2027–28ರ ಬಜೆಟ್‌ನಲ್ಲಿ ₹100 ಕೋಟಿ ಪ್ರಸ್ತಾವನೆ ಸಿದ್ಧಪಡಿಸಲು ಸೂಚನೆ
ಖಾದಿಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಲು ರಾಯಭಾರಿಗಳ ನೇಮಕ: ಕಾಶಪ್ಪನವರ
2027–28ರ ಬಜೆಟ್‌ನಲ್ಲಿ ₹100 ಕೋಟಿ ಪ್ರಸ್ತಾವನೆ ಸಿದ್ಧಪಡಿಸಲು ಸೂಚನೆ
ಬೆಂಗಳೂರು- ಕರ್ನಾಟಕದ ಖಾದಿ ಉತ್ಪನ್ನಗಳನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸಿ, ಜಾಗತಿಕ ಮಾರುಕಟ್ಟೆಯಲ್ಲಿ ಖಾದಿಗೆ ಬೇಡಿಕೆ ಹೆಚ್ಚಿಸುವ ನಿಟ್ಟಿನಲ್ಲಿ ವಿಶೇಷ ಕಾರ್ಯಯೋಜನೆ ರೂಪಿಸಬೇಕು. ಖಾದಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿವಿಧ ದೇಶಗಳಲ್ಲಿ ರಾಯಭಾರಿಗಳ ರೀತಿಯಲ್ಲಿ ಕಾರ್ಯನಿರ್ವಹಿಸುವ ವ್ಯಕ್ತಿಗಳನ್ನು ಗುರುತಿಸಿ ನೇಮಿಸಿಕೊಳ್ಳಬೇಕು ಎಂದು ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಹಾಗೂ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ವಿಜಯಾನಂದ ಎಸ್. ಕಾಶಪ್ಪನವರ ಅಧಿಕಾರಿಗಳಿಗೆ ಸೂಚಿಸಿದರು.
ಬೆಂಗಳೂರಿನ ಖಾದಿ ಭವನದಲ್ಲಿ ನಡೆದ ಖಾದಿ, ಉಣ್ಣೆ ಮತ್ತು ರೇಷ್ಮೆ ಸಂಘ-ಸಂಸ್ಥೆಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಖಾದಿ ಕೇವಲ ಸಾಂಪ್ರದಾಯಿಕ ಉಡುಪು ಮಾತ್ರವಲ್ಲ. ಕರ್ನಾಟಕದ ಗ್ರಾಮೀಣ ಪ್ರದೇಶಗಳ ಸಾವಿರಾರು ಕಸುಬುದಾರರ ಜೀವನಾಧಾರವಾಗಿರುವ ಈ ಉದ್ಯಮಕ್ಕೆ ಆಧುನಿಕ ಮಾರುಕಟ್ಟೆ ಮತ್ತು ಜಾಗತಿಕ ಬ್ರ್ಯಾಂಡಿಂಗ್ ಅಗತ್ಯವಿದೆ ಎಂದರು.
ಖಾದಿಯನ್ನು ಅಂತರಾಷ್ಟ್ರೀಯ ಬ್ರ್ಯಾಂಡ್ ಆಗಿ ರೂಪಿಸುವ ಉದ್ದೇಶದಿಂದ, ವಿದೇಶಗಳಲ್ಲಿ ಖಾದಿಯ ಪ್ರಚಾರಕ್ಕೆ ನೆರವಾಗುವಂತಹ ರಾಯಭಾರಿಗಳನ್ನು ನೇಮಿಸಿಕೊಳ್ಳುವ ಸಾಧ್ಯತೆಗಳನ್ನು ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ವಿದೇಶಿ ಮಾರುಕಟ್ಟೆಯಲ್ಲಿ ಕರ್ನಾಟಕದ ಖಾದಿ, ರೇಷ್ಮೆ ಮತ್ತು ಉಣ್ಣೆ ಉತ್ಪನ್ನಗಳಿಗೆ ಅವಕಾಶ ಕಲ್ಪಿಸಲು ರಫ್ತು, ಆನ್‌ಲೈನ್ ಮಾರಾಟ, ಬ್ರ್ಯಾಂಡಿಂಗ್ ಮತ್ತು ಆಧುನಿಕ ಮಾರುಕಟ್ಟೆ ವ್ಯವಸ್ಥೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಹೇಳಿದರು.
₹100 ಕೋಟಿ ಪ್ರಸ್ತಾವನೆ ಸಿದ್ಧಪಡಿಸಲು ಸೂಚನೆ
ಖಾದಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಅಗತ್ಯವಿರುವ ಅನುದಾನವನ್ನು ಹೆಚ್ಚಿಸುವ ಉದ್ದೇಶದಿಂದ 2027–28ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ₹100 ಕೋಟಿ ಮೊತ್ತದ ವಿಶೇಷ ಪ್ರಸ್ತಾವನೆ ಸಿದ್ಧಪಡಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
ಈ ಅನುದಾನವನ್ನು ಖಾದಿ ಉತ್ಪಾದನಾ ಸಂಸ್ಥೆಗಳ ಮೂಲಸೌಕರ್ಯ ಅಭಿವೃದ್ಧಿ, ಆಧುನಿಕ ಯಂತ್ರೋಪಕರಣಗಳ ಅಳವಡಿಕೆ, ಸಾಮಾನ್ಯ ಸೇವಾ ಕೇಂದ್ರಗಳ ಸ್ಥಾಪನೆ, ಮಾರುಕಟ್ಟೆ ವಿಸ್ತರಣೆ, ಬ್ರ್ಯಾಂಡಿಂಗ್, ಡಿಜಿಟಲ್ ಹಾಗೂ ಆನ್‌ಲೈನ್ ಮಾರುಕಟ್ಟೆ ವ್ಯವಸ್ಥೆ, ಕಸುಬುದಾರರ ಕಲ್ಯಾಣ ಸೇರಿದಂತೆ ವಿವಿಧ ಉದ್ದೇಶಗಳಿಗೆ ಬಳಸುವಂತೆ ಸಮಗ್ರ ಯೋಜನೆ ರೂಪಿಸಬೇಕು ಎಂದು ನಿರ್ದೇಶನ ನೀಡಿದರು.
ರಾಜ್ಯದಲ್ಲಿ ಪ್ರಸ್ತುತ 207 ಖಾದಿ ಸಂಘ-ಸಂಸ್ಥೆಗಳು ನೋಂದಣಿಯಾಗಿದ್ದು, 180 ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. 196 ಖಾದಿ ಭಂಡಾರಗಳು ವಿವಿಧ ಜಿಲ್ಲೆ, ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿವೆ. ಅರಳೆ ಖಾದಿ, ಉಣ್ಣೆ ಖಾದಿ ಮತ್ತು ರೇಷ್ಮೆ ಖಾದಿ ಕ್ಷೇತ್ರಗಳಲ್ಲಿ ಸಾವಿರಾರು ನೂಲುಗಾರರು, ನೇಕಾರರು ಹಾಗೂ ಇತರ ಕಸುಬುದಾರರು ತೊಡಗಿಸಿಕೊಂಡಿದ್ದಾರೆ.
ಕಸುಬುದಾರರ ಆದಾಯ ಹೆಚ್ಚಳಕ್ಕೆ ಆದ್ಯತೆ
ಖಾದಿ ಉದ್ಯಮವನ್ನು ಪುನಶ್ಚೇತನಗೊಳಿಸುವ ಸಂದರ್ಭದಲ್ಲಿ ಕಸುಬುದಾರರ ಆದಾಯ ಮತ್ತು ಜೀವನಮಟ್ಟ ಸುಧಾರಿಸುವುದಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಕಾಶಪ್ಪನವರ ಹೇಳಿದರು.
ಖಾದಿ ಉತ್ಪಾದನಾ ಸಂಸ್ಥೆಗಳಿಗೆ ಮೂಲಸೌಕರ್ಯ ಕಲ್ಪಿಸುವುದು, ಶೆಡ್‌ಗಳ ನಿರ್ಮಾಣ ಮತ್ತು ನವೀಕರಣ, ಆಧುನಿಕ ಯಂತ್ರೋಪಕರಣಗಳ ಅಳವಡಿಕೆ, ಸಿದ್ಧ ಉಡುಪುಗಳ ತಯಾರಿಕೆ, ಪ್ಯಾಕೇಜಿಂಗ್, ಗುಣಮಟ್ಟ ಪರೀಕ್ಷೆ, ಬಣ್ಣ ಹಚ್ಚುವಿಕೆ ಹಾಗೂ ಆನ್‌ಲೈನ್ ಮಾರುಕಟ್ಟೆ ವ್ಯವಸ್ಥೆ ಅಭಿವೃದ್ಧಿಪಡಿಸಬೇಕಿದೆ. ಈ ಎಲ್ಲ ಕ್ಷೇತ್ರಗಳನ್ನು ಒಳಗೊಂಡ ಸಮಗ್ರ ಯೋಜನೆಯನ್ನು ರೂಪಿಸಬೇಕು ಎಂದರು.
ಸರ್ಕಾರದ ವಿವಿಧ ಇಲಾಖೆಗಳು ಹಾಗೂ ಸಂಸ್ಥೆಗಳ ಸಮವಸ್ತ್ರ ಖರೀದಿಯಲ್ಲಿ ಖಾದಿ ಆಧಾರಿತ ಉತ್ಪನ್ನಗಳಿಗೆ ಆದ್ಯತೆ ನೀಡುವ ಕುರಿತು ಅಗತ್ಯ ಕ್ರಮ ಕೈಗೊಳ್ಳಬೇಕು. ಇದರಿಂದ ಖಾದಿ ಉತ್ಪನ್ನಗಳಿಗೆ ಸ್ಥಿರ ಮಾರುಕಟ್ಟೆ ಸೃಷ್ಟಿಯಾಗುವುದರ ಜೊತೆಗೆ ಗ್ರಾಮೀಣ ಕಸುಬುದಾರರಿಗೆ ನಿರಂತರ ಉದ್ಯೋಗಾವಕಾಶ ದೊರೆಯಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಜಿಲ್ಲಾಮಟ್ಟದಲ್ಲಿ ಖಾದಿ ಶೋರೂಂ
ಖಾದಿ ಉತ್ಪನ್ನಗಳ ಬಗ್ಗೆ ಸಾರ್ವಜನಿಕರಲ್ಲಿ ವಿಶ್ವಾಸ ಹೆಚ್ಚಿಸಲು ಕಾವೇರಿ ಎಂಪೋರಿಯಂ ಮಾದರಿಯಲ್ಲಿ ಜಿಲ್ಲಾಕೇಂದ್ರಗಳಲ್ಲಿ ಖಾದಿ ಶೋರೂಂಗಳನ್ನು ಸ್ಥಾಪಿಸುವ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಸೂಚಿಸಿದರು.
ಖಾದಿ ಉತ್ಪನ್ನಗಳಿಗೆ ಜನಸ್ನೇಹಿ ಬ್ರ್ಯಾಂಡಿಂಗ್ ಮಾಡಬೇಕು. ಜನಪ್ರಿಯ ವ್ಯಕ್ತಿಗಳನ್ನು ಬ್ರ್ಯಾಂಡ್ ಅಂಬಾಸಿಡರ್‌ಗಳಾಗಿ ಬಳಸಿಕೊಂಡು ಯುವಜನರಲ್ಲಿ ಖಾದಿ ಬಳಕೆಯನ್ನು ಹೆಚ್ಚಿಸುವ ಕಾರ್ಯಕ್ರಮ ರೂಪಿಸಬೇಕು. ದೇಶೀಯ ಮಾರುಕಟ್ಟೆಯ ಜತೆಗೆ ಅಂತರಾಷ್ಟ್ರೀಯ ಮಾರುಕಟ್ಟೆಯನ್ನೂ ಗುರಿಯಾಗಿಸಿಕೊಂಡು ಹೊಸ ವಿನ್ಯಾಸ ಮತ್ತು ಗುಣಮಟ್ಟದ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಹೇಳಿದರು.
ಖಾದಿ ಕ್ಷೇತ್ರದ ಅಭಿವೃದ್ಧಿಗೆ ಮಾರುಕಟ್ಟೆ ಅಭಿವೃದ್ಧಿ ಸಹಾಯಧನ ಹಾಗೂ ಪ್ರೋತ್ಸಾಹ ಮಜೂರಿ ಸೇರಿದಂತೆ ಸರ್ಕಾರದ ನೆರವು ಮುಂದುವರಿಯಬೇಕು. ಬಾಕಿ ಇರುವ ಎಂ.ಡಿ.ಎ. ಅನುದಾನ ವಿತರಣೆಗೆ ಕ್ರಮ ಕೈಗೊಳ್ಳಬೇಕು ಹಾಗೂ ಕಸುಬುದಾರರಿಗೆ ನೀಡುವ ಸಹಾಯಧನವನ್ನು ಕನಿಷ್ಠ ವೇತನದ ಮಟ್ಟಕ್ಕೆ ಹೊಂದಿಸುವ ಕುರಿತು ಪರಿಶೀಲನೆ ನಡೆಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸಭೆಯಲ್ಲಿ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಹಾಗೂ ಮಸ್ಕಿ ಶಾಸಕ ಬಸನಗೌಡ ತುರುವಿಹಾಳ,ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಟೇಶ್ ಸೇರಿದಂತೆ ಖಾದಿ, ಉಣ್ಣೆ ಮತ್ತು ರೇಷ್ಮೆ ಕ್ಷೇತ್ರದ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.






Comments
Leave a Comment