ಆರೋಪಕ್ಕೆ ಕಾಂಗ್ರೆಸ್ ದಾಖಲೆ ನೀಡಲಿ; ಬಿಜೆಪಿ ಶಾಸಕ ಕಾಮತ್ ಸವಾಲು
From Jayaram Udupi
ಮಂಗಳೂರು:
ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸುತ್ತಿರುವ ಕಾಂಗ್ರೆಸ್ ನಾಯಕರು ದಾಖಲೆ ಸಹಿತ ಆರೋಪ ಸಾಬೀತುಪಡಿಸಲಿ. ಇಲ್ಲವಾದರೆ ಬಹಿರಂಗ ಕ್ಷಮೆಯಾಚಿಸಲಿ ಎಂದು ಶಾಸಕ ವೇದವ್ಯಾಸ ಕಾಮತ್ ಸವಾಲು ಹಾಕಿದ್ದಾರೆ.
ನಗರದ ಅಟಲ್ ಸೇವಾ ಕೇಂದ್ರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಒಬ್ಬನೇ ಒಬ್ಬ ಅರ್ಹ ಮತದಾರನ ಹೆಸರನ್ನು ಅಕ್ರಮವಾಗಿ ತೆಗೆದುಹಾಕಿರುವುದಕ್ಕೆ ಕಾಂಗ್ರೆಸ್ ದಾಖಲೆ ನೀಡಲಿ ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಎಎಸ್‌ಡಿಡಿ (ಗೈರು, ಸ್ಥಳಾಂತರ, ಮೃತ ಹಾಗೂ ನಕಲಿ ಮತದಾರರು) ಎಂದು ಗುರುತಿಸಲಾದ 99 ಲಕ್ಷ ಮತದಾರರ ಪೈಕಿ ಕನಿಷ್ಠ 9 ಲಕ್ಷ ಮಂದಿಯನ್ನಾದರೂ ಸಂಪರ್ಕಿಸಿ ಅರ್ಜಿ ಸಲ್ಲಿಸಲು ಕಾಂಗ್ರೆಸ್ ಮುಂದಾಗಲಿ. ಎಸ್‌ಐಆರ್ ಪ್ರಕ್ರಿಯೆ ದೇಶದಲ್ಲಿ ಈ ಹಿಂದೆಯೂ 12 ಬಾರಿ ನಡೆದಿದ್ದು, ಮತದಾರರ ಪಟ್ಟಿಯ ಶುದ್ಧೀಕರಣವೇ ಇದರ ಉದ್ದೇಶವಾಗಿದೆ. ರಾಜಕೀಯ ಹತಾಶೆಯಿಂದ ಕಾಂಗ್ರೆಸ್ ಚುನಾವಣಾ ಆಯೋಗದ ವಿರುದ್ಧ ಆರೋಪ ಮಾಡುತ್ತಿದೆ ಎಂದು ಟೀಕಿಸಿದರು.
ಎಸ್‌ಐಆರ್ ಕಾರ್ಯದಲ್ಲಿ ರಾಜ್ಯದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಬಿಎಲ್‌ಎಗಳ ಸಹಭಾಗಿತ್ವವಿದ್ದು, ಪ್ರಕ್ರಿಯೆ ಪಾರದರ್ಶಕವಾಗಿ ನಡೆದಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಚುನಾವಣಾ ಆಯೋಗದ ಕಾರ್ಯವೈಖರಿ ಒಪ್ಪಿಗೆಯಾಗಿದ್ದು, ಸೋಲಿನ ಸಂದರ್ಭದಲ್ಲಷ್ಟೇ ಆಯೋಗವನ್ನು ದೂಷಿಸುವುದು ಅದರ ದ್ವಂದ್ವ ನಿಲುವು ಎಂದು ಆರೋಪಿಸಿದರು.
ಆರೋಪಗಳಿಗೆ ಸೂಕ್ತ ದಾಖಲೆ ಒದಗಿಸಬೇಕು ಅಥವಾ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ವೇದವ್ಯಾಸ ಕಾಮತ್ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ರಮೇಶ್ ಕಂಡೆಟ್ಟು, ಪ್ರಧಾನ ಕಾರ್ಯದರ್ಶಿಗಳಾದ ರಮೇಶ್ ಹೆಗ್ಡೆ ಮತ್ತು ಲಲೇಶ್ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಪೂರ್ಣಿಮಾ ಎಂ., ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಪೂರ್ಣಿಮಾ ರಾವ್, ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ದೀಪಕ್ ಡಿಸೋಜ, ಮೂಡ ಮಾಜಿ ಅಧ್ಯಕ್ಷ ರವಿಶಂಕರ್ ಮಿಜಾರ್, ಮೀನುಗಾರಿಕಾ ನಿಗಮದ ಮಾಜಿ ಅಧ್ಯಕ್ಷ ನಿತಿನ್ ಕುಮಾರ್ ಹಾಗೂ ಮಂಡಲ ಕಾರ್ಯದರ್ಶಿ ಸುಮತಿ ಚಂದ್ರಶೇಖರ್ ಉಪಸ್ಥಿತರಿದ್ದರು.






Comments
Leave a Comment