* ಉಪ ಚುನಾವಣೆ, ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರ ಚುನಾವಣೆ ಚರ್ಚೆ * ಸಮನ್ವಯ ಸಮಿತಿ ರಚನೆ ಕುರಿತೂ ಮಾತುಕತೆ * ಏನೇ ಸಮಸ್ಯೆ ಬಂದರೂ ಒಟ್ಟಾಗಿ, ಒಂದಾಗಿ ಕೆಲಸ * ಬೀದಿಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡಲಿ * ಶಾಶ್ವತ ನಿವಾಸಿ ಪ್ರಮಾಣಪತ್ರ ವಿತರಣೆಗೆ ವಿರೋಧ
ಸರ್ಕಾರ ಕಿತ್ತೊಗೆಯಲು ಸಮನ್ವಯದಿಂದ
ಕೆಲಸ: ಬಿ.ವೈ.ವಿಜಯೇಂದ್ರ
ಮುಖ್ಯಾಂಶಗಳು
================
* ಉಪ ಚುನಾವಣೆ, ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರ ಚುನಾವಣೆ ಚರ್ಚೆ
* ಸಮನ್ವಯ ಸಮಿತಿ ರಚನೆ ಕುರಿತೂ ಮಾತುಕತೆ
* ಏನೇ ಸಮಸ್ಯೆ ಬಂದರೂ ಒಟ್ಟಾಗಿ, ಒಂದಾಗಿ ಕೆಲಸ
* ಬೀದಿಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡಲಿ
* ಶಾಶ್ವತ ನಿವಾಸಿ ಪ್ರಮಾಣಪತ್ರ ವಿತರಣೆಗೆ ವಿರೋಧ
ಬೆಂಗಳೂರು,ಜು. 10- ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯಲು ಜೆಡಿಎಸ್ ಜೊತೆಗೆ ಸಮನ್ವಯದಿಂದ, ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಹೇಳಿದ್ದಾರೆ.
ಇಂದು ಕೇಂದ್ರ ಸಚಿವ, ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ರಾಜ್ಯ ರಾಜಕೀಯದ ಪ್ರಚಲಿತ ವಿದ್ಯಮಾನಗಳ ಕುರಿತು ಚರ್ಚಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಂಬರುವ ಹಿರಿಯೂರು ಹಾಗೂ ಧಾರವಾಡ ಉಪ ಚುನಾವಣೆ ಹಾಗೂ ನಾಲ್ಕು ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಚುನಾವಣೆಗಳ ಕುರಿತು ಚರ್ಚೆ ನಡೆಸಲಾಯಿತು ಎಂದು ತಿಳಿಸಿದರು.
ಬಿಜೆಪಿ ಮೂರು ಕಡೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಎಲ್ಲದಕ್ಕೂ ಜೆಡಿಎಸ್ ಸಹಕಾರ ಕೇಳಿದ್ದೇನೆ. ಬಿಜೆಪಿ ಮತ್ತು ಜೆಡಿಎಸ್ ನಡುವೆ ಸಮನ್ವಯ ಸಮಿತಿ ರಚಿಸುವ ಕುರಿತು ಮಾತುಕತೆ ನಡೆಸಲಾಗಿದೆ. ಸಮಿತಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರು, ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹಾಗೂ ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ ಇರಲಿದ್ದಾರೆ. ಜೆಡಿಎಸ್‍ನಿಂದ ಕುಮಾರಸ್ವಾಮಿ ಇರಲಿದ್ದಾರೆ. ಇದರ ಜೊತೆಗೆ ಮತ್ತೊಬ್ಬರ ಹೆಸರು ಸೂಚಿಸಿ ಎಂದು ಹೇಳಿರುವುದಾಗಿ ತಿಳಿಸಿದರು.
ನಮ್ಮ ಎಲ್ಲಾ ಮಾತಿಗೆ ಕುಮಾರಸ್ವಾಮಿ ಅವರು ಸಹಮತ ವ್ಯಕ್ತಪಡಿಸಿದ್ದಾರೆ. ಸಮಿತಿಯಲ್ಲಿ ಆದಷ್ಟು ಕಡಿಮೆ ಇರಬೇಕು ಎಂದು ಹೇಳಿದ್ದಾರೆ. ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗ್ರವಾಲ್ ಅವರೊಂದಿಗೂ ಚರ್ಚಿಸಲಾಗಿದೆ ಎಂದರು.
ಅಭಿವೃದ್ಧಿಯ ಹಿತದೃಷ್ಟಿಯಿಂದ ತೀರ್ಮಾನ..
ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿ ಹಾಗೂ ಜೆಡಿಎಸ್ ಪಕ್ಷ ಹಾಗೂ ರಾಜ್ಯದ ಅಭಿವೃದ್ಧಿಯ ಹಿತದೃಷ್ಟಿಯಿಂದ ತೀರ್ಮಾನ ಕೈಗೊಂಡಿದ್ದೇವೆ. ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಅಪೇಕ್ಷೆಯಂತೆ ನಾವೆಲ್ಲ ಒಂದಾಗಿ ಹೋಗಬೇಕು ಎಂದು ತಿಳಿಸಿದರು.
ಗೊಂದಲಕ್ಕೆ ಅವಕಾಶ ಇಲ್ಲ....
ಹಿರಿಯೂರು ಕ್ಷೇತ್ರದ ಉಪ ಚುನಾವಣೆ ಸಂಬಂಧ ಕುಮಾರಸ್ವಾಮಿ ಅವರು ತಮ್ಮ ಅಭಿಪ್ರಾಯ ಹೇಳಿದ್ದಾರೆ. ನಮ್ಮ ಅಭಿಪ್ರಾಯವನ್ನೂ ಹೇಳಿದ್ದೇವೆ. ಕ್ಷೇತ್ರದಲ್ಲಿ ಹಿಂದೆ ಬಿಜೆಪಿ ಗೆಲುವು ಸಾಧಿಸಿದೆ. ಹಿರಿಯೂರು ಮತ್ತು ಧಾರವಾಡ ಉಪ ಚುನಾವಣೆಯಲ್ಲಿ ಗೊಂದಲಕ್ಕೆ ಅವಕಾಶ ನೀಡದೆ ಗೆಲುವಿಗೆ ಕೆಲಸ ಮಾಡುತ್ತೇವೆ. ಹಿಂದೆ ಆದ ತಪ್ಪು ತಿದ್ದಿಕೊಂಡು ಹೋಗಬೇಕು. ಎರಡೂ ಕಡೆ ನಾವು ಗೆಲ್ಲಬೇಕು ಎಂದು ಹೇಳಿದರು. ಕ್ಷೇತ್ರದಲ್ಲಿ ಯಾರು ಸ್ಪರ್ಧಿಸಬೇಕು ಎಂಬ ಬಗ್ಗೆ ತೀರ್ಮಾನವನ್ನು ಹೈಕಮಾಂಡ್ ಕೈಗೊಳ್ಳಲಿದೆ ಎಂದು ಪ್ರಶ್ನೆಯೊಂದಕ್ಕೆ ತಿಳಿಸಿದರು.
ಜಿಬಿಎ ಚುನಾವಣೆ ನಡೆಸುವ ಮನಸ್ಸಿಲ್ಲ..
ರಾಜ್ಯ ಸರ್ಕಾರಕ್ಕೆ ಜಿಬಿಎ, ಜಿಲ್ಲಾ ಪಂಚಾಯಿತಿ ಸೇರಿ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸುವ ಮನಸ್ಸಿಲ್ಲ. ರಾಜ್ಯ ಸರ್ಕಾರ ಈಗ ಎಸ್‍ಐಆರ್ ಇಟ್ಟುಕೊಂಡು ಮತ್ತೆ ಜಿಬಿಎ ಚುನಾವಣೆ ಮುಂದೂಡಲು ನೋಡುತ್ತಿದೆ. ಇದು ದುರ್ದೈವ. ಸಚಿವ ಸಂಪುಟ ವಿಸ್ತರಣೆ ಮಾಡುವ ಮಾನಸಿಕ ಸ್ಥಿತಿಯಲ್ಲೂ ಸರ್ಕಾರ ಇಲ್ಲ ಎಂದು ಆಕ್ಷೇಪಿಸಿದರು.
ಬೀದಿಬದಿ ವ್ಯಾಪಾರಿಗಳ ಬಗ್ಗೆ ಚರ್ಚೆ....
ಬೀದಿಬದಿ ವ್ಯಾಪಾರಿಗಳು ಅರ್ಥಿಕ ಶಕ್ತಿ ತುಂಬುವಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ. ಬಡವರಾದ ಬೀದಿಬದಿ ವ್ಯಾಪಾರಿಗಳನ್ನು ಏಕಾಏಕಿ ಎತ್ತಂಗಡಿ ಮಾಡುವ ಬದಲು ಅವರಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕಿತ್ತು. ಅವರ ಹಿತಾಸಕ್ತಿ ಕಾಪಾಡುವ ಜವಾಬ್ದಾರಿ ಸಹ ಸರ್ಕಾರದ ಮೇಲಿದೆ ಎಂದು ನುಡಿದರು.
ಕಡತ ವಿಲೇವಾರಿ ಆಗಿಲ್ಲ...
ಎಂಬತ್ತು ಸಾವಿರ ಕಡತ ವಿಲೇವಾರಿ ಆಗಿಲ್ಲ ಎಂದರೆ ರಾಜ್ಯದ ಆಡಳಿತ ಸ್ಥಿತಿ ಏನಾಗಿದೆ ಎಂದು ತಿಳಿಯುತ್ತದೆ. ಸಿಎಂ ಉತ್ಸಾಹದಿಂದ ಇದ್ದಾರೆ. ಒಂದು ತಿಂಗಳು ಪೂರೈಸಿದ್ದಾರೆ. ಈಗಲಾದರೂ ಮೂರು ವರ್ಷದ ವೈಫಲ್ಯಗಳನ್ನು ಸರಿಪಡಿಸಿಕೊಳ್ಳಲಿ. ಅನ್ನದಾತರ ಕಲ್ಯಾಣಕ್ಕೆ ಆಡಳಿತ ನಡೆಸಲಿ ಎಂದರು.
ಕುತಂತ್ರ, ಷಡ್ಯಂತ್ರ ನಡೆಯುತ್ತಿದೆ...
ಅಕ್ರಮ ವಲಸಿಗರಿಗೆ ರಕ್ಷಣೆ ನೀಡಲು ಶಾಶ್ವತ ನಿವಾಸಿ ಪ್ರಮಾಣಪತ್ರ ನೀಡುವ ಮೂಲಕ ಷಡ್ಯಂತ್ರ ನಡೆಯುತ್ತಿದೆ. ಅಲ್ಪಸಂಖ್ಯಾತರ ಓಲೈಕೆ ಮತ್ತು ದೇಶದ ಹಿತಕ್ಕೆ ಧಕ್ಕೆ ತರುವ ನಿರ್ಧಾರ ಕೈಬಿಡಿ ಎಂದು ಸಿಎಂಗೆ ಆಗ್ರಹಿಸಿದರು. ಇಂಥ ಪ್ರಮಾಣಪತ್ರಕ್ಕೆ ಬಿಜೆಪಿ ವಿರೋಧವಿದೆ. ಮುಂದಿನ ದಿನಗಳಲ್ಲಿ ಜನರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.
000
ಜಿಬಿಎ ಚುನಾವಣೆ ಮಾಡಿ: ಛಲವಾದಿ ನಾರಾಯಣಸ್ವಾಮಿ
ಬೆಂಗಳೂರು: ಜು. 10- ಜಿಬಿಎ ಚುನಾವಣೆ ವಿಚಾರದಲ್ಲಿ ಕೋರ್ಟ್ ಆದೇಶವನ್ನು ಸರಕಾರ ಗೌರವಿಸಬೇಕು ಎಂದು ವಿಧಾನಪರಿಷತ್ತಿನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಗ್ರಹಿಸಿದ್ದಾರೆ.
ಬಿಜೆಪಿ ರಾಜ್ಯಕಾರ್ಯಲಯ ಜಗನ್ನಾಥ ಭವನದಲ್ಲಿ ಅವರು ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿ ಪ್ರಶ್ನೆಗೆ ಉತ್ತರಿಸಿದರು. ಬಹುಕಾಲದಿಂದ ಬೆಂಗಳೂರಿನ ಪ್ರಜೆಗಳು ಚುನಾವಣೆ ಆಗಬೇಕೆಂಬ ಕಾತರದಲ್ಲಿದ್ದಾರೆ. ಆದರೆ, ಕಾಂಗ್ರೆಸ್ ಸರಕಾರಕ್ಕೆ ಇದರಲ್ಲಿ ಹಲವು ಕಂಟಕಗಳಿವೆ. ಅಭಿವೃದ್ಧಿ ಶೂನ್ಯತೆ, ಮಳೆ ಬಂದರೆ ದೋಣಿಗಳಲ್ಲಿ ಓಡಾಡುವ ಸ್ಥಿತಿ ಇದೆ. ಇದು ಗುಂಡಿ ಬಿದ್ದ ಬೆಂಗಳೂರಾಗಿದೆ. ಭ್ರಷ್ಟಾಚಾರ, ಕಸ- ಹೀಗೆ ಅನೇಕ ವಿಚಾರಗಳು ಅವರನ್ನು ಕಾಡುತ್ತಿವೆ. ಆದ್ದರಿಂದ ಸೋಲಿನ ಭೀತಿಯಿಂದ ಕಾಂಗ್ರೆಸ್ ಸರಕಾರವು ಐದು ತುಂಡಾಗಿ ಮಾಡಿ ಒಂದೆರಡನ್ನಾದರೂ ಗೆದ್ದರೆ ನಮ್ಮ ಪ್ರಾತಿನಿಧ್ಯ ಇದೆ ಎಂದು ಹೇಳುವ ಕಾರಣಕ್ಕೆ ಕೆಂಪೇಗೌಡರ ನಾಡನ್ನು 5 ತುಂಡು ಮಾಡಿದ್ದಾರೆ ಎಂದು ಆಕ್ಷೇಪಿಸಿದರು.
ಎಸ್‍ಐಆರ್ ನೆಪ ಒಡ್ಡಿ...
ಚುನಾವಣೆಗೆ ಈಗ ಹೋದರೆ ಒಂದನ್ನಾದರೂ ಗೆಲ್ಲುವುದು ಕಷ್ಟ ಎಂದು ಅನಿಸಿದ ಮೇಲೆ ಮರುಚಿಂತನೆ ನಡೆದಿದೆ ಎಂದು ಗೊತ್ತಾಗಿದೆ. ಈಗ ಎಸ್‍ಐಆರ್ ಮುಂದಿಟ್ಟುಕೊಂಡು ಅದನ್ನು ತಿಳಿಸಿ ಸುಪ್ರೀಂ ಕೋರ್ಟಿಗೆ ಹೋಗಿದ್ದಾರೆ ಎಂದು ವಿವರಿಸಿದರು. ಎಸ್‍ಐಆರ್ ಮತದಾನದ ಹಕ್ಕನ್ನು ಕಿತ್ತುಕೊಳ್ಳುವುದಿಲ್ಲ. ಮೃತರ ಹೆಸರನ್ನು ಹೇಗೆ ಪಟ್ಟಿಯಲ್ಲಿ ಇಟ್ಟುಕೊಳ್ಳಲು ಸಾಧ್ಯ? ತೆಗೆಯಲೇ ಬೇಕಿದೆ ಎಂದು ವಿವರಿಸಿದರು. ಹೊರಗಡೆಯಿಂದ ಬಂದು ಆಧಾರರಹಿತರಾಗಿ ಸೇರಿದ್ದರೆ ಅದನ್ನು ತೆಗೆಸಲೇಬೇಕಿದೆ ಎಂದು ನುಡಿದರು. ಎಸ್‍ಐಆರ್ ವಿಚಾರದಲ್ಲಿ ಗುಂಪು ಸೇರಿ ಫಾರ್ಮ್ ಭರ್ತಿ ಮಾಡುತ್ತಿದ್ದರು. ಇದನ್ನು ಚುನಾವಣಾ ಆಯೋಗದ ಗಮನಕ್ಕೆ ತಂದಿದ್ದೇವೆ. ಬಿಎಲ್‍ಒಗಳು, ಬಿಎಲ್‍ಎ 2ಗಳು ಮನೆಮನೆಗೆ ಹೋಗಬೇಕು ಎಂದು ತಿಳಿಸಿದರು.
ನಾಟಕ ಮಾಡುವುದು ಬೇಡ...
ಪ್ರಶ್ನೆಗೆ ಉತ್ತರಿಸಿದ ಅವರು, ಬೆಂಗಳೂರಿನ ಅಭಿವೃದ್ಧಿ ಚರ್ಚೆ ವಿಷಯ ಅಲ್ಲ; ಅದು ಕೆಲಸ ಮಾಡಿ ತೋರಿಸಬೇಕಾದ ವಿಷಯ. 3 ವರ್ಷ ಇವರು ನಿದ್ರೆ ಮಾಡುತ್ತಿದ್ದರೇ? ಬೆಂಗಳೂರಿನ ಸಚಿವರಾಗಿ ಸಿದ್ದರಾಮಯ್ಯ, ರಾಹುಲ್ ಗಾಂಧಿ ಇದ್ದರೇ? ಈಗಿನ ಮುಖ್ಯಮಂತ್ರಿಗಳೇ ಇದ್ದರಲ್ಲವೇ? ಆಗ ನಿಮಗೆ ಬೆಂಗಳೂರು ನಿಮಗೆ ಕಾಣಲಿಲ್ಲವೇ? ನಾಟಕ ಮಾಡುವುದು, ನಾಟಕ ಕಂಪೆನಿಯನ್ನು ಬದಿಗಿಡಿ ಎಂದು ಒತ್ತಾಯಿಸಿದರು. ಮಳೆ ದುಬಾರಿ ಆಗುವ ಪರಿಸ್ಥಿತಿ ಇದೆ. ಒಂದು ವೇಳೆ ಮಳೆ ಬಂದರೆ ದೋಣಿ ಕೊಡಿಸಬೇಕಾದೀತು. ಅದು ದುಬಾರಿ ಆಗಲಿದೆ. ಎಲ್ಲೆಲ್ಲಿ ನೀರು ಸರಾಗವಾಗಿ ಹರಿಯುವುದಿಲ್ಲವೋ, ಕಸದ ತ್ಯಾಜ್ಯ ಇದೆಯೋ ಅದನ್ನು ತೆರವುಗೊಳಿಸಿ ಎಂದು ಆಗ್ರಹಿಸಿದರು.
ಹಿಂದೆ 3- 4 ಸಾವಿರಕ್ಕೆ ಗುಂಡಿ ಮುಚ್ಚುತ್ತಿದ್ದರು. ಆದರೆ, ಕಳೆದ ಬಾರಿ ಒಂದೊಂದು ಲಕ್ಷ ಖರ್ಚು ಮಾಡಿ ಗುಂಡಿ ಮುಚ್ಚುವ ಪರಿಸ್ಥಿತಿ ಬಂದಿತ್ತು. ಇದು ಅತಿ ಹೆಚ್ಚು ಪ್ರಮಾಣದ ಭ್ರಷ್ಟಾಚಾರ ಎಂದು ಜನರು ಮಾತನಾಡುತ್ತಿದ್ದರು. ಒಂದು ಗುಂಡಿ ಮುಚ್ಚಲು ಒಂದೊಂದು ಲಕ್ಷ ಯಾಕಾಗಿದೆ ಎಂದು ತನಿಖೆ ಮಾಡಿಸಿ ಎಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು. ಹಳ್ಳಿ ಕಡೆ ಒಂದು ಲಕ್ಷಕ್ಕೆ ಒಂದು ಬಾವಿ ತೆಗೆದು ನೀರು ಕೊಡಲು ಸಾಧ್ಯವಾಗುತ್ತಿತ್ತು ಎಂದು ಗಮನ ಸೆಳೆದರು. ಗುಂಡಿ ಮುಚ್ಚಿಸಿ, ಟ್ರಾಫಿಕ್ ಸಮಸ್ಯೆ ಪರಿಹರಿಸಿ ಎಂದು ತಿಳಿಸಿದರು.
ಕಾಂಗ್ರೆಸ್ ಸರಕಾರ ಬೆಂಗಳೂರಿನ ಸರಕಾರ..
ಕಾಂಗ್ರೆಸ್ ಸರಕಾರ ಬೆಂಗಳೂರಿನ ಸರಕಾರವಾಗಿದೆ. ಅದು ಕೇವಲ ಬೆಂಗಳೂರಿಗೆ ಸೀಮಿತ ಆಗದಿರಲಿ ಎಂದು ಹೇಳಿದರು. ಇಡೀ ರಾಜ್ಯ ನಮ್ಮ ಜವಾಬ್ದಾರಿ ಎಂದು ಕೆಲಸ ಮಾಡಿ ಎಂದು ಆಗ್ರಹಿಸಿದರು.
ಇನ್ನೊಂದು ಪ್ರಶ್ನೆಗೆ ಉತ್ತರ ಕೊಟ್ಟ ಅವರು, ಯಾರ ಕಡತ ಇದೆಯೋ ಅವರು ನೇರವಾಗಿ ಭೇಟಿ ಮಾಡಿರಲಾರದು; ಇದರಿಂದ ಕಡತ ವಿಲೇವಾರಿ ಆಗಿರಲಿಕ್ಕಿಲ್ಲ ಎಂದು ವ್ಯಂಗ್ಯವಾಗಿ ತಿಳಿಸಿದರು. ಆ ಜನರಿಗೆ ಆಹ್ವಾನಿಸಿ, ಮಾತುಕತೆ ಮಾಡಿ ಕಡತ ವಿಲೇವಾರಿ ಮಾಡುವುದು ಒಳ್ಳೆಯದು ಎಂದು ಹೇಳಿದರು. ಶಾಶ್ವತ ನಿವಾಸಿ ಪ್ರಮಾಣಪತ್ರ ನೀಡಲು ಇವರು ಯಾರು ಎಂದು ಇನ್ನೊಂದು ಪ್ರಶ್ನೆಗೆ ಮರು ಪ್ರಶ್ನೆ ಹಾಕಿದರು. ಶಾಶ್ವತ ಪ್ರಮಾಣಪತ್ರ ಎಂದರೆ ಪೌರತ್ವ ಎಂದು ಗಮನಕ್ಕೆ ತಂದರು. ಅದು ಇವರ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿದರು.



Comments
Leave a Comment