PRABHAVAA.COM

ನೈಸ್ ರಸ್ತೆಗೆ ಟೋಲ್ ಕಟ್ಟಬೇಡಿ; ಜನರಿಗೆ ಕರೆ ನೀಡಿದ ಹೆಚ್.ಡಿ. ಕುಮಾರಸ್ವಾಮಿ

Bengaluru Urban:

Font size:

ನೈಸ್ ರಸ್ತೆಗೆ ಟೋಲ್ ಕಟ್ಟಬೇಡಿ; ಜನರಿಗೆ ಕರೆ ನೀಡಿದ ಹೆಚ್.ಡಿ. ಕುಮಾರಸ್ವಾಮಿ ನೈಸ್ ರೋಡ್ ಟೋಲ್ ತಡೆಗೆ ಸರ್ಕಾರಕ್ಕೆ ಎರಡು ವಾರ ಗಡುವು ಕೊಟ್ಟ ಕೇಂದ್ರ ಸಚಿವರು ಹೈಕೋರ್ಟ್ ಆದೇಶ ಉಲ್ಲೇಖಿಸಿ ನೈಸ್ ವಿರುದ್ಧ ವಾಗ್ದಾಳಿ; ಇಡೀ ಯೋಜನೆ ಸ್ವಾಧೀನಕ್ಕೆ ಸರಕಾರಕ್ಕೆ ಆಗ್ರಹ ಯಾರಪ್ಪನ ಆಸ್ತಿ ಎಂದು ಶೋಭಾ ಡೆವಲಪರ್ಸ್ ಗೆ NOC ನೀಡಿದ್ದೀರಿ ಎಂದು ಕಿಡಿ

ಬೆಂಗಳೂರು 8 ಆಗಸ್ಟ್ 2026

ಬೆಂಗಳೂರು–ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ (BMIC) ಯೋಜನೆಯ 'ರಾಜ್ಯದ ಅತಿದೊಡ್ಡ ಹಗರಣಗಳಲ್ಲಿ ಒಂದಾಗಿ ಕಾಣುತ್ತಿದೆ' ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ. ಹೀಗಾಗಿ ಕೂಡಲೇ ನೈಸ್ ಯೋಜನೆಯನ್ನು ರಾಜ್ಯ ಸರಕಾರ ಸ್ವಾಧೀನಪಡಿಸಿಕೊಳ್ಳಬೇಕು ಹಾಗೂ ತಕ್ಷಣವೇ ಟೋಲ್ ಸಂಗ್ರಹ ನಿಲ್ಲಿಸಬೇಕು ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಒತ್ತಾಯಿಸಿದರು.

ಜೆಡಿಎಸ್ ಪಕ್ಷದ ಕೇಂದ್ರ ಕಚೇರಿ ಜೆ.ಪಿ. ಭವನದಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಚಿವರು; ಹೈಕೋರ್ಟ್ ತೀರ್ಪಿನಂತೆ ನೈಸ್ ಕಂಪನಿ ಟೋಲ್ ಸಂಗ್ರಹ ಮಾಡುವುದನ್ನು ನಿಲ್ಲಿಸಬೇಕು. ವಾಹನ ಸವಾರರು ಟೋಲ್ ಕಟ್ಟಬಾರದು ಎಂದು ಕರೆ ನೀಡಿದರು.

ನೈಸ್ ಕಂಪನಿಯ ಅಕ್ರಮಗಳ ಬಗ್ಗೆ ಹೈಕೋರ್ಟ್ ವ್ಯಕ್ತಪಡಿಸಿರುವ ಅಭಿಪ್ರಾಯದಿಂದ ಇನ್ನಾದರೂ ರಾಜ್ಯ ಸರಕಾರ ಕಣ್ತೆರೆಯಬೇಕು. ಯೋಜನೆಯಲ್ಲಿ ಅಕ್ರಮಗಳು ನಡೆದಿವೆ ಹಾಗೂ ವಾಹನ ಸವಾರರಿಂದ ಅಕ್ರಮವಾಗಿ ಟೋಲ್ ಸುಲಿಗೆ ಮಾಡಲಾಗುತ್ತಿದೆ ಎಂದು ಹೇಳಿದೆ. ಈ ಹಿನ್ನೆಲೆಯಲ್ಲಿ ಕಂಪನಿ ತಕ್ಷಣವೇ ಟೋಲ್ ಸಂಗ್ರಹ ನಿಲ್ಲಿಸಬೇಕು. ರಾಜ್ಯ ಸರಕಾರ ಕೂಡಲೇ ಮಧ್ಯಪ್ರವೇಶಿಸಿ ನೈಸ್ ಕಂಪನಿ ಟೋಲ್ ಸಂಗ್ರಹ ಮಾಡಿದಂತೆ ತಡೆಯಬೇಕು. ಇಲ್ಲವಾದರೆ ಜನರೇ ಆ ಕೆಲಸ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಟೋಲ್ ಸಂಗ್ರಹ ನಿಲ್ಲಿಸಲು ಎರಡು ವಾರ ಗಡುವು ನೀಡುತ್ತೇನೆ ಎಂದು ಸ್ಪಷ್ಟ ಮಾತುಗಳಲ್ಲಿ ತಿಳಿಸಿದ ಸಚಿವ ಕುಮಾರಸ್ವಾಮಿ ಅವರು, ಅಷ್ಟರೊಳಗೆ ರಾಜ್ಯ ಸರಕಾರ ಆ ಕಂಪನಿಯಿಂದ ಟೋಲ್ ಸಂಗ್ರಹಕ್ಕೆ ತಡೆ ಒಡ್ಡದಿದ್ದರೆ ನಮ್ಮ ಪಕ್ಷದ ವತಿಯಿಂದ ಉಗ್ರ ಹೋರಾಟ ನಡೆಸುತ್ತೇವೆ ಎಂದು ನೇರ ಎಚ್ಚರಿಕೆ ನೀಡಿದರು.

ಜುಲೈ 29ರಂದು ನೈಸ್ ಯೋಜನೆ ಅಕ್ರಮಗಳ ಕುರಿತಂತೆ ಹೈಕೋರ್ಟ್ ದ್ವಿಸದಸ್ಯ ನ್ಯಾಯಪೀಠ ತೀರ್ಪು ನೀಡಿದೆ.‌ ಬೆಂಗಳೂರು–ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ (BMIC) ಯೋಜನೆಯು 'ರಾಜ್ಯದ ಅತಿದೊಡ್ಡ ಹಗರಣಗಳಲ್ಲಿ ಒಂದಾಗಿ ಕಾಣುತ್ತಿದೆ' ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ಅಲ್ಲದೆ ನೈಸ್ ಕಂಪನಿಯ ವಂಚನೆ ಮತ್ತು ಇನ್ನಿತರ ಅಪರಾಧಗಳ ಆರೋಪಗಳ ಕುರಿತು ತಜ್ಞರ ವಿಶೇಷ ತಂಡದಿಂದ ಸ್ವತಂತ್ರ ತನಿಖೆ ಮತ್ತು ಯೋಜನೆಯ ಲೆಕ್ಕಪತ್ರಗಳ ಬಗ್ಗೆ ಫೊರೆನ್ಸಿಕ್ ಆಡಿಟ್ ನಡೆಸಲು ಇದು ಸೂಕ್ತ ಪ್ರಕರಣವಾಗಿದೆ ಎಂದು ಹೇಳಿತ್ತು. ಅಲ್ಲಿಗೆ ಈ ಯೋಜನೆಯ ಹಣೆಬರಹ ಯಾವ ರೀತಿ ಇದೆ ಎಂಬುದನ್ನು ಜನತೆ ಅರ್ಥಮಾಡಿಕೊಳ್ಳಬೇಕು ಎಂದು ಸಚಿವ ಕುಮಾರಸ್ವಾಮಿ ಅವರು ವಿವರಿಸಿದರು.

ನೈಸ್ ಕಂಪನಿ ವಿರುದ್ಧ ಅನೇಕ ಗುರುತರ ಅಂಶಗಳನ್ನು ನ್ಯಾಯಾಲಯ ಪ್ರಸ್ತಾಪ ಮಾಡಿದ್ದು; ನೈಸ್ ಕಂಪನಿ ಅಕ್ರಮವಾಗಿ ಟೋಲ್ ಸಂಗ್ರಹ ಮಾಡುತ್ತಿದೆ ಎಂದು ಹೇಳಿದೆ. ಹೀಗಾಗಿ ಸರ್ಕಾರ ನೈಸ್ ಟೋಲ್ ಸಂಗ್ರಹವನ್ನು ನಿಲ್ಲಿಸಬೇಕು. ಸರ್ಕಾರ ತೀರ್ಮಾನ ಕೈಗೊಳ್ಳದೇ ಇದ್ದರೆ ನಾವು ಹೋರಾಟ ಮಾಡಲಿದ್ದೇವೆ.‌ ಜನರ ರಕ್ಷಣೆ ಮಾಡಬೇಕಾದ ಸರಕಾರ ಖಾಸಗಿ ಸಂಸ್ಥೆಯೊಂದು ಈ ರೀತಿ ಲೂಟಿ ಮಾಡುವಾಗಲೂ ಏಕೆ ಸುಮ್ಮನಿದೆ? ಎಂದು ಕೋರ್ಟ್ ಖಾರವಾಗಿ ಪ್ರಶ್ನಿಸಿದೆ. ರಾಜ್ಯ ಸರ್ಕಾರ ಏಕೆ ಸುಮ್ಮನಿದೆ? ತಕ್ಷಣ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಕುಮಾರಸ್ವಾಮಿ ಅವರು ಎಚ್ಚರಿಕೆ ನೀಡಿದರು.

ಹೈಕೋರ್ಟ್ ತನ್ನ ತೀರ್ಪಿನಲ್ಲಿ ನೈಸ್ ಅಕ್ರಮವಾಗಿ ಟೋಲ್ ಸಂಗ್ರಹ ಮಾಡುತ್ತಿದೆ ಎಂದು ಹೇಳಿದೆ. ಹೀಗಾಗಿ ಸರ್ಕಾರ ನೈಸ್ ಟೋಲ್ ಸಂಗ್ರಹವನ್ನು ನಿಲ್ಲಿಸಬೇಕು ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.

ಹೆಚ್.ಡಿ. ದೇವೇಗೌಡರು ರಾಜ್ಯದ ಮುಖ್ಯಮಂತ್ರಿ ಆಗಿದ್ದಾಗ ಈ ಯೋಜನೆಗೆ ಪ್ರಾಥಮಿಕ ಒಪ್ಪಂದ ಆಗಿತ್ತು.‌ ಬಳಿಕ ದೇವೇಗೌಡರು ಪ್ರಧಾನಿಯಾದರು. ಅದಾದ ಬಳಿಕ ಈ ವಿಚಾರವಾಗಿ ಹಲವು ನಾಟಕೀಯ ಬೆಳವಣಿಗೆಗಳು ನಡೆದವು.‌ ನೈಸ್ ಕಂಪನಿಗೆ ಮನಸೋಇಚ್ಚೆ ಸರಕಾರ ಮತ್ತು ಅಧಿಕಾರಿಗಳು ರೈತರ ಭೂಮಿ ಲೂಟಿ ಹೊಡೆಯಲು ಅವಕಾಶ ಮಾಡಿಕೊಟ್ಟರು. ನೈಸ್ ರಸ್ತೆ ಹೆಸರಲ್ಲಿ ಐದು ಟೌನ್ ಶಿಪ್, ಪೆರಿಫರೆಲ್ ರಿಂಗ್ ರಸ್ತೆಗಳು ಇತ್ಯಾದಿಗಳ ನೆಪದಲ್ಲಿ ಭೂಮಿಯನ್ನು ಕಸಿದುಕೊಳ್ಳಲಾಯಿತು. ಇದರ ವಿರುದ್ಧವಾಗಿ 150ಕ್ಕೂ ಹೆಚ್ಚು ದೂರುಗಳು ನ್ಯಾಯಾಲಯಕ್ಕೆ ಸಲ್ಲಿಕೆಯಾಗಿದ್ದವು. ಆದರೆ, ನೈಸ್ ಸಂಸ್ಥೆ ಇಡೀ ವ್ಯವಸ್ಥೆಯ ದಾರಿ ತಪ್ಪಿಸಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ನ್ಯಾಯಾಲಯಗಳಿಂದ ಪಾರಾಗಿತ್ತು ಎಂದು ಸಚಿವ ಕುಮಾರಸ್ವಾಮಿ ವಿವರಿಸಿದರು.

ಫ್ರೇಮ್ ವರ್ಕ್ ಒಪ್ಪಂದ ಉಲ್ಲಂಘಿಸಿರುವ ನೈಸ್:

ನೈಸ್ ಕಂಪನಿ ಎಲ್ಲಾ ನಿಯಮಗಳನ್ನು ಮತ್ತು ಕಾನೂನುಗಳನ್ನು ಗಾಳಿಗೆ ತೂರಿದೆ. ಫ್ರೇಮ್ ವರ್ಕ್ ಒಪ್ಪಂದ ಪ್ರಕಾರವೇ ಕೆಲಸ ಮಾಡಬೇಕು ಎಂದು ಷರತ್ತು ಇತ್ತು. ಆದರೆ ನೈಸ್ ಕಂಪನಿ ಅದಾವುದನ್ನು ಪಾಲನೆ ಮಾಡಿಲ್ಲ ಎಂದು ದೂರಿದ ಸಚಿವರು; ಇದು ಕರ್ನಾಟಕದ ಇತಿಹಾಸದಲ್ಲಿ ದೊಡ್ಡ ಹಗರಣ ಎಂದು ಕೋರ್ಟ್ ಹೇಳಿದೆ.‌ ಯೋಜನೆಯನ್ನು ತನ್ನ ಸ್ವಾಧೀನತೆ ತೆಗೆದುಕೊಳ್ಳಲು ಸರ್ಕಾರಕ್ಕೆ ಇದಕ್ಕಿಂತ ಕಾರಣ ಇನ್ನೇನು ಬೇಕಿದೆ ಎಂದು ಕುಮಾರಸ್ವಾಮಿ ಅವರು ಕೇಳಿದರು.

ನೈಸ್ ಯೋಜನೆ ಹೆಸರಿನಲ್ಲಿ ಕೆಲ ಶಕ್ತಿಗಳು ಭೂಮಿ ಲಪಟಾಯಿಸಿವೆ. ಸುಮಾರು 20 ಸಾವಿರಕ್ಕೂ ಹೆಚ್ಚು ಎಕರೆಯಷ್ಟು ಲ್ಯಾಂಡ್ ಬ್ಯಾಂಕ್ ಮಾಡಿಕೊಳ್ಳಲಾಗಿದೆ. ರೈತರಿಗೆ ಅನ್ಯಾಯವಾಗಿದೆ. ಸಾವಿರಾರು ರೈತರು ಇವತ್ತು ಬೀದಿ ಬಿದ್ದಿದ್ದಾರೆ. ಟೋಲ್ ಸಂಗ್ರಹ ಮಾಡಿದಾಗ ಯಾವುದೇ ಮಾನದಂಡವನ್ನು ಈ ಕಂಪನಿ ಪಾಲನೆ ಮಾಡಿಲ್ಲ ಎಂದು ಸಚಿವ ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದರು.

ಶೋಭಾ ಡೆವಲಪರ್ಸ್ ಗೆ NOC ಹೇಗೆ ಕೊಟ್ಟಿರಿ?:

ಅಕ್ರಮಗಳ ಗೂಡಾಗಿರುವ ಈ ಯೋಜನೆಯಲ್ಲಿ ಯಾರು ಯಾರು ಪಾಲದಾರರು ಇದ್ದಾರೆ ಎಂಬುದನ್ನು ಈ ರಾಜ್ಯದ ಮುಖ್ಯಮಂತ್ರಿಗಳಿಗೆ ಕೇಳಲು ಬಯಸುತ್ತೇನೆ. ಬೆಂಗಳೂರಿನ ಹೊಸಕೆರೆಹಳ್ಳಿ ನೈಸ್ ಜಂಕ್ಷನ್ ಬಳಿ ರೈತರನ್ನೆಲ್ಲ ಒಕ್ಕಲೆಬ್ಬಿಸಿದ ಮೇಲೆ ಶೋಭಾ ಡೆವಲಪರ್ಸ್ ಕಂಪನಿ ನೈಸ್ ಕಂಪನಿಗೆ ಒಂದು ಪತ್ರ ಬರೆದು ಬಿಲ್ಡಿಂಗ್ ಕಟ್ಟೋದಕ್ಕೆ ನಮಗೆ ಎನ್ ಓಸಿ ಕೊಡಿ ಎಂದು ಕೇಳುತ್ತದೆ. ನೈಸ್ ಕಂಪನಿ ಶೋಭಾ ಡೆವಲಪರ್ಸ್ ಗೆ ಎನ್ ಓಸಿಯನ್ನೂ ನೀಡುತ್ತದೆ. ಯಾರಪ್ಪನ ಜಮೀನು ಅದು? ಎನ್ ಓಸಿ ಕೊಡುವುದಕ್ಕೆ ನೈಸ್ ಕಂಪನಿ ಅವರಪ್ಪನದಾ ಆ ಆಸ್ತಿ? ಆ ಭೂಮಿಯನ್ನು ಶೋಭಾ ಡೆವಲಪರ್ಸ್ ಗೆ ಹೇಗೆ ಕೊಡುತ್ತಾರೆ ಇವರು? ಎಂದು ತೀಕ್ಷ್ಣವಾಗಿ ಪ್ರಶ್ನಿಸಿದರು ಕೇಂದ್ರ ಸಚಿವರು.

ಇಷ್ಟೆಲ್ಲಾ ಅಕ್ರಮಗಳು ನಡೆಯುತ್ತಿದ್ದರೂ ರಾಜ್ಯ ಸರಕಾರ ಜಾಣಮೌನಕ್ಕೆ ಶರಣಾಗಿದೆ. ಈ ಅಕ್ರಮದಲ್ಲಿ ಭಾಗಿಯಾಗಿರುವವರು ಕೆಲವರು ಈ ಸರಕಾರದಲ್ಲಿದ್ದಾರೆ. ಯಾರಾದರೂ ಒಂದು ರೂಪಾಯಿ ಲಂಚ ಕೇಳಿದರೂ ಕರೆ ಮಾಡಿ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಈ ನೈಸ್ ಸಂಸ್ಥೆಯ ದರೋಡೆ ನಿಮಗೆ ಕಾಣಿಸುತ್ತಿಲ್ಲವೇ? ಇದಕ್ಕಿಂತ ದೊಡ್ಡ ಭ್ರಷ್ಟಾಚಾರ ಬೇಕಾ ನಿಮಗೆ? ಹೈಕೋರ್ಟ್ ಏನು ಹೇಳಿದೆ ಎಂಬುದು ಮುಖ್ಯಮಂತ್ರಿಗಳಿಗೆ ಗೊತ್ತಿಲ್ಲವೇ? ಏನ್ ನಿದ್ದೆ ಮಾಡುತ್ತಿದ್ದೀರಾ ಅಥವಾ ಅತಿ ಜಾಣತನ ಮಾಡುತ್ತಿದ್ದೀರಾ ಎಂದು ಕುಮಾರಸ್ವಾಮಿ ಅವರು ಕಿಡಿಕಾರಿದರು.

ಇಂದಿನಿಂದಲೇ ಯಾರೂ ಟೋಲ್ ಕಟ್ಟಬೇಡಿ. ನಾನು ರಾಜ್ಯದ ಜನರಿಗೆ ಕರೆ ಕೊಡುತ್ತೇನೆ.‌ ಇವರ ಸುಲಿಗೆಗೆ ತಡೆ ಹಾಕಿ. ಲೋಕಸಭೆಯಲ್ಲಿ ನೋಡಿದರೆ ಕಾಂಗ್ರೆಸ್ ಪಕ್ಷ ಕಲಾಪ ನಡೆಯಲು ಬಿಡುತ್ತಿಲ್ಲ. ಇಲ್ಲಿ ನೋಡಿದರೆ ರಾಜ್ಯವನ್ನೇ ಕೊಳ್ಳೆ ಹೊಡೆಯುವ ಕೆಲಸಕ್ಕೆ ಪ್ರೋತ್ಸಾಹ ನೀಡುತ್ತಿದೆ. ಕಾಂಗ್ರೆಸ್ ಕಣ್ಣು ಮುಚ್ಚಿ ಕೂತಿದೆಯಾ ಹೇಗೆ? ಇಂಥ ಹಗಲು ದರೋಡೆ ನೋಡಿಕೊಂಡು ಮೌನಕ್ಕೆ ಶರಣಾಗಬೇಡಿ.‌ ಹೈಕೋರ್ಟ್ ಈ ಬಗ್ಗೆ ತೀರ್ಪು ಕೊಟ್ಟಿದೆ ಎಂಬುದನ್ನು ಮರೆಯಬೇಡಿ ಎಂದು ಎಚ್ಚರಿಕೆ ನೀಡಿದರು.

ಜನರು ಈ ಯೋಜನೆ ವಿರುದ್ಧ ದನಿ ಎತ್ತಬೇಕು. ಯುವಕರು, ರೈತರು ಹೋರಾಟಕ್ಕೆ ಧುಮುಕಬೇಕು ಎಂದು ನಾನು ಕರೆ ಕೊಡುತ್ತಿದ್ದೇನೆ. ಇಂತಹ ಲೂಟಿಕೋರರನ್ನು ಮಟ್ಟ ಹಾಕದಿದ್ದರೆ ಇಡೀ ರಾಜ್ಯವೇ ಸರ್ವನಾಶವಾಗುತ್ತದೆ. ಈ ಸಂಬಂಧ ರಾಜ್ಯ ಸರಕಾರಕ್ಕೆ ಪತ್ರವನ್ನೂ ಬರೆಯುತ್ತೇನೆ.‌ ಒಂದು ವಾರ ಕಾಯುತ್ತೇನೆ. ಆ ಮೇಲೆ ಯಾವ ರೀತಿ ಹೋರಾಟ ನಡೆಸಬೇಕು ಎಂದು ತೀರ್ಮಾನಿಸುತ್ತೇನೆ ಎಂದರು ಕೇಂದ್ರ ಸಚಿವರು.

ಹಿರಿಯ ಶಾಸಕ ಟಿ.ಬಿ. ಜಯಚಂದ್ರ ಅವರು ನೇತೃತ್ವದಲ್ಲಿ ರಚಿಸಲಾಗಿದ್ದ ಸದನ ಸಮಿತಿ ನೈಸ್ ಯೋಜನೆಯನ್ನು ಸರಕಾರ ಸ್ವಾಧೀನಕ್ಕೆ ತೆಗೆದುಕೊಳ್ಳಬೇಕು ಎಂದು ಶಿಫಾರಸು ಮಾಡಿದೆ. ಅಕ್ರಮಗಳ ಆಗರವಾಗಿರುವ ಯೋಜನೆಯ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ತಿಳಿಸಿದೆ. ನೈಸ್ ವಶದಲ್ಲಿರುವ ಅಷ್ಟು ಭೂಮಿಯನ್ನು ವಾಪಸ್ ಪಡೆಯಬೇಕು ಹಾಗೂ ಆ ಭೂಮಿಯನ್ನು ಪುನಾ ರೈತರಿಗೆ ಕೊಡಬೇಕು ಎಂದು ಆ ಸಮಿತಿ ಹೇಳಿದೆ. ರೈತರು ಭೂಮಿ ಕಳೆದುಕೊಂಡು ಸರಿಸುಮಾರು 20 ವರ್ಷ ಆಗಿದೆ. ಇದುವರೆಗೂ ಕೆಐಎಡಿಬಿ ರೈತರಿಗೆ ಪರಿಹಾರದ ಹಣ ನೀಡಿಲ್ಲ. ಪಾಪ.. ರೈತರು ರಸ್ತೆಗೆ ಎಂದು ಜಮೀನನ್ನು ಬರೆದುಕೊಟ್ಟಿದ್ದಾರೆ. ನೈಸ್ ಸಂಸ್ಥೆ ನೋಡಿದರೆ ಆ ರೈತರ ಭೂಮಿಗಳನ್ನು ಸಿಕ್ಕಸಿಕ್ಕವರಿಗೆ ಮಾರಾಟ ಮಾಡುತ್ತಿದೆ ಎಂದು ಅವರು ಆರೋಪಿಸಿದರು.

ಸರಿ ಸುಮಾರು 550 ಎಕರೆ ಹೆಚ್ಚುವರಿ ಭೂಮಿಯನ್ನು ನೈಸ್ ಸಂಸ್ಥೆಗೆ ಕೊಡಲಾಗಿದೆ. ಆದರೆ, ನೈಸ್ ಸಂಸ್ಥೆ ನಮಗೆ ಇನ್ನೂ ಭೂಮಿಯನ್ನು ಕೊಟ್ಟಿಲ್ಲ ಎಂದು ಸುಳ್ಳು ಹೇಳುತ್ತಿದೆ. ಈ ಸಂಸ್ಥೆ ಸರಕಾರದ ಪೂರ್ವಾನುಮತಿ ಇಲ್ಲದೆ ಹಲವು ಬಾರಿ ಟೋಲ್ ದರವನ್ನು ಪರಿಷ್ಕರಣೆ ಮಾಡಿದೆ ಎಂದು ರಾಜ್ಯ ಸರಕಾರವೇ ನ್ಯಾಯಾಲಯದಲ್ಲಿ ಹೇಳಿದೆ. ಪ್ರೇಮ ವರ್ಕ್ ಅಗ್ರಿಮೆಂಟ್ ಮೀರಿ ನೈಸ್ ಅಕ್ರಮಗಳನ್ನು ಎಸಗಿದೆ ಎಂದು ಕುಮಾರಸ್ವಾಮಿ ಅವರು ದೂರಿದರು.


2006ರಲ್ಲಿ ನಾನು ಮುಖ್ಯಮಂತ್ರಿ ಆಗಿದ್ದಾಗ ಈ ವಿಷಯವನ್ನು ಕಲಾಪದಲ್ಲಿ ಪ್ರಸ್ತಾಪ ಮಾಡಿದ್ದೆ. ಸಂಪುಟ ಸಭೆಯಲ್ಲಿ ಈ ಯೋಜನೆಯನ್ನು ರದ್ದು ಮಾಡಬೇಕು ಎಂಬ ನಿರ್ಧಾರ ಕೈಗೊಂಡಿದ್ದೆ.‌ ಆದರೆ ನನಗೆ ಬೆಂಬಲ ಸಿಗದ ಕಾರಣಕ್ಕೆ ಅದನ್ನು ಜಾರಿಗೆ ತರಲು ಸಾಧ್ಯವಾಗಿಲ್ಲ ಎಂದು ಸಚಿವರು ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು.

ಸಾರ್ವಜನಿಕರಿಗೆ ನಾನು ಮನವಿ ಮಾಡುತ್ತೇನೆ. ಯಾವುದೇ ಕಾರಣಕ್ಕೂ ಟೋಲ್ ಕಟ್ಟಬೇಡಿ. ಈ ಬಗ್ಗೆ ಸರಕಾರಕ್ಕೂ ಪತ್ರ ಬರೆದು ಒತ್ತಾಯ ಮಾಡುತ್ತೇನೆ. ಯಾರೋ ಪಾಪ ಫುಟ್ಪಾತ್‌ಗಳ ಮೇಲೆ ವ್ಯಾಪಾರ ಮಾಡಿಕೊಂಡು ಜೀವನ ಮಾಡುತ್ತಿದ್ದ ಬಡವರನ್ನು ಓಡಿಸಲಾಗಿದೆ. ಇಲ್ಲಿ ನೋಡಿದರೆ ಸಾವಿರಾರು ಕೋಟಿ ಮೊತ್ತದ ಭೂಮಿಯನ್ನು ಲೂಟಿ ಮಾಡುತ್ತಿದ್ದಾರೆ. ಪುಟ್ಪಾಟ್ ಗಳನ್ನು ಕ್ಲೀನ್ ಮಾಡುತ್ತಿದ್ದೀರಿ ಸರಿ, ನೈಸ್ ಕೊಳೆಯನ್ನು ಯಾವಾಗ ಕ್ಲೀನ್ ಮಾಡುತ್ತೀರಿ ಎಂಬುದನ್ನು ಹೇಳಿ ಕೃಷ್ಣಬೈರೇಗೌಡರೇ? ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವರನ್ನು ಆಗ್ರಹಿಸಿದರು.

ಮಾಧ್ಯಮಗೋಷ್ಠಿಯಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ. ಸುರೇಶ್ ಬಾಬು, ಮಾಜಿ ಸಚಿವ ವೆಂಕಟರಾವ್ ನಾಡಗೌಡ, ವಿಧಾನ ಪರಿಷತ್ ಸದಸ್ಯರಾದ ಎಸ್ ಎಲ್ ಭೋಜೇಗೌಡ, ಜವರಾಯಿಗೌಡ, ಲೋಕಸಭೆ ಸದಸ್ಯ ಎಂ ಮಲ್ಲೇಶ್ ಬಾಬು, ಮಾಜಿ ಶಾಸಕರಾದ ಕೆ.ಎ. ತಿಪ್ಪೇಸ್ವಾಮಿ, ಡಾ.ಕೆ. ಅನ್ನದಾನಿ, ನಿಂಗಪ್ಪ, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ರಶ್ಮಿ ರಾಮೇಗೌಡ ಮುಂತಾದವರು ಉಪಸ್ಥಿತರಿದ್ದರು.

Comments

Leave a Comment

Prev Post ಖಾಸಗಿ ಶಾಲೆಗಳ ಶುಲ್ಕದ ವಿವರ ಪ್ರಕಟಿಸಲು ಶಿಕ್ಷಣ ಇಲಾಖೆ ಸುತ್ತೋಲೆ, ನಿಯಮ ಉಲ್ಲಂಘನೆಗೆ ಭಾರೀ ದಂಡ ಎಚ್ಚರಿಕೆ
Next Post ಬಿಡದಿ ಟೌನ್ ಶಿಪ್ ಅಭಿಪ್ರಾಯಗಳ ಸಮಗ್ರ ಪರಿಶೀಲನೆಗೆ ನ್ಯಾಯಮೂರ್ತಿ ಗುಹನಾಥನ್ ನರೇಂದರ್ ನೇತೃತ್ವದ ಸಮಿತಿ ರಚನೆ

ವಿಮಾನ ನಿಲ್ದಾಣ: ಬಳ್ಳಾರಿ, ವಿಜಯನಗರ, ಕೊಪ್ಪಳ ಜಿಲ್ಲೆಗಳ ಜನಪ್ರತಿನಿಧಿಗಳ ಜತೆ ಚರ್ಚಿಸಿ ತೀರ್ಮಾನ

ಸಿಎಂ ನೇತೃತ್ವದಲ್ಲಿ ಸಭೆ ಮಾಡಿ ಅಂತಿಮ ನಿರ್ಧಾರ: ಎಂ ಬಿ ಪಾಟೀಲ

ಇನ್ನೆರಡು ತಿಂಗಳಲ್ಲಿ ಕಳೆದೆರಡು ಸಾಲಿನ ಉದ್ಯೋಗಿನಿ‌ ಯೋಜನೆಯ ಸಹಾಯ ಧನ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ತೇರದಾಳ ಶಾಸಕ ಸಿದ್ದು ಸವದಿ ಕೇಳಿದ ಪ್ರಶ್ನೆಗೆ ಸಚಿವರ ಉತ್ತರ

ಎಲ್ಲರಿಗೂ ರೋಗ ನಿರೋಧಕ ಲಸಿಕೆ: ಮೊಟ್ಟ ಮೊದಲಿಗೆ ಸ್ಪರ್ಶ್‌ ಆಸ್ಪತ್ರೆಯಲ್ಲಿ ಆರಂಭ

ಎಲ್ಲರಿಗೂ ರೋಗ ನಿರೋಧಕ ಲಸಿಕೆ: ಮೊಟ್ಟ ಮೊದಲಿಗೆ ಸ್ಪರ್ಶ್‌ ಆಸ್ಪತ್ರೆಯಲ್ಲಿ ಆರಂಭ ಮಕ್ಕಳಿಂದ ವಯಸ್ಕರವರೆಗೆ ಎಲ್ಲರಿಗೂ ಲಸಿಕೆ!

ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಭೇಟಿಯಾದ ಆಸ್ಟ್ರೇಲಿಯಾ ನಿಯೋಗ

ಅಕ್ಕಪಡೆ, ಗೃಹಲಕ್ಷ್ಮಿ, ಶಕ್ತಿ ಯೋಜನೆಗಳ ಮಾಹಿತಿ ಹಂಚಿಕೊಂಡ ಸಚಿವರು

ಅತಿ ಹೆಚ್ಚು ಸಾಲ ಮಾಡಿ ಜನರನ್ನು ಸಾಲದ ಸುಳಿಗೆ ಸಿಲುಕಿ ಹಾಕಿಸಿರುವುದು ಸುಳ್ಳಲ್ಲ ಆರ್ಥಿಕ, ಬೌದ್ಧಿಕ ದಿವಾಳಿತನದ ಪ್ರದರ್ಶನ: ವಿಜಯೇಂದ್ರ

ಅತಿ ಹೆಚ್ಚು ಸಾಲ ಮಾಡಿ ಜನರನ್ನು ಸಾಲದ ಸುಳಿಗೆ ಸಿಲುಕಿ ಹಾಕಿಸಿರುವುದು ಸುಳ್ಳಲ್ಲ ಆರ್ಥಿಕ, ಬೌದ್ಧಿಕ ದಿವಾಳಿತನದ ಪ್ರದರ್ಶನ: ವಿಜಯೇಂದ್ರ

ಮೇ ವೇಳೆಗೆ ತುಂಗಭದ್ರಾ ಅಣೆಕಟ್ಟು ಎಲ್ಲಾ ಗೇಟ್ ಗಳ ಬದಲಾವಣೆ: ಡಿಸಿಎಂ ಡಿ.ಕೆ. ಶಿವಕುಮಾರ್

ಮೇ ವೇಳೆಗೆ ತುಂಗಭದ್ರಾ ಅಣೆಕಟ್ಟು ಎಲ್ಲಾ ಗೇಟ್ ಗಳ ಬದಲಾವಣೆ: ಡಿಸಿಎಂ ಡಿ.ಕೆ. ಶಿವಕುಮಾರ್

Read all News