“ಮೂರು ವರ್ಷಗಳ ಬಳಿಕವೂ ಭರವಸೆ ಖಾಲಿ – ಕಾಂಗ್ರೆಸ್ ವಿರುದ್ಧ KRMO ಗರಂ”
“ಮೂರು ವರ್ಷಗಳ ಬಳಿಕವೂ ಭರವಸೆ ಖಾಲಿ – ಕಾಂಗ್ರೆಸ್ ವಿರುದ್ಧ KRMO ಗರಂ”
ಬೆಂಗಳೂರು, ಜು. 20-2023ರ ವಿಧಾನಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಹಾಗೂ ಪ್ರಚಾರ ಭಾಷಣಗಳಲ್ಲಿ ನೀಡಿದ್ದ ಹತ್ತು ಪ್ರಮುಖ ಭರವಸೆಗಳನ್ನು ಮೂರು ವರ್ಷ ಕಳೆದರೂ ಈಡೇರಿಸದಿರುವುದನ್ನು ಒಕ್ಕೂಟ ಗಂಭೀರವಾಗಿ ಪ್ರಶ್ನಿಸಿದೆ. ಕರ್ನಾಟಕ ರಾಜ್ಯ ಮುಸ್ಲಿಂ ಒಕ್ಕೂಟ (KRMO) ಪತ್ರಿಕಾಗೊಷ್ಠಿಯಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿತು.
ಹಿಜಾಬ್ ನಿರ್ಬಂಧವನ್ನು ವಾಪಸ್ ಪಡೆಯುವ ಭರವಸೆ ಮಾತ್ರ ಮೂರು ವರ್ಷಗಳ ಬಳಿಕ ಜಾರಿಗೊಂಡಿದೆ. ಉಳಿದಂತೆ 28% ಮೀಸಲಾತಿ ಮರುಸ್ಥಾಪನೆ, ದ್ವೇಷ ಭಾಷಣ ಹಾಗೂ ದ್ವೇಷ ಅಪರಾಧಗಳ ವಿರುದ್ಧ ಕಠಿಣ ಕಾನೂನು ಕ್ರಮ, ಗೋಹತ್ಯಾ ನಿಷೇಧ ಕಾಯ್ದೆಗೆ ತಿದ್ದುಪಡಿ, ಮತಾಂತರ ನಿರ್ಬಂಧ ಕಾಯ್ದೆ ವಾಪಸ್, ಜಾತಿ ಸಮೀಕ್ಷೆ ವರದಿ ಜಾರಿ, ಅಲ್ಪಸಂಖ್ಯಾತರಿಗೆ ₹10,000 ಕೋಟಿ ಬಜೆಟ್ ಹಂಚಿಕೆ, ವಕ್ಫ್ ಅಸ್ತಿಗಳ ರಕ್ಷಣೆಗೆ ಕ್ರಮ, ಜನಸಂಖ್ಯೆ ಅನುಗುಣವಾಗಿ ರಾಜಕೀಯ ಪ್ರಾತಿನಿಧ್ಯ, ಶೈಕ್ಷಣಿಕ ಏಳಿಗೆಗೆ ನೆರವು ಹಾಗೂ ಎಸ್‌ಐಆರ್ ವಿರುದ್ಧ ಸೂಕ್ತ ನಿರ್ಧಾರಗಳನ್ನು ಇವುಗಳನ್ನು ಕೂಡಲೇ ಜಾರಿಗೊಳಿಸಬೇಕೆಂದು ಕರ್ನಾಟಕ ರಾಜ್ಯ ಮುಸ್ಲಿಂ ಒಕ್ಕೂಟ ಸಂಚಾಲಕರಾದ ಸುಹೇಲ್ ಅಹ್ಮದ್ ಮರೂರ್ ಆಗ್ರಹಿಸಿದ್ದಾರೆ.
ಮೇ 16, 2026ರಂದು ಬೆಂಗಳೂರಿನ ಪುರಭವನದಲ್ಲಿ ನಡೆದ *ಕರ್ನಾಟಕ ಮುಸ್ಲಿಂ ಸಮಾವೇಶ*ದಲ್ಲಿ ಈ ವಿಷಯಗಳ ಕುರಿತ ಸಮಗ್ರ ವರದಿ ಹಾಗೂ ಆಗ್ರಹಗಳ ಪುಸ್ತಕವನ್ನು ಕನ್ನಡ, ಇಂಗ್ಲಿಷ್ ಮತ್ತು ಉರ್ದು ಭಾಷೆಗಳಲ್ಲಿ ಬಿಡುಗಡೆ ಮಾಡಲಾಗಿತ್ತು. ಆ ಪುಸ್ತಕ ರಾಜ್ಯ ರಾಜಕೀಯದಲ್ಲಿ ದೊಡ್ಡ ಸಂಚಲನಕ್ಕೆ ಕಾರಣವಾಗಿತ್ತು. ಅದರ ಪರಿಣಾಮವಾಗಿ ಹಿಜಾಬ್ ನಿರ್ಬಂಧವನ್ನು ಸರ್ಕಾರ ಹಿಂತೆಗೆದುಕೊಂಡಿತ್ತು.
KRMO ಈಗ ಹೊಸ ಸರ್ಕಾರಕ್ಕೆ ಒಂದು ತಿಂಗಳ ಅವಧಿ ನೀಡಿದ ಬಳಿಕ, ಮತ್ತೆ ಒತ್ತಡ ಹೆಚ್ಚಿಸಲು ತೀರ್ಮಾನಿಸಿದೆ. ರಾಜ್ಯದ ಶಾಸಕರು, ಪ್ರಭಾವೀ ನಾಯಕರು, ಉಲಮಾಗಳು, ಧಾರ್ಮಿಕ ಸಂಘಟನೆಗಳು, ಪತ್ರಕರ್ತರು, ಬುದ್ಧಿಜೀವಿಗಳು ಹಾಗೂ ಕ್ರೈಸ್ತ ಸಮುದಾಯದ ಮುಖಂಡರ ಸಹಕಾರದೊಂದಿಗೆ ಸರ್ಕಾರದ ಮೇಲೆ ಒತ್ತಡ ಹೇರುವ ಕಾರ್ಯತಂತ್ರ ರೂಪಿಸಲಾಗಿದೆ.
ಮುಂದಿನ ಹಂತವಾಗಿ ದಾವಣಗೆರೆಯಲ್ಲಿ ಮತ್ತೊಂದು *ಕರ್ನಾಟಕ ಮುಸ್ಲಿಂ ಸಮಾವೇಶ* ನಡೆಸಿ ಪುಸ್ತಕವನ್ನು ಬಿಡುಗಡೆ ಮಾಡುವ ಯೋಜನೆ ಇದೆ. ನಂತರ ಮಂಗಳೂರಿನಲ್ಲಿಯೂ ಸಮಾವೇಶ ನಡೆಸುವ ಬಗ್ಗೆ ಚರ್ಚೆ ನಡೆಯುತ್ತಿದೆ.
KRMO ಸ್ಪಷ್ಟವಾಗಿ ಹೇಳಿರುವಂತೆ, ಕಾಂಗ್ರೆಸ್ ಪಕ್ಷಕ್ಕೆ ಮುಸ್ಲಿಂ ಸಮುದಾಯ ನೀಡಿದ ಬೆಂಬಲವೇ ರಾಜ್ಯದಲ್ಲಿ ಜಾತ್ಯತೀತ ಸರ್ಕಾರ ಬರುವುದಕ್ಕೆ ಕಾರಣವಾಗಿದೆ. ಆದ್ದರಿಂದ ಕಾಂಗ್ರೆಸ್ ತನ್ನ ಭರವಸೆಗಳನ್ನು ತಡಮಾಡದೆ ಈಡೇರಿಸಬೇಕು. ಇಲ್ಲವಾದರೆ ಸಮುದಾಯದಲ್ಲಿ ಅಪನಂಬಿಕೆ ಮೂಡುವ ಅಪಾಯವಿದೆ ಎಂದು ಎಚ್ಚರಿಸಿದೆ.
ಕಾಂಗ್ರೆಸ್ ನೀಡಿದ ಭರವಸೆಗಳು ಇನ್ನೂ ಕಾಗದದಲ್ಲೇ ಉಳಿದಿವೆ. KRMO ಈಗ ಸ್ಪಷ್ಟವಾಗಿ ಹೇಳುತ್ತಿದೆ – ಸಮುದಾಯದ ವಿಶ್ವಾಸವನ್ನು ಉಳಿಸಬೇಕಾದರೆ, ಕಾಂಗ್ರೆಸ್ ತಕ್ಷಣವೇ ತನ್ನ ಮಾತುಗಳನ್ನು ಕಾರ್ಯರೂಪಕ್ಕೆ ತರುವುದೇ ಅನಿವಾರ್ಯ!” ಎಂದು ಅವರು ಹೇಳಿದರು.





Comments
Leave a Comment