PRABHAVAA.COM

ಎಚ್.ಎ.ಎಲ್‌ನಲ್ಲಿ ಮೋಡ ಬಿತ್ತನೆಗೆ ಜಲ ಸಂಪನ್ಮೂಲ ಸಚಿವರಿಂದ ಚಾಲನೆ

Bengaluru Urban:

Font size:

"ಏನೇ ಆದರೂ ಜನರ ಹಿತವೇ ಮುಖ್ಯ": ಜಲಕ್ಷಾಮ ತಪ್ಪಿಸಲು ಮೋಡ ಬಿತ್ತನೆಗೆ ಮುಂದಾದ ಚಲುರಾಯಸ್ವಾಮಿ"

ಮಳೆ ಕೊರತೆ ನೀಗಿಸಲು ಸರ್ಕಾರದ ಮಾಸ್ಟರ್ ಪ್ಲ್ಯಾನ್: ಎಚ್.ಎ.ಎಲ್‌ನಲ್ಲಿ ಮೋಡ ಬಿತ್ತನೆಗೆ ಜಲ ಸಂಪನ್ಮೂಲ ಸಚಿವರಿಂದ ಚಾಲನೆ

"ಏನೇ ಆದರೂ ಜನರ ಹಿತವೇ ಮುಖ್ಯ": ಜಲಕ್ಷಾಮ ತಪ್ಪಿಸಲು ಮೋಡ ಬಿತ್ತನೆಗೆ ಮುಂದಾದ ಚಲುರಾಯಸ್ವಾಮಿ"

ರಾಜ್ಯದಲ್ಲಿ ಮಳೆ ಕೊರತೆ: 28.52 ಕೋಟಿ ರೂ. ವೆಚ್ಚದ 'ಮೋಡ ಬಿತ್ತನೆ' ಯೋಜನೆಗೆ ಚಾಲನೆ

ಬೆಂಗಳೂರು.ಸೆ.4
ರಾಜ್ಯದಲ್ಲಿ ಎದುರಾಗಿರುವ ಮಳೆ‌ ಕೊರತೆ ಹಾಗೂ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುವ ಸಲುವಾಗಿ, ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ 'ಮೋಡ ಬಿತ್ತನೆ' ಕಾರ್ಯಕ್ರಮಕ್ಕೆ ಇಂದು ನಗರದ ಎಚ್.ಎ.ಎಲ್ (HAL) ವಿಮಾನ ನಿಲ್ದಾಣದಲ್ಲಿ ಜಲಸಂಪನ್ಮೂಲ ಸಚಿವರಾದ ಎನ್. ಚಲುವರಾಯಸ್ವಾಮಿ ಅವರು ಅಧಿಕೃತವಾಗಿ ಚಾಲನೆ ನೀಡಿದರು.

ಮೋಡ ಬಿತ್ತನೆಗಾಗಿಯೇ ಸಿದ್ಧಗೊಂಡಿರುವ ವಿಶೇಷ ಲಘು ವಿಮಾನಕ್ಕೆ ರಾಷ್ಟ್ರಧ್ವಜ ಹಾಗೂ ನಾಡಧ್ವಜ ತೋರುವ ಮೂಲಕ ಚಾಲನೆ ನೀಡಿದ ಸಚಿವರು, ಯೋಜನೆ ಯಶಸ್ವಿಯಾಗಿ ರಾಜ್ಯದಲ್ಲಿ ನೀರಿನ ಹಾಹಾಕಾರ ಕಡಿಮೆಯಾಗಲಿ ಎಂದು ಆಶಿಸಿದರು.

ಜಲ ಸಂಕಟದ ಎಚ್ಚರಿಕೆ
ಈ ವೇಳೆ ಮಾತನಾಡಿದ ಸಚಿವ ಚಲುವರಾಯಸ್ವಾಮಿ, "ರಾಜ್ಯದಲ್ಲಿ ಈ ವರ್ಷ ಮಳೆಯ ಪ್ರಮಾಣ ಕಡಿಮೆಯಾಗಿದೆ. ಮುಂದಿನ ದಿನಗಳಲ್ಲಿ ತೀವ್ರ ಬರ ಎದುರಾಗುವ ಸಾಧ್ಯತೆಗಳಿದ್ದು, ಅದರ ನಿಖರ ಪ್ರಮಾಣವನ್ನು ಈಗಲೇ ಅಂದಾಜಿಸಲು ಸಾಧ್ಯವಿಲ್ಲ. ಈ ತಿಂಗಳ ಅಂತ್ಯಕ್ಕೆ‌ ಮುಂಗಾರು ಮಳೆಗಾಲ‌ ಮುಕ್ತಾಯಗೊಳ್ಳಲಿದೆ. ಒಂದು ವೇಳೆ ಈ ತಿಂಗಳ ಅಂತ್ಯದೊಳಗೆ ಕುಡಿಯುವ ನೀರಿನ ಶೇಖರಣೆ ಆಗದಿದ್ದರೆ, ಮುಂದಿನ ಜೂನ್ ಅಂತ್ಯದವರೆಗೂ ತೀವ್ರ ಅಭಾವ ಎದುರಾಗಲಿದೆ" ಎಂದು ಆತಂಕ ವ್ಯಕ್ತಪಡಿಸಿದರು.
"ಹೀಗಾಗಿ, ನೀರಿನ ಅಭಾವವನ್ನು ಸರಿದೂಗಿಸಲು ಹಾಗೂ ರೈತರ ಹಿತದೃಷ್ಟಿಯಿಂದ ಮೋಡ ಬಿತ್ತನೆಗೆ ಮುಂದಾಗಿದ್ದೇವೆ. ಈ ಹಿಂದೆ ನಡೆದ ಮೋಡ ಬಿತ್ತನೆ ಕಾರ್ಯಾಚರಣೆ ಶೇ. 35ರಷ್ಟು ಯಶಸ್ವಿಯಾಗಿತ್ತು. ಏನೇ ನಷ್ಟ ಅಥವಾ ಲಾಭವಾದರೂ, ಈ ಯೋಜನೆಯಿಂದ ನಮ್ಮ ಜನರಿಗೆ ಒಳ್ಳೆಯದಾಗಬೇಕು ಎಂಬುದಷ್ಟೇ ನಮ್ಮ ಆಶಯ. ಇದರಿಂದ ಸರ್ಕಾರಕ್ಕೆ ಆರ್ಥಿಕ ಹೊರೆಯಾಗುವ ಬಗ್ಗೆ ನಮಗೆ ಚಿಂತೆಯಿಲ್ಲ. ನಾಡಿನ ಹಿತ ಕಾಯುವುದಷ್ಟೇ ನಮ್ಮ ಆದ್ಯತೆ" ಎಂದು ಅವರು ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಜಿ.ಸಿ. ಚಂದ್ರಶೇಖರ್, ಮಾಜಿ ಸಚಿವ ಎಚ್.ಕೆ. ಪಾಟೀಲ್, ಶಾಸಕ ಕೋನರೆಡ್ಡಿ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಯೋಜನೆಯ ಅನುಷ್ಠಾನ ಮತ್ತು ವೆಚ್ಚ
ಅಂದಾಜು ವೆಚ್ಚ: ಒಟ್ಟು 28.52 ಕೋಟಿ ರೂ. (ಜಿಎಸ್‌ಟಿ ಹೊರತುಪಡಿಸಿ) ಆಡಳಿತಾತ್ಮಕ ಅನುಮೋದನೆ ಇದಾಗಿದೆ.
ಜಲಸಂಪನ್ಮೂಲ ಇಲಾಖೆಯ 'ಕರ್ನಾಟಕ ನೀರಾವರಿ ನಿಗಮ ನಿಯಮಿತ' (KNNL) ಮತ್ತು ಕಂದಾಯ ಇಲಾಖೆಯ 'ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ' (KSNDMC) ಜಂಟಿಯಾಗಿ ಅನುಷ್ಠಾನಗೊಳಿಸಿದೆ. ಮೋಡ ಬಿತ್ತನೆಯನ್ನು ಖ್ಯಾತಿ ಕ್ಲೈಮೇಟ್ ಮಾರ್ಡಿಫಿಕೇಶನ್ ಕನ್ಸಲ್ಟೆಂಟ್ಸ್ ಗೆ(M/s Kyathi Climate Modification Consultants - LLP) ಕೆಟಿಪಿಪಿ (KTPP) ಕಾಯ್ದೆಯಿಂದ ವಿನಾಯಿತಿ ನೀಡಿ ಗುತ್ತಿಗೆ ನೀಡಲಾಗಿದೆ.

ಉಸ್ತುವಾರಿಗೆ ಎರಡು ಪ್ರತ್ಯೇಕ ಸಮಿತಿಗಳು
ಮೋಡ ಬಿತ್ತನೆ ಕಾರ್ಯವನ್ನು ವೈಜ್ಞಾನಿಕವಾಗಿ ಮತ್ತು ಪರಿಣಾಮಕಾರಿಯಾಗಿ ನಿರ್ವಹಿಸಲು ಸರ್ಕಾರ ಎರಡು ಸಮಿತಿಗಳನ್ನು ಸರಕಾರ ಈಗಾಗಲೇ ರಚಿಸಿದೆ.

ಮೇಲ್ವಿಚಾರಣಾ ಸಮಿತಿ (Monitoring Committee)ಯಲ್ಲಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತರ ನೇತೃತ್ವದಲ್ಲಿ. ಇದು ಯೋಜನೆಯ ಸಮಗ್ರ ಉಸ್ತುವಾರಿ ಮತ್ತು ಪರಿಶೀಲನೆ ನಡೆಸಲಿದೆ.

ತಾಂತ್ರಿಕ ಸಲಹಾ ಮತ್ತು ಮೌಲ್ಯಮಾಪನ ಸಮಿತಿ (Technical Advisory & Evaluation Committee)ಯಲ್ಲಿ KSNDMC ನಿರ್ದೇಶಕರ ಅಧ್ಯಕ್ಷತೆಯಲ್ಲಿ 8 ಮಂದಿ ಸದಸ್ಯರ ತಂಡ. ಇದು ತಾಂತ್ರಿಕ ಮಾರ್ಗದರ್ಶನ ನೀಡಲಿದ್ದು, ಪ್ರತಿ ಎರಡು ಗಂಟೆಗೊಮ್ಮೆ ಮೋಡ ಬಿತ್ತನೆಯ ಮಾಹಿತಿ ಹಾಗೂ ಅದರ ಪರಿಣಾಮವನ್ನು (Impact) ಅಪ್‌ಡೇಟ್ ಮಾಡಲಿದೆ.

ಮೋಡ ಬಿತ್ತನೆ ಹೇಗೆ?
ವಾತವರಣದಲ್ಲಿ ಮೋಡಗಳಲ್ಲಿನ ತೇವಾಂಶವು ಮಳೆಯಾಗಿ ಸುರಿಯುವಂತೆ ಮಾಡಲು, ಕೃತಕವಾಗಿ ರಾಸಾಯನಿಕಗಳನ್ನು ಸಿಂಪಡಿಸಿ ಮಳೆಯಾಗುವ ಪ್ರಕ್ರಿಯೆಯನ್ನು ಚುರುಕುಗೊಳಿಸುವ ವೈಜ್ಞಾನಿಕ ವಿಧಾನವೇ ಮೋಡ ಬಿತ್ತನೆ.
ಮೋಡಗಳ ಸ್ವರೂಪ (ಬೆಚ್ಚಗಿನ ಅಥವಾ ತಂಪಾದ ಮೋಡಗಳು) ಆಧರಿಸಿ ರಾಸಾಯನಿಕಗಳನ್ನು ಬಳಸಲಾಗುತ್ತದೆ.
ಸಿಲ್ವರ್ ಅಯೋಡೈಡ್ (Silver Iodide): ಇದು ಅತ್ಯಂತ ಸಾಮಾನ್ಯವಾಗಿ ಬಳಸುವ ರಾಸಾಯನಿಕ. ಇದು ಮೋಡದಲ್ಲಿನ ಹನಿಗಳನ್ನು ಒಟ್ಟುಗೂಡಿಸಿ ಮಂಜುಗಡ್ಡೆಯ ಹರಳುಗಳಾಗಿ ಪರಿವರ್ತಿಸಲು ಸಹಾಯ ಮಾಡುತ್ತದೆ.
ಪೊಟ್ಯಾಸಿಯಮ್ ಅಯೋಡೈಡ್ (Potassium Iodide)
ಒಣ ಮಂಜುಗಡ್ಡೆ (Dry Ice - ಘನ ಕಾರ್ಬನ್ ಡೈಆಕ್ಸೈಡ್)
ಸೋಡಿಯಂ ಕ್ಲೋರೈಡ್ (ಸಾಮಾನ್ಯ ಉಪ್ಪು - Sodium Chloride): ಬೆಚ್ಚಗಿನ ಮೋಡಗಳಲ್ಲಿ ನೀರಿನ ಹನಿಗಳನ್ನು ಆಕರ್ಷಿಸಿ ದಪ್ಪದಾದ ಮಳೆಹನಿಗಳಾಗಲು ಇದನ್ನು ಬಳಸಲಾಗುತ್ತದೆ.

ಕಾರ್ಯವೈಖರಿ ಹೇಗೆ
ರಾಡಾರ್ ಪರಿಶೀಲನೆ: ವಾತಾವರಣದಲ್ಲಿನ ಬಿಸಿಲು, ಗಾಳಿಯ ವೇಗ ಮತ್ತು ಮೋಡಗಳ ಸಾಂದ್ರತೆಯನ್ನು ಹವಾಮಾನ ಇಲಾಖೆಯ ಡಾಪ್ಲರ್ ರಾಡಾರ್ (Doppler Radar) ಮೂಲಕ ತಾಂತ್ರಿಕ ತಂಡ ನಿರಂತರವಾಗಿ ಪರಿಶೀಲಿಸುತ್ತದೆ.
ಮಳೆ ಸುರಿಸುವ ಸಾಮರ್ಥ್ಯವಿರುವ (ಆದರೆ ಮಳೆಯಾಗದೆ ಹಾಗೇ ಸಾಗುತ್ತಿರುವ) ಕ್ಯುಮುಲೋನಿಂಬಸ್ (Cumulonimbus) ಮೋಡಗಳನ್ನು ಗುರುತಿಸಲಾಗುತ್ತದೆ.
ಮೋಡಗಳನ್ನು ಗುರುತಿಸಿದ ತಕ್ಷಣ, ವಿಶೇಷ ವಿಮಾನಗಳು (ಹವಾಮಾನ ರಾಡಾರ್ ಹಾಗೂ ಫ್ಲೇರ್ ಗಳನ್ನು ಅಳವಡಿಸಿರುವ ವಿಮಾನಗಳು) ಆ ಮೋಡಗಳ ಒಳಗೆ ಅಥವಾ ಕೆಳಭಾಗದಲ್ಲಿ ಹಾರಿ ರಾಸಾಯನಿಕಗಳನ್ನು (Flares ಮೂಲಕ ದಹಿಸಿ) ಸಿಂಪಡಿಸುತ್ತವೆ.
ರಾಸಾಯನಿಕ ಕಣಗಳು ಮೋಡದೊಳಗಿನ ಸಣ್ಣ ನೀರಿನ ಹನಿಗಳನ್ನು ಆಕರ್ಷಿಸಿ, ಅವು ಭಾರವಾಗಿ ಮಳೆಯ ರೂಪದಲ್ಲಿ ಭೂಮಿಗೆ ಬೀಳುತ್ತವೆ. ಪ್ರಕ್ರಿಯೆ ನಡೆದ 30 ನಿಮಿಷಗಳಿಂದ 1 ಗಂಟೆಯೊಳಗೆ ಮಳೆಯಾಗುವ ಸಾಧ್ಯತೆ ಇರುತ್ತದೆ.

ಎಲ್ಲೆಲ್ಲಿ ನಡೆಯಲಿದೆ?
ರಾಜ್ಯದಲ್ಲಿ ನಿರ್ದಿಷ್ಟವಾಗಿ ಇಂತಹುದೇ ಜಿಲ್ಲೆ ಎಂದು ಮೊದಲೇ ನಿರ್ಧರಿಸಲಾಗುವುದಿಲ್ಲ. ಬದಲಾಗಿ, ತಾಂತ್ರಿಕ ತಂಡವು ನಿರಂತರವಾಗಿ ನೀಡುವ ವರದಿಗಳ ಆಧಾರದ ಮೇಲೆ, ಮಳೆ ಕೊರತೆ ಇರುವ ಪ್ರದೇಶಗಳು, ಪ್ರಮುಖ ಜಲಾಶಯಗಳ ಜಲಾನಯನ ಪ್ರದೇಶಗಳು (Catchment Areas) ಹಾಗೂ ಕೃಷಿ ಬಿಕ್ಕಟ್ಟು ಎದುರಿಸುತ್ತಿರುವ ಜಿಲ್ಲೆಗಳ ಆಕಾಶದಲ್ಲಿ ಸೂಕ್ತ ಮೋಡಗಳು ಕಂಡುಬಂದಾಗ ತಕ್ಷಣವೇ ಅಲ್ಲಿಗೆ ವಿಮಾನ ತೆರಳಿ ಬಿತ್ತನೆ ಕಾರ್ಯ ನಡೆಸುತ್ತದೆ. ಪ್ರತಿ 2 ಗಂಟೆಗೊಮ್ಮೆ ಲಭ್ಯವಾಗುವ ಹವಾಮಾನ ದತ್ತಾಂಶವೇ ಕಾರ್ಯಾಚರಣೆಯ ಸ್ಥಳವನ್ನು ನಿರ್ಧರಿಸುತ್ತದೆ.

Comments

Leave a Comment

Prev Post ಮೈಸೂರು ದಸರಾ – ಸಿಎಂ ಶಿವಕುಮಾರ್ ನೇತೃತ್ವದಲ್ಲಿ ಮಹತ್ವದ ನಿರ್ಧಾರಗಳು
Next Post ಪಿಎಂ ಸೇತು ಯೋಜನೆಯಲ್ಲಿ ಉದ್ಯಮಗಳ ಸಹಭಾಗಿತ್ವ ಮುಖ್ಯ: ಎಂ ಬಿ ಪಾಟೀಲ

21.03.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :

21.03.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :

world forest day

25.03.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :

25.03.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :

ಪಶ್ಚಿಮಘಟ್ಟಗಳನ್ನು ಭವಿಷ್ಯದ ಪೀಳಿಗೆಯ ಜೀವನಾಡಿಯಾಗಿ ನೋಡಬೇಕು:ಈಶ್ವರ ಖಂಡ್ರೆ

ಎಫ್.ಕೆ.ಸಿಸಿಐ ಸುಸ್ಥಿರ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಶೃಂಗದ ಪೂರ್ವಭಾವಿ ಸಮಾರಂಭದಲ್ಲಿ ಭಾಗಿ ಪರಿಸರ ಸಂರಕ್ಷಣೆಯಲ್ಲಿ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಪಾತ್ರ ಹಿರಿದು:ಈಶ್ವರ ಖಂಡ್ರೆ

20.04.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :

20.04.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :

22.04.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :

22.04.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :

Read all News