ಕಾಂಗ್ರೆಸ್ ಹೈಕಮಾಂಡನ್ನೂ ಬ್ಲ್ಯಾಕ್‍ಮೇಲ್ ಮಾಡಿದ ನಾಗೇಂದ್ರ: ವಿಜಯೇಂದ್ರ ಆರೋಪ
ಬೆಂಗಳೂರಿಗೆ ವಾಪಸಾಗಿ ಖಾತೆ ಕೊಡುವ ಕುರಿತು ತೀರ್ಮಾನ ಮಾಡಿ
ಕಾಂಗ್ರೆಸ್ ಹೈಕಮಾಂಡನ್ನೂ ಬ್ಲ್ಯಾಕ್‍ಮೇಲ್ ಮಾಡಿದ ನಾಗೇಂದ್ರ: ವಿಜಯೇಂದ್ರ ಆರೋಪ
ಬೆಂಗಳೂರು: ಬಿಡದಿ ಟೌನ್‍ಶಿಪ್ ವಿರೋಧಿಸಿ ಪಾದಯಾತ್ರೆ ವಿಷಯದಲ್ಲಿ ಬಿಜೆಪಿ- ಜೆಡಿಎಸ್ ನಡುವೆ ಗೊಂದಲ ಇಲ್ಲ. ನಾವು ಈ ಪಾದಯಾತ್ರೆಗೆ ಸಾಂಕೇತಿಕವಾಗಿ ಬೆಂಬಲ ಕೊಟ್ಟಿದ್ದು, ನಮ್ಮ ವಿಪಕ್ಷ ನಾಯಕ ಆರ್.ಅಶೋಕ್ ಅವರು ಪಾಲ್ಗೊಂಡಿದ್ದಾರೆ. ನಾವು ರೈತರ ಪರವಾಗಿದ್ದು, ಸದನದಲ್ಲೂ ಹೋರಾಟ ನಡೆಸಲಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.
ಇಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರೈತರ ಮೇಲೆ ಸರಕಾರ ಒತ್ತಡ ಹೇರುತ್ತಿದೆ ಎಂದು ಆಕ್ಷೇಪಿಸಿದರು. ಬಿಡದಿ ವಿಚಾರ, ವಿಮಾನನಿಲ್ದಾಣದ ವಿಷಯದಲ್ಲಿ ರೈತರ ಸಮಸ್ಯೆಗಳು ಬಂದಾಗ ನಾವು ರೈತರ ಪರವಾಗಿ ಇರುತ್ತೇವೆ ಎಂದು ಪ್ರಶ್ನೆಗೆ ಉತ್ತರಿಸಿದರು.
ಪರಿಶಿಷ್ಟ ಪಂಗಡದ ನಿಗಮದ ನೂರಾರು ಕೋಟಿ ರೂಪಾಯಿಯ ಭ್ರಷ್ಟಾಚಾರದ ಆರೋಪ ಇದ್ದಾಗ ಅಂಥ ವ್ಯಕ್ತಿಯನ್ನು ಮುಖ್ಯಮಂತ್ರಿಗಳು ಸಚಿವಸಂಪುಟಕ್ಕೆ ಹೇಗೆ ತೆಗೆದುಕೊಳ್ಳಲು ಸಾಧ್ಯ ಎಂದು ಕೇಳಿದರು. ಇವರಿಗೆ ಅಂಥ ಒತ್ತಡ ಏನಿತ್ತು ಎಂದು ಪ್ರಶ್ನಿಸಿದರು. ನಾಗೇಂದ್ರ ಅವರು ಕಾಂಗ್ರೆಸ್ ಹೈಕಮಾಂಡನ್ನೂ ಬ್ಲ್ಯಾಕ್‍ಮೇಲ್ ಮಾಡಿದ ಮಾಹಿತಿ ನಮಗಿದೆ ಎಂದು ವಿವರಿಸಿದರು. ಬೆದರಿಕೆ ಹಾಕಿದ ವಿಚಾರ ಕಾಂಗ್ರೆಸ್ ವಲಯದಲ್ಲೂ ಚರ್ಚೆ ಆಗುತ್ತಿದೆ ಎಂದು ತಿಳಿಸಿದರು.
ಸಮುದಾಯಕ್ಕೆ ಮಾಡಿದ ಅಪಚಾರ..
ಇದು ಆ ಸಮುದಾಯಕ್ಕೆ ಕಾಂಗ್ರೆಸ್ ಪಕ್ಷ ಮಾಡಿದ ಅಪಚಾರ ಎಂದು ನುಡಿದರು. ನಾಗೇಂದ್ರ ಅವರನ್ನು ಕ್ಯಾಬಿನೆಟ್‍ಗೆ ತೆಗೆದುಕೊಂಡು ಕಾಂಗ್ರೆಸ್ ಸರಕಾರವು ಪರಿಶಿಷ್ಟ ಪಂಗಡದವರಿಗೆ ಅನ್ಯಾಯ ಮಾಡಿದೆÉ ಎಂದು ಟೀಕಿಸಿದರು. ಬಿಜೆಪಿ ಇದರ ವಿರುದ್ಧ ಸದನದ ಒಳಗೆ ಮತ್ತು ಸದನದ ಹೊರಗೆ ರಾಜ್ಯಾದ್ಯಂತ ಹೋರಾಟ ಮಾಡಲಿದೆ ಎಂದು ತಿಳಿಸಿದರು. ನಾಗೇಂದ್ರ ಅವರನ್ನು ಕ್ಯಾಬಿನೆಟ್‍ನಲ್ಲಿ ಮುಂದುವರಿಸಬಾರದು ಎಂದು ಆಗ್ರಹಿಸಿದರು.
ಕೃಷಿ, ತೋಟಗಾರಿಕೆ ಸಚಿವರು ಯಾರೆಂದು ಗೊತ್ತಿಲ್ಲ..
ಪ್ರಶ್ನೆಗೆ ಉತ್ತರ ನೀಡಿದ ಅವರು, ಇಂಥ ಭೀಕರ ಬರಗಾಲದ ಸಂದರ್ಭದಲ್ಲಿ ರಾಜ್ಯದಲ್ಲಿ ಕೃಷಿ ಮಾತ್ರವಲ್ಲದೇ ತೋಟಗಾರಿಕೆ ಸಚಿವರು ಇನ್ನೂ ಯಾರೆಂದು ಗೊತ್ತಿಲ್ಲ. ಕಂದಾಯ ಸಚಿವರು ಕಾಣುತ್ತಿಲ್ಲ ಎಂದು ಆಕ್ಷೇಪಿಸಿದರು. ಖಾತೆರಹಿತ ಸಚಿವರು ಜಿಲ್ಲಾ ಪ್ರವಾಸ ಮಾಡಿದರೆ ಅದರಿಂದ ರೈತರಿಗೆ ಏನೂ ಪರಿಹಾರ ಸಿಗಲು ಸಾಧ್ಯವಿಲ್ಲ. ರಿಯಲ್ ಎಸ್ಟೇಟ್ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ರಾಹುಲ್ ಗಾಂಧಿ ಮನೆ ಗೇಟ್ ಕಾಯುವ ಬದಲಾಗಿ ಬೆಂಗಳೂರಿಗೆ ವಾಪಸಾಗಿ ಸಚಿವರಿಗೆ ಖಾತೆ ಕೊಡುವ ಕುರಿತು ತೀರ್ಮಾನ ಮಾಡಲಿ ಎಂದು ಆಗ್ರಹಿಸಿದರು. ಅವರು ದೆಹಲಿಗೆ ಹೋಗಿ ರಾಜ್ಯಕ್ಕೆ ದ್ರೋಹ ಬಗೆಯುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.






Comments
Leave a Comment