ಮಾದಿಗೆ ಎಡಗೈ ಸಮುದಾಯಕ್ಕೆ ಸಚಿವ ಸ್ಥಾನ ನೀಡಬೇಕು” – ಆದಿ ಜಾತಿ ಕ್ಷೇಮಾಭಿವೃದ್ಧಿ ಸಂಘದ ಮನವಿ
ಮಾದಿಗೆ ಎಡಗೈ ಸಮುದಾಯಕ್ಕೆ ಸಚಿವ ಸ್ಥಾನ ನೀಡಬೇಕು” – ಆದಿ ಜಾತಿ ಕ್ಷೇಮಾಭಿವೃದ್ಧಿ ಸಂಘದ ಮನವಿ
ಬೆಂಗಳೂರು , ಜೂ. 29-
ಕರ್ನಾಟಕ ರಾಜ್ಯ ಆದಿ ಜಾತಿ ಕ್ಷೇಮಾಭಿವೃದ್ಧಿ ಸಂಘವು ಪರಿಶಿಷ್ಟ ಜಾತಿಗಳ ಪೈಕಿ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ಮಾದಿಗೆ ಎಡಗೈ ಸಮುದಾಯಕ್ಕೆ ಸಾಮಾಜಿಕ ನ್ಯಾಯ ನೀಡುವಂತೆ ಕಾಂಗ್ರೆಸ್ ಪಕ್ಷದ ವರಿಷ್ಠರಿಗೆ ಮನವಿ ಮಾಡಿದೆ.
ಸಂಘದ ಅಧ್ಯಕ್ಷ ಕೆ.ಆರ್. ರಾಚಯ್ಯ ಅವರು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಮೈಸೂರು–ಚಾಮರಾಜನಗರ ಸ್ಥಳೀಯ ಸಂಸ್ಥೆಗಳ ಸಾಮಾನ್ಯ ಕ್ಷೇತ್ರದಿಂದ ಅತಿ ಹೆಚ್ಚು ಮತಗಳನ್ನು ಪಡೆದು ಜಯಶೀಲರಾದ ವಿಧಾನ ಪರಿಷತ್ ಸದಸ್ಯ ಡಾ. ಡಿ. ತಿಮ್ಮಯ್ಯ ರವರಿಗೆ ಮುಂದಿನ ಸಚಿವ ಸಂಪುಟ ವಿಸ್ತರಣೆಯಲ್ಲಿ ಸಂಪುಟ ದರ್ಜೆಯ ಸ್ಥಾನ ನೀಡಬೇಕೆಂದು ಒತ್ತಾಯಿಸಿದರು.
ಅವರು ಹೇಳಿದರು, “ಪ್ರವರ್ಗ ಬಿ.ಗೆ ಈಗಾಗಲೇ ಉಪ ಮುಖ್ಯಮಂತ್ರಿ ಸೇರಿದಂತೆ ಎರಡು ಸಚಿವ ಸ್ಥಾನ ನೀಡಲಾಗಿದೆ. ಅದೇ ರೀತಿಯಲ್ಲಿ ಪ್ರವರ್ಗ ಎ.ಗೂ ಉಪ ಮುಖ್ಯಮಂತ್ರಿ ಸೇರಿದಂತೆ ಎರಡು ಸಚಿವ ಸ್ಥಾನ ನೀಡಬೇಕು. ನಮ್ಮ ಸಮುದಾಯದ ಹಿರಿಯ ನಾಯಕ ಶ್ರೀ ಕೆ.ಹೆಚ್. ಮುನಿಯಪ್ಪ ರವರಿಗೆ ಉಪ ಮುಖ್ಯಮಂತ್ರಿಯ ಸ್ಥಾನ ನೀಡಬೇಕು” ಎಂದು.
ಡಾ. ತಿಮ್ಮಯ್ಯ ಅವರು ಕಳೆದ 30 ವರ್ಷಗಳಿಂದ ಮೈಸೂರು ವಿಭಾಗದಲ್ಲಿ ಸಮುದಾಯವನ್ನು ಸಂಘಟಿಸಿ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ್ದಾರೆ. ಆದರೆ, ಕಳೆದ 25 ವರ್ಷಗಳಿಂದ ಈ ಸಮುದಾಯಕ್ಕೆ ಸಚಿವ ಸ್ಥಾನ ಸಿಕ್ಕಿಲ್ಲ. ಮೈಸೂರು ವಿಭಾಗದಲ್ಲಿ 7 ಮೀಸಲು ಕ್ಷೇತ್ರಗಳಿದ್ದರೂ, ಈ ಸಮುದಾಯದ ನಾಯಕರಿಗೆ ಒಂದೇ ಒಂದು ಟಿಕೇಟ್ ಕೂಡ ನೀಡಲಾಗಿಲ್ಲ ಎಂಬ ಅಸಮಾಧಾನವನ್ನು ಸಂಘದ ನಾಯಕರು ವ್ಯಕ್ತಪಡಿಸಿದರು.
ಸಮಾಜಿಕ ನ್ಯಾಯದ ದೃಷ್ಟಿಯಿಂದ ಡಾ. ಡಿ. ತಿಮ್ಮಯ್ಯ ರವರಿಗೆ ಸಂಪುಟ ದರ್ಜೆಯ ಸಚಿವ ಸ್ಥಾನ ನೀಡಬೇಕೆಂದು ಸಂಘವು ಕಳಕಳಿಯಿಂದ ಮನವಿ ಮಾಡಿದೆ.

Comments
Leave a Comment