ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ‘ರಾಡಾರ್’ ಸಮ್ಮೇಳನ: 2027ರ ಮೇ ತಿಂಗಳಲ್ಲಿ ಶೇರಾಟನ್ ಗ್ರಾಂಡ್‌ನಲ್ಲಿ ಆಯೋಜನೆ - ಐಇಇಇ ಉಪಾಧ್ಯಕ್ಷ ಪುನೀತ್ ಕುಮಾರ್ ಮಿಶ್ರಾ
ಬೆಂಗಳೂರು, ನ, 3 -
ಏಷ್ಯಾದಲ್ಲೇ ಮೊದಲ ಬಾರಿಗೆ ಪ್ರತಿಷ್ಠಿತ ಐಇಇಇ (IEEE) ರಾಡಾರ್ ಸಮ್ಮೇಳನ ವು ನಗರದ ವೈಟ್‌ಫೀಲ್ಡ್‌ನ ‘ಶೇರಾಟನ್ ಗ್ರಾಂಡ್’ ಹೋಟೆಲ್‌ನಲ್ಲಿ ನಡೆಯಲಿದೆ. 2027ರ ಮೇ 1ರಿಂದ 6ರವರೆಗೆ ಈ ಬೃಹತ್ ಸಮ್ಮೇಳನ ಆಯೋಜನೆಗೊಂಡಿದ್ದು, ಅಮೆರಿಕ ಮತ್ತು ಯುರೋಪ್ ದಾಟಿ ಮೊದಲ ಬಾರಿಗೆ ಭಾರತದಲ್ಲಿ ಈ ಸಮ್ಮೇಳನವನ್ನು ಆಯೋಜಿಸಲಾಗುತ್ತಿದೆ ಎಂದು ಐಇಇಇ ಏರೋಸ್ಪೇಸ್ ಆಂಡ್ ಎಲೆಕ್ಟ್ರಾನಿಕ್ ಸಿಸ್ಟಮ್ ಸೊಸೈಟಿ ಉಪಾಧ್ಯಕ್ಷ ಪುನೀತ್ ಕುಮಾರ್ ಮಿಶ್ರಾ ತಿಳಿಸಿದರು.
2026ನೇ ನವೆಂಬರ್ 02 ರಂದು ವೈಟ್‌ಫೀಲ್ಡ್‌ನ ‘ಶೇರಾಟನ್ ಗ್ರಾಂಡ್’ ಹೋಟೆಲ್‌ನಲ್ಲಿ ಹಮ್ಮಿಕೊಳ್ಳಾಗಿದ್ದ ಸುದ್ದಿ ಗೋಷ್ಠಿಯಲ್ಲಿ ಮಾದ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ ಅವರು, 2027ರ ಮೇ 1ರಿಂದ 6ರವರೆಗೆ ನಡೆಯುವ ಈ ಸಮ್ಮೇಳನದಲ್ಲಿ ಒಟ್ಟು 231 ತಜ್ಞರು ತಮ್ಮ ಸಂಶೋಧನಾ ಪ್ರಬಂಧಗಳನ್ನು ಮಂಡಿಸಲಿದ್ದಾರೆ. ಈ ಪೈಕಿ ಅರ್ಧದಷ್ಟು ಮಂದಿ ಭಾರತೀಯ ಸಂಶೋಧಕರಾಗಿದ್ದಾರೆ ಎಂದು ತಿಳಿಸಿದರು.
ಯುವ ತಜ್ಞರಿಗೆ ಸುವರ್ಣಾವಕಾಶ: ಈ ಸಮ್ಮೇಳನವು ಭಾರತೀಯ ತಂತ್ರಜ್ಞಾನವನ್ನು ಜಾಗತಿಕ ಮಟ್ಟದಲ್ಲಿ ಅನಾವರಣಗೊಳಿಸಲು ದೊಡ್ಡ ಅವಕಾಶ ನೀಡುತ್ತದೆ. ದೇಶದ ವಿದ್ಯಾರ್ಥಿಗಳು ಮತ್ತು ಯುವ ತಂತ್ರಜ್ಞರಿಗೆ ಜಾಗತಿಕ ತಜ್ಞರಿಂದ ಕಲಿಯಲು ಇದೊಂದು ವೇದಿಕೆಯಾಗಲಿದೆ ಎಂದರು.
ಸಮ್ಮೇಳನದಲ್ಲಿ ಪ್ರಬಂಧ ಮಂಡನೆಗೆ ನೋಂದಾಯಿಸಲು ಸಾಮಾನ್ಯವಾಗಿ ಸಾವಿರ ಡಾಲರ್‌ಗಳ ಅಗತ್ಯವಿದ್ದು, ಭಾರತೀಯರಿಗಾಗಿ ಇದನ್ನು 100 ಡಾಲರ್‌ಗೆ ನಿಗದಿಪಡಿಸಲಾಗಿದೆ. ಪ್ರಬಂಧ ಸಲ್ಲಿಕೆಗೆ 2026ರ ನವೆಂಬರ್ 30 ಕೊನೆಯ ದಿನವಾಗಿದೆ ಎಂದು ಹೇಳಿದರು.
ಈ ಸಮ್ಮೇಳನದಲ್ಲಿ ಕಾನ್ಗಿಟಿವ್ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ (AI), ಸಂವಹನ ತಂತ್ರಜ್ಞಾನ, ಬಾಹ್ಯಾಕಾಶ, ಹವಾಮಾನ, ಭವಿಷ್ಯದ ಉಪಗ್ರಹಗಳು, ಜಾಗತಿಕ ಭದ್ರತೆ ಹಾಗೂ ಪ್ರಸಕ್ತ ವಿದ್ಯುನ್ಮಾನ ಯುದ್ಧ ವ್ಯವಸ್ಥೆಯಲ್ಲಿ ರಾಡಾರ್ ತಂತ್ರಜ್ಞಾನದ ಪಾತ್ರದ ಕುರಿತು ಜಾಗತಿಕ ತಜ್ಞರು ಮಾತನಾಡಲಿದ್ದಾರೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಡಿಆರ್‌ಡಿಒ ಪ್ರಧಾನ ನಿರ್ದೇಶಕರಾದ ಬಿ.ಕೆ.ದಾಸ್ ಅವರು ಮಾತನಾಡುತ್ತಾ, ಈ ಸಮ್ಮೇಳನವು ದೇಶದ, ಅದರಲ್ಲೂ ಮುಖ್ಯವಾಗಿ ಬೆಂಗಳೂರಿನ ರಾಡಾರ್ ತಂತ್ರಜ್ಞಾನದ ಸಾಧನೆ ಹಾಗೂ ಯುವ ವಿಜ್ಞಾನಿಗಳ ಪ್ರತಿಭೆಯನ್ನು ಜಾಗತಿಕ ಮಟ್ಟದಲ್ಲಿ ಪ್ರದರ್ಶಿಸಲು ಉತ್ತಮ ವೇದಿಕೆಯಾಗಲಿದೆ. ಪ್ರಸ್ತುತ ಕೃತಕ ಬುದ್ಧಿಮತ್ತೆಯು (AI) ಎಲ್ಲ ಕ್ಷೇತ್ರವನ್ನೂ ಪ್ರವೇಶಿಸಿದ್ದು, ರಾಡಾರ್ ಕ್ಷೇತ್ರವೂ ಅದರ ಸವಾಲುಗಳನ್ನು ಎದುರಿಸುತ್ತಿದೆ. ಯುದ್ಧಭೂಮಿಯಲ್ಲಿ ಸಣ್ಣ ಡ್ರೋನ್‌ಗಳನ್ನು ಬಳಸಲಾಗುತ್ತಿದ್ದು, ಭವಿಷ್ಯದ ಯುದ್ಧಗಳನ್ನು ಎದುರಿಸಲು ರಾಡಾರ್ ತಂತ್ರಜ್ಞಾನ ಅತ್ಯಂತ ನಿರ್ಣಾಯಕವಾಗಿದೆ ಎಂದು ತಿಳಿಸಿದರು.
ಎಲ್‌ಆರ್‌ಡಿಇ ನಿರ್ದೇಶಕರಾದ ಶೇಖ್ ಅಲಾಫ್ ಅವರು ಮಾತನಾಡುತ್ತಾ, ರಾಡಾರ್ ತಂತ್ರಜ್ಞಾನವನ್ನು ಈ ಹಿಂದೆ ರಕ್ಷಣೆ ಹಾಗೂ ಏರೋಸ್ಪೇಸ್ ಕ್ಷೇತ್ರಗಳಲ್ಲಿ ಮಾತ್ರ ಹೆಚ್ಚಾಗಿ ಬಳಸಲಾಗುತ್ತಿತ್ತು. ಆದರೆ ಇತ್ತೀಚೆಗೆ ಇದರ ಬಳಕೆ ವ್ಯಾಪಕವಾಗಿದೆ. ಕೃತಕ ಬುದ್ಧಿಮತ್ತೆಯೊಂದಿಗೆ (AI) ಬಹು ಮಾದರಿಯ ರಾಡಾರ್ ಕಾರ್ಯಾಚರಣೆಯು ಇಂದಿನ ದಿನಗಳಲ್ಲಿ ಅಗತ್ಯ ಎಂದು ಮಾಹಿತಿ ನೀಡಿದರು.






Comments
Leave a Comment