ಬ್ಯಾಂಕ್ ನೀಡುವ ಸಾಲದಿಂದ ಗ್ರಾಹಕರು ಆದಾಯ ಹೆಚ್ಚಿಸಿಕೊಳ್ಳಬೇಕು: ಬಸವರಾಜ ಬೊಮ್ಮಾಯಿ
ಅನಾಮಧೇಯ ಹೋರಾಟಗಾರರೇ ನಿಜವಾದ ಸ್ವಾತಂತ್ರ್ಯ ವೀರರು:ಬಸವರಾಜ ಬೊಮ್ಮಾಯಿ
ಬ್ಯಾಂಕ್ ನೀಡುವ ಸಾಲದಿಂದ ಗ್ರಾಹಕರು ಆದಾಯ ಹೆಚ್ಚಿಸಿಕೊಳ್ಳಬೇಕು: ಬಸವರಾಜ ಬೊಮ್ಮಾಯಿ
ಹಾವೇರಿ: "ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಪ್ರಾಣತ್ಯಾಗ ಮಾಡಿದ ಅನಾಮಧೇಯ ಹೋರಾಟಗಾರರೇ ನಿಜವಾದ ಸ್ವಾತಂತ್ರ್ಯ ವೀರರು" ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ.
ತಾಲೂಕಿನ ಹೊಸರಿತ್ತಿ ಗ್ರಾಮದಲ್ಲಿ ನಡೆದ ಬ್ಯಾಂಕ್ ಆಫ್ ಬರೋಡಾ ನೂತನ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು. ಇದು ಕೇವಲ ಒಂದು ಗ್ರಾಮವಲ್ಲ, ಇದೊಂದು ಐತಿಹಾಸಿಕ ಮತ್ತು ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೊಡ್ಡ ಗ್ರಾಮವಾಗಿದೆ. ಸ್ವಾತಂತ್ರ್ಯ ಹೋರಾಟಗಾರರಾದ ಹುತಾತ್ಮ ಮೈಲಾರ ಮಹಾದೇವಪ್ಪ, ವೆಂಕಣ್ಣ ಮಡಿವಾಳರ್ ಸೇರಿದಂತೆ ಮೂವರು ಧೀರರು ಬ್ರಿಟಿಷರ ವಿರುದ್ಧ ಹೋರಾಡಿ, ಇಲ್ಲಿನ ದೇವಸ್ಥಾನದ ಬಳಿ ಹುತಾತ್ಮರಾದ ಇತಿಹಾಸ ಈ ಮಣ್ಣಿಗಿದೆ" ಎಂದು ಸ್ಮರಿಸಿದರು. ಆ ಹೋರಾಟದ ಕಿಚ್ಚು ಇಂದಿಗೂ ನಮ್ಮ ಹೃದಯದಲ್ಲಿ ಜೀವಂತವಾಗಿದೆ ಎಂದರು.
"ದೇಶದ ಸ್ವಾತಂತ್ರ್ಯ ಕೇವಲ ಒಂದೆರಡು ಕುಟುಂಬಗಳಿಂದ ಬಂದಿದ್ದಲ್ಲ. ದೇಶದ ಪ್ರತಿಯೊಂದು ಹಳ್ಳಿ, ನಗರಗಳಲ್ಲಿ ಸಾವಿರಾರು ಅನಾಮಧೇಯ ಹೋರಾಟಗಾರರು ಬ್ರಿಟಿಷರ ಖಜಾನೆ ಲೂಟಿ ಮಾಡಿ, ಬಡವರಿಗೆ ಹಂಚುವ ಮೂಲಕ ಕ್ರಾಂತಿ ಎಬ್ಬಿಸಿದ್ದರು. ಬ್ರಿಟಿಷರ ವಿರುದ್ಧ ಹೋರಾಡಿ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟ ಇಂತಹ ಹುತಾತ್ಮರನ್ನು ನಾವು ಕೇವಲ ಹೋರಾಟಗಾರರೆಂದು ಕರೆಯದೆ, ವಿಭಿನ್ನವಾಗಿ ಗೌರವಿಸಬೇಕು" ಎಂದು ಬೊಮ್ಮಾಯಿ ನುಡಿದರು.
ಇದೇ ಸಂದರ್ಭದಲ್ಲಿ ಉತ್ತರ ಕರ್ನಾಟಕದ ಪ್ರಮುಖ ಧೀಮಂತ ನಾಯಕರಾಗಿದ್ದ ಹಳ್ಳಿಕೇರಿ ಗುದ್ಲೆಪ್ಪನವರನ್ನು ಸ್ಮರಿಸಿದ ಅವರು, "ಹಳ್ಳಿಕೇರಿ ಗುದ್ಲೆಪ್ಪನವರು ಉತ್ತರ ಕರ್ನಾಟಕದ ಸಿಂಹ ಸ್ವಪ್ನವಾಗಿದ್ದರು. ಮಾಜಿ ಮುಖ್ಯಮಂತ್ರಿ ನಿಜಲಿಂಗಪ್ಪನವರಂತಹ ನಾಯಕರೇ ಗುದ್ಲೆಪ್ಪನವರನ್ನು ಕಂಡು ಗೌರವಿಸುತ್ತಿದ್ದರು. ಸ್ವಾತಂತ್ರ್ಯದ ನಂತರ ಹೊಸರಿತ್ತಿ ಕ್ಷೇತ್ರವನ್ನು ಪುಣ್ಯಧಾಮವನ್ನಾಗಿ ಮಾಡಲು ಮತ್ತು ಇಲ್ಲಿ ಶಿಕ್ಷಣ ಕ್ರಾಂತಿ ತರಲು ಅವರು ಶ್ರಮಿಸಿದರು. ಅವರು ಕಟ್ಟಿದ ವಿದ್ಯಾಕೇಂದ್ರಗಳು ಇಂದು ಉತ್ತಮವಾಗಿ ಬೆಳೆದಿವೆ" ಎಂದು ಶ್ಲಾಘಿಸಿದರು.
"ಹಳ್ಳಿಕೇರಿ ಗುದ್ಲೆಪ್ಪನವರಂತಹ ಹಿರಿಯರು ಹಾಕಿಕೊಟ್ಟ ದಾರಿಯಲ್ಲಿ ಈ ಭಾಗದ ಶಿಕ್ಷಣ ಸಂಸ್ಥೆಗಳನ್ನು ಮತ್ತಷ್ಟು ಉತ್ತಮವಾಗಿ ನಡೆಸಿಕೊಂಡು ಹೋಗಬೇಕಿದೆ. ಸಣ್ಣಪುಟ್ಟ ಲೋಪದೋಷಗಳಿದ್ದರೆ ಹಳ್ಳಿಯ ಹಿರಿಯರೆಲ್ಲರೂ ಒಟ್ಟಾಗಿ ಕುಳಿತು ಸರಿಪಡಿಸಿಕೊಂಡು, ಸಂಸ್ಥೆಯ ಬೆಳವಣಿಗೆಗೆ ಶ್ರಮಿಸಬೇಕು. ಹಿರಿಯರ ಆಶಯಗಳು ಸದಾ ಜೀವಂತವಾಗಿರುವಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ" ಎಂದು ಹೇಳಿದರು.
ಜಾಗತಿಕ ಆರ್ಥಿಕತೆಗೆ ಭಾರತ ಶೇ. 25 ರಷ್ಟು ಕೊಡುಗೆ
ಇತ್ತೀಚಿನ ಐಎಂಎಫ್ ವರದಿಯ ಪ್ರಕಾರ, ಮುಂಬರುವ ದಿನಗಳಲ್ಲಿ ಜಾಗತಿಕ ಆರ್ಥಿಕತೆಗೆ ಭಾರತವು ಶೇ. 25 ರಷ್ಟು ಕೊಡುಗೆಯನ್ನು ನೀಡಲಿದೆ. ಕೋವಿಡ್ ಸಾಂಕ್ರಾಮಿಕ ಹಾಗೂ ಪ್ರಸ್ತುತ ನಡೆಯುತ್ತಿರುವ ಅಮೆರಿಕ-ಇರಾನ್ ಯುದ್ಧದಂತಹ ಜಾಗತಿಕ ಬಿಕ್ಕಟ್ಟುಗಳಿಂದಾಗಿ ವಿಶ್ವದ ದೊಡ್ಡ ದೊಡ್ಡ ಆರ್ಥಿಕ ರಾಷ್ಟ್ರಗಳೇ ನೆಲಕಚ್ಚಿವೆ. ಅನೇಕ ದೇಶಗಳು ಆರ್ಥಿಕ ಪ್ರಗತಿಯಿಲ್ಲದೆ ದಿವಾಳಿಯಾಗುವ ಸ್ಥಿತಿ ತಲುಪಿವೆ. ಆದರೆ, ಇಂತಹ ಕಠಿಣ ಸಂದರ್ಭದಲ್ಲೂ ಭಾರತವು ಜಾಗತಿಕ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಶೇ. 7.5 ರಷ್ಟು ಜಿಡಿಪಿ ಪ್ರಗತಿ ದರವನ್ನು ಕಾಯ್ದುಕೊಂಡಿದೆ. ಪ್ರಸ್ತುತ ಅಮೆರಿಕದ ಜಿಡಿಪಿ ಪ್ರಗತಿ ದರ ಶೇ. 3, ಜಪಾನ್ ಶೇ. 4 ಹಾಗೂ ಚೀನಾ ಶೇ. 5 ರಷ್ಟಿದ್ದರೆ, ಭಾರತವು ಶೇ. 7.5 ರಷ್ಟು ಪ್ರಗತಿ ಸಾಧಿಸುವ ಮೂಲಕ ಮುಂಚೂಣಿಯಲ್ಲಿದೆ ಎಂದು ವಿವರಿಸಿದರು.
ಒಗ್ಗಟ್ಟಿನಿಂದ ಸಂಸ್ಥೆ ಬೆಳೆಸಲು ಕರೆ
"ಗ್ರಾಮದ ಹಿರಿಯರೆಲ್ಲರೂ ಒಟ್ಟಾಗಿ ಕುಳಿತು ಸಣ್ಣಪುಟ್ಟ ಲೋಪದೋಷಗಳನ್ನು ಸರಿಪಡಿಸಿಕೊಂಡು ಹಿರಿಯರ ಆಶಯದಂತೆ ಸಂಸ್ಥೆಗಳನ್ನು ಬೆಳೆಸಬೇಕು. ನೀವೆಲ್ಲರೂ ಒಗ್ಗಟ್ಟಿನಿಂದ ಮುನ್ನಡೆದರೆ ಕೇಂದ್ರ ಸರ್ಕಾರದಿಂದ ಸಂಸ್ಥೆಗೆ ಮತ್ತಷ್ಟು ದೊಡ್ಡ ಪ್ರಮಾಣದ ಅನುದಾನವನ್ನು ತರಲು ಸಾಧ್ಯವಾಗುತ್ತದೆ. ವ್ಯಾಪಾರ, ವ್ಯವಹಾರ ಮತ್ತು ತೆರಿಗೆ ಸಂಗ್ರಹದ ಮೂಲಕ ಆರ್ಥಿಕತೆ ಚೇತರಿಸಿಕೊಳ್ಳುತ್ತಿರುವುದು ದೇಶದ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿದೆ ಎಂದು ಅವರು ಇದೇ ವೇಳೆ ಆಶಯ ವ್ಯಕ್ತಪಡಿಸಿದರು.
"ದೇಶದಲ್ಲಿ ದುಡ್ಡಿದ್ದವನು ದೊಡ್ಡಪ್ಪ ಎಂಬ ಕಾಲ ಮುಗಿದಿದೆ. ಯಾರ ಬಳಿ ದುಡಿಮೆ ಇದೆಯೋ ಅವರೇ ನಿಜವಾದ ದೊಡ್ಡಪ್ಪ. ದೇಶದ ಆರ್ಥಿಕ ಬೆಳವಣಿಗೆಯು ಕೇವಲ ಮೇಲ್ಮಟ್ಟದಲ್ಲಿ ಆಗುತ್ತಿಲ್ಲ. ಕೂಲಿ ಕಾರ್ಮಿಕರಿಂದ ಹಿಡಿದು ರೈತರವರೆಗೆ, ತಳಮಟ್ಟದ ಪ್ರತಿಯೊಬ್ಬ ನಾಗರಿಕನ ಶ್ರಮ ಮತ್ತು ದುಡಿಮೆಯಿಂದಾಗಿ ಇಂದು ಭಾರತವು ಜಾಗತಿಕ ಮಟ್ಟದಲ್ಲಿ ಆರ್ಥಿಕವಾಗಿ ಸದೃಢವಾಗಿ ಬೆಳೆಯುತ್ತಿದೆ. ಪ್ರತಿಯೊಬ್ಬರಿಗೂ ದುಡಿಯುವ, ಉತ್ಪಾದನೆ ಹೆಚ್ಚಿಸುವ ಅವಕಾಶ ಸಿಕ್ಕಾಗ ಮಾತ್ರ ನಿಜವಾದ ಅಭಿವೃದ್ಧಿ ಸಾಧ್ಯ ಎಂದು ಬೊಮ್ಮಾಯಿ ಅಭಿಪ್ರಾಯಪಟ್ಟರು.
ಬ್ಯಾಂಕ್ ಸಾಲದ ಸದುಪಯೋಗಕ್ಕೆ ಕರೆ
ಬ್ಯಾಂಕ್‌ಗಳು ನೀಡುವ ಸಾಲವನ್ನು ಗ್ರಾಹಕರು ಹೇಗೆ ಬಳಸಿಕೊಳ್ಳುತ್ತಾರೆ ಎಂಬುದರ ಮೇಲೆ ಅವರ ಭವಿಷ್ಯ ನಿರ್ಧಾರವಾಗುತ್ತದೆ ಎಂದು ತಿಳಿಸಿದ ಅವರು, "ಬ್ಯಾಂಕ್‌ನಿಂದ ಪಡೆಯುವ ಸಾಲವನ್ನು ಸದುಪಯೋಗಪಡಿಸಿಕೊಂಡು, ದುಡಿಮೆಯ ಮೂಲಕ ಆದಾಯವನ್ನು ಹೆಚ್ಚಿಸಿಕೊಳ್ಳಬೇಕು. ಆ ಹಣದಿಂದ ಸಾಲವನ್ನು ಮರುಪಾವತಿಸಿ ಸ್ವಾವಲಂಬಿಗಳಾಗಬೇಕು. ಆಗ ಮಾತ್ರ ಗ್ರಾಮಗಳಲ್ಲಿ ಬ್ಯಾಂಕ್ ಶಾಖೆಗಳನ್ನು ತೆರೆದಿದ್ದಕ್ಕೂ ಸಾರ್ಥಕತೆ ಸಿಗುತ್ತದೆ" ಎಂದರು.
ಎನ್‌ಪಿಎ ಮುಕ್ತದತ್ತ ಬ್ಯಾಂಕಿಂಗ್ ವಲಯ
ಕಳೆದ ಹತ್ತು-ಹದಿನೈದು ವರ್ಷಗಳ ಹಿಂದೆ ದೇಶದ ಬ್ಯಾಂಕಿಂಗ್ ವಲಯವು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿತ್ತು. ಅನೇಕ ಬ್ಯಾಂಕ್‌ಗಳು ಶೇ. 5 ರಿಂದ 10 ರಷ್ಟು ವಸೂಲಾಗದ ಸಾಲದ ಹೊರೆ ಹೊಂದಿದ್ದವು. ಆದರೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರ ದಕ್ಷ ನೇತೃತ್ವ ಹಾಗೂ ಹಣಕಾಸು ನಿರ್ವಹಣೆಯಿಂದಾಗಿ ಬ್ಯಾಂಕಿಂಗ್ ವಲಯವು ಚೇತರಿಸಿಕೊಂಡಿದೆ. ಪ್ರಸ್ತುತ ಬ್ಯಾಂಕ್‌ಗಳ ಎನ್‌ಪಿಎ ಪ್ರಮಾಣ ಶೇ. 1 ರಿಂದ 3 ರಷ್ಟಕ್ಕೆ ಇಳಿಕೆಯಾಗಿದ್ದು, ಆರ್‌ಬಿಐ ಸೇರಿದಂತೆ ದೇಶದ ಬಹುತೇಕ ಎಲ್ಲಾ ಬ್ಯಾಂಕ್‌ಗಳು ಲಾಭದತ್ತ ಮುನ್ನಡೆಯುತ್ತಿವೆ ಎಂದು ದೇಶದ ಸದೃಢ ಆರ್ಥಿಕ ನಿರ್ವಹಣೆಯನ್ನು ಶ್ಲಾಘಿಸಿದರು.
ಹಾವೇರಿಯಲ್ಲಿ ಶೀಘ್ರದಲ್ಲೇ ಅತ್ಯಾಧುನಿಕ ಟೆಕ್ಸ್ಟ್‌ಟೈಲ್ ಪಾರ್ಕ್ ಸ್ಥಾಪನೆ
ಜಿಲ್ಲೆಯ ಆರ್ಥಿಕ ಅಭಿವೃದ್ಧಿ ಹಾಗೂ ಗ್ರಾಮೀಣ ಭಾಗದ ಮಹಿಳೆಯರ ಸಬಲೀಕರಣಕ್ಕೆ ಪೂರಕವಾಗುವಂತೆ ಹಾವೇರಿಯಲ್ಲಿ ಶೀಘ್ರದಲ್ಲೇ ಬೃಹತ್ ಟೆಕ್ಸ್ಟ್‌ಟೈಲ್ ಪಾರ್ಕ್ (ಜವಳಿ ಪಾರ್ಕ್) ಮತ್ತು ಗಾರ್ಮೆಂಟ್ ಉದ್ಯಮವನ್ನು ಸ್ಥಾಪಿಸಲಾಗುವುದು ಈಗಾಗಲೇ ಜಾರಿಯಲ್ಲಿರುವ ಗಾರ್ಮೆಂಟ್ಸ್ ಉದ್ಯಮಗಳಿಂದ ಸುಮಾರು 8,000 ದಿಂದ 10,000 ಮಹಿಳೆಯರು ಉದ್ಯೋಗ ಪಡೆದುಕೊಂಡಿದ್ದಾರೆ. ಮಹಿಳೆಯರ ಕೈಗೆ ನೇರವಾಗಿ ಸಂಬಳ ಸಿಗುವುದರಿಂದ ಅದು ಕುಟುಂಬದ ನಿರ್ವಹಣೆಗೆ ಮತ್ತು ಮಕ್ಕಳ ವಿದ್ಯಾಭ್ಯಾಸಕ್ಕೆ ನೇರವಾಗಿ ಬಳಕೆಯಾಗುತ್ತದೆ. ಇದು ಗ್ರಾಮೀಣ ಕುಟುಂಬಗಳ ಆರ್ಥಿಕ ಸ್ಥಿರತೆಗೆ ಕಾರಣವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಹಾವೇರಿಯಲ್ಲಿ ಹೊಸದಾಗಿ ನಿರ್ಮಿಸಲು ಉದ್ದೇಶಿಸಿರುವ ಟೆಕ್ಸ್ಟ್‌ಟೈಲ್ ಪಾರ್ಕ್‌ಗಾಗಿ ಸುಮಾರು 50 ಎಕರೆ ಭೂಮಿಯ ಅಗತ್ಯವಿದ್ದು, ಈ ಕುರಿತು ಈಗಾಗಲೇ ಜಿಲ್ಲಾಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗಿದೆ. ಭಾರತ ಸರ್ಕಾರದ ವಿಶೇಷ ಯೋಜನೆಯಡಿ ಈ ಬೃಹತ್ ಪಾರ್ಕ್ ಅನ್ನು ಯಶಸ್ವಿಯಾಗಿ ಸ್ಥಾಪಿಸಲಾಗುವುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಗ್ರಾಮಗಳ ಅಭಿವೃದ್ಧಿಗೆ ಬ್ಯಾಂಕುಗಳ ಕೊಡುಗೆ
ಹೊಸದಾಗಿ ಆರಂಭವಾಗಿರುವ ಬ್ಯಾಂಕ್ ಶಾಖೆಯು ಸುತ್ತಮುತ್ತಲಿನ ಸುಮಾರು 20 ಕ್ಕೂ ಹೆಚ್ಚು ಗ್ರಾಮಗಳ ಜನರಿಗೆ ಆರ್ಥಿಕ ನೆರವು ನೀಡಬೇಕು. ಪ್ರತಿಯೊಬ್ಬರೂ ಬ್ಯಾಂಕ್ ಖಾತೆಗಳನ್ನು ಹೊಂದುವ ಮೂಲಕ ಹಾಗೂ ಬ್ಯಾಂಕಿನ ಮಾರ್ಗದರ್ಶನದಲ್ಲಿ ಆರ್ಥಿಕವಾಗಿ ಬೆಳೆಯಬೇಕು ಎಂದು ಹೇಳಿದರು.
ಬ್ಯಾಂಕ್ ಆಫ್ ಬರೋಡಾದ ಇತಿಹಾಸ: .
ಬ್ಯಾಂಕ್ ಆಫ್ ಬರೋಡಾ ಸಂಸ್ಥೆಯ ಇತಿಹಾಸವನ್ನು ಸ್ಮರಿಸಿದ ಅವರು, "ಗುಜರಾತ್‌ನ ಬರೋಡಾ ಮಹಾರಾಜರು ಸುಮಾರು 118 ವರ್ಷಗಳ ಹಿಂದೆ ಈ ಬ್ಯಾಂಕನ್ನು ಪ್ರಾರಂಭಿಸಿದ್ದರು. ಅದೇ ರೀತಿ ನಮ್ಮ ಮೈಸೂರು ಮಹಾರಾಜರು ಕೂಡ 'ಸ್ಟೇಟ್ ಬ್ಯಾಂಕ್ ಆಫ್ ಮೈಸೂರು' ಅನ್ನು ಸ್ಥಾಪಿಸಿದ್ದರು. ಮೈಸೂರು ಮತ್ತು ಬರೋಡಾ ಮಹಾರಾಜರ ನಡುವೆ ಉತ್ತಮ ಬಾಂಧವ್ಯವಿತ್ತು," ಎಂದು ಹಳೆಯ ನೆನಪುಗಳನ್ನು ಹಂಚಿಕೊಂಡರು.
"ಮನುಷ್ಯ ಮಾಡಿದ ಒಳ್ಳೆಯ ಕೆಲಸಗಳು ಶಾಶ್ವತವಾಗಿ ಉಳಿಯುತ್ತವೆ. ಬರೋಡಾ ಮಹಾರಾಜರು ಅಂದು ಮಾಡಿದ ಸತ್ಕಾರ್ಯದಿಂದಾಗಿ ಇಂದು ನಾವೆಲ್ಲರೂ ಅವರನ್ನು ನೆನೆಯುತ್ತಿದ್ದೇವೆ. ನಮ್ಮ ಜೀವನದಲ್ಲೂ ನಾವು ನಮ್ಮ ಮಟ್ಟಿಗೆ ಸಾಧ್ಯವಿರುವ ಒಳ್ಳೆಯ ಕೆಲಸಗಳನ್ನು ಮಾಡಿ ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗಬೇಕು," ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಬ್ಯಾಂಕಿಂಗ್ ಕ್ಷೇತ್ರ ಬಹಳ ಬದಲಾಗಿದೆ. ಈಗ ಎಲ್ಲವೂ ಮೊಬೈಲ್‌ನಲ್ಲೇ ಲಭ್ಯವಿದೆ. ಡಿಜಿಟಲೀಕರಣದಿಂದಾಗಿ ಗ್ರಾಮೀಣ ಮತ್ತು ನಗರ ಪ್ರದೇಶಗಳ ನಡುವಿನ ಅಂತರ ಕಡಿಮೆಯಾಗಿದೆ. ಹಳ್ಳಿಯಲ್ಲಿರುವ ತಾಯಂದಿರು ಕೂಡ ಇಂದು ಮನೆಯಲ್ಲೇ ಕುಳಿತು ಮೊಬೈಲ್ ಮೂಲಕ ಬ್ಯಾಂಕಿಂಗ್ ವ್ಯವಹಾರ ನಡೆಸುತ್ತಿದ್ದಾರೆ," ಎಂದರು.
"ನಾನು ಹಾವೇರಿ ಜಿಲ್ಲೆಗೆ ಬಂದಾಗಿನಿಂದ ಬ್ಯಾಂಕ್ ಅಧಿಕಾರಿಗಳ ಸಭೆ ನಡೆಸಿ ಪ್ರಗತಿಯನ್ನು ಪರಿಶೀಲಿಸುತ್ತಿದ್ದೇನೆ. ಬ್ಯಾಂಕುಗಳಲ್ಲಿ ನಮ್ಮ ಜಿಲ್ಲೆಯ ಜನರು ಇಡುವ ಡೆಪಾಸಿಟ್‌ಗಿಂತ, ಜನರಿಗೆ ನೀಡುವ ಸಾಲದ ಪ್ರಮಾಣ ಹೆಚ್ಚಿರಬೇಕು. ಜನರು ಇಡುವ ಹಣದ ಲಾಭ ಸ್ಥಳೀಯರಿಗೇ ಸಿಗಬೇಕು," ಎಂದು ಒತ್ತಿ ಹೇಳಿದರು.
ಅಧಿಕಾರಿಗಳ ನಿರಂತರ ಪ್ರಯತ್ನ ಹಾಗೂ ಬ್ಯಾಂಕಿನ ಉನ್ನತ ಅಧಿಕಾರಿಗಳ ಸಹಕಾರದಿಂದಾಗಿ ಈ ನೂತನ ಶಾಖೆ ಹಾವೇರಿಯಲ್ಲಿ ತಲೆಯೆತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಅವರು ವಿನಂತಿಸಿದರು.
ಬ್ಯಾಂಕ್‌ಗಳೊಂದಿಗೆ ಗ್ರಾಹಕರು ಉತ್ತಮ ಸಂಬಂಧವನ್ನು ಇಟ್ಟುಕೊಂಡಾಗ ಮಾತ್ರ ಹೆಚ್ಚಿನ ಆರ್ಥಿಕ ನೆರವು ಮತ್ತು ಅಭಿವೃದ್ಧಿ ಸಾಧ್ಯ ಕೇಂದ್ರ ಸರ್ಕಾರದ ಮುದ್ರಾ ಯೋಜನೆಯು ಯುವಕರಲ್ಲಿ ಸ್ವಯಂ ಉದ್ಯೋಗವನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಹಾವೇರಿ ಜಿಲ್ಲೆಯೊಂದರಲ್ಲೇ ವಿವಿಧ ಬ್ಯಾಂಕ್‌ಗಳ ಮೂಲಕ ಸುಮಾರು 92,000 ಯುವಕರಿಗೆ ಸ್ವಯಂ ಉದ್ಯೋಗಕ್ಕಾಗಿ ಒಟ್ಟು 1,402 ಕೋಟಿ ರೂಪಾಯಿಗಳ ಸಾಲ ಸೌಲಭ್ಯವನ್ನು ಒದಗಿಸಲಾಗಿದೆ," ಎಂದು ಅವರು ಮಾಹಿತಿ ನೀಡಿದರು.
ಮುದ್ರಾ ಯೋಜನೆಯ ವಿವಿಧ ಹಂತಗಳ ಕುರಿತು ವಿವರಿಸಿದ ಅವರು, ಶಿಶು ಯೋಜನೆಯಡಿ ₹50,000, ಕಿಶೋರ್ ಯೋಜನೆಯಡಿ ₹5 ಲಕ್ಷ ಮತ್ತು ತರುಣ್ ಯೋಜನೆಯಡಿ ₹10 ಲಕ್ಷದಿಂದ ₹20 ಲಕ್ಷದವರೆಗೆ ಸಾಲ ಸಿಗಲಿದ್ದು, ಪಡೆದ ಸಾಲವನ್ನು ಪ್ರಾಮಾಣಿಕವಾಗಿ ಮರುಪಾವತಿಸಿದರೆ ಬ್ಯಾಂಕ್‌ಗಳು ಮತ್ತಷ್ಟು ಹೆಚ್ಚಿನ ಸಾಲ ನೀಡಲು ಮುಂದೆ ಬರುತ್ತವೆ ಎಂದರು.
ಜಿಲ್ಲೆಯಲ್ಲಿ ಬೆಳೆ ಸಾಲದ ಕೊಡುಗೆ:
ಜಿಲ್ಲೆಯ ರೈತರಿಗೆ ಬ್ಯಾಂಕಿಂಗ್ ವಲಯದಿಂದ ಸಿಕ್ಕಿರುವ ಬೆಂಬಲದ ಬಗ್ಗೆ ಮಾತನಾಡುತ್ತಾ, "ರಾಷ್ಟ್ರೀಕೃತ ಬ್ಯಾಂಕ್‌ಗಳ ಮೂಲಕ ಹಾವೇರಿ ಜಿಲ್ಲೆಯಲ್ಲಿ ರೈತರಿಗೆ ಒಟ್ಟು 4,591 ಕೋಟಿ ರೂಪಾಯಿಗಳ ಬೆಳೆ ಸಾಲವನ್ನು ವಿತರಿಸಲಾಗಿದೆ. ಪಿಎಂಜೆಜೆಬಿವೈ (PMJJBY) ಮತ್ತು ಪಿಎಂಎಸ್‌ಬಿವೈ (PMSBY) ನಂತಹ ವಿಮಾ ಯೋಜನೆಗಳು ಸಾರ್ವಜನಿಕರಿಗೆ ರಕ್ಷಣೆ ನೀಡುತ್ತಿವೆ," ಎಂದು ಅವರು ಉಲ್ಲೇಖಿಸಿದರು.
"ಇದು ನಿಮ್ಮದೇ ಬ್ಯಾಂಕ್. ಈ ಶಾಖೆಯಲ್ಲಿ ಮುಂದಿನ ಒಂದು ವರ್ಷದ ಅವಧಿಯಲ್ಲಿ ಗ್ರಾಮಸ್ಥರೆಲ್ಲರೂ ಸೇರಿ ಒಟ್ಟು 100 ಕೋಟಿ ರೂಪಾಯಿಗಳ ಡೆಪಾಸಿಟ್ (ಠೇವಣಿ) ಮಾಡುವ ಗುರಿ ಹೊಂದಬೇಕು. ಈ ಗುರಿಯನ್ನು ಸಾಧಿಸಿದರೆ, ನಾನು ಮತ್ತೊಮ್ಮೆ ಇಲ್ಲಿಗೆ ಬಂದು ಠೇವಣಿ ಇಟ್ಟ ಎಲ್ಲ ಗ್ರಾಹಕರಿಗೂ ಸನ್ಮಾನ ಮಾಡುತ್ತೇನೆ," ಎಂದು ಭರವಸೆ ನೀಡಿದರು.
ಬ್ಯಾಂಕ್ ಅಧಿಕಾರಿಗಳು ಮತ್ತು ಗ್ರಾಹಕರು ಅಣ್ಣ-ತಮ್ಮಂದಿರಂತೆ ಉತ್ತಮ ಬಾಂಧವ್ಯ ಹೊಂದಿರಬೇಕು. ಬ್ಯಾಂಕ್ ವ್ಯವಹಾರಗಳ ಮೂಲಕ ಇಡೀ ಊರಿನ ಚಿತ್ರಣವೇ ಬದಲಾಗಬೇಕು ಎಂದು ಅವರು ಆಶಿಸಿದರು.
ಈ ಸಂಧರ್ಭದಲ್ಲಿ ಬ್ಯಾಂಕಿನ ಹಿರಿಯ ಅಧಿಕಾರಿಗಳಾದ ಜಿ. ರೂಪಾ, ಸುಹಾಸ, ದೀಪಕ್ ಎನ್ ಶಂಕರ, ಪ್ರಭುದೇವ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.


Comments
Leave a Comment