PRABHAVAA.COM

‎ಕತಾರ್ ಕರ್ನಾಟಕ ಸಂಘದ 71ನೇ ಕರ್ನಾಟಕ ರಾಜ್ಯೋತ್ಸವ ಸಂಭ್ರಮ ‘ಕರುನಾಡ ವೈಭವ-2026’

:

Font size:

‎‘ಕತಾರ್ ಕನ್ನಡ ಸಮ್ಮಾನ್’ ಪ್ರಶಸ್ತಿ ಸ್ವೀಕರಿಸಿ ಭಾವುಕರಾದ ಡಾ. ಉಮಾಶ್ರೀ

‎
‎ದೋಹಾ (ಕತಾರ್): "ನೀವು ಕತಾರ್ ನಂತಹ ಪರದೇಶದಲ್ಲಿದ್ದರೂ, ಕನ್ನಡದ ಮನಸ್ಸು ಹೊಂದಿದ್ದೀರಿ. ನೀವು ಇರುವವರೆಗೂ ಕನ್ನಡ ಎಂದಿಗೂ ಸಾಯುವುದಿಲ್ಲ. ಕನ್ನಡ ಉಳಿಯುತ್ತದೆ, ಕನ್ನಡ ಬೆಳೆಯುತ್ತದೆ" ಎಂದು ಕರ್ನಾಟಕ ವಿಧಾನಪರಿಷತ್ತಿನ ಉಪಸಭಾಪತಿಗಳು ಹಾಗೂ ಹಿರಿಯ ಕಲಾವಿದರೂ ಆದ ಡಾ. ಉಮಾಶ್ರೀ ಅವರು ಹೇಳಿದ್ದಾರೆ.
‎
‎ಕತಾರ್ ಕರ್ನಾಟಕ ಸಂಘ ಆಯೋಜಿಸಿದ್ದ 71ನೇ ಕರ್ನಾಟಕ ರಾಜ್ಯೋತ್ಸವ ಸಂಭ್ರಮ ‘ಕರುನಾಡ ವೈಭವ-2026’ ಅದ್ದೂರಿ ಸಮಾರಂಭದಲ್ಲಿ ಕೊಡಮಾಡಿದ ಪ್ರತಿಷ್ಠಿತ ‘ಕತಾರ್ ಕನ್ನಡ ಸಮ್ಮಾನ್’ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ಉಮಾಶ್ರೀ ಅವರು, ಕತಾರ್ ನಾಡಿನಲ್ಲಿ ಕನ್ನಡದ ಹೆಮ್ಮೆಯ ಪುತ್ರರೆಲ್ಲರೂ ಸೇರಿ ‘ಕರುನಾಡ ವೈಭವ’ ಎನ್ನುವಂತಹ ಶೀರ್ಷಿಕೆಯಡಿಯಲ್ಲಿ ಕನ್ನಡ ತಾಯಿ ಭುವನೇಶ್ವರಿಯನ್ನು ಸ್ಮರಿಸುವ, ಆರಾಧಿಸುವ ಮೂಲಕ ಕನ್ನಡಿಗರನ್ನೆಲ್ಲರನ್ನೂ ಇಲ್ಲಿ ಒಗ್ಗೂಡಿಸಿ, ಕಲಾ ಸಾಂಸ್ಕೃತಿಕ ರಸದೌತಣವನ್ನು ಉಣಬಡಿಸುತ್ತಿರುವುದು ಅತ್ಯಂತ ಸಂತೋಷ ತರುವಂತಹದ್ದು ಎಂದರು.
‎
‎ಸನ್ಮಾನದ ಸರ್ವಶ್ರೇಷ್ಠತೆ ಕನ್ನಡಿಗರಿಗೆ ಸಲ್ಲಿಕೆ
‎
‎"ಕರುನಾಡಿನಲ್ಲಿ ನಿಮ್ಮ ಈ ಕನ್ನಡತಿ, ಏನಾದರೂ ಒಂದಿಷ್ಟು ಕೆಲಸಗಳನ್ನು ಮಾಡಿದ್ದರೆ, ಸಾಧಿಸಿದ್ದರೆ, ಅದು ನಿಮ್ಮಗಳೆಲ್ಲರ, ರಾಜ್ಯದ ಜನರ ಹಿತಕರವಾದ ಆಶೀರ್ವಾದದಿಂದ ಈ ಸಾಧನೆಯನ್ನು ಮಾಡುವುದಕ್ಕೆ ಸಾಧ್ಯವಾಗಿದೆ. ಇದು ನನ್ನಿಂದ ಆದದ್ದಲ್ಲ; ಎಲ್ಲರಿಂದಲೂ ಆಗಿರುವಂತಹದ್ದು. ಎಲ್ಲ ಪ್ರೇಕ್ಷಕರ ಚಪ್ಪಾಳೆ, ಶಿಳ್ಳೆ, ಪ್ರೋತ್ಸಾಹ, ರಾಜಕೀಯದಲ್ಲಿ ಪ್ರೋತ್ಸಾಹ ಹೀಗೆ ಪ್ರತಿ ಹಂತದಲ್ಲೂ ಸಾರ್ವಜನಿಕರು, ಮತದಾರರು ಇಲ್ಲದೆ ಬೆಳೆಯುವುದಕ್ಕೆ ಸಾಧ್ಯವಿಲ್ಲ. ವಿಶೇಷವಾಗಿ ನನ್ನ ಕುಟುಂಬವು ಸಹ. ಹಾಗಾಗಿ, ಈ ಸಾಧನೆಯ, ಈ ಸನ್ಮಾನದ ಸರ್ವಶ್ರೇಷ್ಠತೆಯೂ ನಿಮ್ಮೆಲ್ಲರಿಗೂ ಸಲ್ಲತಕ್ಕದ್ದು" ಎಂದು ಭಾವುಕರಾಗಿ ನುಡಿದರು.
‎
‎ಕನ್ನಡ ಉಳಿಸುವ ಪ್ರಯತ್ನ ಅಸಾಧಾರಣ
‎
‎"ಕತಾರ್ ಕನ್ನಡಿಗರ ಕನ್ನಡದ ಪ್ರೇಮ, ಕನ್ನಡದ ಪ್ರೀತಿ ಅತಿಹೆಚ್ಚು ಎದ್ದು ಕಾಣುತ್ತಿರುವುದು ನನಗೆ ಖುಷಿ ನೀಡಿತು. ಮಕ್ಕಳಿಗೆ ಕನ್ನಡವನ್ನು ಕಲಿಸುತ್ತಿರುವುದು ಬಹಳ ಮುಖ್ಯವಾದುದ್ದು. ನಮ್ಮ ಕನ್ನಡಿಗರ ಮಕ್ಕಳು ಎಲ್ಲೇ ಇರಲಿ; ಕರ್ನಾಟಕದಲ್ಲೇ ಇದ್ದರೂ ಕನ್ನಡದ ಬಗ್ಗೆ ಮಾತನಾಡಿ, ಕನ್ನಡವನ್ನು ಕಲಿಯಿರಿ ಎಂದೇಳಿದರೆ, ಅಲ್ಲಿನ ಮಕ್ಕಳೇ ನಿರ್ಲಕ್ಷ್ಯ ತೋರುವಂತಹ ಈ ಕಾಲದಲ್ಲಿ, ಇಷ್ಟು ದೂರದ ನಾಡಿನಲ್ಲಿ ನೀವು ಕನ್ನಡವನ್ನು ಉಳಿಸುವುದಕ್ಕೆ ಕಷ್ಟಪಡುತ್ತಿರುವುದು, ಪ್ರಯತ್ನ ಮಾಡುತ್ತಿರುವುದು ಸಾಧಾರಣವಾದ ವಿಷಯವಲ್ಲ" ಎಂದು ಪ್ರಶಂಸೆ ವ್ಯಕ್ತಪಡಿಸಿದರು.
‎
‎ಕತಾರ್ ಕನ್ನಡಿಗರ ಸಮ್ಮಿಲನ
‎
‎ಖ್ಯಾತ ಹೃದ್ರೋಗ ತಜ್ಞ ಹಾಗೂ ಸಂಸದ ಡಾ. ಸಿ.ಎನ್. ಮಂಜುನಾಥ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಶಾಸಕರಾದ ಮೊಯಿನುದ್ದೀನ್ ಬಾವ, ಕತಾರ್ ಕರ್ನಾಟಕ ಸಂಘದ ಅಧ್ಯಕ್ಷರಾದ ಸುಬ್ರಹ್ಮಣ್ಯ, ಮಾಜಿ ಅಧ್ಯಕ್ಷರಾದ ರವಿ ಶೆಟ್ಟಿ, ಕನ್ನಡ ಪ್ರಾಧಿಕಾರದ ಕಾರ್ಯದರ್ಶಿಗಳಾದ ಸಂತೋಷ್ ಹಾನಗಲ್, ಭಾರತೀಯ ರಾಯಭಾರ ಕಚೇರಿಯ ಆಶ್ರಯದಲ್ಲಿ ಕಾರ್ಯನಿರ್ವಹಿಸುವ ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷರಾದ ಮಣಿಕಂಠನ್ ಸೇರಿದಂತೆ ಕತಾರ್ ನಲ್ಲಿರುವ ನೂರಾರು ಕನ್ನಡಿಗರು, ಉದ್ಯಮಿಗಳು, ಕಲಾವಿದರು ಭಾಗವಹಿಸಿದ್ದರು.
‎
‎ಕರ್ನಾಟಕದ ಖ್ಯಾತ ಕಲಾವಿದರಿಂದ ಹಾಸ್ಯ, ಸಂಗೀತ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಭಾರತೀಯ ರಾಯಭಾರ ಕಚೇರಿಯ ಆಶ್ರಯದಲ್ಲಿ ಕಾರ್ಯನಿರ್ವಹಿಸುವ ಭಾರತೀಯ ಸಾಂಸ್ಕೃತಿಕ ಕೇಂದ್ರದ ಸಂಯೋಜಿತ ಸಂಸ್ಥೆಯಾಗಿರುವ ಕರ್ನಾಟಕ ಸಂಘವು ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.
‎

‎ಕತಾರ್ ಕನ್ನಡಿಗರಿಗೊಂದು ಸಲಾಂ - ಡಾ. ಉಮಾಶ್ರೀ
‎
‎"ಕತಾರ್ ನಂತಹ ದೂರದ ನಾಡಿನವರೆಗೂ ಬಂದು ಇಲ್ಲಿ ಸಂತೋಷದಿಂದ ಇಲ್ಲಿನ ನಾಡಿನ ಎಲ್ಲ ರೀತಿಯ ನೀತಿ ನಿಯಮಗಳನ್ನು ಅನುಸರಿಸಿಕೊಂಡು, ದೂರದ ನಾಡಿನಲ್ಲಿ ನಿಮ್ಮೆಲ್ಲರ ಬಂಧುಗಳನ್ನು ಬಿಟ್ಟು, ಮಕ್ಕಳನ್ನು ನಿಮ್ಮ ಜೊತೆಯಲ್ಲಿ ಇಟ್ಟುಕೊಂಡು ತಾವಿಲ್ಲಿ ಬದುಕುತ್ತಿದ್ದೀರಿ ಎಂದರೆ, ಬಹಳ ಕಷ್ಟಕರವಾದದ್ದು ಎಂದು ನಾವು ಅಂದುಕೊಳ್ಳುತ್ತೇವೆ. ಆದರೆ, ನೀವೆಲ್ಲರೂ ಅತ್ಯಂತ ಸಂತೋಷದಿಂದ ಅದನ್ನು ಸ್ವೀಕರಿಸಿ, ಅದನ್ನು ಒಂದು ಬದುಕಿನ ಭಾಗವಾಗಿ ತೆಗೆದುಕೊಂಡು ಬದುಕನ್ನು ನಿರ್ವಹಿಸುತ್ತಾ ಇದ್ದೀರಲ್ಲ, ಇದು ನಿಜಕ್ಕೂ ಒಂದು ರೀತಿಯ ಸಾಧನೆಯೇ. ಇದು ಅಷ್ಟು ಸುಲಭವಾದ ಮಾತಲ್ಲ" ಎಂದು ಉಮಾಶ್ರೀ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
‎
‎"ನಾವು ಹುಟ್ಟಿಬೆಳೆದ ನಾಡಿನಲ್ಲೇ ನಮ್ಮ ಅಕ್ಕಪಕ್ಕದವರೇ ಅನೇಕ ವರ್ಷಗಳಿಂದ ನಮ್ಮ ಕಣ್ಣ ಮುಂದೆ ಇದ್ದರೂ ಕೂಡ ನೆಮ್ಮದಿಯ ಬದುಕನ್ನು ಕಾಣುವುದಕ್ಕೆ ಎಷ್ಟೊಂದು ಕಷ್ಟಪಡುತ್ತೇವೆ. ಬದುಕನ್ನು ಕಟ್ಟಿಕೊಳ್ಳುವುದಕ್ಕೆ ಕಷ್ಟಪಡುತ್ತೇವೆ. ಬಂಧುಬಳಗ ಕಷ್ಟಕ್ಕೆ ಸುಖಕ್ಕೆ ತತಕ್ಷಣವೇ ಬಂದು ನಿಲ್ಲುವಂತೆ ಅವಕಾಶಗಳಿದ್ದರೂ ಕೂಡ ಎಷ್ಟೋ ನೆಮ್ಮದಿರಹಿತವಾದ ಬದುಕನ್ನು ಕಾಣುತ್ತಿರುತ್ತೇವೆ. ಆದರೆ, ಯಾವುದೇ ಸಹಕಾರ, ಸೌಲಭ್ಯಗಳು ಇಲ್ಲದೆ ಬದುಕುತ್ತಿರುವ ನಿಮಗೆ ನೀವೇ ಬಂಧು, ನಿಮ್ಮ ಸುತ್ತಮುತ್ತ ಇರುವ ಎಲ್ಲ ಕನ್ನಡಿಗರು ಒಬ್ಬರಿಗೊಬ್ಬರು ಬಂಧುಗಳಾಗಿ ಇಲ್ಲಿ ಬದುಕನ್ನು ನಿರ್ವಹಿಸುತ್ತಿರುವುದು ವಿಶೇಷವಾದದ್ದು ಮತ್ತು ವಿಶಿಷ್ಟವಾದದ್ದು ಕೂಡ. ಹಾಗಾಗಿ ಈ ನಿಮ್ಮ ಬದುಕಿನ ಸಾಧನೆಯ ಹೆಜ್ಜೆಗಳಿಗೆ ನನ್ನದೊಂದು ಸಲಾಂ" ಎಂದು ಡಾ. ಉಮಾಶ್ರೀ ಭಾವುಕರಾದರು.
‎
‎
‎ಹೃದಯಪೂರ್ವಕ ಕೃತಜ್ಞತೆಗಳು
‎"ಕತಾರ್ ಕರ್ನಾಟಕ ಸಂಘ ನನ್ನಂತಹ ಒಬ್ಬ ಕಲಾವಿದೆಯನ್ನು, ಒಬ್ಬ ಹೆಣ್ಣು ಮಗಳನ್ನು ದೂರದ ನಾಡಿನಿಂದ ಕರೆಯಿಸಿ ಇಲ್ಲಿ ಸನ್ಮಾನಿಸಿದ್ದಕ್ಕೆ ಕತಾರ್ ಕನ್ನಡಿಗರೆಲ್ಲರಿಗೂ ಅತ್ಯಂತ ಹೃದಯಪೂರ್ವಕ ಕೃತಜ್ಞತೆಗಳು."
‎- ಡಾ. ಉಮಾಶ್ರೀ, ಉಪಸಭಾಪತಿಗಳು ಮತ್ತು ಹಿರಿಯ ಕಲಾವಿದರು
‎

Comments

Leave a Comment

Prev Post ಬಿಜೆಪಿ ಅಧಿಕಾರಕ್ಕೆ ಬಂದರೆ ಎಲ್ಲಾ ಗ್ಯಾರಂಟಿಗಳಿಗೆ ಕುತ್ತು: ಸಿಎಂ ಡಿ ಕೆ ಶಿವಕುಮಾರ್
Next Post "ಕರುನಾಡಿನಿಂದ ಕತಾರ್‌ವರೆಗೆ ಕನ್ನಡದ ಕಂಪು: ಕನ್ನಡಿಗರ ಒಗ್ಗಟ್ಟಿಗೆ ಉಮಾಶ್ರೀ ಮೆಚ್ಚುಗೆ"

ಸೀಮಿತ ತೈಲ ಸಂಪತ್ತು; ಸೌರಶಕ್ತಿ ಮತ್ತು ಇತರ ನವೀಕರಿಸಬಹುದಾದ ಇಂಧನಗಳೇ ಭವಿಷ್ಯದ ಮಾರ್ಗ

ಸೀಮಿತ ತೈಲ ಸಂಪತ್ತು; ಸೌರಶಕ್ತಿ ಮತ್ತು ಇತರ ನವೀಕರಿಸಬಹುದಾದ ಇಂಧನಗಳೇ ಭವಿಷ್ಯದ ಮಾರ್ಗ

ಕೆನಡಾ ಹೂಡಿಕೆ ಉತ್ಸಾಹ: ಸಿಎಂ ಸಿದ್ದರಾಮಯ್ಯ ಜೊತೆ ಕ್ರಿಸ್ ಕೂಟರ್ ಮಾತುಕತೆ

ಕೆನಡಾ ಹೂಡಿಕೆ ಉತ್ಸಾಹ: ಸಿಎಂ ಸಿದ್ದರಾಮಯ್ಯ ಜೊತೆ ಕ್ರಿಸ್ ಕೂಟರ್ ಮಾತುಕತೆ

"ಕರುನಾಡಿನಿಂದ ಕತಾರ್‌ವರೆಗೆ ಕನ್ನಡದ ಕಂಪು: ಕನ್ನಡಿಗರ ಒಗ್ಗಟ್ಟಿಗೆ ಉಮಾಶ್ರೀ ಮೆಚ್ಚುಗೆ"

"ಕರುನಾಡಿನಿಂದ ಕತಾರ್‌ವರೆಗೆ ಕನ್ನಡದ ಕಂಪು: ಕನ್ನಡಿಗರ ಒಗ್ಗಟ್ಟಿಗೆ ಉಮಾಶ್ರೀ ಮೆಚ್ಚುಗೆ"

Read all News