ಎಥೆನಾಲ್ ಗೊಂದಲಕ್ಕೆ ಕೇಂದ್ರ ಸರ್ಕಾರವೇ ಕಾರಣ: ತನಿಖೆಗೆ ಎಂ ಬಿ ಪಾಟೀಲ ಆಗ್ರಹ
ಬೆಂಗಳೂರು: ಎಥನಾಲ್ ಉತ್ಪಾದನೆಗೆ ಅಗತ್ಯಕ್ಕಿಂತ ಹೆಚ್ಚು ಒತ್ತು ನೀಡಿದ ಕೇಂದ್ರದ ಬಿಜೆಪಿ ಸರಕಾರವು ಈಗ ಶೇಕಡ 20-30ರಷ್ಟನ್ನೂ ಸ್ವೀಕರಿಸುತ್ತಿಲ್ಲ. ಇದರ ಹಿಂದೆ ಅವ್ಯವಹಾರ ನಡೆದಿದೆ ಎನ್ನುವ ರಾಹುಲ್ ಗಾಂಧಿ ಮತ್ತು ಸಚಿವ ರಿಜ್ವಾನ್ ಅರ್ಷದ್ ಆರೋಪದಲ್ಲಿ ಸತ್ಯಾಂಶವಿದೆ. ಎಥೆನಾಲ್ ಗೆ ಸಂಬಂಧಿಸಿದಂತೆ ಈಗಿನ ಸಮಸ್ಯೆಗೆ ಕೇಂದ್ರ ಸರಕಾರದ ಎಡವಟ್ಟುಗಳೇ ಕಾರಣ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.
ಭಾನುವಾರ ಅವರು ಇಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ, ದೀಪಾವಳಿ ಶುಭಾಶಯ ತಿಳಿಸಿದ ನಂತರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದರು.
ಎಥೆನಾಲ್ ವಿಚಾರದಲ್ಲಿ ಕೇಂದ್ರ ಸರಕಾರ ಎಲ್ಲವನ್ನೂ ಗಬ್ಬೆಬ್ಬಿಸಿದೆ. ಅವರು ಮನಸ್ಸಿಗೆ ಬಂದಂತೆ ಇ-10, ಇ-20, ಇ-30 ಎಂದೆಲ್ಲ ಹೇಳುತ್ತಿದ್ದಾರೆ. ಮೊದಲು ಉತ್ಪಾದನೆ ಮಾಡುವಂತೆ ಹೇಳಿದ ಮೇಲೆ ಅದನ್ನು ಖರೀದಿಸಬೇಕು. ಆದರೆ ಕೇಂದ್ರ ಸರಕಾರವು ಶೇಕಡ 20-30ರಷ್ಟು ಉತ್ಪಾದಿತ ಎಥೆನಾಲನ್ನೂ ಖರೀದಿಸುತ್ತಿಲ್ಲ. ಸಹಜವಾಗಿಯೇ ಕೈಗಾರಿಕೆಯವರು ಏನು ಮಾಡಬೇಕೆನ್ನುವ ಪ್ರಶ್ನೆ ಬರುತ್ತದೆ ಎಂದು ಅವರು ಟೀಕಿಸಿದ್ದಾರೆ.
ಎಥೆನಾಲ್ ಅನ್ನು ಪೆಟ್ರೋಲ್ ಜತೆ ನಿಗದಿಗಿಂತ ಹೆಚ್ಚು ಮಿಶ್ರಣ ಮಾಡಿರುವ ಕುರಿತು ತನಿಖೆ ನಡೆಯಬೇಕು ಎಂದು ರಾಹುಲ್ ಗಾಂಧಿಯವರು ಆಗ್ರಹಿಸಿರುವುದು ನ್ಯಾಯಯುತವಾಗಿದೆ. ಅವರು ಆರೋಪವನ್ನು ನಿರಾಕರಿಸಿದ ಮಾತ್ರಕ್ಕೆ ಎಲ್ಲವೂ ಸರಿಯಾಗಿದೆ ಎಂದರ್ಥವಲ್ಲ. ಹಾಗೆ ನೋಡಿದರೆ, ಕೇಂದ್ರ ಸರಕಾರ ತನ್ನ ತಪ್ಪನ್ನು ಯಾವತ್ತೂ ಒಪ್ಪಿಕೊಂಡಿಲ್ಲ. ರಾಜ್ಯ ಸರಕಾರ ಕೂಡ ಇದರ ಬಗ್ಗೆ ಕ್ರಮ ವಹಿಸಲಿದೆ. ಆಹಾರ ಸಚಿವ ರಿಜ್ವಾನ್ ಅರ್ಷದ್ ಇದರ ಬಗ್ಗೆ ತೀರ್ಮಾನಿಸುತ್ತಾರೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಹಾಸನ ಜಿಲ್ಲಾಧಿಕಾರಿಯನ್ನು ಅದೇ ಹುದ್ದೆಯಲ್ಲಿ ಮುಂದುವರಿಸಿರುವುದಕ್ಮೆ ಸಂಬಂಧಿಸಿದಂತೆ ಕೇಂದ್ರ ಸಚಿವ ಕುಮಾರಸ್ವಾಮಿ ಆಧಾರರಹಿತ ಆರೋಪ ಮಾಡಿದ್ದಾರೆ. ಬಹುಶಃ ಕುಮಾರಸ್ವಾಮಿ ತಾವು ಮುಖ್ಯಮಂತ್ರಿಗಳಾಗಿದ್ದಾಗ ಹೀಗೆ ಮಾಡಿರಬೇಕು ಎಂದು ಅವರು ಹರಿಹಾಯ್ದಿದ್ದಾರೆ.
ಅವರು ಸ್ವತಃ ಮುಖ್ಯಮಂತ್ರಿಗಳಾಗಿದ್ದವರು. ಹೀಗೆಲ್ಲ ಬಾಯಿಗೆ ಬಂದಂತೆ ಮಾತನಾಡಬಾರದು. ಯಾರಾದರೂ ಜಿಲ್ಲಾಧಿಕಾರಿ ಹತ್ತಿರ ಹಣ ತೆಗೆದುಕೊಳ್ಳುತ್ತಾರೇನು? ಪ್ರತಿ ನಿತ್ಯವೂ ಇಂತಹ ಇಲ್ಲಸಲ್ಲದ ವಿಚಾರಗಳ ಬಗ್ಗೆ ಮಾತನಾಡುವುದನ್ನು ಅವರು ಬಿಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಕುಮಾರಸ್ವಾಮಿ ಈಗ ಕೇಂದ್ರ ಕೈಗಾರಿಕಾ ಮಂತ್ರಿ. ಅವರು ಮಂಡ್ಯದಲ್ಲಿ ವಾಹನ ಪರೀಕ್ಷಾ ಮತ್ತು ತರಬೇತಿ ಕೇಂದ್ರ ಸ್ಥಾಪನೆಗೆ 100 ಎಕರೆ ಕೇಳಿದ್ದರು. ನಾವು ಅದಕ್ಕೆ ಒಪ್ಪಿಕೊಂಡಿದ್ದೆವು. ಈಗ 500 ಎಕರೆ ಬೇಕು ಅನ್ನುತ್ತಿದ್ದಾರೆ. ನಾವು ಇದಕ್ಕೂ ಸಿದ್ಧವಿದ್ದೇವೆ. ಮುಖ್ಯಮಂತ್ರಿ ತೀರ್ಮಾನ ಮಾಡ್ತಾರೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಅವರು ರಾಜ್ಯಕ್ಕೆ ಪರೀಕ್ಷಾ ಮತ್ತು ತರಬೇತಿ ಕೇಂದ್ರ ತರುತ್ತಿರುವುದು ಸ್ವಾಗತಾರ್ಹವಾಗಿದೆ. ಆದರೆ ಅದೊಂದೇ ಸಾಲದು. ಅವರಿಗೆ ರಾಜ್ಯದ ಹಿತಾಸಕ್ತಿ ಮುಖ್ಯವಾಗಿದ್ದರೆ ನಾಲ್ಕು ಸೆಮಿಕಂಡಕ್ಟರ್ ಕಂಪನಿಗಳನ್ನು ತರಬೇಕು. ಆದರೆ ಇಲ್ಲಿಗೆ ಬರಲು ಆಸಕ್ತವಾಗಿರುವ ಕಂಪನಿಗಳಿಗೆ ಪಿಎಲ್ಐ ಆಸೆ ತೋರಿಸಿ ಅವುಗಳನ್ನು ಬಿಜೆಪಿ ಆಡಳಿತದ ಅಸ್ಸಾಂ, ಮಹಾರಾಷ್ಟ್ರ, ಗುಜರಾತ್ ಮುಂತಾದ ರಾಜ್ಯಗಳಿಗೆ ಕೇಂದ್ರ ಸರ್ಕಾರ ತೋರಿಸುತ್ತಿದೆ. ಇದರ ಬಗ್ಗೆ ಸೊಲ್ಲೆತ್ತಲಿ. ಅಲ್ಲದೆ, ಹೋಂಡಾ ಕಂಪನಿ ರಾಜ್ಯ ಬಿಟ್ಟು ಹೋಗುತ್ತಿದೆ ಎಂದು ಸುಳ್ಳು ಹೇಳುತ್ರಿದ್ದಾರೆ ಎಂದು ಅವರು ಟೀಕಿಸಿದರು.
ಕೃಷ್ಣಾ ವಿವಾದ: ಕೇಂದ್ರ ಮತ್ತು ಮಹಾರಾಷ್ಟ್ರಕ್ಕೆ ಪತ್ರ
ಮಹಾರಾಷ್ಟ್ರ ಸರಕಾರವು ಉಜ್ಜಿನಿ ಬಳಿ 40 ಟಿಎಂಸಿ ಸಾಮರ್ಥ್ಯದ ಅಣೆಕಟ್ಟು ಕಟ್ಟಲು ಮುಂದಾಗುತ್ತಿದೆ ಎನ್ನುವ ಸುದ್ದಿ ಇದೆ. ಇದು ಕೃಷ್ಣಾ ನದಿ ನೀರಿನ ವಿಚಾರದಲ್ಲಿ ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶಕ್ಕೆ ಅನ್ಯಾಯ ಮಾಡಿದಂತಾಗುತ್ತದೆ. ಇದರ ವಿರುದ್ಧ ಕೇಂದ್ರ ಜಲ ಸಂಪನ್ಮೂಲ ಸಚಿವರು ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಗೆ ಪತ್ರ ಬರೆಯಲಾಗುವುದು ಎಂದು ಅವರು ತಿಳಿಸಿದ್ದಾರೆ.
ಮಹಾರಾಷ್ಟ್ರದ ತೀರ್ಮಾನವು ಕೃಷ್ಣಾ ನ್ಯಾಯಾಧಿಕರಣದ ತೀರ್ಪಿಗೆ ವಿರುದ್ಧವಾಗಿದೆ. ಇಂತಹ ಯೋಜನೆಗೆ ವಿಶ್ವಬ್ಯಾಂಕ್ ಹೇಗೆ ಹಣ ಕೊಡುತ್ತದೆ ಎನ್ನುವ ಪ್ರಶ್ನೆ ಬರುತ್ತದೆ ಎಂದು ಪಾಟೀಲ ಕೇಳಿದ್ದಾರೆ.





Comments
Leave a Comment