ಹಿರಿಯ ಗಾಯಕಿ ಎಸ್. ಜಾನಕಿ ನಿಧನ
ಮೈಸೂರು ಜುಲೈ 11 – ಹಿರಿಯ ಹಿನ್ನೆಲೆ ಗಾಯಕಿ ಎಸ್. ಜಾನಕಿ ಅವರು ಇಂದು ಮೈಸೂರಿನಲ್ಲಿ ನಿಧನ ಹೊಂದಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಭಾರತೀಯ ಚಲನಚಿತ್ರ ಸಂಗೀತ ಲೋಕದಲ್ಲಿ ಅಪ್ರತಿಮ ಸ್ಥಾನ ಪಡೆದಿದ್ದ ಜಾನಕಿ ಅವರು 20ಕ್ಕೂ ಹೆಚ್ಚು ಭಾಷೆಗಳಲ್ಲಿ 48 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿ ಜನಮನ ಗೆದ್ದಿದ್ದರು.
ಅವರ ಸಾವಿಗೆ ಅನೇಕ ಗಣ್ಯರು ಕಂಬನಿ ಮಿಡಿದು ಸಂತಾಪ ಸೂಚಿಸಿದ್ದಾರೆ.
ಈ ವರ್ಷ ಜನವರಿಯಲ್ಲಿ ಜಾನಕಿ ಅವರ ಪುತ್ರ ಮುರಳಿ ಕೃಷ್ಣ ನಿಧನ ಹೊಂದಿದ್ದರು. ಆ ಬಳಿಕ ಪುತ್ರ ಶೋಕ ಅತಿಯಾಗಿ ಕಾಡಿತ್ತು. ಇದರಿಂದ ಅವರ ಆರೋಗ್ಯ ಹದಗೆಟ್ಟಿತ್ತು. ಈಗ ಚಿಕಿತ್ಸೆ ಫಲಕಾರಿಯಾಗದೆ ಅವರು ಮೈಸೂರಿನಲ್ಲಿ ಕೊನೆಯುಸಿರೆಳೆದಿದ್ದಾರೆ.
ಜಾನಕಿ ಅವರು ಮೂಲತಃ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯವರು. ಅವರು ಆಂಧ್ರದವರಾದರೂ ಹೆಚ್ಚು ಪ್ರಸಿದ್ಧಿ ಪಡೆದು ಕನ್ನಡಿಗರ ಮನೆಮನಗಳಿಗೆ ಹತ್ತಿರವಾದದ್ದು ಕನ್ನಡ ಹಾಡುಗಳ ಮೂಲಕ. ಕನ್ನಡ ಭಾಷೆಯನ್ನು ಅತ್ಯಂತ ಸ್ಪಷ್ಟವಾಗಿ ಉಚ್ಚರಿಸುತ್ತಾ, ಇಲ್ಲಿನದ್ದೇ ಧ್ವನಿ ಎನ್ನುವಂತೆ ಅವರು ಸಾವಿರಾರು ಸೂಪರ್ ಹಿಟ್ ಹಾಡುಗಳನ್ನು ನೀಡಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಜಾನಕಿ ಅಮ್ಮನ ಸಾಧನೆ:
70-80ರ ದಶಕದಲ್ಲಿ ಜಾನಕಿ ಅವರು ಸಾಕಷ್ಟು ಹಾಡುಗಳನ್ನು ಹಾಡಿದರು. ಅವರಷ್ಟು ಜನಪ್ರಿಯತೆ ಪಡೆದ ಮತ್ತೊಬ್ಬರು ಕನ್ನಡದಲ್ಲಿ ಇರಲಿಲ್ಲ. ವರನಟ ಡಾ. ರಾಜ್‌ಕುಮಾರ್ ಹಾಗೂ ಎಸ್. ಜಾನಕಿ ಅವರ ಕಾಂಬಿನೇಷನ್ ಕನ್ನಡ ಚಿತ್ರರಂಗದ ಗೋಲ್ಡನ್ ಎರಾ. ‘ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೆ’ ಮುಂತಾದ ನೂರಾರು ಸದಾಹಸಿರು ಯುಗಳ ಗೀತೆಗಳನ್ನು ಇವರು ನೀಡಿದ್ದಾರೆ.
ಎಸ್‌ಪಿಬಿ-ಜಾನಕಿ ಮ್ಯಾಜಿಕ್: ಗಾನಗಂಧರ್ವ ಎಸ್‌ಪಿ ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ ಅವರ ಧ್ವನಿಯಲ್ಲಿ ಮೂಡಿಬಂದ ರೋಮ್ಯಾಂಟಿಕ್ ಹಾಡುಗಳು ಇಂದಿಗೂ ಯುವಕರ ನೆಚ್ಚಿನ ಹಾಡುಗಳಾಗಿವೆ.
ಗಾನಕೋಗಿಲೆ ಎಸ್. ಜಾನಕಿ ಅವರಿಗೆ ಇರುವ ಅತಿ ದೊಡ್ಡ ವಿಶೇಷ ಶಕ್ತಿಯೆಂದರೆ ಅದು ಧ್ವನಿ ಬದಲಾವಣೆ . ಸಣ್ಣ ಮಗುವಿನ ಧ್ವನಿಯಿಂದ ಹಿಡಿದು ಪ್ರೌಢ ಮಹಿಳೆಯ ಧ್ವನಿಯವರೆಗೆ, ಕೇವಲ ಗಾಯನದ ಮೂಲಕವೇ ನಟನೆಯ ಭಾವನೆಗಳನ್ನು ತರುತ್ತಿದ್ದ ಅದ್ಭುತ ಗಾಯಕಿ ಇವರು. ಕನ್ನಡ ಚಿತ್ರರಂಗದಲ್ಲಿ ಅವರು ಹಾಡಿದ ಸದಾಹಸಿರು ಗೀತೆಗಳಿಗೆ ಕರ್ನಾಟಕ ಸರ್ಕಾರವು ಹಲವು ಬಾರಿ ‘ಅತ್ಯುತ್ತಮ ಹಿನ್ನೆಲೆ ಗಾಯಕಿ’ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿದೆ.
ಭಾರತೀಯ ಚಲನಚಿತ್ರ ಸಂಗೀತ ಲೋಕದಲ್ಲಿ ಅಪ್ರತಿಮ ಸ್ಥಾನ ಪಡೆದಿರುವ ಎಸ್. ಜಾನಕಿ ಅವರು ಏಪ್ರಿಲ್ 23, 1938ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೇ ಗ್ರಾಮದಲ್ಲಿ ಜನಿಸಿದರು. ಬಾಲ್ಯದಲ್ಲೇ ಸಂಗೀತಾಭ್ಯಾಸ ಆರಂಭಿಸಿದ ಅವರು, 1956ರಲ್ಲಿ ಆಕಾಶವಾಣಿ ನಡೆಸಿದ ಸಂಗೀತ ಸ್ಪರ್ಧೆಯಲ್ಲಿ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್ ಅವರಿಂದ ಬಹುಮಾನ ಸ್ವೀಕರಿಸಿ ತಮ್ಮ ಪ್ರತಿಭೆಯನ್ನು ದೇಶಕ್ಕೆ ಪರಿಚಯಿಸಿದರು.
ಚೆನ್ನೈಗೆ ತೆರಳಿ ಲತಾ ಮಂಗೇಶ್ಕರ್ ಅವರ ‘ರಸಿಕ್ ಬಲಮಾ’ ಹಾಡಿ ಎವಿಎಮ್ ಸಂಸ್ಥೆಯವರ ಕಾಂಟ್ರಾಕ್ಟ್ ಪಡೆದ ಅವರು, 1957ರಲ್ಲಿ ಟಿ. ಚಲಪತಿ ರಾವ್ ನಿರ್ದೇಶನದ ತಮಿಳು ಚಿತ್ರ ವಿಧಿಯಿನ್ ವಿಳಯಾಟ್ಟು ಮೂಲಕ ಚಿತ್ರರಂಗ ಪ್ರವೇಶಿಸಿದರು. ನಂತರ ತೆಲುಗು, ಕನ್ನಡ, ಮಲಯಾಳಂ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಪ್ರಮುಖ ಭಾಷೆಗಳಲ್ಲಿ ಹಾಡಿ ಜನಮನ ಗೆದ್ದರು.
ಐವತ್ತೊಂಬತ್ತು ವರ್ಷಗಳ ಸಂಗೀತಯಾನದಲ್ಲಿ ಅವರು 17ಕ್ಕೂ ಹೆಚ್ಚು ಭಾರತೀಯ ಭಾಷೆಗಳಲ್ಲಿ 48 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಕನ್ನಡದಲ್ಲಿ “ಶಿವ ಶಿವ ಎನ್ನದ ನಾಲಿಗೆಯೇಕೆ?” (ಹೇಮಾವತಿ) ಹಾಗೂ “ಕಂಗಳು ತುಂಬಿರಲು” (ಚಂದನದ ಗೊಂಬೆ) ಹಾಡುಗಳು ಅವರ ಗಾಯನದ ಶ್ರೇಷ್ಠತೆಯನ್ನು ತೋರಿಸಿದವು. ತಮಿಳಿನಲ್ಲಿ “ಸಿಂಗಾರವೇಲನೆ ದೇವ” ಹಾಡು ಅವರನ್ನು ದೇಶದಾದ್ಯಂತ ಪ್ರಸಿದ್ಧಗೊಳಿಸಿತು.
ಡಾ. ಎಸ್.ಪಿ. ಬಾಲಸುಬ್ರಮಣ್ಯಂ ಅವರೊಂದಿಗೆ ಅನೇಕ ಯುಗಲಗೀತೆಗಳನ್ನು ಹಾಡಿದ ಜಾನಕಿ, ತಮ್ಮ ಸ್ವರವನ್ನು ನಾದಸ್ವರ, ಶಹನಾಯ್, ಪಿಟೀಲು, ವೇಣುವಾದನದೊಂದಿಗೆ ಮೇಳೈಸಿ ಅಪೂರ್ವ ಗಾಯನವನ್ನು ನೀಡಿದರು. ಬಿಸ್ಮಿಲ್ಲಾ ಖಾನ್ ಅವರ ಶಹನಾಯ್ ಜೊತೆ ಹಾಡಿದ “ಕರೆದರು ಕೇಳದೆ” ಗೀತೆ ಇದಕ್ಕೆ ಉದಾಹರಣೆ.
ಅವರು ಹಾಡಿರುವ ಭಕ್ತಿಗೀತೆಗಳು ಜನಮನದಲ್ಲಿ ಶಾಶ್ವತ ಸ್ಥಾನ ಪಡೆದಿವೆ. “ಗಜಮುಖನೆ ಗಣಪತಿಯೇ”, “ಜಯ ಗೌರಿ ಜಗದೀಶ್ವರೀ”, “ಮಲೆನಾಡಿನ ಈ ಸೊಬಗಿನ ಐಸಿರಿ” ಮುಂತಾದ ಹಾಡುಗಳು ಭಕ್ತಿಯ ಸವಿಯನ್ನು ಹರಡಿದವು.
ಜಾನಕಿ ಅವರು ತಮ್ಮ ಗಾಯನವನ್ನು ನಿಲ್ಲಿಸುವ ನಿರ್ಧಾರವನ್ನು ಪ್ರಕಟಿಸಿ, ಮಲಯಾಳದ 10 ಕಲ್ಪನಕಳ್ ಚಿತ್ರದ “ಅಮ್ಮಪೂವಿನು” ಗೀತೆ ತಮ್ಮ ವೃತ್ತಿ ಬದುಕಿನ ಕೊನೆಯ ಹಾಡಾಗಲಿದೆ ಎಂದು ಘೋಷಿಸಿದರು. “ನನಗೆ ವಯಸ್ಸಾಗಿದೆ, ಈಗ ವಿಶ್ರಾಂತಿ ಬೇಕಿದೆ” ಎಂದು 78ನೇ ವಯಸ್ಸಿನಲ್ಲಿ ಅವರು ಹೇಳಿದ್ದರು.
ಆರು ದಶಕಗಳ ಸಂಗೀತಯಾನದಲ್ಲಿ ಅವರು ನಾಲ್ಕು ಬಾರಿ ರಾಷ್ಟ್ರೀಯ ಪ್ರಶಸ್ತಿ ಹಾಗೂ 32ಕ್ಕೂ ಹೆಚ್ಚು ರಾಜ್ಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಮೈಸೂರು ವಿಶ್ವವಿದ್ಯಾಲಯವು ಅವರಿಗೆ ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಿದೆ. 2014ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ.
2013ರಲ್ಲಿ ಭಾರತ ಸರ್ಕಾರವು ಅವರಿಗೆ ಪದ್ಮಭೂಷಣ ಪ್ರಶಸ್ತಿ ಘೋಷಿಸಿದಾಗ, ದಕ್ಷಿಣ ಭಾರತೀಯರ ಬಗ್ಗೆ ಅಸಡ್ಡೆ ಇರುವುದನ್ನು ವಿರೋಧಿಸಿ ಅವರು ಪ್ರಶಸ್ತಿಯನ್ನು ತಿರಸ್ಕರಿಸಿದರು.
ಎಸ್. ಜಾನಕಿ ಅವರ ಗಾಯನವು ಮಹಾಸಾಗರದ ಆಳದಂತೆ – ಅಳತೆ ಮಾಡಲು ಅಸಾಧ್ಯ. “ದೋಣಿ ಸಾಗಲಿ ಮುಂದೆ ಹೋಗಲಿ”, “ಬಾನಲ್ಲೂ ನೀನೆ ಭುವಿಯಲ್ಲೂ ನೀನೆ”, “ಅರಳಿದೆ ಮುದುಡಿದ ತಾವರೆ” ಮುಂತಾದ ನೂರಾರು ಹಾಡುಗಳು ಅವರ ಕಂಠದಿಂದ ಹೊರಬಂದು ಜನಮನದಲ್ಲಿ ಶಾಶ್ವತವಾಗಿ ಉಳಿದಿವೆ.
ಅವರ ಸಾಧನೆಗಳು ಕೇವಲ ಸಂಗೀತ ಲೋಕಕ್ಕೆ ಮಾತ್ರವಲ್ಲ, ಭಾರತೀಯ ಸಂಸ್ಕೃತಿಗೆ ಶಾಶ್ವತ ಕೊಡುಗೆಯಾಗಿ ಉಳಿದಿವೆ.
ಎಸ್. ಜಾನಕಿ
ಎಸ್. ಜಾನಕಿ (ಏಪ್ರಿಲ್ ೨೩, ೧೯೩೮) ಭಾರತದ ಪ್ರಮುಖ ಚಲನಚಿತ್ರ ಹಿನ್ನೆಲೆ ಗಾಯಕಿ. ತಮಿಳು, ತೆಲುಗು, ಕನ್ನಡ, ಮಲಯಾಳಂ, ಒಡಿಯಾ, ಹಿಂದಿ, ಸಿಂಹಳ, ತುಳು, ಬಡಗ, ಬಂಗಾಳಿ, ಉರ್ದು, ಪಂಜಾಬಿ, ಕೊಂಕಣಿ, ಮರಾಠಿ, ಸಿಂಧಿ ಮುಂತಾದ ೧೭ಕ್ಕೂ ಹೆಚ್ಚಿನ ಭಾರತೀಯ ಭಾಷೆಗಳಲ್ಲಿ ೪೮,೦೦೦ಕ್ಕೂ ಹೆಚ್ಚಿನ ಹಾಡುಗಳನ್ನು ಹಾಡಿ ಜನಜನಿತವಾಗಿದ್ದಾರೆ. ನಾಲ್ಕು ಬಾರಿ ಅತ್ಯುತ್ತಮ ಹಿನ್ನೆಲೆಗಾಯಕಿ ರಾಷ್ಟ್ರ ಪ್ರಶಸ್ತಿ ಪಡೆದಿರುವ ಜಾನಕಿ, ವಿವಿಧ ರಾಜ್ಯಗಳಿಂದ ೨೮ಕ್ಕೂ ಹೆಚ್ಚಿನ ರಾಜ್ಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅವರು ಹೆಚ್ಚಿನ ಹಾಡುಗಳನ್ನು ಕ್ರಮವಾಗಿ ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಹಾಡಿದ್ದಾರೆ.
ಎಸ್. ಜಾನಕಿ ಅವರು ೨೩ನೇ ಏಪ್ರಿಲ್ ೧೯೩೮ರ ವರ್ಷದಲ್ಲಿ ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೇ ಎಂಬ ಗ್ರಾಮದಲ್ಲಿ ಜನಿಸಿದರು. ತಮ್ಮ ಮೂರನೆಯ ವಯಸ್ಸಿನಲ್ಲಿ, ಪೈಡಿಸ್ವಾಮಿ ಎಂಬವರಲ್ಲಿ ಸಂಗೀತಾಭ್ಯಾಸವನ್ನು ಪ್ರಾರಂಭಿಸಿದರು.
೧೯೫೬ರ ವರ್ಷದಲ್ಲಿ ಆಕಾಶವಾಣಿ ನಡೆಸಿದ ಸಂಗೀತ ಸ್ಪರ್ಧೆಯಲ್ಲಿ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್ ಅವರಿಂದ ಬಹುಮಾನ ಸ್ವೀಕರಿಸಿದ ಜಾನಕಿ, ಮುಂದೆ ಚೆನ್ನೈಗೆ ಬಂದು ಸಂದರ್ಶನವೂಂದರಲ್ಲಿ ಲತಾ ಮಂಗೇಶ್ಕರ್ ಅವರ ‘ರಸಿಕ್ ಬಲಮಾ’ ಎಂಬ ಗೀತೆಯನ್ನು ಹಾಡಿ ಪ್ರಸಿದ್ಧ ಎವಿಎಮ್ ಸಂಸ್ಥೆಯವರ ಕಾಂಟ್ರಾಕ್ಟ್ ಪಡೆದರು.
ಹಿನ್ನೆಲೆ ಗಾಯಕಿಯಾಗಿ
ಐವತ್ತೊಂಬತ್ತು ವರ್ಷಗಳ ಅವಧಿಯಲ್ಲಿ ಅವರು ೧೭ ಭಾಷೆಗಳಲ್ಲಿ ಸುಮಾರು 48 ಸಾವಿರ ಗೀತೆಗಳನ್ನು ಹಾಡಿದ್ದಾರೆ. ಭಾರತದ ಪ್ರಮುಖ ಭಾಷೆಗಳು ಸೇರಿದಂತೆ ಸಿಂಹಳ, ಜಪಾನಿ, ಲ್ಯಾಟಿನ್, ಅರೇಬಿಕ್ ಒಳಗೊಂಡಂತೆ ಹದಿನೇಳು ಭಾಷೆಗಳಲ್ಲಿ ಹಾಡಿದ ಹೆಗ್ಗಳಿಕೆ ಅವರದು.
ಚಲನಚಿತ್ರ ರಂಗದ ಪ್ರಾರಂಭದ ವರ್ಷಗಳು
೧೯೫೭ರಲ್ಲಿ ಪ್ರಸಿದ್ಧ ಸಂಗೀತ ನಿರ್ದೇಶಕ ಟಿ.ಚಲಪತಿ ರಾವ್ ಅವರ ತಮಿಳು ಚಿತ್ರ ‘ವಿಧಿಯಿನ್ ವಿಳಯಾಟ್ಟು’ ಅವರು ಹಾಡಿದ ಪ್ರಥಮ ಚಿತ್ರ. ಮುಂದೆ ತೆಲುಗಿನ ಚಿತ್ರ ಎಂ.ಎಲ್.ಎ, ಕನ್ನಡದ ಕೃಷ್ಣಗಾರುಡಿ ಇವೆಲ್ಲಾ ಒಂದಾದ ನಂತರ ಒಂದೊಂದರಂತೆ ಹರಿದು ಬರಲು ಪ್ರಾರಂಭವಾದುವು. ಮಲಯಾಳಂ ಚಿತ್ರಗಳಲ್ಲಿ ಕೂಡಾ ಹಾಡಲು ಪ್ರಾರಂಭಿಸಿದರು. ಹೀಗೆ ಅವರು ದಕ್ಷಿಣ ಭಾರತದ ಎಲ್ಲಾ ಪ್ರಧಾನ ಭಾಷೆಗಳ ಗಾಯಕಿಯಾದರು.
ಜೊತೆಗೆ ಹಿಂದಿಯನ್ನೊಳಗೊಂಡಂತೆ ಭಾರತದ ಬಹಳಷ್ಟು ಭಾಷೆಗಳಲ್ಲಿ ತಮ್ಮ ಗಾನಮಾಧುರ್ಯದ ಸವಿಯನ್ನು ಬಿತ್ತರಿಸಿದರು. ತಮಿಳಿನಲ್ಲಿ ೧೯೫೮ರ ಸುಮಾರಿನಲ್ಲಿ ಅವರು ಹಾಡಿದ ‘ಸಿಂಗಾರವೇಲನೆ ದೇವ’ ಎಂಬ ಮಹಾನ್ ನಾದಸ್ವರ ವಿದ್ವಾನ್ ಅರುಣಾಚಲಂ ಅವರ ನಾದ ಸ್ವರ ದೊಂದಿಗೆ ಮೇಳೈಸಿ ಹಾಡಿದ ಗೀತೆ ಪ್ರಾರಂಭದ ವರ್ಷಗಳಲ್ಲೇ ಅವರನ್ನು ಅಪ್ರತಿಮ ಗಾಯಕಿ ಎಂದು ಇಡೀ ದೇಶ ಗುರುತಿಸುವಂತೆ ಮಾಡಿತು.
ಕನ್ನಡ ಚಿತ್ರ 'ಹೇಮಾವತಿ'ಯಲ್ಲಿ ಅವರು ಹಾಡಿರುವ "ಶಿವ ಶಿವ ಎನ್ನದ ನಾಲಿಗೆ ಏಕೆ?" ಎಂಬ ಅನನ್ಯಗೀತೆಯು ಇಡೀ ಭಾರತ ದೇಶದ ಅತ್ಯಂತ ತ್ರಾಸದಾಯಕ ಗೀತೆ ಎನಿಸಿದೆ. ಜಾನಕಿಯವರು 'ಈ ಹಾಡು ನನ್ನ ಸಂಗೀತ ಜೀವನದಲ್ಲಿ ಭಯಪಟ್ಟು ಹಾಡಿದ ಹಾಡು, ಮತ್ತೆ ಹಾಡಲೂ ಆಗದ ಹಾಡು' ಎಂದು ಹೇಳುತ್ತಾರೆ. ಆ ನಂತರದಲ್ಲಿ ಅವರು ಹಾಡಿರುವ ಗೀತೆಗಳ ಸಂಖ್ಯೆ ೪೦,೦೦೦ವನ್ನು ಮೀರಿದೆ.
ಒಮ್ಮೆ ಒಂದು ಸಂದರ್ಶನದಲ್ಲಿ ಅವರೊಂದಿಗೆ ಬಹಳಷ್ಟು ವರ್ಷಗಳವರೆಗೆ ಹಾಡುತ್ತ ಬಂದಿರುವ ಡಾ. ಎಸ್. ಪಿ. ಬಾಲಸುಬ್ರಮಣ್ಯಂ ಹೇಳುತ್ತಿದ್ದರು, “ನಮ್ಮ ಜಾನಕಮ್ಮ ಇದ್ದಾರಲ್ಲ ಅವರು ಯಾವುದೇ ಗೀತೆಯನ್ನಾಗಲೀ ಒಂದೇ ಪ್ರಾರಂಭದಲ್ಲಿ ತೆಗೆದುಕೊಳ್ಳುವ ರೀತಿ, ತಮ್ಮ ಉಸಿರನ್ನು ಅತ್ಯಂತ ಆಳವಾಗಿ ಗಾನಲಯದಲ್ಲಿ ಸುಲಲಿತವಾಗಿ ಬೆರೆಸುವ ರೀತಿ ಇದೆಯೆಲ್ಲಾ ಅದೊಂದು ಅಸಾಮಾನ್ಯವಾದ ಸಂಗತಿ”.
ಹಾಡುವ ಪ್ರಾರಂಭದಲ್ಲಿ ಯಾವುದೇ ಹಮ್ಮು, ಬಿಮ್ಮುಗಳ, ಕೆಮ್ಮಿನ ಸಣ್ಣ ಆಚೆ ಈಚೆಗಿನ ಧ್ವನಿಯನ್ನು ಕೂಡಾ ಅವರು ಎಲ್ಲಿಯೂ ಉಂಟು ಮಾಡುವುದಿಲ್ಲ ಎಂಬ ಪ್ರತೀತಿ ಇದೆ. ಎಸ್. ಜಾನಕಿ ಹೇಳುತ್ತಾರೆ- ‘ನಾನು ಯಾವುದೇ ವಿಶೇಷ ತಯಾರಿಯನ್ನಾಗಲೀ ಆರೈಕೆಯನ್ನಾಗಲಿ ನನ್ನ ಧ್ವನಿಗೆ ಮಾಡಿಕೊಳ್ಳುವುದಿಲ್ಲ.” ಅವರು ಹೇಳುವ ಮತ್ತೊಂದು ಮಾತು ಅವರ ಎಲ್ಲಾ ಸಾಧನೆಗಳ ಗುಟ್ಟು.
ಪರಮಾತ್ಮ ಶ್ರೀಕೃಷ್ಣ ಮತ್ತು ಶಿರಡಿ ಸಾಯಿಬಾಬಾ ಅವರ ಭಕ್ತರಾದ ಆಕೆ ಕೇಳುತ್ತಾರೆ “ನಾನು ಹೇಗೆ ಹಾಡುತ್ತೇನೆ ಗೊತ್ತೇ?”, “ಸತ್ಯ ಹೇಳಬೇಕೆಂದರೆ, ನಾನು ಹಾಡುವುದೇ ಇಲ್ಲ. ಶ್ರೀಕೃಷ್ಣ, ಆ ನನ್ನ ಅಂತರಂಗದ ದೈವನಾದ ಆತನ ಕಾಯಕವದು”.
ಮನಮೋಹಕ ಗೀತೆಗಳು
ಎಸ್. ಜಾನಕಿ ಅವರ ಬಗ್ಗೆ ಹೇಳಬೇಕೆಂದರೆ ಮಹಾಸಾಗರದ ಆಳವನ್ನು ಅರಸ ಹೊರಟಂತೆ. ಅವರ ಹಾಡುಗಳ ಬಗ್ಗೆ ಹೇಳುವಾಗ ಈ ಕ್ಷಣಕ್ಕೆ ಬಂದ ನೆನಪುಗಳನ್ನು ಹೇಳಬಹುದೇ ವಿನಃ ಅವರು ಹಾಡಿರುವ ಶ್ರೇಷ್ಠ ಗೀತೆಗಳ ಒಂದು ಸಣ್ಣ ಅಳತೆಯನ್ನು ಕೂಡಾ ನಾವು ಕ್ರಮಿಸಲಾರೆ ವೇನೋ.
‘ನೋಡು ಬಾ ನೋಡು ಬಾ ನಮ್ಮೂರ’,
'ತಾಯೆ ಬಾರ ಮೊಗವ ತೋರೆ ಕನ್ನಡಿಗರ ಮಾತೆಯೇ',
'ಯುಗ ಯುಗಾದಿ ಕಳೆದರೂ',
‘ಯಾವ ಜನ್ಮದ ಮೈತ್ರಿ ಈ ಜನ್ಮದಲಿ ಬಂದು’,
‘ದೋಣಿ ಸಾಗಲಿ ಮುಂದೆ ಹೋಗಲಿ',
'ಮೂಡಣ ಮನೆಯ ಮುತ್ತಿನ ನೀರಿನ ಎರಕಾವಾ ಹೊಯ್ದ’,
‘ಜಯ ಗೌರಿ ಜಗದೀಶ್ವರೀ’,
'ಆಡೋಣ ಬಾ ಬಾ ಗೋಪಾಲ',
‘ನಂಬಿದೆ ನಿನ್ನ ನಾದ ದೇವತೆಯೇ ಅಭಿಮಾನ ತಳೆದ ತಾಯೆ ಭಾರತಿಯೇ’,
‘ಭಾರತ ಭೂಶಿರ ಮಂದಿರ ಸುಂದರಿ’,
'ಶರಣು ವಿರೂಪಾಕ್ಷ ಶಶಿಶೇಖರ',
‘ಜ್ಯೋತಿ ಯಾವ ಜಾತಿಯಮ್ಮ ಜಗದೀಶ್ವರೀ’,
‘ಬಾನಲ್ಲೂ ನೀನೆ ಭುವಿಯಲ್ಲೂ ನೀನೆ’,
‘ಬಿಸಿಲಾದರೇನು ಮಳೆಯಾದರೇನು’,
‘ಪೋಗದಿರೆಲೋ ರಂಗ’,
‘ಕರೆಯೇ ಕೋಗಿಲೆ ಮಾಧವನ’,
‘ಗಗನವು ಎಲ್ಲೋ ಭೂಮಿಯು ಎಲ್ಲೋ’,
'ಪಂಚಮ ವೇದ ಪ್ರೇಮದ ನಾದ',
‘ಅರಳಿದೆ ಅರಳಿದೆ ಮುದುಡಿದ ತಾವರೆ ಅರಳಿದೆ’,
‘ಕಂಗಳು ತುಂಬಿರಲು ಕಂಬನಿ ಧಾರೆ’,
‘ತುಂಬಿತು ಮನವಾ ತಂದಿತು ಸುಖವಾ’,
‘ಪೂಜಿಸಲೆಂದೇ ಹೂಗಳ ತಂದೆ’,
‘ಇಂದು ಎನಗೆ ಗೋವಿಂದ ನಿನ್ನಯ ಪಾದಾರವಿಂದವ’,
‘ದೇವರ ಆಟ ಬಲ್ಲವರಾರು’,
‘ಹೂವೂಂದು ಬೇಕು ಬಳ್ಳಿಗೆ’,
‘ರಾಘವೇಂದ್ರ ನೀ ಮೌನವಾದರೆ ನನ್ನ ಗತಿ ಏನು’,
'ಒಲವಿನ ಗೆಳೆಯನೆ ನಿನಗೆ ಕೈ ಮುಗಿವೆ',
'ಬರೆದೆ ನೀನು ನಿನ್ನ ಹೆಸರ ನನ್ನ ಬಾಳ ಪುಟದಲಿ',
'ನಾ ಮೆಚ್ಚಿದ ಹುಡುಗನಿಗೆ ಕಾಣಿಕೆ ತಂದಿರುವೆ',
'ಮೂಕ ಹಕ್ಕಿಯು ಹಾರುತಿದೆ' ಹೀಗೆ ಹೇಳುತ್ತಾ ಹೋಗಬಹುದು.
ಅವರು ಹಾಡಿರುವ ಭಕ್ತಿಗೀತೆಗಳು ಅನೇಕವಾಗಿದ್ದು
'ಗಜಮುಖನೆ ಗಣಪತಿಯೇ',
‘ಮಲೆನಾಡಿನ ಈ ಸೊಬಗಿನ ಐಸಿರಿ ಚೆಲುವಿನ ವರ ಶೃಂಗೇರಿ’,
‘ಇವಳೇ ವೀಣಾಪಾಣಿ’ ಮುಂತಾದ ಹಾಡುಗಳಂತೂ ಎಲ್ಲೆಲ್ಲೂ ಭಕ್ತಿಯಿಂದ ತುಂಬಿ ತುಳುಕಿದೆ.
ಡಾ. ಎಸ್.ಜಾನಕಿ ಕಂಠದಲ್ಲಿರುವ ಕೆಲವು ಪ್ರಸಿದ್ಧ ಗೀತೆಗಳು
ಕಂಗಳು ತುಂಬಿರಲು - ಚಂದನದ ಗೊಂಬೆ
ಕರೆಯೆ ಕೋಗಿಲೆ ಮಾಧವನ - ನವಜೀವನ
ಸುಖದ ಸ್ವಪ್ನಗಾನಾ - ಮರೆಯದ ಹಾಡು
ಗಗನವು ಎಲ್ಲೋ ಭೂಮಿಯು ಎಲ್ಲೋ- ಗೆಜ್ಜೆಪೂಜೆ
ನಾ ಮೆಚ್ಚಿದ ಹುಡುಗನಿಗೆ - ನಾ ಮೆಚ್ಚಿದ ಹುಡುಗ
ಬಂದಾ ಬಂದಾ ಮೇಘರಾಜ - ಸಿಪಾಯಿ
ಹೂವೂಂದು ಬೇಕು ಬಳ್ಳಿಗೆ - ಪಾವನ ಗಂಗಾ
ಒಲವಿನ ಗೆಳೆಯನೆ ನಿನಗೆ - ನಾನಿರುವುದೇ ನಿನಗಾಗಿ
ಅರಳಿದೆ ಮುದುಡಿದ ತಾವರೆ ಅರಳಿದೆ- ಮುದುಡಿದ ತಾವರೆ ಅರಳಿತು
ಕೇಳಿದ್ದು ಸುಳ್ಳಾಗಬಹುದು - ರಾಮ ಲಕ್ಷ್ಮಣ
ಏಕೋ ಈ ಕೋಪ ಶಂಕರಾ - ಭಕ್ತ ಸಿರಿಯಾಳ
ಜ್ಯೋತಿ ಯಾವ ಜಾತಿಯಮ್ಮ - ಕಾವೇರಿ
ಶಿವ ಶಿವ ಎನ್ನದ ನಾಲಿಗೆಯೇಕೆ - ಹೇಮಾವತಿ (ಚಲನಚಿತ್ರ)
ಏನನೋ ಕೇಳುತಿದೆ - ಗಲಾಟೆ ಸಂಸಾರ
ತಾಯಿಯ ತಂದೆಯ ಮಮತೆ - ಮಧುರ ಸಂಗಮ
ಬಾನಲ್ಲೂ ನೀನೆ ಭುವಿಯಲ್ಲೂ ನೀನೆ - ಬಯಲುದಾರಿ
ಹೊಸ ಬಾಳು ನಿನ್ನಿಂದ - ಆಟೊ ರಾಜ
ನನ್ನ ಆಸೆ ಹಣ್ಣಾಗಿ - ಆಟೊ ರಾಜ
"ದೋಣಿ ಸಾಗಲಿ ಮುಂದೆ ಹೋಗಲಿ ದೂರ ತೀರವ ಸೇರಲಿ"ಎಂಬ
ಯುಗಳ ಗೀತೆಗಳಲ್ಲಿ
'ಒಲಿದ ಜೀವ ಜೊತೆಯಲಿರಲು ಬಾಳು ಸುಂದರ'
ಪಿ.ಬಿ.ಎಸ್ ಅವರೊಂದಿಗೆ ಕನ್ಯಾರತ್ನ ಚಿತ್ರದಲ್ಲಿ 'ಸುವ್ವಿ ಸುವ್ವಿ ಸುವ್ವಾಲೆ,
ಹೊಂಬಿಸಲು ಚಿತ್ರದ ‘ಜೀವ ವೀಣೆ ನೀಡು ಮಿಡಿತದ ಸಂಗೀತ’,
ಗಂಧದ ಗುಡಿ ಚಿತ್ರದಲ್ಲಿ ಪಿ. ಬಿ. ಶ್ರೀನಿವಾಸ್ ಅವರೊಂದಿಗೆ ಪುಟ್ಟ ಹುಡುಗಿಯಂತೆ ‘ಎಲ್ಲೂ ಹೋಗೋಲ್ಲಾ ಮಾಮ’ ಎಂದು ಹಾಡುವ ಧಾಟಿ,
ದೇವರಗುಡಿಯ ‘ಕಣ್ಣು ಕಣ್ಣು ಒಂದಾಯಿತು’,
ಮುಗಿಯದ ಕಥೆ ಚಿತ್ರದ ‘ಕಂಗಳು ವಂದನೆ ಹೇಳಿದೆ ಹೃದಯವು ತುಂಬಿ ಹಾಡಿದೆ’,
ಧರ್ಮಸೆರೆ ಚಿತ್ರದ 'ಈ ಸಂಭಾಷಣೆ',
ಹುಡುಗಾಟದ ಹುಡುಗಿ ಚಿತ್ರದ 'ಬೆಳ್ಳಿಯ ತೆರೆಯ ಮೋಡದ ಮರೆಯ',
ವಾಣಿ ಜಯರಾಂ ಅವರ ಜೊತೆಯಲ್ಲಿ ವಿಜಯವಾಣಿ ಚಿತ್ರದ 'ಮಧುಮಾಸ ಚಂದ್ರಮ',
ರಾಜ್ ಅವರ ಜೊತೆಯಲ್ಲಿ ಶ್ರೀನಿವಾಸ ಕಲ್ಯಾಣದ 'ನಾನೇ ಭಾಗ್ಯವತಿ ಇಂದು ನಾನೇ ಪುಣ್ಯವತಿ',
ಬಂಗಾರದ ಹೂವು ಚಿತ್ರದ ' ನೀ ನಡೆವ ಹಾದಿಯಲ್ಲಿ ನಗೆ ಹೂವು ಬಾಡದಿರಲಿ'- ಹೀಗೆ ಅವರ ನೂರಾರು ಸುಂದರ ಸುಶ್ರಾವ್ಯ ಹಾಡುಗಳಿವೆ.
ಇತರ ಭಾಷೆಗಳಲ್ಲಿ ಪದಿನಾರು ವಯದಿನಿಲೆ ಚಿತ್ರದ ‘ಸಿಂಧೂರ ಪೂವೆ’, ಶಂಕರಾಭರಣಂ ಚಿತ್ರದ ‘ಸಾಮಜವರಗಮನ’, ‘ಶಂಕರಾಭರಣಮು’; ಸಾಗರಸಂಗಮಂ ಚಿತ್ರದ ‘ಬಾಲ ಕನಕಮಯ ಚೇಲ ಸುಜನಪರಿಪಾಲ’, ‘ಓಂ ನಮಃ ಶಿವಾಯ ಚಂದ್ರ ಕಳಾಧರ ಸಹೃದಯ’ ಇವೆಲ್ಲಾ ಸ್ಥಿರವಾಗಿ ನಿಂತಿರುವ ಹಾಡುಗಳು.
ವಾದ್ಯ ನಾದದೊಡನೆ ಗಾನ ಮೆಳೈಸಿ
ತಮಿಳಿನಲ್ಲಿ ಕರೈಕುರುಚ್ಚಿ ಅರುಣಾಚಲಂ ಅವರ ನಾದಸ್ವರದೊಂದಿಗೆ ತಮ್ಮ ಸ್ವರ ಮೇಳೈಸಿ ಅದ್ಭುತವಾಗಿ ಮೂಡಿಸಿದ ಸಿಂಗಾರವೇಲನೆ ದೇವ ಹಾಡಿನಂತೆ, ಕನ್ನಡದಲ್ಲಿ ಬಿಸ್ಮಿಲ್ಲಾ ಖಾನ್ ಅವರ ಶಹನಾಯ್ ಜೊತೆ ತಮ್ಮ ಗಾನವನ್ನು ಮೇಳೈಸಿ ಹೊರತಂದ ‘ಕರೆದರು ಕೇಳದೆ’ ಗೀತೆ ಕೂಡಾ ಒಂದು ಅಪೂರ್ವ ಗಾಯನವೇ ಸರಿ. ಇಂತಹದ್ದೇ ರೀತಿಯಲ್ಲಿ ಎಸ್ ಜಾನಕಿ ಅವರು ಎಂ.ಎಸ್. ಗೋಪಾಲಕೃಷ್ಣನ್ ಅವರ ಪಿಟೀಲು ವಾದನ, ನಾಮಗಿರಿ ಪೇಟೆ ಕೃಷ್ಣನ್ ನಾದಸ್ವರ ಮತ್ತು ಹರಿಪ್ರಸಾದ್ ಚೌರಾಸಿಯಾ ಅವರ ವೇಣುವಾದನದ ಜೊತೆ ಕೂಡಾ ತಮ್ಮ ಗಾನ ಮಾಧುರ್ಯವನ್ನು ಮೇಳೈಸಿದ್ದಾರೆ.
ತಮ್ಮ ಗಾಯನವನ್ನು ನಿಲ್ಲಿಸುವ ನಿರ್ಧಾರ
ಹಿರಿಯ ಗಾಯಕಿ ಎಸ್. ಜಾನಕಿ ಅವರು ತಮ್ಮ ಗಾಯನವನ್ನು ನಿಲ್ಲಿಸಲು ನಿರ್ಧರಿಸಿದ್ದಾರೆ. ಮಲಯಾಳದ ‘10 ಕಲ್ಪನಕಳ್’ ಚಿತ್ರದ ‘ಅಮ್ಮಪೂವಿನು’ ಗೀತೆ ಅವರ ವೃತ್ತಿ ಬದುಕಿನ ಕೊನೆಯ ಹಾಡಾಗಲಿದೆ.[೪] 1957ರಲ್ಲಿ ತೆರೆಕಂಡ ತಮಿಳು ಚಿತ್ರ ‘ವಿಧಿಯಿನ್ ವಿಳಯತ್ತು’ ಚಿತ್ರದ ಮೂಲಕ ಹಿನ್ನೆಲೆ ಗಾಯಕಿಯಾಗಿ ಚಿತ್ರರಂಗ ಪ್ರವೇಶಿಸಿದ ಜಾನಕಿ ಕನ್ನಡ, ತಮಿಳು, ತೆಲುಗು, ಮಲಯಾಳ, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ 48 ಸಾವಿರಕ್ಕೂ ಹೆಚ್ಚು ಗೀತೆಗಳಿಗೆ ದನಿಯಾಗಿದ್ದಾರೆ. *‘ನನಗೆ ವಯಸ್ಸಾಯಿತು. ಈವರೆಗೆ ಹಲವು ಭಾಷೆಗಳಲ್ಲಿ ಹಾಡಿದ್ದೇನೆ. ನನಗೀಗ ವಿಶ್ರಾಂತಿ ಬೇಕಿದೆ. ನಾನು ಹಾಡುವುದನ್ನು ಇನ್ನು ನಿಲ್ಲಿಸುತ್ತೇನೆ’ ಎಂದು 78 ವರ್ಷದ ಜಾನಕಿ ಹೇಳಿದ್ದಾರೆ.
ಜಾನಕಿ ಅವರು ನಾಲ್ಕು ಬಾರಿ ರಾಷ್ಟ್ರೀಯ ಪ್ರಶಸ್ತಿ, 32 ಬಾರಿ ರಾಜ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.[೫]
ಪ್ರಶಸ್ತಿ ಗೌರವಗಳು
ಆರು ದಶಕಗಳ ಹಾಡುಗಾರಿಕೆಯ ಸಾಧನೆ ಜಾನಕಿ ಅವರಿಗೆ ಹಲವು ಗೌರವಗಳನ್ನು ತಂದುಕೊಟ್ಟಿದೆ. ನಾಲ್ಕು ರಾಷ್ಟ್ರ ಪ್ರಶಸ್ತಿಗಳು, ಸುಮಾರು ಮೂವತ್ತು ರಾಜ್ಯ ಪ್ರಶಸ್ತಿಗಳು ಅವರ ಗಾಯನಕ್ಕೆ ದೊರೆತಿವೆ.
ಮೈಸೂರು ವಿಶ್ವವಿದ್ಯಾಲಯ ಅವರಿಗೆ ಗೌರವ ಡಾಕ್ಟರೇಟ್ ಪದವಿ ಇತ್ತು ಸನ್ಮಾನಿಸಿದೆ.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ೨೦೧೪
ಭಾರತ ಸರ್ಕಾರದ ೨೦೧೩ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ಎಸ್. ಜಾನಕಿ ಅವರಿಗೆ ಘೋಷಿಸಿದಾಗ, ಪದ್ಮ ಪ್ರಶಸ್ತಿಗಳಲ್ಲಿ ದಕ್ಷಿಣ ಭಾರತೀಯರ ಬಗ್ಗೆ ಅಸಡ್ಡೆ ಇರುವುದನ್ನು ವಿರೋಧಿಸಿ, ಎಸ್.ಜಾನಕಿಯವರು ಈ ಪ್ರಶಸ್ತಿಯನ್ನು ತಿರಸ್ಕರಿಸಿದರು.




Comments
Leave a Comment