ಮುಂಗಾರು ಜೂನ್ ನಲ್ಲಿ ಸೈಲೆಂಟ್, ಜುಲೈಯಲ್ಲಿ ವೈಲೆಂಟ್ !
ಮಂಗಳೂರಿನಲ್ಲಿ ಗೋಡೆ ಕುಸಿತ ದುರಂತ: ಒಂದೇ ಕುಟುಂಬದ ಮೂವರು ಬಲಿ
from ; Jayaram Udupi
ಮಂಗಳೂರು:
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಂಗಳವಾರ ರಾತ್ರಿಯಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯು ಮಂಗಳೂರು ನಗರದಲ್ಲಿ ಹೃದಯವಿದ್ರಾವಕ ದುರಂತವೊಂದಕ್ಕೆ ಕಾರಣವಾಗಿದೆ. ನಗರದ ಕಂಕನಾಡಿ ಸಮೀಪದ ನಾಗೂರಿಯಲ್ಲಿ ತಡೆಗೋಡೆಯೊಂದು ಕುಸಿದು ಹಳೆಯ ಹಂಚಿನ ಮನೆಯ ಮೇಲೆ ಬಿದ್ದ ಪರಿಣಾಮ ನಿದ್ರೆಯಲ್ಲಿದ್ದ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಈ ದುರ್ಘಟನೆ ಬುಧವಾರ ಮುಂಜಾನೆ ಸಂಭವಿಸಿದೆ.
ಅವಶೇಷಗಳಡಿ ಸಿಲುಕಿದ್ದ ಬಿಹಾರ ಮೂಲದ ಶಾಂತಾ (46), 8 ವರ್ಷದ ಅನಾಮಿಕಾ ಚೌರಾಸಿಯಾ ಹಾಗೂ 4 ವರ್ಷದ ಪರಿ ಅವರನ್ನು ರಕ್ಷಣಾ ಸಿಬ್ಬಂದಿ ಹೊರತೆಗೆದಾಗ ಅವರು ಮೃತಪಟ್ಟಿರುವುದು ದೃಢಪಟ್ಟಿತು. ಕ್ಷಣಾರ್ಧದಲ್ಲಿ ಸಂಭವಿಸಿದ ಈ ದುರಂತ ಕುಟುಂಬದ ಬದುಕನ್ನೇ ಕಸಿದುಕೊಂಡಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳೀಯ ನಿವಾಸಿಗಳು, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ, ಪೊಲೀಸರು ಹಾಗೂ ಸ್ಥಳೀಯ ಆಡಳಿತದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಅವಶೇಷಗಳಡಿ ಸಿಲುಕಿದ್ದ ಒಬ್ಬ ಪುರುಷ ಮತ್ತು ಇಬ್ಬರು ಬಾಲಕಿಯರನ್ನು ರಕ್ಷಿಸಿ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಯಿತು. ಗಾಯಾಳುಗಳಿಗೆ ತುರ್ತು ಚಿಕಿತ್ಸೆ ಮುಂದುವರಿದಿದೆ.
ದುರಂತದಲ್ಲಿ ಪಕ್ಕದ ಮನೆಯಲ್ಲಿ ವಾಸವಿದ್ದ ಉಡುಪಿ ಮೂಲದ ಬಾಲಕೃಷ್ಣ ಅವರ ಪತ್ನಿ ಶಾಂತಾ ಅವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸಿದ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು.
ಮೃತ ಕುಟುಂಬವು ಮೂಲತಃ ಬಿಹಾರ ರಾಜ್ಯದವರಾಗಿದ್ದು, ಕಳೆದ ಸುಮಾರು 20 ವರ್ಷಗಳಿಂದ ಕಂಕನಾಡಿ ಪೊಲೀಸ್ ಠಾಣೆಯ ಹಿಂಭಾಗದ ಬಾಡಿಗೆ ಮನೆಯಲ್ಲಿ ನೆಲೆಸಿತ್ತು. ಕುಸಿದ ತಡೆಗೋಡೆಯ ಕೆಳಭಾಗದಲ್ಲಿ ನಾಲ್ಕು ಬಾಡಿಗೆ ಮನೆಗಳಿದ್ದು, ನಾಲ್ಕು ಕುಟುಂಬಗಳು ಅಲ್ಲಿ ವಾಸಿಸುತ್ತಿದ್ದವು.
ತಡೆಗೋಡೆ ಕುಸಿತದಿಂದ ಎರಡು ಮನೆಗಳಿಗೆ ತೀವ್ರ ಹಾನಿಯಾಗಿದ್ದು, ನಾಲ್ಕು ಮನೆಗಳ ಹಿಂಭಾಗದ ಕಾಂಪೌಂಡ್ ಗೋಡೆ ಸಂಪೂರ್ಣವಾಗಿ ನೆಲಸಮವಾಗಿದೆ. ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು ಅಪಾಯ ತಪ್ಪಿಸಲು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಘಟನೆಯ ಕುರಿತು ಜಿಲ್ಲಾ ಆಡಳಿತದೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಸಚಿವ ಯು.ಟಿ. ಖಾದರ್, ಗಾಯಾಳುಗಳ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸುವಂತೆ ಹಾಗೂ ಮೃತರ ಕುಟುಂಬಗಳಿಗೆ ತಕ್ಷಣವೇ ಪರಿಹಾರ ಧನ ಬಿಡುಗಡೆ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ನಿರಂತರ ಮಳೆಯ ನಡುವೆ ಸಂಭವಿಸಿದ ಈ ದುರಂತ ಮಂಗಳೂರು ನಗರವನ್ನು ಶೋಕಸಾಗರದಲ್ಲಿ ಮುಳುಗಿಸಿದ್ದು, ಅಪಾಯದ ಪ್ರದೇಶಗಳಲ್ಲಿ ವಾಸಿಸುವ ಕುಟುಂಬಗಳನ್ನು ಕೂಡಲೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವಂತೆ ಸಾರ್ವಜನಿಕರಿಂದ ಒತ್ತಾಯ ಕೇಳಿಬಂದಿದೆ.
ಮುಂಗಾರು ಜೂನ್ ನಲ್ಲಿ ಸೈಲೆಂಟ್, ಜುಲೈಯಲ್ಲಿ ವೈಲೆಂಟ್ !
ಮಂಗಳೂರು: ಕರ್ನಾಟಕ ಕರಾವಳಿಯಲ್ಲಿ ಜೂನ್ ತಿಂಗಳಿಡೀ ಸೈಲೆಂಟ್ ಆಗಿದ್ದ ಮುಂಗಾರು ಮಳೆ ಜುಲೈಯಲ್ಲಿ ವೈಲೆಂಟ್ ಆಗಿ ಅಬ್ಬರಿಸಿದೆ. ಮಂಗಳೂರಿನಲ್ಲಿ ಮೂವರನ್ನು ಬಲಿ ತೆಗೆದುಕೊಂಡಿದೆ.
ಜೂನ್ ತಿಂಗಳಿಡೀ ಕಾದರೂ ಕರಾವಳಿಯತ್ತ ಮುಖ ತೋರದ ಮಳೆರಾಯ, ಜುಲೈ ಆರಂಭದಲ್ಲೇ ತನ್ನ ಹಾಜರಿಯನ್ನು ಖಾತರಿ ಪಡಿಸಿದ್ದಾನೆ . ಇಡೀ ಜೂನ್ ತಿಂಗಳು ಮಳೆ ಕೊರತೆಯಿಂದ ತತ್ತರಿಸಿದ್ದ ಕರಾವಳಿಯಲ್ಲಿ ಇದೀಗ ಧಾರಾಕಾರ ಮಳೆ ಸುರಿಯುತ್ತಿದ್ದು, ಜನರಲ್ಲಿ ಎಚ್ಚರಿಕೆಯ ಜೊತೆಗೆ ರೈತರಲ್ಲಿ ಹೊಸ ಭರವಸೆಯನ್ನೂ ಮೂಡಿಸಿದೆ.
ಮಳೆಯ ಸ್ಪರ್ಶದಿಂದ ಒಣಗಿದ್ದ ನೆಲ ಮತ್ತೆ ಹಸಿರ ಕಳೆ ಪಡೆದುಕೊಂಡಿದೆ. ಹಸಿರು ಸಸ್ಯರಾಶಿ ಧರೆಗೆ ಹೊಸ ಚೈತನ್ಯದ ಚೆಲುವನ್ನು ನೀಡಿದೆ. ಜೂನ್ ಆರಂಭದಲ್ಲೇ ಶುರುವಾಗಬೇಕಿದ್ದ ಮಳೆಗಾಲ ಈ ಬಾರಿ ತಿಂಗಳ ಕಾಲ ತಡವಾಗಿ ಜುಲೈನಲ್ಲಿ ತನ್ನ ನೈಜ ಸ್ವರೂಪ ತೋರಿದೆ.
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಂಗಳವಾರ ರಾತ್ರಿಯಿಂದ ವ್ಯಾಪಕ ಮಳೆಯಾಗುತ್ತಿದ್ದು, ಹಲವು ದಿನಗಳಿಂದ ನೀರಿನ ಹರಿವು ಕ್ಷೀಣಿಸಿದ್ದ ನದಿ, ತೊರೆ ಮತ್ತು ಹೊಳೆಗಳು ಮತ್ತೆ ಮೈ ತುಂಬಲಾರಂಭಿಸಿವೆ. ಒಣಗಿದ್ದ ತೆರೆದ ಬಾವಿಗಳಲ್ಲೂ ನೀರಿನ ಮಟ್ಟ ಏರಿಕೆಯಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಸಂತಸದ ವಾತಾವರಣ ಮನೆಮಾಡಿದೆ .
ಮಳೆ ವಿಳಂಬದಿಂದ ಸಂಕಷ್ಟಕ್ಕೀಡಾಗಿದ್ದ ರೈತರು ಇದೀಗ ಕೃಷಿ ಚಟುವಟಿಕೆಗಳಿಗೆ ವೇಗ ನೀಡಿದ್ದಾರೆ. ಗದ್ದೆ ಹಸನು, ನಾಟಿ ಸೇರಿದಂತೆ ವಿವಿಧ ಕೃಷಿ ಕಾರ್ಯಗಳಿಗೆ ಸಿದ್ಧತೆ ಆರಂಭವಾಗಿದ್ದು, ಭತ್ತದ ಬೆಳೆ ಮತ್ತೆ ಚೇತರಿಕೆಯ ನಿರೀಕ್ಷೆ ಮೂಡಿಸಿದೆ. ಚಾಪೆ ನೇಜಿ ತಯಾರಿಸಿ ಖರೀದಿದಾರರಿಲ್ಲದೆ ನಷ್ಟ ಅನುಭವಿಸುತ್ತಿದ್ದ ರೈತೊದ್ಯಮಿಗಳು ಹಾಗೂ ಕಾರ್ಮಿಕರಿಗೂ ಮಳೆ ಹೊಸ ಆಶಾಕಿರಣವಾಗಿದೆ.
ತೋಡು ಮತ್ತು ಹೊಳೆಗಳಲ್ಲಿ ಹೊಸ ನೀರು ಹರಿಯಲು ಆರಂಭವಾಗಿರುವುದರಿಂದ ಮೀನುಗಳ ಮೇಲ್ಮುಖ ಚಲನೆಯೂ ಆರಂಭವಾಗಿದೆ. ಉಪ್ಪುನೀರಿನ ಮೀನುಗಳು ಸಿಹಿನೀರಿನತ್ತ ಚಲಿಸುವ ಈ ಅವಧಿಯಲ್ಲಿ ಸಾಂಪ್ರದಾಯಿಕ ಮೀನುಗಾರರು ರಾತ್ರಿ ವೇಳೆ ದೀಪ ಹಿಡಿದು ಹೊಸ ನೀರಿನಲ್ಲಿ ಮೀನು ಹಿಡಿಯುವ ಚಟುವಟಿಕೆಯಲ್ಲಿ ತೊಡಗುತ್ತಾರೆ. ಇದು ಕರಾವಳಿಯ ಮಳೆಗಾಲದ ವಿಶಿಷ್ಟ ದೃಶ್ಯಗಳಲ್ಲಿ ಒಂದಾಗಿದೆ.
ಆದರೆ ಮಳೆಯ ಆಗಮನದೊಂದಿಗೆ ಸಾಮಾನ್ಯ ಸಮಸ್ಯೆಗಳೂ ತಲೆದೋರಿವೆ. ಹಲವೆಡೆ ವಿದ್ಯುತ್ ವ್ಯತ್ಯಯ, ಮರಗಳು ಉರುಳಿ ಬೀಳುವ ಘಟನೆಗಳು, ಗಾಳಿ-ಮಳೆಗೆ ವಿದ್ಯುತ್ ಕಂಬಗಳು ಹಾನಿಗೀಡಾಗುವಂತಹ ಘಟನೆಗಳು ವರದಿಯಾಗುತ್ತಿವೆ. ಕೆಲವು ತಗ್ಗು ಪ್ರದೇಶಗಳಲ್ಲಿ ನೀರು ನಿಂತು ಸಂಚಾರಕ್ಕೂ ಅಡಚಣೆ ಉಂಟಾಗಿದೆ.
ಒಟ್ಟಾರೆ, ವಿಳಂಬವಾಗಿ ಆಗಮಿಸಿದ ಮಳೆರಾಯ ಕೃಷಿಗೆ ಹೊಸ ಜೀವ ತುಂಬಿದರೂ, ಭಾರೀ ಮಳೆಯ ಎಚ್ಚರಿಕೆಯ ನಡುವೆಯೇ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತ ಸೂಚಿಸಿದೆ. ಕರಾವಳಿಯಲ್ಲಿ ಮುಂದಿನ ಕೆಲ ದಿನಗಳವರೆಗೆ ಉತ್ತಮ ಮಳೆಯಾಗುವ ಸಾಧ್ಯತೆ ಇರುವುದರಿಂದ ತಗ್ಗು ಪ್ರದೇಶದ ನಿವಾಸಿಗಳು ಹಾಗೂ ನದಿ ತೀರದ ಜನರು ಎಚ್ಚರಿಕೆಯಿಂದ ಇರಬೇಕೆಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.
ಜೂನ್ ಆರಂಭ ಎಂದರೆ ಶಾಲೆಗಳ ಆರಂಭ. ಅರ್ಧ ಶತಮಾನದ ಹಿಂದೆ ಹೋದರೆ ಸರಕಾರಿ ಶಾಲೆಗಳನ್ನೆ ಅವಲಂಬಿಸಿದ್ದ ಮಕ್ಕಳು ' ಮಳೆ ಬಂತೋ ಬಾಬ್ರಾಯ, ಕೊಡೆ ಬಿಡಿಸೋ ಸುಬ್ರಾಯ' ಎಂದು ರಾಗವಾಗಿ ಮಳೆಯನ್ನು ಸ್ವಾಗತಿಸುತ್ತಿದ್ದರು. ಮಳೆಯೊಂದಿಗೆ ಸೌಹಾರ್ದಯುತವಾಗಿ ಬದುಕುತ್ತಿದ್ದರು.ಮಳೆ ನೀರು ಹರಿದುಹೋಗುವಲ್ಲಿ ಕಾಗದದ ದೋಣಿ ಮಾಡಿ ಆಡುತ್ತಿದ್ದರು.
ಈಗ ಕಾಲ ಬದಲಾಗಿದೆ. ಮಕ್ಕಳಿಗೆ ' ಮಳೆಯಲ್ಲಿ ನೆನೆಯಬೇಡ, ಶೀತ ಆಗ್ತದೆ, ಜ್ವರ ಬರ್ತದೆ, ಒಳಗೆ ಬಾ' ಎಂದು ಹಿರಿಯರು, ಪೋಷಕರು ಜಾಗ್ರತೆ ಹೇಳುತ್ತಿರುವುದರಿಂದ ಮಳೆ ರಾಯ ಮಕ್ಕಳ ಪಾಲಿಗೆ ವಿಲನ್ ಆಗಿದ್ದಾನೆ. ರಜೆಯ ಸವಲತ್ತು ಒದಗಿಸುವ ವಿದ್ಯಮಾನಗಳ ಸಾಲಿಗೆ ಸೇರಿ ಹೋಗಿದ್ದಾನೆ.




Comments
Leave a Comment