿಕೆ ಮಾಡುತ್ತಿವೆ. ಇಂತಹ ಮಹತ್ವದ ತೀರ್ಮಾನ ಕೈಗೊಂಡಿರುವ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇವೆ” ಎಂದರು.
“ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕ್ಲಸ್ಟರ್ಗಳು ಧಾರವಾಡ, ಮೈಸೂರುಗಳಿಗೆ ವಿಸ್ತರಣೆಯಾಗುತ್ತಿದ್ದು, ಕೈಗಾರಿಕೆಗಳಿಗೆ ಭೂಮಿ, ವಿದ್ಯುತ್, ಪ್ರತಿಭೆಗಳನ್ನು ಪೂರೈಸುತ್ತಿದ್ದೇವೆ. ಎಲೆಕ್ಟ್ರಾನಿಕ್ ಡಿಸೈನ್ ಸಿಸ್ಟಮ್ ಅಂಡ್ ಮ್ಯಾನ್ಯುಫ್ಯಾಕ್ಚರಿಂಗ್ ಪಾಲಿಸಿ ಮೂಲಕ ಎಲ್ಲರಿಗೂ ನೆರವು ನೀಡಲಾಗುವುದು. ಸಾಗರ ಜೈವಿಕ ತಂತ್ರಜ್ಞಾನ ನೀತಿ, ಕರ್ನಾಟಕ ಸಾಗರ ಜೈವಿಕ ತಂತ್ರಜ್ಞಾನ ಮತ್ತು ನೀಲಿ ಆರ್ಥಿಕತೆ ಸಂಸ್ಥೆ, ಅಗ್ರಿ ಇನ್ನೋವೇಶನ್ ಪಾರ್ಕ್ ಮತ್ತು ಕೃಷಿಗಾಗಿ 'ಕೃಷಿಕಲ್ಪ' ಉತ್ಕೃಷ್ಟತಾ ಕೇಂದ್ರದಂತಹ ಉಪಕ್ರಮಗಳ ಮೂಲಕ ಸರ್ಕಾರವು ಜೈವಿಕ ತಂತ್ರಜ್ಞಾನವನ್ನು ಸಾಗರ ಸಂಪನ್ಮೂಲಗಳು, ಕೃಷಿ ಮತ್ತು ಆರೋಗ್ಯ ಕ್ಷೇತ್ರಗಳಿಗೆ ವಿಸ್ತರಿಸುತ್ತಿದೆ” ಎಂದು ವಿವರಿಸಿದರು.
ಜತೆಗೂಡಿ ಕೆಲಸ ಮಾಡೋಣ ಯಶಸ್ಸು ಸಾಧಿಸೋಣ
“ಕಳೆದ ವರ್ಷ ಬೆಂಗಳೂರು ಟೆಕ್ ಸಮಿಟ್ ನಲ್ಲಿ 67 ದೇಶಗಳು ಭಾಗಿಯಾಗಿದ್ದು, ಈ ವರ್ಷ 75ಕ್ಕೂ ಹೆಚ್ಚು ದೇಶಗಳು ಭಾಗವಹಿಸಿವೆ. 1500 ಎಕ್ಸಿಬಿಟರ್ ಗಳು, 150 ಸೆಷನ್ ಗಳಲ್ಲಿ 500ಕ್ಕೂ ಹೆಚ್ಚು ಜನ ಚರ್ಚೆ ಮಾಡಲಿದ್ದಾರೆ. 50,000 ಉದ್ಯಮಿಗಳು ಭಾಗವಹಿಸಲಿದ್ದಾರೆ. ನಾವು ನಿಮ್ಮೊಂದಿಗಿದ್ದು, ಬಂಡವಾಳ ಹೂಡಿಕೆದಾರರು, ಸಂಶೋಧಕರೊಂದಿಗೆ ಜತೆ ಕೆಲಸ ಮಾಡಲು ಮುಂದಾಗಿದ್ದಾರೆ. ಜತೆಗೂಡುವುದು ಆರಂಭ, ಜತೆಗೂಡಿ ಚರ್ಚೆಸುವುದು ಪ್ರಗತಿ, ಜತೆಗೂಡಿ ಕೆಲಸ ಮಾಡುವುದು ಯಶಸ್ಸು ಎಂದು ನಾನು ಹೇಳುತ್ತೇನೆ. ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡೋಣ, ಆಮೂಲಕ ತಂತ್ರಜ್ಞಾನದ ಮೂಲಕ ಭಾರತ ಹಾಗೂ ವಿಶ್ವದ ಸೇವೆ ಮಾಡೋಣ” ಎಂದು ಕರೆ ನೀಡಿದರು.
ಮಾಧ್ಯಮ ಪ್ರತಿಕ್ರಿಯೆ
ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ಶಿವಕುಮಾರ್ ಅವರು, “ಬೆಂಗಳೂರು ಟೆಕ್ ಸಮ್ಮಿಟ್ ನ 29ನೇ ಆವೃತ್ತಿಯಲ್ಲಿ ವಿಶ್ವದ ಅನೇಕ ನಾಯಕರು ಪಾಲ್ಗೊಂಡಿದ್ದು ಎಲ್ಲರೊಂದಿಗೂ ಪಾಲುದಾರರಾಗಲು ಸರ್ಕಾರ ಉತ್ಸುಕವಾಗಿದೆ. ಇದರಿಂದ ಭಾರತಕ್ಕೆ ಲಾಭವಾಗಲಿದೆ. ಕರ್ನಾಟಕ ಮತ್ತು ಬೆಂಗಳೂರು ಇಲ್ಲದೇ ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ಇತರೆ ದೇಶಗಳ ಹೂಡಿಕೆಗೆ ಹೋಲಿಸಿದರೆ ನಾವು ಮುಂಚೂಣಿಯಲ್ಲಿದ್ದೇವೆ. ಜಗತ್ತಿನ ಮೂರನೇ ಒಂದು ಭಾಗದಷ್ಟು ಟೆಕ್ ಕಂಪನಿಗಳು ಇಲ್ಲಿ ಸೃಷ್ಟಿಯಾಗುತ್ತಿದ್ದು, ಇದಕ್ಕಾಗಿ ನಾವು ಅನೇಕ ನೀತಿಗಳನ್ನು ಜಾರಿಗೆ ತಂದಿದ್ದೆವೆ. ಈ ನೂತನ ನೀತಿಗಳು ಕರ್ನಾಟಕ ಮತ್ತು ಬೆಂಗಳೂರಿನತ್ತ ವಿವಿಧ ಸಂಸ್ಥೆಗಳು ಹೂಡಿಕೆ ಮಾಡಲು ಆಕರ್ಷಿಸುತ್ತವೆ” ಎಂದರು.
ರಾಜ್ಯದಿಂದಲೇ ವಿಶ್ವಕ್ಕೆ ತಂತ್ರಜ್ಞಾನ ಹಂಚಿಕೆ
“ಸಚಿವ ಪ್ರಿಯಾಂಕ ಖರ್ಗೆ ಅವರ ನಾಯಕತ್ವದಲ್ಲಿ ನಡೆಯುತ್ತಿರುವ ಬೆಂಗಳೂರು ಟೆಕ್ ಸಮ್ಮಿಟ್ ನ 29ನೇ ಆವೃತ್ತಿಯು ಹೆಚ್ಚಿನ ಅವಕಾಶಗಳನ್ನು ಸೃಜಿಸಲಿದ್ದು, ಇದು ನಮಗೆ ಅತ್ಯಂತ ಹೆಮ್ಮೆಯ ಸಂಗತಿ. ಇಲ್ಲಿಗೆ ಬಂದ ಉದ್ಯಮಿಗಳು ವಾಪಸ್ಸು ಹೋಗುವುದಿಲ್ಲ. ಇಲ್ಲಿಂದಲೇ ವಿಶ್ವಕ್ಕೆ ತಂತ್ರಜ್ಞಾನವನ್ನು ಹಂಚಲಾಗುತ್ತಿದೆ. ತಂತ್ರಜ್ಞಾನವನ್ನು ಅಪ್ಪಿಕೊಳ್ಳುವ ರಾಜ್ಯ ನಮ್ಮದು. ನಮ್ಮಲಿರುವ ಪ್ರತಿಭೆಗಳಿಂದ ಜಗತ್ತು ಬೆಂಗಳೂರಿನತ್ತ ನೋಡುತ್ತಿದೆ” ಎಂದರು.






Comments
Leave a Comment