ಮಳೆ ಕೊರತೆ; ರೈತರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಲು ವಿಜಯೇಂದ್ರ ಆಗ್ರಹ
ಮಳೆ ಕೊರತೆ; ರೈತರ ಸಂಕಷ್ಟಕ್ಕೆ ಸರ್ಕಾರ
ಸ್ಪಂದಿಸಲು ವಿಜಯೇಂದ್ರ ಆಗ್ರಹ
ಬೆಂಗಳೂರು: ರಾಜ್ಯದ ವಿವಿಧ ಭಾಗದಲ್ಲಿ ಮಳೆಯ ತೀವ್ರ ಕೊರತೆ ಎದುರಾಗಿದೆ. ಇದರಿಂದ ಅನ್ನದಾತರು ತೊಂದರೆಗೆ ಸಿಲುಕಿದ್ದಾರೆ. ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕಾದ ಮಹತ್ವದ ಜವಾಬ್ದಾರಿ ರಾಜ್ಯ ಸರ್ಕಾರದ ಮೇಲಿದೆ ಎಂದು ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಇಂದು ಮಾತನಾಡಿದ ಅವರು, ರೈತರ ಸಾಲ ಮನ್ನಾ ಕುರಿತ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಯನ್ನು ಗಮನಿಸಿದ್ದೇನೆ. ರೈತರಿಗೆ ಈ ಸರ್ಕಾರ ಪ್ರಾಮಾಣಿಕವಾಗಿ ಸ್ಪಂದಿಸುತ್ತದೋ ಇಲ್ಲವೋ ಎಂಬುದನ್ನು ನೋಡುತ್ತೇವೆ. ಈ ಬಗ್ಗೆ ಸದನದಲ್ಲಿ ಚರ್ಚೆ ಸಹ ಮಾಡುತ್ತೇವೆ ಎಂದರು. ಮುಖ್ಯಮಂತ್ರಿಗಳು ಸಾಲಮನ್ನಾದ ಹೇಳಿಕೆ ನೀಡಿ ಮೊಸಳೆ ಕಣ್ಣೀರು ಹಾಕುತ್ತಾರೋ ಇಲ್ಲವೇ ನಿಜವಾಗಿ ರೈತರಿಗೆ ನೆರವಿಗೆ ಮುಂದಾಗುತ್ತಾರೋ ನೋಡಬೇಕು ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೂರು ವರ್ಷದಲ್ಲಿ ರೈತರ ಸಂಕಷ್ಟಕ್ಕೆ ಮಿಡಿಯಲಿಲ್ಲ. ಬರ ಬಂದಾಗ ಸೂಕ್ತ ಪರಿಹಾರ ನೀಡಿಲ್ಲ. ಎಲ್ಲಕ್ಕೂ ಕೇಂದ್ರ ಸರ್ಕಾರವನ್ನು ದೂರುವುದು ಬಿಟ್ಟರೆ ಬೇರೆ ಏನೂ ಮಾಡಲಿಲ್ಲ ಎಂದರು.
ಅಡ್ಡಮತದಾನ ವರಿಷ್ಠರ ಗಮನಕ್ಕೆ...
ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡ ಮತದಾನದ ಬಗ್ಗೆ ಈಗಾಗಲೇ ಕೇಂದ್ರದ ವರಿಷ್ಠರ ಗಮನಕ್ಕೆ ತಂದಿದ್ದೇವೆ. ಅವರು ಸೂಕ್ತ ಸಂದರ್ಭದಲ್ಲಿ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.
ಆಯೋಗದ ಮೇಲೆ ವಿಶ್ವಾಸ ಇಡಲಿ...
ಎಸ್‍ಐಆರ್ ಅನ್ನು ಕೇಂದ್ರ ಸರ್ಕಾರ ನಡೆಸುತ್ತಿಲ್ಲ. ಚುನಾವಣಾ ಆಯೋಗ ನಡೆಸುತ್ತಿದೆ. ರಾಜ್ಯ ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ಸಾಂವಿಧಾನಿಕ ಸಂಸ್ಥೆಯಾದ ಚುನಾವಣಾ ಆಯೋಗದ ಮೇಲೆ ವಿಶ್ವಾಸ ಇಟ್ಟು ಎಸ್‍ಐಆರ್ ಗೆ ಸಹಕಾರ ನೀಡಲಿ. ಎಸ್‍ಐಆರ್ ಈಗಾಗಲೇ ನಡೆಯುತ್ತಿದೆ. ಇದಕ್ಕೆ ಕಲ್ಲು ಹಾಕುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದರು.





Comments
Leave a Comment