PRABHAVAA.COM

ಬಡವರು, ಅಲ್ಪಸಂಖ್ಯಾತರ ಮತದಾನದ ಹಕ್ಕು ಕಸಿಯಲು ವಿರೋಧ ಪಕ್ಷಗಳ ಕುತಂತ್ರ: ಸಿಎಂ ಡಿ ಕೆ ಶಿವಕುಮಾರ್

:

Font size:

ನಮ್ಮ ಸರ್ಕಾರದಂತೆ ಬೇರೆ ಯಾವುದೇ ರಾಜ್ಯದಲ್ಲಿ ಎಸ್ಐಆರ್ ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗಕ್ಕೆ ಸಹಕಾರ ನೀಡಿಲ್ಲ ಚುನಾವಣಾ ಆಯೋಗದ ಪ್ರಕ್ರಿಯೆಯಲ್ಲಿ ಸರ್ಕಾರದ ಹಸ್ತಕ್ಷೇಪವಿಲ್ಲ ಸರ್ಕಾರ ಜನರಲ್ಲಿ ಜಾಗೃತಿ ಮೂಡಿಸುತ್ತಿರುವುದನ್ನು ನೋಡಿ ವಿರೋಧ ಪಕ್ಷಗಳಿಗೆ ಭಯ ಅವರು ಅಧಿಕಾರದಲ್ಲಿದ್ದಾಗ ಅಕ್ರಮ ವಲಸಿಗರನ್ನು ಯಾಕೆ ಓಡಿಸಲಿಲ್ಲ? ರಾಜಕೀಯ ಮಾಡುವವರು, ಟೀಕೆ ಮಾಡುವವರನ್ನು ಬೇಡ ಎನ್ನಲು ಸಾಧ್ಯವೇ

ಬೆಂಗಳೂರು, ಜು.06:

“ಎಸ್ಐಆರ್ ಪ್ರಕ್ರಿಯೆಗೆ ನಮ್ಮ ವಿರೋಧವಿದ್ದರೂ ಜನರ ಮತದಾನದ ಹಕ್ಕು ರಕ್ಷಣೆಗಾಗಿ ನಮ್ಮ ಸರ್ಕಾರ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ. ಇದು ಚುನಾವಣಾ ಆಯೋಗದ ಪ್ರಕ್ರಿಯೆಯಾಗಿದ್ದು, ಇದರಲ್ಲಿ ಸರ್ಕಾರದ ಹಸ್ತಕ್ಷೇಪವಿಲ್ಲ. ಆದರೆ ಬಡವರು ಹಾಗೂ ಅಲ್ಪಸಂಖ್ಯಾತರ ಮತದಾನದ ಹಕ್ಕು ಕಸಿಯುವುದು ವಿರೋಧ ಪಕ್ಷಗಳ ಕುತಂತ್ರ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿರುಗೇಟು ನೀಡಿದರು.

ವಿಧಾನಸೌಧ ಆವರಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಸೋಮವಾರ ಪ್ರತಿಕ್ರಿಯೆ ನೀಡಿದರು.

ನಮ್ಮಂತೆ ಬೇರೆ ಯಾವುದೇ ರಾಜ್ಯದಲ್ಲಿ ಎಸ್ಐಆರ್ ಪ್ರಕ್ರಿಯೆಯಲ್ಲಿ ಸಹಕಾರ ನೀಡಿಲ್ಲ

ಎಸ್ ಐಆರ್ ವಿಚಾರವಾಗಿ ಕುಮಾರಸ್ವಾಮಿ ಹಾಗೂ ಪ್ರಹ್ಲಾದ್ ಜೋಷಿ ಅವರು ಮುಖ್ಯ ಚುನಾವಣಾ ಆಯುಕ್ತರಿಗೆ ದೂರು ನೀಡಿರುವ ಬಗ್ಗೆ ಕೇಳಿದಾಗ, “ಎಸ್ಐಆರ್ ವಿಚಾರದಲ್ಲಿ ನಮ್ಮದೇ ಆದ ಭಿನ್ನಾಭಿಪ್ರಾಯವಿದೆ. ನಾವು ಕೋರ್ಟ್ ನಲ್ಲಿ ನಮ್ಮ ವಾದ ಸಲ್ಲಿಸಿದ್ದು, ನ್ಯಾಯಾಲಯ ಈ ವಿಚಾರವಾಗಿ ತೀರ್ಪು ನೀಡಿದ್ದಾರೆ. ಈ ಪ್ರಕ್ರಿಯೆ ವೇಳಾಪಟ್ಟಿ ಬಗ್ಗೆ ನಮಗೆ ಅಸಮಾಧಾನವಿದ್ದು, ಅದರ ವಿರುದ್ಧವೂ ಕೋರ್ಟ್ ಮೊರೆ ಹೋಗುತ್ತೇವೆ. ನಾವು ಎಲ್ಲರಿಗೂ ಮತದಾನದ ಹಕ್ಕು ರಕ್ಷಣೆ ಮಾಡಬೇಕು ಎಂದು ನಮ್ಮ ಸರ್ಕಾರ ಚುನಾವಣಾ ಆಯೋಗದ ಜೊತೆ ಕೈ ಜೋಡಿಸಿದೆ. ನಮ್ಮಂತೆ ಬೇರೆ ಯಾವುದೇ ರಾಜ್ಯದಲ್ಲಿ ಈ ರೀತಿ ಸಹಕಾರ ನೀಡಿಲ್ಲ. ನಿಮ್ಮ ಮತದಾನದ ಹಕ್ಕು, ಬದುಕಿನ ಹಕ್ಕು ಎಂದು ಹೇಳುವ ಮೂಲಕ ಜನರಿಗೆ ಮತದಾನದ ಹಕ್ಕು ಉಳಿಸಿಕೊಳ್ಳಲು ಸರ್ಕಾರ ಜಾಗೃತಿ ಮೂಡಿಸುತ್ತಿದ್ದೇವೆ” ಎಂದು ವಿವರಿಸಿದರು.

ಜನರಲ್ಲಿ ಜಾಗೃತಿ ಮೂಡಿಸುತ್ತಿರುವುದನ್ನು ನೋಡಿ ವಿರೋಧ ಪಕ್ಷಗಳಿಗೆ ಭಯ

“ಎಲ್ಲಾ ಪಕ್ಷದವರು ಬಿಎಲ್ಎ2 ನೇಮಕ ಮಾಡಲು ಚುನಾವಣಾ ಆಯೋಗವೇ ಅವಕಾಶ ನೀಡಿದೆ. ಕಾಂಗ್ರೆಸ್, ಬಿಜೆಪಿ ಹಾಗೂ ಜನತಾದಳದವರು ಬಿಎಲ್ಎ ನೇಮಕ ಮಾಡಿದ್ದಾರೆ. ಸಂಘ ಸಂಸ್ಥೆಗಳು ನೆರವು ನೀಡಲು ಅವಕಾಶ ಕಲ್ಪಿಸಲಾಗಿದೆ. ಅಧಿಕಾರಿಗಳು ತಮಗೆ ಆಯೋಗದಿಂದ ಬಂದಿರುವ ಮಾರ್ಗದರ್ಶನದಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಸರ್ಕಾರ ಜನರಲ್ಲಿ ಜಾಗೃತಿ ಮೂಡಿಸುತ್ತಿರುವುದನ್ನು ನೋಡಿ ವಿರೋಧ ಪಕ್ಷಗಳಿಗೆ ಭಯ ಶುರುವಾಗಿದೆ. ಚುನಾವಣಾ ಆಯೋಗದ ಮೇಲೆ ಅವರಿಗೇ ನಂಬಿಕೆ ಇಲ್ಲ ಎಂದು ಅವರು ವ್ಯಕ್ತಪಡಿಸುತ್ತಿದ್ದಾರೆ. ಇದನ್ನು ರದ್ದು ಮಾಡಲು ಹೇಳುತ್ತಿದ್ದಾರೆ. ಇದು ಚುನಾವಣಾ ಆಯೋಗಕ್ಕೆ ಬಿಟ್ಟ ವಿಚಾರ” ಎಂದು ತಿಳಿಸಿದರು.

ಅವರು ಅಧಿಕಾರದಲ್ಲಿದ್ದಾಗ ಅಕ್ರಮ ವಲಸಿಗರನ್ನು ಯಾಕೆ ಓಡಿಸಲಿಲ್ಲ?

“ರಾಜ್ಯದಲ್ಲಿ ಸುಮಾರು 4.50 ಕೋಟಿ ಜನ ಜಾತಿ ಪ್ರಮಾಣಪತ್ರ ತೆಗೆದುಕೊಂಡಿದ್ದಾರೆ. ಇದನ್ನು ಆನ್ ಲೈನ್ ನಲ್ಲಿ ಡೌನ್ ಲೋಡ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದ್ದೇವೆ. ಇನ್ನು ನಿವಾಸ ದೃಢೀಕರಣ ಪತ್ರ ನೀಡಲು ಉಪ ತಹಶೀಲ್ದಾರ್ ಅವರಿಗೆ ಅಧಿಕಾರ ನೀಡಲಾಗಿದೆ. 2002ನೇ ಮತಪತ್ರ ದಾಖಲೆ ಯಾರ ಬಳಿಯೂ ಇರುವುದಿಲ್ಲ. ಇದನ್ನು ಡೌನ್ ಲೋಡ್ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಸರ್ಕಾರ ಕರ್ನಾಟಕ ಜನರ ಮತದಾನದ ಹಕ್ಕು ಉಳಿಸಿಕೊಳ್ಳಲು ಕರೆ ನೀಡುತ್ತಿದೆ. ವಿರೋಧ ಪಕ್ಷಗಳು ಸುಮ್ಮನೆ ಅಕ್ರಮ ಬಾಂಗ್ಲಾ ವಲಸಿಗರು ಎಂದು ಹೇಳುತ್ತಿದ್ದಾರೆ. ನಿಮ್ಮ ಕೈಯಲ್ಲಿ ಅಧಿಕಾರ ಇದ್ದಾಗ ಯಾಕೆ ಅವರನ್ನು ಓಡಿಸಲಿಲ್ಲ? ಆಗ ಯಾರು ತಡೆದಿದ್ದರು?” ಎಂದು ಪ್ರಶ್ನಿಸಿದರು.

ರಾಜಕೀಯ ಮಾಡುವವರು, ಟೀಕೆ ಮಾಡುವವರನ್ನು ಬೇಡ ಎನ್ನಲು ಸಾಧ್ಯವೇ?

“ಮನಮೋಹನ್ ಸಿಂಗ್ ಅವರು ದೇಶದ ಜನರಿಗಾಗಿ ಆಹಾರ ಭದ್ರತಾ ಕಾಯ್ದೆ ಜಾರಿಗೆ ತಂದರು. ಬಿಜೆಪಿಯವರು ಪಶ್ಚಿಮ ಬಂಗಾಳ ಹಾಗೂ ಬಿಹಾರದಲ್ಲಿ ಮತದಾನದ ಹಕ್ಕು ಇಲ್ಲದವರಿಗೆ ಆಹಾರ ಪೂರೈಕೆ ಮಾಡುವುದಿಲ್ಲ ಎಂದು ಆದೇಶ ಹೊರಡಿಸಿದ್ದಾರೆ. ನಾವು ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಿಗೆ ಆಸರೆಯಾಗಲಿ ಎಂದು ಐದು ಗ್ಯಾರಂಟಿ ಯೋಜನೆ ನೀಡಲಾಗಿದೆ. ನಮ್ಮ ಯೋಜನೆಯನ್ನು ಬಿಜೆಪಿಯವರು ಬೇರೆ ರಾಜ್ಯಗಳಲ್ಲಿ ಕೆಲಸ ಮಾಡಿದ್ದಾರೆ. ಚುನಾವಣೆಗೂ ಮುನ್ನ ಐದರಿಂದ ಹತ್ತು ತಿಂಗಳ ಹಣವನ್ನು ಹಾಕುತ್ತಿದ್ದಾರೆ. ಇದು ನನ್ನ ವೈಯಕ್ತಿಕ ವಿಚಾರವಲ್ಲ. ಮೊದಲ ಬಾರಿಗೆ ಪ್ರತಿ ಬೂತ್ ನಲ್ಲಿ ಜನರಿಗಾಗಿ ಸಹಾಯ ಕೇಂದ್ರ ಸ್ಥಾಪಿಸಲಾಗಿದೆ. ನಮ್ಮ ಕಾರ್ಯಕ್ಕೆ ಅವರು ಅಭಿನಂದನೆ ಸಲ್ಲಿಸಬೇಕು. ಬರಲಿ ತನಿಖೆ ಮಾಡಲಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಿಎಲ್ಎ ನೇಮಕಾತಿಗೆ ಅವಕಾಶವಿದೆ. ಶಾಸಕರು, ಪರಾಜಿತ ಅಭ್ಯರ್ಥಿಗಳಿಗೆ ಮತಪಟ್ಟಿ ರಕ್ಷಣೆ ಬಗ್ಗೆ ಮಾರ್ಗದರ್ಶನ ನೀಡುವುದು ನಮ್ಮ ಕರ್ತವ್ಯವಲ್ಲವೇ? ರಾಜಕಾರಣ ಮಾಡುವವರಿಗೆ, ಟೀಕೆ ಮಾಡುವವರಿಗೆ ಬೇಡ ಎನ್ನಲು ಸಾಧ್ಯವೇ? ಎಲುಬಿಲ್ಲದ ನಾಲಿಗೆ. ಅವರ ಟೀಕೆಗಳು ಸಾಯುತ್ತವೆ, ನಮ್ಮ ಕೆಲಸಗಳು ಉಳಿಯುತ್ತವೆ. ರಾಜ್ಯದ ಜನರಿಗೆ ಮತದಾನದ ಹಕ್ಕು ನೀಡುವುದು ನಮ್ಮ ಸರ್ಕಾರದ ಗುರಿ. ಈ ಪ್ರಕ್ರಿಯೆಗೆ ನಮ್ಮ ವಿರೋಧವಿದ್ದರೂ ಜನರ ಹಕ್ಕು ರಕ್ಷಣೆಗೆ ನಾವು ಕೆಲಸ ಮಾಡುತ್ತಿದ್ದೇವೆ” ಎಂದು ತಿರುಗೇಟು ನೀಡಿದರು.

“ನಾನು ಪರಮೇಶ್ವರ್ ಅವರು ಬೀದರ್ ಗೆ ಹೋಗುತಿದ್ದು, ಬಸವಣ್ಣನವರ ಅನುಭವ ಮಂಟಪಕ್ಕೆ ಹೋಗುತ್ತಿದ್ದು, ಕಲಬುರ್ಗಿ ವಿಭಾಗದಲ್ಲಿ ಮಳೆ ಕೊರತೆ ಪರಿಸ್ಥಿತಿ ಪರಿಶೀಲನೆ ಮಾಡಲಿದ್ದೇವೆ. ರಾಜ್ಯದ ಕೆಲವು ಭಾಗಗಳಲ್ಲಿ ಈಗ ಮಳೆ ಸುಧಾರಣೆ ಕಾಣುತ್ತಿದೆ. ಆಲಮಟ್ಟಿ ಹಾಗೂ ತುಂಗಭದ್ರಾ ಅಣೆಕಟ್ಟಿನ ಒಳಹರಿವು ಬರುತ್ತಿದೆ. ಕುಡಿಯುವ ನೀರಿಗೆ ಆದ್ಯತೆ ನೀಡುವ ಕೆಲಸ ಮಾಡುತ್ತೇವೆ” ಎಂದು ಹೇಳಿದರು.

೦೦೦೦

ಮಹಿಳೆಯರಿಗೆ ಶಕ್ತಿ ತುಂಬಲು ನಮ್ಮ ಸರ್ಕಾರ ಬದ್ಧ: ಸಿಎಂ ಡಿ ಕೆ ಶಿವಕುಮಾರ್

ಹೆಣ್ಣು ಎಂದರೆ ಭೂಮಿ, ಧೈರ್ಯ, ಭರವಸೆ, ಒಗ್ಗಟ್ಟು, ಶಕ್ತಿ, ಬೆಳಕು

ಭಾರತ ಜೋಡೋ ಯುವ ಸಂಘ ನಿಮ್ಮ ಸಂಘಟನೆ, ಸಂಸ್ಕೃತಿ, ಕಲೆ ಅನಾವರಣಕ್ಕೆ ವೇದಿಕೆ

ಬಸವಕಲ್ಯಾಣ, ಜು.06:

“ನಮ್ಮ ಸರ್ಕಾರ ಮಹಿಳೆಯರ ಸಬಲೀಕರಣಕ್ಕೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ರಾಜ್ಯದ ಮಹಿಳೆಯರು ನಮಗೆ ಬೆಂಬಲ ನೀಡಿದ್ದು, ಅವರಿಗೆ ಶಕ್ತಿ ತುಂಬಲು ನಮ್ಮ ಸರ್ಕಾರ ಬದ್ಧವಾಗಿದೆ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.

ಬಸವಕಲ್ಯಾಣದ ಬಸವ ಮಹಾಮನೆಯಲ್ಲಿ ಸೋಮವಾರ ನಡೆದ ಅಕ್ಕಪಡೆ-ಮಹಿಳೆಯರ ಶಕ್ತಿ ಪ್ರದರ್ಶನ ಮತ್ತು ಆತ್ಮರಕ್ಷಣಾ ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರು ಭಾಗವಹಿಸಿ ಮಾತನಾಡಿದರು.

“ಹೆಣ್ಣು ಕುಟುಂಬದ ಕಣ್ಣು. ಹೆಣ್ಣು ಎಂದರೆ ಭೂಮಿ, ಧೈರ್ಯ, ಭರವಸೆ, ಒಗ್ಗಟ್ಟು, ಶಕ್ತಿ, ಬೆಳಕು. ನಿಮ್ಮ ಮಾರ್ಗದರ್ಶನದಂತೆ ಪ್ರತಿಯೊಂದು ಕುಟುಂಬ ಬೆಳಗುತ್ತಿದೆ. ನಾರಿ ಶಕ್ತಿ ದೇಶದ ಶಕ್ತಿ. ನಾನು ಇಂದು ಬಸವಕಲ್ಯಾಣದಲ್ಲಿರುವ ಬಸವಣ್ಣನವರ ಅನುಭವ ಮಂಟಪದಿಂದ ಬರ ಪರಿಸ್ಥಿತಿ ಅಧ್ಯಯನ ಪ್ರವಾಸ ಆರಂಭಿಸಲು ಬಂದಿದ್ದೇನೆ. ಇಲ್ಲಿಂದ ಕಲಬುರ್ಗಿಗೆ ಹೋಗಿ, ಕಲ್ಯಾಣ ಕರ್ನಾಟಕದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಜೊತೆ ಚರ್ಚೆ ಮಾಡುತ್ತೇನೆ. ನಾವು ಯಾವುದೇ ಗ್ರಾಮಕ್ಕೆ ಹೋದರೂ ಅಲ್ಲಿ ಗ್ರಾಮದೇವತೆ ಬಗ್ಗೆ ಕೇಳುತ್ತೇವೆ. ನಮ್ಮ ಭೂಮಿಯನ್ನು ಮಾತೃಭೂಮಿ, ಭೂಮಿತಾಯಿ ಎಂದು ಪರಿಗಣಿಸುತ್ತೇವೆ” ಎಂದು ಬಣ್ಣಿಸಿದರು.

ಭಾರತ ಜೋಡೋ ಯುವ ಸಂಘ ನಿಮ್ಮ ಸಂಘಟನೆ, ಸಂಸ್ಕೃತಿ, ಕಲೆ ಅನಾವರಣಕ್ಕೆ ವೇದಿಕೆ

“ಮಹಿಳೆಯರ ಸುರಕ್ಷತೆಗಾಗಿ ಅಕ್ಕಪಡೆ ಆರಂಭಿಸಲಾಗಿದೆ. ನಮ್ಮ ಸರ್ಕಾರ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಮುಖಂಡತ್ವದಲ್ಲಿ ಈ ಪಡೆಯನ್ನು ರಚಿಸಿದೆ. ಈ ಪಡೆಗೆ ಸೇರಿರುವವರಿಗೆ ತುಂಬು ಹೃದಯದ ಅಭಿನಂದನೆ ಸಲ್ಲಿಸುತ್ತೇನೆ. ನಿಮ್ಮ ಶಕ್ತಿ, ಧೈರ್ಯ, ಸಾಧನೆಗೆ ಫಲ ಸಿಗುತ್ತದೆ. ಮುಂದಿನ ದಿನಗಳಲ್ಲಿ ನಮ್ಮ ಸರ್ಕಾರ ಐತಿಹಾಸಿಕ ತೀರ್ಮಾನ ಮಾಡಲಿದೆ. ಮಹಿಳೆಯರಿಗಾಗಿ ಶಕ್ತಿ, ಗೃಹಜ್ಯೋತಿ, ಗೃಹಲಕ್ಷಿ ಕಾರ್ಯಕ್ರಮವನ್ನು ಈಗಾಗಲೇ ನೀಡಿದ್ದೇವೆ. ಮಹಿಳೆಯರು ಹಾಗೂ ಯುವಕರಿಗೆ ಪ್ರತಿ ಪಂಚಾಯ್ತಿಯಲ್ಲಿ ನಿಮ್ಮ ಸಂಘಟನೆ, ಸಂಸ್ಕೃತಿ, ಕಲೆ ಅನಾವರಣಕ್ಕೆ ಹಾಗೂ ಜಾತ್ಯಾತೀತ ತತ್ವ ಉಳಿಸಿಕೊಂಡು ಒಗ್ಗಟ್ಟಿನಿಂದ ಇರಲು ರಾಜ್ಯದಲ್ಲಿ 10 ಸಾವಿರ ಭಾರತ ಜೋಡೋ ಯವ ಸಂಘ ರಚಿಸಲು ಸರ್ಕಾರ ಆದೇಶ ಮಾಡಿದೆ” ಎಂದು ತಿಳಿಸಿದರು.

“ನಾವು ಮಾತೃ ದೇವೋಭವ ಎಂದು ಪರಿಗಣಿಸಿದ್ದೇವೆ. ನೀವೆಲ್ಲರೂ ನಮ್ಮ ಜೊತೆ ಕೈಜೋಡಿಸಿ, ನಮಗೆ ಶಕ್ತಿ ತುಂಬಿದ್ದೀರಿ. ನಿಮಗೆ ಶಕ್ತಿ ನೀಡುವ ಜವಾಬ್ದಾರಿ ನಮ್ಮದು. ನಿಮ್ಮಲ್ಲಿ ನಾಯಕತ್ವ ಬೆಳೆಯಬೇಕು. ಪಂಚಾಯ್ತಿಯಿಂದ ಸಂಸತ್ತಿನವರೆಗೂ ನಾಯಕತ್ವ ಬೆಳೆಯಬೇಕು. ರಾಜಕೀಯವಾಗಿ ಮಾತ್ರವಲ್ಲ, ನಿಮ್ಮ ನಿಮ್ಮ ಕ್ಷೇತ್ರದಲ್ಲಿ ನಾಯಕರಾಗಿ ಬೆಳೆಯಬೇಕು. ನಿಮ್ಮ ಜೊತೆಯಲ್ಲಿ ಡಿ ಕೆ ಶಿವಕುಮಾರ್ ಹಾಗೂ ಈ ಸರ್ಕಾರ ಇರಲಿದೆ” ಎಂದು ತಿಳಿಸಿದರು.

೦೦೦೦

ಬಸವಾದಿ ಶರಣರು–ಸೂಫಿ ಸಂತರ ನಾಡಿನಿಂದ ಮುಖ್ಯಮಂತ್ರಿಗಳ ಮೊದಲ ಉತ್ತರ ಕರ್ನಾಟಕ ಪ್ರವಾಸಕ್ಕೆ ಚಾಲನೆ

ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಹೊಸ ವೇಗ; ಎರಡು ದಿನಗಳ ಜಿಲ್ಲಾ ಪ್ರವಾಸದಲ್ಲಿ ಸಮಗ್ರ ಪ್ರಗತಿ ಪರಿಶೀಲನೆ

ವಿಧಾನಸೌಧದಲ್ಲಿ ನಿರಂತರ ನಡೆದ ಪ್ರಗತಿ ಪರಿಶೀಲನೆ ಸಭೆ ಇದೀಗ ಜಿಲ್ಲೆಗಳಿಗೆ ವಿಸ್ತರಣೆ

ಬೆಂಗಳೂರು, ಜುಲೈ 6: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಉತ್ತರ ಕರ್ನಾಟಕ ಪ್ರವಾಸವನ್ನು ಬಸವಾದಿ ಶರಣರ ಸಮಾನತೆಯ ನೆಲೆ ಬಸವಕಲ್ಯಾಣದಿಂದಲೇ ಆರಂಭಿಸಿದ್ದಾರೆ.

ಸೂಫಿ-ಸಂತರ ಸಾಮರಸ್ಯದ ಪರಂಪರೆಗೂ ಹೆಸರಾದ ಬೀದರ್‌ ಮತ್ತು ಕಲ್ಬುರ್ಗಿ ಜಿಲ್ಲೆಗಳಿಂದಲೇ ಈ ಪ್ರವಾಸವನ್ನು ಆರಂಭಿಸುತ್ತಿರುವುದು ರಾಜಕೀಯ, ಆಡಳಿತಾತ್ಮಕ ಹಾಗೂ ಸಾಂಸ್ಕೃತಿಕವಾಗಿ ವಿಶೇಷ ಮಹತ್ವ ಪಡೆದಿದೆ.

ಸರ್ಕಾರದ ಸಮಗ್ರ, ಸಮಾನ ಮತ್ತು ಜನಕೇಂದ್ರಿತ ಆಡಳಿತದ ಸಂಕಲ್ಪಕ್ಕೆ ಈ ಪ್ರವಾಸ ಮತ್ತೊಂದು ನಿದರ್ಶನವಾಗಿದೆ.

ಸಿಎಂ ಅವರು ತಿಂಗಳಿಂದ ವಿಧಾನಸೌಧದಲ್ಲಿ ನಿರಂತರವಾಗಿ ನಾನಾ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆ, ಅಧಿಕಾರಿಗಳ ಸಭೆ ನಡೆಸುವ ಮೂಲಕ ಆಡಳಿತ ವ್ಯವಸ್ಥೆಗೆ ಚುರುಕು ಮುಟ್ಟಿಸುವ ಕೆಲಸ ಮಾಡಿದ್ದರು. ಅಗತ್ಯ ಮಾಹಿತಿ ಪಡೆದು, ಅನೇಕ ಸಲಹೆ ಸೂಚನೆಗಳನ್ನು ನೀಡಿದ್ದರು. ಈಗ ಜಿಲ್ಲೆಗಳಿಗೆ ಖುದ್ದು ಭೇಟಿ ನೀಡಿ, ಆಡಳಿತ ವ್ಯವಸ್ಥೆ ಸುಗಮ ಚಾಲನೆಗೆ ಪ್ರೇರಣೆ ನೀಡಲಿದ್ದಾರೆ.

ಇಡೀ ದೇಶದಲ್ಲಿ ಬರದ ಛಾಯೆ ಆವರಿಸಿಕೊಂಡಿರುವ ಸಂದರ್ಭದಲ್ಲಿ ಸಿಎಂ ಅವರು ಕೈಗೊಂಡಿರುವ ಎರಡು ದಿನಗಳ ಪ್ರವಾಸ ಮಹತ್ವ ಪಡೆದಿದೆ. ಬೀದರ್‌ ಹಾಗೂ ಕಲ್ಬುರ್ಗಿ ಜಿಲ್ಲೆಗಳಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡುವುದರ ಜೊತೆಗೆ, ಕಲ್ಯಾಣ ಕರ್ನಾಟಕ ವಿಭಾಗದ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದ ಉನ್ನತ ಮಟ್ಟದ ಪ್ರಗತಿ ಪರಿಶೀಲನಾ ಸಭೆಗಳನ್ನು ನಡೆಸಲಿದ್ದಾರೆ.

ವಿವಿಧ ಇಲಾಖೆಗಳ ಯೋಜನೆಗಳ ಅನುಷ್ಠಾನ, ಶಿಕ್ಷಣ, ಆರೋಗ್ಯ, ನೀರಾವರಿ, ಮೂಲಸೌಕರ್ಯ, ಕೈಗಾರಿಕೆ, ಕುಡಿಯುವ ನೀರು, ಉದ್ಯೋಗ ಸೃಷ್ಟಿ ಹಾಗೂ ಜನಕಲ್ಯಾಣ ಕಾರ್ಯಕ್ರಮಗಳ ಪ್ರಗತಿಯನ್ನು ಇಲಾಖೆವಾರು ಪರಿಶೀಲಿಸಿ, ಬಾಕಿ ಉಳಿದಿರುವ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಲಿದ್ದಾರೆ.

ಸಂವಿಧಾನದ ಪರಿಚ್ಚೇದ 371(J) ಅಡಿಯಲ್ಲಿ ವಿಶೇಷ ಸ್ಥಾನಮಾನ ಹೊಂದಿರುವ ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಯನ್ನು ಸರ್ಕಾರ ತನ್ನ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿ ಪರಿಗಣಿಸಿದೆ. ಶಿಕ್ಷಣ, ಕೃಷಿ, ಕೈಗಾರಿಕೆ, ಉದ್ಯೋಗ, ನೀರಾವರಿ ಮತ್ತು ಮೂಲಸೌಕರ್ಯ ಕ್ಷೇತ್ರಗಳಲ್ಲಿ ವೇಗವಾಗಿ ಅಭಿವೃದ್ಧಿ ಸಾಧಿಸಲು ಹಾಗೂ ಇಲಾಖೆಗಳ ನಡುವೆ ಸಮನ್ವಯ ಹೆಚ್ಚಿಸಿ ಫಲಿತಾಂಶ ಆಧಾರಿತ ಆಡಳಿತಕ್ಕೆ ಚುರುಕು ನೀಡಿಲು ಈ ಪ್ರವಾಸ ಮಹತ್ವದ ವೇದಿಕೆಯಾಗಲಿದೆ.

ಜಿಲ್ಲಾ ಮಟ್ಟದಲ್ಲಿಯೇ ಆಡಳಿತವನ್ನು ಜನರ ಬಳಿಗೆ ಕೊಂಡೊಯ್ಯುವುದು, ಸ್ಥಳೀಯ ಸಮಸ್ಯೆಗಳನ್ನು ಸ್ಥಳದಲ್ಲೇ ಆಲಿಸಿ ತ್ವರಿತ ಪರಿಹಾರಕ್ಕೆ ಕ್ರಮ ಕೈಗೊಳ್ಳುವುದು ಹಾಗೂ ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ ಚುರುಕು ನೀಡುವುದು ಈ ಪ್ರವಾಸದ ಪ್ರಮುಖ ಉದ್ದೇಶವಾಗಿದೆ.

ರಾಜ್ಯದ ಯಾವುದೇ ಭಾಗ ಅಭಿವೃದ್ಧಿಯಿಂದ ವಂಚಿತವಾಗಬಾರದು ಎಂಬ ಸರ್ಕಾರದ ದೃಢ ಬದ್ಧತೆಯ ಭಾಗವಾಗಿಯೇ ಮುಖ್ಯಮಂತ್ರಿ ತಮ್ಮ ಮೊದಲ ಉತ್ತರ ಕರ್ನಾಟಕ ಪ್ರವಾಸವನ್ನು ಕಲ್ಯಾಣ ಕರ್ನಾಟಕದಿಂದ ಆರಂಭಿಸಿದ್ದಾರೆ. ಇದು ಕೇವಲ ಆಡಳಿತಾತ್ಮಕ ಪ್ರವಾಸವಲ್ಲ; ಪ್ರಾದೇಶಿಕ ಸಮತೋಲನ, ಸಮಗ್ರ ಅಭಿವೃದ್ಧಿ ಮತ್ತು ಜನಕೇಂದ್ರಿತ ಆಡಳಿತಕ್ಕೆ ಸರ್ಕಾರ ನೀಡುತ್ತಿರುವ ಆದ್ಯತೆಯ ಸ್ಪಷ್ಟ ಸಂದೇಶವಾಗಿದೆ.

ಈ ಪ್ರವಾಸ ಸಂದರ್ಭದಲ್ಲಿ ಸಿಎಂ ಅವರು ಪಕ್ಷದ ಕಚೇರಿಗೂ ಭೇಟಿ ನೀಡುತ್ತಿರುವುದು ಕಾರ್ಯಕರ್ತರಲ್ಲಿ ಹುಮ್ಮಸ್ಸು ತಂದಿದೆ. ಈ ಮಾದರಿಯನ್ನು ಇತರೆ ಮಂತ್ರಿಗಳೂ ಮುಂದುವರೆಸಿದರೆ ಕಾರ್ಯಕರ್ತರ ಆತ್ಮವಿಶ್ವಾಸ ಹೆಚ್ಚಲಿದೆ ಎನ್ನುವ ಮಾತುಗಳು ಕಾರ್ಯಕರ್ತರ ಸಮೂಹದಲ್ಲಿ ವ್ಯಕ್ತ ಆಗುತ್ತಿದೆ.

Comments

Leave a Comment

Prev Post ಮತದಾರರ ಹಕ್ಕು ರಕ್ಷಣೆಗಾಗಿ ‘ನಾಗರಿಕ ಮತ ಕಾವಲು ಸಮಿತಿ’ ರಚನೆ – ಬಾರ್ಮ್/ಸಿತಾರಾಮ್-ಎಎಡಿ ಘೋಷಣೆ
Next Post ಬ್ಯಾಂಕ್ ನೀಡುವ ಸಾಲದಿಂದ ಗ್ರಾಹಕರು ಆದಾಯ ಹೆಚ್ಚಿಸಿಕೊಳ್ಳಬೇಕು: ಬಸವರಾಜ ಬೊಮ್ಮಾಯಿ

ದಿಢೀರ್ ಯುದ್ಧದಿಂದ ಅಡುಗೆ ಅನಿಲ ಸಮಸ್ಯೆ: ಸಿಲಿಂಡರ್ ಪೂರೈಕೆಗೆ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ: ಬಿ.ವೈ. ವಿಜಯೇಂದ್ರ

ದಿಢೀರ್ ಯುದ್ಧದಿಂದ ಅಡುಗೆ ಅನಿಲ ಸಮಸ್ಯೆ: ಸಿಲಿಂಡರ್ ಪೂರೈಕೆಗೆ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ: ಬಿ.ವೈ. ವಿಜಯೇಂದ್ರ

ಬಿಜೆಪಿ ಕಾಲದ ನೇಮಕಾತಿಗಳನ್ನು ಕಾಂಗ್ರೆಸ್ ತನ್ನದು ಎಂದು ಹೇಳಿಕೊಂಡು ಜನರನ್ನು ವಂಚಿಸುತ್ತಿದೆ: ಛಲವಾದಿ ನಾರಾಯಣಸ್ವಾಮಿ ಆರೋಪ

ಬಿಜೆಪಿ ಕಾಲದ ನೇಮಕಾತಿಗಳನ್ನು ಕಾಂಗ್ರೆಸ್ ತನ್ನದು ಎಂದು ಹೇಳಿಕೊಂಡು ಜನರನ್ನು ವಂಚಿಸುತ್ತಿದೆ: ಛಲವಾದಿ ನಾರಾಯಣಸ್ವಾಮಿ ಆರೋಪ

ನ್ಯಾ.‌ನಾಗಮೋಹನ್ ದಾಸ್ ವರದಿಯಂತೆ ಒಳ ಮೀಸಲಾತಿ ಜಾರಿ ಮಾಡದಿದ್ದರೆ ರಾಜ್ಯಾದ್ಯಂತ ಹೋರಾಟ:ಬಸವರಾಜ ಬೊಮ್ಮಾಯಿ

ಸಿಎಂ ಒಳ ಮೀಸಲಾತಿ ವಿರೋಧಿಗಳ ಒತ್ತಡಕ್ಕೆ ಮಣಿದಿದ್ದಾರೆ: ಬಸವರಾಜ ಬೊಮ್ಮಾಯಿ

ಒಡಿಶಾ ಶಾಸಕರನ್ನು ನಾನು ಕರೆಸಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

ಪಕ್ಷ ಹೇಳಿದ್ದನ್ನು ಮಾಡುತ್ತೇನೆ ನನಗೆ ಇದು ಹೊಸತಲ್ಲ, ವಿಲಾಸ್ ರಾವ್ ದೇಶಮುಖ್ ಅವರ ಸರ್ಕಾರದಿಂದಲೂ ಇದನ್ನು ಮಾಡುತ್ತಿರುವೆ

ಪ್ರಧಾನಿ ಮೋದಿ ರಾಜತಾಂತ್ರಿಕ ನೈಪುಣ್ಯತೆಯಿಂದ ಜಾಗತಿಕ. ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ: ಬಸವರಾಜ ಬೊಮ್ಮಾಯಿ

ಪ್ರಧಾನಿ ಮೋದಿ ರಾಜತಾಂತ್ರಿಕ ನೈಪುಣ್ಯತೆಯಿಂದ ಜಾಗತಿಕ. ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ: ಬಸವರಾಜ ಬೊಮ್ಮಾಯಿ

ಯುಕೆಪಿ ಯೋಜನೆಗೆ ಆಂಧ್ರ ತಕರಾರು ಬಗ್ಗೆ ಕರ್ನಾಟಕದ ಸಂಸದರ ಜತೆ ದೆಹಲಿಯಲ್ಲಿ ಸಭೆ: ಡಿಸಿಎಂ ಡಿ.ಕೆ. ಶಿವಕುಮಾರ್

ಯುಕೆಪಿ ಯೋಜನೆಗೆ ಆಂಧ್ರ ತಕರಾರು ಬಗ್ಗೆ ಕರ್ನಾಟಕದ ಸಂಸದರ ಜತೆ ದೆಹಲಿಯಲ್ಲಿ ಸಭೆ: ಡಿಸಿಎಂ ಡಿ.ಕೆ. ಶಿವಕುಮಾರ್

Read all News