ಖಾಸಗಿ ಶಾಲೆಗಳ ಶುಲ್ಕದ ವಿವರ ಪ್ರಕಟಿಸಲು ಶಿಕ್ಷಣ ಇಲಾಖೆ ಸುತ್ತೋಲೆ, ನಿಯಮ ಉಲ್ಲಂಘನೆಗೆ ಭಾರೀ ದಂಡ ಎಚ್ಚರಿಕೆ
ಖಾಸಗಿ ಶಾಲೆಗಳ ಶುಲ್ಕದ ವಿವರ ಪ್ರಕಟಿಸಲು ಶಿಕ್ಷಣ ಇಲಾಖೆ ಸುತ್ತೋಲೆ, ನಿಯಮ ಉಲ್ಲಂಘನೆಗೆ ಭಾರೀ ದಂಡ ಎಚ್ಚರಿಕೆ
ಬೆಂಗಳೂರು , ಆ.7-ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಖಾಸಗಿ ಅನುದಾನರಹಿತ ಶಾಲೆಗಳ ಶುಲ್ಕದ ವಿವರಗಳನ್ನು ಸಾರ್ವಜನಿಕವಾಗಿ ಪ್ರಕಟಿಸುವಂತೆ ಹೊಸ ಸುತ್ತೋಲೆ ಹೊರಡಿಸಿದ್ದಾರೆ. ಶಿಕ್ಷಣ ಹಕ್ಕು ಕಾಯಿದೆ-2009 ಮತ್ತು ಕರ್ನಾಟಕ ಕಡ್ಡಾಯ ಹಾಗೂ ಉಚಿತ ಪ್ರಾಥಮಿಕ ಶಿಕ್ಷಣ ಹಕ್ಕು ನಿಯಮಗಳು-2012ರ ಪ್ರಕಾರ, ಯಾವುದೇ ಖಾಸಗಿ ಶಾಲೆಗಳು ಕ್ಯಾಪಿಟೇಶನ್ ಶುಲ್ಕ ಅಥವಾ ದೇಣಿಗೆಗಳನ್ನು ವಸೂಲಿಸಬಾರದು. ವಿದ್ಯಾರ್ಥಿಗಳ ದಾಖಲಾತಿ ವೇಳೆ ಯಾವುದೇ ರೀತಿಯ ಸ್ಕ್ರೀನಿಂಗ್ ವಿಧಾನ ಅನುಸರಿಸುವುದೂ ನಿಷೇಧ ಮಾಡಲಾಗಿದೆ.
ಸೆಕ್ಷನ್ 13ರ ಪ್ರಕಾರ, ಪ್ರವೇಶಕ್ಕೆ ಕ್ಯಾಪಿಟೇಶನ್ ಶುಲ್ಕ ವಸೂಲಿಸಿದರೆ ಪಾವತಿಸಿದ ಮೊತ್ತದ ಹತ್ತು ಪಟ್ಟು ದಂಡ ವಿಧಿಸಲಾಗುತ್ತದೆ. ಸ್ಕ್ರೀನಿಂಗ್ ವಿಧಾನ ಅನುಸರಿಸಿದರೆ ಮೊದಲ ಉಲ್ಲಂಘನೆಗೆ ₹25,000 ದಂಡ, ನಂತರದ ಉಲ್ಲಂಘನೆಗಳಿಗೆ ₹50,000 ದಂಡ ವಿಧಿಸಲಾಗುತ್ತದೆ. ಎಲ್ಲಾ ಖಾಸಗಿ ಶಾಲೆಗಳು ತಮ್ಮ ಶುಲ್ಕದ ವಿವರಗಳನ್ನು ಶಾಲಾ ಜಾಲತಾಣದಲ್ಲಿ, ಶಾಲಾ ಸೂಚನಾ ಫಲಕದಲ್ಲಿ ಹಾಗೂ ಇಲಾಖೆಯ SATS ಜಾಲತಾಣದಲ್ಲಿ ಪ್ರಕಟಿಸಬೇಕೆಂದು ಕಡ್ಡಾಯಗೊಳಿಸಲಾಗಿದೆ.
ಯಾವುದೇ ಶಾಲೆಗಳು ಈ ನಿಯಮಗಳನ್ನು ಉಲ್ಲಂಘಿಸಿದರೆ ಸಂಬಂಧಪಟ್ಟ ಉಪನಿರ್ದೇಶಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಯುಕ್ತರು ಸೂಚಿಸಿದ್ದಾರೆ. ಈ ಸುತ್ತೋಲೆ ಮೇಲೆ ಆಯುಕ್ತರಾದ ವಿಕಾಸ್ ಕಿಶೋರ್ ಸುರಳ್ಕರ್ ಅವರು 03 ಆಗಸ್ಟ್ 2026ರಂದು ಡಿಜಿಟಲ್ ಸಹಿ ಮಾಡಿದ್ದಾರೆ.
ರಾಜ್ಯದ ಎಲ್ಲಾ ಖಾಸಗಿ ಶಾಲೆಗಳು ತಮ್ಮ ಶುಲ್ಕದ ವಿವರಗಳನ್ನು ಪಾರದರ್ಶಕವಾಗಿ ಪ್ರಕಟಿಸಬೇಕು, ಪೋಷಕರಿಗೆ ಯಾವುದೇ ರೀತಿಯ ಹೆಚ್ಚುವರಿ ಭಾರ ಹಾಕಬಾರದು, ನಿಯಮ ಉಲ್ಲಂಘಿಸಿದರೆ ಕಠಿಣ ದಂಡ ವಿಧಿಸಲಾಗುವುದು ಎಂಬುದಾಗಿ ಇಲಾಖೆ ಎಚ್ಚರಿಸಿದೆ







Comments
Leave a Comment