ಮನುಷ್ಯತ್ವ ಇಲ್ಲದ ಕಾಂಗ್ರೆಸ್ ಸರಕಾರ: ಬಿ.ವೈ.ವಿಜಯೇಂದ್ರ
ಚಿತ್ರದುರ್ಗ: ಡಿ.ಕೆ.ಶಿವಕುಮಾರ್ ಅವರ ನೇತೃತ್ವದ ರಾಜ್ಯದ ಕಾಂಗ್ರೆಸ್ ಸರಕಾರವು ಮನುಷ್ಯತ್ವ ಇಲ್ಲದ ಸರಕಾರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ತಿಳಿಸಿದ್ದಾರೆ.
ದೇಶವನ್ನು ಅಸ್ಥಿರಗೊಳಿಸಲು ಹೊರಟಿರುವ ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳ ಷಡ್ಯಂತ್ರದ ವಿರುದ್ಧ ಚಿತ್ರದುರ್ಗದಲ್ಲಿ ಇಂದು ಏರ್ಪಡಿಸಿದ್ದ ಜಾಗೃತಿ ಅಭಿಯಾನ “ಪ್ರಜಾಪ್ರಭುತ್ವ ಉಳಿಸಿ ಅರಾಜಕತೆ ಅಳಿಸಿ” ಪಾದಯಾತ್ರೆಯ ಸಂದರ್ಭದಲ್ಲಿ ಅವರು ಮಾತನಾಡಿದರು. ಹಾಲಿನ ದರ ಏರಿಸಿದ ಈ ಸರಕಾರ, ಇದೀಗ ಬಸ್ ಪ್ರಯಾಣದರವನ್ನೂ ಏರಿಸಲು ಹೊರಟಿದೆ ಎಂದು ಟೀಕಿಸಿದರು.
ವಿವಿಧ ವಸ್ತುಗಳ ದರ ಏರಿಕೆ, ಬೆಲೆ ಏರಿಕೆ ವಿರುದ್ಧ ಬಿಜೆಪಿ ನಾಳೆಯಿಂದ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಲಿದೆ ಎಂದು ಅವರು ಪ್ರಕಟಿಸಿದರು. ಇದು ಲಜ್ಜೆಗೆಟ್ಟ- ಜನವಿರೋಧಿ ಸರಕಾರಕ್ಕೆ ತಕ್ಕ ಪಾಠವನ್ನು ನಾವು ಕಲಿಸಬೇಕಿದೆ ಎಂದು ತಿಳಿಸಿದರು.
ಚುನಾಯಿತ ಸರಕಾರವನ್ನು ಉರುಳಿಸುವ ಪ್ರಯತ್ನ..
ದೇಶದ ಜನತೆ ನರೇಂದ್ರ ಮೋದಿಯವರಿಗೆ ಆಶೀರ್ವಾದ ಮಾಡಿದ್ದಾರೆ. ಆದರೆ, ನರೇಂದ್ರ ಮೋದಿಯವರು ಪ್ರಧಾನಿ ಆಗಿರುವುದನ್ನು ರಾಹುಲ್ ಗಾಂಧಿ, ಕಾಂಗ್ರೆಸ್ ಪಕ್ಷಕ್ಕೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಅರಾಜಕತೆ ಸೃಷ್ಟಿಸಿ ಚುನಾಯಿತ ಸರಕಾರವನ್ನು ಉರುಳಿಸುವ ಕೆಲಸಕ್ಕೆ ಇವರು ಮುಂದಾಗಿದ್ದಾರೆ ಎಂದು ಟೀಕಿಸಿದರು.
ತುರ್ತು ಪರಿಸ್ಥಿತಿ ಹೇರಿದ್ದ ಕಾಂಗ್ರೆಸ್ ಪಕ್ಷ..
1975ರಲ್ಲಿ ಕಾಂಗ್ರೆಸ್ ಪಕ್ಷದ ಇಂದಿರಾ ಗಾಂಧಿಯವರು ಹೇರಿದ ತುರ್ತು ಪರಿಸ್ಥಿತಿ ಇತ್ತು. ಪತ್ರಕರ್ತರೂ ಬೀದಿಯಲ್ಲಿ ಓಡಾಡಲು ಆಗದ ಸ್ಥಿತಿ ಇತ್ತು ಎಂದು ಗಮನ ಸೆಳೆದರು. ಕಾಶ್ಮೀರದಲ್ಲಿದ್ದ 370ನೇ ವಿಧಿ ರದ್ದು ಮಾಡಿದ್ದನ್ನು ಕಾಂಗ್ರೆಸ್ಸಿನವರಿಗೆ ಸಹಿಸಲು ಆಗುತ್ತಿಲ್ಲ. ಭಯೋತ್ಪಾದನೆ, ನಕ್ಸಲಿಸಂ ಮೂಲೋತ್ಪಾಟನೆ ಮಾಡಿದ್ದು, ಅದನ್ನು ರಾಹುಲ್ ಗಾಂಧಿಯವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ವಿವರಿಸಿದರು. ಪ್ರಜಾಪ್ರಭುತ್ವ ಉಳಿಸಲು ದೇಶದಲ್ಲಿ ಜನಜಾಗೃತಿ ಮೂಡಿಸಲಾಗುತ್ತಿದೆ ಎಂದರು.
2028ರಲ್ಲಿ ಎನ್‍ಡಿಎ ಸರಕಾರ ಖಚಿತ..
ಡಿ.ಕೆ.ಶಿವಕುಮಾರ್ ಅವರೇ, ನಿಮ್ಮ ಕಾಂಗ್ರೆಸ್ ಸರಕಾರದ ಪಾಪದ ಕೊಡ ತುಂಬಿದೆ. ರಾಜ್ಯದ ರೈತರು, ಬಡವರು, ದೀನ ದಲಿತರು ಸೇರಿ ಪ್ರತಿಯೊಬ್ಬರೂ ತೀರ್ಮಾನ ಮಾಡಿದ್ದಾರೆ. ರೈತಪರ, ಶೋಷಿತ, ಪೀಡಿತರ ಪರ ಸರಕಾರವನ್ನು ಯಡಿಯೂರಪ್ಪ ಅವರು ನೀಡಿದ್ದರೋ, ಅದೇ ಮಾದರಿಯಲ್ಲಿ 2028ರಲ್ಲಿ ಕರ್ನಾಟಕದಲ್ಲಿ ಬಿಜೆಪಿ ನೇತೃತ್ವದ ಎನ್‍ಡಿಎ ಸರಕಾರ ಬರಲಿದೆ ಎಂದು ತಿಳಿಸಿದರು. ಇದನ್ನು ತಡೆಯುವ ಶಕ್ತಿ ಕಾಂಗ್ರೆಸ್ ಪಕ್ಷ, ರಾಹುಲ್ ಗಾಂಧಿ, ಡಿ.ಕೆ.ಶಿವಕುಮಾರ್ ಅವರಿಗೂ ಇಲ್ಲ ಎಂದು ನುಡಿದರು.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯ ಉಸ್ತುವಾರಿ ಹರೀಶ್ ದ್ವಿವೇದಿ, ರಾಜ್ಯ ಅಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ, ಸಂಸದ ಗೋವಿಂದ ಕಾರಜೋಳ, ವಿಧಾನಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್, ಶಾಸಕರಾದ ಎಂ. ಚಂದ್ರಪ್ಪ, ಎಸ್. ಸುರೇಶ್ ಗೌಡ, ಜಿ.ಬಿ. ಜ್ಯೋತಿ ಗಣೇಶ್, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಚಿತ್ರದುರ್ಗ ಜಿಲ್ಲಾ ಅಧ್ಯಕ್ಷ ಕೆ.ಟಿ. ಕುಮಾರಸ್ವಾಮಿ, ವಿಧಾನಪರಿಷತ್ ಸದಸ್ಯರು, ಮಾಜಿ ಶಾಸಕರು, ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.







Comments
Leave a Comment